ವಿಶೇಷ ತಿನಿಸುಗಳು

ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ನಿರಶನನಾಗಿದ್ದು ನನ್ನ ಪೂಜೆ ಮಾಡು ಎಂದು ಕೃಷ್ಣನು ಹೇಳಿಲ್ಲ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ. ಅವರೆಕಾಳು ಮಸಾಲೆ ವಡೆ, ಕೋಡುಬಳೆ, ಬಾಯಿ ಸಿಹಿ ಮಾಡಿಕೊಳ್ಳಲು ಸೋಹನ್‌ ಹಲ್ವದ – ತಯಾರಿಯ ವಿವರವೂ ಇಲ್ಲಿದೆ.

ಅವರೆಕಾಳು ಕೋಡುಬಳೆ

ಕನ್ನಡಿಗರ ಹೆಮ್ಮೆಯ ಕುರುಕು ತಿಂಡಿಗಳಿಗೆ ಕೋಡು ಮೂಡಿಸಿದ್ದೇ ಈ ಕೋಡುಬಳೆ. ಹಿದುಕಿದ ಅವರೆಬೇಳೆ ಮಿಶ್ರಿತ ಕೋಡುಬಳೆಯಂತೂ ಇನ್ನೂ ಸ್ವಾದಿಷ್ಟ.

ಬೇಕಾಗುವ ಪದಾರ್ಥ : ಒಂದು ಲೋಟದಷ್ಟು ಹಿದಕಿದ ಅವರೆಕಾಳು, ಒಂದು ಬಟ್ಟಲು ಅಕ್ಕಿಹಿಟ್ಟು, ಕಾಲು ಬಟ್ಟಲು ಚಿರೋಟಿ ರವೆ, ಒಂದು ಚಮಚ ಎಳ್ಳು, ಜೀರಿಗೆ, ಒಂದು ಚಮಚದಷ್ಟು ಒಣಮೆಣಸಿನಕಾಯಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಅಡಿಗೆ ಸೋಡ ಹಾಗೂ ಎಣ್ಣೆ.

ಮಾಡುವ ವಿಧಾನ : ಹಿದುಕಿದ ಅವರೆಕಾಳನ್ನು ಬೇಯಿಸಿಕೊಂಡು ಚೆನ್ನಾಗಿ ನಾದಿಟ್ಟುಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟು, ಜೀರಿಗೆ, ಎಳ್ಳು, ಮೆಣಸಿನಪುಡಿ, ಉಪ್ಪು, ಚಿರೋಟಿ ರವೆ ಎಲ್ಲವನ್ನೂ ಹಾಕಿ ಸ್ವಲ್ಪ ನೀರಿನೊಂದಿಗೆ ಕಲೆಸಿಡಿ. ಅದಕ್ಕೆ 3-4 ಚಮಚದಷ್ಟು ಕಾದ ಎಣ್ಣೆಯನ್ನು ಹಾಕಿ ಕೋಡುಬಳೆ ಹದಕ್ಕೆ ಕಲೆಸಿ. ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ. ಆನಂತರ ಚಪಾತಿ ಮಣೆಯ ಮೇಲೆ ಕೋಡಬಳೆ ಹೊಸೆದು ಸಿದ್ಧಮಾಡಿ. ಆನಂತರ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಬೇಯಿಸಿ ಎಣ್ಣೆ ಸೋರಿಸಿ ತಿನ್ನಲು ಗರಿಗರಿ ಕೋಡುಬಳೆ ರೆಡಿ.

ಅವರೆಕಾಳು ಮಸಾಲೆವಡೆ

ಘಮಘಮಿಸುವ ಮಸಾಲೆವಡೆಯ ಪರಿಮಳ ಮನೆಮಂದಿಯನ್ನು ಅಡಿಗೆ ಮನೆಗೆ ತಂತಾನೆ ಎಳೆದುತರುತ್ತದೆ. ಚಳಿಗಂತೂ ಇದು ಹೇಳಿ ಮಾಡಿಸಿದ ಕರಿದ ತಿನಿಸು.

ಬೇಕಾಗುವ ಪದಾರ್ಥ : ಒಂದು ಲೋಟದಷ್ಟು ಹಿದಕವರೆ, ಕಾಲು ಲೋಟದಷ್ಟು ಕಡಲೆಹಿಟ್ಟು, ನಿಮ್ಮ ರುಚಿಗನುಗುಣವಾಗಿ ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಪುದಿನ, ಸ್ವಲ್ಪ ಇಂಗು, ಒಂದು ಚೂರು ಶುಂಠಿ, ಒಂದು ಚಮಚ ಜೀರಿಗೆ ಪುಡಿ.

ಮಾಡುವ ವಿಧಾನ : ಮೊದಲು ಹಿದಕವರೆಕಾಳನ್ನು ಬೇಯಿಸಿಕೊಳ್ಳಿ. ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಕರಿಬೇವು, ಪುದೀನಾ ಸೊಪ್ಪು ಸ್ವಲ್ಪ ಇಂಗನ್ನು ಸೇರಿಸಿ ಮಿಶ್ರಣ ಮಾಡಿ. ಆನಂತರ ಕಡಲೆಹಿಟ್ಟು ಹಾಕಿ ಕಲೆಸಿ, ಅಂಗೈಮೇಲೆ ಸ್ವಲ್ಪ ವಡೆ ತಟ್ಟಿ. ಕಾದ ಎಣ್ಣೆಯಲ್ಲಿ ಕೆಂಪಗೆ ಬೇಯಿಸಿ. ಎಣ್ಣೆ ಸೋರಿಸಿ. ಭಗವಂತನಿಗೆ ಅರ್ಪಿಸಿ, ಬಿಸಿ, ಬಿಸಿಯಾಗಿರುವಾಗಲೆ, ಮನೆಮಂದಿಗೆ ತಿನ್ನಲು ಕೊಡಿ.

ಸೋಹನ್‌ ಹಲ್ವ

ಸಾಮಾನು-ಸರಂಜಾಮು (50 ಹಲ್ವಾ ತಯಾರಿಸಲು)
35 ಗ್ರಾಂ ಗೋಧಿ 70 ಗ್ರಾಂ ಮೈದಾ
3/4 ಕೆಜಿ ಸಕ್ಕರೆ 3/4 ಕೆಜಿ ತುಪ್ಪ
3/4 ಲೀಟರ್‌ ನೀರು ಬಾದಾಮಿ ಮತ್ತು ಪಿಸ್ತಾ

ಮಾಡುವ ವಿಧಾನ : ಗೋಧಿಯನ್ನು 24 ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ಚೆನ್ನಾಗಿ ನೆನೆದಿರುವ ಗೋಧಿಯನ್ನು ನುಣ್ಣಗೆ ರುಬ್ಬಿ. ಇದಕ್ಕೆ ಮೈದಾ ಬೆರೆಸಿ, ಗಂಟುಗಳು ಉಳಿಯದಂತೆ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ನೀರು ಬೆರೆಸಿ. ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಶ್ರ ಮಾಡಿ. ಒಂದು ಚೂರು ಗಂಟು ಉಳಿದುಕೊಳ್ಳದಂತೆ ಎಚ್ಚರಿಕೆ ವಹಿಸಿ. ಮಿಶ್ರಣವನ್ನು ಒಲೆ ಮೇಲಿಟ್ಟು ಬೇಯಿಸಿ. ಸಂಪೂರ್ಣ ಬೇಯುವ ತನಕ ಮಗುಚುತ್ತಿರಿ. ತಳ ಸೀದು ಹೋಗದಂತೆ ಎಚ್ಚರಿಕೆ ವಹಿಸಿ. ಈಗ ತುಪ್ಪ ಬೆರೆಸಿ. ನಿಧಾನವಾಗಿ ಮಗುಚುತ್ತಿರಿ. ಬಾಣಲೆಗೆ ಅಂಟಿಕೊಂಡಿದ್ದ ಹಲ್ವಾ ನಿಧಾನವಾಗಿ ಬಾಣಲೆಯಿಂದ ಬಿಟ್ಟುಕೊಳ್ಳಲಾರಂಭಿಸುತ್ತದೆ. ಹಲ್ವಾ ಬಣ್ಣ ಚಿನ್ನದ ಕಂದು ಬಣ್ಣಕ್ಕೆ (ಟಾಫಿ) ತಿರುಗುತ್ತದೆ. ಒಲೆ ನಂದಿಸಿ. ಹತ್ತು ನಿಮಿಷ ಹಾಗೇ ಮಗುಚುತ್ತಿರಿ. ತುಪ್ಪ ಹಚ್ಚಿದ ಅಗಲವಾದ ಹಲ್ವಾ ತಟ್ಟೆಗೆ ಮಿಶ್ರಣವನ್ನು ಸುರಿದು, ಹರಡಿ. ಅದರ ಮೇಲೆ ಬಾದಾಮ್‌ ಮತ್ತು ಪಿಸ್ತಾವನ್ನು ಉದುರಿಸಿ. ನಂತರ ಚಮಚದ ಸಹಾಯದಿಂದ ನಿಧಾನವಾಗಿ ಹಲ್ವಾಗಳನ್ನು ಒಂದೊಂದಾಗಿ ತಟ್ಟೆಯಿಂದ ಬಿಡಿಸಿ ತೆಗೆದಿಡಿ. ಅದು ಸ್ವಲ್ಪ ತಣ್ಣಗಾಗಲಿ. ಈಗ ರುಚಿ ರುಚಿ ಸೋಹನ್‌ ಹಲ್ವಾ ಸಿದ್ಧ. ಭಗವಂತನಿಗೆ ನೈವೇದ್ಯ ಮಾಡಿ ರುಚಿಸಿ ಬಡಿಸಿ.

ಈ ಲೇಖನ ಶೇರ್ ಮಾಡಿ