ಕರ್ನಾಟಕಕ್ಕೆ ಬೇಲೂರು, ಹಳೇಬೀಡು ದೇವಾಲಯಗಳು ಬಹಳ ಕೀರ್ತಿ ತಂದುಕೊಟ್ಟಿವೆ. ತಮ್ಮ ಅದ್ಭುತ ಶಿಲ್ಪ ಕಲಾಸೌಂದರ್ಯದಿಂದ ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುವ ಈ ಸುಂದರ ದೇವಾಲಯಗಳು ಹೊಯ್ಸಳರ ಅನುಪಮ ಕೊಡುಗೆಗಳು. ಆದರೆ ಹೊಯ್ಸಳರು ಈ ಎರಡು ದೇವಾಲಯಗಳನ್ನಷ್ಟೇ ಅಲ್ಲದೇ ಇನ್ನೂ ಅನೇಕ ಸುಂದರ ದೇವಾಲಯಗಳನ್ನು ನಿರ್ಮಿಸಿರುವುದು ಅನೇಕರಿಗೆ ತಿಳಿದಿಲ್ಲ. ಈ ದೇವಾಲಯಗಳು ಹಾಸನ, ಮಂಡ್ಯ ಮೊದಲಾದ ಜಿಲ್ಲೆಗಳಲ್ಲಿವೆ. ಇಂಥ ಒಂದು ದೇವಾಲಯವೇ ನಾಗಮಂಗಲದ ಸೌಮ್ಯಕೇಶವ ದೇವಾಲಯ.
ವಾಸ್ತುಶಿಲ್ಪ:
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಈ ದೇವಾಲಯವು ದೊಡ್ಡದಾಗಿಯೂ ಬಹು ಸುಂದರವಾಗಿಯೂ ಇದೆ. ಇದನ್ನು ಕ್ರಿ.ಶ. 1170ನೇ ಇಸವಿಯಲ್ಲಿ ನಿರ್ಮಿಸಲಾಯಿತು. ಹೊಯ್ಸಳ ಪಾಳೇಗಾರನಾದ ಶ್ರೀ ಜಗದೇವರಾಯನು ನಿರ್ಮಿಸಿದನು. ಹೀಗಾಗಿ ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಎಲ್ಲ ಹೊಯ್ಸಳ ದೇವಾಲಯಗಳಂತೆ ಈ ದೇವಾಲಯವೂ ನಕ್ಷತ್ರಾಕಾರದ ತಳಪಾಯದ ಮೇಲೆ ನಿಂತಿದೆ. ದೇವಾಲಯದ ಮುಂದೆ ಬಹು ಸುಂದರವಾದ ಏಳು ಅಂತಸ್ತಿನ ರಾಜಗೋಪುರವೂ ಇಪ್ಪತ್ತೈದು ಅಡಿ ಎತ್ತರದ ಗರುಡ ಸ್ತಂಭವೂ ಇವೆ. ಈ ಗರುಡಸ್ತಂಭವನ್ನು ಶ್ರೀ ಶ್ರೀರಾಮಾನುಜಾಚಾರ್ಯರು ಪ್ರತಿಷ್ಠಾಪಿಸಿದರೆಂದು ಹೇಳುತ್ತಾರೆ. ಕರ್ನಾಟಕದಲ್ಲೇ ಇದೊಂದು ಬಹಳ ಸುಂದರವಾದ ಕಂಬವಾಗಿದೆ. ರಾಜಗೋಪುರವನ್ನು ವಿಜಯನಗರದ ಅರಸರು ಕಟ್ಟಿಸಿ ದೇವಾಲಯವನ್ನು ಅಭಿವೃದ್ಧಿಗೊಳಿಸಿದರು.
ದೇವಾಲಯದ ವಾಸ್ತುಶಿಲ್ಪವು ಬಹಳ ಸೊಗಸಾಗಿದ್ದರೂ ಬೇಲೂರು ಹಳೇಬೀಡು ದೇವಾಲಯಗಳಂತೆ ಹೊರಗೋಡೆಗಳ ಮೇಲೆ ಕೆತ್ತನೆಗಳನ್ನು ಮಾಡಿಲ್ಲ. ಒಳಗೆ ಆಲಯವು ವಿಶಾಲವಾಗಿದ್ದು ಅನೇಕ ಜನರು ಕುಳಿತುಕೊಳ್ಳಲು ಸ್ಥಳವಿದೆ. ಇದು ಹನ್ನೆರಡು ಸುಂದರ ಕಂಬಗಳ ಮೇಲೆ ನಿಂತಿದೆ. ಕಂಬಗಳ ಮೇಲಿನ ವಿನ್ಯಾಸಗಳ ಕೆತ್ತನೆಗಳು ಬಹಳ ಸುಂದರವಾಗಿವೆ. ಆ ಆಲಯದ ಮೇಲ್ಛಾವಣಿಯ ಭುವನೇಶ್ವರಿಯಲ್ಲಿ 108 ಶಂಖಗಳ ಒಂದು ಮಂಡಲವಿದ್ದು ಅದರ ಮಧ್ಯದಲ್ಲಿ ಕೆಳಮುಖವಾದ ಕಮಲದ ಮೊಗ್ಗಿದೆ. ಈ ಕಮಲದ ಮೊಗ್ಗನ್ನು ಸುತ್ತಿಕೊಂಡು ಒಂದು ಘಟಸರ್ಪ ಕುಳಿತಿದೆ. ಇದು ನಾಗಮಂಡಲವಾಗಿದ್ದು, ಈ ಘಟಸರ್ಪವೇ ಆದಿಶೇಷನಾಗಿದೆ. ಹೀಗೆ ಮಂಡಲಾಕಾರದಲ್ಲಿ ಕುಳಿತಿರುವ ಆದಿಶೇಷನ ಕೆತ್ತನೆ ಈ ದೇವಾಲಯಕ್ಕೆ ಬಹಳ ವಿಶಿಷ್ಟವಾಗಿದ್ದು ಇನ್ನೆಲ್ಲೂ ಹೀಗಿಲ್ಲ. ಈ ಕಾರಣಕ್ಕಾಗಿಯೇ ಈ ದೇವಾಲಯಕ್ಕೂ ಈ ಸ್ಥಳಕ್ಕೂ ನಾಗಮಂಡಲ ಕ್ಷೇತ್ರ ಎಂಬ ಹೆಸರು ಬಂದಿತು. ಆದರೆ ಬರುಬರುತ್ತಾ ಕ್ರಮೇಣ ಇದು ನಾಗಮಂಗಲ ಎಂದಾಯಿತು. ಒಂದು ಕೋನದಿಂದ ನೋಡಿದರೆ ಆದಿಶೇಷನು ಒಂದು ದೊಡ್ಡ ಶಂಖದ ಮೇಲೆ ಕುಳಿತಂತೆ ಕಾಣುತ್ತದೆ. ಆದರೆ ಸುತ್ತಲೂ ಚಲಿಸುತ್ತಾ ಮಧ್ಯದಲ್ಲಿ ನೋಡಿದರೆ ಅದು ಕೆಳಮುಖವಾದ ಕಮಲಪುಷ್ಪದ ಮೇಲೆ ಕುಳಿತಿರುವುದು ಕಾಣುತ್ತದೆ.
ಗರ್ಭಗುಡಿ:
ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮಧ್ಯದಲ್ಲಿರುವ ಪ್ರಧಾನ ಗರ್ಭಗುಡಿಯಲ್ಲಿ ಶ್ರೀ ಸೌಮ್ಯಕೇಶವಸ್ವಾಮಿಯ ದೇದೀಪ್ಯಮಾನವಾದ ಬಹು ಸುಂದರ ವಿಗ್ರಹವಿದೆ. ಆರು ಅಡಿ ಎತ್ತರದ ಶ್ರೀ ವಿಗ್ರಹದ ಮುಖ, ಹೆಸರಿಗೆ ತಕ್ಕಂತೆ ಬಹು ಸೌಮ್ಯವಾಗಿ, ಪ್ರಸನ್ನವಾಗಿದೆ. ಭಗವಂತನು ತನ್ನ ಚತುರ್ಭುಜಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನು ಹಿಡಿದಿದ್ದಾನೆ. ಶಂಖವು ಭಗವಂತನ ಬಲಗೈಯಲ್ಲಿರುವುದು ಒಂದು ವಿಶೇಷ. ಭಗವಂತನ ನಾಭಿಯಲ್ಲಿ ಆದಿಶೇಷನಿದ್ದು ಪಾದಗಳ ಬಳಿ ಭೂ ಮತ್ತು ನೀಳಾದೇವಿಯರ ವಿಗ್ರಹಗಳಿವೆ. ಈ ಗರ್ಭಗುಡಿಯ ಬಲಕ್ಕಿರುವ ಗರ್ಭಗುಡಿಯಲ್ಲಿ ರುಕ್ಮಿಣೀ-ಸತ್ಯಭಾಮೆಯರೊಂದಿಗಿರುವ ವೇಣುಗೋಪಾಲ ಸ್ವಾಮಿಯ (ಕೊಳಲು ನುಡಿಸುತ್ತಿರುವ ಕೃಷ್ಣನ) ಸುಂದರ ಮೂರ್ತಿಯಿದೆ. ಎಡಕ್ಕಿರುವ ಗರ್ಭಗುಡಿಯಲ್ಲಿ, ಐದು ಹೆಡೆಗಳ ಆದಿಶೇಷನ ಮೇಲೆ ಕುಳಿತಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಸುಂದರ ವಿಗ್ರಹವಿದೆ. ಸನಿಹದಲ್ಲೇ ಎರಡು ನಾಗಪ್ರತಿಮೆಗಳೂ ಇವೆ. ದೇವಾಲಯದ ಪ್ರಾಕಾರವನ್ನು ಪ್ರದಕ್ಷಿಣೆ ಮಾಡಿದಾಗ, ಸೌಮ್ಯನಾಯಕಿ ಅಮ್ಮನವರ ಹಾಗೂ ಮಹಾಭಕ್ತೆ ಆಂಡಾಳ್‌ರ ಗುಡಿಗಳನ್ನು ನೋಡಿ ಅವರ ದರ್ಶನ ಪಡೆಯಬಹುದು.
`ಕೇಶವ’ ಎಂದರೆ…
ಸೌಮ್ಯಕೇಶವನೆಂದರೆ ಶ್ರೀಕೃಷ್ಣ ಅಥವಾ ವಿಷ್ಣು. ಭಾಗವತದಲ್ಲಿ ವರ್ಣಿಸಿರುವಂತೆ ಶ್ರೀಕೃಷ್ಣನು ಕೇಶಿ ಎಂಬ ಕುದುರೆ ರೂಪದ ರಾಕ್ಷಸನನ್ನು ಸಂಹರಿಸಿದ್ದರಿಂದ ಅವನಿಗೆ ಕೇಶವ ಎಂಬ ಹೆಸರು ಬಂದಿತು. `ಕೇಶವ’ ಎಂದರೆ… ಸುಂದರವಾದ ಕೇಶಗಳುಳ್ಳವನು ಎಂದೂ ಶಂಕರರು ವ್ಯಾಖ್ಯಾನಿಸಿದ್ದಾರೆ.
ಕ್ಲೇಶನಾಶನ:
ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧ ನಡೆದಾಗ, ಶ್ರೀಕೃಷ್ಣನಿಗೆ ಅರ್ಜುನನ ಬಲ, ಪರಾಕ್ರಮಗಳ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದರೂ, ಶತ್ರುಪಕ್ಷದಲ್ಲಿದ್ದ ಕರ್ಣನ ಬಳಿಯಿದ್ದ ನಾಗಾಸ್ತ್ರದ ವಿಷಯದಲ್ಲಿ ಅವನಿಗೆ ಆತಂಕವಾಯಿತು. ಕಾರಣ, ನಾಗಾಸ್ತ್ರಕ್ಕೆ ಪ್ರತಿಯಾದ ಯಾವ ಅಸ್ತ್ರವೂ ಇರಲಿಲ್ಲ. ಆಗ ಶ್ರೀಕೃಷ್ಣನು ಪ್ರಪಂಚದ ಎಲ್ಲಾ ನಾಗಗಳನ್ನೂ ತನ್ನ ಶಂಖದ ವಶಕ್ಕೆ ಒಳಪಡಿಸಿದ. ಅನಂತರ ಯುದ್ಧ ನಡೆದಾಗ ಅವನು ನಾಗಾಸ್ತ್ರವು ಅರ್ಜುನನನ್ನು ಹೊಡೆಯುವುದನ್ನು ಉಪಾಯವಾಗಿ ತಪ್ಪಿಸಿದ. ಹೀಗಾಗಿ ಇಲ್ಲಿ ನೆಲೆಸಿರುವ ಸೌಮ್ಯಕೇಶವನು ಬಲಗೈಲಿ ಹಿಡಿದಿರುವ ತನ್ನ ಶಂಖದಿಂದ ಎಲ್ಲಾ ನಾಗಗಳನ್ನು ವಶಪಡಿಸಿಕೊಳ್ಳುತ್ತಾನೆ ಎಂದು ಹೇಳುತ್ತಾರೆ. ಅಂತೆಯೇ, ಆದಿಶೇಷನು ಎತ್ತರದ ನಾಗಮಂಡಲದಲ್ಲಿ ನೆಲೆಸಿರುವ ದೇವಾಲಯವು ಇದೊಂದೇ ಆಗಿದೆ. 108 ಶಂಖಗಳ ಮಧ್ಯೆಯಿರುವ ಕೆಳಮುಖ ಕಮಲರೂಪದ ಶಂಖದ ಮೇಲೆಯೇ ಆದಿಶೇಷನು ಕುಳಿತಿದ್ದಾನೆ. ಹೀಗೆ ಇಲ್ಲಿ ವಿಷ್ಣುವಿನೊಂದಿಗೆ ಆದಿಶೇಷನಿಗೂ ಪೂಜೆ ಸಲ್ಲುತ್ತದೆ. ಹಾಗಾಗಿ, ಶ್ರೀ ಸೌಮ್ಯಕೇಶವನನ್ನೂ ಈ ಆದಿಶೇಷನನ್ನೂ ದರ್ಶಿಸಿದರೆ ಎಲ್ಲ ಸರ್ಪದೋಷಗಳೂ ಇತರ ಸಂಕಷ್ಟಗಳೂ ನಾಶವಾಗುತ್ತವೆ ಎಂದು ಹೇಳುತ್ತಾರೆ. ಕೇಶವಃ ಕ್ಲೇಶನಾಶನ! ಇಲ್ಲಿನ ಅರ್ಚಕರು ಬಹಳ ಪ್ರೀತಿ, ಸಹಾನುಭೂತಿಗಳಿಂದ ಭಗವಂತನ ದರ್ಶನ ಮಾಡಿಸಿ ಈ ವಿಚಾರಗಳನ್ನು ಹೇಳಿ, ದೀಪ ಹಚ್ಚಿ ಆಲಯದ ಮಧ್ಯೆ ಭುವನೇಶ್ವರಿಯಲ್ಲಿರುವ ಆದಿಶೇಷನನ್ನು ಯಾತ್ರಿಕರಿಗೆ ತೋರಿಸುತ್ತಾರೆ.
ತಲಪುವುದು ಹೇಗೆ?
ನಾಗಮಂಗಲಕ್ಕೆ ಹೋಗಲು ಮೊದಲು ಬೆಂಗಳೂರಿನಿಂದ ಹಾಸನದ ಬಸ್ ಮೂಲಕ ಹೋಗಿ, ಬೆಳ್ಳೂರು ಕ್ರಾಸ್‌ನಲ್ಲಿ ಇಳಿದುಕೊಳ್ಳಬೇಕು. ಬೆಳ್ಳೂರು ಕ್ರಾಸ್‌ನಿಂದ ಒಟ್ಟಾಗಿ ಪ್ರಯಾಣಿಸುವ ಆಟೋಗಳು ಇಲ್ಲವೇ ಬಸ್‌ಗಳ ಮೂಲಕ ನಾಗಮಂಗಲಕ್ಕೆ ಹೋಗಬಹುದು. ಬೆಳ್ಳೂರು ಕ್ರಾಸ್ ತಲಪಲು ಬೆಂಗಳೂರಿನಿಂದ ಎರಡು ಗಂಟೆಗಳಾದರೆ, ಅಲ್ಲಿಂದ ನಾಗಮಂಗಲಕ್ಕೆ ಕೇವಲ ಹದಿನೈದು ನಿಮಿಷಗಳು ಸಾಕು. ದೇವಾಲಯವು ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ ಹಾಗೂ ಸಂಜೆ ಐದು ಗಂಟೆಯಿಂದ ರಾತ್ರಿ ಎಂಟೂವರೆ ಗಂಟೆಯವರೆಗೆ ತೆರೆದಿರುತ್ತದೆ. ಈ ದೇವಾಲಯದ ಹಿಂಭಾಗದಲ್ಲೇ ಒಂದು ಪುರಾತನವಾದ ಶ್ರೀ ನರಸಿಂಹ ದೇವಾಲಯವಿದೆ. ಇದು ಪುನರುತ್ಥಾನದಲ್ಲಿದೆ. ಅಂತೆಯೇ, ಈ ದೇವಾಲಯದ ಮುಂಭಾಗದಲ್ಲಿ ಎಡಗಡೆ, ಬಹಳ ಅಪರೂಪವಾದ ಸುಗ್ರೀವನ ದೇವಾಲಯವಿದೆ. ರಾಮಾಯಣದಲ್ಲಿ ಶ್ರೀರಾಮನಿಗೆ ಸೀತೆಯನ್ನರಸಿ ರಾವಣನೊಂದಿಗೆ ಯುದ್ಧ ಮಾಡಿ ಅವಳನ್ನು ಹಿಂದಕ್ಕೆ ಕರೆತರಲು ಸಹಾಯ ಮಾಡಿದ ವಾನರ ಸೈನ್ಯದ ರಾಜನೇ ಸುಗ್ರೀವ. ಈ ರಾಮಭಕ್ತನ ದೇವಾಲಯಗಳು ಬಹಳ ಅಪರೂಪ. ಆದರೆ ಇಲ್ಲಿರುವ ಇಂಥ ಒಂದು ದೇವಾಲಯ ಶಿಥಿಲಾವಸ್ಥೆಯಲ್ಲಿದೆ.
ನಾಗಮಂಗಲಕ್ಕೆ ಬಹಳ ಸಮೀಪವೇ ಶ್ರೀ ಆದಿಚುಂಚನಗಿರಿ ಕ್ಷೇತ್ರವೂ ಇದೆ. ನಾಗಮಂಗಲಕ್ಕೆ ಹೋದಾಗ ಇದನ್ನೂ ನೋಡಬಹುದು. ಹೀಗೆ ವಿಶಿಷ್ಟವಾದ ನಾಗಮಂಗಲದ ಶ್ರೀ ಸೌಮ್ಯಕೇಶವ ದೇವಾಲಯವು ನೋಡಲೇಬೇಕಾದ ಒಂದು ದೇವಾಲಯವಾಗಿದೆ.