ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಓರ್ವ ಪದವೀಧರ ವಿದ್ಯಾರ್ಥಿಯ ನಡುವೆ 1974ರ ಜನವರಿಯಲ್ಲಿ ಲಾಸ್‌ಏಂಜಲೀಸ್‌ನ ಶಾಂತಸಾಗರ ತೀರದಲ್ಲಿ ನಡೆದ ಸಂವಾದ.
ವಿದ್ಯಾರ್ಥಿ: ಇಂದಿನ ವಿಜ್ಞಾನಿಗಳು, ದಾರ್ಶನಿಕರು ಮತ್ತು ಮನೋವಿಜ್ಞಾನಿಗಳು ತಮ್ಮ ಮನಸ್ಸೇ ಅಧಿಕೃತ ವಾಣಿಯೆಂದು ತಾವು ಅದನ್ನೇ ಒಪ್ಪುವುದಾಗಿ ಹೇಳುತ್ತಾರೆ.
ಶ್ರೀಲ ಪ್ರಭುಪಾದ: ಸಂಸ್ಕೃತದಲ್ಲಿ ಅಂಥವರನ್ನು ಮನೋಧರ್ಮಿ ಎನ್ನುತ್ತಾರೆ – ಬೌದ್ಧಿಕ ಊಹನಕಾರ.
ವಿದ್ಯಾರ್ಥಿ: ಆದರೆ ಈ ಜಗತ್ತನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ, ವಿಭಿನ್ನ ಬೌದ್ಧಿಕ ದೃಷ್ಟಿಕೋನಗಳನ್ನು ಪ್ರಯೋಗಕ್ಕೆ ಒಡ್ಡಬೇಕಲ್ಲವೆ?
ಶ್ರೀಲ ಪ್ರಭುಪಾದ: ವಾಸ್ತವ ಸಂಗತಿಯೆಂದರೆ ಬೌದ್ಧಿಕ (ದೃಷ್ಟಿಕೋನದ) ಊಹನಕಾರರು ಖಂಡನೆಗೆ ಒಳಗಾಗಿದ್ದಾರೆ – ಮನೋರಥೇನಾಸತಿ ಧಾವತೋ ಬಹಿಃ (ಶ್ರೀಮದ್ ಭಾಗವತ: 5.18.12)- ಏಕೆಂದರೆ ಅವರು ಮನಸ್ಸೆಂಬ ರಥದಲ್ಲಿ ಕುಳಿತು, ಅದು ಒಯ್ದಲ್ಲಿಗೆ ಹೋಗುತ್ತಾರೆ. ಮನಸ್ಸು ಚಂಚಲ, ಸದಾ ಬದಲಾಗುತ್ತಿರುತ್ತದೆ. ಸಂಕಲ್ಪ ವಿಕಲ್ಪ : ಮನಸ್ಸಿನ ಕೆಲಸವೇನೆಂದರೆ, ಏನನ್ನಾದರೊಂದನ್ನು ಸ್ವೀಕರಿಸುವುದು ಮತ್ತು ಪುನಃ ಅದನ್ನೇ ತಿರಸ್ಕರಿಸುವುದು. ಈ ಎಲ್ಲ ಮನೋ ಊಹನಕಾರರು ಮಾಡುತ್ತಿರುವುದು ಇದೆ. ಯಾರೋ ಒಬ್ಬ ಒಂದು ಸಿದ್ಧಾಂತವನ್ನು ಮಂಡಿಸುತ್ತಾನೆ. ಕೆಲವು ವರ್ಷಗಳ ಅನಂತರ ಆತನೇ ತಿರಸ್ಕರಿಸುತ್ತಾನೆ; ಅಥವಾ ಮತ್ತಾವನೋ ತಿರಸ್ಕರಿಸುತ್ತಾನೆ. ಆದುದರಿಂದ ಮನೋಊಹನದಿಂದ ನೀವು ಭೌತಿಕ ನೆಲೆಯಲ್ಲಿ, ಪರಿವರ್ತನೆಯ ನೆಲೆಯಲ್ಲಿ ಇರುವಿರಿ. ನಿಮಗೆ ಶಾಶ್ವತವಾದ ತಿಳಿವು ಸಿಕ್ಕದು.
ವಿದ್ಯಾರ್ಥಿ: ಆದರೆ ವಿಜ್ಞಾನಿಗಳಿಗೆ ತಮ್ಮ ಸಂಶೋಧನೆಯ ಬಗ್ಗೆ ಗಾಢ ನಂಬಿಕೆ ಇದೆ. ಅವರು ಜಗತ್ತಿಗೆ ನಿಜವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ನಂಬಿದ್ದಾರೆ.
ಶ್ರೀಲ ಪ್ರಭುಪಾದ: ಅವರು ಹೀಗೆಂದುಕೊಳ್ಳುತ್ತಾರೆ, ಇದು ಕೆಟ್ಟದು, ಅದು ಒಳ್ಳೆಯದು. ಆದರೆ ಅವರಿಗೆ ತಿಳಿಯದೇ ಇರುವುದೇನೆಂದರೆ, ಈ ಭೌತಿಕ ಜಗತ್ತಿನಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದು ಎಲ್ಲವೂ ಮಾನಸಿಕ ಊಹಾಪೋಹ, ತಪ್ಪು. ಏಕೆಂದರೆ, ಎರಡು ಭೌತಿಕ ವಸ್ತು ಅಷ್ಟೆ.
ವಿದ್ಯಾರ್ಥಿ: ಕೆಟ್ಟದು ಮತ್ತು ಒಳ್ಳೆಯದು ಎರಡೂ ಒಂದೆ ಎಂದು ಹೇಗೆ ಹೇಳುತ್ತೀರಿ?
ಶ್ರೀಲ ಪ್ರಭುಪಾದ: ಉದಾಹರಣೆಗೆ, ನಾವು ರಸ್ತೆಯಲ್ಲಿ ತಿರುಗಾಡುವಾಗ, ಕೆಲವೊಮ್ಮೆ – “ಇದು ತುಂಬಾ ಚೆನ್ನು” ಎನ್ನುತ್ತೇವೆ, ಮತ್ತೊಂದು ವೇಳೆ – “ಇದು ತೀರಾ ಕೆಟ್ಟದ್ದು”. ರಸ್ತೆ ಅದೇನೆ. ಒಂದೇ ರಸ್ತೆ “ಒಳ್ಳೆಯದು, ಕೆಟ್ಟದ್ದು” ಎರಡೂ ಆಗವುದು ಹೇಗೆ? ಇದು ಊಹನ. ಇವತ್ತು “ಈ ರಸ್ತೆ ಒಣಗಿದೆ. ಧೂಳು ತುಂಬಿ ಕೆಟ್ಟಿದೆ” ಎನ್ನಬಹುದು. ನಾಳೆ “ಈ ರಸ್ತೆ ಒಣಗಿದೆ, ತೇವ ಇಲ್ಲ, ಕೊಚ್ಚೆ ಇಲ್ಲ, ಒಳ್ಳೆಯ ರಸ್ತೆ” ಎನ್ನಬಹುದು. ಅದು ಕೇವಲ ಮನೋಊಹನ.
ವಿದ್ಯಾರ್ಥಿ: ಇನ್ನೂ, ನಿಮ್ಮ ಮಾತುಗಳು ಅರ್ಥವಾಗುವುದು ಕಷ್ಟವೆನಿಸುತ್ತಿದೆ.
ಶ್ರೀಲ ಪ್ರಭುಪಾದ: ಇನ್ನೊಂದು ಉದಾಹರಣೆ ಇಲ್ಲಿದೆ. ಭಾರತದಲ್ಲಿ ಗ್ರಾಮೀಣ ಜನರು ಬಹಿರ್ದೆಸೆಗೆ, ಬಯಲಿಗೆ ಹೋಗುತ್ತಾರೆ. ಸಂಜೆಯ ವೇಳೆ, ನೇಸರನ ಬಿಸಿಲಿನಿಂದ ಮಲದ ಮೇಲ್ಭಾಗ ಒಣಗಿರುತ್ತದೆ. ಒಬ್ಬ ಮೂರ್ಖ ಅದನ್ನು ನೋಡಿ ಹೇಳಬಹುದು – `ಓ! ಈ ಭಾಗ ಚೆನ್ನ’ ಇಷ್ಟಕ್ಕೂ ಅದು ಮಲ ಎಂಬುದನ್ನು ಅವನು ಮರೆತಿರುತ್ತಾನೆ. ಅದು ಶುಷ್ಕವೋ ತೇವದಿಂದ ಕೂಡಿರುತ್ತದೆಯೋ, ಏನದರಲ್ಲಿ ವ್ಯತ್ಯಾಸ? ಹಾಗೆಯೇ ವಿಜ್ಞಾನಿಗಳು ಮಹತ್ತರ ಮುನ್ನಡೆ ಸಾಧಿಸಿದ್ದಾರೆ; ಆದರೆ ಸಾವು ಇನ್ನೂ ಇದ್ದೇ ಇದೆ. ಹಾಗಾಗಿ ನೀವು ಪ್ರಗತಿ ಸಾಧಿಸಿದ್ದೀರೋ, ಇಲ್ಲವೋ ಏನು ಪ್ರಯೋಜನ? ವೈಜ್ಞಾನಿಕ ಪ್ರಗತಿ ಸಾಧಿಸಿದರೂ ಒಂದಿಲ್ಲೊಂದು ದಿನ ಸಾಯುತ್ತಾನೆ. ಪ್ರಗತಿ ಸಾಧಿಸಿರುವರೆಂದು ತಿಳಿದಿರುವ ನೀವೂ ಕೂಡ ಸಾಯುತ್ತೀರಿ. ಮತ್ತೇನು ಪ್ರಯೋಜನ? ವಿಜ್ಞಾನಿಯಾಗಲಿ, ಶ್ರೀಸಾಮಾನ್ಯನಾಗಲಿ ಸಾವಿನಿಂದ ತನ್ನನ್ನು ರಕ್ಷಿಸಿಕೊಳ್ಳಲಾರ ಎಂದ ಮೇಲೆ “ಇದು ಒಳ್ಳೆಯದು, ಇದು ಪ್ರಗತಿ, ಇದು ಪ್ರಗತಿಯಲ್ಲ” ಎನ್ನುವ ಮಾತುಗಳಲ್ಲಿರುವ ತಥ್ಯವೇನು?
ವಿದ್ಯಾರ್ಥಿ: “ಒಳಿತು – ಕೆಡಕು” ಎರಡರಲ್ಲಿ ಭೇದ ಹುಡುಕುವುದು, ಆಯಾ ವ್ಯಕ್ತಿಯ ಪ್ರಜ್ಞೆಗೆ ಸೇರಿದುದು.
ಶ್ರೀಲ ಪ್ರಭುಪಾದ: “ಸಾಪೇಕ್ಷತೆ” – “ಸಾಪೇಕ್ಷತೆಯ ನಿಯಮ”. ಒಬ್ಬನ ಹಾಲು ಮತ್ತೊಬ್ಬನ ಹಾಲಾಹಲ. “ಇದು ಆಹಾರ”, “ಇದು ವಿಷ” ಎಂದು ಹೇಗೆ ದೃಢೀಕರಿಸುತ್ತೀಯೆ? ಒಬ್ಬ ಮನುಷ್ಯ ಹೇಳುತ್ತಾನೆ. “ಇಲ್ಲ, ಅದು ಆಹಾರ” ಮತ್ತೊಬ್ಬ ಹೇಳುತ್ತಾನೆ, “ಅದು ವಿಷ”. ವ್ಯತ್ಯಾಸ ಕಂಡುಹಿಡಿಯುವುದು ಹೇಗೆ? ನೋಡಿದಿರಾ? ಈ “ಒಳಿತು” “ಕೆಡಕು”ಗಳೆಲ್ಲ ಕೇವಲ ಮನೋಕಲ್ಪನೆ. ಅದು ನಡೆಯುವುದು ಭೌತಿಕ ಸ್ತರದಲ್ಲಿ. ಒಳಿತೆನ್ನುವುದು ಯಾವುದೂ ಇಲ್ಲ. ವಿಜ್ಞಾನಿಗಳು, ದಾರ್ಶನಿಕರು ನಮಗೆ ಮೋಸ ಮಾಡುತ್ತಿದ್ದಾರೆ. “ನಾವು ಪ್ರಗತಿ ಸಾಧಿಸುತ್ತಿದ್ದೇವೆ” ಎನ್ನುತ್ತಾರೆ. ಯಾವುದರಲ್ಲಿ ಪ್ರಗತಿ ಸಾಧಿಸಿದ್ದೀರಿ? ಜನನ ಮರಣಗಳ ಸಮಸ್ಯೆ ಕಾಡುತ್ತಿದೆ – ಹಾಗಾಗಿರುವಾಗ ನಿಮ್ಮ ಪ್ರಗತಿಯ ಅರ್ಥವಾದರೂ ಏನು?
ವಿದ್ಯಾರ್ಥಿ: ಅಂದಮೇಲೆ, ನಾವು ಮನೋರಥದಿಂದ ಕೆಳಗಿಳಿಯಬೇಕೆ?
ಶ್ರೀಲ ಪ್ರಭುಪಾದ: ಹೌದು, ನೀವು ರಥದಲ್ಲೇ ಕುಳಿತಿದ್ದರೆ, ನೀವು ಸ್ವೀಕರಿಸಿದುದೆಲ್ಲವನ್ನು ತಿರಸ್ಕರಿಸಬೇಕಾಗುತ್ತದೆ. ಅವರು ಸದ್ಯದಲ್ಲಿ ಅದನ್ನೆ ಮಾಡುತ್ತಿದ್ದಾರೆ. ವಿಜ್ಞಾನಿಗಳು ಮತ್ತು ದಾರ್ಶನಿಕರುಗಳೆಂದು ತಮ್ಮನ್ನು ಕರೆದುಕೊಳ್ಳುವವರು – ಇತರೆಲ್ಲ ಒಂದು ಸಿದ್ಧಾಂತವನ್ನು ಮಂಡಿಸುತ್ತಾರೆ, ಕೆಲಕಾಲದ ಅನಂತರ ತಿರಸ್ಕರಿಸುತ್ತಾರೆ. ನೀವು ಮನೋಭೂಮಿಕೆಯಲ್ಲೆ ಆಲೋಚನೆ ಮಾಡುವ ಹಾಗಿದ್ದರೆ ಈ ಸ್ವೀಕಾರ ತಿರಸ್ಕಾರ ವ್ಯಾಪಾರ ನಿರಂತರವಾಗಿ ಸಾಗುತ್ತಿರುತ್ತದೆ. ಅಂತಿಮ ತೀರ್ಮಾನಕ್ಕೆ ನೀವು ಬರಲಾರಿರಿ. ನೀವು ಆಧ್ಯಾತ್ಮಿಕ ನೆಲೆಗಟ್ಟಿಗೇರಬೇಕು. ಅದೇ – ನಿತ್ಯಃ ಶಾಶ್ವತೋಽಯಂ – ನಿತ್ಯ ನಿರಂತರ.
ವಿದ್ಯಾರ್ಥಿ: ಈ ಜಗತ್ತಿನಲ್ಲಿ ಎಲ್ಲವೂ ನಗಣ್ಯ ಎನ್ನುತ್ತೀರಾ?
ಶ್ರೀಲ ಪ್ರಭುಪಾದ: ಸುಮ್ಮನೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸು. ಅದಕ್ಕೆ ಬೆಲೆ ಮತ್ತು ಅರ್ಥ ಎರಡೂ ಕೂಡಿರಬಹುದು. ಉದಾಹರಣೆಗೆ ನೀವು `0′ ಗೆ, ಒಂದರ ಅನಂತರ ಮತ್ತೊಂದು ಸೇರಿಸುತ್ತಲೆ ಹೋಗಬಹುದು; ಆಗಲೂ ಅದರ ಬೆಲೆ ಶೂನ್ಯವೆ. ಅದು ಎಂದಿಗೂ 1 ಆಗದು. ಆದರೆ ಪಕ್ಕದಲ್ಲಿ 1 ನ್ನು ಸೇರಿಸಿ; ಆಗ ಅದು 10 ಆಗುತ್ತದೆ. ಮತ್ತೊಂದು 0 ಸೇರಿಸಿ, ಕೂಡಲೇ 100 ಆಗುತ್ತೆ. ನೀವು ಹತ್ತುಪಟ್ಟು ಅದರ ಮೌಲ್ಯವನ್ನು ಹೆಚ್ಚಿಸಿದ್ದೀರಿ. ಆದರೆ ಆ 1 ಎಂಬುದು ಅಲ್ಲಿ ಸೇರಿರಬೇಕು. ಅದೇ ಏಕಂ
ಬ್ರಹ್ಮ , ಪರಮಾತ್ಮ. ಆಗ 0 ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತೆ. ಹಾಗೆಯೇ ಈ ಭೌತಿಕ ಪ್ರಪಂಚ ಶೂನ್ಯ. ಆದರೆ ಕೃಷ್ಣಪ್ರಜ್ಞೆ ಇದ್ದರೆ ಅದಕ್ಕೆ ಬೆಲೆಯುಂಟು. ಆಗಲೆ ಅದಕ್ಕೆ ಬೆಲೆ.
ವಿದ್ಯಾರ್ಥಿ: ಮನೋರಥಕ್ಕೆ ಬೆಲೆಯೇ ಇಲ್ಲವೆ?
ಶ್ರೀಲ ಪ್ರಭುಪಾದ: ಇಲ್ಲ, ಅದಕ್ಕೆ ಬೆಲೆ ಇಲ್ಲ.
ವಿದ್ಯಾರ್ಥಿ: ಪಾಶ್ಚಾತ್ಯರ ತತ್ತ್ವದರ್ಶನವೆಲ್ಲವೂ…
ಶ್ರೀಲ ಪ್ರಭುಪಾದ: ಮನೋರಥೇನಾಸತಿ ಧಾವತೋ ಬಹಿಃ ಮನೋಕಲ್ಪನೆಯಿಂದ ನೀವು ಈ ನಶ್ವರ ಜಗತ್ತಿನಲ್ಲಿರುತ್ತೀರಿ. ಅಸತ್ ಎಂದರೆ – “ಯಾವುದು ಅಸ್ತಿತ್ತ್ವದಲ್ಲಿಲ್ಲವೋ” ಅದು. ನೀವು ಯಾವುದನ್ನೇ ಆಗಲಿ, ಈ ಭೌತಿಕ ಜಗತ್ತಿನಲ್ಲಿ ತೆಗೆದುಕೊಳ್ಳಿ, ಮತ್ತಾವುದೋ ದಿನ ಅದು ನಿಮ್ಮೊಡನೆ ಇರದು. ಒಂದಲ್ಲೊಂದು ದಿನ ಕುಸಿದುಬೀಳುತ್ತದೆ. ಇದು ಪ್ರತಿಯೊಬ್ಬನಿಗೂ ಗೊತ್ತಿದೆ. ಒಂದು ಗಗನಚುಂಬಿ ಕಟ್ಟಡ ನಿರ್ಮಾಣಗೊಳ್ಳುತ್ತದೆ; ಒಂದಲ್ಲೊಂದು ದಿನ ಕುಸಿಯುತ್ತದೆ, ಅದು ಶಾಶ್ವತವಲ್ಲವೆಂಬುದು ಪ್ರತಿಯೊಬ್ಬನಿಗೂ ಗೊತ್ತು. ಅದು ತಾಳಿಕೊಳ್ಳುವುದಿಲ್ಲ. ಆದುದರಿಂದ ಪ್ರಹ್ಲಾದ ಮಹಾರಾಜ ಹೇಳುತ್ತಾನೆ – ಮಾಯಾಸುಖಾಯ ಭರಮ್ ಉದ್ವಹತೋ ವಿಮೂಢಾನ್ ಒಂದು ಭ್ರಮಾತ್ಮಕ ಸುಖಕ್ಕಾಗಿ, ಲೋಗರು ದೊಡ್ಡ ದೊಡ್ಡ ಭವ್ಯವಾದ ಸಿದ್ಧತೆ ನಡೆಸಿ, ಅಹೋರಾತ್ರಿ ಶ್ರಮಿಸುತ್ತಾರೆ – ಕೇವಲ ಶೂನ್ಯಕ್ಕಾಗಿ ಶೂನ್ಯದಿಂದ ಪ್ರಾರಂಭಿಸಿ, ಶೂನ್ಯದಲ್ಲಿ ಕೊನೆಗಾಣುತ್ತದೆ. ಈ ನಡುವೆ ಅವರು ಗಡಿಬಿಡಿಯಲ್ಲಿರುತ್ತಾರೆ, ಹೇಗಿದೆ ನೋಡು! ಆದುದರಿಂದ ಅವರು `ವಿಮೂಢಃ’ ಮೂಢರು, ಅಯೋಗ್ಯರು.