ಇಲ್ಲೊಂದು ಸ್ವಾರಸ್ವವಾದ ಕಥೆ ಇದೆ. ಓದಿ ಆನಂದಿಸಿ, ಆಲೋಚಿಸಿ. ರಾಜನಂತೆ ಪ್ರತಿಯೊಬ್ಬರಿಗೂ ನಾಲ್ಕು ಪತ್ನಿಯರು! ಹೇಗೆ ಎನ್ನುವಿರಾ? ಓದಿ ನೋಡಿ.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ನಾಲ್ಕು ರಾಣಿಯರು. ರಾಜನು ತನ್ನ ನಾಲ್ಕನೆಯ ರಾಣಿಯನ್ನು ತುಂಬಾ ಪ್ರೀತಿಸುತ್ತಿದ್ದ. ಅವಳಿಗೆ ಅಮೂಲ್ಯವಾದುದೆಲ್ಲವನ್ನೂ ಕೊಡುತ್ತಿದ್ದ. ಅವನು ತನ್ನ ಮೂರನೆಯ ರಾಣಿಯನ್ನೂ ಪ್ರೀತಿಸುತ್ತಿದ್ದ. ಅವಳು ತುಂಬಾ ಸುಂದರಿ. ನೆರೆಯ ರಾಜ್ಯಗಳಿಗೆ ಭೇಟಿ ನೀಡುವಾಗಲೆಲ್ಲ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದ. ಆದರೆ ಅವಳು ತನ್ನನ್ನು ಬಿಟ್ಟು ಹೋಗಬಹುದೆಂಬ ಭಯ ಅವನಿಗಿತ್ತು. ರಾಜನಿಗೆ ತನ್ನ ಎರಡನೆಯ ರಾಣಿಯಲ್ಲಿ ತುಂಬಾ ವಿಶ್ವಾಸ. ಅವಳು ಯಾವಾಗಲೂ ರಾಜನ ಮಾತನ್ನು ಕಿವಿಗೊಟ್ಟು ಕೇಳುತ್ತಿದ್ದಳು. ರಾಜನು ಸಮಸ್ಯೆಯನ್ನು ಎದುರಿಸಿದಾಗ ಅವಳಲ್ಲಿ ಸಮಾಲೋಚಿಸುತ್ತಿದ್ದ. ಅವಳು ಪರಿಹಾರ ಸೂಚಿಸುತ್ತಿದ್ದಳು. ರಾಜನ ಮೊದಲ ರಾಣಿಯು ಅತ್ಯಂತ ನಿಷ್ಠಾವಂತಳಾಗಿದ್ದಳು. ಅವನ ಸಂಪತ್ತು ಮತ್ತು ರಾಜ್ಯವನ್ನು ಕಾಪಾಡಲು ಮತ್ತು ವರ್ಧಿಸಲು ತನ್ನದೇ ಕೊಡುಗೆ ಸಲ್ಲಿಸುತ್ತಿದ್ದಳು. ಅವಳು ರಾಜನನ್ನು ತುಂಬಾ ಪ್ರೀತಿಸುತ್ತಿದ್ದರೂ ಅವನು ಅವಳತ್ತ ತಿರುಗಿಯೂ ನೋಡುತ್ತಿರಲಿಲ್ಲ!
ದಿಢೀರ್ ರಾಜನಿಗೆ ಕಾಯಿಲೆ. ಸಾವು ಸಮೀಪಿಸುತ್ತಿದೆ ಎಂದನ್ನಿಸಿತು. ತನ್ನ ವೈಭವದ ಜೀವನವನ್ನು ನೆನಪು ಮಾಡಿಕೊಂಡ. “ನಾಲ್ವರು ರಾಣಿಯರು ಇದ್ದಾರೆ. ಆದರೆ ಸತ್ತಾಗ, ಒಂಟಿಯಾಗಿಬಿಡುವೆ.” ಭಯ ಕಾಡಿತು.
ಆಗ ಅವನು ತನ್ನ ನಾಲ್ಕನೆಯ ರಾಣಿಯನ್ನು ಕರೆದು ಹೇಳಿದನು, “ನಾನು ನಿನ್ನನ್ನು ತುಂಬಾ ಪ್ರೀತಿಸಿದೆ. ಕೇಳಿದ್ದೆಲ್ಲಾ ತಂದುಕೊಟ್ಟೆ. ಈಗ ನಾನು ಸಾಯುತ್ತಿರುವೆ, ನೀನು ನನ್ನೊಡನೆ ಬರುವೆಯಾ?”
“ಇಲ್ಲವೇ ಇಲ್ಲ!” ಎಂದು ಹೇಳಿ ಅವಳು ನಡೆದುಬಿಟ್ಟಳು. ಅವಳ ನಡೆ ಅವನ ಹೃದಯವನ್ನು ಇರಿಯಿತು.
ಅನಂತರ ರಾಜನು ಮೂರನೆಯ ರಾಣಿಯನ್ನು ಕರೆಸಿದ. ಅವಳಿಗೂ ತನ್ನ ಪರಿಸ್ಥಿತಿ ವಿವರಿಸಿ ಹೇಳಿದ, “ನಾನು ನಿನ್ನನ್ನು ತುಂಬಾ ಪ್ರೀತಿಸಿದೆ. ನೀನು ನನ್ನೊಂದಿಗೆ ಬರುವೆಯಾ?”
“ನೀನು ಸತ್ತ ಮೇಲೆ ಬೇರೆ ಮದುವೆಯಾಗುವೆ” ಎಂದು ನೇರವಾಗಿ ಹೇಳಿ ಹೊರಟುಹೋದಳು. ರಾಜನಿಗೆ ಆಘಾತ.
ಈಗ ಎರಡನೆಯ ರಾಣಿಯ ಸರದಿ. ಅವಳು ಅವನ ಆಪ್ತ ಸಲಹೆಗಾರಳಲ್ಲವೇ? ರಾಜ ಅವಳಿಗೆ ಹೇಳಿದ, “ನಾನು ಯಾವಾಗ ಕೇಳಿದರೂ ನೀನು ಸಹಾಯ ಮಾಡಿರುವೆ. ಈಗ ನನ್ನೊಡನೆ ಬರುವೆಯಾ?”
ಅವಳು ಉತ್ತರಿಸಿದಳು, “ಕ್ಷಮಿಸಿ, ಈ ಬಾರಿ ಸಹಾಯ ಮಾಡಲಾರೆ! ಹೆಚ್ಚೆಂದರೆ, ಸ್ಮಶಾನದವರೆಗೆ ಬರಬಹುದು, ಅಷ್ಟೆ.” ಅವಳ ಮಾತು ರಾಜನಿಗೆ ಸಿಡಿಲು ಬಡಿದಂತಾಯಿತು.
ಆಗ ಒಂದು ಧ್ವನಿ ಕೇಳಿ ಬಂದಿತು, “ನಾನು ಬರುವೆ. ನೀವು ಎಲ್ಲಿಗೆ ಹೋದರೂ ಅಲ್ಲಿಗೆ ಬರುವೆ!”
ರಾಜನು ತಲೆ ಎತ್ತಿ ನೋಡಿದನು. ಅವನ ಮೊದಲ ರಾಣಿ ಅಲ್ಲಿದ್ದಳು. ಸಾಕಷ್ಟು ಆಹಾರವಿಲ್ಲದೆ ಮತ್ತು ನಿರ್ಲಕ್ಷ್ಯದಿಂದ ಅವಳು ತೀರಾ ತೆಳ್ಳಗಾಗಿದ್ದಳು. ದುಃಖತಪ್ತನಾದ ರಾಜನು ಹೇಳಿದ, “ನಾನು ನಿನ್ನ ಕಾಳಜಿ ವಹಿಸಬೇಕಾಗಿತ್ತು!”
ವಾಸ್ತವವಾಗಿ ನಮ್ಮೆಲ್ಲರ ಬದುಕಿನಲ್ಲಿಯೂ ನಾಲ್ವರು ಹೆಂಡತಿಯರು! ಹೇಗೆಂದು ನೋಡಿ…
ನಮ್ಮ ಶರೀರ ನಮ್ಮ ನಾಲ್ಕನೆಯ ಪತ್ನಿ. ನಾವು ಅದನ್ನು ಎಷ್ಟೇ ಪೋಷಿಸಿದರೂ ಅದನ್ನು ಸುಂದರವಾಗಿರಿಸಲು ಪ್ರಯತ್ನಿಸಿದರೂ ನಾವು ಸತ್ತಾಗ ಅದು ನಮ್ಮನ್ನು ಬಿಟ್ಟು ಹೋಗುತ್ತದೆ. ನಮ್ಮ ಸಂಪತ್ತು ಮತ್ತು ಸ್ಥಾನಮಾನವೇ ಮೂರನೆಯ ಪತ್ನಿ. ನಾವು ಸತ್ತಾಗ ಅದು ಬೇರೆಯವರಿಗೆ ಹೋಗುತ್ತದೆ. ನಮ್ಮ ಕುಟುಂಬ ಮತ್ತು ಮಿತ್ರರೇ ಎರಡನೆಯ ಪತ್ನಿ. ನಾವು ಅವರಿಗಾಗಿ ಎಷ್ಟೇ ಮಾಡಿದರೂ ಸ್ಮಶಾನದವರೆಗೆ ಮಾತ್ರ ನಮ್ಮೊಂದಿಗೆ ಅವರು ಬರಬಲ್ಲರು.
ಇನ್ನು ಮೊದಲನೆಯ ಪತ್ನಿ ಯಾರೆಂದು ಊಹಿಸುವಿರಾ? ಅದುವೇ ನಮ್ಮ ಆತ್ಮ. ಸಂಪತ್ತು, ಅಧಿಕಾರ ಮತ್ತು ಲೌಕಿಕದಲ್ಲಿ ಆನಂದ ಅನುಭವಿಸಲು ನಾವು ಆತ್ಮವನ್ನು ನಿರ್ಲಕ್ಷಿಸುತ್ತೇವೆ. ಆದರೂ ಆತ್ಮ ಮಾತ್ರ ಶಾಶ್ವತ. ಅದು ಸದಾ ನಮ್ಮೊಂದಿಗೇ ಇರುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, “ಆತ್ಮಕ್ಕೆ ಎಂದಿಗೂ ಹುಟ್ಟು ಎನ್ನುವುದಿಲ್ಲ, ಸಾವು ಎನ್ನುವುದಿಲ್ಲ. ಅದು ಹಿಂದೆ ಹುಟ್ಟಿದ್ದಿಲ್ಲ, ಈಗ ಹುಟ್ಟಿ ಬರುವುದಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮರಹಿತವಾದುದು, ನಿತ್ಯವಾದುದು, ಶಾಶ್ವತವಾದುದು, ಪುರಾತನವಾದುದು. ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.“ (2.20)
ಆದುದರಿಂದ ಇದು ಆತ್ಮ ಸಾಕ್ಷಾತ್ಕಾರವನ್ನು ಕಂಡುಕೊಳ್ಳುವ ಸಮಯ. ಆತ್ಮ ಸಾಕ್ಷಾತ್ಕಾರವೆಂದರೆ, ಪರಮಾತ್ಮನೊಂದಿಗೆ ನಮ್ಮ ಬಾಂಧವ್ಯದ ಸಹಜ ಸ್ವರೂಪವನ್ನು ಅರಿತುಕೊಳ್ಳುವುದು, ಅಲೌಕಿಕ ಸೇವೆಯನ್ನು ಸಲ್ಲಿಸುವುದು. ಯೋಚಿಸಿ.