ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಜನರು ಸವಿಯುವ ಸಿಹಿ ತಿಂಡಿಗಳಲ್ಲಿ ಉಂಡೆಯೂ ಒಂದು. ಮಕ್ಕಳು ಇಷ್ಟಪಟ್ಟು ತಿನ್ನುವ ತಿಂಡಿ ಇದು. ಇದರಲ್ಲಿ ರವೆ ಉಂಡೆ, ಎಳ್ಳುಂಡೆ, ಕಡಲೆಕಾಯಿ ಬೀಜದ ಉಂಡೆ, ಹೆಸರು ಬೇಳೆ ಉಂಡೆ ಹೀಗೆ ಹಲವಾರು ಬಗೆಯ ಉಂಡೆಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ರುಚಿ, ಗಾತ್ರ, ಬಣ್ಣವಿದೆ. ಇದನ್ನು ಅನೇಕ ದಿನಗಳ ಕಾಲ ಇಟ್ಟರೂ ಕೆಡದಿರುವುದರಿಂದ ಮಕ್ಕಳಿಗೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಇದನ್ನು ತಿಂಡಿಯಾಗಿ ನೀಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಈ ಸಂಚಿಕೆಯಲ್ಲಿ ಉಂಡೆಗಳನ್ನು ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಪುರಿ ಉಂಡೆ

ಬೇಕಾಗುವ ಪದಾರ್ಥಗಳು :
ಪುರಿ – 4 ಕಪ್
ಬೆಲ್ಲದ ಪುಡಿ – 2 ಕಪ್
ಅಕ್ಕಿ ಹಿಟ್ಟು – 1/4 ಕಪ್
ಕಡಲೆಕಾಯಿ ಬೀಜ – 1 ಕಪ್
ಕೊಬ್ಬರಿ ತುರಿ – 1/2 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ: ಮೊದಲು ಕಡಲೆಕಾಯಿ ಬೀಜವನ್ನು ಹುರಿದು ಸಿಪ್ಪೆ ಬೇರ್ಪಡಿಸಿ. ಒಂದು ಬಾಣಲೆಗೆ ಪುಡಿ ಮಾಡಿದ ಬೆಲ್ಲ, ಅದರ ಮೇಲೆ ಸ್ವಲ್ಪ ನೀರು ನಿಲ್ಲುವಷ್ಟು ಹಾಕಿ ಕುದಿಸಿ. ಒಂದು ಪುಟ್ಟ ಬಟ್ಟಲಿಗೆ ಸ್ವಲ್ಪ ನೀರು ಹಾಕಿ ಇಟ್ಟುಕೊಳ್ಳಿ. ಪಾಕ ಆದ ಮೇಲೆ ಆ ಬಟ್ಟಲಿಗೆ ಒಂದು ಹನಿ ಹಾಕಿ. ಅದು ನೀರಿನಲ್ಲಿ ಬೆರೆಯಬಾರದು. ಅದನ್ನು ಕೈಗೆ ತೆಗೆದುಕೊಂಡರೆ ಒಂದು ಉಂಡೆಯಾಗಿ ಬರಬೇಕು. ಹೀಗೆ ಬಂದರೆ ಪಾಕ ಸರಿಯಾಗಿ ಆಗಿದೆ ಎಂದು ಅರ್ಥ. ಅನಂತರ ಶುದ್ಧ ಮಾಡಿದ ಪುರಿಯನ್ನು ಒಂದು ದೊಡ್ಡ ತಟ್ಟೆಗೆ ಹಾಕಿ. ಅದಕ್ಕೆ ಹುರಿದ ಕಡಲೆಕಾಯಿ ಬೀಜ, ಕೊಬ್ಬರಿ ತುರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ಅನಂತರ ಪಾಕವನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಕಲೆಸಿ. ಪಾಕ ಪುರಿ ಮೇಲೆ ನಿಲ್ಲಬೇಕು. ಮುಳುಗಬಾರದು. ಕೈಗೆ ಅಕ್ಕಿಹಿಟ್ಟು ಸವರಿಕೊಂಡು ಉಂಡೆ ಕಟ್ಟಿರಿ. ಕಟ್ಟಿದ ಉಂಡೆಗಳನ್ನು ಒಂದು ಪೇಪರಿನ ಮೇಲೆ ಹರಡಿ. ಗಟ್ಟಿಯಾದ ಅನಂತರ ಡಬ್ಬದಲ್ಲಿ ತುಂಬಿ.
ತೊಗರಿ ನುಚ್ಚಿನ ಉಂಡೆ

ಬೇಕಾಗುವ ಪದಾರ್ಥಗಳು :
ತೊಗರಿ ಬೇಳೆ – 1 ಕಪ್
ಕಡಲೆಬೇಳೆ – 1 ಕಪ್
ಹಸಿ ತೆಂಗಿನ ತುರಿ – 1 ಕಪ್
ಹಸಿಮೆಣಸಿನಕಾಯಿ – 6
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಇಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ತೊಗರಿಬೇಳೆ ಮತ್ತು ಕಡಲೆಬೇಳೆಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅನಂತರ ಚೆನ್ನಾಗಿ ತೊಳೆದು ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತೆಂಗಿನತುರಿ, ಇಂಗು, ಉಪ್ಪನ್ನು ಹಾಕಿ ಕಲೆಸಿ. ಇದನ್ನು ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿ. ಕುಕ್ಕರ್‌ನಲ್ಲಿ 10 ರಿಂದ 15 ನಿಮಿಷಗಳವರೆಗೆ ಬೇಯಿಸಿ. ವೇಟ್ ಹಾಕಬೇಡಿ. ಇದನ್ನು ಬಿಸಿಯಿರುವಾಗಲೇ ತುಪ್ಪದೊಂದಿಗೆ ಸವಿಯಿರಿ.
ರವೆ ಉಂಡೆ

ಬೇಕಾಗುವ ಪದಾರ್ಥಗಳು :
ಚಿರೋಟಿ ರವೆ – 2 ಕಪ್
ಬಿಳಿ ಒಣ ಕೊಬ್ಬರಿ ತುರಿ – 1 ಕಪ್
ಸಕ್ಕರೆ ಪುಡಿ – 1 1/2 ಕಪ್
ಹಾಲು – 1 ಕಪ್
ಗೋಡಂಬಿ ಚೂರು – 3 ಚಮಚ
ದ್ರಾಕ್ಷಿ – 1 ಚಮಚ
ಏಲಕ್ಕಿ ಪುಡಿ – 1 ಚಮಚ
ತುಪ್ಪ – 5 ಚಮಚ
ಮಾಡುವ ವಿಧಾನ : ಚಿರೋಟಿ ರವೆಯನ್ನು ಪರಿಮಳ ಬರುವವರೆಗೂ ಹುರಿಯಿರಿ. ಒಂದು ಚಮಚ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಹುರಿದ ರವೆ ಬಿಸಿ ಇರುವಾಗಲೇ ಕೊಬ್ಬರಿ ತುರಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿಪುಡಿ, ಸಕ್ಕರೆ, ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿರಿ. ಒಂದು ಕಪ್ ಹಾಲಿಗೆ ಅರ್ಧ ಕಪ್ ನೀರನ್ನು ಹಾಕಿ ಕುದಿಸಿ ಇಟ್ಟುಕೊಳ್ಳಿ. ರವೆ ಮಿಶ್ರಣವನ್ನು ಸ್ವಲ್ಪ ತೆಗೆದು ಬಟ್ಟಲಿಗೆ ಹಾಕಿ ಅದಕ್ಕೆ ಸ್ವಲ್ಪ ಸ್ವಲ್ಪ ಹಾಲು ಹಾಕಿ ಉಂಡೆ ಕಟ್ಟಿರಿ. ರವೆಗೆ, ಒಟ್ಟಿಗೆ ಎಲ್ಲ ಹಾಲನ್ನು ಹಾಕಬಾರದು.
ಹೆಸರು ಬೇಳೆ ಉಂಡೆ

ಬೇಕಾಗುವ ಪದಾರ್ಥಗಳು :
ಹೆಸರು ಬೇಳೆ – 1 ಕಪ್
ಸಕ್ಕರೆ ಪುಡಿ – 3/4 ಕಪ್
ತುಪ್ಪ – 1/2 ಕಪ್
ಏಲಕ್ಕಿ ಪುಡಿ – 1/2 ಚಮಚ
ಗೋಡಂಬಿ ಚೂರು – 3 ಚಮಚ
ಮಾಡುವ ವಿಧಾನ : ಹೆಸರು ಬೇಳೆಯನ್ನು ಕೆಂಪಗಾಗುವವರೆಗೂ ಹುರಿಯಿರಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ. ಹೆಸರು ಬೇಳೆ ತಣ್ಣಗಾದ ಅನಂತರ ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಸಕ್ಕರೆ ಪುಡಿ, ಏಲಕ್ಕಿಪುಡಿ, ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ತುಪ್ಪವನ್ನು ಬಿಸಿ ಮಾಡಿ ಇದಕ್ಕೆ ಹಾಕಿ ಕಲೆಸಿ ಬಿಸಿ ಇರುವಾಗಲೇ ಉಂಡೆ ಕಟ್ಟಿ. ಇದನ್ನು ಎರಡು ದಿನ ಇಟ್ಟು ತಿನ್ನಬಹುದು.
ಕಡಲೆಕಾಯಿ ಬೀಜದ ಉಂಡೆ

ಬೇಕಾಗುವ ಪದಾರ್ಥಗಳು :
ಕಡಲೆಕಾಯಿ ಬೀಜ – 2 ಕಪ್
ಬೆಲ್ಲದ ಪುಡಿ – 1 1/2 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ: ಕಡಲೆಕಾಯಿ ಬೀಜವನ್ನು ಹುರಿದು ಸಿಪ್ಪೆ ಬೇರ್ಪಡಿಸಿ. ಎರಡು ಹೋಳಾಗುವಂತೆ ಮಾಡಿ. ಒಂದು ಬಾಣಲೆಗೆ ಬೆಲ್ಲದ ಪುಡಿಯನ್ನು ಹಾಕಿ. ಅದರ ಮೇಲೆ ಸ್ವಲ್ಪ ನೀರು ನಿಲ್ಲುವಷ್ಟು ಹಾಕಿ ಕುದಿಸಿ. ಈ ಪಾಕ ಪುರಿ ಉಂಡೆಗೆ ಮಾಡಿದ ಪಾಕದ ಹದಕ್ಕೆ ಇರಬೇಕು. ಪಾಕ ಆದ ಮೇಲೆ ಅದಕ್ಕೆ ಹುರಿದ ಕಡಲೆಕಾಯಿ ಬೀಜ, ಬೇಕಿದ್ದರೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಿ ಇಳಿಸಿ, ಸ್ವಲ್ಪ ಬಿಸಿ ಇರುವಾಗಲೇ ಕೈಗೆ ನೀರು ಸವರಿಕೊಂಡು ಉಂಡೆ ಕಟ್ಟಿರಿ.
ಈ ಉಪಾಯ ನಿಮಗೆ ತಿಳಿದಿರಲಿ
- ಆಲೂಗಡ್ಡೆ ಮತ್ತು ಕಾಲಿಫ್ಲವರ್ ಬೇಯಿಸುವಾಗ ನೀರಿಗೆ 4 ಹನಿ ವಿನೆಗರ್ ಹಾಕಿ ಬೇಯಿಸಿದರೆ ಅದರ ಬಣ್ಣ ಹಾಗೆ ಇರುವುದು.
- ಆಲೂಗಡ್ಡೆ ಮೊಳಕೆ ಬರುವುದನ್ನು ತಡೆಯಲು ಅದನ್ನು ಇಡುವ ಚೀಲದಲ್ಲಿ ಒಂದು ಸೇಬು ಇಡಿ.
- ಬಾಳೆ ಹಣ್ಣಿನ ಚಿಪ್ಪನ್ನು ಒಂದು ದಾರದಲ್ಲಿ ಕಟ್ಟಿ ಗೋಡೆಯ ಮೊಳೆಗೆ ನೇತು ಹಾಕಿದರೆ, ಹಣ್ಣಿನ ಕೆಳಭಾಗ ಕಪ್ಪಾಗದೆ ಕೆಡದೆ ಇರುತ್ತದೆ.
- ಥರ್ಮಸ್ ಫ್ಲಾಸ್‌್ಕನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅದರಲ್ಲಿ ಬಿಸಿ ನೀರು, ಸ್ವಲ್ಪ ಅಡಿಗೆ ಸೋಡಾ ಹಾಕಿ ಕೆಲ ಕಾಲ ಬಿಟ್ಟು ತೊಳೆದರೆ ಕೆಟ್ಟ ವಾಸನೆ ಹೋಗುತ್ತದೆ.