ಚಿತ್ರದುರ್ಗದಿಂದ 13 ಕಿ.ಮೀ. ದೂರದಲ್ಲಿರುವ ದ್ಯಾಮವ್ವನಹಳ್ಳಿಯಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಕೆಲವು ಜೀರ್ಣೋದ್ಧಾರ ಕಂಡಿವೆ. ಹಿಂದುಳಿದ ಪ್ರದೇಶವೆಂಬ ಹೆಸರಿಗೆ ಅನುಗುಣವಾಗಿ ದೇವಸ್ಥಾನಗಳೂ ಅನಾದರಕ್ಕೆ ತುತ್ತಾಗಿದ್ದವು. ಈಗ ಕೆಲವರ ನೆರವಿನಿಂದ ಅವು ಭಕ್ತರನ್ನು ಆಕರ್ಷಿಸತೊಡಗಿವೆ. ಆದರೆ ಸಂಪರ್ಕ ವ್ಯವಸ್ಥೆ ತುಂಬ ಸುಧಾರಿಸಬೇಕಾಗಿದೆ. ಇವುಗಳಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಹಾಗೂ ವೀರಚೆನ್ನಕೇಶವ ಸ್ವಾಮಿ ಪ್ರಮುಖವೆನಿಸಿವೆ.
ಈ ಪುಟ್ಟ ಹಳ್ಳಿಯ ಗತಕಾಲದ ಐತಿಹ್ಯದ ಬಗ್ಗೆ ಇಲ್ಲಿಯ ಹಿರಿಯರು ಹೇಳಿರುವುದನ್ನು ಕೇಳಿದರೆ ರೋಚಕ ಎನ್ನಿಸುತ್ತದೆ. ಈ ಹಳ್ಳಿ ಹಿಂದೆ ದೊಡ್ಡ ಊರಾಗಿತ್ತು. ಇದನ್ನು ಚನ್ನಿಗರಾಯನ ಪಟ್ಟಣ ಎಂದು ಕರೆಯಲಾಗುತ್ತಿತ್ತಂತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇಲ್ಲಿ ಶ್ರೀ ಚೆನ್ನಕೇಶವನ ದೇವಾಲಯವು ಇದೆ.
ಹಳೆ ದ್ಯಾಮವ್ವನಹಳ್ಳಿಯು ಪುರಾಣ, ಐತಿಹ್ಯ ಇತಿಹಾಸ ಮಹತ್ವವನ್ನು ಪಡೆದಿತ್ತು ಎಂಬುದು ಇಲ್ಲಿಯ ಹಿರಿಯರ ಅಂಬೋಣ. ಪುರಾಣ ಕಾಲಕ್ಕೆ ಇದು ಏಕಚಕ್ರನಗರ, ಬಕಾಸುರರ ನಗರವಾಗಿತ್ತಂತೆ. ಸಾಸಲಹಟ್ಟಿಯಿಂದ ಚಳ್ಳಕೆರೆ ತಾಲ್ಲೂಕು, ಮಧುರೆಯವರೆಗೂ ಇರುವ ಪ್ರದೇಶವನ್ನು ಹೀಗೆ ಕರೆಯಲಾಗುತ್ತಿತ್ತೆಂದು ಹೇಳಲಾಗುತ್ತದೆ.
ಚನ್ನಿಗರಾಯನಪಟ್ಟಣ ದ್ಯಾಮವ್ವನಹಳ್ಳಿಯಾಗಿದ್ದರ ಹಿಂದೆಯೂ ಒಂದು ಐತಿಹ್ಯವಿದೆ. ದ್ಯಾಮವ್ವನಹಳ್ಳಿ ಚದುರಿ ಹೋದ ಸಮಯದಲ್ಲಿ “ದ್ಯಾಮವ್ವ” ಎಂಬ ನಾಯಕ ಜನಾಂಗದ ಕುಟುಂಬದವರು ಇಲ್ಲಿ ಉಳಿದಿದ್ದರಿಂದಲೂ ಈ ಮಹಿಳೆಯು ಚಿತ್ರದುರ್ಗದ ಪಾಳೆಯಗಾರರಿಗೆ ಸಂಬಂಧಿಯಾಗಿದ್ದರಂತೆ. ಆದ್ದರಿಂದ ಈ ಊರು ದ್ಯಾಮವ್ವನಹಳ್ಳಿ ಎಂದು ಕರೆಸಿಕೊಂಡಿತ್ತೆಂತಲೂ ಹೇಳುತ್ತಾರೆ. ಇದಕ್ಕೆ ಪೂರಕವಾಗಿ `ಮದಕರಿ’ ನಾಯಕರ ಹೆಸರು ಸೂಚಿಸುವ ಒಂದು ಶಿಲಾ ಶಾಸನ ಇರುವುದು ಕಂಡುಬಂದಿದೆ.
ದೇವಾಲಯಗಳು
ದ್ಯಾಮವ್ವನಹಳ್ಳಿಯ ಆಸು-ಪಾಸಿನಲ್ಲಿ ಅನೇಕ ಪುರಾತನ ದೇವಾಲಯಗಳನ್ನು ಕಾಣಬಹುದು. ಕೆಲವು ಜೀರ್ಣೋದ್ಧಾರವಾಗಿ ನವೀಕರಣಗೊಂಡಿವೆ. ಆಂಜನೇಯ ಸ್ವಾಮಿ, ಈಶ್ವರ ದೇವಾಲಯ, ಶ್ರೀಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ವೀರಚೆನ್ನಕೇಶವ ಸ್ವಾಮಿ, ಗೋವಿಂದಸ್ವಾಮಿ, ಸಿದ್ಧರಮಟ್ಟಿ ಸಿದ್ಧೇಶ್ವರ ಸ್ವಾಮಿ, ಕೊಲೇರಮ್ಮ, ಮಾರಿದೇವಿ, ಕೊಲ್ಲಾಪುರದಮ್ಮ, ದುರ್ಗಾಂಬಿಕ ದೇವಿ.
ಅಧಿದೇವತೆ ಆಂಜನೇಯ ಸ್ವಾಮಿ
ಈ ದೇವಾಲಯಗಳನ್ನು 5 ಅಡಿ ವೇದಿಕೆಯ ಮೇಲೆ ಕಲ್ಲಿನ ದಿಣ್ಣೆಗಳನ್ನು ಬಳಸಿ ಗೋಡೆ ಹಾಗೂ ದಪ್ಪನೆಯ ಕಲ್ಲಿನ ತೊಲೆ, ಕಂಬ, ಬೋದಿಗೆ ಆಧಾರದ ಮೇಲೆ ಕಲ್ಲಿನ ಚಪ್ಪಡಿಗಳ ಛಾವಣಿಗಳನ್ನು ನಿರ್ಮಿಸಲಾಗಿದೆ. ಗೋಪುರ ಕಳಶವನ್ನು ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಅಭಿಮುಖವಾಗಿ 4 ಅಡಿ ಚೌಕಾಕಾರದ ಕಟ್ಟೆಯ ಮೇಲೆ (ಧ್ವಜ) ದೀಪಸ್ತಂಭವಿದೆ. ಶ್ರೀ ಸ್ವಾಮಿಯು ಊರಿನ ಅಧಿದೇವತೆ. ಈ ದೇವಾಲಯ ಎರಡು, ಮೂರು ಶತಮಾನಗಳಷ್ಟು ಪುರಾತನವಾದುದು. ಈ ದೇವಾಲಯದ ಕೈಂಕರ್ಯ ತಡೆಯಿಲ್ಲದೆ ನಡೆಯಲೆಂದು ಹಾಗೂ ನೀಲಾಂಜನಕ್ಕೆ ಎಣ್ಣೆಗಾಗಿ ಎಣ್ಣೆ ಪಟ್ಟಿಯೆಂತಲೂ ಪೂಜಾರಿಗಳ ಜೀವನ ನಿರ್ವಹಣೆಗೆಂತಲೂ ಊರಿನ ಗೌಡರ ವಂಶಸ್ಥರು ಊರಿನ ಈಶಾನ್ಯ ದಿಕ್ಕಿನಲ್ಲಿ ಕೆರೆಯ ಹಿಂದಿನ ಮಾಗಾಣೆಯಲ್ಲಿ 8 ಎಕರೆ ತರಿ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಗೋವಿಂದ ಸ್ವಾಮಿ
ಹಳೇ ದ್ಯಾಮವ್ವನಹಳ್ಳಿ ಮತ್ತು ಹೊಸ ದ್ಯಾಮವ್ವನಹಳ್ಳಿಯ ಮಧ್ಯೆ ಹಳ್ಳದ ದಡದಲ್ಲಿ ಇದೆ. ಇಲ್ಲಿಗೆ ಪ್ರತಿ ವರ್ಷ ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ಭಕ್ತರು ಬಂದು ಹರಕೆ ತೀರಿಸಿ ಹೋಗುತ್ತಾರೆ.
ಶ್ರೀಲಕ್ಷ್ಮೀನರಸಿಂಹ ಸ್ವಾಮಿ
ಈ ದೇವಾಲಯ ಆರ್ಯವೈಶ್ಯ ಸಮುದಾಯದವರ ಕುಲದೇವರೆನಿಸಿದೆ. ಈಗ ಆರ್ಯವೈಶ್ಯರು, ದೇವಾಲಯ ಸಮಿತಿಯವರು ಕಟ್ಟಡ ನಿರ್ಮಿಸಿದ್ದಾರೆ. ಜಿಲ್ಲೆಯ ನಾನಾ ಕಡೆಗಳಿಂದ ವರ್ಷಪೂರ್ತಿ ಭಕ್ತರು ಬಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈಗ್ಗೆ 30 ವರ್ಷಗಳ ಹಿಂದೆ ಈ ದೇವಾಲಯ ಒಂದು ಸಣ್ಣ ಗೂಡಿನಂತಿತ್ತು.
ಶ್ರೀ ವೀರಚೆನ್ನಕೇಶವಸ್ವಾಮಿ
ಶ್ರೀ ಚೆನ್ನಕೇಶವ ಸ್ವಾಮಿಯ ವಿಗ್ರಹ ಒಂದು ಅಪೂರ್ವ ಶಿಲ್ಪ ಕಲಾಕೃತಿಯಾಗಿದೆ. ಒಂದು ಕ್ಷಣ ನಿಂತು ನೋಡುವಂತಹ ಚೆಲುವಿಕೆಯಿಂದ ಕೂಡಿದೆ. ಇದು ವಿಶಿಷ್ಟ ಸಾಲಗ್ರಾಮ ಶಿಲ್ಪವೆಂದು ಹೇಳಲಾಗುತ್ತಿದೆ. ಸುಮಾರು 6 ಅಡಿ ಎತ್ತರ, ನಾಲ್ಕು ಅಡಿ ಅಗಲದ ಶಿಲೆಯಲ್ಲಿ ಸುತ್ತಲೂ ಪ್ರಭಾವಳಿಯನ್ನು ಬಿಡಿಸಿದ್ದಾರೆ. ಅಡಿಯಲ್ಲಿ ಮಕರಗಳು. ಪರಿಚಾರಿಕೆಯರು ಚಾಮರ ಹಿಡಿದು ನಿಂತಿದ್ದಾರೆ.
ಪ್ರಭಾವಳಿಯ ಸುತ್ತಲೂ ಮಹಾವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಗಿದೆ. ಅದರ ಮಧ್ಯ ಚತುರ್ಬಾಹು ಶಂಖ, ಚಕ್ರ, ಗದಾಪಾಣಿಯು, ಕಷ್ಟ ಪರಿಹಾರಕನಂತೆ ತೋರುವ ಶ್ರೀ ಕೇಶವ ವಿಗ್ರಹವನ್ನು ರೂಪಿಸಲಾಗಿದೆ. ವಿವಿಧ ಆಭರಣಗಳನ್ನು ಅತ್ಯಂತ ನವಿರಾಗಿ ಬಿಡಿಸಲಾಗಿದೆ. ಮಕುಟಧಾರಿಯಾದ ವಿಗ್ರಹವು ಅತ್ಯಂತ ಚೆಲುವಾಗಿ ಕಂಡುಬರುತ್ತದೆ. ಶ್ರೀ ವಿಗ್ರಹದ ಎದುರು ನಿಂತಾಗ ಒಂದು ಅನಿರ್ವಚನೀಯ ಭಕ್ತಿಭಾವ ಮನದಲ್ಲಿ ಮೂಡಿಬರುವಂತಿದೆ. ಶಿಲ್ಪಕಲಾ ಚಾತುರ್ಯದ ಈ ಸುಂದರ ವಿಗ್ರಹವು ಹೊಯ್ಸಳ ಕಾಲದಲ್ಲಿ ನಿರ್ಮಾಣಗೊಂಡಿರುವುದು ನಿರ್ವಿವಾದವಾದುದು.
ಈ ಶಿಲ್ಪ ಕಲಾಕೃತಿಯು ಕೆಸರ ಮಡುವಿನಲ್ಲಿ ಹೂತು ಹೋಗಿತ್ತಂತೆ. ದ್ಯಾಮವ್ವನಹಳ್ಳಿಯ ದಕ್ಷಿಣ ದಿಕ್ಕಿನಲ್ಲಿ ಒಂದು ಹಳ್ಳ ಹರಿಯುತ್ತಿತ್ತು. ಈಗ ಅದು ಬತ್ತಿಹೋಗಿದೆ. ಹಳ್ಳದಲ್ಲಿ ಕ್ಯಾದಿಗೆಮಡು ಇದ್ದಿತು ಎಂದು ಅದರ ಆಚೆ ಬದಿಯಲ್ಲಿ ಶ್ರೀ ಸ್ವಾಮಿಯ ಆಲಯವಿದ್ದು ಒಂದು ಸಲ ಕೆರೆ ಒಡೆದು ಅಲ್ಲಿಯ ಕೆಲವು ದೇವಾಲಯಗಳು ನೀರಿನಲ್ಲಿ ಕೊಚ್ಚಿ ನಾಶವಾದವೆಂತಲೂ ಹೇಳುತ್ತಾರೆ.
ಒಮ್ಮೆ ಕ್ಯಾದಿಗೆ ಮಡುವಿನ ಹತ್ತಿರ ಕುದುರೆ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಂತಾಗಿ ಕುದುರೆ ಹೊರಬರಲು ಸಾಧ್ಯವಾಗದೆ ಒದ್ದಾಡುತ್ತಿದ್ದಾಗ ಇದನ್ನು ಕಂಡ ಗ್ರಾಮಸ್ಥರು ಮಡುವಿನಲ್ಲಿಯ ಕೆಸರನ್ನು, ಮಣ್ಣನ್ನು ಸರಿಸಿ ನೋಡಿದಾಗ ಶಿಲಾಮೂರ್ತಿಯು ಕಂಡುಬಂದಿತಂತೆ. ಜನರು ಜೋಪಾನವಾಗಿ ಬಿಡಿಸಿ ತಂದು ಹಳ್ಳದ ಈಚೆ ದಡದಲ್ಲಿ ಕಾಡುಕಲ್ಲಿನ ಗೋಡೆ ನಿರ್ಮಿಸಿ ಚಪ್ಪಡಿ ಕಲ್ಲಿನಲ್ಲಿ ಕಂಬಗಳು ಮತ್ತು ಛಾವಣಿಗಳನ್ನು ಮಾಡಿ, ಒಂದು ಚಿಕ್ಕ ದೇವಾಲಯ ನಿರ್ಮಿಸಿದರು. ಇದು ನಡೆದು ಸುಮಾರು 300 ವರ್ಷವಾಗಿರಬಹುದು.