ವೇದವಾಕ್ಯ

ಬದ್ಧಾತ್ಮನು ಪ್ರಕೃತಿ ಗುಣಗಳ ಒತ್ತಡದಡಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ. ಜೀವಿಗೆ ಸ್ವಾತಂತ್ರ್ಯವೆಂಬುದಿಲ್ಲ. ದೇವೋತ್ತಮ ಪರಮ ಪುರುಷನ ನಿರ್ದೇಶನದ ಅಡಿಯಲ್ಲಿ ಅವನು ಕೆಲಸ ಮಾಡುತ್ತಿದ್ದಾಗ ಮುಕ್ತನಾಗಿರುತ್ತಾನೆ. ಆದರೆ ತನ್ನ ಇಂದ್ರಿಯಗಳನ್ನು ತೃಪ್ತಿಪಡಿಸುತ್ತೇನೆ ಎಂಬ ಭಾವನೆಯಲ್ಲಿದ್ದಾಗ ಅವನು ಇಂದ್ರಿಯ ತುಷ್ಟಿಯ ಕಾರ್ಯದಲ್ಲಿ ತೊಡಗುತ್ತಾನೆ. ಆಗ ಅವನು ದಿಟವಾಗಿಯೂ ಐಹಿಕ ಪ್ರಕೃತಿಯ ಮಂತ್ರಶಕ್ತಿಯ ಪ್ರಭಾವದಲ್ಲಿರುತ್ತಾನೆ.

– ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಶ್ರೀಮದ್‌ ಭಾಗವತಮ್‌: 3.27.2, ಭಾವಾರ್ಥ

* * * *

ತನ್ನ ಇಂದ್ರಿಯಗಳನ್ನು ಸಂತುಷ್ಟಗೊಳಿಸಬೇಕೆನ್ನುವ ಆಸೆಯು ಕಾಮ, ಆದರೆ ಶ್ರೀಕೃಷ್ಣನ ಇಂದ್ರಿಯಗಳನ್ನು ಸಂತುಷ್ಟಗೊಳಿಸಬೇಕೆನ್ನುವ ಆಸೆಯು ಪ್ರೇಮ.

– ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮೀ
ಶ್ರೀ ಚೈತನ್ಯ ಚರಿತಾಮೃತ, ಆದಿ: 4.165

* * * *

ಈ ಜಗತ್ತಿನಲ್ಲಿರುವ ನಾವು ಆಧ್ಯಾತ್ಮಿಕ ಜಗತ್ತಿನ ಅನೇಕ ಭಕ್ತರನ್ನು ಭೇಟಿಯಾಗಲು ಸಾಧ್ಯವಿಲ್ಲವಾದರೂ, ಶ್ರೀ ಚೈತನ್ಯ ಮಹಾಪ್ರಭುಗಳ ಕಾಲದ ಭಕ್ತರ ಸಂಭಾಷಣೆಗಳು ಮತ್ತು ಲೀಲೆಗಳು ಪುಸ್ತಕಗಳು ಮತ್ತು ನಾದದ ರೂಪದಲ್ಲಿ ಶಾಶ್ವತವಾಗಿ ಉಳಿದುಕೊಂಡು  ಬಂದಿವೆ. ಅದರಿಂದಾಗಿಯೇ ನಾವು ಐಹಿಕ ಜಗತ್ತಿನ ಬಾಧೆಗಳಿಂದ ಬಹಳ ನೋವನ್ನು ಅನುಭವಿಸುವುದಿಲ್ಲ. ಇಲ್ಲಿ ನಾವು ಅಧ್ಯಾತ್ಮ ಜಗತ್ತಿನ ಶಬ್ದಗಳೊಡನೆ ಜೀವಿಸಿದಾಗ, ಈ ಸಾಹಚರ್ಯದ ನೆನಪೇ ನಮ್ಮನ್ನು ಐಹಿಕ ದುಃಖಗಳಿಂದ ದೂರದಲ್ಲಿಡುತ್ತದೆ.

– ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ
ಪತ್ರ, ಡಿಸೆಂಬರ್‌ 22, 1927

* * * *

ಯಾರು ಸದಾ ನನಗೆ ಪ್ರೀತಿಪೂರ್ವಕವಾದ ಸೇವೆಯನ್ನು ಸಲ್ಲಿಸಲು ಮುಡಿಪಾಗಿದ್ದಾರೋ ಅವರಿಗೆ ನನ್ನ ಬಳಿಗೆ ಬರುವುದಕ್ಕೆ ಅಗತ್ಯವಾದ ಬುದ್ಧಿಯೋಗವನ್ನು ನಾನು ಕೊಡುತ್ತೇನೆ.

– ಶ್ರೀಕೃಷ್ಣ , ಭಗವದ್‌ಗೀತಾ: 10.10

* * * *

ಗಿರ್ರನೆ ಸುತ್ತುವ ಜನರು ಇಡೀ ಜಗತ್ತೇ ತಮ್ಮ ಸುತ್ತ ಸುತ್ತುತ್ತಿರುವಂತೆ ಕಾಣುವ ಹಾಗೆ, ನಾವು ಕೃಷ್ಣ ಮತ್ತು ಬಲರಾಮನನ್ನು ಸಾಧಾರಣ ಮಾನವ ಜೀವಿಗಳು ಎಂದು ತಪ್ಪಾಗಿ ಎಣಿಸುತ್ತಿದ್ದೇವೆ.

– ಶ್ರೀ ಉದ್ಧವ, ಕೃಷ್ಣ : ಅಧ್ಯಾಯ : 46

* * * *

ಪ್ರಭುವಿನ ಮಾಯಾಶಕ್ತಿಯಿಂದ ದಿಗ್ಭ್ರಮೆಗೊಂಡ ವ್ಯಕ್ತಿಗಳ ಮಾತುಗಳು, ಸಂಪೂರ್ಣವಾಗಿ ಶರಣಾಗತರಾದ ಆತ್ಮಗಳ ಬುದ್ಧಿಶಕ್ತಿಯನ್ನು, ಯಾವುದೇ ಸನ್ನಿವೇಶದಲ್ಲೂ ವಿಚಲಿತಗೊಳಿಸಲಾರವು.

– ಶ್ರೀ ಉದ್ಧವ, ಶ್ರೀಮದ್‌ ಭಾಗವತಮ್‌: 3.2.10

* * * *

ಕ್ಷಣಭಂಗುರವಾದ ಈ ಐಹಿಕ ದೇಹದ ಮೇಲೆ ನಂಬಿಕೆ ಇಡಬೇಡ. ಏಕೆಂದರೆ ಮೃತ್ಯುದೇವತೆಯಾದ ಯಮರಾಜನು ನಿನ್ನ ಪಕ್ಕದಲ್ಲಿಯೇ ಕಾಯುತ್ತಿದ್ದಾನೆ. ಕರ್ಮದ ಹರಿವು ಯಥಾವತ್‌ ದುಃಖದ ಸಾಗರದಂತಿದೆ. ಇದನ್ನು ಯುಕ್ತವಾಗಿ ಪರಿಗಣಿಸು. ಮುನಿಗಳು ಮತ್ತು ಧರ್ಮಗ್ರಂಥಗಳ ಮಾರ್ಗದರ್ಶನದಲ್ಲಿ ರಾಧಾ ಮತ್ತು ಕೃಷ್ಣನ ಪಾದ ಕಮಲಗಳನ್ನು ಏಕಾಗ್ರಚಿತ್ತದಿಂದ ಆರಾಧಿಸು.

– ಶ್ರೀಲ ನರೋತ್ತಮ ದಾಸ ಠಾಕುರ,
ಶ್ರೀ ಪ್ರೇಮಭಕ್ತಿಚಂದ್ರಿಕಾ: 8.7

* * * *

ಈ ಲೇಖನ ಶೇರ್ ಮಾಡಿ