ಪ್ರಪಂಚದಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುಮುಖ್ಯ ಆಕರ್ಷಣೆಯ ಕೇಂದ್ರವಾಗಬೇಕೆಂದು ಶ್ರಮಿಸುತ್ತಿರುತ್ತಾರೆ. ಒಂದು ಕುಟುಂಬದಲ್ಲಿ ಪ್ರತಿಯೊಬ್ಬರೂ ಆಕರ್ಷಣೆಯ ಕೇಂದ್ರವಾಗಬೇಕೆಂದು ಪ್ರಯತ್ನಿಸುತ್ತಾರೆ. ಕುಟುಂಬದ ಯಜಮಾನನು ತಾನು ಕುಟುಂಬದ ಸದಸ್ಯರೆಲ್ಲರನ್ನೂ ಪಾಲಿಸುತ್ತಿರುವುದಕ್ಕಾಗಿ ಅವರೆಲ್ಲರಿಂದ ಗೌರವಾದರಕ್ಕೆ ಅರ್ಹನೆಂದು ಭಾವಿಸುತ್ತಾನೆ. ಕುಟುಂಬದವರೆಲ್ಲರ ಕ್ಷೇಮವನ್ನು ತಾನು ನೋಡಿಕೊಳ್ಳುತ್ತಿರುವುದರಿಂದ ಪ್ರತಿಯೊಬ್ಬರೂ ತನ್ನನ್ನೇ ಅನುಕರಿಸಬೇಕೆಂದು ಗೃಹಿಣಿಯು ಭಾವಿಸುತ್ತಾಳೆ. ಮಕ್ಕಳು ತಮ್ಮದೆ ಆದ ಬಯಕೆಗಳನ್ನು ಹೊಂದಿದ್ದು, ಅವುಗಳನ್ನು ತಮ್ಮ ಮಾತಾಪಿತರು ಪೂರೈಸಬೇಕೆಂಬ ಹಂಬಲದಲ್ಲಿರುತ್ತಾರೆ. ಯಾವಾಗ ಕುಟುಂಬದ ಇತರ ಸದಸ್ಯರು ತಮ್ಮ ಬಯಕೆಗಳನ್ನು ಈಡೇರಿಸುವುದಿಲ್ಲವೊ ಆಗ ಆತ / ಆಕೆಯು ತಾನು ಪರಿತ್ಯಕ್ತನಾದೆನೆಂದು ಭಾವಿಸಿ ಅತಿಯಾಗಿ ದುಃಖಿಸುತ್ತಾನೆ. ತಾನು ಕೆಲವು ಸಂಗತಿಗಳಿಗೆ ಅರ್ಹನಾಗಿದ್ದರೂ ತನಗದನ್ನು ನಿರಾಕರಿಸಲಾಗಿದೆಯೆಂದು ಭಾವಿಸುತ್ತಾನೆ. ಕುಟುಂಬದಲ್ಲಿ ಸಮಾನ ನ್ಯಾಯವಿಲ್ಲವೆಂದೂ, ಪಕ್ಷಪಾತ ಮುಂತಾದವುಗಳಿವೆಯೆಂದು ಭಾವಿಸಿ ನೋವನ್ನು ಅನುಭವಿಸುತ್ತಾನೆ.
ಪ್ರಜೆಗಳ ಆವಶ್ಯಕತೆಗಳನ್ನು ಪೂರೈಸಬಲ್ಲೆವೆಂದು ಘೋಷಿಸಿಕೊಳ್ಳುವಂತಹ ಅನೇಕ ರಾಜಕೀಯ ಪಕ್ಷಗಳು ಸಮಾಜದಲ್ಲಿವೆ. ಅವರುಗಳು ಸಮಾಜದ ಪುನರುಜ್ಜೀವನ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಮುಂದಿಡುತ್ತಾರೆ. ಅವರುಗಳು ತಮ್ಮ ಪಕ್ಷ ಉತ್ತಮವೆಂದು ಮತ್ತು ಜನರಿಂದ ಚುನಾಯಿತರಾಗಲು ಅರ್ಹರೆಂದು ಭಾವಿಸುತ್ತಾರೆ. ಆಡಳಿತಾರೂಢ ಪಕ್ಷವು ಹಣಕಾಸು, ಆರೋಗ್ಯ, ಹವಾಮಾನ, ಧಾರ್ಮಿಕ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತೀವ್ರತರವಾದ ಬದಲಾವಣೆಗಳನ್ನು ಮೂಡಿಸಬಹುದೆಂದು ಗೋಚರಿಸುವ ಕೆಲವು ಮಹತ್ತರ ನಿರ್ಣಯಗಳನ್ನು ತಳೆದಾಗ ಅಧಿಕಾರ ಪಡೆಯಲು ಆಡಳಿತ ಪಕ್ಷಕ್ಕೆ ತೀವ್ರತರನಾದ ವಿರೋಧವನ್ನುಂಟುಮಾಡಿ ಅವರನ್ನು ಕೆಳಗೆಳೆಯಲು ವಿರೋಧ ಪಕ್ಷದವರು ಪ್ರಯತ್ನಿಸುತ್ತಾರೆ. ಅವರು ತಮ್ಮನ್ನು ತಾವು ಉತ್ತಮರೆಂದು ಭಾವಿಸಿರುತ್ತಾರೆ, ತಾವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು ಮತ್ತು ಉತ್ತಮ ಆಡಳಿತ ನಡೆಸಬಲ್ಲೆವು, ಹಾಗಾಗಿ ತಾವು ಆಡಳಿತದ ಅಧಿಕಾರ ಹೊಂದಲು ಅರ್ಹರೆಂದು ಭಾವಿಸುತ್ತಾರೆ.
ಚಿತ್ರರಂಗದಲ್ಲಿ ಪ್ರತಿಯೋರ್ವ ನಟ ನಟಿಯೂ ತಾನೇ ಉತ್ತಮ ನಟನೆಂದೂ ವರ್ಷಂಪ್ರತಿಯೂ ಉತ್ತಮ ನಟನೆಯ ಪುರಸ್ಕಾರಕ್ಕೆ ತಾನೇ ಅರ್ಹನೆಂದು ಭಾವಿಸುತ್ತಾನೆ. ಗಾಯನ ಕ್ಷೇತ್ರದಲ್ಲಿ ಪ್ರತಿಯೋರ್ವ ಗಾಯಕನೂ ತಾನೇ ಉತ್ತಮ ಗಾಯಕನೆಂದೂ, ಉತ್ತಮ ಗಾಯನದ ಪುರಸ್ಕಾರಕ್ಕೆ ತಾನೇ ಅರ್ಹನೆಂದು ಭಾವಿಸುತ್ತಾನೆ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಯೋರ್ವನು ತಾನೇ ಉತ್ತಮನೆಂದು ಭಾವಿಸುತ್ತಾನೆ.
ವಾಸ್ತವದಲ್ಲಿ ನಾವಾರೂ ಉತ್ತಮರಲ್ಲ ಹಾಗೂ ಮೆಚ್ಚುಗೆಗೆ ಪಾತ್ರರಲ್ಲ ಏಕೆಂದರೆ ಉತ್ತಮ ನಟ, ಗಾಯಕ ಅಥವಾ ರಾಜಕಾರಣಿ ಎಂಬುದೊಂದು ತುಲನಾತ್ಮಕ ವಿಷಯ. ಈ ಪ್ರಪಂಚದಲ್ಲಿ ಯಾರೂ ಯಾವುದರಲ್ಲೂ ಉತ್ತಮರಲ್ಲ. ಅವರವರ ಕರ್ಮಾನುಸಾರವಾಗಿ ಕೆಲವು ಗುಣ ಅಥವಾ ಸಾಮರ್ಥ್ಯಗಳನ್ನು ಒಂದಷ್ಟು ಸಮಯ ಹೊಂದಿರುತ್ತಾರೆ. ತಮ್ಮ ಕ್ಷೇತ್ರಗಳಲ್ಲಿ ಉತ್ತಮರೆನಿಸಿಕೊಂಡವರು ಹೇಳಹೆಸರಿಲ್ಲದಂತಾದ ಉದಾಹರಣೆಗಳಿವೆ.
ಮನುಜರು ತಾವು ಹೊಂದಿರುವ ಸಾಮರ್ಥ್ಯವು ಮೂಲಭೂತವಾಗಿ ತಮಗೆ ಸೇರಿದ್ದಲ್ಲವೆಂದು ಮನಗಾಣುವುದಿಲ್ಲ. ಅದು ಹಾಗಾಗಿದ್ದ ಪಕ್ಷದಲ್ಲಿ, ಕಾಲಾಂತರದಲ್ಲಿ ಅದು ಕಳೆದುಹೋಗುತ್ತಿರಲಿಲ್ಲ. ನಾವು ತಾತ್ಕಾಲಿಕವಾಗಿ ಕೆಲವು ಸಮೃದ್ಧತೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಹೊಂದಿದವರಷ್ಟೇ ಆಗಿರುತ್ತೇವೆ. ಈ ಪ್ರಪಂಚದಲ್ಲಿ ಆಕರ್ಷಣೆಯ ಕೇಂದ್ರವಾಗಬೇಕೆಂಬ ನಮ್ಮ ಭ್ರಾಂತ ಬಯಕೆಯನ್ನು ಪೂರೈಸಲೋಸುಗವಷ್ಟೇ, ಅವ್ಯಾಜ್ಯ ಕರುಣಾಳುವಾದ ಭಗವಂತನು ನಮಗೆ ಗಾಯನ, ನೃತ್ಯ, ಚಿತ್ರಕಲೆ, ಬುದ್ಧಿವಂತಿಕೆ, ಸೌಂದರ್ಯ, ಐಶ್ವರ್ಯ, ಖ್ಯಾತಿ ಮುಂತಾದವುಗಳನ್ನು ಯಥೇಚ್ಛವಾಗಿ ನಮಗೆ ಕೆಲವೊಂದಷ್ಟು ಅವಧಿಗೆಂದು ದಯಪಾಲಿಸಲು ಒಪ್ಪಿರುತ್ತಾನೆ. ಯಾವಾಗ ಅನೇಕರು ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸುತ್ತಾರೋ ಆಗ ಅಲ್ಲಿ ಸ್ಪರ್ಧೆ ಹಾಗೂ ಸಂಘರ್ಷ ಉಂಟಾಗುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಸಂತೋಷ ಹಾಗೂ ಶಾಂತಿ ಇಲ್ಲದಾಗುತ್ತದೆ. ಆಗ ಸದಾ ದ್ವೇಷ, ಮಾತ್ಸರ್ಯ, ಹೊಟ್ಟೆಕಿಚ್ಚು ಮುಂತಾದವುಗಳು ನೆಲೆಸಿ ವಾದ ವಿವಾದ, ಜಗಳ, ಕೋಮುಗಲಭೆ ಮತ್ತು ಯುದ್ಧಗಳಿಗೆ ನಾಂದಿಯಾಗುತ್ತದೆ.
ನಾವು ಈ ಜಗತ್ತಿನಲ್ಲಿ ಸಂತೋಷ ಮತ್ತು ಶಾಂತಿಯಿಂದಿ ಇರಬೇಕಾದರೆ ನಮ್ಮ ಸ್ಥಾನವನ್ನು ಅರಿಯಬೇಕು. ಈ ಜಗತ್ತನ್ನು ನಾವು ಸೃಷ್ಟಿಸಿಲ್ಲದ್ದರಿಂದ ನಾವು ಈ ಜಗತ್ತಿನಲ್ಲಿ ಆಕರ್ಷಣೆಯ ಕೇಂದ್ರವಲ್ಲ. ಈ ಜಗತ್ತು ಭಗವಂತ-ಕೃಷ್ಣನಿಗೆ ಸೇರಿದ್ದು. ಈಶೋಪನಿಷತ್ ಮಂತ್ರ 1 ರಲ್ಲಿ ಹೇಳಿರುವಂತೆ
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ।
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ॥
ಈ ಜಗತ್ತಿನಲ್ಲಿರುವ ಪ್ರತಿಯೊಂದು ಚರಾಚರವಸ್ತುವೂ ಭಗವಂತನ ನಿಯಂತ್ರಣದಲ್ಲಿದೆ. ಅವನೇ ಅವುಗಳ ಒಡೆಯ. ಆದ್ದರಿಂದ ಪ್ರತಿಯೊಬ್ಬನೂ ತನಗೆ ಅವಶ್ಯವಾದ ವಸ್ತುಗಳನ್ನು ಮಾತ್ರ, ಅವನ ಭಾಗವೆಂದು ಮೀಸಲಿಟ್ಟಿದ್ದನ್ನು ಮಾತ್ರ ಸ್ವೀಕರಿಸಬೇಕು ಮತ್ತು ಇತರರಿಗೆ ಸೇರಿದ ವಸ್ತುಗಳೆಂದು ಚೆನ್ನಾಗಿ ತಿಳಿದುಕೊಂಡು ಇತರ ವಸ್ತುಗಳನ್ನು ಸ್ವೀಕರಿಸಬಾರದು.
ಭಗವಂತನು ತನ್ನ ವ್ಯವಸ್ಥೆಯಲ್ಲಿ ನಮಗೆ ನೀಡಿದವುಗಳಿಂದ ನಾವು ತೃಪ್ತಿಗೊಳ್ಳುವುದನ್ನು ಕಲಿಯಬೇಕು. ಭಗವಂತನ ಸಂಕಲ್ಪದಿಂದಲೇ ನಮಗೆಲ್ಲರಿಗೂ ಒಂದಿಷ್ಟು ಐಶ್ವರ್ಯ, ಸೌಂದರ್ಯ, ಬುದ್ಧಿವಂತಿಕೆ ಹಾಗೂ ಜೀವನ ನಿರ್ವಹಣಾಮಟ್ಟ ದೊರಕಿರುವುದು. ನಮಗಿರುವ ಪ್ರಾಪಂಚಿಕ ಸುಖ ದುಃಖಗಳು ಭಗವಂತನ ಅಧೀನದಲ್ಲಿರುವುದರಿಂದ ನಾವು ಅವುಗಳನ್ನು ಎಷ್ಟೇ ಪ್ರಮಾಣದ ಪರಿಶ್ರಮದಿಂದಲೂ ಬದಲಿಸಲಾಗುವುದಿಲ್ಲ. ಯಾವುದೇ ಐಹಿಕ ಭೋಗಗಳನ್ನು ಗಳಿಸಲು, ಮೊಟ್ಟಮೊದಲನೆಯದಾಗಿ ನಾವು ಅವುಗಳಿಗೆ ಅರ್ಹರಿದ್ದು ಅನಂತರ ಬಯಸಬೇಕು. ಭಗವಂತನು ನಮ್ಮ ಪೂರ್ವ ಕರ್ಮಾನುಸಾರವಾಗಿಯೇ ನಮಗೆ ಕೆಲವು ಸಂತೋಷ ಮತ್ತು ದುಃಖವನ್ನು ನಿಗದಿಪಡಿಸಿರುತ್ತಾನೆ.
ಪ್ರಹ್ಲಾದ ಮಹಾರಾಜರು ಈ ಸತ್ಯವನ್ನು ಕೆಳಗಿನಂತೆ ವಿವರಿಸಿರುತ್ತಾರೆ:
ಸುಖಮೈನ್ದ್ರಿಯಕಂ ದೈತ್ಯಾ ದೇಹಯೋಗೇನ ದೇಹಿನಾಮ್ ।
ಸರ್ವತ್ರ ಲಭ್ಯತೇ ದೈವಾದ್ಯಥಾ ದುಃಖಮಯತ್ನತಃ ॥
ಪ್ರಹ್ಲಾದ ಮಹಾರಾಜನು ಮುಂದುವರಿಸಿದನು. ದೈತ್ಯರ ಕುಟುಂಬಗಳಲ್ಲಿ ಜನಿಸಿರುವ ನನ್ನ ಪ್ರಿಯ ಮಿತ್ರರೆ, ಅವನವನ ಪ್ರಾಚೀನ ಕರ್ಮಗಳಿಗೆ ಅನುಸಾರವಾಗಿ ಯಾವ ಜನ್ಮದಲ್ಲಾದರೂ ಶರೀರ ಮತ್ತು ವಿಷಯ ವಸ್ತುಗಳ ಸಂಪರ್ಕಕ್ಕೆ ಸಂಬಂಧಿಸಿದ ಸುಖವನ್ನು ಪಡೆದುಕೊಳ್ಳಲು ಶಕ್ಯವಾಗುತ್ತದೆ. ನಮಗೆ ದುಃಖವು ಬರುವಂತೆಯೇ ಅಂತಹ ಸುಖವೂ ತಾನಾಗಿ ನಮ್ಮ ಪ್ರಯತ್ನವಿಲ್ಲದೆಯೇ ಬರುತ್ತದೆ.
ಬ್ರಹ್ಮದೇವನು ತನ್ನ ಬ್ರಹ್ಮ ಸಂಹಿತೆ (5.54) ಯಲ್ಲಿ ಹೀಗೆ ವಿವರಿಸಿದ್ದಾನೆ :
ಯಸ್ತು ಇಂದ್ರಗೋಪಮ್ ಅಥವೇಂದ್ರಮ್ ಅಹೋ ಸ್ವಕರ್ಮ ।
ಬಂಧಾನುರೂಪ ಫಲ ಭಾಜನಂ ಆಥನೋತಿ ॥
ಪುಟ್ಟ ಹುಳವಾದ ಇಂದ್ರಗೋಪನಿಂದ ಮೊದಲ್ಗೊಂಡು ದೇವಾದಿದೇವತೆಗಳ ದೇವನಾದ ಇಂದ್ರನವರೆಗೆ ಪ್ರತಿಯೋರ್ವನು ಅನುಭವಿಸುತ್ತಿರುವ ಸುಖ ಅಥವಾ ದುಃಖವು ಅವನ ಸ್ವಂತ ಪೂರ್ವ ಕರ್ಮಗಳ ಫಲವೇ ಆಗಿದೆ. ನಾವು ನಮ್ಮ ಸ್ವಂತ ಪೂರ್ವ ಕರ್ಮಗಳ ಫಲವನ್ನೇ ಅನುಭವಿಸುತ್ತಿದ್ದೇವೆಂದು ಅರಿಯಬೇಕು. ಒಂದು ವೇಳೆ ನಾವು ಈ ಫಲವನ್ನು ಬದಲಿಸಬೇಕೆಂದು ಬಯಸಿದಲ್ಲಿ ಅದು ಯಾವುದೇ ಪ್ರಾಪಂಚಿಕ ಹೊಂದಾಣಿಕೆಗಳಿಂದ ಸಾಧ್ಯವಿಲ್ಲ. ಅದು ಕೃಷ್ಣನಲ್ಲಿನ ಭಕ್ತಿಯೊಂದರಿಂದ ಮಾತ್ರ ಸಾಧ್ಯ. ಬ್ರಹ್ಮನು ಮತ್ತೂ ವಿವರಿಸಿದ್ದಾನೆ:
ಕರ್ಮಾಣಿ ನಿರ್ದಹತಿ ಕಿಂತು ಚ ಭಕ್ತಭಾಜಾಂ ಗೋವಿಂದಂ ।
ಆದಿಪುರುಷಂ ತಮ್ ಅಹಂ ಭಜಾಮಿ ॥
ಯಾರ ಹೃದಯ ಭಕ್ತಿಯಿಂದ ತುಂಬಿ ಹೋಗಿದೆಯೊ ಅಂತಹವರ ಸಕಲ ಪೂರ್ವ ಕರ್ಮಗಳನ್ನು ಅದರ ಬೇರು ಸಹಿತ ಸುಟ್ಟು ಹಾಕುವ ಆದಿ ಪುರುಷನಾದ ದೇವ ಗೋವಿಂದನನ್ನು ನಾನು ಆರಾಧಿಸುತ್ತೇನೆ.
ದೇವನು ಓರ್ವನ ಕರ್ಮ ಫಲವನ್ನೂ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇದನ್ನು ಪದ್ಮ ಪುರಾಣದಲ್ಲೂ ಹೇಳಿದೆ.
ಅಪ್ರಾರಬ್ಧ ಫಲಂ ಪಾಪಂ ಕೂಟಂ ಬೀಜಂ ಫಲೋನ್ಮುಖಂ ।
ಕ್ರಮೇಣೈವ ಪ್ರಲೀಯೇತ ವಿಷ್ಣು ಭಕ್ತಿ ರಥಾತ್ಮನಾಂ ॥
ಯಾರು ದೇವೋತ್ತಮ ಪರಮಪುರುಷನ ಭಕ್ತಿಸೇವೆಯಲ್ಲಿ ತೊಡಗುತ್ತಾರೋ ಅವರ ಎಲ್ಲ ಪಾಪ ಪ್ರತಿಕ್ರಿಯೆಗಳು – ಫಲೋನ್ಮುಖ, ಪಾಪಕರ್ಮ, ಸಂಗ್ರಹದಲ್ಲಿರುವ ಪಾಪಕರ್ಮ ಅಥವಾ ಬೀಜರೂಪದಲ್ಲಿರುವ ಪಾಪಕರ್ಮ – ಕ್ರಮೇಣವಾಗಿ ಕಣ್ಮರೆಯಾಗುತ್ತವೆ.
ಭಗವಂತನಾದ ಕೃಷ್ಣ ಅಥವಾ ವಿಷ್ಣುವಿನಲ್ಲಿನ ಭಕ್ತಿಯು ಸಕಲ ಪಾಪಗಳ ಎಲ್ಲ ಫಲಗಳನ್ನೂ ಸುಟ್ಟು ಬಿಡುತ್ತದೆ. ಪೂರ್ವ ಪಾಪ ಫಲಗಳ ಪ್ರತಿಕ್ರಿಯೆಯು ಸುಟ್ಟು ಹೋಗುವುದರ ಜೊತೆಯಲ್ಲಿ ಪಾಪ ರಹಿತವಾದ ಜೀವನವನ್ನು ನಡೆಸಲು ಕಲಿತಾಗ ಮಾತ್ರ ನಾವು ಆನಂದದಿಂದಿರಲು ಸಾಧ್ಯ. ನಾವು ಪ್ರಭುವಾಗಲು ಅಥವಾ ದೇವರಾಗಲು ಬಯಸುತ್ತೇವೆ, ಆದರೆ ಇದು ಜೀವಿಗಳಿಗೆ ಕೃತಕವಾದದ್ದು. ನಾವು ಭಗವಂತನಾಗಬೇಕೆಂಬ ಪಾಪ ಸಹಿತವಾದ ಬಯಕೆಯನ್ನು ಬದಲಿಸಿಕೊಂಡರೆ ಮತ್ತು ನಿಜವಾದ ಭಗವಂತನಾದ ಕೃಷ್ಣನಿಗೆ ನಮ್ಮ ಭಕ್ತಿಯನ್ನು ಸಮರ್ಪಿಸಿದರೆ ಆಗ ನಾವು ಸಕಲ ಪಾಪಗಳಿಂದಲೂ ಮುಕ್ತರಾಗಬಹುದು. ಭಗವಾನ್ ಶ್ರೀಕೃಷ್ಣನು ಈ ಸತ್ಯವನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ.
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ ।
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ॥
ಯಾರು ನನ್ನನ್ನು ಜನ್ಮವಿಲ್ಲದವನು, ಅನಾದಿ ಮತ್ತು ಎಲ್ಲ ಲೋಕಗಳ ಪರಮ ಪ್ರಭು ಎಂದು ಅರಿಯುತ್ತಾನೆಯೋ ಅವನು ಮಾತ್ರ, ಮನುಷ್ಯರಲ್ಲಿ ಭ್ರಾಂತಿಯಿಲ್ಲದವನಾಗಿ, ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
ಭಗವಂತನೆಂಬುವನು ಒಬ್ಬನೆ ಮತ್ತು ನಾವೆಲ್ಲರೂ ಭಗವಂತನ ಅಂಶಗಳು. ನಾವು ಭಗವಂತನಿಗೆ ಸಮಾನರಲ್ಲ. ಭಗವಂತನಾದ ಕೃಷ್ಣನು ನಮ್ಮ ಒಡೆಯ. ಅವನೇ ನಮ್ಮ ಪಾಲಕ, ಅವನ ಲೀಲೆಯೇ ಪರಮೋಚ್ಚವಾದುದು. ಭಗವಂತನಾದ ಕೃಷ್ಣನು ಈ ಸತ್ಯವನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ.
ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ ।
ವೇದ್ಯಂ ಪವಿತ್ರಮ್ ಓಂಕಾರ ಋಕ್ ಸಾಮ ಯಜುರೇವ ಚ ॥
ನಾನು ವಿಶ್ವದ ತಂದೆ, ತಾಯಿ, ಆಧಾರ ಮತ್ತು ಪಿತಾಮಹ. ನಾನು ಜ್ಞಾನದ ಗುರಿ, ಪವಿತ್ರೀಕರಿಸುವವನು, ಓಂಕಾರ. ನಾನೇ ಋಗ್, ಸಾಮ ಮತ್ತು ಯಜುರ್ ವೇದಗಳು.
ಯಸ್ಮಾತ್ಕ್ಷರ ಮತೀತೋಽಹಮಕ್ಷರಾದಪಿ ಚೋತ್ತಮಃ ।
ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥
ನಾನು ಕ್ಷರ ಮತ್ತು ಅಕ್ಷರಗಳಿಗೆ ಅತೀತನು ಮತ್ತು ಅತ್ಯುತ್ತಮನು. ಆದುದರಿಂದ ಪ್ರಪಂಚವೂ ವೇದಗಳೂ ಪುರುಷೋತ್ತಮನೆಂದು ನನ್ನನ್ನು ಪ್ರಾರ್ಥನೆಮಾಡುತ್ತವೆ.
ಕೃಷ್ಣನು ಅಸೀಮ ಸೌಂದರ್ಯ, ಮಹಿಮೆ, ಸಂಪತ್ತು, ಚೈತನ್ಯ, ತ್ಯಾಗ ಮತ್ತು ವಿವೇಕವನ್ನು ಹೊಂದಿದ್ದಾನೆ. ಅವನು ಸಕಲದರಲ್ಲೂ ಸಮೃದ್ಧನಾಗಿ ಅತ್ಯಂತ ಆಕರ್ಷಣೀಯನಾದ ಕಾರಣದಿಂದ ಭಗವಂತನಿಗೆ ಕೃಷ್ಣ ಎಂಬ ನಾಮವು ಅತ್ಯಂತ ಸಮರ್ಪಕವಾಗಿದೆ. ಶ್ರೀಲ ಪ್ರಭುಪಾದರು ಭಾಗವತ 10.8.15 ರ ತಾತ್ಪರ್ಯದಲ್ಲಿ ಕೃಷ್ಣ ಎಂಬ ನಾಮಕ್ಕೆ ಕೆಳಗಿನಂತೆ ವಿವರಣೆಯನ್ನು ಕೊಟ್ಟಿರುತ್ತಾರೆ.
ನಾವು ಕೃಷ್ಣ ಎಂಬ ಪದದ ನಿರುಕ್ತಿ ಅಥವಾ ಶಬ್ದಾರ್ಥವನ್ನು ಅವಲೋಕಿಸಿದರೆ `ನ’ ಎಂಬುದು ಜನನ ಮತ್ತು ಮರಣದ ಪುನರಾವರ್ತನೆಯನ್ನು ಅವನು ಅಂತ್ಯಗೊಳಿಸುತ್ತಾನೆಂದು ಸೂಚಿಸುತ್ತದೆ, ಮತ್ತು `ಕೃಷ್’ ಎಂದರೆ ಸತಾರ್ಥ ಅಥವಾ “ಅಸ್ತಿತ್ವ”. (ಕೃಷ್ಣನು ಅಸ್ತಿತ್ವದ ಪೂರ್ಣ ರೂಪ). ಅಲ್ಲದೆ `ಕೃಷ್’ ಎಂದರೆ “ಆಕರ್ಷಣೆ” ಮತ್ತು `ನ’ ಎಂದರೆ ಆನಂದ ಅಥವಾ “ಪರಮ ಸುಖ”. ಕೃಷ್ಣನು ಮುಕುಂದನೆಂದೂ ಕರೆಯಲ್ಪಡುತ್ತಾನೆ, ಕಾರಣ ಅವನು ಪ್ರತಿಯೊಬ್ಬರಿಗೂ ಜೀವನದಲ್ಲಿ ಆಧ್ಯಾತ್ಮಿಕವಾದ ಶಾಶ್ವತ, ಅನಂತ, ಪರಮಾನಂದವನ್ನು ನೀಡಬಯಸುತ್ತಾನೆ. ದುರದೃಷ್ಣವಶಾತ್ ಜೀವಿಯು ತನ್ನ ಅಲ್ಪ ಸ್ವಾತಂತ್ರ್ಯದಿಂದ, ಕೃಷ್ಣನ “ಸಂಕಲ್ಪ”ವನ್ನು ವಿಕಲ್ಪಗೊಳಿಸಲು ಬಯಸುತ್ತಾನೆ. ಇದು ಭೌತಿಕ ವ್ಯಾಧಿ. ಕೃಷ್ಣನು, ಜೀವಿಗಳಿಗೆ ಪರಮಾನಂದವನ್ನು ನೀಡಬಯಸುವುದರಿಂದ, ಅವನು ಅನೇಕ ರೂಪಗಳಲ್ಲಿ ಪ್ರಕಟಗೊಂಡಿದ್ದಾನೆ. ಹಾಗಾಗಿ ಅವನನ್ನು ಕೃಷ್ಣ ಎಂದು ಕರೆಯಲಾಗಿದೆ.
ನಾವು ಈ ಜಗತ್ತಿನಲ್ಲಿ ಭಗವಂತನ ಸ್ಥಾನವನ್ನು ಪಡೆಯಲೆತ್ನಿಸಿ ಆಕರ್ಷಣೆಯ ಕೇಂದ್ರವಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು. ಅದು ಕೃತಕವಾಗಿದ್ದು ದುಃಖದ ಮೂಲವಾಗಿರುತ್ತದೆ. ನಾವು ಭಗವಂತನ ದಾಸರೆಂದೂ ಮತ್ತು ನಮ್ಮ ಕರ್ತವ್ಯವು ಆ ಪರಮ ದೈವದ ಲೀಲೆಯಲ್ಲಿ ಸಹಕರಿಸುವುದೇ ಆಗಿದೆ ಎಂದು ಮನಗಂಡರೆ ಆಗ ನಾವು ನಿಶ್ಚಯವಾಗಿ ಆನಂದಿತರಾಗುತ್ತೇವೆ. ಆ ಭಗವಂತನು ಅನಂತ ಮತ್ತವನ ಲೀಲಾ ಸಾಮರ್ಥ್ಯವೂ ಅನಂತ. ಹಾಗಾಗಿ ಅವನು ಅನೇಕ ಸಂಬಂಧಗಳಲ್ಲಿ ನಮಗೆ ಸಂತೋಷಕೊಡಲೋಸುಗ ಮಾತ್ರ ತನ್ನನ್ನು ತಾನೇ ಅಸಂಖ್ಯಾತ ಜೀವಿಗಳಲ್ಲಿ ಪಸರಿಸಿಕೊಂಡಿದ್ದಾನೆ.
ನಮ್ಮಲ್ಲಿ ಪ್ರತಿಯೊಬ್ಬರೂ ಕೃಷ್ಣನೊಂದಿಗೆ ಒಂದು ವಿಶಿಷ್ಟವಾದ ಸಂಬಂಧವನ್ನು ಹೊಂದಿದ್ದೇವೆ ಮತ್ತು ಯಾವಾಗ ನಾವು ನಮ್ಮ ನಿಜವಾದ ಸಂಬಂಧದಲ್ಲಿ ಕೃಷ್ಣನನ್ನು ಪ್ರೇಮಿಸಲು ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆಯೋ ಆಗ ನಾವು ಯಶಸ್ಸು ಕಾಣುತ್ತೇವೆ. ಹಾಗಾಗದಿದ್ದ ಪಕ್ಷದಲ್ಲಿ ಆಕರ್ಷಣೆಯ ಕೇಂದ್ರವಾಗಬೇಕೆಂಬ ನಮ್ಮ ತೊಳಲಾಟವು ಹೃದಯದಲ್ಲಿ ಧಗಧಗಿಸುತ್ತಲೇ ಇದ್ದು ಜನ್ಮ ಜನ್ಮಾಂತರದಲ್ಲೂ ಇತರ ಜೀವಿಗಳೊಂದಿಗೆ ಸಂಘರ್ಷಿಸಲು ನಾವು ಈ ಪ್ರಪಂಚದಲ್ಲಿ ಅನೇಕ ಭೌತಿಕ ಶರೀರಗಳನ್ನು ಹೊಂದುವ ಒತ್ತಡದಲ್ಲಿ ಸಿಲುಕುತ್ತೇವೆ. ಭಗವಂತನ ಪವಿತ್ರ ಆರಾಧಕರ ಸತ್ಸಂಗದಲ್ಲಿ ನಾವು ಈ ವಾಸ್ತವಿಕ ಸತ್ಯವನ್ನು ಮನಗಾಣಲೆತ್ನಿಸಬೇಕು ಮತ್ತು ಕೃಷ್ಣನಿಗೆ ದಾಸರಾಗುವ ಕಲೆಗಾರಿಕೆಯನ್ನು ಕಲಿಯಬೇಕು ಮತ್ತು ಭಗವಂತನಾಗುವ ಬಯಕೆಯನ್ನು ವರ್ಜಿಸಬೇಕು. ಆಗ ನಾವು ಪರಮಾರ್ಥದಲ್ಲಿ ಕೃಷ್ಣನೊಂದಿಗೆ ಶಾಂತಿಯಿಂದಿರಲು ಸಾಧ್ಯ.