ಶ್ರೀ ಕೃಷ್ಣನ ಗುಹ್ಯ ಸಂದೇಶದ ಗ್ರಹಿಕೆ

ದೇವರ್ಷಿ ನಾರದರು ಭಗವಂತನ ಅತ್ಯಂತ ಅಂತರಂಗದ ಭಕ್ತ. ಅಂತಹ ಅಂತರಂಗ ಭಕ್ತರು ಎಲ್ಲ ಕಡೆಗೂ ಯಾತ್ರೆ ಕೈಗೊಂಡು ಶ್ರೀ ಕೃಷ್ಣನ ವೈಭವವನ್ನು ಉಪದೇಶಿಸುವರು. ಇದರ ಜೊತೆಗೆ ಅನಾಸಕ್ತರನ್ನು ಭಕ್ತರನ್ನಾಗಿ ಪರಿವರ್ತಿಸಿ ವಿವೇಕದ ವೇದಿಕೆಗೆ ಕರೆ ತರಲು ಪ್ರಯತ್ನಿಸುವರು. ವಾಸ್ತವವಾಗಿ ತನ್ನ ಸ್ವರೂಪ ಸ್ಥಿತಿಯ ಕಾರಣ, ಜೀವಿಯೊಬ್ಬ  ಶ್ರೀ ಕೃಷ್ಣನಲ್ಲಿ ಅನಾಸಕ್ತಿ ಹೊಂದುವುದು  ಸಾಧ್ಯವಿಲ್ಲ. ಆದರೆ ಹಾಗೆ ಯಾರಾದರೂ ಅನಾಸಕ್ತಿ ಹೊಂದಿದರೆ  ಅಥವಾ ನಂಬಿಕೆ ಇಲ್ಲದವರಾದರೆ ಅವರ ಸ್ಥಿತಿ ಸರಿ ಇಲ್ಲವೆಂದೇ ಅರ್ಥ.

ಮಾನವ ದೇಹವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಹಸಿವಾದಾಗ ನೀವು ಉಣ್ಣುವಿರಿ. ಆಗ ದೇಹದಲ್ಲಿ ಏನಾಗುತ್ತದೆ? ಆಹಾರವು ಜೀರ್ಣವಾಗಿ ದೇಹದ ವಿವಿಧ ಭಾಗಗಳಿಗೆ ಹಂಚಲ್ಪಡುತ್ತದೆ. ನೀವು ಸೇವಿಸಿದ ಆಹಾರದಲ್ಲಿನ ಕಬ್ಬಿಣಾಂಶವು ರಕ್ತಕ್ಕೆ ಹೋಗಬೇಕು. ಕ್ಯಾಲ್ಸಿಯಂ ಮೂಳೆಗೆ ಹೋಗಬೇಕಲ್ಲದೆ ಸ್ಟಾರ್ಚ್‌ ಗ್ಲೂಕೋಸ್‌ ಆಗಬೇಕು. ಈ ಕ್ರಿಯೆಯೆಲ್ಲ ಹೇಗೆ ನಡೆಯುತ್ತದೆ?

ಕಾಲಾನುಕ್ರಮದಲ್ಲಿ ಭೌತ ವಸ್ತು ಉತ್ಪತ್ತಿಯಾಯಿತು ಮತ್ತು ಜೀವದಂತಹ ಗುಣ ತೋರಿಸಲಾರಂಭಿಸಿತು. ಹೀಗೆ ಕ್ರಮೇಣ ಜೀವ ವಿಕಸನಗೊಂಡಿತು ಎಂದು ಕೆಲ ವಿಜ್ಞಾನಿಗಳು ಹೇಳುತ್ತಾರೆ. ಇದೊಂದು ಸಂಕೀರ್ಣ ವ್ಯವಸ್ಥೆ ಆದರೆ ಅಂತಿಮವಾಗಿ ದೇವರಿಲ್ಲ ಎಂದು ಹೇಳಿಬಿಡಬಹುದು. ಆದುದರಿಂದ ನಂಬಿಕೆ ಇಲ್ಲದವರಾಗಿರುವುದು ನಿಜಕ್ಕೂ ಅವಿವೇಕ, ಹುಚ್ಚುತನದ ಪರಮಾವಧಿ .

ಮಾನವನ ಅಗತ್ಯ ಎಷ್ಟು ಕಡಮೆ ಹಾಗೂ ಸರಳವೆಂದರೆ ಪ್ರಕೃತಿಯು ಅದನ್ನು ಸುಲಭವಾಗಿ ಪೂರೈಸುವುದು ಸಾಧ್ಯ. ಆದರೆ ಒಮ್ಮೆಲೇ ನಾಲ್ಕು ಸಾವಿರ ರೊಟ್ಟಿಗಳನ್ನು ತಿಂದು ಬಿಡುತ್ತೇವೆಯೋ ಎಂಬಂತೆ ದೊಡ್ಡ ವ್ಯಾಪಾರ, ವಾಣಿಜ್ಯದಿಂದ ನಾವು ಬದುಕನ್ನು ಸಂಕೀರ್ಣಗೊಳಿಸುತ್ತೇವೆ. ಮನುಷ್ಯನ ದುರಾಸೆಯನ್ನು ಉದ್ರೇಕಿಸಲು ಲೌಕಿಕ ಜೀವನವನ್ನು ಅತ್ಯಂತ ಜಟಿಲಮಾಡಿದ್ದೇವೆ.

ಈ ಎಲ್ಲ ದೃಷ್ಟಿಗಳಿಂದಲೂ ನೀವು ನೋಡಿದರೆ – ಕೃಷ್ಣ ಎಲ್ಲವನ್ನೂ ಹೇಗೆ ನಿರ್ವಹಿಸುತ್ತಿದ್ದಾನೆಂದು ಅರ್ಥಮಾಡಿಕೊಂಡು, ನಾನು ಇಲ್ಲಿಗೆ ಏಕೆ ಬಂದೆನೆಂದು ಅರ್ಥ ಮಾಡಿಕೊಳ್ಳಬೇಕು, ದೇವರ ಯೋಜನೆಯಂತೆ ಕೆಲಸ ಮಾಡಬೇಕು. ಈ ವೇದಿಕೆಗೆ ಬರದಿದ್ದರೆ ಒಬ್ಬನು ನಿಜಕ್ಕೂ ಹುಚ್ಚುತನದ ವೇದಿಕೆಮೇಲಿದ್ದಾನೆನ್ನಬಹುದು. ಇವು ಅಂಧಾಭಿಮಾನದ ಹೇಳಿಕೆಗಳಲ್ಲ. ಇವು ನಮ್ಮ ಆಚಾರ್ಯರು ಅತ್ಯಂತ ಸಹಾನುಭೂತಿಯಿಂದ, ಮರುಕದಿಂದ ಮಾಡಿದ ಹೇಳಿಕೆಗಳು.

ಒಮ್ಮೆ ಶ್ರೀಲ ಪ್ರಭುಪಾದರು ಅಮೆರಿಕ ವಿಮಾನ ನಿಲ್ದಾಣವೊಂದರಲ್ಲಿ ಬಂದಿಳಿದಾಗ, `ನಿಮ್ಮ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಏನು ವ್ಯತ್ಯಾಸ?’ ಎಂದು ವರದಿಗಾರರೊಬ್ಬರು ಕೇಳಿದರು. ಪ್ರಭುಪಾದರ ಉತ್ತರ ಹೀಗಿತ್ತು : `ಈ ತತ್ತ್ವ, ಆ ತತ್ತ್ವಕ್ಕೆ ನಮಗೆ ಸಂಬಂಧವಿಲ್ಲ. ನಾವು ಪರಮ ಸತ್ಯದ ಬಗೆಗೆ ಮಾತನಾಡುತ್ತೇವೆ. ನೀವು ಪ್ರಾಮಾಣಿಕರಾಗಿದ್ದರೆ ನೀವು ಅದನ್ನು ಸ್ವೀಕರಿಸುವಿರಿ, ಮೆಚ್ಚುವಿರಿ.’

ಆದುದರಿಂದ ಇದಕ್ಕೆ ಅಗತ್ಯವಾದುದು ಪ್ರಾಮಾಣಿಕತೆ, ನಿಜವಾಗಿಯೂ ನಮಗೆ ನಾವೇ ಕೇಳಿಕೊಳ್ಳುವುದು: “ಈ ಲೌಕಿಕ ಜಗತ್ತಿನಲ್ಲಿ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆಯೇ, ನನ್ನಲ್ಲಿ ಹಣವಿದ್ದರೆ ನಾನು ನೆಮ್ಮದಿಯಿಂದಿರುವೆನೇ, ನನಗೆ ಏನೋ ಸ್ಥಾನ ಮಾನ, ಜನಪ್ರಿಯತೆ, ಹೆಸರು, ಕೀರ್ತಿ ಎಲ್ಲ ದೊರೆತರೆ ನನಗೆ ಸುಖ ಸಿಕ್ಕಂತೆಯೇ?” ಈ ಎಲ್ಲವೂ ಹಾಗೂ ಹಣವಿರುವ ಜನರೂ ಒಂದು ದಿನ ವೃದ್ಧರಾಗುತ್ತಾರೆ. ರೋಗಪೀಡಿತರೂ ಆಗಬಹುದು, ಕೊನೆಗೆ ಸಾಯುತ್ತಾರೆ. ಅವರ ಸ್ವತ್ತು ಏನಾಗುತ್ತದೆ? ಅವರ ಕೀರ್ತಿ, ಹೆಸರಿಗೆ ಏನಾಗುತ್ತದೆ? ಅದು ಮರೆತು ಹೋಗುತ್ತದೆ.

ಈ ಗ್ರಹಿಕೆಯನ್ನು ಪ್ರಚುರ ಪಡಿಸಲು ಶ್ರೀಲ ಪ್ರಭುಪಾದರು ಜಗತ್ತಿನಾದ್ಯಂತ ಈ ಸಂಸ್ಥೆ ಸ್ಥಾಪಿಸಿದರು. ಬದುಕಿನ ಉದ್ದೇಶವೇನು? ಪಾವಿತ್ರ್ಯದ ವೇದಿಕೆ ಏನು? ವಾಸ್ತವವಾಗಿ ಯಾರೂ ಭಕ್ತರಲ್ಲದೆ ಇರಲಾಗದು. ದೇವರಲ್ಲಿ ಆಸಕ್ತಿ ಹೊಂದಿಲ್ಲದೆ ಇರಲಾಗದು. ಏಕೆಂದರೆ ಅದು ಅವರ ಸ್ವರೂಪ ಸ್ಥಿತಿ. ನಾವು ಹಿಂದು, ಮುಸ್ಲಿಂ ಅಥವಾ ಕ್ರಿಶ್ಚಿಯನ್ನರಿರಬಹುದು. ಅದೇನೇ ಇರಲಿ, ಜೀವದ ಸ್ವರೂಪ ಸ್ಥಿತಿ ಎಂಬುದಿದೆ. ನೀವು ಪ್ರತಿ ಜೀವ, ಆಧ್ಯಾತ್ಮಿಕ ಆತ್ಮದ ಆ ಲಕ್ಷಣವನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಮತ್ತು ಅವನು ಕೃಷ್ಣನ ಒಂದು ಭಾಗ.

ಆದೇ ಅತ್ಯಂತ ವಿಶೇಷ ಜ್ಞಾನ. ನಾವೆಲ್ಲರೂ ಪ್ರಯತ್ನಿಸಬೇಕು. ಅದನ್ನೇ ಚೈತನ್ಯ ಮಹಾಪ್ರಭುಗಳು ಅಪೇಕ್ಷಿಸಿದ್ದು, ಶ್ರೀಲ ಪ್ರಭುಪಾದರು ಅಪೇಕ್ಷಿಸಿದ್ದು. ನಾವೆಲ್ಲರೂ ಶ್ರೀ ಕೃಷ್ಣನ ಭಕ್ತರಲ್ಲದವರನ್ನು ಭಕ್ತರನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ವಿವೇಕದ ವೇದಿಕೆಗೆ ಅವರನ್ನು ಕರೆತರಲು ಈ ಪರಿವರ್ತನೆ ಅಗತ್ಯ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು