ಹೂರಣದ ತಿಂಡಿಗಳು

ಒಂದು ಭಾಗ ತುರಿದ ಕಾಯಿಗೆ ಒಂದು ಭಾಗ ಪುಡಿ ಮಾಡಿದ ಬೆಲ್ಲ ಸೇರಿಸಿ, ಒಂದು ಕೈ ನೀರು ಚಿಮುಕಿಸಿ ಸಣ್ಣ ಉರಿಯಲ್ಲಿಟ್ಟು ಗಟ್ಟಿಯಾಗುವವರೆಗೆ ಕೈಯಾಡಿಸಿ, ಏಲಕ್ಕಿ ಪುಡಿ ಬೆರೆಸಿದರೆ ಸಿಹಿ ಹೂರಣ ಸಿದ್ದ. ಈ ಸಿಹಿ ಹೂರಣವನ್ನು ವಿವಿಧ ತಿಂಡಿಗಳನ್ನು ತಯಾರಿಸಲು ಉಪಯೋಗಿಸಬಹುದು. ಮಧುರನಾದ ಶ್ರೀ ಕೃಷ್ಣನನ್ನು ಸ್ಮರಿಸುತ್ತ ಸಿಹಿಯಾದ ಹೂರಣ ತುಂಬಿದ ತಿಂಡಿಗಳನ್ನು ತಯಾರಿಸಿ ಆ ಭಗವಂತನಿಗೆ ಸಮರ್ಪಿಸೋಣವೇ?

ಸುಹಿಯಂ

ತಯಾರಿಸಲು ಬೇಕಾದ ಪದಾರ್ಥಗಳು

ಹೂರಣ – 2  ಬಟ್ಟಲುಗಳು

ಉದ್ದಿನ ಬೇಳೆ – 1  ಬಟ್ಟಲು

ಅಕ್ಕಿ ಹಿಟ್ಟು – 1 ಟೇಬಲ್‌ ಚಮಚ

ಉಪ್ಪು – 1 ಚಿಟಿಗೆ

ಕರಿಯಲು ಎಣ್ಣೆ

ತಯಾರು ಮಾಡುವ ವಿಧಾನ

1. ಉದ್ದಿನ ಬೇಳೆಯನ್ನು ತೊಳೆದು ನಲವತ್ತು ನಿಮಿಷಗಳು ನೆನೆಸಿಡಬೇಕು.

2. ನೆನೆದ ಬೇಳೆಯನ್ನು ಅಕ್ಕಿ ಹಿಟ್ಟು ಉಪ್ಪು ಸೇರಿಸಿ ಹೆಚ್ಚು ನೀರು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಬೇಕು.

3. ಹೂರಣವನ್ನು ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿಕೊಳ್ಳಬೇಕು.

4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಎರಡು ಟೇಬಲ್‌ ಚಮಚ ಕಾದ ಎಣ್ಣೆಯನ್ನು ತೆಗೆದು  ಹಿಟ್ಟಿನೊಂದಿಗೆ ಕಲಸಿಕೊಳ್ಳಬೇಕು.

5. ಹೂರಣದ ಉಂಡೆಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ, ಎಚ್ಚರಿಕೆಯಿಂದ ಕಾದ ಎಣ್ಣೆಗೆ ಹಾಕಿ ಕರಿದು, ಸುಹಿಯಂ ಹೊನ್ನಿನ ಬಣ್ಣಕ್ಕೆ ತಿರುಗುವಾಗ ಹೊರತೆಗೆಯಬೇಕು.

ಪಾಲ್‌ ಕೊಳಕಟ್ಟೈ / ಹಾಲು ಕಡುಬು

ತಯಾರಿಸಲು ಬೇಕಾದ ಪದಾರ್ಥಗಳು

ಅಕ್ಕಿ ಹಿಟ್ಟು – 1 ಲೋಟ

ಉಪ್ಪು – 1 ಚಿಟಿಗೆ

ಎಳ್ಳೆಣ್ಣೆ – 1 ಟೇಬಲ್‌ ಚಮಚ

ಹಾಲು – 2 ಲೋಟ

ಹೂರಣ – ರುಚಿಗೆ ತಕ್ಕಷ್ಟು

ಒಣ ದ್ರಾಕ್ಷಿ – ಒಂದು ಟೇಬಲ್‌ ಚಮಚ

ತಯಾರು ಮಾಡುವ ವಿಧಾನ

1. 1 1/2 ಲೋಟ ನೀರಿಗೆ ಉಪ್ಪು ಎಣ್ಣೆ ಸೇರಿಸಿ ಕುದಿಸಬೇಕು.

2. ಅಕ್ಕಿ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿ ನೀರು ಇಂಗುವವರೆಗೆ, ಗಂಟಾಗದಂತೆ  ಕೈಯಾಡಿಸಬೇಕು.

3. ಮುದ್ದೆಯಾದ ಹಿಟ್ಟನ್ನು ಮುಚ್ಚಿಡಬೇಕು.

4. ಸ್ವಲ್ಪ ಬಿಸಿ ಆರಿದ ಅನಂತರ ಚೆನ್ನಾಗಿ ನಾದಬೇಕು.

5. ಸಣ್ಣ ನಿಂಬೆ ಗಾತ್ರದ ಹಿಟ್ಟನ್ನು ತೆಗೆದು ಮತ್ತೆ ನಾದಿ ಬಟ್ಟಲಿನಂತೆ ಮಾಡಿಕೊಳ್ಳಬೇಕು.

6. ಹಿಟ್ಟಿನ ಬಟ್ಟಲಿಗೆ ಹೂರಣ ತುಂಬಿ ಅಂಚುಗಳನ್ನು ಸೇರಿಸಿ ಮುಚ್ಚಬೇಕು.

7. ಎಲ್ಲ ಕೊಳಕಟ್ಟೈಗಳನ್ನೂ ಮಾಡಿದ ಅನಂತರ ಇಡ್ಲಿ ತಟ್ಟೆಯಲ್ಲಿಟ್ಟು ಹಬೆಯಲ್ಲಿ 10-15 ನಿಮಿಷಗಳು ಬೇಯಿಸಬೇಕು.

8. ಹಾಲನ್ನು `ಘಂ’ ಎಂದು ವಾಸನೆ ಬರುವವರೆಗೆ ಕುದಿಸಿ, 2 ಟೇಬಲ್‌ ಚಮಚ ಹೂರಣವನ್ನು  ಸೇರಿಸಿ, ದ್ರಾಕ್ಷಿಯನ್ನೂ ಹಾಕಿ ಬೆರೆಸಬೇಕು.

9. ಹಬೆಯಲ್ಲಿ ಬೆಂದ ಕೊಳಕಟ್ಟೈಗಳು ಆರಿದ ಮೇಲೆ ಕುದಿಯುವ ಹಾಲಿಗೆ ಹಾಕಿ ಒಲೆ ಆರಿಸಬೇಕು.

ಪತಿಶಪ್ತ

ತಯಾರಿಸಲು ಬೇಕಾದ ದಾರ್ಥಗಳು

ಮೈದಾ ಹಿಟ್ಟು – 1 ಬಟ್ಟಲು

ಅಕ್ಕಿ ಹಿಟ್ಟು – 2 ಟೇಬಲ್‌ ಚಮಚ

ಚಿರೋಟಿ ರವೆ – 2 ಟೇಬಲ್‌ ಚಮಚ

ಹಾಲು – 2 ಬಟ್ಟಲುಗಳು

ಏಲಕ್ಕಿ ಪುಡಿ – 1/4 ಟೀ ಚಮಚ

ಉಪ್ಪು – 1 ಚಿಟಿಗೆ

ಸಕ್ಕರೆ – 1 ಟೇಬಲ್‌ ಚಮಚ

ಖೋವಾ – 1/2 ಬಟ್ಟಲು

ಬೇಯಿಸಲು ತುಪ್ಪ

ತಯಾರು ಮಾಡುವ ವಿಧಾನ

1. ಸಣ್ಣ ಉರಿಯಲ್ಲಿ ಒಂದು ಬಟ್ಟಲು ಹೂರಣಕ್ಕೆ ಅರ್ಧ ಬಟ್ಟಲು ಖೋವಾ ಸೇರಿಸಿ, ಚೆನ್ನಾಗಿ ಹೊಂದಿಕೊಳ್ಳುವವರೆಗೆ ಕೈಯಾಡಿಸಿ, ಗಟ್ಟಿಯಾದ ಮೇಲೆ ತೆಗೆದಿಟ್ಟುಕೊಳ್ಳಬೇಕು.

2. ಉಳಿದ ಎಲ್ಲ ಒಣ ಪದಾರ್ಥಗಳನ್ನೂ ಬೆರೆಸಿಕೊಂಡು, ಸ್ವಲ್ಪ ಸ್ವಲ್ಪವಾಗಿ ಬೇಕಾಗುವಷ್ಟು ಹಾಲನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.

3. ಕಾವಲಿಗೆ ತುಪ್ಪ ಸವರಿ, ಕಾದಮೇಲೆ  ಒಂದು ಸೌಟು ಕಲಸಿಟ್ಟ ಹಿಟ್ಟನ್ನು ಹಾಕಿ ಅಂಗೈಯಗಲದ ತೆಳುವಾದ ದೋಸೆಯಾಗಿ ಹರಡಬೇಕು.

4. ದೋಸೆಯ ಸುತ್ತ ತುಪ್ಪ ತೊಟ್ಟಿಕ್ಕಿಸಿ ತಳ ಬೆಂದ ಮೇಲೆ, ದೋಸೆಯನ್ನು ಮಗಚಿ ಒಂದು ನಿಮಿಷ ಬೇಯಿಸಬೇಕು.

5. ಮತ್ತೆ ಮಗಚಿ 2 ಟೇಬಲ್‌ ಚಮಚ ತಯಾರಾಗಿರುವ ಖೋವಾ ಹೂರಣವನ್ನು ದೋಸೆಯ ಅಂಚಿನಲ್ಲಿಟ್ಟು, ಸುರುಳಿಯಾಗಿ  ಸುತ್ತಿ ತಟ್ಟೆಯಲ್ಲಿ  ಜೋಡಿಸಿಡಬೇಕು.

ಇಡಿಯಾಪ್ಪಮ್‌ ಹೂರಣದ ಹಾಲು

ತಯಾರಿಸಲು ಬೇಕಾದ ಪದಾರ್ಥಗಳು

ಅಕ್ಕಿ ಹಿಟ್ಟು – 1 ಲೋಟ

ಉಪ್ಪು – 1 ಚಿಟಿಗೆ

ಎಳ್ಳೆಣ್ಣೆ – 1 ಟೇಬಲ್‌ ಚಮಚ

ಹಾಲು – 2 ಲೋಟ

ಹೂರಣ – ರುಚಿಗೆ ತಕ್ಕಷ್ಟು

ತಯಾರು ಮಾಡುವ ವಿಧಾನ

1. 1 1/2 ಲೋಟ ನೀರನ್ನು ಉಪ್ಪು ಮತ್ತು ಎಣ್ಣೆ ಸೇರಿಸಿ ಕುದಿಸಬೇಕು.

2. ಅಕ್ಕಿ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿ ಗಂಟಾಗದಂತೆ ಕೈಯಾಡಿಸಬೇಕು.

3. ಹಿಟ್ಟು ಮುದ್ದೆಯಾದ ಮೇಲೆ ಒಲೆ ಆರಿಸಿ ಮುಚ್ಚಿಡಬೇಕು.

4. ಕೈಗೆ ಹಿತವಾಗಿರುವಷ್ಟು ಆರಿದನಂತರ ಹಿಟ್ಟನ್ನು ಚೆನ್ನಾಗಿ ನಾದಬೇಕು.

5. ನಾದಿದ ಹಿಟ್ಟನ್ನು ಕೊಳಬೆಯಾಕಾರದ ಉಂಡೆಗಳಾಗಿ ಮಾಡಿಕೊಳ್ಳಬೇಕು.

6. ಶ್ಯಾವಿಗೆ ಅಚ್ಚಿನಲ್ಲಿ ಒಂದು ಹಿಟ್ಟಿನ ಕೊಳಬೆಯನ್ನಿಟ್ಟು, ಶ್ಯಾವಿಗೆ ಇಡ್ಲಿ ತಟ್ಟೆಗೆ ಬೀಳುವಂತೆ ಒತ್ತಿಕೊಳ್ಳಬೇಕು.

7. ಒತ್ತಿದ ಶ್ಯಾವಿಗೆಯನ್ನು ಹತ್ತು ಹದಿನೈದು ನಿಮಿಷಗಳು ಹಬೆಯಲ್ಲಿ ಬೇಯಿಸಿದರೆ ಇಡಿಯಾಪ್ಪಾಮ್‌ ಸಿದ್ಧ.

8.  ಹಾಲನ್ನು `ಘಮ್‌’ ಎಂದು ಕುದಿಸಿ ಅದಕ್ಕೆ ಹೂರಣವನ್ನು ಬೆರೆಸಿದರೆ ಇಡಿಯಾಪ್ಪಮ್‌ ಜೊತೆಗೆ ಬಡಿಸಲು ಹೂರಣದ ಹಾಲು ತಯಾರು.

ಈ ಲೇಖನ ಶೇರ್ ಮಾಡಿ