ಇದೇ ಜವಾಬ್ದಾರಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಕೆಲವು ಶಿಷ್ಯರ ನಡುವೆ, 1975ರ ಆಗಸ್ಟ್‌ನಲ್ಲಿ, ಪ್ಯಾರಿಸ್‌ನಲ್ಲಿ ಬೆಳಗಿನ ವಾಯು ವಿಹಾರ ಸಂದರ್ಭದಲ್ಲಿ ನಡೆದ ಸಂವಾದ

ಭಕ್ತ: ಶ್ರೀಲ ಪ್ರಭುಪಾದರೇ, ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಲು ನಾವು ಕಾಲೇಜು ಅಥವಾ ಕೆಲಸವನ್ನು ತ್ಯಜಿಸಿರುವುದರಿಂದ ನಾವು ಬೇಜವಾಬ್ದಾರಾರೆಂದು ಅನೇಕ ಮಂದಿ ಹೇಳುತ್ತಾರಲ್ಲ.

ಶ್ರೀಲ ಪ್ರಭುಪಾದ: ನಾವು ಬೇಜವಾಬ್ದಾರರಲ್ಲ. ಆದರೆ ನಾವು ಎಂತಹ ಸ್ಥಾನದಲ್ಲಿ ಇದ್ದೇವೆ ಎಂದರೆ, ನಾವು ಎಲ್ಲ ಲೌಕಿಕ ಹೊಣೆಗಳನ್ನು ದಾಟಿಬಿಟ್ಟಿದ್ದೇವೆ. ಇದನ್ನು ಭಾಗವತದಲ್ಲಿಯೇ ಹೇಳಲಾಗಿದೆ (11.5.41): ದೇವರ್ಷಿ ಭೂತಾಪ್ತ ನೃಣಾಂ ಪಿತೃಣಾಂ ನ ಕಿಂಕರೋ ನಾಯಮೃಣೀ ಚ ರಾಜನ್‌ ಯಾರು ಕೃಷ್ಣನಿಗೆ ಸಂಪೂರ್ಣವಾಗಿ ಶರಣಾಗಿರುವರೋ ಅವರು ದೇವತೆಗಳು, ಋಷಿಗಳು, ಬಂಧುಗಳು, ಸಮಾಜ – ಯಾರಿಗೂ ಜವಾಬ್ದಾರರಲ್ಲ. ನೀವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿಲ್ಲದಿದ್ದರೆ, ಈ ಎಲ್ಲ ವ್ಯಕ್ತಿಗಳ ಬಗೆಗೆ ನಿಮಗೆ ಜವಾಬ್ದಾರಿ ಇರುತ್ತದೆ. ಆದರೆ ಯಾವುದೇ ನಿಬಂಧನೆ ಇಲ್ಲದೆ ಕೃಷ್ಣ ಪ್ರಜ್ಞೆಯಲ್ಲಿ ಇರುವವರಿಗೆ ಯಾವುದೇ ಲೌಕಿಕ ಕರ್ತವ್ಯ, ಲೌಕಿಕ ಜವಾಬ್ದಾರಿ ಇರುವುದಿಲ್ಲ. ಇದನ್ನು ಶ್ರೀಮದ್‌ ಭಾಗವತದಲ್ಲಿಯೇ ಹೇಳಲಾಗಿದೆ. ನಮ್ಮ ಏಕೈಕ ಜವಾಬ್ದಾರಿ ಎಂದರೆ ಕೃಷ್ಣನ ಸೇವೆಗೈಯುವುದು.

ಭಕ್ತ: ಹಾಗಾದರೆ, ಪ್ರಭುಪಾದರೆ, ನಿನ್ನೆ ರಾತ್ರಿ ನೀವು ಆ ಅತಿಥಿಗೆ ಹೇಳಿದಿರಲ್ಲಾ, ಆಕೆ ಎಲ್ಲ ಜವಾಬ್ದಾರಿಗಳನ್ನು ಬಿಟ್ಟುಬಿಡಬೇಕೆಂದು…

ಶ್ರೀಲ ಪ್ರಭುಪಾದ: ಮತ್ತು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಿ. ನೀವು ಎಲ್ಲ ಜವಾಬ್ದಾರಿಗಳನ್ನು ಬಿಟ್ಟು ಏನೂ ಮಾಡಬಾರದು ಎಂಬುದಲ್ಲ. ಮೊದಲು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಿ. ಸ್ವಲ್ಪ ಬಿಡಿ, ಸ್ವಲ್ಪ ಪಡೆದುಕೊಳ್ಳಿ. ಆಗ ಅದು ಸರಿಹೋಗುತ್ತದೆ.

ಭಕ್ತ: ಶ್ರೀಲ ಪ್ರಭುಪಾದರೇ, ಕೃಷ್ಣನನ್ನು ಕುರಿತಂತೆ ನಮ್ಮ ಜವಾಬ್ದಾರಿಗಳ ಬಗೆಗೆ ನೀವು ಹೇಳಿದಿರಿ. ಅದರಲ್ಲಿ ಲೌಕಿಕ ಅಂಶವೂ ಇದೆಯಲ್ಲವೇ? ಉದಾಹರಣೆಗೆ, ನಮ್ಮ ಆಂದೋಲನದಲ್ಲಿ ಪೋಷಕರು ತಮ್ಮ ಮಕ್ಕಳ ಪಾಲನೆ ಪೋಷಣೆಯೂ ಮಾಡಬೇಕಲ್ಲವೇ? ಅಂದರೆ, ಅವರ ಓದಿನ ಕಡೆ ಗಮನ ಕೊಡಬೇಕು, ಬರೆಯಲು ತರಬೇತಿ ನೀಡಬೇಕು ಇವೇ ಮುಂತಾದ ಜವಾಬ್ದಾರಿಗಳು ಇರುತ್ತವೆ.

ಶ್ರೀಲ ಪ್ರಭುಪಾದ: ಹೌದು. ಆದರೆ ನಾವು ಮಕ್ಕಳ ಪಾಲನೆ ಪೋಷಣೆ ಏಕೆ ಮಾಡುತ್ತೇವೆ? ಅವರಲ್ಲಿ ಕೃಷ್ಣ ಪ್ರಜ್ಞೆ ಉಂಟುಮಾಡಲು. ಕೃಷ್ಣ ಪ್ರಜ್ಞೆಯಲ್ಲಿ ಇದು ನಮ್ಮ ಜವಾಬ್ದಾರಿ. `ಇವನು ನಮ್ಮ ಮಗು. ಅವನಲ್ಲಿ ಕೃಷ್ಣ  ಪ್ರಜ್ಞೆ ಮೂಡಿಸೋಣ’, ಎಂದು ನಾವು ಯೋಚಿಸಬೇಕು. ಆದುದರಿಂದಲೇ ಗುರುಕುಲಗಳಲ್ಲಿ (ಕೃಷ್ಣ ಪ್ರಜ್ಞೆ ಶಾಲೆಗಳು) ನಾವು ನಮ್ಮ ಮಕ್ಕಳಿಗೆ ತರಬೇತಿ ನೀಡಲು ಹೆಚ್ಚಿನ ನಿಗಾ ವಹಿಸಿರುವುದು. ನಾವು ಬೇಜವಾಬ್ದಾರರಲ್ಲ.

ಭಕ್ತ: ಕೃಷ್ಣನಿಗೆ ಶರಣಾಗುವುದರ ಮೂಲಕ ನಾವು ನಮ್ಮ ಎಲ್ಲ ಲೌಕಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ್ದೇವೆ, ಎಂದಾಗ ನಾವು ಕರ್ತವ್ಯ ಪಾಲನೆಯನ್ನು ಬದಿಗೊತ್ತಿದಂತೆಯೇ?

ಶ್ರೀಲ ಪ್ರಭುಪಾದ: ಇಲ್ಲ. ಯಾರು ಹಾಗೆ ಹೇಳುತ್ತಾರೆ?

ಭಕ್ತ: ಹಾಗೆಂದು ಕೆಲವರು ಹೇಳುತ್ತಾರೆ. ನಾವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿದ್ದೇವೆ, ನಾವು ಈಗ ನಮ್ಮ ಎಲ್ಲ ಸಾಮಾಜಿಕ ಕರ್ತವ್ಯಗಳನ್ನು ಬಿಟ್ಟುಬಿಟ್ಟಿದ್ದೇವೆ ಎಂಬುವುದು ಅವರ ಅಂಬೋಣ.

ಶ್ರೀಲ ಪ್ರಭುಪಾದ: ಕೃಷ್ಣ ಪ್ರಜ್ಞೆಯನ್ನು ಹರಡುವುದೇ ಮುಖ್ಯವಾದ ಸಾಮಾಜಿಕ ಕರ್ತವ್ಯ. ಮಾನವ ಜೀವನದ ಮುಖ್ಯ ಕರ್ತವ್ಯವೂ ಇದೇ. ಕೃಷ್ಣ ಏನು ಹೇಳಿದ್ದಾನೆ, ನೋಡಿ : ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ – `ಇತರ ಎಲ್ಲ ಕರ್ತವ್ಯಗಳನ್ನು ಪರಿತ್ಯಜಿಸು ಮತ್ತು ನನಗೆ ಶರಣಾಗು.’ ಅದರಂತೆ ನಾವು ಕೃಷ್ಣನಿಗೆ ಶರಣಾಗಿದ್ದೇವೆ, ಕೃಷ್ಣ ಪ್ರಜ್ಞೆ ಆಂದೋಲನವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತಿದ್ದೇವೆ. ನೋಡಿ, ನಾನು ವೃದ್ಧ. ಆದರೂ ನಾನು ವರ್ಷಕ್ಕೆ ಮೂರು ಬಾರಿ ವಿಶ್ವಾದ್ಯಂತ ಪ್ರವಾಸ ಮಾಡುವೆ. ಇನ್ಯಾರು ಅಂತಹ ಹೊಣೆ ನಿಭಾಯಿಸುತ್ತಾರೆ? ಕೃಷ್ಣ ಪ್ರಜ್ಞೆಯಲ್ಲಿ ನಮಗೆ ಹೆಚ್ಚಿನ ಜವಾಬ್ದಾರಿ ಇದೆ. ಇದು ಹೇಗೆಂದರೆ, ನೀವು ದೊಡ್ಡ ಅಧಿಕಾರಿಯಾದರೆ ನಿಮಗೆ ಹೊಣೆ ಹೆಚ್ಚಾಗುತ್ತದೆ.

ಲೌಕಿಕ ಜವಾಬ್ದಾರಿಗಳ ಪಾಲನೆ ನಿಷ್ಪ್ರಯೋಜಕ. ಕಾಲ ವ್ಯರ್ಥವಷ್ಟೆ. ಕೃಷ್ಣ ಪ್ರಜ್ಞೆಯಲ್ಲಿಯೇ ನಿಜವಾದ ಹೊಣೆಗಾರಿಕೆ ಇರುವುದು. ಕಳೆದ ರಾತ್ರಿ ನಾನು ಇದನ್ನು ಆ ಅತಿಥಿಗೆ ವಿವರಿಸಿದೆ. ಆಯಿತು, ನೀವು ಜವಾಬ್ದಾರಿ ತೆಗೆದುಕೊಳ್ಳುವುದೇ ಅದರೆ, ನೀವೇನು ಮಾಡಬಲ್ಲಿರಿ? ನಿಮಗೆ ಏನೂ ಮಾಡಲು ಸಾಧ್ಯವಾಗದು. ನಿಮ್ಮ ಮಗನಿಗೆ ಕಾಯಿಲೆ ಎಂದುಕೊಳ್ಳಿ. ಅವನು ನೋವು ಅನುಭವಿಸುತ್ತಿದ್ದಾನೆ, ಅವನ ಕಾಯಿಲೆ ಗುಣ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ನೀವು ಹೊತ್ತಿದ್ದೀರಿ. ನೀವು ಉತ್ತಮ ವೈದ್ಯರನ್ನು ಕರೆತರುವಿರಿ, ಒಳ್ಳೆಯ ಔಷಧ ನೀಡುವಿರಿ. ಆದರೆ ಏನೇ ಮಾಡಿದರೂ ನಿಮ್ಮ ಪ್ರಯತ್ನ ಫಲಕಾರಿಯಾಗದೆ ನಿಮ್ಮ ಮಗ ಮರಣಹೊಂದುತ್ತಾನೆ. ಆಗ, ನಿಮ್ಮ ಜವಾಬ್ದಾರಿಯ ಮೌಲ್ಯವಾದರೂ ಏನು? ವಾಸ್ತವವಾಗಿ ನಿಮಗೆ ಏನೂ ಮಾಡಲಾಗದು. ಆದುದರಿಂದ. `ನನ್ನ ಹೊಣೆ’ ಎಂದು ಹೇಳುವುದರಲ್ಲಿ ಏನು ಪ್ರಯೋಜನವಿದೆ?

ಅಂಧಾ ಯತಾಂಧೈರ್‌ ಉಪನಿಯಮಾನಾಃ ಒಬ್ಬ ಅಂಧ ಹೇಳುತ್ತಾನೆ, `ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.  ಇತರ ಅಂಧರಾದ ನೀವು ನನ್ನನ್ನು ಅನುಸರಿಸಿ, ಬನ್ನಿ’ . ಅಂತಹ ಜವಾಬ್ದಾರಿಯಿಂದ ಏನು ಉಪಯೋಗ, ಹೇಳಿ? ಈ ನಾಯಕ ಮತ್ತು ಅವನ ಹಿಂಬಾಲಕರು ಹಳ್ಳಕ್ಕೆ ಬೀಳುತ್ತಾರೆ, ಅಷ್ಟೆ. ಅದೇ ರೀತಿ ವಿಶ್ವ ನಾಯಕರು ಹೇಳುವುದನ್ನು ಕೇಳಿ – `ನನ್ನನ್ನು ಅನುಸರಿಸಿ, ಬನ್ನಿ. ನಾನು ಹೊಣೆ ಹೊರುವೆ. ನಾನು ಶಾಂತಿ ತರುವೆ.’ ಆದರೆ ಯುದ್ಧವಾದಾಗ, ಸಾವಿರಾರು ಯೋಧರು ಸತ್ತಾಗ ಈ ನಾಯಕರ ಜವಾಬ್ದಾರಿ ಎಲ್ಲಿರುತ್ತದೆ? ಒಂದು ಅಣು ಬಾಂಬ್‌ ಹಾಕಿದರೆ, ಸಾವಿರಾರು ಮಂದಿಯ ಜೀವ ಮುಗಿದು ಹೋಗುತ್ತದೆ. ನಾಯಕರ ಹೊಣೆಗಾರಿಕೆ ಎಲ್ಲಿದೆ? ಅವರಿಂದ ಶಾಂತಿ ತರಲಾಗದು. ಅವರಿಂದ ಏನು ಸಾಧ್ಯ? `ಈ ಯೋಧ ಅಮರ’ ಎಂಬ ಸ್ಮಾರಕ ಮಾಡುತ್ತಾರಷ್ಟೆ. ಆದರೆ ಅವರು ಜನರನ್ನು ಸಾವಿನಿಂದ ರಕ್ಷಿಸುವುದು ಸಾಧ್ಯವಿಲ್ಲ.

ಭಕ್ತ: ನಾವೂ, ಭಕ್ತರೂ, ಸಾಯಲೇ ಬೇಕಲ್ಲವೆ ಎಂದೂ ಆ ಜನರು ಹೇಳುತ್ತಾರೆ. ಪ್ರತಿಯೊಬ್ಬರೂ ಸಾಯಲೇ ಬೇಕು.

ಶ್ರೀಲ ಪ್ರಭುಪಾದ: ಹೌದು. ಆದರೆ ನಾವು ಸತ್ತರೂ ಸದಾ ಬದುಕಿರುತ್ತೇವೆ. ತ್ಯಕ್ತ್ವ ದೇಹಂ ಪುನರ್‌ ಜನ್ಮ ನೈತಿ. ಇದು ನಮ್ಮ ಕೊನೆಯ ಸಾವು.

ಭಕ್ತ: ಆಗ ಅವರು ಕೇಳುತ್ತಾರೆ, `ನಿಮಗೆ ಹೇಗೆ ಗೊತ್ತು’?

ಶ್ರೀಲ ಪ್ರಭುಪಾದ: ನನ್ನ ಶಿಷ್ಯನಾಗು, ಆಗ ನಿನಗೂ ಗೊತ್ತಾಗುತ್ತದೆ. ಆದುದರಿಂದ ಈ ವೈದಿಕ ಸೂಚನೆ ಅನುಸರಿಸಬೇಕು: ತದ್‌ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್‌. ಮೂರ್ಖನಾಗಿರುವುದರಿಂದ, ಮೂಢನಾಗಿರುವುದರಿಂದ ನೀನು ಗುರುವಿನತ್ತ ಹೋಗಲೇ ಬೇಕು. ಪರಮ ಸತ್ಯ ಅರಿಯಲು ಅದೊಂದೇ ಮಾರ್ಗ. ಇಲ್ಲವಾದರೆ, ಶಾಶ್ವತ ಬದುಕಿನ ಬಗೆಗೆ ಅರಿಯುವುದು ಸಾಧ್ಯವೇ ಇಲ್ಲ. ಆಗ ನೀವು ನಿಮ್ಮ ಜೀವನವಿಡೀ ಮೂರ್ಖರಾಗಿಯೇ ಉಳಿಯುತ್ತೀರಿ ಮತ್ತು ಸಂಕಷ್ಟ ಅನುಭವಿಸುತ್ತೀರಿ.

ಭಕ್ತ: ಹಾಗಾದರೆ, ಕೃಷ್ಣ ಪ್ರಜ್ಞೆಯಲ್ಲಿ ನೀವು ಜವಾಬ್ದಾರಿಯನ್ನು ಹೇಗೆ ನಿರೂಪಿಸುವಿರಿ?

ಶ್ರೀಲ ಪ್ರಭುಪಾದ:  ನಿಮಗೆ ಈ ಮಾನವ ರೂಪದ ಬದುಕಿದೆ : ಭಗವಂತನನ್ನು ಅರಿತುಕೊಳ್ಳಿ. ಇದು ಜವಾಬ್ದಾರಿ. ಇಲ್ಲವಾದರೆ ನಿಮ್ಮ ಕತೆ ಮುಗಿದಂತೆ. ಭಗವಂತನನ್ನು ಅರ್ಥಮಾಡಿಕೊಳ್ಳುವುದೊಂದೇ ನಿಮ್ಮ ಹೊಣೆಗಾರಿಕೆ. ವೈದಿಕ ಸಂಸ್ಕೃತಿ ಇರುವುದು ಭಗವಂತನನ್ನು ಅರ್ಥಮಾಡಿಕೊಳ್ಳಲೆಂದು. ಈ ಹಿಂದೆ ಅನೇಕ ರಾಜಮಹಾರಾಜರು ದೇವರನ್ನು ಅರಿತುಕೊಳ್ಳಲೆಂದೇ ತಮ್ಮದೆಲ್ಲವನ್ನೂ ತ್ಯಜಿಸಿ ಅರಣ್ಯಕ್ಕೆ ಹೋದರು. ಭಾರತವನ್ನು ಭರತವರ್ಷ ಎನ್ನುತ್ತಾರಲ್ಲವೆ? ಆ ಹೆಸರು ಬಂದದ್ದು ಭರತ ಮಹಾರಾಜನಿಂದ. ಸಾವಿರಾರು ವರ್ಷಗಳ ಹಿಂದೆ ಅವನು ಚಕ್ರವರ್ತಿಯಾಗಿದ್ದ. ಭಗವಂತನನ್ನು ಅರಿಯಲು ಅವನು ಎಲ್ಲವನ್ನೂ ತ್ಯಜಿಸಿ ಹೋದ. ಆಗ ಅವನ ಪ್ರಾಯ ಕೇವಲ 24 ವರ್ಷ. ಇದೇ ವೈದಿಕ ಸಂಸ್ಕೃತಿ.  ಶ್ರೀ ಚೈತನ್ಯ ಮಹಾಪ್ರಭುಗಳ ವಿಷಯವನ್ನೇ ತೆಗೆದುಕೊಳ್ಳಿ.  ಗೃಹಸ್ಥರಾಗಿ ಅವರಿಗೆ ಉತ್ತಮ ಸ್ಥಾನಮಾನಗಳಿದ್ದವು. ಸುಂದರ ಪತ್ನಿ ಇದ್ದಳು. ವಾತ್ಸಲ್ಯದ ತಾಯಿ, ಒಳ್ಳೆಯ ಮಿತ್ರರು ಎಲ್ಲರೂ ಇದ್ದರು. ಅವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರು. ಅಗಾಧ ಪಾಂಡಿತ್ಯ ಹೊಂದಿದ್ದರು. ಸ್ವತಃ ಅವರೇ ದೇವರು. ಆದರೂ ಅವರು ಎಲ್ಲವನ್ನೂ ತ್ಯಜಿಸಿ ಹೊರಟರು. ಏಕೆ ಭಗವಂತನನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ನಮಗೆ ಬೋಧಿಸಲು. ಇದೇ ವೇದ ಸಂಸ್ಕೃತಿ.

ನೀನು `ಜವಾಬ್ದಾರಿಯ ವಿವರ’ ಕೇಳಿದೆಯಲ್ಲವೇ? ಈಗ ನಿನಗೆ ಜವಾಬ್ದಾರಿ ಎಂದರೆ ಏನೆಂದು ಅರ್ಥವಾಯಿತೆ?

ಭಕ್ತ: ನಮಗೆ ಈ ಮಾನವ ಜೀವನ ಇದೆ; ನಾವು ಈಗ ಭಗವಂತನನ್ನು ಅರ್ಥಮಾಡಿಕೊಳ್ಳಬೇಕು.

ಶ್ರೀಲ ಪ್ರಭುಪಾದ: ಹೌದು, ಒಂಬತ್ತು ಪದಗಳು. ಇಡೀ ಜವಾಬ್ದಾರಿಯನ್ನು ನಾವು ಒಂಭತ್ತು ಪದಗಳಲ್ಲಿ ವಿವರಿಸುತ್ತೇವೆ. ಆ ಮೂರ್ಖರೂ ಇದನ್ನು ಅರ್ಥಮಾಡಿಕೊಳ್ಳಲಿ.

ಈ ಲೇಖನ ಶೇರ್ ಮಾಡಿ