ಮನುಷ್ಯನು ಕೃಷ್ಣನ ಅಪ್ಪಣೆಯ ಪ್ರಕಾರ ಕೆಲಸ ಮಾಡಬೇಕು. ಇದು ಬಹಳ ಮುಖ್ಯವಾದ ಅಂಶ. ಕೃಷ್ಣನ ಅಪ್ಪಣೆಯು ಸದ್ಗುರುವಿನಿಂದ ಗುರುಶಿಷ್ಯ ಪರಂಪರೆಯ ಮೂಲಕ ಬರುತ್ತದೆ. ಆದುದರಿಂದ ಗುರುವಿನ ಅಪ್ಪಣೆಯನ್ನು ಜೀವನದ ಪ್ರಧಾನ ಕರ್ತವ್ಯ ಎಂದು ಸ್ವೀಕರಿಸಬೇಕು. ಮನುಷ್ಯನು ನಿಜವಾದ ಗುರುವನ್ನು ಪಡೆದುಕೊಂಡು ಅವನ ಆದೇಶಕ್ಕೆ ಅನುಗುಣವಾಗಿ ನಡೆದುಕೊಂಡರೆ ಕೃಷ್ಣಪ್ರಜ್ಞೆಯಲ್ಲಿ ಬದುಕಿನ ಪರಿಪೂರ್ಣತೆಯು ಖಚಿತವಾಗುತ್ತದೆ.
-ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಭಗವದ್ಗೀತಾ ಯಥಾರೂಪ: 18.57, ಭಾವಾರ್ಥ
* * * *
ಮಹಾನ್ ಧರ್ಮಶ್ರದ್ಧೆಯಿಲ್ಲದೆ, ಪರಮ ಪ್ರಭುವಿನ ಅಮೃತ ಸದೃಶವಾದ ಲೀಲೆಗಳನ್ನು ಆಸ್ವಾದಿಸುವ ತೀವ್ರವಾದ ಕಾತರವಿಲ್ಲದೆ ಮತ್ತು ಧರ್ಮಗ್ರಂಥಗಳ ಸತ್ಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳದೆ ದೇವರನ್ನು ಕುರಿತ ಪರಿಶುದ್ಧವಾದ ಭಕ್ತಿಪೂರ್ವಕ ಪ್ರೇಮವು ಅಪ್ರಾಪ್ಯವಾದದ್ದು.
-ಶ್ರೀಲ ಭಕ್ತಿವಿನೋದ ಠಾಕುರ, ಶ್ರೀ ಸನ್ಮೋದನ ಭಾಷ್ಯ
(ಚೈತನ್ಯ ಮಹಾಪ್ರಭುಗಳ ಶ್ರೀ ಶಿಕ್ಷಾಷ್ಟಕವನ್ನು ಕುರಿತ ವ್ಯಾಖ್ಯಾನ)
* * * *
ಜೀವಿಗಳ ಹೃದಯಗಳಲ್ಲಿ ಕೃಷ್ಣನನ್ನು ಕುರಿತ ಪರಿಶುದ್ಧ ಪ್ರೇಮವು ಶಾಶ್ವತವಾಗಿ ಸ್ಥಾಪಿತವಾಗಿದೆ. ಅದು ಬೇರೆ ಯಾವುದೋ ಆಕರದಿಂದ ಗಳಿಸಬೇಕಾದ ಸಂಗತಿಯಲ್ಲ. ಕೃಷ್ಣನನ್ನು ಕುರಿತ ಶ್ರವಣ ಸಂಕೀರ್ತನೆಗಳಿಂದ ಹೃದಯವು ಪರಿಶುದ್ಧವಾದಾಗ ಜೀವಿಯು ಸಹಜವಾಗಿಯೇ ಜಾಗೃತನಾಗುತ್ತಾನೆ.
– ಶ್ರೀ ಚೈತನ್ಯ ಮಹಾಪ್ರಭುಗಳು
ಶ್ರೀ ಚೈತನ್ಯಚರಿತಾಮೃತ:ಮಧ್ಯಲೀಲಾ – 22.107
* * * *
ಆಹಾರ ಸೇವನೆ, ನಿದ್ರೆಮಾಡುವುದು, ಕೂಡುವುದು ಮತ್ತು ರಕ್ಷಣೆ ಮಾಡಿಕೊಳ್ಳುವುದು ಈ ಚಟುವಟಿಕೆಗಳು ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಉಭಯ ಸಾಮಾನ್ಯವಾಗಿವೆ. ಆದರೆ ಮಾನವರಲ್ಲಿರುವ ವಿಶೇಷ ಗುಣವೆಂದರೆ ಅವರು ಆಧ್ಯಾತ್ಮಿಕ ಜೀವನದಲ್ಲಿ ಮಗ್ನರಾಗಲು ಸಮರ್ಥರಾಗಿದ್ದಾರೆ. ಆದ್ದರಿಂದ ಆಧ್ಯಾತ್ಮಿಕ ಜೀವನವಿಲ್ಲದಿದ್ದರೆ ಮಾನವರು ಪ್ರಾಣಿಗಳ ಮಟ್ಟದಲ್ಲಿಯೇ ಇರುತ್ತಾರೆ.
– ಹಿತೋಪದೇಶ
* * * *
ದೇವೋತ್ತಮ ಪುರುಷ ಶ್ರೀಕೃಷ್ಣನಲ್ಲದೆ ಪರಮ ಪ್ರಭು ಎಂಬ ಹೆಸರಿಗೆ ಯಾರು ತಾನೆ ಅರ್ಹರಾಗಬಲ್ಲರು? ಅವನ ಪಾದದ ಉಗುರುಗಳಿಂದ ಹೊರ ಹೊಮ್ಮುವ ನೀರನ್ನು ಸಂಗ್ರಹಿಸಿ ಬ್ರಹ್ಮನು ಪ್ರಭು ಶಿವನಿಗೆ ಆರಾಧನೆಯ ಸ್ವಾಗತ ಜಲವಾಗಿ ಉಪಯೋಗಿಸಿದನು. ಆ ನೀರೇ (ಗಂಗೆಯೇ) ಇಂದು ಪ್ರಭು ಶಿವನೂ ಸೇರಿದಂತೆ ಸಮಸ್ತ ವಿಶ್ವವನ್ನೇ ಪರಿಶುದ್ಧಗೊಳಿಸುತ್ತಿದೆ.
– ಶ್ರೀ ಸೂತ ಗೋಸ್ವಾಮಿ, ಶ್ರೀಮದ್ ಭಾಗವತಮ್ : 1.18.21
* * * *
ಕೃಷ್ಣನ ಪವಿತ್ರ ನಾಮವೇ ಅತ್ಯುನ್ನತವಾದ ದೈವಾನುಗ್ರಹ. ಅದು ಅತ್ಯಂತ ಮಧುರವಾದ ಜೇನುತುಪ್ಪಕ್ಕಿಂತ ಸಿಹಿಯಾಗಿದೆ. ಸಮಸ್ತ ವೈದಿಕ ಧರ್ಮಗ್ರಂಥಗಳೆಂಬ ವೃಕ್ಷದ ದಿವ್ಯವಾದ ಫಲವೇ ಅದಾಗಿದೆ.
– ಸ್ಕಾಂದ ಪುರಾಣ, ಹರಿಭಕ್ತಿವಿಲಾಸ (11.234) ದಲ್ಲಿ ಉದ್ಧೃತ
* * * *
`ಕೃಷ್’ ಎಂಬ ಶಬ್ದವು ಪ್ರಭುವಿನ ಅಸ್ತಿತ್ವದ ಆಕರ್ಷಕ ಲಕ್ಷಣ, ಮತ್ತು `ಣ’ ಎಂದರೆ ಆಧ್ಯಾತ್ಮಿಕ ಆನಂದ. `ಕೃಷ್’ ಅನ್ನು `ಣ’ ಗೆ ಸೇರಿಸಿದರೆ ಕೃಷ್ಣ ಎಂದಾಗುತ್ತದೆ. ಅದು ಪರಮಸತ್ಯವನ್ನು ಸೂಚಿಸುತ್ತದೆ.
– ಮಹಾಭಾರತ, ಉದ್ಯೋಗ ಪರ್ವ : 71.4
* * * *