ಶ್ರೀರಾಮ ನವಮಿ ವಿಶೇಷ

ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ. ಶ್ರೀರಾಮ ನವಮಿ ವಿಶೇಷವಾದ ಪಾನಕ ಮತ್ತು ಕೋಸಂಬರಿ ತಯಾರಿಸುವ ವಿವರ ಇಲ್ಲಿದೆ.

ಪಾನಕ

ಬೇಕಾಗುವ ಪದಾರ್ಥಗಳು:

ಬೆಲ್ಲ (ಹುಡಿ ಮಾಡಿದ್ದು) – ಒಂದು ಕಪ್ಪು
ಶುದ್ಧನೀರು – ಮೂರು ದೊಡ್ಡ ಲೋಟ
ಲಿಂಬೆ ಹಣ್ಣು – ಎರಡು
ಒಣ ಶುಂಠಿ (ಪುಡಿ) – ಒಂದೂವರೆ ಟೀ ಚಮಚ
ಏಲಕ್ಕಿ – ಎರಡು
ಕಾಳು ಮೆಣಸಿನ ಪುಡಿ – ಎರಡು ಚಿಟಿಕೆ
ಪುಡಿ ಉಪ್ಪು – ಒಂದು ಚಿಟಿಕೆ

ತಯಾರಿಸುವ ವಿಧಾನ:

ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಶ್ರೀ ರಾಮಚಂದ್ರನಿಗೆ ನೈವೇದ್ಯ ಮಾಡಿ, ಎಲ್ಲರಿಗೂ ಹಂಚಿ. ಪಾನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ.

ಮಸಾಲೆ-ಹುಣಸೆ ಪಾನಕ

ಬೇಕಾಗುವ ಪದಾರ್ಥಗಳು:

ಹುಣಸೆ ಹಣ್ಣು : 50 ಗ್ರಾಂ (ಹುಳಿ ಇಷ್ಟಪಡುವವರು ಸ್ವಲ್ಪ ಹೆಚ್ಚಿಗೆ ಬಳಸಬಹುದು.)
ನೀರು : ಆರು ಲೋಟ
ಜೀರಿಗೆ : ಒಂದೂವರೆ ಟೀ ಚಮಚ
ಸಕ್ಕರೆ : 150 ಗ್ರಾಂ
ಪುದಿನ : ಎಂಟು ಎಸಳು
ಶುಂಠಿ : ಅರ್ಧ ಇಂಚು ಉದ್ದದ ನಾಲ್ಕು ಚೂರುಗಳು
ದಾಲ್ಚಿನ್ನಿ : ಮೂರು ಇಂಚು ಉದ್ದದ ಚೂರು

ತಯಾರಿಸುವ ವಿಧಾನ:

ಒಂದು ಅಗಲವಾದ ಬಾಣಲೆಯಲ್ಲಿ ನೀರು ಕುದಿಸಿ. ಹುಣಸೆ ಹಣ್ಣನ್ನು ಬಿಡಿಸಿ, ಕುದಿಯುವ ನೀರಿಗೆ ಹಾಕಿ. ಕನಿಷ್ಟ ಆರು ಗಂಟೆ ಕಾಲ ಅದು ನೀರಿನಲ್ಲಿ ನೆನೆಯಲಿ. ನಂತರ ಆ ದ್ರಾವಣವನ್ನು ಜರಡಿಯಲ್ಲಿ ಸೋಸಿ, ಬೇರೊಂದು ಪಾತ್ರೆಗೆ ಸುರಿಯಿರಿ. ಹುಣಸೆ ಹಣ್ಣಿನ ಚರಟೆಯನ್ನು ಚೆನ್ನಾಗಿ ಹಿಂಡಿ, ಅದರ ಸಂಪೂರ್ಣ ಸಾರ ಹೊರತೆಗೆಯಿರಿ.
ನಂತರ ಒಣಗಿದ ಇನ್ನೊಂದು ಬಾಣಲೆಯಲ್ಲಿ ಜೀರಿಗೆಯನ್ನು ಅದರ ಸುವಾಸನೆ ಹರಡುವ ತನಕ ಹುರಿದು, ಹುಣಸೆ ದ್ರಾವಣ ಮತ್ತು ಉಳಿದ ಪದಾರ್ಥಗಳನ್ನು ಮಿಶ್ರಮಾಡಿ ಕುದಿಸಿ. ಅದನ್ನು ಒಲೆ ಮೇಲಿಂದ ಕೆಳಗಿಳಿಸಿ.ಕನಿಷ್ಠ ಮೂರು ಗಂಟೆ ಕಾಲ ತಣಿಯಲು ಬಿಡಿ. ಅದು ತಣ್ಣಗಾದ ಬಳಿಕ ಸೋಸಿ, ನೈವೇದ್ಯ ಮಾಡಿ, ಎಲ್ಲರಿಗೂ ಕುಡಿಯಲು ನೀಡಿ.

ಕೋಸುಂಬರಿ

ಕೋಸುಂಬರಿ ಎಂದರೆ ಕರ್ನಾಟಕದ ಅತ್ಯಂತ ಜನಪ್ರಿಯ ಸಲಾಡ್‌'. ತಯಾರಿಸಲು ಅತ್ಯಂತ ಸುಲಭವಾದ, ಅತ್ಯಂತ ರುಚಿಕಟ್ಟಾದ ಹಾಗೂ ಪೌಷ್ಠಿಕವಾದ ತಿನಿಸು ಕೋಸುಂಬರಿ. ಮಹಾರಾಷ್ಟ್ರದಲ್ಲಿ ಇದನ್ನುಕೋಸುಂಬಿರ್‌’ ಎಂದೂ ಕರೆಯುತ್ತಾರೆ. ಬಹುತೇಕ ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ಹಾಗೂ ದೇವಾಲಯಗಳಲ್ಲಿ ನೈವೇದ್ಯಕ್ಕಾಗಿ ಇದನ್ನು ತಯಾರಿಸಲಾಗುತ್ತದೆ. ಹೀಗಾಗಿ ಕೋಸುಂಬರಿ ಎಂದ ತಕ್ಷಣ ಪ್ರಸಾದ ಎಂಬ ಭಾವನೆ ಮೂಡುತ್ತದೆ. ಅಷ್ಟೊಂದು ಪಾವಿತ್ರ್ಯತೆ ಇದಕ್ಕಿದೆ.

ಬೇಕಾಗುವ ಪದಾರ್ಥಗಳು:

ಹೆಸರು ಬೇಳೆ, ಕಡಲೆ ಬೇಳೆ : ತಲಾ ಒಂದು ಕಪ್‌
ಹಸಿ ಮೆಣಸು : 4-5, ಮಧ್ಯಮ ಗಾತ್ರದ್ದು
ಕೊತ್ತಂಬರಿ ಸೊಪ್ಪು : ಸ್ವಲ್ಪ, ಚಿಗುರಾಗಿರಲಿ. ಬಾಡಿರುವುದು ಬೇಡ
ಕಾಯಿ ತುರಿ : ಅರ್ಧ ಹೋಳು,ಆಗ ತಾನೆ ತುರಿದಿರಬೇಕು
ಎಳೆ ಸವತೆಕಾಯಿ : ಮಧ್ಯಮ ಗಾತ್ರದ್ದು ಒಂದು ಸಾಕು
ಕ್ಯಾರೆಟ್‌ : ಮಧ್ಯಮ ಗಾತ್ರದ್ದು 3-4
ಲಿಂಬೆ ಹಣ್ಣು : ದೊಡ್ಡದಾದರೆ ಅರ್ಧ ಸಾಕು.
ಒಗ್ಗರಣೆಗೆ ಸಾಸಿವೆ

ತಯಾರಿಸುವ ವಿಧಾನ:

ಹೆಸರು ಮತ್ತು ಕಡಲೆ ಬೇಳೆಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ಕಾಲ ಶುದ್ಧ ನೀರಿನಲ್ಲಿ ನೆನೆಸಿಡಿ. ಕಾಯಿಯನ್ನು ತುರಿದಿಟ್ಟುಕೊಳ್ಳಿ. ಹೆಸರು ಮತ್ತು ಕಡಲೆಗಳಿಂದ ನೀರನ್ನು ಪ್ರತ್ಯೇಕಿಸಿ. ಎಳೆ ಸವತೆಯ ಸಿಪ್ಪೆ ತೆಗೆದು ಚಿಕ್ಕದಾಗಿ ಕೊಚ್ಚಿ. ಎರಡು ಹಸಿ ಮೆಣಸಿನ ಕಾಯಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇವೆಲ್ಲವನ್ನೂ ಮಿಶ್ರಣ ಮಾಡಿ.

ಸ್ವಚ್ಚವಾಗಿ ತೊಳೆದು, ಒಣಗಿಸಿದ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ. ಸಾಸಿವೆ ಸಿಡಿಯಲಾರಂಭಿಸಿದ ತಕ್ಷಣ ಅದಕ್ಕೆ ಒಂದು ಚಿಟಿಕೆ ಇಂಗು ಹಾಕಿ. ನಂತರ ಈ ಒಗ್ಗರಣೆಯನ್ನು ಹೆಸರು, ಕಡಲೆ ಮಿಶ್ರಣಕ್ಕೆ ಬೆರೆಸಿ ತಕ್ಕಷ್ಟು ಉಪ್ಪು ಸೇರಿಸಿ. ಲಿಂಬೆ ರಸ ಹಿಂಡಿ. ಚೆನ್ನಾಗಿ ಮಿಶ್ರ ಮಾಡಿ. ಕೊನೆಗೆ ಕಾಯಿ ತುರಿ ಬೆರೆಸಿ.

ಕ್ಯಾರೆಟ್‌ ಅಥವಾ ಎಳೆಸವತೆ ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. ಇವೆರಡನ್ನೂ ಸೇರಿಸುವುದು ಅನಿವಾರ್ಯವೇನಲ್ಲ. ಎಳೆ ಸವತೆ ಸೇರಿಸಿದರೆ ಕೋಸುಂಬರಿಯಲ್ಲಿ ತೇವಾಂಶ ಹೆಚ್ಚುತ್ತದೆ. ಇನ್ನು ಉಪ್ಪು ಸೇರಿಸಿದ ನಂತರ ಎಳೆ ಸವತೆ ಸಂಪೂರ್ಣವಾಗಿ ನೀರು ಬಿಟ್ಟುಕೊಳ್ಳುತ್ತದೆ. ಆದ್ದರಿಂದ ಅಂಥ ಕೋಸುಂಬರಿಯನ್ನು ತಯಾರಿಸಿದ ಒಂದು ತಾಸಿನೊಳಗೆ ವಿತರಿಸಿದರೆ ಒಳ್ಳೆಯದು. ಇಲ್ಲಿ ನಾವು ಹೆಸರು ಮತ್ತು ಕಡಲೆ ಬೇಳೆ ಮಿಶ್ರಣದ ಕೋಸುಂಬರಿ ಬಗ್ಗೆ ಮಾಹಿತಿ ನೀಡಿದ್ದೇವೆ. ನೀವು ಬೇಕಿದ್ದರೆ ಇವೆರಡರ ಪ್ರತ್ಯೇಕ ಕೋಸುಂಬರಿಗಳನ್ನೂ ತಯಾರಿಸಬಹುದು. ಇದೇ ರೀತಿ ಕಡಲೆ ಕಾಳು (ಚನ್ನಾ) ಕೋಸುಂಬರಿಯನ್ನೂ ತಯಾರಿಸಬಹುದು. ಆದರೆ ಕಡಲೆ ಕಾಳನ್ನು ಮಾತ್ರ ಕನಿಷ್ಟ ನಾಲ್ಕು ಗಂಟೆ ಕಾಲ ನೆನೆಸಿಡಬೇಕು.

ಕೋಸು-ಕೋಸುಂಬರಿ

ಬೇಕಾಗುವ ಪದಾರ್ಥಗಳು:

ತಾಜಾ ಕೋಸು (ಕ್ಯಾಬೇಜ್‌) : 1/4 ಕೆಜಿ
ಕಾಯಿ ತುರಿ : 1/2 ಕಪ್‌
ದೊಣ್ಣೆ ಮೆಣಸು (ಕ್ಯಾಪ್ಸಿಕಮ್‌) : ಒಂದು
ಲಿಂಬೆ ಹಣ್ಣು : ಅರ್ಧ
ಉಪ್ಪು : ಹಿಡಿಸುವಷ್ಟು
ಒಗ್ಗರಣೆ ಪದಾರ್ಥಗಳು : ಎರಡು ಚಮಚ ಎಣ್ಣೆ, 1/2 ಚಮಚ ಸಾಸಿವೆ , 7-8 ಕರಿಬೇವಿನ ಸೊಪ್ಪು

ತಯಾರಿಸುವ ವಿಧಾನ:

ಕೋಸು ಮತ್ತು ದೊಣ್ಣೆ ಮೆಣಸನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಕಾಯಿ ತುರಿ ಸೇರಿಸಿ. ಉಪ್ಪು, ಲಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ. ಒಗ್ಗರಣೆ ಹಾಕಿ. ಶ್ರೀ ರಾಮಚಂದ್ರನಿಗೆ ನೈವೇದ್ಯ ಮಾಡಿ. ಎಲ್ಲರಿಗೂ ಹಂಚಿ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು