ಸುವರ್ಣ ವರ್ಣೋ ಹೇಮಾಂಗೋ ವರಾಂಗಶ್ ಚಂದನಾಂಗದೀ (65)
ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಃ (62)
ವಿಷ್ಣು ಸಹಸ್ರನಾಮದಲ್ಲಿ ಎರಡು ಬೇರೆ ಕಡೆಗಳಲ್ಲಿ ಬರುವ ಶ್ಲೋಕಗಳ ಸಾಲು. ಆದರೆ ನಮ್ಮ ಅನುಕೂಲಕ್ಕಾಗಿ ಅವುಗಳನ್ನು ಹೀಗೆ ಸಂಯೋಜಿಸಲಾಗಿದೆ. ಅದನ್ನು ಹೆಚ್ಚು ಅರ್ಥವತ್ತಾಗಿ ಮಾಡುವುದೇ ಈ ಸಂಯೋಜನೆಯ ಉದ್ದೇಶ. ಶ್ಲೋಕವನ್ನು ಗಮನಿಸೋಣ : ಸುವರ್ಣವರ್ಣೋ ಹೇಮಾಂಗೋ ವರಾಂಗ ಶ್ಚಂದನಾಂಗದೀ, “ಅತ್ಯಂತ ಸುಂದರಾಂಗರಾದ ಅವರು ಸುವರ್ಣ ವರ್ಣದವರಾಗಿ ಆವಿರ್ಭವಿಸುತ್ತಾರೆ. ಅವರ ಶರೀರವು ಚಂದನ ಪೂಸಿತವಾಗಿ ಸುವರ್ಣದ್ರವದಂತೆ ಗೋಚರವಾಗುತ್ತದೆ.” ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಃ, “ಅವರು ಸಂನ್ಯಾಸವನ್ನು ಸ್ವೀಕರಿಸಿ ಶಾಂತರಾಗಿಯೂ ಸಮಚಿತ್ತರಾಗಿಯೂ ಇರುತ್ತಾರೆ. ಅವರು ಭಕ್ತಿಯ ಧಾಮವಾಗಿರುತ್ತಾರೆ.” ಇಲ್ಲಿ ಎರಡು ಗುಣಗಳನ್ನು ಕುರಿತು ಹೇಳಲಾಗಿದೆ – ಸುವರ್ಣವರ್ಣದವರು ಮತ್ತು ಸಂನ್ಯಾಸ ಸ್ವೀಕರಿಸುವವರು. ಸುವರ್ಣ ಬಣ್ಣದವರಾದ ಶ್ರೀ ಚೈತನ್ಯರು ಸಂನ್ಯಾಸ ಸ್ವೀಕರಿಸಿದರು. ಇದು ಶ್ಲೋಕಗಳ ಭವಿಷ್ಯ ವಾಣಿ.
ಶ್ರೀ ಚೈತನ್ಯ ಮಹಾಪ್ರಭು ಸುಮಾರು 540 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಆವಿರ್ಭವಿಸಿದರು. ಅವರು ಶ್ರೀ ರಾಧಾ ಮತ್ತು ಕೃಷ್ಣರ ಸಂಯೋಜಿತ ರೂಪ. ಅವರ ಸುವರ್ಣ ವರ್ಣವೇ ಅದಕ್ಕೆ ಪುರಾವೆ. ಮಾಯಾಪುರದಲ್ಲಿ ಬಾಲ್ಯದಿಂದಲೂ ನಡೆದ ಅನೇಕ ಘಟನೆಗಳು, ಅನಂತರ ಪುರಿ ಜಗನ್ನಾಥದಲ್ಲಿ ಅವರು ತೋರಿದ ಲೀಲೆಗಳು ಅವರ ದೈವತ್ವನ್ನು ಸ್ಪಷ್ಟಪಡಿಸಿವೆ. ಆದರೆ ಶ್ರೀ ಗೌರಹರಿ ಎಲ್ಲಿಯೂ ತಾವು ಕೃಷ್ಣನ ಅವತಾರವೆನ್ನುವುದನ್ನು ಹೊರಗೆಡಹಲಿಲ್ಲ. ತಾವು ಕೃಷ್ಣನ ಭಕ್ತ ಮತ್ತು ಅವನ ಸಂದೇಶವನ್ನು ಜನರಲ್ಲಿ ಹರಡುವುದೇ ತಮ್ಮ ಜೀವನೋದ್ದೇಶ ಎಂದು ಅವರು ಹೇಳಿದ್ದಾರೆ. ಅವರ ಸಮಕಾಲೀನರು ಈ ವಿಷಯ ಕುರಿತು ಪ್ರಸ್ತಾಪಿಸಿದಾಗೆಲ್ಲ ಮಹಾಪ್ರಭುಗಳು ಅದನ್ನು ತಳ್ಳಿಹಾಕಿದ್ದರು. ಈ ಲೋಕದಲ್ಲಿ ಕೃಷ್ಣನ ಉನ್ನತ ಭಕ್ತನಾಗುವುದು ಹೇಗೆ ಎಂದು ತೋರಿಸುವುದೇ ಅವರ ಗುರಿಯಾಗಿತ್ತು.
ಶ್ರೀ ಚೈತನ್ಯ ಮಹಾಪ್ರಭು ತಮ್ಮನ್ನು ಒಬ್ಬ ಭಕ್ತನನ್ನಾಗಿ ಗುರುತಿಸಿಕೊಳ್ಳಲು ಅಪೇಕ್ಷಿಸಿದರೂ ವಿಷ್ಣು ಸಹಸ್ರನಾಮದ ಶ್ಲೋಕಗಳು ಅವರ ದೈವತ್ವ ರೂಪವನ್ನು, ಅವರ ಅವತಾರವನ್ನು ಸ್ಪಷ್ಟಪಡಿಸಿವೆ. ಅತ್ಯಂತ ಸುಂದರರಾದ ಆ ಚಿನ್ನದ ವರ್ಣದವರು ಮುಂದೆ ಸಂನ್ಯಾಸ ಸ್ವೀಕರಿಸುತ್ತಾರೆ ಎನ್ನುವುದು ಶ್ಲೋಕದ ಅರ್ಥ. ಅಂದರೆ ಅದು ಶ್ರೀ ಚೈತನ್ಯರ ಆವಿರ್ಭಾವ. ಸುವರ್ಣ ಅವತಾರ.