ವರಾಹಾವತಾರ

ಅದು ಸ್ವಾಯಂಭುವ ಮನುವಿನ ಆಳ್ವಿಕೆಯ ಕಾಲ. ಹಿರಣ್ಯಾಕ್ಷ ಎಂಬ ರಾಕ್ಷಸನು ಪೃಥ್ವಿಯಲ್ಲಿದ್ದ ಚಿನ್ನವನ್ನೆಲ್ಲಾ ದೋಚಿದ ಪರಿಣಾಮವಾಗಿ ಪೃಥ್ವಿಯು ತನ್ನ ಸಮತೋಲನವನ್ನು ಕಳೆದುಕೊಂಡು ಗರ್ಭೋದಕ ಸಾಗರದಲ್ಲಿ ಬಿದ್ದು ಬಿಟ್ಟಿತು. ಆ ಸಮಯದಲ್ಲಿ ಒಂದು ದಿನ ಸ್ವಾಯಂಭುವ ಮನುವು ತನ್ನ ತಂದೆಯಾದ ಬ್ರಹ್ಮದೇವನನ್ನು ಸತ್ಯಲೋಕದಲ್ಲಿ ಭೇಟಿ ಮಾಡಿ ಅತೀವ ನಮ್ರತೆಯಿಂದ ಕೈಮುಗಿದು, “ಅಪ್ಪಾ! ಏಕಮಾತ್ರವಾಗಿ ನೀನು ಎಲ್ಲ ಜೀವಿಗಳನ್ನು ಸೃಷ್ಟಿಸಿರುವೆ. ಎಲ್ಲ ಜೀವರಾಶಿಗಳ ನಿರ್ವಹಣೆಯನ್ನೂ ನೀನೇ ಮಾಡುವವನಾಗಿರುವೆ. ನಿನ್ನ ಸೇವೆಯಾಗುವಂತಹ ಯಾವ ಕೆಲಸವನ್ನು ನಾನು ಮಾಡಬಲ್ಲೆನು? ನಿನ್ನ ಸೇವೆಯನ್ನು ಮಾಡುವ ಅಪ್ಪಣೆಯನ್ನು ನನಗೆ ನೀಡು” ಎಂದು ಕೇಳಿದನು.

ಮನುವಿನ ಮಾತನ್ನು ಕೇಳಿದ ಬ್ರಹ್ಮನು, “ಮಗು! ನಿನಗೆ ಶುಭವಾಗಲಿ. ನೀನು ನನ್ನಲ್ಲಿ ಆತ್ಮ ಸಮರ್ಪಣೆ ಮಾಡಿ ಅಪ್ಪಣೆ ಕೇಳಿರುವುದರಿಂದ ನಾನು ನಿನ್ನಲ್ಲಿ ತುಂಬ ಪ್ರಸನ್ನನಾಗಿದ್ದೇನೆ.  ನೀನು ಧರ್ಮದಿಂದ ಪೃಥ್ವಿಯನ್ನು ಪಾಲಿಸು ಮತ್ತು ಯಜ್ಞಗಳ ಮೂಲಕ ಶ್ರೀಹರಿಯ ಆರಾಧನೆಯನ್ನು ಮಾಡು. ಪ್ರಜಾ ಪಾಲನೆಯೇ ನಿನ್ನಿಂದ ನನಗಾಗಬಹುದಾದ ದೊಡ್ಡ ಸೇವೆ” ಎಂದು ಹೇಳಿದನು.

ಇದನ್ನು ಕೇಳಿದ ಮನುವು, “ತಂದೆಯೇ! ನಾನು ನಿನ್ನ ಅಪ್ಪಣೆಯನ್ನು ಖಂಡಿತವಾಗಿಯೂ ನೆರವೇರಿಸುವೆನು. ಆದರೆ ಪೃಥ್ವಿಯು ಈಗ ಸಮುದ್ರದಲ್ಲಿ ಮುಳುಗಿದೆಯಲ್ಲ! ನಾನು ಅದನ್ನು ಹೇಗೆ ಪಾಲಿಸಲಿ?” ಎಂದನು. ಪೃಥ್ವಿಯ ಅವಸ್ಥೆ ಕಂಡು ಬ್ರಹ್ಮನು ತುಂಬ ಚಿಂತಿತನಾದನು. ಬ್ರಹ್ಮನು ಪೃಥ್ವಿಯ ಉದ್ಧಾರಕ್ಕಾಗಿ ಚಿಂತಿಸುತ್ತಿದ್ದಂತೆಯೇ ಅವನ ಮೂಗಿನಿಂದ ಹೆಬ್ಬೆರಳಿನ ಅರ್ಧ ಗಾತ್ರದಷ್ಟು ವರಾಹವೊಂದು ಪ್ರಕಟವಾಯಿತು ಮತ್ತು ಅದು ನೋಡ ನೋಡುತ್ತಿರುವಂತೆಯೇ ಪರ್ವತಾಕಾರವಾಗಿ ಬೆಳೆದು ಗರ್ಜಿಸತೊಡಗಿತು. ಈ ವರಾಹವು ಸ್ವಯಂ ಭಗವಂತನೇ ಎಂದು ಅರಿತ ಬ್ರಹ್ಮದೇವನು ವರಾಹರೂಪದ ಭಗವಂತನನ್ನು ಭಕ್ತಿಯಿಂದ ಸ್ತುತಿಸತೊಡಗಿದನು.

ಬ್ರಹ್ಮದೇವನ ಸ್ತುತಿಯಿಂದ ಭಗವಾನ್‌ ವರಾಹನು ಪ್ರಸನ್ನನಾಗಿ ಗರ್ಭೋದಕ ಸಮುದ್ರದಲ್ಲಿ ಪ್ರವೇಶಿಸಿದನು. ಕೆಲವೇ ಕ್ಷಣಗಳಲ್ಲಿ ಪೃಥ್ವಿಯನ್ನು ತನ್ನ ಕೋರೆ ಹಲ್ಲುಗಳ ಮೇಲೆ ಧರಿಸಿಕೊಂಡು ವರಾಹದೇವನು ಮೇಲಕ್ಕೆ ಬರುತ್ತಿರುವಾಗ, ಹಿರಣ್ಯಾಕ್ಷನು ಅವನೊಂದಿಗೆ ಯುದ್ಧಕ್ಕೆ ನಿಂತನು. ಆಗ ವರಾಹದೇವನು ಪೃಥ್ವಿಯನ್ನು ನೀರಿನ ಮೇಲೆ ತೇಲುವಂತೆ ಇರಿಸಿದನು. ಅನಂತರ ಇಬ್ಬರ ಮಧ್ಯೆ ಘೋರವಾದ ಯುದ್ಧ ನಡೆಯಿತು. ಕೊನೆಗೆ ವರಾಹಸ್ವಾಮಿಯು ತನ್ನ ಕೈಯಿಂದ ಹಿರಣ್ಯಾಕ್ಷನ ಕೆನ್ನೆಗೆ ಹೊಡೆದು ಸಂಹರಿಸಿದನು.

ಭೂದೇವಿಯನ್ನು ಲೀಲಾಜಾಲವಾಗಿ ಉದ್ಧರಿಸಿದ ವರಾಹಸ್ವಾಮಿಯನ್ನು ಬ್ರಹ್ಮಾದಿ ದೇವತೆಗಳು ಕೈಮುಗಿದು ಸ್ತುತಿಸತೊಡಗಿದರು. ಪ್ರಸನ್ನಗೊಂಡ ವರಾಹಸ್ವಾಮಿಯು ಪೃಥ್ವಿಯನ್ನು ಕಕ್ಷೆಯಲ್ಲಿ ಸ್ಥಿರವಾಗಿ ನೆಲೆಗೊಳಿಸಿ ದೇವತೆಗಳನ್ನು ಹರಸಿದನು. ಭಗವಾನ್‌ ವರಾಹಸ್ವಾಮಿಯನ್ನು ಆದಿವರಾಹವೆಂದೂ ಹೊಗಳುತ್ತಾರೆ. ಅಂತಹ ವರಾಹ ಸ್ವಾಮಿಯನ್ನು ನಾವೂ ಭಕ್ತಿಯಿಂದ ಸ್ಮರಿಸಿ ನಮಿಸೋಣ.

ಈ ಲೇಖನ ಶೇರ್ ಮಾಡಿ