ಅಧ್ಯಾತ್ಮವು ಒಂದು ವಿಜ್ಞಾನ

(ಶ್ರೀ ಚಂಚಲಾಪತಿ ದಾಸ ಅವರ ಉಪನ್ಯಾಸ ಆಧಾರಿತ)

ಅಧ್ಯಾತ್ಮ ಮತ್ತು ವಿಜ್ಞಾನ! ಎತ್ತಣದಿಂದೆತ್ತ ಸಂಬಂಧ?

ಯಾವುದೇ ಜ್ಞಾನದ ಕ್ರಮಬದ್ಧ ಅಧ್ಯಯನ ವಿಜ್ಞಾನ. ಆಧ್ಯಾತ್ಮಿಕ ವಿಷಯವನ್ನೂ ಅದೇ ರೀತಿ ಅಧ್ಯಯನ ಮಾಡುವುದು ಸಾಧ್ಯ. ನಿಮ್ಮ ಆಧ್ಯಾತ್ಮಿಕ ಅಧ್ಯಯನಕ್ಕೆ ಒಂದು ಕ್ರಮಬದ್ಧತೆಯನ್ನು ಅಳವಡಿಸಿ ನೋಡಿ, ನಿಮ್ಮ ಗ್ರಹಿಕೆಯು ಗಾಢವಾಗುತ್ತದೆ.

ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಬಗೆಗೆ ಹೇಳುವಾಗ ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ತತ್ತ್ವಶಾಸ್ತ್ರದ ಬೆಳವಣಿಗೆಯಲ್ಲಿ ಅಪಾರವಾದ ಬೌದ್ಧಿಕ ಕಸರತ್ತು ಇರುತ್ತದೆ. ಅಂದರೆ ಯಾವುದೇ ಸಿದ್ಧಾಂತವನ್ನು ಸಾಮಾನ್ಯರಾಗಲಿ, ವಿದ್ವಾಂಸರಾಗಲಿ ಕೂಡಲೇ ಸ್ವೀಕರಿಸುವುದಿಲ್ಲ. ಅದು ಹೀಗೆ – ಆಚಾರ್ಯರೊಬ್ಬರು ಒಂದು ಸಿದ್ಧಾಂತವನ್ನು ಮಂಡಿಸುತ್ತಾರೆ. ಯಾರೂ ಕೂಡ ಚಪ್ಪಾಳೆ ತಟ್ಟಿ ಅದನ್ನು ಒಪ್ಪುವುದಿಲ್ಲ. ಅದಕ್ಕೆ ಕ್ರಮವಿದೆ. ಅವರು ಉಲ್ಲೇಖಗಳ ಮೂಲಕ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಬೇಕು. ತಮ್ಮ ಸಮಕಾಲೀನ ಇತರ ಆಚಾರ್ಯರು ಮತ್ತು ವಿದ್ವಾಂಸರೊಂದಿಗೆ ಬಹಿರಂಗ ಚರ್ಚೆ ಮಾಡಬೇಕು. ತಮ್ಮ ವಾದವನ್ನು ಸಮರ್ಥಿಸಿಕೊಳ್ಳಬೇಕು. ಅನಂತರವಷ್ಟೇ ಆ ಸಿದ್ಧಾಂತಕ್ಕೆ ಒಪ್ಪಿಗೆ ಮುದ್ರೆ. ಸಿದ್ಧಾಂತ ಎನ್ನುವುದು ಪದಗುಚ್ಛವಲ್ಲ, ಒಂದು ವ್ಯವಸ್ಥಿತ ಅಧ್ಯಯನದಿಂದ ಹೊರಹೊಮ್ಮಿದ ತತ್ತ್ವ. ವಿಜ್ಞಾನದಲ್ಲಿಯೂ ಕೂಡ ಅನೇಕ ಪ್ರಯೋಗಗಳ ಅನಂತರವೇ ವೈಜ್ಞಾನಿಕ ಸಿದ್ಧಾಂತವನ್ನು ಮುಂದಿಡಲಾಗುವುದು.

ಇನ್ನು ಅಧ್ಯಾತ್ಮ ಮತ್ತು ವಿಜ್ಞಾನದ ಮೌಲ್ಯವನ್ನು ಗಮನಿಸೋಣ. ಅವು ಭಿನ್ನ. ಲೌಕಿಕ ಲೋಕದ ಅಸಂಖ್ಯ ವಿಷಯಗಳನ್ನು ಕಂಡುಕೊಳ್ಳಲು ವಿಜ್ಞಾನ ನಮಗೆ ಅತ್ಯುತ್ತಮ ಸಾಧನ, ನಿಜ. ಆದರೆ ವಿಜ್ಞಾನವು ಸೀಮಿತ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಮಾನವೀಯತೆಯ ಬಗೆಗೆ ಹೆಚ್ಚು ಯೋಚಿಸುವುದಿಲ್ಲ. ಒಂದು ಉದಾಹರಣೆ – ಒಂದು ಊರಿನಲ್ಲಿ ಸಾವಿರ ಜನರು ವಾಸಿಸುತ್ತಿದ್ದಾರೆ. ಅಲ್ಲಿ ಆಹಾರ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲ ಮೂಲ ಸೌಕರ್ಯಗಳು ಇವೆ. ಆದರೆ ಅಲ್ಲಿರುವ ಸಂಪನ್ಮೂಲಗಳು 950 ಜನರಿಗೆ ಸಾಕಾಗುವಷ್ಟು ಇರುತ್ತದೆ. ಉಳಿದ 50 ಜನರ ಗತಿ ಏನು? ಸರ್ಕಾರವು ವಿಜ್ಞಾನದ ಸಲಹೆ ಕೇಳುತ್ತದೆ. ಅದು ಹೇಳುತ್ತದೆ, 50 ಜನರನ್ನು ತೆಗೆದುಹಾಕಿಬಿಡಿ! ಮಹಾ ಯುದ್ಧದಲ್ಲಿ ಹಿರೋಶಿಮಾ ಮೇಲೆ ಬಾಂಬ್‌‍ ಹಾಕಿದಂತೆ! ಇದೆಂತಹ ಸಲಹೆ! ಇದರಲ್ಲಿ ನೈತಿಕತೆಯ ಪ್ರಶ್ನೆ ಇದೆ. ಆದುದರಿಂದ ವಿಜ್ಞಾನದ ಗಡಿಯಾಚೆಗೆ ಮಾನವೀಯ ಅಂಶಗಳಿವೆ.

ವಿಜ್ಞಾನದ ಬೆಳವಣಿಗೆ ಸುಮಾರು 800 ವರ್ಷಗಳಿಂದ ಆಗಿರುವುದಲ್ಲವೇ? ಸೂರ್ಯನು ಭೂಮಿಯನ್ನು ಸುತ್ತುತ್ತಿದ್ದಾನೆ ಎಂದು ಮೊದಲು ಜನರು ನಂಬಿದ್ದರು. ಆದರೆ ಪೋಲೆಂಡಿನ ಕೋಪರ್ನಿಕಸ್‌‍ ಮೊಟ್ಟ ಮೊದಲ ಬಾರಿಗೆ ಭೂಮಿ ಮತ್ತು ಇತರ ಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ ಎನ್ನುವ ಸಿದ್ಧಾಂತವನ್ನು ಮುಂದಿಟ್ಟ. ಅದನ್ನು ಪ್ರತಿಪಾದಿಸಲು ಒಂದು ಮಾದರಿಯನ್ನೂ ರೂಪಿಸಿದ. ಸಾಕಷ್ಟು ವಿರೋಧ ಕಂಡು ಬಂದಿತು. ಕೋಪರ್ನಿಕಸ್‌‍ ಮಾದರಿಯನ್ನು ಒಪ್ಪಿಕೊಳ್ಳಲು ಅನೇಕ ವರ್ಷಗಳೇ ಬೇಕಾದವು. ಈಗ ಅದೆಲ್ಲ ಇತಿಹಾಸ. ಈಗಂತೂ ಇತರ ಗ್ರಹಗಳಲ್ಲಿ ಪಾದ ಊರುವ ಪ್ರಯತ್ನ, ಶೋಧ ನಡೆದಿದೆ. ಮಾನವ ಬುದ್ಧಿಮತ್ತೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಅದೇ ಎಲ್ಲವನ್ನೂ ಮಾಡಿಬಿಡುತ್ತದೆಯೇ?

ಒಂದು ಉದಾಹರಣೆ. ಒಬ್ಬ ರಾಜಕಾರಣಿಯ ಮನೆಯಲ್ಲಿ ಇದ್ದ ಶ್ವಾನವು ಅವನನ್ನು ನೋಡಿದಾಗಲೆಲ್ಲಾ ಅವನ ಮೇಲೆ ಎಗರಿ ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಿತ್ತು. ಅವನು ಚುನಾವಣೆಗೆ ಸ್ಪರ್ಧಿಸಿ ಗೆದ್ದ! ಮನೆಮಂದಿಯ ಸಂತೋಷಕ್ಕೆ ಪಾರವೇ ಇಲ್ಲ. ನಾಯಿ ಬಾಲ ಅಲ್ಲಾಡಿಸುತ್ತ ಕುಳಿತಿತ್ತು! ಅವನು ಮುಖ್ಯಮಂತ್ರಿಯೂ ಆಗಿಬಿಟ್ಟ! ನಾಯಿಗೂ ಆತ್ಮವಿದೆ, ನಿಜ. “ನಿನ್ನ ಮಾಲೀಕ ಈಗ ಮುಖ್ಯಮಂತ್ರಿ” ಎಂದು ಹೇಳಿ. ಅದೇನು ಮಾಡುತ್ತದೆ? ಹೆಚ್ಚೆಂದರೆ ಬಾಲವನ್ನು ಅಲ್ಲಾಡಿಸುತ್ತದೆ. ವಿಜ್ಞಾನ ಏನು ಹೇಳುತ್ತದೆ? ನಾಯಿಗೇನು ಗ್ರಹಿಕೆ ಸಾಮರ್ಥ್ಯ ಇದೆಯಾ ಎಂದು ನೀವೇ ಕೇಳುವಿರಿ. ಅದೇ ರೀತಿ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯ ಮತ್ತು ನಮ್ಮ ಮಿದುಳಿನ ಶಕ್ತಿ ಕೂಡ ಸೀಮಿತ. ನಾವು ಬುದ್ಧಿವಂತರು, ನಿಜ. ಆದರೆ ಈ ಲೋಕದ ಎಲ್ಲ ವಾಸ್ತವಾಂಶವನ್ನೂ ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ನಮಗಿದೆಯೇ?

ನಮಗೆ ಇಂದ್ರಿಯಗಳಿವೆ. ಅವು ನಮಗೆ ಹೊರಗಿನದನ್ನು ನೋಡಿ ಅರ್ಥ ಮಾಡಿಕೊಳ್ಳುವ ದೃಷ್ಟಿ ಕೊಡುತ್ತವೆ. ಆದರೂ ನಮಗೆ ಇಡೀ ಜಗತ್ತಿನ ವಾಸ್ತವಾಂಶವನ್ನು ನೋಡುವುದು ಸಾಧ್ಯವಾಗುವುದಿಲ್ಲ. ಹೇಗೆ? ನಾವು ಕಿಟಕಿಯ ಹೊರಗೆ ನಮ್ಮ ದೃಷ್ಟಿಗೆ ಗೋಚರವಾಗುವಷ್ಟನ್ನು ನೋಡುತ್ತೇವೆ. ಕಿಟಕಿ ಆಚೆಗೆ, ಅದರ ಅಕ್ಕಪಕ್ಕದ್ದು ನಮಗೆ ಕಾಣಿಸುವುದಿಲ್ಲ. ಕಿಟಕಿಯ ಬಳಿ ನಿಂತು ದೃಷ್ಟಿ ಹಾಯಿಸಿದರೆ, ಇನ್ನಷ್ಟು ನೋಡಬಹುದು. ಅದು ಅರಿವು. ಆದರೆ ಸಂಶೋಧಕರ ಪ್ರಕಾರ, ಇಂದ್ರಿಯಗಳು ಜ್ಞಾನದ ಮೂಲವಲ್ಲ, ಅವು ಒದಗಿಸುವ ಅನುಭವಗಳು ಜಗತ್ತಿನ ಜ್ಞಾನದ ಒಂದು ಭಾಗವಷ್ಟೆ.

ಇನ್ನೊಂದು ವಿಷಯವೆಂದರೆ ಕೆಲವು ಆಧ್ಯಾತ್ಮಿಕ ಆಚರಣೆಗಳು, ವಿಧಾನಗಳು. ಆಧ್ಯಾತ್ಮಿಕ ಜ್ಞಾನದಲ್ಲಿ ತರಬೇತಿ ಹೊಂದಿದರೆ ನಾವು ಭೌತಿಕ ಲೋಕವನ್ನು ಭಿನ್ನವಾಗಿ ನೋಡುವುದು ಸಾಧ್ಯ. ಆದರೆ ಅದರ ಅಚರಣೆ ಮಾಡದವರಿಗೆ ಅದು ಸಾಧ್ಯವಿಲ್ಲ. ಅವರಿಗಿಂತ ನಮ್ಮ ದೃಷ್ಟಿ ಭಿನ್ನವಾಗಿರುತ್ತದೆ. ಇಲ್ಲಿಯೂ ಅರಿವು ಮುಖ್ಯ. ಒಂದು ಉದಾಹರಣೆ. ನೀವು ಕತ್ತಲ ಕೋಣೆಗೆ ಹೋದರೆ ಏನೂ ಕಾಣುವುದಿಲ್ಲ. ಸ್ವಿಚ್‌‍ ಆನ್‌‍ ಮಾಡಿ. ಎಲ್ಲವೂ ಕಾಣುತ್ತದೆ. ನೋಡಲು ಬೆಳಕು ಬೇಕು ಎನ್ನುವುದು ನಿಮಗೆ ಅರ್ಥವಾಗಿರುತ್ತದೆ. ಅದೇ ರೀತಿ ವಿದ್ವಾಂಸರು ಅನೇಕ ಆಚರಣೆಗಳ ಅನುಭವನದ ಅನಂತರ ಕೆಲವು ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ನಾವು ಕೆಲವು ವಾಸ್ತವಾಂಶಗಳನ್ನು ನೋಡಬಹುದು. ಇಲ್ಲಿ ಸಾಧನವು ದೀಪದಂತೆ. ಆದುದರಿಂದಲೇ ವೈದಿಕ ಸಾಹಿತ್ಯವು ಪ್ರಕಾಶಮಾನಃ ಎಂದು ಹೇಳುತ್ತದೆ.

ಜ್ಞಾನದ ಗುಣಗಳು ಹೇಗೆ ಆಧ್ಯಾತ್ಮಿಕವಾಗುತ್ತವೆ ಎನ್ನುವುದನ್ನು ನೋಡೋಣ.

ವಿಜ್ಞಾನದ ಒಂದು ಗುಣ ಮುನ್ಸೂಚನೆ ಅಥವಾ ನಿರೀಕ್ಷೆ. ಪ್ರಯೋಗಾಲಯದಲ್ಲಿ ವಿವಿಧ ದ್ರವಗಳನ್ನು ಸಂಯೋಜಿಸಿದಾಗ ಹೊಸ ವಸ್ತುವು ಬರುತ್ತದೆ. ಇಂತಹ ಪ್ರಯೋಗಗಳನ್ನು ಮಾಡುತ್ತ ಮಾಡುತ್ತ ನಾವು ಸಂಯೋಜನೆಯನ್ನು ಸ್ಪಷ್ಟವಾಗಿ ನಿರೀಕ್ಷಿಸಬಹುದು. ವೈದಿಕ ಸಾಹಿತ್ಯಗಳು ಕೆಲವು ವಿಧಾನ ಮತ್ತು ಆಚರಣೆಗಳನ್ನು ವಿವರಿಸುತ್ತವೆ. ಅವು ಹೇಗೆ ಪ್ರಜ್ಞೆಯಾಗಿ ಅಭಿವೃದ್ಧಿ ಹೊಂದುತ್ತವೆ ಎನ್ನುವುದನ್ನು ವರ್ಣಿಸಲಾಗಿದೆ. ಇದು ವೈದಿಕ ಗ್ರಂಥಗಳಲ್ಲಿನ ಮುನ್ಸೂಚನೆ. ಇದನ್ನೇ ಕಾಲಜ್ಞಾನ ಅಥವಾ ಭವಿಷ್ಯನುಡಿ ಎನ್ನುತ್ತಾರೆ. ಉದಾಹರಣೆಗೆ, ನೀವು ಅಧ್ಯಾತ್ಮವನ್ನು ಸ್ವೀಕರಿಸಬೇಕೆಂದು ನಿರ್ಧರಿಸುತ್ತೀರ. ಅದರಲ್ಲಿನ ಬೆಳವಣಿಗೆಯ ಯಾವ ಯಾವ ಹಂತಗಳನ್ನು ದಾಟಬೇಕೆಂದು ತಿಳಿದಿರುವುದಿಲ್ಲ. ಅದನ್ನೇ ವೈದಿಕ ಗ್ರಂಥಗಳು ಸೂಚಿಸುತ್ತವೆ. ಆಧ್ಯಾತ್ಮಿಕ ಮಾರ್ಗವನ್ನು ಸ್ವೀಕರಿಸಿದಾಗ ನಾವು ಅನುಭವದ ವಿವಿಧ ಹಂತಗಳನ್ನು ದಾಟಿ ಹೋಗುತ್ತೇವೆ. ಆಗ ನಮಗೆ ಸ್ಪಷ್ಟ ದಾರಿ ಗೋಚರವಾಗುತ್ತದೆ..

ವಿಜ್ಞಾನದ ಮತ್ತೊಂದು ಗುಣವೆಂದರೆ, ಪುನರಾವರ್ತನೀಯ. ಪ್ರಯೋಗಾಲಯದಲ್ಲಿ ಪುನಃ ಪುನಃ ಪ್ರಯೋಗಗಳನ್ನು ಮಾಡುತ್ತಾರೆ. ಅದೇ ರೀತಿ ವೈದಿಕ ಪದ್ಧತಿಯಲ್ಲಿಯೂ ಕೂಡ. ಸಾವಿರಾರು ವರ್ಷಗಳ ಹಿಂದೆ ನಮ್ಮ ಜ್ಞಾನಿಗಳು ಅದನ್ನು ಆಚರಿಸುತ್ತ ಬಂದರು, ಅನುಭವಗಳನ್ನು ವಿವರಿಸಿದರು. ಅವು ವೈದಿಕ ಸಾಹಿತ್ಯಗಳಲ್ಲಿ ಇವೆ. ಅನೇಕ ಜನರು ಆ ಅನುಭವಗಳಿಂದ ಜ್ಞಾನ ಹೆಚ್ಚಿಸಿಕೊಳ್ಳುತ್ತಾ ಹೋದರು. ಪದೇ ಪದೇ ನಾವು ಕೂಡ ಆ ಅನುಭವಗಳತ್ತ ನೋಡುತ್ತೇವೆ. ಇದು ಪುನರಾವರ್ತನೆ.

ವಿಜ್ಞಾನದ ಇನ್ನೊಂದು ಗುಣವೆಂದರೆ ಅದು ವಿಶ್ವವ್ಯಾಪಿ. ನಮ್ಮ ಆಧ್ಯಾತ್ಮಿಕ ಪದ್ಧತಿಯನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ. ನಮ್ಮ ಆಚಾರ್ಯರಾದ ಶ್ರೀಲ ಪ್ರಭುಪಾದರು ವಿಶ್ವದ ಎಲ್ಲೆಡೆ ಇಸ್ಕಾನ್‌‍ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ವಿಶ್ವವ್ಯಾಪಿ ತಾನೇ?

ಆದುದರಿಂದ, ಆಧ್ಯಾತ್ಮಿಕತೆಯು ಯಾವುದೋ ಭಾವನಾತ್ಮಕ ವಿಷಯವಲ್ಲ. ವಿಜ್ಞಾನದಂತೆ ಕ್ರಮಬದ್ಧವಾಗಿ ಅದರ ಅಧ್ಯಯನ ಮಾಡಬಹುದು. ನಿರ್ದಿಷ್ಟ ಕಾಲ, ಸೃಷ್ಟಿಯ ಉದ್ದೇಶ, ಸಮಯದ ಅರ್ಥ ಮತ್ತು ಅದು ನಮ್ಮ ಬದುಕನ್ನು ಹೇಗೆ ಸಂಪದ್ಭರಿತಗೊಳಿಸುತ್ತದೆ ಎನ್ನುವುದನ್ನು ಅದರಿಂದ ತಿಳಿದುಕೊಳ್ಳಬಹುದು. ಅಧ್ಯಾತ್ಮದ ಬಗೆಗೆ ಗಂಭೀರವಾಗಿ ಯೋಚಿಸಿ, ನೀವು ಆನಂದವನ್ನು ಅನುಭವಿಸುವಿರಿ. ಬದುಕಿನ ಈ ಲಾಭವನ್ನು ಕಳೆದುಕೊಳ್ಳಬೇಡಿ.

ಈ ಲೇಖನ ಶೇರ್ ಮಾಡಿ