ಮಾನವ ಜೀವನದ ಉದ್ದೇಶ ಎಂದಿಗೂ ಇಂದ್ರಿಯ ತೃಪ್ತಿಯಲ್ಲ. ಮಾನವ ಪರಮ ಸತ್ಯದ ಶೋಧನೆಗಷ್ಟೇ ಉದ್ದೇಶಿತನಾಗಿರುವುದರಿಂದ ಅವನು ಆರೋಗ್ಯ ಮತ್ತು ಸ್ವರಕ್ಷಣೆ ಮಾತ್ರ ಬಯಸಬೇಕು. ಅವನ ಕಾರ್ಯಕ್ಕೆ ಬೇರಾವ ಗುರಿಯೂ ಇರಬಾರದು. ತಾತ್ಕಾಲಿಕವಾದ ದೈಹಿಕ ತೃಪ್ತಿಯಲ್ಲಿ ಅಥವಾ ಇಂದ್ರಿಯ ತೃಪ್ತಿಗಳ ಸೆರೆಯಲ್ಲಿ ಸಿಲುಕಬೇಡಿ. ಪರಮ ಸತ್ಯವನ್ನು ಕುರಿತು ಅನ್ವೇಷಣೆ ನಡೆಸಿ. ಆದುದರಿಂದಲೇ ವೇದಾಂತಸೂತ್ರಗಳು `ಪರಮ ಸತ್ಯದ ಶೋಧನೆಗೆ ಇದೀಗ ಸಮಯ’ (ಅಥಾತೋ ಬ್ರಹ್ಮ ಜಿಜ್ಞಾಸಾ) ಎಂದು ಹೇಳುತ್ತವೆ. ವೇದಾಂತ ಸೂತ್ರಗಳ ಜಿಜ್ಞಾಸೆಯನ್ನು ಯಥಾರೂಪವಾಗಿ ವ್ಯಾಖ್ಯಾನ ಮಾಡುವ ಶ್ರೀಮದ್ಭಾಗವತವು ಪರಮ ಸತ್ಯವನ್ನು ಸರ್ವವ್ಯಾಪಿಯಾದ ಆಧ್ಯಾತ್ಮಿಕ ತೇಜಸ್ಸಾದ ಬ್ರಹ್ಮ ಎಂದು, ಅಂತರಾತ್ಮದ ಪರಮಾತ್ಮ ಎಂದು ಹಾಗೂ ಪರಮ ಪ್ರಭುವಾದ ಭಗವಂತ ಎಂದು ವರ್ಣಿಸುತ್ತದೆ. ಈ ಎಲ್ಲದರ ತಿಳುವಳಿಕೆಯೇ ನಿಜವಾದ ಬ್ರಹ್ಮ ಜಿಜ್ಞಾಸೆಯಾಗಿದೆ. ಅಂದರೆ ಬ್ರಹ್ಮ ಎಂದರೇನು? ಪರಮಾತ್ಮ ಎಂದರೇನು? ಮತ್ತು ಭಗವಂತ ಎಂದರೇನು? ಇದನ್ನು ಅರಿತುಕೊಂಡು ವ್ಯಕ್ತಿಯು ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಮುಂದುವರಿಯಬೇಕು.
`ಯಾವುದರಿಂದ ಸಮಸ್ತವೂ ಹೊರಹೊಮ್ಮುವುದೋ ಅದೇ ಪರಮ ಸತ್ಯ’. ಹಾಗಾದರೆ ಈ ಪರಮ ಸತ್ಯ ಸಾಕಾರವೋ, ನಿರಾಕಾರವೋ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸ್ಪಷ್ಟವಾಗಿ ಹೇಳುತ್ತಾನೆ. ನಾನೇ ಎಲ್ಲಕ್ಕೂ ಮೂಲ, ಎಲ್ಲವೂ ನನ್ನಿಂದಲೇ ಬರುತ್ತವೆ. ಇಲ್ಲಿ ಪರಮ ಸತ್ಯವೇ ಪುರುಷಾಕಾರದಲ್ಲಿ ನಿಂತು ಹೇಳುತ್ತಿರುವಾಗ ನಾವದನ್ನು ಸ್ವೀಕರಿಸಲೇಬೇಕು. ವಾಸುದೇವನಾದ ಕೃಷ್ಣನೇ ಎಲ್ಲವೂ ಎಂದು ವ್ಯಕ್ತಿ ಅರಿತುಕೊಂಡಾಗ ಅದೇ ನಿಜವಾದ ಜ್ಞಾನವಾಗುತ್ತದೆ. ಈ ತಿಳುವಳಿಕೆ ಬರುವ ಮುಂಚೆ ಯಾರಿಗೂ ಜ್ಞಾನವಿರುವುದಿಲ್ಲ. ಅವರೇನಾದರೂ ಅರ್ಥಮಾಡಿಕೊಂಡಿದ್ದೇನೆ ಎನ್ನುವುದಾದರೆ ಅದು ಕೇವಲ ಅಪಾರ್ಥ. ಪ್ರಾರಂಭದಲ್ಲಿ ಊಹಾತ್ಮಕ ಜ್ಞಾನದ ವಿಧಾನದಿಂದ ನಿರಾಕಾರ ಬ್ರಹ್ಮವನ್ನು ತಿಳಿಯಬಹುದು. ಎರಡನೆಯ ಹಂತದಲ್ಲಿ ಭಗವಂತನ ಅಂತರ್ಯ್ಮಿತ್ವವನ್ನು ಅಂದರೆ ಪರಮಾತ್ಮನನ್ನು ತಿಳಿಯಬಹುದು. ಮತ್ತು ಕೊನೆಯ ಹಂತದಲ್ಲಿ ದೇವೋತ್ತಮ ಪರಮ ಪುರುಷ ಕೃಷ್ಣನನ್ನು ತಿಳಿದುಕೊಳ್ಳಬಹುದು. ಎಲ್ಲ ವೇದಗಳಿಂದಲೂ ನಾವು ಅರಿಯಬೇಕಾದುದು ಕೃಷ್ಣನನ್ನೇ. ಅದೇ ಅಂತಿಮ ಜ್ಞಾನ. ಕೃಷ್ಣನನ್ನೇ ಅರಿಯದಿದ್ದ ಮೇಲೆ ಜ್ಞಾನವೆಂಬುದು ಅಪೂರ್ಣ. ಅನೇಕ ಜನ್ಮಗಳನಂತರ ಜ್ಞಾನಾರ್ಜನೆಗಾಗಿ ತೊಳಲಾಡುತ್ತಿರುವವರು ವಾಸ್ತವಿಕವಾಗಿ ದೈವಾನುಗ್ರಹದಿಂದಲೂ, ಭಕ್ತನ ಕೃಪೆಯಿಂದಲೂ ಜ್ಞಾನ ಪಡೆಯುತ್ತಾರೆ. ಆಗ `ವಾಸುದೇವ ಸರ್ವಂ ಇತಿ’ (ಎಲ್ಲವೂ ಕೃಷ್ಣನೇ) ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಇಂತಹ ಮಹಾತ್ಮರು ಕಾಣಸಿಗುವುದು ತುಂಬ ಅಪರೂಪ.
ದೋಷಸಾಗರವಾದ ಈ ಕಲಿಯುಗದಲ್ಲಿ ಮಾನವರ ಉದ್ಧಾರಕ್ಕೆ ಒಂದು ಅವಕಾಶ ಶ್ರೀಮದ್ಭಾಗವತದಿಂದಲೇ ಅನುಗ್ರಹಿತವಾಗಿದೆ. ಅದುವೇ ಹರೇಕೃಷ್ಣ ಮಹಾಮಂತ್ರ. ಈ ಜಪವನ್ನು ಜಪಿಸಿದರೆ ಸಾಕು ಮನುಷ್ಯ ಈ ಐಹಿಕ ಜಗತ್ತಿನಿಂದ ಮುಕ್ತನಾಗಬಲ್ಲ. ಇದೇ ನಿಜವಾದ ವೇದಾಂತ. ವೇದಾಂತ ಸೂತ್ರದ ಪರಿಪೂರ್ಣ ವಿವರಣೆಯ ಶ್ರೀಮದ್ಭಾಗವತವನ್ನು ರಚಿಸಿದವರು ಶ್ರೀ ವೇದವ್ಯಾಸರೇ ಆಗಿದ್ದಾರೆ. ಈ ಕಲಿಯುಗದ ಜನರಿಗೆ ಶಿಕ್ಷಣ ಸಾಲದಿರುವುದರಿಂದ ಮತ್ತು ವೇದಾಂತ ಸೂತ್ರವನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಲಾರರು ಎಂದು ಅವರು ತಾವೇ ರಚಿಸಿದ ವೇದಾಂತ ಸೂತ್ರಗಳ ಮೇಲೆ ವ್ಯಾಖ್ಯಾನ ರೂಪದಲ್ಲಿ ಶ್ರೀಮದ್ಭಾಗವತವನ್ನು ರಚಿಸಿದರು.
ಹರೇ ಕೃಷ್ಣ ಮಹಾಮಂತ್ರದಿಂದ ಜನರು ಮುಕ್ತಿಯನ್ನು ಹೊಂದುತ್ತಲೇ ಇದ್ದರೂ ಈ ಸಮಾಜದಲ್ಲಿ ಬಹಳಷ್ಟು ಮಂದಿ ತಪ್ಪು ದಾರಿಯ ಕಡೆಗೆ ವಾಲುತ್ತಿದ್ದಾರೆ. ಅಂತಹವರನ್ನು ತಪ್ಪು ದಾರಿಗೆ ಎಳೆಯಲು ಬಹಳಷ್ಟು ಮಂದಿ ವೇದಾಂತ ಸೋಗಿನ ಬಡಾಯಿ ಜನರೂ ಇದ್ದಾರೆ. ಈ ವೇದಾಂತಿಗಳು ನಿರಾಕಾರ ತತ್ತ್ವ ಭಾಷ್ಯವಾದ ಶಾರೀರಕ ಭಾಷ್ಯವನ್ನು ಅನುಸರಿಸುತ್ತಾರೆ. ಇವರು ಬೇರೆ ಯಾವ ವೈಷ್ಣವ ಆಚಾರ್ಯರು ಬರೆದ ವೇದಾಂತ ಭಾಷ್ಯವನ್ನು ಓದುವುದಿಲ್ಲ. ನಾನೇ ಬ್ರಹ್ಮ, ನಾನೇ ದೇವರು ಎಂದು ಇವರು ವಂಚಿಸುತ್ತಾರೆ. ಕೃಷ್ಣನೇ ಬಂದು ನಾನೇ ಸರ್ವಕ್ಕೂ ಮೂಲಾಧಾರ ಎಂದು ಪುರುಷ ರೂಪದಲ್ಲಿ ಹೇಳುತ್ತಿರುವಾಗ ಇವರು ಈ ಮಾತುಗಳನ್ನು ಸ್ವೀಕರಿಸುವುದಿಲ್ಲ. ಬರೀ ಜ್ಞಾನವನ್ನು ಅರಸಿಕೊಂಡು ವೇದಾಂತಿಗಳ ಬಳಿ ಹೋಗುವ ಜನರು ನಿಜವಾಗಿಯೂ ಮೂಢರೇ. ಒಬ್ಬ ಒಂದು ಕೃತಿಯನ್ನು ರಚಿಸುತ್ತಾನೆ. ನಮಗೆ ಅವುಗಳಲ್ಲಿರುವ ವಿಷಯ ಅರ್ಥವಾಗದಿದ್ದಾಗ ಅದರ ವಿವರಣೆಗೆ ನಾವು ಅವನ ಬಳಿಗೆ ಹೋಗಬೇಕೇ ಹೊರತು, ಆ ಕೃತಿಗೆ ಸಂಬಂಧವಿರದ ಒಬ್ಬ ಮೂಢನ ಬಳಿ ಏಕೆ ಹೋಗಬೇಕು? ಅದು ವಿವೇಕವಲ್ಲ. ನಾನೊಬ್ಬ ವೇದಾಂತಿ ಎಂದು ಹೇಳಿಕೊಂಡ ಮಾತ್ರಕ್ಕೆ ವೇದಾಂತ ಸೂತ್ರ ನಿಜ ಸಂಗ್ರಾಹಕನನ್ನು ಬಿಟ್ಟು ಒಬ್ಬ ಧೂರ್ತನ ಬಳಿ ಏಕೆ ಹೋಗಬೇಕು? ಒಂದು ವೇಳೆ ಹೋದರೆ ಮೋಸ ಹೋಗುತ್ತೀರಿ. ಅದು ನಿಮಗೆ ಸಂಬಂಧಿಸಿದ ವ್ಯವಹಾರ.