ಶ್ರೀಕ್ಷೇತ್ರ ಅಂಬುತೀರ್ಥ

ಶ್ರೀ ರಾಮನು ಲಕ್ಷ್ಮಣ ಮತ್ತು ಸೀತೆಯರೊಂದಿಗೆ ವನವಾಸಕ್ಕೆ ಹೋದಾಗ ಕ್ರಮಿಸಿದನೆಂದು ಹೇಳಲಾಗುವ ಅನೇಕ ಸ್ಥಳಗಳು ಇಂದು ಪುಣ್ಯಕ್ಷೇತ್ರಗಳಾಗಿವೆ. ಅವನಿಗೆ ಸಂಬಂಧಿಸಿದ ಕ್ಷೇತ್ರಗಳು ದಕ್ಷಿಣ ಭಾರತದಲ್ಲೂ, ಅದರಲ್ಲೂ ಕರ್ನಾಟಕದಲ್ಲೂ ಅನೇಕವಾಗಿವೆ. ಇಂಥ ಪವಿತ್ರ ಕ್ಷೇತ್ರಗಳಲ್ಲಿ ಅಂಬುತೀರ್ಥವೂ ಒಂದು.

ಪ್ರಕೃತಿ ಸೌಂದರ್ಯವು ರಾರಾಜಿಸುತ್ತಿರುವ ಅಂಬುತೀರ್ಥವು ಶರಾವತಿ ನದಿಯ ಉಗಮಸ್ಥಳ. ವಿಶ್ವವಿಖ್ಯಾತ ಜೋಗ್‌ಜಲಪಾತದ ಹೆಸರನ್ನು ಯಾರು ತಾನೇ ಕೇಳಿಲ್ಲ? ನಮ್ಮ ದೇಶದ ಅತಿ ಎತ್ತರದ ಜಲಪಾತವೂ ವಿದ್ಯುದುತ್ಪಾದನೆಗೆ ಪ್ರಮುಖ ಮೂಲವೂ ಆದ ಈ ಅದ್ಭುತ ಜಲಪಾತ, ಶರಾವತಿ ನದಿಯ ಜಿಗಿತದಿಂದಾದ ಜಲಪಾತ. ಈ ಶರಾವತಿ ನದಿಯ ಉಗಮ ಸ್ಥಳವೇ ಅಂಬುತೀರ್ಥ.

ಅಂಬುತೀರ್ಥವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ಶಿವಮೊಗ್ಗದಿಂದ 60 ಕಿ.ಮೀ. ದೂರದ ತೀರ್ಥಹಳ್ಳಿಯಿಂದ ಸುಮಾರು ಹದಿನೈದು ಕಿ.ಮೀ. ದೂರ ತೀರ್ಥಹಳ್ಳಿ- ಹೊಸನಗರ ರಸ್ತೆಯಲ್ಲಿ ಕ್ರಮಿಸಿದರೆ ಅಂಬುತೀರ್ಥ ಸಿಗುತ್ತದೆ. ಸುತ್ತಲೂ ಹಸಿರಾದ ಸುಂದರ ಕಾಡು, ಬೆಟ್ಟಗುಡ್ಡಗಳು, ಅಡಿಕೆ ಮರಗಳ ತೋಟವಿದ್ದು, ಶರಾವತಿ ನದಿಯು ಹುಟ್ಟುವ ಸ್ಥಳ ಮಧ್ಯದಲ್ಲಿ ಒಂದು ಸುಂದರ ಮಣಿಯಂತಿದ್ದು ಇಲ್ಲೊಂದು ಸೊಗಸಾದ ಪುಟ್ಟ ಶಿವಾಲಯವಿದೆ. ಈ ದೇವಾಲಯದಲ್ಲಿ ಶ್ರೀರಾಮನು ಪ್ರತಿಷ್ಠಾಪಿಸಿದನೆಂದು ಹೇಳಲಾಗುವ ಶಿವಲಿಂಗವಿದೆ. ಆದ್ದರಿಂದ ಈ ದೇವಾಲಯವನ್ನು ರಾಮೇಶ್ವರ ದೇವಾಲಯವೆನ್ನುತ್ತಾರೆ. ಶಿವಲಿಂಗದ ಸನಿಹವೇ ಒಂದು ಗಣಪತಿಯ ಶಿಲಾವಿಗ್ರಹವೂ ಇದೆ. ಶಿವಲಿಂಗದ ಕೆಳಗೆ ಶರಾವತಿ ನದಿಯ ನೀರು ಉಗಮವಾಗುತ್ತದೆ. ಇದೇ ಅಂಬುತೀರ್ಥ. ಇಲ್ಲಿ ಹುಟ್ಟುವ ನೀರು, ಗರ್ಭಗುಡಿಯಿಂದ ಹೊರಗೆ ಹರಿಯುತ್ತಾ ಮುಂದೆ ಇರುವ ಪುಟ್ಟ ಕೊಳದಲ್ಲಿ ತುಂಬಿಕೊಳ್ಳುತ್ತದೆ. ಅಲ್ಲಿಂದ ಹರಿದು ಅನಂತರ ಅದು ಇನ್ನೊಂದು ದೊಡ್ಡದಾದ ಕೊಳದಲ್ಲಿ ತುಂಬಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಇದು, ದೇವಾಲಯದ ಮುಂದೆಯಿರುವ ದೊಡ್ಡ ಕೆರೆಗೆ ಹರಿದು, ಅನಂತರ, ಸನಿಹದ ಅಡಿಕೆ ತೋಟದಲ್ಲಿ ಪ್ರವೇಶಿಸಿ ಮುಂದೆ ಹರಿಯುತ್ತಾ ಹೋಗುತ್ತದೆ. ಶಿವಲಿಂಗವನ್ನೂ ಪವಿತ್ರ ಶರಾವತಿಯನ್ನೂ ಸಂದರ್ಶಿಸುವಾಗ, ಮೌನವೂ ಏಕಾಂತವೂ ಬಹು ಪ್ರಶಾಂತವೂ ಆದ ಆ ಪರಿಸರದಲ್ಲಿ ನದಿಯ ಜುಳುಜುಳು ಎಂಬ ಮಧುರಮಂಜುಳ ಶಬ್ದ, ಆಧ್ಯಾತ್ಮಿಕ ಆನಂದವನ್ನೂ ಮನೋನೆಮ್ಮದಿಯನ್ನೂ ಕೊಡುತ್ತದೆ. ದೇವಾಲಯದ ಗೋಪುರವೂ ಬಹಳ ಸುಂದರವಾಗಿದೆ. ಹೀಗೆ ಈ ಪ್ರದೇಶ ಬಹಳ ಮನೋಹರವಾಗಿದೆ. ಅಂತೆಯೇ ತಂಪಾಗಿದ್ದು ಆಹ್ಲಾದಕರವಾಗಿದೆ.

ಸ್ಥಳಪುರಾಣ

ಶ್ರೀರಾಮ, ಲಕ್ಷ್ಮಣ, ಸೀತೆಯರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿಗೆ ಬಂದಿದ್ದರು ಎನ್ನುತ್ತದೆ ಸ್ಥಳಪುರಾಣ. ಶ್ರೀರಾಮನು ದೇವರ ಪೂಜೆಗೆ ಇಲ್ಲೆಲ್ಲೂ ನೀರು ದೊರೆಯದ ಕಾರಣ, ವರುಣನನ್ನು ಪ್ರಾರ್ಥಿಸಿ ಭೂಮಿಗೆ ಬಾಣ ಬಿಡಲು ನೀರು ಉಕ್ಕಿ ಬಂದು ನದಿಯಾಗಿ ಹರಿಯಿತೆಂದು ಒಂದು ಹೇಳಿಕೆಯಿದ್ದರೆ, ಸೀತೆಯ ದಾಹವನ್ನು ಹೋಗಲಾಡಿಸಲು ಶ್ರೀರಾಮನು ಹೀಗೆ ಭೂಮಿಗೆ ಬಾಣಬಿಟ್ಟು ನೀರು ಬರಿಸಿದನೆಂದು ಇನ್ನೊಂದು ಹೇಳಿಕೆಯಿದೆ. ಒಟ್ಟಿನಲ್ಲಿ ಶ್ರೀರಾಮನ ಬಾಣ ಅಥವಾ ಅಂಬಿನಿಂದ ನದಿಯು ಹುಟ್ಟಿದುದರಿಂದ, ಅದು ಹುಟ್ಟಿದ ಸ್ಥಳಕ್ಕೆ ಅಂಬುತೀರ್ಥ ಎಂದು ಹೆಸರಾಯಿತು. ಶರ ಎಂದರೂ ಬಾಣ ಎಂದು ಅರ್ಥ. ಶರ ಅಥವಾ ಬಾಣದಿಂದ ಹುಟ್ಟಿದ ನದಿಯಾದ್ದರಿಂದ ಈ ನದಿಗೆ ಶರಾವತಿ ಎಂದು  ಹೆಸರಾಯಿತು. ವಿಷ್ಣುವಿನ ಪಾದಾಂಗುಷ್ಠದಿಂದ ಪಾಪ ತೊಳೆವ ಗಂಗೆಯು ಹುಟ್ಟಿದರೆ, ಅದೇ ವಿಷ್ಣುವಿನ ಅವತಾರವಾದ ಶ್ರೀರಾಮನ ಬಾಣದಿಂದ ಶರಾವತಿಯು ಹುಟ್ಟಿ ಕನ್ನಡನಾಡಿಗೆ ಹಲವಾರು ರೀತಿಗಳಲ್ಲಿ ಉಪಕಾರಿಯಾಗಿ `ಕನ್ನಡನಾಡಿನ ಭಾಗೀರಥಿ’ ಎನಿಸಿದೆ.

ಹೀಗೆ ಶರಾವತಿ ನದಿಯು ಉದಿಸಿದ ಬಳಿಕ, ಶ್ರೀರಾಮನು ಈ ಸ್ಥಳವು ಒಂದು ಪವಿತ್ರ ಕ್ಷೇತ್ರವಾಗಿರಲೆಂದು ಅದರ ಉಗಮಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಹೇಳುತ್ತಾರೆ. ಹೀಗೆ ಶ್ರೀರಾಮನಿಂದ ಪ್ರತಿಷ್ಠಾಪಿತವಾದ ಶಿವಲಿಂಗವು ಶ್ರೀರಾಮೇಶ್ವರ ಲಿಂಗವೆಂದು ಪ್ರಸಿದ್ಧವಾಗಿದೆ. ಶ್ರೀರಾಮನವಮಿಯ ಸಮಯದಲ್ಲಿ ಇಲ್ಲಿ ಬಹಳ ಪ್ರಸಿದ್ಧವಾದ ಉತ್ಸವ ನಡೆಯುತ್ತದೆ.

ಹೀಗೆ ಅಂಬುತೀರ್ಥವು ಪವಿತ್ರವೂ ರಮಣೀಯವೂ ಆದ ಕ್ಷೇತ್ರವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi