ಪರಶುರಾಮನ ಲೀಲೆಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ – ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಾಲಯ. ಶಿವಮೊಗ್ಗ ಜಿಲ್ಲೆಯ ಈ ಪ್ರಾಚೀನ ದೇವಾಲಯ, ಕರ್ನಾಟಕದ ಒಂದು ಪ್ರಮುಖ ಕ್ಷೇತ್ರವಾಗಿದೆ. ಶಿವಮೊಗ್ಗದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ತೀರ್ಥಹಳ್ಳಿಯಿಂದ 10 ಕಿ.ಮೀ. ದೂರದಲ್ಲಿ ಈ ಸುಂದರವಾದ ಕಲ್ಲಿನ ದೇವಾಲಯವಿದೆ.
ತೀರ್ಥಹಳ್ಳಿ ರಮ್ಯಪ್ರಕೃತಿಗೆ ಹೆಸರಾದ ಸ್ಥಳ. ಮಲೆನಾಡಿನ ಸೌಂದರ್ಯ ಕೈಬೀಸಿ ಕರೆಯುತ್ತದೆ. ಸೊಗಸಾದ ಮಳೆಯಿಂದ ಹಸಿರಾಗಿರುವ ಈ ಶುದ್ಧ ತಾಣ, ಪರಶುರಾಮನ ಲೀಲೆಗೆ ಸಂಬಂಧಿಸಿದ ಪವಿತ್ರ ತುಂಗಾ ನದಿಯ ಕಾರಣ `ತೀರ್ಥಹಳ್ಳಿ’ ಎನಿಸಿದೆ. ಇಂಥ ಸುಂದರ ಸ್ಥಳದಲ್ಲಿ ಪರಶುರಾಮನೇ ಪ್ರತಿಷ್ಠಾಪಿಸಿದನೆಂದು ಹೇಳಲಾಗುವ ಶಿವಲಿಂಗವಿರುವ ಸುಂದರವಾದ ರಾಮೇಶ್ವರ ದೇವಾಲಯವಿದೆ. ಪರಶುರಾಮನು ಸ್ಥಾಪಿಸಿದ ಲಿಂಗವಾದ್ದರಿಂದ ಈ ಶಿವಲಿಂಗವನ್ನು `ರಾಮೇಶ್ವರ’ ಎನ್ನುತ್ತಾರೆ. ತುಂಗಾನದಿಯ ದಂಡೆಯ ಮೇಲೆಯೇ ಈ ದೇವಾಲಯವನ್ನು ಕಟ್ಟಿರುವುದರಿಂದ ದೇವಾಲಯದ ಹಿಂಭಾಗದಲ್ಲಿ ತುಂಗಾನದಿಯು ಹರಿಯುತ್ತಿರುವ
ಮನೋಹರ ದೃಶ್ಯ ಕಾಣುತ್ತದೆ. ಇದನ್ನು ರಾಮತೀರ್ಥ ಎನ್ನುತ್ತಾರೆ. ಇಲ್ಲೊಂದು ಮಂಟಪವಿದೆ. ಇಲ್ಲಿನ ಪ್ರಕೃತಿ ಬಹು ಸುಂದರ.
ಸ್ಥಳ ಪುರಾಣ
ವಿಷ್ಣುವು ಭೂಮಿಯ ಮೇಲಿನ ಕಾರ್ತವೀರ್ಯಾರ್ಜುನನೇ ಮೊದಲಾದ ದುಷ್ಟ ಕ್ಷತ್ರಿಯರ ನಿಗ್ರಹಕ್ಕಾಗಿ ಜಮದಗ್ನಿ ಋಷಿ ಮತ್ತು ರೇಣುಕಾದೇವಿಯರ ಪುತ್ರನಾಗಿ ರಾಮನೆಂಬ ಹೆಸರಿನಲ್ಲಿ ಅವತರಿಸಿದ. ಶಿವನನ್ನು ಕುರಿತು ತಪಸ್ಸು ಮಾಡಿ ಅವನಿಂದ ಪರಶು ಅಥವಾ ಕೊಡಲಿಯನ್ನು ಪಡೆದು ಪರಶುರಾಮನೆನಿಸಿದ. ಪರಶುರಾಮನ ತಾಯಿಯಾದ ರೇಣುಕಾದೇವಿಯು ಮಹಾಪತಿವ್ರತೆಯಾಗಿದ್ದು ದಿನವೂ ಪತಿಯ ಪೂಜೆಗಾಗಿ ಪ್ರಾತಃ ಕಾಲದಲ್ಲೇ ನದಿಯ ಬಳಿಗೆ ಹೋಗಿ ತನ್ನ ಕೈಯಾರೆ ಮಣ್ಣಿನಿಂದ ಮಡಕೆ ಮಾಡಿ ಅದರಲ್ಲಿ ನೀರು ತರುತ್ತಿದ್ದಳು. ಆದರೆ ಒಂದು ದಿನ, ಹಾಗೆ ಹೋಗಿದ್ದಾಗ ಅವಳು ಗಂಧರ್ವ ರಾಜನು ತನ್ನ ಪತ್ನಿಯರೊಂದಿಗೆ ಪ್ರಣಯಕೇಳಿಯಾಡುತ್ತಿದ್ದುದನ್ನು ನೋಡಿ ಕಾಮಪರವಶಳಾಗಿ ಮೈ ಮರೆತಳು. ಆಗ ತನ್ನ ದಿವ್ಯಶಕ್ತಿಯನ್ನು ಕಳೆದುಕೊಂಡ ಅವಳು ಮಣ್ಣಿನಲ್ಲಿ
ಮಡಕೆ ಮಾಡಲಾಗದೇ ಪೂಜೆಗೆ ಹೊತ್ತೂ ಮೀರಿ ಭಯಭೀತಳಾಗಿ ಆಶ್ರಮಕ್ಕೆ ಹೋದಳು. ಜಮದಗ್ನಿಗೆ ಎಲ್ಲವೂ ದಿವ್ಯ ದೃಷ್ಟಿಯಿಂದ ತಿಳಿದು, ಅವರು ಬಹು ಉಗ್ರ ಕೋಪದಿಂದ ರೇಣುಕೆಯ ಶಿರಶ್ಛೇದನ ಮಾಡಲು ತನ್ನ ಮಕ್ಕಳಿಗೆ ಆಜ್ಞಾಪಿಸಿದರು. ಇಂಥ ಕ್ರೂರ ಆಜ್ಞೆಯನ್ನು ಇತರರು ಪಾಲಿಸಲಾಗದಿದ್ದಾಗ, ಪರಶುರಾಮನು ತನ್ನ ತಂದೆಯ ಮಹಿಮೆ ತಿಳಿದಿದ್ದು ಅವರ ಮಾತು ಮೀರದೇ ತನ್ನ ಕೊಡಲಿಯಿಂದ ತಾಯಿಯ ಶಿರವನ್ನೇ ಕಡಿದನು. ತಮ್ಮ ಆಜ್ಞೆಯನ್ನು ಉಲ್ಲಂಘಿಸಿದ ಇತರ ಮಕ್ಕಳನ್ನು ಭಸ್ಮ ಮಾಡಿದ ಜಮದಗ್ನಿಗಳು ಪರಶುರಾಮನಲ್ಲಿ ಪ್ರಸನ್ನರಾಗಿ ಬೇಕಾದ ವರ ಬೇಡುವಂತೆ ಹೇಳಿದರು. ಆಗ ಪರಶುರಾಮನು ತನ್ನ ತಾಯಿಯನ್ನೂ ಅಣ್ಣಂದಿರನ್ನೂ ಪುನಃ ಬದುಕಿಸಿ ಕೋಪವನ್ನು ತ್ಯಜಿಸುವಂತೆ ಕೇಳಿದನು. ಜಮದಗ್ನಿಗಳು ಅವನ ಮಾತೃಭಕ್ತಿಗೆ ಮೆಚ್ಚಿ ಹಾಗೆಯೇ ಮಾಡಿದರು. ಇದರಿಂದ ರೇಣುಕೆಯು ಮತ್ತೆ ಬದುಕಿ ಪರಿಶುದ್ಧಳಾದಳು. ಆದರೆ ಪರಶುರಾಮನ ಕೊಡಲಿಯ ಮೇಲೆ ತಾಯಿಯ ರಕ್ತದ ಕಲೆಗಳಾಗಿದ್ದವು. ಆ ಕಲೆಗಳನ್ನು ತೊಡೆದು ಹಾಕಲು ಪರಶುರಾಮನು ಅನೇಕ ಪವಿತ್ರ ನದಿಗಳಿಗೆ ಹೋಗಿ ತನ್ನ ಕೊಡಲಿಯನ್ನು ತೊಳೆದನು. ಎಲ್ಲ ಕಲೆಗಳೂ ಹೋದರೂ ಒಂದು ಎಳ್ಳಿನ ಕಾಳಿನಷ್ಟು ಚಿಕ್ಕ ಕಲೆ ಉಳಿದುಬಿಟ್ಟಿತು. ಯಾವ ನದಿಯಲ್ಲಿ ತೊಳೆದರೂ ಅದು ಹೋಗಲಿಲ್ಲ. ಕೊನೆಗೆ ಪರಶುರಾಮನು ಈ ತೀರ್ಥಹಳ್ಳಿಯಲ್ಲಿ ಹರಿಯುತ್ತಿದ್ದ ತುಂಗಾನದಿಯಲ್ಲಿ ತನ್ನ ಕೊಡಲಿಯನ್ನು ತೊಳೆದಾಗ ಆ ಕಲೆ ಹೋಯಿತು. ಹೀಗಾಗಿ, ತುಂಗಾನದಿಯು ಅತ್ಯಂತ ಪವಿತ್ರವಾದ ನದಿಯೆಂದು ನಿರ್ಧರಿಸಿದ ಪರಶುರಾಮನು ಸಂತುಷ್ಟನಾಗಿ ಈ ಸ್ಥಳದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಇದೇ ರಾಮೇಶ್ವರ ಲಿಂಗ. ಈ ಲಿಂಗವಿರುವ ದೇವಾಲಯವೇ ರಾಮೇಶ್ವರ ದೇವಾಲಯ. ಪರಶುರಾಮನು ತನ್ನ ಕೊಡಲಿ ತೊಳೆದ ತುಂಗಾನದಿಯ ಸ್ಥಳವೇ ರಾಮತೀರ್ಥ. ಪರಶುರಾಮನ ಕೊಡಲಿಯನ್ನು ಶುದ್ಧೀಕರಿಸಿದ ಪವಿತ್ರ ತುಂಗಾನದಿಯು ಇಲ್ಲಿ ಹರಿಯುವುದರಿಂದ ಈ ಸ್ಥಳಕ್ಕೆ ತೀರ್ಥಹಳ್ಳಿ ಎಂದು ಹೆಸರಾಯಿತು.
ಪರಶುರಾಮನು ತನ್ನ ಕೊಡಲಿಯ ಮೇಲಿದ್ದ ಎಳ್ಳಿನ ಗಾತ್ರದ ಕಲೆಯನ್ನು ತೊಳೆದ ಮಾರನೆಯ ದಿನ ಮಾರ್ಗಶಿರಮಾಸದ ಅಮಾವಾಸ್ಯೆಯಾಗಿತ್ತು. ಆದ್ದರಿಂದ, ಈಗಲೂ ಮಾರ್ಗಶಿರ ಮಾಸದ ಅಮಾವಾಸ್ಯೆಯಂದು ಎಳ್ಳಮಾವಾಸ್ಯೆಯೆಂಬ ಜಾತ್ರೆ ನಡೆಸಲಾಗುತ್ತದೆ.
ಹೀಗೆ ತೀರ್ಥಹಳ್ಳಿಯ ರಾಮೇಶ್ವರ ದೇವಾಲಯ, ನೋಡಬೇಕಾದ ಒಂದು ಸ್ಥಳವಾಗಿದೆ.