ವಾಮನ ಅವತಾರ

ಒಮ್ಮೆ ಹೀಗಾಯ್ತು. ಬಲಿಯೆನ್ನುವ ದೈತ್ಯರಾಜ ಸ್ವರ್ಗಲೋಕವನ್ನು ವಶಪಡಿಸ್ಕೊಂಡು ಬಿಟ್ಟ. ಈ ಬಲಿರಾಜ, ಮಹಾಭಕ್ತ ಪ್ರಹ್ಲಾದ ಮಹಾರಾಜನ ಮೊಮ್ಮಗ, ವಿರೋಚನನ ಮಗ.

ತನ್ನ ಮಕ್ಕಳ ಸ್ವತ್ತು ದೈತ್ಯರ ಪಾಲಾಯ್ತಲ್ಲ, ದುಷ್ಟ ದೈತ್ಯರು ಇನ್ನು ಲೋಕದ ಜನರಿಗೆ ಏನೇನು ಕಷ್ಟ ಕೊಡ್ತಾರೋ! ಎಂದು ದೇವತೆಗಳ ತಾಯಿ ಅದಿತಿ ಚಿಂತಿಸಿದಳು. ಕೊನೆಗೆ ವ್ರತಗಳನ್ನ ನಡೆಸಿ, ಮಹಾವಿಷ್ಣುವನ್ನು ಒಲಿಸಿಕೊಂಡು, ತನ್ನ ಮಗನಾಗಿ ಪಡೆದಳು. ಹೀಗೆ ಅದಿತಿ-ಕಶ್ಯಪರ ಮಗನಾಗಿ ಜನಿಸಿದ ಶಿಶುವೇ `ವಾಮನ’.

ವಾಮನ ಅತ್ಯಂತ ಕುಳ್ಳನೆಯ ಶರೀರ ಹೊಂದಿದ್ದ. ನೋಡಲು ಬಹಳ ಮುದ್ದು ಮುದ್ದಾಗಿದ್ದ. ಮಾತ್ರವಲ್ಲ, ಅವನ ಮುಖದಿಂದ ಸೂರ್ಯನಂಥ ತೇಜಸ್ಸು ಹೊಮ್ಮುತ್ತಿತ್ತು.

ದೇವಲೋಕ ಗೆದ್ದ ಬಲಿ ಮಹಾರಾಜನ ಅಕಾರದಾಸೆ ಮಿತಿಮೀರಿತ್ತು. ಆತ ಅಶ್ವಮೇಧಯಾಗ ಕೈಗೊಂಡ. ಈ ಸಮಯದಲ್ಲಿ ತನ್ನ ಹೆಂಡತಿ ಜೊತೆಗೂಡಿ ದಾನ-ಧರ್ಮಗಳನ್ನ ನೀಡಲಾರಂಭಿಸಿದ.

ಬಲಿಗೆ ಪಾಠ ಕಲಿಸಲು ಇದೇ ಸರಿಯಾದ ಸಮಯ ಅನಿಸಿತು ವಾಮನನಿಗೆ. ಕಮಂಡಲ ಹಿಡಿದ್ಕೊಂಡು ಸೀದಾ ಯಾಗ ನಡೀತಿದ್ದ ಸ್ಥಳಕ್ಕೆ ಹೋದ. ಅವನ ಸುತ್ತ ಹೊರಡ್ತಿದ್ದ ಬೆಳಕು ಜನರ ಕಣ್‌ ಕುಕ್ಕುತ್ತಿತ್ತು. ಅವರೆಲ್ಲ ಬಾಲಸೂರ್ಯನೇ ಭೂಮಿಗೆ ಇಳಿದು ಬಂದ ಅಂತ ಆಶ್ಚರ್ಯಪಟ್ರು!

ನಗುನಗುತ್ತ ಯಾಗಶಾಲೆಯಲ್ಲಿ ನಿಂತಿದ್ದ ವಾಮನನ್ನ ನೋಡಿ ಬಲಿ ಮಹಾರಾಜನಿಗೆ ಸಂತೋಷವಾಯ್ತು. ಮುದ್ದು ಮುಖದ ಬ್ರಾಹ್ಮಣ ವಟುವನ್ನ ಆದರದಿಂದ ಕರೆದು, ಕೂರಿಸಿ, ಉಪಚಾರ ಮಾಡಿದ. ಆಮೇಲೆ, “ನಿನಗೆ ನಾನೇನು ದಾನ ಕೊಡಲಿ?” ಅಂತ ಕೇಳ್ಬಿಟ್ಟ!

ಅವನ ಪಕ್ಕದಲ್ಲೇ ದೈತ್ಯರ ಗುರುಗಳು `ಶುಕ್ರಾಚಾರ್ಯ’ರು ಇದ್ರು. ಅವರಿಗೆ ವಾಮನನ ಸೌಂದರ್ಯ, ತೇಜಸ್ಸು, ಗಾಂಭೀರ್ಯ – ಇವೆಲ್ಲ ಅನುಮಾನ ಹುಟ್ಟಿಸಿಬಿಟ್ಟಿದ್ವು. ಇದು ಖಂಡಿತವಾಗಿಯೂ ವಿಷ್ಣುವೇ ಅಂತ ಗೊತ್ತಾಗಿ ಹೋಯ್ತು! ಅವರು ಬಲಿ ಮಹಾರಾಜನ್ನ ಪಕ್ಕಕ್ಕೆ ಕರೆದು, “ಇದೆಲ್ಲ ದೇವತೆಗಳ ಮೋಸ, ನೀನು ಅವನಿಗೆ ದಾನ ಕೊಡ್ತೀನಿ ಅಂತ ಹೇಳ್ಬೇಡ” ಎಂದೆಲ್ಲ ಬುದ್ಧಿವಾದ ಹೇಳಿದ್ರು. ಆದ್ರೆ ಬಲಿ, ದೈತ್ಯನಾದ್ರೂ ಪ್ರಹ್ಲಾದನ ಮೊಮ್ಮಗನಲ್ವೆ? “ಕೊಟ್ಟ ಮಾತಿಂದ ಹಿಂಜರಿಯೋದಿಲ್ಲ; ಇಷ್ಟಕ್ಕೂ ಈ ಪುಟ್ಟ ಹುಡುಗ ಹೆಚ್ಚೇನು ಕೇಳಿಯಾನು?” ಅಂತ ಅವರಿಗೆ ಹೇಳಿಬಿಟ್ಟ.

ಪುಟ್ಟ ಆಕಾರದ ವಾಮನ ಇದನ್ನೆಲ್ಲ ಗಮನಿಸ್ತ ಮುಗುಳ್ನಗುತ್ತ ನಿಂತಿದ್ದ. ಅವನು ಬಲಿಗೆ, “ನನಗೆ ಹೆಚ್ಚೇನೂ ಬೇಡ ಮಹಾರಾಜ, ಮೂರೇ ಮೂರು ಹೆಜ್ಜೆ ಜಾಗ ಕೊಟ್ಟು ಬಿಡು ಸಾಕು” ಅಂತ ಹೇಳ್ದ. ಈಗಂತೂ ಶುಕ್ರಾಚಾರ್ಯರಿಗೆ ಅದರ ಮರ್ಮ ಗೊತ್ತಾಗ್ಹೋಯ್ತು. ಅವರು ಗುಂಗೀ ಹುಳದ ರೂಪ ತಾಳಿ ಬಲಿ ಮಹಾರಾಜನ ಕಮಂಡಲದಲ್ಲಿ ಸೇರ್ಕೊಡ್‌ ಬಿಟ್ರು!

ದಾನ ಕೊಡುವಾಗ ಕಮಂಡಲದ ನೀರನ್ನ ಮತ್ತೊಂದು ಕೈಲಿ ಹಿಡಿದ್ಕೊಂಡ ತುಳಸಿ ದಳದ ಮೇಲೆ ಹಾಕ್ತಾರೆ. ಅದಿಲ್ಲದೆ `ದಾನ’ದ ಪ್ರಕ್ರಿಯೆ ಪೂರ್ತಿಯಾಗಲ್ಲ. ಅದಕ್ಕೇ ಈ ಉಪಾಯ!!

ಆದರೇನು? ವಾಮನನಿಗೆ ಇದು ತಿಳಿದುಬಿಡ್ತು. ಆತ ತನ್ನ ದರ್ಬೆಯಿಂದ ಕಮಂಡಲದ ಒಳಗೆಲ್ಲ ಕೈಯಾಡಿಸಿದ. ಅದು ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ, ನೋವಿನಿಂದ ಚೀರ್ತಾ ಕಮಂಡಲದಾಚೆ ಹಾರಿ ಹೊರಟು ಹೋದ್ರು! ಅವತ್ತಿಂದ ಶುಕ್ರಾಚಾರ್ಯ, `ಒಕ್ಕಣ್ಣು ಶುಕ್ರಾಚಾರ್ಯ ಆದ್ರು!!

ಸರಿ, ಬಲಿ ಮಹಾರಾಜ, “ಮೂರು ಹೆಜ್ಜೆ ಭೂಮಿ ದಾನ ಕೊಟ್ಟೆ” ಅಂತ ಹೇಳಿ ನೀರು ಬಿಟ್ಟ. “ನಿನ್ನ ಜಾಗ ಅಳೆದುಕೋ” ಅಂದ.

ಆಗ ಏನಾಯ್ತು ಗೊತ್ತಾ!?

ಪುಟಾಣಿ ಬ್ರಾಹ್ಮಣ ವಟು ವಾಮನ ಬೆಳೀತಾ, ಬೆಳೀತಾ, ಬೆಳೀತಾ… ಉದ್ದಕ್ಕೆ… ದೊಡ್ಡಕ್ಕೆ… ಆಕಾಶಾನೂ ದಾಟಿ ದಾಟಿ ಅತಿ ದೊಡ್ಡದಾಗಿ ಬೆಳೆದು ನಿಂತ! ತ್ರಿವಿಕ್ರಮನಾದ !! ಅವನ ಒಂದು ಹೆಜ್ಜೆ ಇಡಿ ಭೂಮಿಯನ್ನ ತುಂಬಿತ್ತು. ಮತ್ತೊಂದು ಆಕಾಶವನ್ನೆಲ್ಲ ಆವರಿಸ್ಕೊಳ್ತು! ಮೂರನೇ ಹೆಜ್ಜೆ ಎಲ್ಲಿಡೋದೀಗ!? ವಾಮನ ಬಲಿಯನ್ನ ಕೇಳಿದ. ಈ ಅದ್ಭುತವನ್ನ ನೋಡ್ತಾ ಅವಾಕ್ಕಾಗಿ ನಿಂತಿದ್ದ ಬಲಿ ತಲೆಬಾಗಿ ಕುಳಿತು, `ಇದರ ಮೇಲಿಡಿ’ ಎಂದು ತನ್ನ ತಲೆಯನ್ನೇ ತೋರಿಸಿದ!

ವಾಮನ ಅವನ ತಲೆ ಮೇಲೆ ಕಾಲಿಟ್ಟು ಮೂರನೇ ಹೆಜ್ಜೆಯನ್ನೂ ಅಳೆದುಕೊಂಡ. ಭಗವಂತನ ಪಾದ ಧೂಳಿಯಿಂದ ಬಲಿ ರಾಜನಿಗೆ ಸದ್ಗತಿ ದೊರಕಿತು.

ಈ ಲೇಖನ ಶೇರ್ ಮಾಡಿ