
ಅತಿ ಸುಲಭವಾಗಿ ಸಿಗುವ ಗೆಣಸಿನಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಂಶಗಳಿವೆ ಎಂದರೆ ಅಚ್ಚರಿಯೇ? ಆಲೂಗೆಡ್ಡೆಯಂತೆ ಗೆಣಸಿನಲ್ಲಿ ಕೂಡ ಅಪಾರ ಪ್ರಮಾಣದಲ್ಲಿ ವಿಧ ವಿಧವಾದ ಖನಿಜ, ನಾರಿನಂಶ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳು ಇವೆ. ದುಬಾರಿಯಲ್ಲದ ಮತ್ತು ಸುಲಭವಾಗಿ ಸಿಗುವುದರ ಜೊತೆಗೆ ಇದು ನಿಮ್ಮ ತಿನಿಸುಗಳಿಗೆ ವಿಶೇಷ ರುಚಿ ಮತ್ತು ಸುವಾಸನೆಯನ್ನು ಒದಗಿಸಿ ಅವು ಇನ್ನಷ್ಟು ಸ್ವಾದಿಷ್ಟವಾಗುವಂತೆ ಮಾಡುತ್ತವೆ. ಕುರುಕಲು ಗೆಣಸು ಪರಿಪೂರ್ಣ ಉಪಾಹಾರವಾಗುತ್ತದೆ. ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡು ಅದರ ಲಾಭ ಪಡೆದುಕೊಳ್ಳಿ. ಗೆಣಸಿನ ವಿಶೇಷವನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಹಬೆಯ ಗೆಣಸು

ಒಂದು ಮಧ್ಯ ಅಳತೆಯ ಗೆಣಸನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಅದನ್ನು ಬೇಯಿಸಿ ಅಥವಾ ಹಬೆಯಲ್ಲಿಡಿ. ತಣ್ಣಗಾಗಲು ಬಿಡಿ. ಅನಂತರ, ಗೆಣಸಿನ ಸಿಪ್ಪೆ ತೆಗೆದು ತೆಳುವಾದ ಚೂರು ಮಾಡಿ. ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ. ರುಚಿಗೆ ತಕ್ಕಷ್ಟು ಉಪ್ಪು. ಅರಿಗಾನೋವನ್ನು (ಕಾಡು ಮಾರ್ಜನಂ ಸೊಪ್ಪು) ಚಿಮುಕಿಸಿದರೆ ಹಬೆಯ ಗೆಣಸು ತಿನ್ನಲು ಸಿದ್ಧ.
ಗೆಣಸಿನ ವೆಡ್ಜ್

ಎರಡು ಮಧ್ಯಮ ಅಳತೆಯ ಗೆಣಸನ್ನು ತೆಗೆದುಕೊಂಡು ತೊಳೆದು ಸಿಪ್ಪೆ ತೆಗೆಯಿರಿ. ಅದನ್ನು ಉದ್ದುದ್ದವಾಗಿ ನಾಲ್ಕು ಚೂರು ಮಾಡಿ. ಇದಕ್ಕೆ ಉಪ್ಪು, ಅರಿಶಿನ ಪುಡಿ, ಒಣ ಮಾವಿನ ಪುಡಿಯನ್ನು ಚಿಮುಕಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಾದ ಅನಂತರ ಇದರಲ್ಲಿ ಗೆಣಸಿನ ಚೂರುಗಳನ್ನು ಹಾಕಿ ಕರಿಯಿರಿ. ಆಗಾಗ್ಗೆ ಮಧ್ಯದಲ್ಲಿ ಕಲಕುತ್ತಿರಿ. ಅವು ಚಿನ್ನದ ಕಂದು ಬಣ್ಣಕ್ಕೆ ಬಂದಾಗ ತೆಗೆದು ಟಿಶ್ಯೂ ಕಾಗದದ ಮೇಲೆ ಹಾಕಿ. ಹೆಚ್ಚುವರಿ ಎಣ್ಣೆ ಹೀರಿ ಹೋಗುತ್ತದೆ. ಇದು ಅನ್ನ ದಾಲ್‌ಗೆ ಚೆನ್ನಾಗಿ ಹೊಂದುತ್ತದೆ.
ಗೆಣಸಿನ ಟಿಕ್ಕಿ

ಗೆಣಸಿನ ಟಿಕ್ಕಿ ಉಪವಾಸದ ಸಮಯದಲ್ಲಿ ಒಳ್ಳೆಯ ತಿನಿಸಾಗುತ್ತದೆ. ಅಗತ್ಯವಿದ್ದಾಗ ದಿಢೀರ್ ಶಕ್ತಿವೃದ್ಧಿಗೆ ನೆರವಾಗುತ್ತದೆ.
ಎರಡು ಮಧ್ಯಮ ಗಾತ್ರದ ಆಲೂಗೆಡ್ಡೆ ಮತ್ತು ಗೆಣಸನ್ನು ತೊಳೆದು ಬೇಯಿಸಿ ಮತ್ತು ಸಿಪ್ಪೆ ತೆಗೆಯಿರಿ. ಇವೆರಡನ್ನೂ ಚೆನ್ನಾಗಿ ಪುಡಿ ಮಾಡಿ. ಇದಕ್ಕೆ ಉಪ್ಪು, ಧನಿಯಾ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನಕಾಯಿ ಪುಡಿ, ಒಂದು ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ಚೆನ್ನಾಗಿ ಕಲೆಸಿ. ಇದನ್ನು ಚಪ್ಪಟೆಯಾದ ಟಿಕ್ಕಿಗಳನ್ನು ಮಾಡಿ ಇದರ ಎರಡೂ ಬದಿಗೆ ಬಿಸ್ಕತ್ತಿನ ಪುಡಿಯನ್ನು ಸವರಿ. ಬಾಣಲೆಯಲ್ಲಿ ಬಿಸಿ ಮಾಡಿ, ಕಾದ ಎಣ್ಣೆಗೆ ಟಿಕ್ಕಿಗಳನ್ನು ಹಾಕಿಹೊಂಬಣ್ಣ ಬರುವವರೆಗೆ ಕರಿಯಿರಿ. ಚೆನ್ನಾಗಿ ಬೆಂದ ಮೇಲೆ ತೆಗೆಯಿರಿ. ಟಿಕ್ಕಿಗಳನ್ನು ಪುದೀನ ಚಟ್ನಿಯೊಂದಿಗೆ ಸವಿಯಿರಿ.
ಗೆಣಸಿನಿಂದ ಆಗುವ ಉಪಯೋಗಗಳು :

1. ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿ ಇಡುತ್ತದೆ : ಈ ತರಕಾರಿಯಲ್ಲಿರುವ ಕಬ್ಬಿಣದ ಅಂಶವು ಬಿಳಿರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಒತ್ತಡ ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಶಾಲಿಯಾದ ನಿರೋಧಕ ವ್ಯವಸ್ಥೆಯನ್ನು ರೂಪಿಸಲು ನೆರವಾಗುತ್ತದೆ.
2. ಜೀರ್ಣ ಶಕ್ತಿ ವೃದ್ಧಿ : ಮೆಗ್ನೀಸಿಯಂ ಸಂಯೋಜನೆಯೊಂದಿಗೆ ನಾರಿನಂಶವು ಅನೇಕ ಉದರ ಬೇನೆಗಳಿಗೆ ಪರಿಹಾರ ಒದಗಿಸುತ್ತದೆ. ಅಧಿಕ ಪ್ರಮಾಣದಲ್ಲಿ ನಾರಿನಂಶ ಹೊಂದಿರುವ ಗೆಣಸು ನಿಮ್ಮ ಉದರ ಮತ್ತು ಕರುಳಿಗೆ ಹಗುರವಾಗಿದ್ದು ಸರಿಯಾದ ಜೀರ್ಣ ಕ್ರಿಯೆಗೆ ನೆರವಾಗುತ್ತದೆ.
3. ಆರೋಗ್ಯಕರ ಹೃದಯ ರಕ್ಷಣೆ : ಪೊಟಾಸಿಯಂ ಮತ್ತು ವಿಟಮಿನ್ `ಬಿ’ ನಿಂದ ಸಮೃದ್ಧವಾಗಿರುವ ಗೆಣಸು ಹೃದಯಾಘಾತ ತಡೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟ್‌ನ ಸಮತೋಲನವನ್ನು ಸೂಕ್ತವಾಗಿ ನಿಯಂತ್ರಿಸುವ ಮೂಲಕ ಇದು ನಿಮ್ಮ ಹೃದಯಕ್ಕೆ ರಕ್ಷಣೆ ನೀಡುತ್ತದೆ.
4. ಕ್ಯಾನ್ಸರ್ ತಡೆಗೆ ನೆರವು : ಗೆಣಸಿನಲ್ಲಿರುವ ರೋಗ ನಿರೋಧಕ ಶಕ್ತಿಯ ಅಂಶಗಳು ಡಿಎನ್‌ಎಗೆ ಹಾನಿಯಾಗಲು ಹೊಣೆಯಾದ ಕ್ಯಾನ್ಸರ್ ರೋಗಕ್ಕೆ ಕಾರಣವಾದ ಮೂಲ ವಸ್ತುಗಳನ್ನು ಹೊರದೂಡಲು ನೆರವಾಗುತ್ತದೆ. ಇವುಗಳಲ್ಲದೆ, ದೇಹದಲ್ಲಿ ವಿಟಮಿನ್ ಆಗಿ ಪರಿವರ್ತಿತಗೊಳ್ಳುವ ಸಸ್ಯ ಅಂಶ (ಬೀಟ ಕರಟೋನ್) ಈ ಗೆಡ್ಡೆಯಲ್ಲಿ
ಅಧಿಕ ಪ್ರಮಾಣದಲ್ಲಿ ಇದೆ. ಇದು ಕಿಡ್ನಿ (ಮೂತ್ರಪಿಂಡ), ದೊಡ್ಡ ಕರುಳು (ಕೋಲನ್), ಕರುಳು ಮತ್ತು ಗ್ರಂಥಿ (ಪ್ರಾಸ್ಟೇಟ್) ಯಂತಹ ಕ್ಯಾನ್ಸರ್ ಅನ್ನು ತಡೆಯುತ್ತದೆ ಮತ್ತು ಕಣ್ಣುಗಳಿಗಾಗುವ ಅಪಾಯದಿಂದ ರಕ್ಷಿಸುತ್ತದೆ.
5. ರಕ್ತದಲ್ಲಿರುವ ಗ್ಲೂಕೋಸು ಪ್ರಮಾಣ ನಿಯಂತ್ರಣ : ಗೆಣಸಿನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶವಿದ್ದು, ಅದು ರಕ್ತ ಪರಿಚಲನೆಗೆ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ದಿಢೀರ್ ಏರುವಿಕೆಯನ್ನು ತಡೆಯುತ್ತದೆ. ಅಲ್ಲದೆ, ಗೆಣಸು ಇನ್‌ಸುಲಿನ್ ಸೂಕ್ಷ್ಮತೆ ಸುಧಾರಿಸುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ.
6. ಸ್ನಾಯು ಸೆಳೆತ : ಪೊಟಾಸಿಯಂ ಕೊರತೆಯು ಸ್ನಾಯು ಸೆಳೆತಕ್ಕೆ ಕಾರಣವೆಂಬುದು ತಿಳಿದ ವಿಷಯ. ಇದರಿಂದ ಗಾಯಕ್ಕೆ ಒಳಗಾಗುವುದು ಹೆಚ್ಚು. ಆದುದರಿಂದ ಪೊಟಾಸಿಯಂ ಸಮೃದ್ಧವಾಗಿರುವ ಗೆಣಸನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಸ್ನಾಯು ಸೆಳೆತವನ್ನು ತಡೆಯಬಹುದು. ಅಲ್ಲದೆ, ರಕ್ತ ಸಂಚಲನೆ ಕೂಡ ಸುಧಾರಿಸುತ್ತದೆ.
7. ಒತ್ತಡ ನಿವಾರಕ : ಒತ್ತಡದಲ್ಲಿದ್ದಾಗ ಪೊಟಾಸಿಯಂ ಮತ್ತು ಮೆಗ್ನೀಸಿಯಂನ ರಕ್ತದ ಮಟ್ಟ ತೀವ್ರವಾಗಿ ಕುಸಿಯುತ್ತದೆ. ಈ ಪರಿಸ್ಥಿತಿಯನ್ನು ಎದುರಿಸಲು ಗೆಣಸಿನ ತಿನಿಸನ್ನು ತಿಂದು ನೋಡಿ. ಅದು ತುಂಬ ನೆರವಾಗುತ್ತದೆ.
Leave a Reply