ನಮಗೆ ಸ್ವಾತಂತ್ರ್ಯ ಯಾವಾಗ?

ಬ್ರಿಟಿಷರಿಂದ ಮುಕ್ತಿ ಪಡೆದು 76 ವರ್ಷಗಳಾದವು; ಸಂಸಾರ ಚಕ್ರದಿಂದ ವಿಮುಕ್ತಿ ಪಡೆಯುವುದು ಎಂದು?

– ಪತಿತಪಾವನ ದಾಸ

ಇವತ್ತು ಬೆಳಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ ಪ್ರಧಾನಿಯವರು ದೇಶದ ಅಭಿವೃದ್ಧಿ ಕುರಿತು ಮಾತನಾಡಿದ್ದಾಯಿತು. 77ನೆಯ ಹೆಮ್ಮೆಯ ಸ್ವಾತಂತ್ರ್ಯ ದಿನವನ್ನು ಶಾಲಾ ಮಕ್ಕಳೂ ಸೇರಿದಂತೆ ನಾವು ಆಚರಿಸಿದ್ದಾಯಿತು. ಆಂಗ್ಲರ ದಬ್ಬಾಳಿಕೆಯ ಶಾಸನವನ್ನು ಕಿತ್ತೆಸೆಯಲು, ಸ್ವರಾಜ್ಯ ಸ್ಥಾಪಿಸಲು ನಡೆದ ದೊಡ್ಡ ಆಂದೋಲನದಲ್ಲಿ ಜೀವ ತೆತ್ತ, ನೆತ್ತರು ಹರಿಸಿದ ಹುತಾತ್ಮರು ಅದೆಷ್ಟೋ. ಪಡೆದಿರುವ ಸ್ವಾತಂತ್ರ್ಯವನ್ನು ನೆರೆಯ ಆಕ್ರಮಣಕಾರರಿಂದ ರಕ್ಷಿಸಲು ಗಡಿಯಲ್ಲಿ ಶ್ರಮಿಸುತ್ತಿರುವ ಯೋಧರೆಷ್ಟೋ. ಅವರಿಗೆಲ್ಲ ನಾವು ಚಿರಋಣಿ. ಸ್ವತಂತ್ರ, ಶಾಂತಿಯುತ ಬದುಕು ನಮಗೆ ಸಿಕ್ಕಿರುವ ಸ್ಮರಣಾರ್ಥ ಸ್ವಾತಂತ್ರ್ಯ ದಿನ ಆಚರಿಸುವುದು ಸರಿಯಷ್ಟೇ. ಆದರೆ ಗಾಢವಾಗಿ ಯೋಚಿಸಿದರೆ, ದಿಟವಾಗಿ ನಾವು ನಮ್ಮ ಬದುಕಿನಲ್ಲಿ ಎಷ್ಟು ಸ್ವತಂತ್ರರು?

ರೋಗ, ಮುಪ್ಪು, ಸಾವು, ಮತ್ತು ಹುಟ್ಟು – ನಮ್ಮನ್ನು ಆಳುತ್ತಿರುವ ಆಕ್ರಮಣಕಾರರು. ಇಂದು ಹುಟ್ಟಿದವ ನಾಳೆ ಮುಪ್ಪಾಗಲೇಬೇಕು, ರೋಗಪೀಡಿತನಾಗಲೇಬೇಕು, ಕೊನೆಗೆ ಸಾವನ್ನಪ್ಪಲೇಬೇಕು. ಅನಂತರ ಮತ್ತೆ ಹುಟ್ಟಲೇಬೇಕು. ಇದನ್ನೇ ಸಂಸಾರ ಚಕ್ರ ಎನ್ನುವುದು. ಆದರೆ ರೋಗ, ಮುಪ್ಪು, ಸಾವು – ಇವು ಯಾರಿಗೆ ತಾನೇ ಬೇಕು? ಮಗುವೊಂದು ಹುಟ್ಟಿದಾಗ ಸಂಬಂಧಿಗಳೆಲ್ಲ ಸಂಭ್ರಮಿಸುವರು. ಆದರೆ ನವಮಾಸಗಳು ಗರ್ಭದೊಳಗೆ ಕಳೆದ ಮಗುವಿಗೊಂದೇ ಆ ಯಾತನೆ ತಿಳಿದಿರುತ್ತದೆ. “ಈ ಬಾರಿ ನನ್ನನ್ನು ಕಾಪಾಡು ತಂದೆ, ನಿನ್ನ ಸೇವಕನಾಗುವೆ” ಎಂದು ದೇವರಿಗೆ ಅದು ಪ್ರಾರ್ಥಿಸುತ್ತದೆಯಂತೆ.

“ಇರೋ ತನಕ ಚೆನ್ನಾಗಿ ತಿಂದು ಕುಡಿದು ಮಜಾ ಮಾಡೋಣ, ಸತ್ತ ನಂತರ ಏನಾಗುತ್ತೆ ಯಾರಿಗೆ ಗೊತ್ತು” ಎನ್ನುವುದಕ್ಕೆ “ಹೆಡೋನಿಸಂ” ಅಥವಾ “ಭೋಗವಾದ” ಎಂದು ಹೆಸರು. ಮತ್ತು ಇದು ಹೊಸ ಸಿದ್ಧಾಂತವೇನಲ್ಲ. ಋಣಂ ಕೃತ್ವಾ ಘೃತಂ ಪಿಬೇತ್‌, ಯಾವತ್‌ ಜೀವೇತ್‌ ಸುಖಂ ಜೀವೇತ್‌ ಎಂದು ಚಾರ್ವಾಕ ಬಹಳ ಹಿಂದೆಯೇ ನುಡಿದಿದ್ದ. ಸಾಲ ಮಾಡಿ ತುಪ್ಪ ತಿನ್ನು, ಹಾಯಾಗಿ ಜೀವನ ಸವಿಸು, ಪಾಪ ಪುಣ್ಯ ಪುನರ್ಜನ್ಮ ಇವೆಲ್ಲ ಬುರುಡೆ ಕತೆಗಳು ಎನ್ನುತ್ತಿದ್ದ ಆತ. ಚಾರ್ವಾಕನ ಶಿಷ್ಯರುಗಳನ್ನು ಹಿಂದೆಂದೆಗಿಂತಲೂ‌ ಹೆಚ್ಚಾಗಿ ಇಂದೇ ನಾವು ಕಾಣಬಹುದಾಗಿದೆ. ಆದರೆ ಇದು ಜೀವನದ ಸರಿಯಾದ ತಿಳುವಳಿಕೆ ಅಲ್ಲ.

ಮಹಾನ್‌ ದಾರ್ಶನಿಕರೂ, ತಪಸ್ವಿಗಳೂ, ಭಗವದ್ಭಕ್ತರೂ, ಕೃಪಾಮೂರ್ತಿಗಳೂ ಆದ ನಮ್ಮ ಆಚಾರ್ಯಶ್ರೇಷ್ಠರು, ಮತ್ತು ಪವಿತ್ರ ಧರ್ಮಗ್ರಂಥಗಳೇ ನಿಜವಾದ ಜ್ಞಾನದ ಆಕರಗಳು, ನಮ್ಮ ಬಾಳಿಗೆ ಸರಿಯಾದ ಹಾದಿ ತೋರಿಸುವ ಬೆಳಕಿನ ಸ್ರೋತಗಳು. ಮತ್ತು ಇಲ್ಲಿಂದ ನಮಗೆ ದೊರುಕುವುದೇ ನೈಜ ಜ್ಞಾನ. “ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂದು ಹರಿದಾಸರೂ ಹಾಡಿದ್ದಾರೆ. ಹಾಗಾದರೆ, ಬದುಕಿನ ಸಂಕಷ್ಟಗಳಿಂದ – ಪ್ರಮುಖವಾಗಿ, ಮೇಲೆ ಹೇಳಿದ ಜನ್ಮ ಮೃತ್ಯು ಜರಾ ವ್ಯಾಧಿ ಇವುಗಳಿಂದ – ಹೇಗೆ ಪಾರಾಗುವುದು?

ಶ್ರೀ ಕೃಷ್ಣನ ನಾಮ ಜಪಿಸುವುದರಿಂದ, ಭಗವದ್ಗೀತೆ, ಭಾಗವತ ಓದುವುದರಿಂದ, ನಮ್ಮ ಕರ್ಮಫಲವನ್ನು ಅವನಿಗೆ ಸಮರ್ಪಿಸಿ ಅವನ ಭಕ್ತಿಸೇವೆ ಮಾಡುವುದರಿಂದ. ಈ ಭೌತಿಕ ಲೋಕಗಳಾಚೆ, ಬಹಳ ದೂರ, ಕೃಷ್ಣನ, ನಾರಾಯಣನ ಆಧ್ಯಾತ್ಮಿಕ ಪ್ರಪಂಚವಿದೆ. ಅದನ್ನೇ ವೈಕುಂಠ, ಪರಮಪದ ಎನ್ನುತ್ತಾರೆ. ನಮ್ಮನ್ನು ಇಲ್ಲಿ ಕಾಡುವ ಯಾವ ಸಂಕಷ್ಟಗಳೂ ಅಲ್ಲಿಲ್ಲ. ಮತ್ತು ಅಲ್ಲಿಗೆ ಒಮ್ಮೆ ಹೋದರೆ, ಹಿಂದಿರುಗಿ ಇಲ್ಲಿ ಬರಬೇಕಾಗಿಲ್ಲ. ಈ ಜೀವನದ ಕೊನೆಗೆ ಅಲ್ಲಿಗೆ ಹೋಗುವುದೇ ಮಾನವಜನ್ಮದ ಕಟ್ಟ ಕಡೆಯ ಗುರಿ. ಇದೇ ಅಲ್ಲವೇ ನಮಗೆ ಬೇಕಾಗಿರುವ ಪರಿಪೂರ್ಣ ಸ್ವಾತಂತ್ರ್ಯ? ಹರೇ ಕೃಷ್ಣ !

ಈ ಲೇಖನ ಶೇರ್ ಮಾಡಿ