ಆಗ ಕೃಷ್ಣ, ಇನ್ನೂ ಪುಟ್ಟ ಮಗು. ಒಂದು ವರ್ಷದ ಹುಟ್ಟುಹಬ್ಬ ಮಾಡ್ಕೊಂಡು ಸ್ವಲ್ಪ ದಿನಗಳಾಗಿದ್ವಷ್ಟೆ. ಆಗೊಂದಿನ ಹೀಗಾಯ್ತು.

ಅಮ್ಮ ಯಶೋದೆ, ಪುಟ್ಟ ಕೃಷ್ಣನ್ನ ತೊಡೆ ಮೇಲೆ ಮಲಗಿಸ್ಕೊಂಡು ತಟ್ತಾ ಇದ್ಲು. ಅವಳು ಹಾಗೇ. ಸ್ವಲ್ಪ ಸಮಯ ಸಿಕ್ಕರೂ ಕೃಷ್ಣನನ್ನ ಎತ್ತಿಕೊಂಡು ಕುಳಿತು ಬಿಡ್ತಿದ್ಲು! ಕೆಳಗೆ ಬಿಡ್ತಲೇ ಇರ್ಲಿಲ್ಲ!!
ಯಶೋದೆ ಹೀಗೆ ತಟ್ಟುತ್ತ ಇರುವಾಗ, ಯಾಕೋ ಕೃಷ್ಣ ಭಾರವಾಗ್ತಿದ್ದಾನೆ ಅನ್ನಿಸ್ಲಿಕ್ಕೆ ಶುರುವಾಯ್ತು ಅವಳಿಗೆ. ಆದ್ರೂ ಮಗುವನ್ನ ಕೆಳಗೆ ಮಲಗಿಸ್ಲಿಕ್ಕೆ ಮನಸು ಬರ್ದೆ, ಹಾಗೇ ತೊಡೆ ಮೇಲೆ ಒರಗಿಸ್ಕೊಂಡ್ಲು. ಕೃಷ್ಣ ಬರ್ತಾ ಬರ್ತಾ ಮತ್ತೂ ಭಾರವಾಗ್ತಲೇ ಹೋದ! ಕೊನೆಗೆ ವಿಪರೀತ ಕಾಲು ಸೋತು, ಅಮ್ಮ ಮಗುವನ್ನು ಕೆಳಗಿಟ್ಟು ಹಾಗೇ ಮಲಗಿಸಿ ಹೊದಿಕೆ ತರಲಿಕ್ಕೆ ಅಂತ ಒಳಗೆ ಹೋದ್ಲು.
ಆ ಹೊತ್ತಿಗೆ ವೃಂದಾವನದಲ್ಲಿ ಇದ್ದಕ್ಕಿದ್ದ ಹಾಗೆ ಭೀಕರ ಸುಂಟರಗಾಳಿ ಬೀಸ್ಲಿಕ್ಕೆ ಶುರುವಾಯ್ತು. ಸುಂಟರಗಾಳಿ ಅಂದ್ರೆ, ಸುರುಳಿ ಸುರುಳಿಯಾಗಿ ಸುಳಿ ಹಾಗೆ ಸುತ್ತುತ್ತ ಅಬ್ಬರದಿಂದ ಬೀಸೋ ಗಾಳಿ. ಅದು ಬೀಸೋ ರಭಸಕ್ಕೆ ವೃಂದಾವನದ ಹಸು, ಕರು ಎಲ್ಲವೂ ರೊಂಯ್ ಅಂತ ಗಾಳಿಯ ಸುಳಿಗೆ ಸೇರ್ಕೊಂಡು ತೂರಿಹೋದ್ವು. ಇಡೀ ಊರು ಧೂಳಿಂದ ತುಂಬ್‌ಹೋಯ್ತು.
ಇತ್ತ ಯಶೋದೆ ಮಗುವಿಗೆ ಅಂತ ಹೊದಿಕೆ ಹಿಡ್ಕೊಂಡು ಬರ್ತಾಳೆ… ಅರೆ! ಮಗು ಎಲ್ಲಿ? ಕೃಷ್ಣ ನಾಪತ್ತೆ!!
ಅಳುವೇ ಬಂದುಹೋಯ್ತು ಯಶೋದೆಗೆ. ಅವಳ ದನಿ ಕೇಳಿ ಆ ಗಾಳೀಲೂ ತೂರಾಡ್ತಾ ಅಕ್ಕ ಪಕ್ಕದ ಗೋಪಿಯರು ಬಂದ್ರು. ಎಲ್ರೂ ಎಷ್ಟು ಹುಡುಕಿದ್ರೂ ಕೃಷ್ಣ ಸಿಗಲೇ ಇಲ್ಲ. ಬೀಸಿ ಬಂದ ಸುಂಟರಗಾಳಿ ಅವನನ್ನ ಹಾರಿಸ್ಕೊಂಡು ಹೋಗಿತ್ತು!
ಹಾಗೆ ವೃಂದಾವನವನ್ನ ಧೂಳೆಬ್ಬಿಸಿ ಕೃಷ್ಣನನ್ನ ಅಪಹರಿಸಿದ್ದು ತೃಣಾವರ್ತ ಅನ್ನೋ ಸುಂಟರಗಾಳಿ ರಾಕ್ಷಸ. ಅವನು ದುಷ್ಟ ಕಂಸನ ಸೇವಕ. ಆತನ ಆಜ್ಞೆ ನೆರವೇರಿಸಲಿಕ್ಕೆ ಅಂತಾನೇ ವೃಂದಾವನಕ್ಕೆ ಬಂದಿದ್ದ!
ತೃಣಾವರ್ತ ಕೃಷ್ಣನ್ನ ಹಾರಿಸ್ಕೊಂಡು ತನ್ನ ಕೈಗಳ ಮಧ್ಯ ಇಟ್ಕೊಂಡು ಮೇಲೆ ಮೇಲೆ… ಮೇಲಕ್ಕೆ ಹೋದ. ಹೋಗ್ತಾ ಹೋಗ್ತಾ ಅವನ ಕೈ ಸೋತುಹೋಯ್ತು. ಕೃಷ್ಣ ಭಾರವಾಗ್ತಿದಾನೆ!! ರಾಕ್ಷಸನಿಗೆ ಭಯ, ಗಾಬರಿ ಎರಡೂ ಆಯ್ತು. ಎಷ್ಟು ಪ್ರಯತ್ನ ಪಟ್ರೂ ಅವನಿಗೆ ಮೇಲೇಳಕ್ಕೆ ಸಾಧ್ಯವೇ ಆಗ್ಲಿಲ್ಲ. ತೃಣಾವರ್ತನ ಕುತ್ತಿಗೆ ಸುತ್ತ ಕೈ ಬಳಸಿ ಮಲಗಿದ್ದ ಕೃಷ್ಣ , ಅದನ್ನ ಜೋರಾಗಿ ಜಗ್ಗಿಬಿಟ್ಟ! ರಾಕ್ಷಸನ ಪಾಡು ನೋಡಬೇಕು ಆಗ! ಉಸಿರುಕಟ್ಟಿ ಅವನ ದೇಹ ಕುಸೀತಾ ಬಂತು. ಭಾರ ತಡೀಲಾರ್ದೆ ಸುಸ್ತಿನಿಂದ ಅವನ ಕಣ್ಣುಗುಡ್ಡೆ ಕಳಚಿ ಹೋಯ್ತು. ಜೋರಾಗಿ ಕಿರುಚ್ತಾ ತೃಣಾವರ್ತ ಮೇಲಿಂದ ಕೆಳಗೆ ಬಿದ್ದು ಬಿಟ್ಟ. ಅವನ ಮೈ-ಕೈ ಎಲ್ಲಾ ಜಜ್ಜಿ ಹೋಯ್ತು. ಜೀವವೂ ಹಾರಿಹೋಯ್ತು.
ಯಶೋದೆ ಮನೇಲಿ ಜನವೋ ಜನ. ಎಲ್ರೂ ಕೃಷ್ಣನ್ನ ಹುಡುಕೋರೆ. ಆ ಹೊತ್ತಿಗೆ ಧೂಳು ಕಡಮೆಯಾಗಿತ್ತು. ಅವರಿಗೆಲ್ಲ ಬಯಲಲ್ಲಿ ಬಿದ್ದ ರಾಕ್ಷಸನ ದೇಹ ಕಾಣಿಸ್ತು. ಪುಟಾಣಿ ಕೃಷ್ಣ ಅವನ ತೋಳಿನ ಮೇಲೆ ಆಡ್ತಾ ಕುಳಿತಿದ್ದ!!
ಗೋಪ ಜನರೆಲ್ಲ ನಿಟ್ಟುಸಿರು ಬಿಟ್ರು. ಕೃಷ್ಣಂಗೆ ಏನೂ ಆಗದೆ ಇದ್ದದ್ರಿಂದ ಖುಷಿ ಪಟ್ರು. ಅವನಿಗೆ ದೇವರ ರಕ್ಷೆ ಇದೆ, ಅದಕ್ಕೆ ಬಚಾವಾದ ಅಂತ ಮಾತಾಡ್ಕೊಂಡ್ರು.
ಪಾಪ! ಕೃಷ್ಣನೇ ಸಾಕ್ಷಾತ್ ಭಗವಂತ ಅನ್ನೋದು ಅವರಿಗಾದ್ರೂ ಹೇಗೆ ಗೊತ್ತಾಗ್ಬೇಕಿತ್ತು!?