ಮನುಷ್ಯ ಶರೀರದ ಯಂತ್ರವನ್ನು ಅಧ್ಯಯನ ಮಾಡಿದರೆ ಸಾಲದು.
ಜೀವನದ ಅಂತಿಮ ಗುರಿ ಸಾಧಿಸಲು ಆ ಯಂತ್ರವನ್ನು ಬಳಸಬೇಕು.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಫಿಲಿಡೆಲ್ಫಿಯಾದಲ್ಲಿ
1975ರ ಜುಲೈ 14ರಂದು ನೀಡಿದ ಉಪನ್ಯಾಸ.
ನಿಶಮ್ಯ ಮ್ರಿಯಮಾಣಸ್ಯ ಮುಖತೋ ಹರಿಕೀರ್ತನಮ್ ।
ಭರ್ತುರ್ನಾಮ ಮಹಾರಾಜ ಪಾರ್ಷದಾಃ ಸಹಸಾಪತನ್ ॥
“ನನ್ನ ಪ್ರೀತಿಯ ರಾಜನೇ, ಮರಣಾಸನ್ನನಾಗಿದ್ದ ಅಜಾಮಿಳನ ಬಾಯಿಯಿಂದ ತಮ್ಮ ಪ್ರಭುವಿನ ಪುಣ್ಯನಾಮವನ್ನು ಕೇಳಿದ ಕೂಡಲೇ ವಿಷ್ಣುದೂತರು ಆಗಮಿಸಿದರು. ಅಜಾಮಿಳ ಪೂರ್ಣ ವ್ಯಾಕುಲಚಿತ್ತನಾಗಿ ಉಚ್ಚರಿಸಿದ್ದರಿಂದ ಖಂಡಿತವಾಗಿಯೂ ಅಪರಾಧ ರಹಿತನಾಗಿ ಉಚ್ಚರಿಸಿದ್ದ.” (ಶ್ರೀಮದ್ ಭಾಗವತ 6.1.30)
ನಿಮ್ಮ ನಗರದಲ್ಲಿ ಪೊಲೀಸರು ಕಾರಿನಲ್ಲಿ ಓಡಾಡುತ್ತಾರೆ; ಯಾರೋ ಪೊಲೀಸರನ್ನು ಕರೆದರೆ, ಕ್ಷಿಪ್ರವಾಗಿ, ಅವರು ಅವನೆಡೆಗೆ ಹೋಗುತ್ತಾರೆ. ಹಾಗೆಯೇ ವಿಷ್ಣುಭಟರು ವಿಶ್ವಾದ್ಯಂತ ಸಂಚರಿಸುತ್ತಲೇ ಇರುತ್ತಾರೆ; ಭಗವಂತನ ಪುಣ್ಯನಾಮ ಸ್ಮರಣೆಯನ್ನು ಯಾರಾದರೂ ಮಾಡುತ್ತಿದ್ದಾರೆಯೋ ಎಂದು ಹುಡುಕುತ್ತ ಓಡಾಡುತ್ತಿರುತ್ತಾರೆ. ನೀವು ಭಗವಂತನ ದಿವ್ಯನಾಮೋಚ್ಚಾರ ಮಾಡಿದರೆ, ಅವರು ಅತೀವ ಸಂತಸಗೊಳ್ಳುತ್ತಾರೆ. ಕೂಡಲೆ ಅವರು ನಿಮ್ಮಲ್ಲಿಗೆ ಬರುತ್ತಾರೆ.
ಅಜಾಮಿಳ “ನಾರಾಯಣ” ಎಂದು ಕರೆದದ್ದು, ವಾಸ್ತವವಾಗಿ ಅವನ ಮಗನನ್ನು. ಆದರೆ ವಿಷ್ಣುಭಟರಿಗೆ ಕೇಳಿಸಿದ್ದು ಕೇವಲ ಹರಿನಾಮ, ಅಷ್ಟೆ. ಆತ “ನಾರಾಯಣ” ಎಂದಾಗ ಅದು ತಮ್ಮ ಪ್ರಭುವನ್ನು ಕರೆದುದೇ ಅಲ್ಲವೆ ಎಂಬುದನ್ನು ಅವರು ಲೆಕ್ಕಿಸಲಿಲ್ಲ. ಇಲ್ಲ; ಅವರ ಪ್ರಭುವಿನ ಹೆಸರನ್ನು ಮಾತ್ರ ಕೇಳಿಸಿಕೊಂಡರು; ಬಂದರು. ಇದು ಸ್ಪಷ್ಟ.
ಆದುದರಿಂದ ಯಾರು ಭಗವಂತನ ದಿವ್ಯನಾಮ ಸ್ಮರಣೆಯನ್ನು ಮಾಡುತ್ತಾರೋ ಅವರ ಯೋಗಕ್ಷೇಮವನ್ನು ಭಗವಂತನ ಭಟರು ಕೂಡಲೆ, ವಹಿಸಿಕೊಳ್ಳುತ್ತಾರೆ; ವಿಶೇಷತಃ, ಸಾವಿನ ಕ್ಷಣದಲ್ಲಿ ಲೆಕ್ಕವನ್ನು ಹಾಕಲಾಗುತ್ತದೆ. ನಿಮ್ಮ ಜೀವಮಾನದಲ್ಲಿ ಹರೇಕೃಷ್ಣ ನಾಮ ಸಂಕೀರ್ತನೆಯನ್ನು ಅಭ್ಯಾಸ ಮಾಡಿಕೊಂಡರೆ, ಸಹಜವಾಗಿ ಕೊನೆಗಾಲದಲ್ಲಿ ಅದರ ಮೇಲೆ ನಿಮ್ಮ ಒಲವಿರುತ್ತದೆ. ಅದು ಬಲು ಚೆನ್ನು.
ಈ ಜೀವಮಾನದಲ್ಲಿ ಹರೇಕೃಷ್ಣ ನಾಮೋಚ್ಚಾರವನ್ನು ನಾನು ಅಭ್ಯಾಸ ಮಾಡಿಕೊಂಡರೆ, ನನ್ನ ಹೃದಯದ ಅಂತರಾಳ ಶುದ್ಧಿಯಾಗುತ್ತದೆ, ಪ್ರತಿಯೊಂದೂ ಸಾಕ್ಷಾತ್ಕರಿಸುತ್ತದೆ. ನನ್ನ ಸ್ವರೂಪ, ನನ್ನ ಕರ್ತವ್ಯ, ದೇವರೆಂದರೇನು ಎಲ್ಲವೂ ಪ್ರಕಟಗೊಳ್ಳುತ್ತವೆ. (ಚೇತೋ ದರ್ಪಣ ಮಾರ್ಜನಮ್) ಈಗ ನಮ್ಮ ಹೃದಯದಲ್ಲಿ ಬಹಳಷ್ಟು ಕೊಳಕು ತುಂಬಿದೆ. ದೈವವಿಜ್ಞಾನವನ್ನು ನಾವು ಅರ್ಥಮಾಡಿಕೊಳ್ಳಲಾರೆವು. ನೀವು ಹರೇಕೃಷ್ಣ ಮಂತ್ರವನ್ನು ಜಪಿಸಲು ಅಭ್ಯಾಸ ಮಾಡಿದರೆ, ನಿಮ್ಮ ಹೃದಯ ನಿರ್ಮಲಗೊಳ್ಳುತ್ತದೆ, ನಿಮಗೆ ಎಲ್ಲವೂ ಯಥಾರೂಪದಲ್ಲಿ ಕಾಣುತ್ತದೆ.
ಎಲ್ಲ ವಸ್ತುಗಳನ್ನು ಯಥಾರೂಪದಲ್ಲಿ ನೋಡಲು ನಿಮಗೆ ಸಾಧ್ಯವಾದಾಗ, ನಿಮ್ಮ ಐಹಿಕ ಬಂಧನ ಕಳಚಿಹೋಗುತ್ತದೆ. ನೀವು ದೇಹೇಂದ್ರಿಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದೀರಿ. ನೀವು ಮಾಡುತ್ತಿರುವುದೆಲ್ಲವೂ ನಿಮ್ಮ ದೇಹದ ಆಧಾರದ ಮೇಲಷ್ಟೆ. ನಿಮ್ಮ ಹೃದಯ ಶುದ್ಧಿಯಾದಾಗ ನೀವು ತತ್‌ಕ್ಷಣದಲ್ಲಿ – “ನಾನು ಈ ದೇಹವಲ್ಲ… ಹಾಗಿರುವಾಗ ಈ ಜೀವಕಣಗಳು ಮತ್ತು ಅಣುಗಳನ್ನು ಅಧ್ಯಯನ ಮಾಡುವುದಾಗಲಿ, ಅದು, ಇದು, ತಿಳಿಯುವ ಅಗತ್ಯವಾದರೂ ಏನು? ನಾನು ನನ್ನ ಕಾಲವನ್ನು ವ್ಯಯಗೊಳಿಸುತ್ತಿದ್ದೇನೆ” ಎಂದು ಅರ್ಥಮಾಡಿಕೊಳ್ಳುತ್ತೀರಿ.
ನಾನು ಒಂದು ಒಳ್ಳೆಯ ಕಾರನ್ನು ಚಲಾಯಿಸುತ್ತೇನೆ ಎಂದುಕೊಳ್ಳೋಣ. ನಾನು ಅದರ ಯಂತ್ರಚಾಲನೆ ಬಗ್ಗೆಯೇ ತನ್ಮಯನಾಗಿದ್ದೇನೆ. ಆಗ ನಾನು ತಲಪಬೇಕಾದ ಗುರಿಯನ್ನು ಮರೆತಿರುತ್ತೇನೆ. ನಾನೆಲ್ಲಿಗೆ ಹೋಗಬೇಕು? ಈಗ ನಾನು ನನ್ನ ಕಾರನ್ನು ಅಧ್ಯಯನ ಮಾಡುತ್ತಿದ್ದೇನೆ. ಅದರ ಫಲವೇನು? ನೀವು ಒಳ್ಳೆಯ ಕಾರನ್ನೇ ಚಲಾಯಿಸುತ್ತಿದ್ದೀರಿ; ಇರಬಹುದು. ಆದರೆ ನೀವು ಗುರಿ ಹೇಗೆ ತಲಪಬೇಕು ಎಂದು ತಿಳಿದುಕೊಂಡಿರಬೇಕು. ಅದು ನಿಮ್ಮ ಆದ್ಯ ಕರ್ತವ್ಯ. ಕಾರು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಆನುಷಂಗಿಕ. ನಿಮ್ಮ ಆದ್ಯ ಕರ್ತವ್ಯವೆಂದರೆ, ನಿಮ್ಮ ಕಾರನ್ನು ಸದುಪಯೋಗ ಮಾಡಿಕೊಂಡು ಗುರಿ ತಲಪುವುದು ಹೇಗೆಂಬುದನ್ನು ತಿಳಿಯುವುದು. ಅದು ಬುದ್ಧಿವಂತಿಕೆ.
ಹಾಗಾಗಿ ನಾವು ಭೌತಿಕ ಪರಿಸ್ಥಿತಿಗೆ ಸಿಕ್ಕಿ ಬಿದ್ದಿದ್ದೇವೆ. ನಾವು ಬೇರೆ ಬೇರೆ ರೂಪಗಳನ್ನು ಹೊಂದುತ್ತಿದ್ದೇವೆ. ನಾವು ಶಾರೀರಕ ಪರಿಕಲ್ಪನೆಯಲ್ಲೇ ಮುಳುಗಿರುವ ತನಕ – ನಾವು ಈ ಕಾರು ಎಂದು ಯೋಚಿಸಿದರೆ ಅದು ಮೌಢ್ಯ. ನೀವು ಹೇಗೆ ಯೋಚಿಸಬೇಕೆಂದರೆ – `ನಾನು ಈ ದೇಹವಲ್ಲ – ನಾನು ಜೀವಾತ್ಮ – ನಾನು ಈ ದೇಹವನ್ನು ಹೊತ್ತು ಗುರಿ ತಲಪಬೇಕು; ಗುರಿ ಎಂದರೆ ಪರಲೋಕ – ಅಲ್ಲಿ ಪರಮ ಪುರುಷ – ಪರಂಧಾಮ ಪರಮಾತ್ಮನನ್ನೇ ಕಂಡು ಅವನ ಸಾಂಗತ್ಯ ಅನುಭವಿಸಬೇಕು. ಪರಮಾತ್ಮನನ್ನು ಅರ್ಥಮಾಡಿಕೊಳ್ಳಲೆಂದೆ ಮಾನವ ಜನ್ಮ ಸೃಷ್ಟಿಯಾಗಿರುವುದು. ಅದೇ ಅದರ ಪರಮಗುರಿ. ಆತ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ, ನಮ್ಮ – ಅವನ ಸಂಬಂಧವೇನು? ಇದನ್ನು ತಿಳಿಯುವುದೇ ಬ್ರಹ್ಮಜಿಜ್ಞಾಸಾ – “ಪರಿಪೂರ್ಣ ಸತ್ಯಾನ್ವೇಷಣೆ.” ಅದೇ ವಾಸ್ತವಿಕ ಶಿಕ್ಷಣ.
ನಮಗೆ ಈ ಮಾನವ ಯಂತ್ರ ಪ್ರಾಪ್ತವಾಗಿದೆ. ಆದರೆ ಈ ಯಂತ್ರವನ್ನು ಅಧ್ಯಯನ ಮಾಡಿ ಬಂದ ಪ್ರಯೋಜನವೇನು? ಶಾಸ್ತ್ರ ಹೇಳುತ್ತೆ, ಯಂತ್ರ ತುಕ್ಕು ಹಿಡಿಯುವವರೆಗೆ ಕೆಲಸ ಮಾಡುತ್ತೆ. ನೀವು ಯಂತ್ರದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನೀವು ಪರಿಪೂರ್ಣ ಸತ್ಯದ ಅನ್ವೇಷಣೆಯಲ್ಲಿ ತೊಡಗಿ. ಆದರೆ ಜನರು ಕೇವಲ – `ಓ! ನಮಗೆಂಥ ಸೊಗಸಾದ ಯಂತ್ರ ದೊರಕಿದೆ’ ಎಂದೇ ಆಲೋಚಿಸುತ್ತಿದ್ದಾರೆ. ನಾಯಿಗೂ ಒಂದು ಯಂತ್ರವಿದೆ. ಇರುವೆಗೂ ಒಂದು ಯಂತ್ರವಿದೆ. ಆನೆಗೆ ಒಂದು ಯಂತ್ರ ಇದೆ. ಮನುಷ್ಯನಿಗೊಂದು ಯಂತ್ರವಿದೆ. ಪ್ರತಿಯೊಂದು ಜೀವಿಗೂ ಒಂದು ದೇಹವೆಂಬ ಯಂತ್ರವಿದೆ. ಆದರೆ ಶಾಸ್ತ್ರ ಹೇಳುತ್ತೆ – `ಈ ಮಾನವ ಯಂತ್ರವನ್ನು ಪ್ರಾಣಿಯಂತ್ರದಂತೆ ವ್ಯಯ ಮಾಡಬಾರದು.’
ಭಗವಂತ ನಮಗೆ ಒಂದು ಮಾನವಯಂತ್ರ ಕೊಟ್ಟಿದ್ದಾನೆ. ನಾವು ನಮ್ಮ ಗುರಿ ತಲಪಲು ಈ ಯಂತ್ರವನ್ನು ಬಳಸಬೇಕು – `ನೃದೇಹಮಾದ್ಯಂ…. ಪ್ಲವಂ ಸುಕಲ್ಪಂ’. ಈ ನೃದೇಹ, ಈ ಮಾನವ ಯಂತ್ರ, ಬಹಳ ಜಾಗರೂಕತೆಯಿಂದ ತಯಾರಾದುದು – ಆದರೆ ನನ್ನಿಂದಲ್ಲ, ಪ್ರಕೃತಿಯಿಂದ. ಪ್ರಕೃತಿಯು ದೇವರ ಪ್ರತಿನಿಧಿ. ನಾನು ಏನಾದರೂ ಮಾಡಬೇಕೆಂದಿದ್ದೆ. ಅದಕ್ಕಾಗಿ ಈ ಯಂತ್ರದ ಅಗತ್ಯ ನನಗೆ ಬಿತ್ತು. ದೇವರು ಪ್ರಕೃತಿಗೆ ಆದೇಶಿಸಿದ – “ಈ ಜೀವಿ ಇಂಥದೊಂದು ಕೆಲಸ ಮಾಡಲು ಹೊರಟಿದ್ದಾನೆ. ಅವನಿಗೆ ಸೂಕ್ತವಾದ ಯಂತ್ರಕೊಡು.” ಪ್ರಕೃತಿದೇವಿ ಅಂತೆಯೇ ಮಾಡಿದಳು.
ಪ್ರಕೃತಿ ನಮಗೆ ವಿಭಿನ್ನ ತರಹ ಯಂತ್ರಗಳನ್ನು ಕೊಡುತ್ತಾಳೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ. ನಾನು ಯಂತ್ರದ ಆತ್ಯಂತಿಕ ನಿಯಂತ್ರಕನಲ್ಲ. ಅಥವಾ ನಾನೇ ಯಂತ್ರವನ್ನು ತಯಾರಿಸಿಯೂ ಇಲ್ಲ. ಬದಲಾಗಿ ಈ ಯಂತ್ರವನ್ನು, ನನ್ನ ಉದ್ದೇಶ ಪೂರೈಕೆಗಾಗಿ, ಒಂದು ಕೊಡುಗೆಯ ರೂಪದಲ್ಲಿ ಕೊಡಲಾಗಿದೆ. ಇದು ನಮ್ಮ ಪರಿಸ್ಥಿತಿ.
ನೃದೇಹಂ ಆದ್ಯಂ ಸುಲಭಂ ಸುದುಲರ್ಭಂಪ್ಲವಂ ಸುಕಲ್ಪಂ – ಎಂದು ಶಾಸ್ತ್ರ ಹೇಳುತ್ತದೆ. ಈ ಮಾನವ ಶರೀರ ಒಂದು ಒಳ್ಳೆಯ ಯಂತ್ರ. ಬಹಳ ಕಷ್ಟದಿಂದ ಈ ಯಂತ್ರವನ್ನು ಪಡೆದುಕೊಂಡಿದ್ದೇವೆ. ಏಕೆಂದರೆ ಹಲವಾರು ಇತರ ಯಂತ್ರಗಳನ್ನು ಹಾಯ್ದು – ಜಲಚರಗಳು, ಸಸ್ಯಗಳು, ಕ್ರಿಮಿಕೀಟಗಳು, ಮರಗಳು, ಹಾವುಗಳು, ಸರೀಸೃಪಗಳು ಮತ್ತೆ ಪಕ್ಷಿಗಳು, ಮೃಗಗಳು – ಈ ಯಂತ್ರವನ್ನು ಪಡೆದಿದ್ದೇವೆ. ಈ ಪ್ರಕ್ರಿಯೆ ಕೋಟ್ಯನುಕೋಟಿ ವರ್ಷಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ, ನಾವು ಐದುಸಾವಿರ ವರುಷಗಳಿಗಿಂತ ಹೆಚ್ಚು ಸಮಯ ನಿಂತಿರುವ ಮರಗಳನ್ನು ನೋಡಿದ್ದೇವೆ. ಆ ತೆರನಾದ ಮರದಂಥ ಯಂತ್ರ ಸಿಕ್ಕರೆ ನೀವು ಚಲಿಸಲಾರಿರಿ. ನೀವು ಒಂದೇ ಸ್ಥಳದಲ್ಲಿ ನಿಲ್ಲಬೇಕಾಗುತ್ತದೆ. ಈ ಅವಸ್ಥೆಯಲ್ಲಿ ನಾವಿರಬೇಕಿತ್ತು. ಮೂಢರೇನು ಬಲ್ಲರು.
ಆದುದರಿಂದ ಈ ಮಾನವ ಯಂತ್ರ ಸುದುರ್ಲಭಂ. “ಹೊಂದುವುದು ದುಸ್ತರ.” ಅದು ಸುಕಲ್ಪವೂ ಕೂಡ. “ತುಂಬ ಚೆನ್ನಾಗಿ ತಯಾರಾದುದು.” ವೈದ್ಯರು ಅದರ ಅಂದವನ್ನು ಅಳೆಯಬಲ್ಲರು – ಸಕ್ರಿಯವಾದ ನರವ್ಯೂಹ, ಮಸ್ತಿಷ್ಕ, ಕರುಳು, ಹೃದಯ ಎಲ್ಲವೂ ಸೊಗಸಾಗಿ ಕಾರ್ಯನಿರ್ವಹಿಸುತ್ತಿವೆ. ಅದೊಂದು ಒಳ್ಳೆಯ ಭವ್ಯವಾದ ಯಂತ್ರ. ಹಾಗಾಗಿ ಅದು `ಸುಕಲ್ಪಂ’ ಎನಿಸಿಕೊಳ್ಳುತ್ತದೆ – “ತುಂಬ ಸೊಗಸಾಗಿ ನಿರ್ಮಿತವಾದ ಯಂತ್ರ.”
ಮತ್ತೆ, ಯಾಕಾಗಿ? ನಿಮ್ಮಲ್ಲೊಂದು ಸೊಗಸಾಗಿ ಕಟ್ಟಲಾದ ಹರಿಗೋಲು ಇದೆಯೆನ್ನಿ. ನೀವು ಅದರಲ್ಲಿ ಕುಳಿತು, ನದಿಯನ್ನೋ ಸಾಗರವನ್ನು ದಾಟಬಹುದು. ಹಾಗೆಯೇ ಮಾನುಷ ದೋಣಿಯಲ್ಲಿ ಭವಸಾಗರವನ್ನು ದಾಟಬಹುದು. ಜನ್ಮದಿಂದ ಜನ್ಮಕ್ಕೆ, ದಾಟುತ್ತ, ಈ ಸಾಗರದಲ್ಲಿ ಕಷ್ಟಪಡುತ್ತಲೇ ಇದ್ದೇವೆ. ಆದರೆ ನಮಗೆ ಸಿಕ್ಕಿರುವುದು ಒಂದು ಸೂಕ್ತವಾದ ದೋಣಿ – ಮಾನುಷ ದೋಣಿ.
ಮಾನವ ದೋಣಿ ವಿಶೇಷವಾಗಿ ತುಂಬ ಅನುಕೂಲಕರ. ಏಕೆಂದರೆ, ಅನುಕೂಲಕರವಾದ ತಂಗಾಳಿ ಬೀಸುತ್ತಿದೆ. ಆ ತಂಗಾಳಿಯೇ ಶಾಸ್ತ್ರ. ನೀವು ದೋಣಿಗೆ ಹುಟ್ಟು ಹಾಕುವಾಗ, ತಂಗಾಳಿ, ಅನುಕೂಲಕರವಾಗಿದ್ದರೆ, ಗುರಿ ತಲಪಲು ಇನ್ನು ಸುಲಭ. ಆದುದರಿಂದ ನಮಗೊಂದು ಒಳ್ಳೆಯ ಹರಿಗೋಲು, ಒಳ್ಳೆಯ ತಂಗಾಳಿ ಸಿಕ್ಕಿದೆ ಮತ್ತು ಗುರುಕರ್ಣಧಾರಂ – ಗುರು ಎಂಬ ನಾವಿಕನೇತಾ, ದೋಣಿಯನ್ನು ಋಜುಮಾರ್ಗದಲ್ಲಿ ಕೊಂಡೊಯ್ಯುತ್ತಾನೆ. ಆತ ಸೂಚನೆಗಳನ್ನು ಕೊಡುತ್ತ ಬರುತ್ತಾನೆ. “ಹೀಗೆ ಬಾ, ಬೇಗ ತಿರುಗು, ಈ ಕಡೆ, ಈಗ ಆಕಡೆ.”
ಆದುದರಿಂದ ನಮಗೆ ಸದವಕಾಶ ಸಿಕ್ಕಿದೆ. ದೋಣಿ ಸೊಗಸಾಗಿದೆ. ನಾವಿಕನೇತಾ ಸಮರ್ಥನಾದವ. ತಂಗಾಳಿ ಅನುಕೂಲಕರವಾಗಿದೆ. ಈ ಎಲ್ಲ ಸೌಲಭ್ಯಗಳನ್ನು ಪಡೆದು ನಾವು ಮೌಢ್ಯವೆಂಬ ಸಮುದ್ರವನ್ನು ದಾಟಲಿಲ್ಲವಾದರೆ, ಐಹಿಕ ವಾಸ್ತವ್ಯವೆಂಬ ಕಡಲನ್ನು ದಾಟಲಿಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ (ಸ ಆತ್ಮ ಹಾ). ನಿಮಗೆ ಎಂಥ ಮಹಾನ್ ಅವಕಾಶ ದೊರೆತಿದೆ; ಆದರೂ ನೀವಿನ್ನೂ ಭೌತಿಕ ಜಗತ್ತಿನಲ್ಲೇ ಇದ್ದೀರಿ, ಪುನಃ ಪುನಃ, ಜನನ, ವೃದ್ಧಾಪ್ಯ ರೋಗ ಮತ್ತು ಮರಣ. ಅದು ಒಳ್ಳೆಯ ಬುದ್ಧಿವಂತಿಕೆಯೇ? ಅದು ಒಳ್ಳೆಯದಲ್ಲ.
ಜನರನ್ನು ಅಡ್ಡದಾರಿಗೆ ಎಳೆಯಲಾಗಿದೆ. ಅವರು ಮಾನವ ಯಂತ್ರವನ್ನು ಅಧ್ಯಯನ ಮಾಡುತ್ತಿದ್ದಾರೆ ಅಷ್ಟೆ. ಭವಸಾಗರವನ್ನು ದಾಟಲು ಯಂತ್ರವನ್ನು ಬಳಸುವುದನ್ನು ಬಿಟ್ಟು ಅದನ್ನು ಅಧ್ಯಯನ ಮಾಡುತ್ತಿದ್ದಾರೆ. ಅದರ ಸಂಪೂರ್ಣ ಅಧ್ಯಯನವೂ ಅವರಿಂದ ಸಾಧ್ಯವಿಲ್ಲ. ನಾನು ಹೇಳಬಹುದು – `ಇದು ನನ್ನ ಶರೀರ’ `ನಿನ್ನ ತಲೆಯಲ್ಲಿ ಎಷ್ಟು ಕೂದಲಿದೆ?’ ಎಂದು ಯಾರಾದರೂ ಕೇಳಿದರೆ ನಾನು ಹೇಳಲಾರೆ. ನಾನು ಹೇಗೆ ತಿನ್ನುತ್ತಿದ್ದೇನೆ, ಅದು ದ್ರವರೂಪಕ್ಕೆ ತಿರುಗುವುದು ಹೇಗೆ, ಅದು ರಕ್ತರೂಪಕ್ಕೆ ಪರಿವರ್ತನೆ ಹೊಂದುವುದು ಹೇಗೆ, ಹೃದಯಕ್ಕೆ ರಕ್ತಪರಿಚಲನೆಯಾಗುವುದು ಹೇಗೆ, ಮತ್ತೆ ಅದೇ ರಕ್ತ ದೇಹದ ಇತರ ಭಾಗಗಳಿಗೆ ವಿತರಣೆಯಾಗುವುದು, ಹೃತ್ಕುಕ್ಷಿ, ಹೃತ್ಕವಾಟ, ಧಮನಿಗಳು – ಯಾವ ವಿಷಯವೂ ನನಗೆ ಗೊತ್ತಿಲ್ಲ. ನನ್ನದೆಲ್ಲ ಕೇವಲ ಸೈದ್ಧಾಂತಿಕ.
ಮಾನವ ಯಂತ್ರ ನಿನ್ನ ನಿಯಂತ್ರಣದಲ್ಲಿಲ್ಲ. ಅದು ದೈವನಿರ್ಮಿತ ಅಥವಾ ಪ್ರಕೃತಿ ನಿರ್ಮಿತ. ಅದೊಂದು ಸೂಕ್ಷ್ಮವಾದ ಯಂತ್ರ. ನೀವು ಬುದ್ಧಿವಂತರಾದರೆ, “ಯಂತ್ರದ ಅಧ್ಯಯನದಿಂದ ಪ್ರಯೋಜನವೇನು?” ಅಂತ ಕೇಳುವಿರಿ. “ನನ್ನಲ್ಲಿದೆ. ನಾನು ಗುರಿಮುಟ್ಟಲಿಕ್ಕೆ ಬಳಸುತ್ತೇನೆ” ಎಂದಷ್ಟೆ ಹೇಳಬಹುದು. ಅದು ಬುದ್ಧಿವಂತಿಕೆ.
ಆದರೆ, ಜನರು ಆ ಯಂತ್ರವನ್ನು ಗುರಿ ತಲಪಲು ಬಳಸದೆ ನಿರ್ಲಕ್ಷಿಸುತ್ತಾರೆ. ಬದಲಾಗಿ ಅವರು ಕೇವಲ ಅದರ ಅಧ್ಯಯನದಲ್ಲಿ ಮಾತ್ರ ತೊಡಗುತ್ತಾರೆ. ವಿಜ್ಞಾನದ ಹೆಸರಿನಲ್ಲಿ ಈಗ ನಡೆಯುತ್ತಿರುವುದು ಇದೇನೆ. ಇದೇನಿದು, ಅವಿವೇಕದ ವಿಜ್ಞಾನ? ಕೇವಲ ಯಂತ್ರದ ಅಧ್ಯಯನದಲ್ಲಿ ತೊಡಗುವುದಷ್ಟಕ್ಕೆ ಸೀಮಿತವೆ?
ಇದು ನಮ್ಮ ಪ್ರಮಾದ: ನಾವು ಅಭಿವೃದ್ಧಿ ಹೊಂದಿದ ಮಾನವಪ್ರಜ್ಞೆಯನ್ನು ಬಳಸಿ, ಮತ್ತೆ ಪರಂಧಾಮಕ್ಕೆ ತೆರಳಬೇಕು, ಆದರೆ ನಾವು ಅದರಲ್ಲಿ ತೊಡಗಿಲ್ಲ. ನಾವೇಕೆ ನಮ್ಮ ಮಾನವ ಬುದ್ಧಿವಂತಿಕೆಯನ್ನು ವ್ಯಯಗೊಳಿಸಬೇಕು? ಒಂದು ವೇಳೆ ನಿಮ್ಮ ಇಡೀ ಜೀವಮಾನಪೂರ್ತಿ, ನಿಮ್ಮ ದೇಹದ ರಚನೆಯನ್ನೆ ಅಧ್ಯಯನ ಮಾಡುತ್ತ ಕುಳಿತಿದ್ದರೆ, ನೀವು ಪಡೆಯುವುದಾದರು ಏನು? ನೀವು ನಿಮ್ಮ ದೇಹಕ್ಕೆ ಸಾವು ಬರದ ಹಾಗೆ, ಅದು ನಶಿಸಿ ಹೋಗದ ಹಾಗೆ ಸರಿಹೊಂದಿಸಬಲ್ಲಿರಾ? ಯಂತ್ರದ ಅಧ್ಯಯನದಲ್ಲಿ ತೊಡಗಿರುವ ನೀವೆಲ್ಲ ವಿಜ್ಞಾನಿಗಳು, ಸಾವಿನಿಂದ ಯಂತ್ರವನ್ನು ತಪ್ಪಿಸಿಕೊಳ್ಳಬಲ್ಲಿರಾ? ಆ ಜ್ಞಾನ ಯಾವುದು? ಸಾವು ಸಂಭವಿಸುತ್ತದೆ. ನೀವು ಯಂತ್ರವನ್ನು ಅಧ್ಯಯನ ಮಾಡುತ್ತೀರೋ ಇಲ್ಲವೋ, ಅದು ಪ್ರಶ್ನೆಯಲ್ಲ, ಕೆಲಕಾಲಾನಂತರ ಸಾವು ಬರುತ್ತದೆ, ನಿಮ್ಮನ್ನು ಕೊಂಡೊಯ್ಯುತ್ತದೆ.
ನೀವು ಒಂದು ರೋಗವನ್ನು ಸಹ ವಾಸಿಮಾಡಲಾಗುವುದಿಲ್ಲ. ಅರ್ಬುದರೋಗ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೀವ ಕಣಗಳು ಹೇಗೆ ಕಾರ್ಯಮಾಡುತ್ತಿವೆ ಎಂಬುದನ್ನೆ ಕಂಡು ಹಿಡಿಯಿರಿ. ಅವುಗಳನ್ನು ಬದಲಿಸುವುದು ಹೇಗೆಂದು ಕಂಡುಹಿಡಿಯಿರಿ. ಆಗ ಅರ್ಬುದ ರೋಗ ಹೇಳಹೆಸರಿಲ್ಲವಾಗುತ್ತದೆ. ಆಗದು, ಅದು ನಿಮ್ಮಿಂದಾಗದು. ನೀವು ಅಧ್ಯಯನ ಮುಂದುವರಿಸುತ್ತಲೆ ಇರಿ. ಕಾಲಹರಣ ಮಾಡುತ್ತಲೇ ಇರಿ.
ಶಾಸ್ತ್ರ ಹೇಳುತ್ತದೆ – `ನೀವು ಆ ರೀತಿಯಲ್ಲಿ ಕಾಲವನ್ನು ವ್ಯರ್ಥಮಾಡದಿರಿ. ಭಗವಂತನನ್ನು ಅರ್ಥಮಾಡಿಕೊಳ್ಳಿ ಈ ಉದ್ದೇಶಕ್ಕಾಗಿ ನಿಮ್ಮ ಬುದ್ಧಿವಂತಿಕೆಯನ್ನು ವಿನಿಯೋಗಿಸಿ. ಇನ್ನು ಮುಂದುವರಿದು – ತಪೋ ದಿವ್ಯಂ, …ಯೇನ ಸತ್ತ್ವಂ ಶುದ್ಧ್ಯೇತ್. – ನೀವು ತಪಶ್ಚರ್ಯೆಯಲ್ಲಿ ತೊಡಗಬೇಕು, ಅದರಿಂದ ಈ ಯಂತ್ರದಿಂದ ಮುಕ್ತರಾಗಬಹುದು. ಅದು ನಿಮ್ಮ ಕರ್ತವ್ಯ. ಯಂತ್ರವನ್ನು ಕುರಿತು ಆಲೋಚಿಸುವುದಲ್ಲ – ಯಂತ್ರದಿಂದ ಮುಕ್ತರಾಗುವುದು.
ನೀವು ಮರ್ತ್ಯಲೋಕದಲ್ಲಿರುವವರೆಗೆ ಒಂದು ಬಗೆಯ ಆಸೆ ಆಕಾಂಕ್ಷೆಗಳು ನಿಮ್ಮಲ್ಲಿ ಮೂಡುತ್ತವೆ. ಪ್ರಕೃತಿ ಒಂದು ನಮೂನೆಯ ಯಂತ್ರವನ್ನು ನಿಮಗೆ ಕೊಡುತ್ತದೆ. ಆ ಆಸೆಗಳ ಪೂರೈಕೆಯ ದಿಸೆಯಲ್ಲಿ ಬಳಸುತ್ತೀರಿ. ಯಂತ್ರ ಕುಸಿಯುತ್ತದೆ. ಮತ್ತೊಂದು ಯಂತ್ರವನ್ನು ಪಡೆದುಕೊಳ್ಳುತ್ತೀರಿ. ಇದು ಮುಂದುವರಿಯುತ್ತಲೇ ಇರುತ್ತದೆ. ನಿಮ್ಮ ಸಮಸ್ಯೆ ಏನೆಂದರೆ ಜನನದ ಪುನರಾವರ್ತನೆಯನ್ನೆ ತಡೆಯುವುದು, ವೃದ್ಧಾಪ್ಯ, ಕಾಯಿಲೆ, ಇತ್ಯಾದಿ; ಆಧ್ಯಾತ್ಮಿಕ ಜೀವನಕ್ಕೆ ಪ್ರವೇಶ ಮಾಡಿ. ಅದು ನಿಮ್ಮ ಕರ್ತವ್ಯ. ಅದು ಶಾಸ್ತ್ರದ ನಿಯಮ.
ಪ್ರತಿಯೊಬ್ಬನಿಗೂ ಯಂತ್ರಗಳನ್ನು ಕಾಪಾಡಿಕೊಳ್ಳುವುದು ಗೊತ್ತು. ನಾಯಿಗೆ ಗೊತ್ತು ತನ್ನ ಶ್ವಾನದೇಹದ ಅಗತ್ಯವೇನೆಂಬುದು. ಅದು ತನ್ನ ದೇಹದ ಬೇಡಿಕೆಗೆ ಅನುಸಾರವಾಗಿ ತಿನ್ನುತ್ತದೆ. ಅಂತೆಯೇ ನಮ್ಮ ಮಾನವ ದೇಹವನ್ನು ನಾವು ಸಂರಕ್ಷಿಸುತ್ತೇವೆ. ಅದು ಸಹಜ. ಅಗತ್ಯಗಳು ಆಗಲೇ ಪೂರೈಕೆಯಾಗಿವೆ. ನೀವು ಹೊಸದಾಗಿ ತಯಾರಿಸುವುದೇನೂ ಇಲ್ಲ. ಅದು ವೇದ ಕಲಿಸಿಕೊಡುವಂತಹುದು – ನಿತ್ಯೋನಿತ್ಯಾನಾಂ ಚೇತನಶ್ಚೇತನಾನಾಮ್ ಏಕೋ ಬಹುನಾಂ ಯೋ ವಿದಧಾತಿ ಕಾಮಾನ್ – “ಕೋಟ್ಯನುಕೋಟಿ ಜೀವರಾಶಿಗಳಿವೆ – ಆದರೆ ಒಂದೇ ಜೀವಿ ಇರುವುದು – ದೇವರು ಮಿಕ್ಕೆಲ್ಲರ ಅಗತ್ಯಗಳನ್ನು ಪೂರೈಸಲು ಸರಬರಾಜು ಮಾಡುತ್ತಿರುವನು.”
ಶ್ರೀ ಸಾಮಾನ್ಯರಿಗೆ ಕೋಟ್ಯಂತರ ಪ್ರತಿರೂಪಗಳುಂಟು. ಆದುದರಿಂದ ನಿತ್ಯಾನಾಮ್ ಎಂಬ ಪದವನ್ನು `ಶಾಶ್ವತ ಜೀವಿಗಳು’ ಎಂಬರ್ಥದಲ್ಲಿ ಬಳಸಲಾಗಿದೆ. ಶ್ರೀ ಸಾಮಾನ್ಯರು ಅಸಂಖ್ಯ. ಅಗಣ್ಯ. ಇವರೆಲ್ಲರ ಮೇಲೆ ಒಂದು ಜೀವವಿರುತ್ತದೆ. ದೇವರು ಆತನೂ ಜೀವಿಯೇ, ನಮ್ಮಂತೆಯೇ. ನಿಮ್ಮ ಬೈಬಲ್‌ನಲ್ಲಿ ಒಂದು ಮಾತು – “ದೈವದ ಪ್ರತಿಬಿಂಬವೇ ಮಾನವ. ಆದುದರಿಂದ ದೇವರು ಜೀವಿ. ಈ ಮಾನವ ರೂಪವನ್ನು ದೈವದ ಪ್ರತಿರೂಪವಾಗಿ ಸೃಷ್ಟಿಸಲಾಗಿದೆ. ಮಾನವರೂಪವೆಂಬುದು ಅನುಕರಣೆ. ಪರಮಾತ್ಮನ ರೂಪ ನೈಜ.” (ಸತ್ ಚಿತ್ ಆನಂದ ವಿಗ್ರಹ).
ನೀವು ದೇವರಿಗೆ ರೂಪವಿಲ್ಲವೆನ್ನುತ್ತೀರಿ. ಯಾಕೆ? ಮತ್ತೆ ಎಲ್ಲಿಂದ ಈ ರೂಪವನ್ನು ಪಡೆದಿರಿ? ನೀವು ಪ್ರತಿದಿನವೂ ಪ್ರಾರ್ಥನೆ ಮಾಡುವಾಗ `ಓ! ದೇವರೆ! ನಮಗೆ ದಿನನಿತ್ಯದ ರೊಟ್ಟಿ ಕೊಡು’ ಎನ್ನುತ್ತೀರಿ. ಹಾಗಾಗಿ ನೀವು ದೇವರನ್ನು ಪರಮಪಿತಾ ಎಂದು ಒಪ್ಪುತ್ತೀರಿ. ನಿಮಗೆ ರೂಪ ಇರುವುದಾದರೆ, ನಿಮ್ಮ ತಂದೆಗೆ ರೂಪವಿರಬೇಕು. ಇದು ತರ್ಕಬದ್ಧ. ಆದುದರಿಂದ ದೇವರಿಗೆ ರೂಪವಿಲ್ಲ ಎಂದು ಹೇಗೆ ಹೇಳಬಲ್ಲಿರಿ? ಅದೆಲ್ಲವೂ ಮೂರ್ಖತನ.
ಒಂದು ವೇಳೆ ತಂದೆಯ ಸಾವಿನ ಅನಂತರ ಒಂದು ಮಗು ಹುಟ್ಟಿದೆ. ಆ ಮಗು ತನ್ನ ತಂದೆಯನ್ನು ನೋಡಿಲ್ಲವೆಂಬ ಕಾರಣಕ್ಕಾಗಿ `ನನ್ನ ತಂದೆಗೆ ರೂಪವಿಲ್ಲ’ ಎಂಬ ನಿರ್ಧಾರಕ್ಕೆ ಬರಬಾರದು. ಅದು ಒಳ್ಳೆಯ ನಿರ್ಧಾರವಲ್ಲ. ಅವನ ತಾಯಿಯು ಹೇಳಬಹುದು, “ಹೌದು ಮಗುವೆ, ನಿಮ್ಮ ತಂದೆಗೆ ರೂಪವಿತ್ತು”. ಅದು ಬುದ್ಧಿವಂತಿಕೆ.
ಆದುದರಿಂದ ಭಗವಂತನು ಒಂದು ಜೀವಿ. ಆದರೆ ಆತನಿಗೂ ಇತರ ಜೀವಿಗಳಿಗೂ ಇರುವ ವ್ಯತ್ಯಾಸವೆಂದರೆ, ಅವರೆಲ್ಲರೂ ಅವನಿಗೆ ಅವಲಂಬಿತರು ಅಷ್ಟೆ. ಇದು, ಒಬ್ಬ ತಂದೆ ತನ್ನೆಲ್ಲ ಮಕ್ಕಳನ್ನು ಸಾಕಿದಂತೆ. ನಾವೆಲ್ಲರೂ ಮಕ್ಕಳಂತೆ. ನಮ್ಮ ಪರಮಪಿತಾ ನಮ್ಮನ್ನು ಸಲಹುತ್ತಾನೆ.
ಒಂದು ಮಗು ಒಂದು ಆಟದ ಮೋಟಾರು ಕಾರಿನೊಡನೆ ಆಡಲಿಷ್ಟಪಡಬಹುದು. ಮತ್ತೊಂದು ಬೊಂಬೆಯೊಡನೆ. ಪೋಷಕರು ಆ ಆಟದ ಸಾಮಾನುಗಳನ್ನು ಪೂರೈಸುತ್ತಾರೆ. ಅಂತೆಯೇ ನಾವು ಆಟವಾಡುತ್ತಿದ್ದೇವೆ. ಸುಖಪಡುವ ಯೋಜನೆಗಳನ್ನು (ತಂತ್ರ) ಹುಡುಕುತ್ತ ಮತ್ತು ದೇವರು ನಮ್ಮೆಲ್ಲ ಅಗತ್ಯಗಳನ್ನು ಸರಬರಾಜು ಮಾಡುತ್ತಿರುವನು. ಆತ ಹೇಳುತ್ತಾನೆ, “ನನ್ನ ಮುದ್ದಿನ ಮಗುವೆ ನೀನು ಈಗ ಬೆಳೆದಿದ್ದೀಯೆ. ನಿನಗೆ ಮಾನವ ದೇಹವಿದೆ. ಹೀಗೆ ಆಟವಾಡಿ ಕಾಲಹರಣ ಮಾಡಬೇಡ. ಕಲಿತು, ಎಲ್ಲವನ್ನು ಅವು ಇರುವಂತೆಯೇ ತಿಳಿ.” ಆ ಶಿಕ್ಷಣವೇ ಬ್ರಹ್ಮಜಿಜ್ಞಾಸೆ – “ಪರಮ ಸತ್ಯ ಕುರಿತ ವಿಚಾರಣೆ” ವೇದಾಂತ ಸೂತ್ರ ಹೇಳುತ್ತದೆ, “ನೀನು ಮಾನವ ಶರೀರ ಹೊತ್ತು ಜೀವಿಸುತ್ತಿದ್ದೀಯೆ. ಭಗವಂತನನ್ನು ತಿಳಿಯಲು ಪ್ರಯತ್ನಿಸು. ಅದು ನಿನ್ನ ಮುಖ್ಯ ಕರ್ತವ್ಯ.”
ದುರದೃಷ್ಟವಶಾತ್, ನಮ್ಮ ನೇತಾರರು ನಮ್ಮನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ. ನಾವು ದೇಹವನ್ನು ಅಧ್ಯಯನ ಮಾಡಲು ತೊಡಗಿದ್ದೇವೆ. ಹಾಗಾಗಿ ಇಲ್ಲಿ, – ನಿಶಮ್ಯ ಮ್ರಿಯಮಾಣಸ್ಯ ಮುಖತೋ ಹರಿಕೀರ್ತನಮ್ – ನಾವು ನಮ್ಮ ನಾಲಗೆ ಮತ್ತು ಬಾಯನ್ನು ಭಗವಂತನ ದಿವ್ಯನಾಮ ಸಂಕೀರ್ತನೆಗೆ ಬಳಸಿದಾಗ ಭಗವಂತನು ಸಂಪ್ರೀತನಾಗುತ್ತಾನೆ. ಭಗವಂತನೂ ಅವನ ನಾಮವೂ ಒಂದೇ, ಬೇರೆ ಅಲ್ಲ – `ಹರೇಕೃಷ್ಣ’ ಎಂದೊಡನೆ ಕೃಷ್ಣನ ಸಂಪರ್ಕ ಹೊಂದಿರುತ್ತೀರಿ.
ಮತ್ತೊಂದೆಡೆ ಭಾಗವತ ಹೇಳುತ್ತದೆ – ಪುಣ್ಯ ಶ್ರವಣ ಕೀರ್ತನಃ. ಶ್ರವಣ ಎಂದರೆ “ಕೇಳುವುದು” ಮತ್ತು ಕೀರ್ತನಃ ಎಂದರೆ “ಉಚ್ಚರಿಸು, ಪಠಿಸು, ಹಾಡು”. ಹಾಗಾಗಿ ಒಬ್ಬ ಭಗವನ್ನಾಮ ಸಂಕೀರ್ತನೆ ಮಾಡುತ್ತಾನೆ; ಮತ್ತೊಬ್ಬ ಕೇಳುತ್ತಾನೆ. ಇಬ್ಬರೂ ಶುದ್ಧರಾಗುತ್ತಾರೆ. ಭಗವನ್ನಾಮ ಸಂಕೀರ್ತನ ಮಾತ್ರೇಣ ಒಬ್ಬನಿಗೆ ಜನನ ಮರಣ ಬಂಧಮುಕ್ತಿ. ಉದಾಹರಣೆಯನ್ನು ಇಲ್ಲಿ ಕೊಟ್ಟಿದೆ – ಅಜಾಮಿಳ. ಅವನು ಅನೇಕ ಪಾಪಕೃತ್ಯಗಳಲ್ಲಿ ತೊಡಗಿದ್ದ. ಭೀತಿಯಿಂದಲೋ ಅಥವಾ ಅದೃಷ್ಟವಶದಿಂದಲೋ `ನಾರಾಯಣ’ ಎಂದು, ಸಾಯುವ ವೇಳೆಯಲ್ಲಿ ಉಚ್ಚರಿಸಿದ. ಕೂಡಲೇ ನಾರಾಯಣನ ಭಟರು ಬಂದು ಅವನನ್ನು ಮುಕ್ತಗೊಳಿಸಿದರು. ಇದು ಭಗವನ್ನಾಮ ಸ್ಮರಣೆಯಿಂದಾಗುವ ಮಹತ್ತರ ಲಾಭ.
ಹರೇಕೃಷ್ಣ , ಧನ್ಯವಾದಗಳು.