ಶ್ರೀರಾಮಾವತಾರ

ಅಧರ್ಮವು ತಲೆಯೆತ್ತಿದಾಗಲೆಲ್ಲ ತಾನು ಆವಿರ್ಭವಿಸುವುದಾಗಿ ಘೋಷಿಸಿದ್ದ ದೇವೋತ್ತಮ ಪರಮ ಪುರುಷನು ತ್ರೇತಾಯುಗದಲ್ಲಿ ಸಜ್ಜನರಿಗೆ ತೊಂದರೆಯನ್ನು ನೀಡುತ್ತಿದ್ದ ಅಸುರರನ್ನು ಸಂಹರಿಸಿ ಭೂಮಿಯ ಮೇಲೆ ಪಾಪದ ಹೊರೆಯನ್ನು ಕಡಮೆ ಮಾಡಲು ಮತ್ತು ರಾಜನಾದವನು ಹೇಗೆ ರಾಜ್ಯವಾಳಬೇಕೆಂಬುದನ್ನು ತೋರಿಸಿಕೊಡಲು ದಶರಥ ಮತ್ತು ಕೌಸಲ್ಯೆಯ ಮಗ ಶ್ರೀರಾಮಚಂದ್ರನಾಗಿ ಅವತರಿಸಿದನು.

ತ್ರೇತಾಯುಗದಲ್ಲಿ ಸೂರ್ಯವಂಶದ ಮಹಾರಾಜನಾದ ದಶರಥನು ಅಯೋಧ್ಯಾನಗರವನ್ನು ಆಳುತ್ತಿದ್ದನು. ಈತನಿಗೆ ಮೂವರು ರಾಣಿಯರಿದ್ದರೂ ಸಂತಾನವಿರಲಿಲ್ಲ. ಮಕ್ಕಳನ್ನು ಪಡೆಯಲು ಪುತ್ರಕಾಮೇಷ್ಠೀ ಎಂಬ ಯಜ್ಞವನ್ನಾಚರಿಸಿದ ರಾಜನು ಯಜ್ಞದ ಫಲವಾಗಿ ತನ್ನ ಮೂವರು ರಾಣಿಯರಿಂದ ನಾಲ್ಕು ಪುತ್ರರನ್ನು ಪಡೆದನು. ಇವರಲ್ಲಿ ಹಿರಿಯವನಾದ ಶ್ರೀರಾಮನೇ ದೇವೋತ್ತಮ ಪರಮ ಪುರುಷನ ಅವತಾರ. ಭಗವಂತನ ವಿಸ್ತರಣೆಗಳಾದ ಭರತ, ಲಕ್ಷ್ಮಣ ಮತ್ತು ಶತ್ರುಘ್ನರು ಕ್ರಮವಾಗಿ ಕೈಕೇಯಿ ಮತ್ತು ಸುಮಿತ್ರೆಯರ ಪುತ್ರರಾಗಿ ಅವತರಿಸಿದರು.

ಈ ನಾಲ್ವರೂ ರಾಜಕುಮಾರರು ಕುಲಪುರೋಹಿತರಾದ ವಸಿಷ್ಠರಿಂದ ಸಕಲ ವಿದ್ಯೆಗಳನ್ನೂ ಬಹಳ ಶೀಘ್ರವಾಗಿ ಕಲಿತರು. ಹೀಗೆ ಸಕಲ ವಿದ್ಯೆಗಳಲ್ಲಿ ನಿಪುಣರಾದ ನಾಲ್ವರೂ ಸಹೋದರರು ಅಯೋಧ್ಯೆಯ ಬಲಿಷ್ಠ ಯುವರಾಜರೆನಿಸಿದರು.

ಒಮ್ಮೆ ಮಿಥಿಲಾನಗರದಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರದಲ್ಲಿ ಶಿವನಿಂದ ಮಿಥಿಲೆಯ ರಾಜ ಜನಕನಿಗೆ ದೊರೆತಿದ್ದ ಶಿವ ಧನುಸ್ಸನ್ನು ಶ್ರೀರಾಮನು ಹೆದೆಯೇರಿಸಿ ಮುರಿದು ಹಾಕಿದನು. ಅನಂತರ ಸೀತೆಯನ್ನು ಪತ್ನಿಯನ್ನಾಗಿ ಸ್ವೀಕರಿಸಿದನು. ಅಲ್ಲದೇ, ಲಕ್ಷ್ಮಣನು ಸೀತೆಯ ಸಹೋದರಿ ಊರ್ಮಿಳೆಯನ್ನು ಮದುವೆಯಾದನು.

ದಶರಥನು ಶ್ರೀರಾಮನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಲು ನಿಶ್ಚಯಿಸಿದಾಗ ಕೈಕೇಯಿಯು ತನ್ನ ಮಗ ಭರತನೇ ರಾಜನಾಗಬೇಕೆಂದು ತೀರ್ಮಾನಿಸಿ, ದಶರಥ ರಾಜ ಹಿಂದೆ ನೀಡಿದ ವರಗಳನ್ನು ಈಗ ಕೊಡುವಂತೆ ಹೇಳಿದಳು. ಆ ಎರಡು ವರಗಳು: ಭರತನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಬೇಕು ಮತ್ತು ಶ್ರೀರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು. ಇದಕ್ಕೆ ದಶರಥ ರಾಜನು ಸಮ್ಮತಿಸದಿದ್ದರೂ ಸಹ ಶ್ರೀರಾಮನು ತನ್ನ ತಂದೆಯ ವಚನಗಳನ್ನು ಪಾಲಿಸಲು ಸೀತೆ ಮತ್ತು ಲಕ್ಷ್ಮಣನ ಜೊತೆಯಲ್ಲಿ ವನವಾಸಕ್ಕೆ ತೆರಳಿ, ಅರಣ್ಯವೊಂದರಲ್ಲಿ ಪರ್ಣಕುಟೀರವನ್ನು ಕಟ್ಟಿಕೊಂಡು, ಅಲ್ಲಿಯೇ ವಾಸಿಸಹತ್ತಿದನು.

ಒಂದು ದಿನ ಲಂಕಾಧೀಶ ರಾವಣನ ಆದೇಶದಂತೆ ಮಾರೀಚನೆಂಬ ರಾಕ್ಷಸನು ಬಂಗಾರದ ಜಿಂಕೆಯ ವೇಷ ತಳೆದು ಸೀತೆಯ ಬಳಿಯಲ್ಲೇ ಸುಳಿದಾಡಿದನು. ಜಿಂಕೆಯನ್ನು ಕಂಡ ಸೀತೆಯು ಶ್ರೀರಾಮನಿಗೆ “ದಯವಿಟ್ಟು ಆ ಜಿಂಕೆಯನ್ನು ನನಗೆ ತಂದುಕೊಡಿ” ಎಂದು ಬೇಡಿದಳು. ಶ್ರೀರಾಮ ಜಿಂಕೆಯನ್ನು ಹಿಡಿಯಲು ಅದರ ಹಿಂದೆ ಹೋದನು. ಲಕ್ಷ್ಮಣನು ಸೀತೆಯ ಕಾವಲಿಗಾಗಿ ಅಲ್ಲಿಯೇ ಇದ್ದನು. ಸ್ವಲ್ಪ ಸಮಯದ ಅನಂತರ ಶ್ರೀರಾಮನು ಸೀತೆ ಮತ್ತು ಲಕ್ಷ್ಮಣನನ್ನು ಸಹಾಯಕ್ಕಾಗಿ ಕೂಗುತ್ತಿರುವಂತೆ ಕೇಳಿಸಿತು. ಕುಟೀರದ ಸುತ್ತಲೂ ರೇಖೆಯನ್ನು ರಚಿಸಿ ಸೀತೆಯ ಆಜ್ಞೆಯ ಮೇರೆಗೆ ಲಕ್ಷ್ಮಣನು ಶ್ರೀರಾಮನ ಸಹಾಯಕ್ಕಾಗಿ ಹೊರಟನು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾವಣನು ಋಷಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿದನು.

ಸೀತೆಯ ಅಪಹರಣದ ಸುದ್ದಿ ತಿಳಿದ ಶ್ರೀರಾಮನು ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿದನು. ಅನಂತರ ಹನುಮಂತನ ಸಹಾಯದಿಂದ ಸುಗ್ರೀವನ ಸಖ್ಯವನ್ನು ಮಾಡಿದನು. ಸುಗ್ರೀವನು ಶ್ರೀರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡುವುದಾಗಿ ವಚನವಿತ್ತನು.

ಶ್ರೀರಾಮನಿಗೆ ಕೊಟ್ಟ ಮಾತಿನಂತೆ, ಸುಗ್ರೀವನು ಭೂಮಿಯ ಉದ್ದಗಲಕ್ಕೂ ತನ್ನ ದೂತರನ್ನಟ್ಟಿ ಸೀತೆಯ ಬಗ್ಗೆ ಸುಳಿವನ್ನು ತರುವಂತೆ ಆದೇಶ ನೀಡಿದನು. ವಾಯುಪುತ್ರ ಹನುಮಂತನು ಸಾಗರವನ್ನು ದಾಟಿ ಸುವರ್ಣ ನಗರಿ ಲಂಕೆಯನ್ನು ತಲಪಿದನು. ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಕಂಡು ಹನುಮಂತನು ಶ್ರೀರಾಮನ ಉಂಗುರವನ್ನು ನೀಡಿ ತಾನು ಶ್ರೀರಾಮನ ದೂತನೆಂದು ತಿಳಿಸಿದನು ಮತ್ತು ಸೀತೆಯನ್ನು ಬಿಡಿಸಲು ಶ್ರೀರಾಮನು ಶೀಘ್ರವಾಗಿ ಬರುವುದಾಗಿ ತಿಳಿಸಿದನು. ಹನುಮಂತನು ಸೀತೆ ನೀಡಿದ ಚೂಡಾಮಣಿಯನ್ನು ಪಡೆದು ರಾಮನ ಬಳಿ ಹೋಗಲು ಸಿದ್ಧನಾದನು. ಅನಂತರ ರಾವಣನ ಸೈನಿಕರಿಂದ ಬಂಧಿಸಲ್ಪಟ್ಟನು. ಮೊದಲೇ ಕುಪಿತನಾದ ರಾವಣನು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲು ತಿಳಿಸಿದನು. ಆ ಬೆಂಕಿಯಿಂದ ಹನುಮಂತನು ಇಡೀ ಲಂಕಾ ನಗರವನ್ನು ಸುಟ್ಟು ಹಾಕಿದನು.

ಕಿಷ್ಕಿಂಧೆಗೆ ಹಿಂದಿರುಗಿದ ಹನುಮಂತನು ಶ್ರೀರಾಮನಿಗೆ ಸೀತೆಯ ವಿಚಾರವನ್ನು ತಿಳಿಸಿ ಅವಳು ನೀಡಿದ್ದ ಚೂಡಾಮಣಿಯನ್ನು ಕೊಟ್ಟನು. ಶ್ರೀರಾಮನು ವಾನರ ಸೇನೆಯ ಸಹಾಯದಿಂದ ಲಂಕೆಗೆ ಹೋಗಲು ಸಮುದ್ರದ ಮೇಲೆ ಕಲ್ಲಿನ ಸೇತುವೆಯನ್ನು ನಿರ್ಮಿಸಿದನು. ಈ ಸೇತುವೆಗೆ ಬಳಸಿದ ಕಲ್ಲುಗಳು ನೀರಿನ ಮೇಲೆ ತೇಲುತ್ತಿದ್ದವು. ಈ ರೀತಿ ಸೇತುವೆಯನ್ನು ನಿರ್ಮಿಸಲು ದೇವೋತ್ತಮ ಪರಮ ಪುರುಷನಿಂದ ಮಾತ್ರ ಸಾಧ್ಯ. ಹೀಗೆ ಸಮುದ್ರಕ್ಕೆ ಸೇತುವೆ ನಿರ್ಮಿಸಿ ಶ್ರೀರಾಮನು ತನ್ನ ವಾನರ ಸೈನ್ಯದೊಂದಿಗೆ ಲಂಕೆಯನ್ನು ಸೇರಿದನು. ಅಲ್ಲಿ ರಾವಣನಿಂದ ತಿರಸ್ಕರಿಸಲ್ಪಟ್ಟ ವಿಭೀಷಣನಿಗೆ ಶ್ರೀರಾಮ ಆಶ್ರಯವಿತ್ತನು. ಶ್ರೀರಾಮ, ಲಕ್ಷ್ಮಣ ಮತ್ತು ವಾನರ ಯೋಧರು ರಾವಣನ ಬಲಿಷ್ಠ ಯೋಧರು, ಬಂಧುಗಳು, ಕುಂಭಕರ್ಣ ಮತ್ತು ಅವನ ಪುತ್ರರನ್ನು ಯುದ್ಧದಲ್ಲಿ ಸಂಹರಿಸಿದರು. ಕೊನೆಯಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿದನು.

ಅನಂತರ ಶ್ರೀರಾಮನು ಸೀತಾಲಕ್ಷ್ಮಣ ಸಮೇತನಾಗಿ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬಂದನು. ಅಯೋಧ್ಯೆಯಲ್ಲಿ ಭರತ, ಶತ್ರುಘ್ನ ಮತ್ತು ಅಯೋಧ್ಯೆಯ ಪ್ರಜೆಗಳು ರಾಮನ ಬರುವಿಕೆಯಿಂದ ಬಹಳ ಸಂತೋಷಗೊಂಡರು. ಹದಿನಾಲ್ಕು ವರ್ಷಗಳ ವನವಾಸ ಮುಗಿಸಿದ ಅನಂತರ ಶ್ರೀರಾಮನು ವಸಿಷ್ಠ ಮುನಿಗಳಿಂದ ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾದನು.

ಈ ಲೇಖನ ಶೇರ್ ಮಾಡಿ