ನೀನು ಯಾರು?

ನಿನ್ನ ದೇಹದ ಅಂಗಗಳನ್ನೂ ಅಥವಾ ವರ್ಣವನ್ನೂ ಸಹ, ಕುಲ, ರಾಷ್ಟ್ರೀಯತೆ ಲಿಂಗ ಅಥವಾ ವೃತ್ತಿಯನ್ನು ಪರೀಕ್ಷಿಸಿದರೂ ತಿಳಿಯಲಾರೆ. ನಿನ್ನ ಅಂಕಿತದ ಹುಡುಕಾಟ ದೇಹ ಮತ್ತು ಬುದ್ಧಿಯ ವ್ಯಾಪ್ತಿಯನ್ನು ಮೀರಿರಬೇಕು. (ದೇಹೇಂದ್ರಿಯಾತೀತ ಅನ್ವೇಷಣೆ)

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
ಮುಂಬೈನಲ್ಲಿ  ಡಿಸೆಂಬರ್‌ 1972ರಲ್ಲಿ ಮಾಡಿದ ಉಪನ್ಯಾಸ.

ಶ್ರೀ ಭಗವಾನ್‌ ಉವಾಚ

ಇದಂ ಶರೀರಂ ಕೌನ್ತೇಯ ಕ್ಷೇತ್ರಮಿತ್ಯಭಿಧೀಯತೇ

ಏತದ್‌ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ

ದೇವೋತ್ತಮ ಪರಮ ಪುರುಷನು ಹೇಳಿದನು – ಕೌಂತೇಯನೇ, ಈ ದೇಹವನ್ನು ಕ್ಷೇತ್ರವೆಂದೂ, ದೇಹವನ್ನು ತಿಳಿದವನನ್ನು ಕ್ಷೇತ್ರಜ್ಞ ಎಂದೂ ಕರೆಯುತ್ತಾರೆ.

(ಭಗವದ್ಗೀತಾ: 13.2)

ಇಲ್ಲಿ ಶರೀರ (ಕ್ಷೇತ್ರ) ಎಂಬುದು ಕ್ಷೇತ್ರವನ್ನು ಬಲ್ಲವನಿಗಿಂತ (ಕ್ಷೇತ್ರಜ್ಞ) ಭಿನ್ನ ಎಂದು ಭಗವಾನ್‌ ಶ್ರೀಕೃಷ್ಣ ಹೇಳುತ್ತಾನೆ. ಆದುದರಿಂದ “ನಾನು ಈ ಶರೀರವಲ್ಲ, ಅದು ನನ್ನ ಶರೀರ” ಎಂಬುದನ್ನು ತಿಳಿಯಬೇಕು. ಇದನ್ನು ವಿಶ್ಲೇಷಿಸಿದಾಗ, ಹೀಗೆ ಹೇಳಬಹುದು, “ಇದು ನನ್ನ ಕೈ, ಇದು ನನ್ನ ಕಾಲು, ಇದು ನನ್ನ ತಲೆ”, ಆದರೆ “ನಾನೇ ತಲೆ” ಅಥವಾ “ನಾನೇ ಕೈ” ಎಂದು ಯಾರೂ ಹೇಳುವುದಿಲ್ಲ. ಹಾಗಾಗಿ, “ನಾನು” ಎಂಬ ಆತ್ಮ, ದೇಹಕ್ಕಿಂತ ಭಿನ್ನ. ಉದಾಹರಣೆಗೆ ನಾನು ಈ ಭವನದಲ್ಲಿ ವಾಸಿಸುತ್ತಿದ್ದರೂ, ನಾನೇ ಭವನವಲ್ಲ.

ಆದರೆ “ನಾನು ಈ ಶರೀರ” ಎಂಬ ಮೂಲತತ್ತ್ವವನ್ನು ಆಧುನಿಕ ನಾಗರಿಕತೆ ಅಂಗೀಕರಿಸುತ್ತದೆ. ಆ ಕಾರಣ “ನಾನು ಅಮೆರಿಕವಾಸಿ” “ನಾನು ಭಾರತೀಯ” “ನಾನು ಬ್ರಾಹ್ಮಣ” “ನಾನು ಮನುಷ್ಯ” “ನಾನು ಹೆಣ್ಣು” ಎಂದು ಜನರು ಭಾವಿಸುತ್ತಾರೆ. ಹೀಗೆ ಭಾವನೆಗಳು ಮುಂದುವರಿಯುತ್ತವೆ. ಜೀವನ ಒಂದು ಒಗಟು. ಅದನ್ನು ಬಿಡಿಸಬಹುದು. ನಮ್ಮ ಹುಡುಕಾಟದಲ್ಲಿ ನಮ್ಮ ಅಂಕಿತ ಬಹುಮುಖ್ಯವಾದ ಮೂಲತತ್ತ್ವದ ಕಡೆ ಗಮನ ಹರಿಸುವುದಿಲ್ಲ – ಅದು ಆತ್ಮ. ನಾವು ಯಾರೆಂಬುದನ್ನು ಅರ್ಥಮಾಡಿಕೊಂಡರೆ ಜೀವನದ ಎಲ್ಲ ಘಟಕಗಳು ಒಂದೆಡೆ ಕೂಡುತ್ತವೆ. ಈ ದೈಹಿಕ ಪರಿಕಲ್ಪನೆ ತಿರಸ್ಕೃತವಾಗಿದೆ; ಅದು ಪಾಶವೀ ಪರಿಕಲ್ಪನೆ. ನಾಯಿಯ ಒಡಲು ಹೊತ್ತ ಆತ್ಮ ನಾಯಿಯ ಶರೀರಕ್ಕಿಂತ ಭಿನ್ನವೆಂಬುದು ನಾಯಿಗೆ ತಿಳಿಯದು. ಆದರೆ ಆತ್ಮವು ಆ ದೇಹದೊಳಗೆ ಅಂತರ್ಗತವಾಗಿದ್ದರೂ ಅದು ಶ್ವಾನಶರೀರಕ್ಕಿಂತ ಪೃಥಕ್ಕಾದುದೆಂಬುದು ಸತ್ಯ. ಇದು ವೇದವಾಙ್ಮಯದಿಂದ ಲಭ್ಯವಾಗುವ ಮಾಹಿತಿ; ಇದುವೆ ಜ್ಞಾನ.

ನೀವು ನಿಮ್ಮ ಶರೀರ ಕುರಿತ ಚಿಂತನೆಯಲ್ಲೆ ನಿಮಗ್ನರಾಗಿದ್ದರೆ, ಈ ಪ್ರಶ್ನೆಯನ್ನು ಕೇಳಬಹುದು, “ನಾನು ಈ ಬೆರಳೆ?” ಅದಕ್ಕೆ ಉತ್ತರ – “ಇಲ್ಲ, ನಾನು ಈ ಬೆರಳಲ್ಲ. ಅದು ನನ್ನ ಬೆರಳು” ಅಂತೆಯೇ “ಇದು ನನ್ನ ತಲೆ, ನನ್ನ ಕಾಲು, ನನ್ನ ದೇಹ.” ಕೇವಲ ಸರಳವಾದ ತರ್ಕದಿಂದ ನಾವು ಈ ದೇಹವಲ್ಲವೆಂಬುದನ್ನು ತಿಳಿಯಬಹುದು. ಅದು ಆ  ಪರಬ್ರಹ್ಮನಾದ ಶ್ರೀಕೃಷ್ಣನಿಂದ ಸಮರ್ಥಿಸಲ್ಪಟ್ಟಿದೆ.

ಶಾಸ್ತ್ರ  ಹೇಳುತ್ತೆ, ಯಸ್ಯಾತ್ಮಬುದ್ಧಿಃ ಕುಣಪೇ ತ್ರಿಧಾತುಕೇ….. ಸ ಏವ ಗೋಖರಃ “ಶ್ಲೇಷ್ಮ (ಕಫ), ಪಿತ್ತ, ಮತ್ತು ವಾತದಿಂದ ಉಂಟಾದ ಶರೀರವೆ ನಾನು ಎಂದು ಯಾರು ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೋ, ಆತ ಒಬ್ಬ ಹಸು ಇಲ್ಲವೆ ಗಾರ್ದಭ.” ಆಧುನಿಕ ನಾಗರಿಕತೆ ಎಂದರೇನು ಎಂದು ತಿಳಿಯಲು ಪ್ರಯತ್ನಿಸಿ. ಅದು ದನಗಾರ್ದಭಗಳ ಸಂಯೋಗ, ಏಕೆಂದರೆ ಪ್ರತಿಯೊಬ್ಬನೂ “ನಾನು ಈ ದೇಹ” ಎಂದು ಅಂದುಕೊಳ್ಳುತ್ತಾನೆ. ಮತ್ತೊಬ್ಬ “ನಾನು ಅಮೆರಿಕದವ” ಮಗದೊಬ್ಬ “ನಾನು ರಷ್ಯಾವಾಸಿ” ಎಂದುಕೊಳ್ಳುತ್ತ “ಇಬ್ಬರೂ ಕಚ್ಚಾಡುತ್ತಾರೆ.” ಇದು ಹೀಗೆಯೇ ಮುಂದುವರಿಯುತ್ತದೆ. “ನಾನು ಈ ಶರೀರವಲ್ಲ” ಎಂಬ ಸರಳವಾದ ತಿಳಿವಳಿಕೆಯಿಲ್ಲ.

ಅಹಂ ಬ್ರಹ್ಮಾಸ್ಮಿ “ನಾನೇ ಚೇತನ” ಎಂದು ವೇದ ಸಾರುತ್ತದೆ. ಸೋಽಹಂ ಎಂದರೆ “ನಾನು ಗುಣಾತ್ಮವಾಗಿ  ಪರಮಾತ್ಮ, ಕೃಷ್ಣನೊಂದಿಗೆ ಒಂದಾಗಿದ್ದೇನೆ.”  ಶ್ರೀಕೃಷ್ಣ ಸಚ್ಚಿದಾನಂದ – ಶಾಶ್ವತ, ಪೂರ್ಣಜ್ಞಾನ, ಪರಮಾನಂದ – ಹೇಗೋ ಹಾಗೆಯೇ ನಾನೂ ಸಚ್ಚಿದಾನಂದ, ಏಕೆಂದರೆ ನಾನು ಆ ಪರಬ್ರಹ್ಮನ ಒಂದು ಅಂಗ. ವ್ಯತ್ಯಾಸವಿಷ್ಟೆ – ಪರಮಾತ್ಮ ಅನಂತ, ನಾನು ಅಂತ – ಅಣು ಸಮಾನ.

ಚಿನ್ನದ ಗಣಿಯಲ್ಲಿ ಚಿನ್ನದ ಗಟ್ಟಿಗಿರುವ ಎಲ್ಲ ವಿಶಿಷ್ಟ ಗುಣಗಳೂ ಒಂದು ಚಿನ್ನದ ಕಣಕ್ಕೆ ಇರುತ್ತವೆ. ಸಾಗರದ ಒಂದು ಬಿಂದುವಿನಲ್ಲೂ ಸಹ ಇಡೀ ಸಾಗರದ ಗುಣವೇ ಇರುತ್ತದೆ. ಅದರಲ್ಲಿರುವುದೊ ಅದೇ ರಾಸಾಯನಿಕ ಪದಾರ್ಥಗಳು. ಹಾಗೆಯೇ ಶ್ರೀಕೃಷ್ಣನ ಅವಿಭಾಜ್ಯ ಅಂಗವಾಗಿರುವ ನಾವೆಲ್ಲರೂ ಭೌತಿಕ ಪರಿಸ್ಥಿತಿಗೆ ಅತೀತರು. ಆದರೆ ನಾವು ನಮ್ಮನ್ನು ಈ ಐಹಿಕ ಸನ್ನಿವೇಶದಲ್ಲಿ ತೊಡಗಿಸಿರುತ್ತೇವೆ. ಇದು “ಮಾಯೆ” ಭ್ರಮೆ. ಕೃಷ್ಣನಿಂದ ದೂರಸರಿದು ನಾವು ಭೋಗಭಾಗ್ಯವೆಲ್ಲವನ್ನು ಅನುಭವಿಸಲು ಹೊರಟೆವು. ಆ ಕಾರಣಕ್ಕಾಗಿ ನಾವು ಭ್ರಮೆಗೆ ಒಳಗಾಗಿದ್ದೇವೆ.

ಈ ಭೌತಿಕ ಸ್ಥಿತಿಗತಿಗಳೊಡನೆ ನಮ್ಮದು ಕನಸಿನೊಳಗಣ ಬದುಕು. ನಾವು ರಾತ್ರಿ ಕನಸು ಕಾಣುವಾಗ, ಈ ಶರೀರವನ್ನು ಮರೆಯುತ್ತೇವೆ. ದಿನದ ವೇಳೆ ನಾನು ಈ ದೇಹದೊಡನೆ ತಾದಾತ್ಮ್ಯ ಹೊಂದುತ್ತೇನೆ. “ನಾನು ಅಮೆರಿಕದವ” “ನಾನು ಭಾರತೀಯ” “ನಾನು ಬ್ರಾಹ್ಮಣ”. ರಾತ್ರಿ ನಿದ್ರಿಸುವಾಗ ನಾನು ಅಮೆರಿಕದವನೇ, ಭಾರತೀಯನೇ, ಬ್ರಾಹ್ಮಣನೇ ಎಂಬುದನ್ನು ಮರೆತಿರುತ್ತೇನೆ. ಕೆಲವೊಮ್ಮೆ ಕನಸಿನಲ್ಲಿ ಸುಂದರವಾದ ಅರಮನೆಗಳಿಗೆ, ತೋಟಗಳಿಗೆ ಹೋಗಿರುತ್ತೇನೆ. ಕನಸು ಮುಗಿಯುತ್ತಿದ್ದಂತೆಯೇ ಮತ್ತೆ ನಾವು ನಮ್ಮ ಹಾಸಿಗೆಯ ಮೇಲೆ ಪವಡಿಸಿರುತ್ತೇವೆ, ನೋಡಿದಿರಾ? ಇದು ನಮ್ಮ ದೈನಂದಿನ ಅನುಭವ.

ಹೀಗಾಗಿ, ನಾವು ಕೃಷ್ಣನನ್ನು ಅನುಕರಿಸಲು ಹೊರಟೆವು. ಆತ ನಮಗೊಂದು ತಾತ್ಕಾಲಿಕ ನೆಲೆಯನ್ನು ಕಲ್ಪಿಸಿಕೊಟ್ಟ. ಒಂದು ಅವಾಸ್ತವಿಕವಾದ ನೆಲೆ.

ಕೆಲವೊಮ್ಮೆ ನಾವು ಮರುಭೂಮಿಯಲ್ಲಿ ನೀರನ್ನು ಕಂಡೆವೆಂದುಕೊಳ್ಳುತ್ತೇವೆ. ಅದು ಭ್ರಮೆ. ಅದು ನೀರಲ್ಲ, ಆದರೂ ಅಲ್ಲಿ ವಿಶಾಲವಾದ ಜಲಾಶಯವಿದೆ ಎಂದುಕೊಳ್ಳುತ್ತೇವೆ. ಮೂಢ ಪ್ರಾಣಿಗಳು ಮರುಭೂಮಿಯಲ್ಲಿ ಭ್ರಮೋತ್ಪಾದಕ ನೀರಿನ ಸೆಲೆಯನ್ನರಸುತ್ತ ಧಾವಿಸುವಂತೆ ಸುಖವೆಂಬ ಬಿಸಿಲ್ಗುದುರೆಯ ಬೆನ್ನಟ್ಟಿ, ಈ ಭೌತಿಕ ಪ್ರಪಂಚದಲ್ಲಿ ಧಾವಿಸುತ್ತಿದ್ದೇವೆ.

ಇಲ್ಲಿ ಸಂತೋಷಕ್ಕೆ ಎಡೆಯಿಲ್ಲ. ಜೀವನದ ಸಂಧ್ಯೆಯಲ್ಲಿ ನಾವು ನಿರಾಶೆಯಿಂದ ಹತಾಶರಾಗುತ್ತೇವೆ. ಯಾವಾಗ ನಾವು ಇಂದ್ರಿಯ ಸುಖವನ್ನು ಅನುಭವಿಸಲಾರೆವೋ ಆಗ ನಾವು ದುಃಖಿತರಾಗುತ್ತೇವೆ. ಪಾರಮಾರ್ಥಿಕದಲ್ಲಿ ಒಲವು ಬೆಳೆಸದ ವೃದ್ಧರು ಅತಿ ದುಃಖಿತರಂತೆ ಕಾಣುತ್ತಾರೆ. ಏಕೆಂದರೆ ಆ ವೃದ್ಧಾಪ್ಯದಲ್ಲಿ ಇಂದ್ರಿಯ ಸುಖವನ್ನು ಅನುಭವಿಸಲು ಅವರು ಅಶಕ್ತರು. ಕೆಲವೊಮ್ಮೆ ತಮ್ಮ ಇಂದ್ರಿಯೋದ್ದೀಪನಕ್ಕಾಗಿ ಮದ್ದು ಸೇವಿಸುತ್ತಾರೆ, ಸಶಕ್ತರಾಗಲು. ಅದು ಹೇಗೆ ಸಾಧ್ಯ? ಆದುದರಿಂದ ನಾವು ಈ ಶರೀರವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದೈಹಿಕಸುಖ, ಇಂದ್ರಿಯ ಚಾಪಲ್ಯದ ಪೂರೈಕೆ ಎಲ್ಲವೂ ಭ್ರಮೆ.

ಭಗವದ್ಗೀತೆಯಲ್ಲಿ ಮತ್ತೊಂದೆಡೆ (6.21) ಈ ಶ್ಲೋಕವನ್ನು ಕಾಣಬಹುದು:

ಸುಖಮಾತ್ಯನ್ತಿಕಂ ಯತ್ತದ್‌ ಬುದ್ಧಿಗ್ರಾಹ್ಯಮತೀನ್ದ್ರಿಯಮ್‌

ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ

(ಭಕ್ತನಿಗೆ ಈ ಶ್ಲೋಕವನ್ನು ನೋಡಿ, ಅರ್ಥ, ಭಾಷಾಂತರವನ್ನು ಓದು:)

ಭಕ್ತ: ಸಮಾಧಿ ಎಂದು  ಕರೆಯುವ  ಪರಿಪೂರ್ಣತೆಯ  ಹಂತದಲ್ಲಿ ಮನಸ್ಸು  ಯೋಗಾಭ್ಯಾಸದಿಂದ ಇಹಲೋಕದ ಮಾನಸಿಕ ಚಟುವಟಿಕೆಗಳಲ್ಲಿ ತೊಡಗದಂತೆ ನಿರ್ಬಂಧದಲ್ಲಿ ಇರುತ್ತದೆ. ಈ ಪರಿಪೂರ್ಣತೆಯ ಲಕ್ಷಣವೆಂದರೆ ಶುದ್ಧ ಮನಸ್ಸಿನಿಂದ ಆತ್ಮವನ್ನು ಕಾಣುವ ಶಕ್ತಿ ಮತ್ತು ಆತ್ಮನನ್ನು ಪ್ರೀತಿಸಿ ಸಂತೋಷಪಡುವ ಶಕ್ತಿ. ಈ ಆನಂದ ಸ್ಥಿತಿಯಲ್ಲಿ ಮನುಷ್ಯನು ದಿವ್ಯ ಇಂದ್ರಿಯಗಳ ಮೂಲಕ ಸಾಧಿಸಿದ ಅಮಿತ ಅಲೌಕಿಕ ಸುಖದಲ್ಲಿ ನೆಲೆಯಾಗಿರುತ್ತಾನೆ. ಹೀಗೆ ನೆಲೆಯನ್ನು ಪಡೆದವನು ಸತ್ಯವನ್ನು ಬಿಡುವುದೇ ಇಲ್ಲ. ಇದನ್ನು ಪಡೆದನಂತರ ಇದಕ್ಕಿಂತ ಹೆಚ್ಚಿನ ಗಳಿಕೆ ಯಾವುದೂ ಇಲ್ಲ ಎಂದು ಯೋಚಿಸುತ್ತಾನೆ.

ಶ್ರೀಲ ಪ್ರಭುಪಾದ: ಆದುದರಿಂದ, ಭಗವದ್ಗೀತೆಯಲ್ಲಿ ಎಲ್ಲ ಮಾಹಿತಿಗಳೂ ಉಕ್ತವಾಗಿವೆ. ನಾವು ನಿಜವಾದ ಸುಖವನ್ನು ಅನುಭವಿಸಬೇಕಾದರೆ, ಎಲ್ಲ ಭೌತಿಕ ವ್ಯಾಪಾರಗಳಿಂದ ಮುಕ್ತರಾಗಿ ಶುದ್ಧರಾಗಬೇಕು. (ಐಹಿಕ ಪ್ರಜ್ಞೆಯನ್ನು ನೀಗಿಕೊಳ್ಳಬೇಕು) ಕೃಷ್ಣಪ್ರಜ್ಞಾ ಅಭಿಯಾನದಲ್ಲಿ ಪ್ರತಿಯೊಬ್ಬನ ಧ್ಯೇಯವೂ ಇದೇ ಆಗಿರುತ್ತದೆ. ಶುದ್ಧವಾದ ಕೃಷ್ಣಪ್ರಜ್ಞೆಯತ್ತ ಕ್ರಮಿಸುವುದು. ಅದು ಶ್ರೀಕೃಷ್ಣಾನುಗ್ರಹದಿಂದಲೆ ಪ್ರಾಪ್ತವಾಗಬೇಕು: ಅಥಾಪಿ ತೇ ದೇವ ಪದಾಂಬುಜದ್ವಯ ಪ್ರಸಾದಲೇಶಾನುಗೃಹೀತ ಏವ ಹಿ । ಜಾನಾತಿ ತತ್ತ್ವಂ ಭಗವನ್ಮಹಿಮ್ನೋ ಕೃಷ್ಣನನ್ನು ಕೃಷ್ಣಮಾರ್ಗದಲ್ಲಿ ಅಲ್ಲದೆ ಅನ್ಯಥಾ ಅರ್ಥಮಾಡಿಕೊಳ್ಳಲಾಗದು. ಆ ಮಾರ್ಗವೇ ಭಕ್ತಿ, ಸೇವಾ ಕೈಂಕರ್ಯ.

`ಭಕ್ತಿ’ ಶಬ್ದದ ಧಾತು ಭಜ್‌, ಅದರ ಅರ್ಥ ಪ್ರೇಮಪೂರಿತವಾದ ಭಗವತ್ಸೇವೆ. ಕೃಷ್ಣ ಹೇಳುತ್ತಾನೆ, ಮಹಾತ್ಮಾನಃ ತು ಮಾಮ್‌ ಪಾರ್ಥ ದೈವೀಂ ಪ್ರಕೃತಿಮ್‌ ಆಶ್ರಿತಾಃ “ಉದಾರಚರಿತರು ನನ್ನ ಆಧ್ಯಾತ್ಮಿಕ ಚೈತನ್ಯದ ಆಸರೆ ಪಡೆಯುತ್ತಾರೆ. ಹಳಿ ತಪ್ಪದೇ ನನ್ನ ಸೇವೆಯಲ್ಲಿ ನಿರತರಾಗಿರುತ್ತಾರೆ.” ಹೀಗಾಗಿ ಮಹಾತ್ಮರಿಗಷ್ಟೇ ದೈವ ಕೈಂಕರ್ಯ ಪ್ರಾಪ್ತಿ. `ಮಹಾತ್ಮ’ ಎಂದರೆ ಯಾರ ಆತ್ಮ ವಿಶಾಲವಾದುದೋ ಅವರೇ. ಕುಟುಂಬ, ಸಮಾಜ, ರಾಷ್ಟ್ರ, ಧರ್ಮ ಮತ್ತಿತರ ಭಾವನೆಗಳನ್ನೇ ರೂಢಿಸಿಕೊಂಡಿರುವವರು ಮಹಾತ್ಮರಲ್ಲ. ಅವರು ಕ್ಷುದ್ರಾತ್ಮರು. ಸಣ್ಣವರು, ಬುದ್ಧಿಹೀನ ಮನುಷ್ಯರು. ಮಹಾತ್ಮರ ಚಿಂತನೆ ಉದಾರ. ಚೈತನ್ಯ ಮಹಾಪ್ರಭುಗಳು ಹೇಳಿದಂತೆ:

ಪೃಥಿವೀತೇ ಆಛೇ ಯತ ನಗರಾದಿಗ್ರಾಮ

ಸರ್ವತ್ರ ಪ್ರಚಾರ ಹೈಬೇ ಮೋರ ನಾಮ

ವಿಶ್ವಾದ್ಯಂತ ಎಲ್ಲ ನಗರ-ಗ್ರಾಮಗಳಲ್ಲಿ ನನ್ನ ನಾಮೋಚ್ಚಾರಣೆ ನಾಮಸಂಕೀರ್ತನೆ ನಡೆಯುತ್ತದೆ. “ನನ್ನ ಗ್ರಾಮ, ನನ್ನ ದೇಶ, ನನ್ನ ಸಮಾಜ” ಎಂಬ ರೀತಿಯಲ್ಲಿ ಅವರು ಆಲೋಚಿಸುತ್ತಿರಲಿಲ್ಲ. ಅವರು ಇನ್ನೂ ವಿಸ್ತೃತ ರೀತಿಯಲ್ಲಿ ಆಲೋಚಿಸುತ್ತಿದ್ದರು.

ಚೈತನ್ಯ ಮಹಾಪ್ರಭುಗಳೇ ಸಾಕ್ಷಾತ್‌ ಕೃಷ್ಣ , ಮತ್ತು ಕೃಷ್ಣನ ಆಲೋಚನೆ ಎಲ್ಲ ಚೇತನರನ್ನು ತನ್ನ ತೆಕ್ಕೆಯಲ್ಲಿ ಅಡಗಿಸಿಕೊಳ್ಳುತ್ತದೆ.

ಸರ್ವ ಯೋನಿಷು ಕೌನ್ತೇಯ ಮೂರ್ತಯಃ ಸಮ್ಭವನ್ತಿ ಯಾಃ

ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ

“ಎಲ್ಲ ಪ್ರಾಣಿಗಳಲ್ಲೂ ಇರುವ ಸಮಸ್ತ ಚೇತನರಿಗೂ ನಾನೇ ತಂದೆ” (ಗೀತೆ:14.4). ಇದು ಮಹಾತ್ಮ ಚಿಂತನೆ. ಎಲ್ಲ ಜೀವಿಗಳ ಬಗ್ಗೆ ಕೃಷ್ಣ ಆಲೋಚಿಸುತ್ತಾನೆ. `ಕೃಷ್ಣ ಹಿಂದೂ ದೇವರು’ ಎಂದು ಕೆಲವರು ಹೇಳುತ್ತಾರೆ. ಯಾಕೆ ಹಿಂದೂ ದೇವರು? ಕೃಷ್ಣ ಹಿಂದೂ ದೇವರೆಂದು ನಿಘಂಟು ಹೇಳಬಹುದು. ಆದರೆ ಭಗವದ್ಗೀತೆಯಲ್ಲಿ ಸ್ವಯಂ ಶ್ರೀಕೃಷ್ಣನೆ ಅಪ್ಪಣೆ ಕೊಡಿಸಿದ್ದಾನೆ. “ನಾನೇ ಎಲ್ಲ ಜೀವಿಗಳಿಗೂ ತಂದೆ.” ಆತ ಕೇವಲ ಹಿಂದೂಗಳ ಅಥವಾ ಭಾರತೀಯರ ತಂದೆಯೇ ಏಕೆ? ಇಲ್ಲ, ಅವನೆ ಪ್ರತಿಯೊಬ್ಬನ ಪರಮಪಿತಾ.

ಹಾಗೆಯೇ ಈ ಕೃಷ್ಣಪ್ರಜ್ಞೆಗೆ, ಜನಾಂಗೀಯ ಆಂದೋಳನದ ವೈಕಲ್ಯ ತಟ್ಟುವುದಿಲ್ಲ. ಅದು ಅತಿ ವಿಸ್ತಾರವಾದ ಅಭಿಯಾನ. ಎಲ್ಲ ಜೀವಿಗಳಿಗೂ ಕೃಷ್ಣನೆಡೆಗೆ ಬರಲು ಕರೆ ಕೊಡುತ್ತದೆ; ಮರಳಿ ಪರಂಧಾಮಕ್ಕೆ, ಮರಳಿ ಪರಮಾತ್ಮನೆಡೆಗೆ.

ನಾವು ಬುದ್ಧಿ ವೈಕಲ್ಯಕ್ಕೆ ಒಳಗಾಗಬಾರದು; ನಮ್ಮ ದೇಹದೊಡನೆ ನಮ್ಮನ್ನು ಗುರುತಿಸಿಕೊಳ್ಳಬಾರದು. ಇಲ್ಲಿ ಶ್ರೀಕೃಷ್ಣ ಹೇಳುವಂತೆ, ಇದಂ ಶರೀರಂ ಕೌಂತೇಯ ಕ್ಷೇತ್ರಂ: “ಈ ಶರೀರ ಆತ್ಮದ ವ್ಯಾಪಾರದ ಕ್ಷೇತ್ರ” ಕೆಲವರಿಗೆ ದೈಹಿಕ ಪ್ರಜ್ಞೆ ಇದೆ ಎಂದು ಭಾವಿಸೋಣ. ಆತ ಅನೇಕ ಉಗ್ರವಾದ ದೈಹಿಕ ಅಭ್ಯಾಸಗಳನ್ನು ಮಾಡಬಹುದು. ಆತನ ದೇಹ ಸದೃಢವಾಗಿ ಸಬಲನಾಗಿದ್ದರೆ ಆತ ಸುಖಿ. ಕಾರಣವೇನೆಂದರೆ “ನಾನೇ ಶರೀರ ಎಂದು ಆತ ಭಾವಿಸುತ್ತಾನೆ.” ಹಾಗೆಯೇ ಕೃಷ್ಣ ಪ್ರಜ್ಞಾಭ್ಯಾಸ ಬಲದಿಂದ ನಿಮ್ಮ ದೇಹವನ್ನು ಆಧ್ಯಾತ್ಮಿಕವಾಗಿ ಸಬಲಗೊಳಿಸಬಹುದು. ನೀವು ನಿಮ್ಮ ಭೌತಿಕ ಶರೀರವನ್ನು ಸಬಲಗೊಳಿಸುವ ರೀತಿಯಲ್ಲೆ, ಅದೇ ಶರೀರವನ್ನು ಆಧ್ಯಾತ್ಮಿಕವಾಗಿ ಸದೃಢಗೊಳಿಸಬಹುದು.

ಕ್ಷೇತ್ರ ಎಂದರೆ “ಬಯಲು” ಅಥವಾ “ಭೂಮಿ.” ಭೂಮಿಯ ಉಳುಮೆಯಿಂದ ಒಳ್ಳೆಯ ಧಾನ್ಯವನ್ನು ಉತ್ಪತ್ತಿ ಮಾಡಬಹುದು; ಅಥವಾ ಕೀಳುದರ್ಜೆಯ ಕಾಳನ್ನು ಬೆಳೆಯಬಹುದು. ಅದು ನಿಮ್ಮ ಶ್ರಮವನ್ನೇ ಅವಲಂಬಿಸಿದೆ. ನೀವು ಭೂಮಿಯ ಒಡೆಯರು. ನಿಮ್ಮ ಇಚ್ಛಾನುಸಾರ ಬೇಸಾಯ ಮಾಡಬಹುದು. ಹಾಗೆಯೇ ಶರೀರವೂ ಒಂದು “ಭೂಮಿಯೆ.” ನಾನೇ “ಉಳುಮೆಗಾರ”. ಈ ಶರೀರವನ್ನು ಒಂದು ವಿಧದಲ್ಲಿ ಬಳಸಿ, ನಾನು ಆಧ್ಯಾತ್ಮಿಕವಾಗಿ ಉತ್ತುಂಗಕ್ಕೇರಬಹುದು. ಇನ್ನೊಂದು ಬಗೆಯಲ್ಲಿ ಲೌಕಿಕಾಭಿವೃದ್ಧಿ ಸಾಧಿಸಬಹುದು. ಅದು ನನಗೆ ಬಿಟ್ಟಿದ್ದು. ಆಧ್ಯಾತ್ಮಿಕವಾಗಿ ಮುನ್ನಡೆಯ ಬೇಕಿದ್ದರೆ, ನೀವೇ ಈ ದೇಹವೆಂಬ ಭಾವನೆಯನ್ನು ತ್ಯಜಿಸಿ “ನಾನು ಕೃಷ್ಣನ ಸ್ವತ್ತು, ನಾನು ಬ್ರಹ್ಮ (ಆತ್ಮ)” ಎಂಬುದನ್ನು ಮನಗಾಣಬೇಕು. ಆಧ್ಯಾತ್ಮಿಕ ಮುನ್ನಡೆಯ ಅರ್ಥ ಅದೇ. ಲೌಕಿಕವಾಗಿ ಮುನ್ನಡೆಯಬೇಕೆಂದರೆ ಅದರ ಅರ್ಥ “ನಾನು ಈ ದೇಹ” “ನಾನು ಅಮೆರಿಕವಾಸಿ” “ನಾನು ಭಾರತೀಯ” “ನಾನು ಬ್ರಾಹ್ಮಣ” “ನಾನು ಮನುಷ್ಯ” “ನಾನು ಹೆಣ್ಣು”. ಇದು ಭೌತಿಕ ಅಭ್ಯುದಯ. ಎರಡೂ ದಾರಿಗಳು ನಮ್ಮ ಮುಂದಿವೆ.

ನಾವು ಪ್ರಾಣಿಗಳಲ್ಲ, ಮನುಷ್ಯರು. ಇದನ್ನು ಯಾವಾಗಲೂ ನೆನಪಿನಲ್ಲಿಡಬೇಕು. ಆದುದರಿಂದ ನಾವು ನಮ್ಮ ದೇಹವನ್ನು ನಮ್ಮ ಆಯ್ಕೆಗೆ ತಕ್ಕಂತೆ ಬಳಸಬಹುದು. ಈ ಅಧ್ಯಾಯವು ನಾವು ಆಧ್ಯಾತ್ಮಿಕ ಮುನ್ನಡೆ ಸಾಧಿಸಲು, ನಮ್ಮ ಶರೀರವನ್ನು ಹೇಗೆ ಬಳಸಬಹುದೆಂಬುದನ್ನು ತಿಳಿಸಿಕೊಡುತ್ತದೆ. ದೇಹದ ಅಗತ್ಯಗಳ ಪೂರೈಕೆಯಲ್ಲೆ ಇಡೀ ನಮ್ಮ ಹೋರಾಟವನ್ನು ಸೀಮಿತಗೊಳಿಸಿದರೆ, ನಾವು ಕೇವಲ ಪ್ರಾಣಿಮಾತ್ರರಷ್ಟೆ. ಊಟ, ನಿದ್ರೆ, ಸಂಭೋಗ ಮತ್ತು ಸ್ವಸಮರ್ಥನೆ – ಇವೆಲ್ಲ ಮನುಷ್ಯ, ನಾಯಿ, ಮತ್ತು ಬೆಕ್ಕು ಎಲ್ಲರಲ್ಲೂ ಸರ್ವೇಸಾಮಾನ್ಯ. ನಾನು ಮನುಷ್ಯನಾಗಿರುವ ಕಾರಣ, ದೈವ ಸಾಕ್ಷಾತ್ಕಾರದ ದಿಸೆಯಲ್ಲಿ ಈ ಶರೀರವನ್ನು ರೂಢಿಸಿಕೊಳ್ಳಬಹುದು. ನಾಯಿ, ಬೆಕ್ಕುಗಳಿಂದ ಇದು ಸಾಧ್ಯವಿಲ್ಲ. ಇದುವೆ ಮನುಷ್ಯ ಮತ್ತು ಪ್ರಾಣಿಗಳಿಗಿರುವ ವ್ಯತ್ಯಾಸ. ನೀವು ದೈವಸಾಕ್ಷಾತ್ಕಾರಕ್ಕಾಗಿ ಶರೀರವನ್ನು ಶ್ರುತಿಮಾಡಿಕೊಳ್ಳದಿದ್ದಲ್ಲಿ, ನಾಯಿಬೆಕ್ಕುಗಳಿಗಿಂತ ಭಿನ್ನವಲ್ಲ.

ಪ್ರಾಣಿಜೀವನ ಪಾಪ ಜೀವನ, ಮಾನವ ಜೀವನವೂ ಪಾಪಜೀವನ ಕೃಷ್ಣಪ್ರಜ್ಞಾ ವೇದಿಕೆಯತ್ತ ನಡೆದ ಹೊರತು.  ವ್ಯಕ್ತಿಯೊಬ್ಬನು ಪಾಪವನ್ನು ಮಾಡಿದರೆ,  ಮನುಷ್ಯ ರೂಪವನ್ನು ಕಳೆದುಕೊಳ್ಳಬಹುದು. ನೀವು ಹಂದಿಯಂತೆ ವರ್ತಿಸಿದರೆ, ಆಹಾರ ಪದ್ಧತಿಯಲ್ಲಿ ಅಂತೆಯೇ ನಡೆದುಕೊಂಡರೆ; ಹಂದಿಗಳು ಅಮೇಧ್ಯವನ್ನು ತಿನ್ನುತ್ತವೆ. ಆ ಕಾರಣ ನಿಮ್ಮ ಮುಂದಿನ ಜನ್ಮದಲ್ಲಿ ಹಂದಿಯಾಗಿಯೇ ಹುಟ್ಟುವಿರಿ. ಋಷಭದೇವ ತನ್ನ ಮಕ್ಕಳಿಗೆ ಹೀಗೆ ಉಪದೇಶ ಮಾಡುತ್ತಾನೆ.

ನಾಯಂ ದೇಹೋ ದೇಹಭಾಜಾಂ ನೃಲೋಕೇ

ಕಷ್ಟಾನ್‌ ಕಾಮಾನ್‌ ಅರ್ಹತೇ ವಿಡ್ಭುಜಾಂ ಯೇ

ತಪೋ ದಿವ್ಯಂ ಪುತ್ರಕಾ ಯೇನ ಸತ್ತ್ವಂ

ಶುದ್ಧ್ಯೇತ್‌ ಯಸ್ಮಾದ್‌ ಬ್ರಹ್ಮಸೌಖ್ಯಂ ತ್ವನನ್ತಮ್‌

“ಪ್ರಿಯ ಪುತ್ರರೆ! ಈ ದೇಹವನ್ನು ಹಂದಿಯಂತೆ ಬಳಸಬೇಡಿ – ಅಹೋರಾತ್ರಿ ಅಮೇಧ್ಯ ಭಕ್ಷಣಕ್ಕಾಗಿ ಹುಡುಕಾಟ. ತಪಶ್ಚರ್ಯೆಯಿಂದ ನಿಮ್ಮ ದೇಹವನ್ನು ಶುದ್ಧೀಕರಿಸಿ ಶಾಶ್ವತ ಸೌಖ್ಯದ ನೆಲೆಗೆ ಬನ್ನಿ.”

ಹಂದಿಗಳು ಅಮೇಧ್ಯ ಭಕ್ಷಣದಿಂದ ಸದೃಢವಾಗುತ್ತವೆ, ಸಬಲವಾಗುತ್ತವೆ. ಮತ್ತು ಅವು ಯಾವುದೇ ಭೇದಭಾವವಿಲ್ಲದೆ ಲೈಂಗಿಕ ಜೀವನ ನಡೆಸುತ್ತವೆ – ತಾಯಿ, ತಂಗಿ ಅಥವಾ ಇನ್ನಾರಾದರೂ ಸರಿ. ನಾಯಿ ಕೂಡ ಅಷ್ಟೆ. ಅವುಗಳಿಗೆ ಯಾವುದೇ ಸಭ್ಯತೆ ಅಥವಾ ನಾಚಿಕೆ ಇಲ್ಲ.  ಅವು ಬೀದಿಯಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತವೆ ಮತ್ತು ಈಗ ಮನುಷ್ಯರು ಕೂಡ ಈ ಹಂತಕ್ಕೆ ಬರುತ್ತಿದ್ದಾರೆ. ಭಾರತದಲ್ಲಿ ಇದು ಇನ್ನು ಬಂದಿಲ್ಲ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಬಹಿರಂಗ ಕಾಮವು ಒಂದು ಸಾಮಾನ್ಯ ಸಂಗತಿ. ಯುವಕ ಯುವತಿಯರು ತಬ್ಬಿಕೊಳ್ಳುವುದು, ಚುಂಬಿಸುವುದರಲ್ಲಿ ತೊಡಗಿಕೊಂಡಿರುತ್ತಾರೆ. ಮತ್ತು ಕೆಲವೊಮ್ಮೆ ಸಮುದ್ರತೀರದಲ್ಲಿ ಅಥವಾ ಉದ್ಯಾನವನದಲ್ಲಿ ಲೈಂಗಿಕಕ್ರಿಯೆಯಲ್ಲಿ ತೊಡಗಿರುವುದನ್ನು ನಾವು ಕಂಡಿದ್ದೇವೆ.

ಆದ್ದರಿಂದ ಜನರು ಹಂದಿ ನಾಯಿಗಳ ಜೀವನಕ್ಕಿಳಿಯುತ್ತಿದ್ದಾರೆ. ಇದೇ ಅವರ ನಾಗರಿಕತೆಯ ಪ್ರಗತಿ. ಏಕೆ? ಜೀವನದಲ್ಲಿ ದೇಹಾತ್ಮ ಬುದ್ಧಿಯ ಕಾರಣ : “ನಾನು ಈ ದೇಹ.” ಆದುದರಿಂದ ಆತ್ಮವು, ಶರೀರಕ್ಕಿಂತ ಭಿನ್ನ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಾನವಶರೀರ ನಮಗೆ ದೈವದತ್ತವಾದುದು. ಅದನ್ನು ಮನಬಂದಂತೆ ಬಳಸಬಹುದು. ನಾವದನ್ನು ಬೆಕ್ಕು, ನಾಯಿ, ಹಂದಿಗಳಂತೆಯೂ ಬಳಸಬಹುದು; ಅಥವಾ ದೇವರಂತೆ ಬಳಸಬಹುದು. ಅದು ನಮಗೆ ಬಿಟ್ಟಿದ್ದು. ನಮಗೆ ಕಿಂಚಿತ್‌ ಸ್ವಾತಂತ್ರ್ಯವಿದೆ.

ಆದರೆ ನಾವು ನಮ್ಮ ಶರೀರವನ್ನು ನಾಯಿಗಳಂತೆಯೂ, ಹಂದಿಗಳಂತೆ ಉಪಯೋಗಿಸಬಾರದೆಂದು ಶಾಸ್ತ್ರ ಹೇಳುತ್ತೆ. ಶಾಸ್ತ್ರವನ್ನು ಧಿಕ್ಕರಿಸಿದರೆ ನಾವು ಕೆಟ್ಟೆವು.

ಭಗವಾನ್‌ ಶ್ರೀಕೃಷ್ಣ, ಭಗವದ್ಗೀತೆಯಲ್ಲಿ ಹೇಳಿದಂತೆ (16.23)

ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ

ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್‌

“ಶಾಸ್ತ್ರ ಸಮ್ಮತವಾದ ಆದೇಶಗಳನ್ನು ಪಾಲಿಸದವ ಪರಿಪೂರ್ಣತೆಯನ್ನೂ ಸೌಖ್ಯವನ್ನೂ ಹೊಂದಲಾರ.” ರಾಜ್ಯದ ಕಾನೂನನ್ನು ಒಬ್ಬ ವ್ಯಕ್ತಿ ಧಿಕ್ಕರಿಸುತ್ತಾನೆಂದುಕೊಳ್ಳಿ. ಅವನೆಂಥ ಮನುಷ್ಯ? ಆತ ಕಾನೂನು ಬಾಹಿರ. ಆತ ಗೌರವಾನ್ವಿತ ನಾಗರಿಕನಲ್ಲ. ಪೊಲೀಸರ ಕೈಗೆ ಸಿಕ್ಕು ಶಿಕ್ಷೆಯನ್ನು ಅನುಭವಿಸುತ್ತಾನೆ. ಹಾಗೆಯೇ ಯಾರು ಶಾಸ್ತ್ರ ನಿಯಮೋಲ್ಲಂಘನೆ ಮಾಡುತ್ತಾನೋ, ಆತ ಭಗವನ್ನಿಯಮಗಳನ್ನು ಉಲ್ಲಂಘಿಸುತ್ತಾನೆ. ಆತನಿಗೆ ಭೌತಿಕ ಪ್ರಕೃತಿಯಿಂದ ಶಿಕ್ಷೆಯಾಗಬೇಕು. ಆದುದರಿಂದ ನೈಜ ಸುಖಪ್ರಾಪ್ತಿಗಾಗಿ ಶಾಸ್ತ್ರ ನಿಯಮಾನುಸಾರ ನಡೆದುಕೊಳ್ಳಬೇಕು.

ಭಗವದ್ಗೀತೆ, ಪುರಾಣಗಳು, ವೇದಾಂತಸೂತ್ರ – ಇವೆಲ್ಲ ಶಾಸ್ತ್ರಗಳು ನಮ್ಮಲ್ಲಿ ಕೃಷ್ಣಪ್ರಜ್ಞೆಯನ್ನು ಉದ್ದೀಪನಗೊಳಿಸಲು ನೆರವಾಗುವಂಥವು. ಅವು ಅತೀಂದ್ರಿಯ ಜ್ಞಾನವನ್ನು ತಿಳಿಸಿಕೊಡುತ್ತವೆ. ಪ್ರಪ್ರಥಮ ತಿಳಿವಳಿಕೆಯೆಂದರೆ “ನಾನು ಈ ದೇಹವಲ್ಲ.”

ನಾವು ಶಾರೀರಕ ಪರಿಕಲ್ಪನೆಯಿಂದ ಅತೀತರಾಗಬೇಕು. ಶಾರೀರಕ ಪರಿಕಲ್ಪನೆ ಎಂದರೆ ವಿಷಯಾಸಕ್ತಿ ಪೂರೈಕೆ.  ಅಷ್ಟೆ. ಒಬ್ಬ ಮನುಷ್ಯ “ನಾನು ಈ ದೇಹ” ಎಂದುಕೊಂಡಾಗಲೆ, ಕಣ್ಣು ಸುಂದರವಾದುದನ್ನು ನೋಡಬಯಸುತ್ತದೆ, ಕೆಲವು ಅಮಾನುಷ ಖಾದ್ಯಗಳ ರುಚಿ ನೋಡಲು ನಾಲಗೆ ಕಾತರಿಸುತ್ತದೆ. ಇವೆಲ್ಲ ಶಾಸ್ತ್ರ ನಿಷಿದ್ಧವಾದವು. ಆದರೆ ನಾಲಗೆ ರುಚಿ ಬಯಸುವುದರಿಂದ ಅವನು ಅವುಗಳನ್ನು ತಿನ್ನಬೇಕು:  ಹೀಗಾಗಿ ಭೌತಿಕ ಪರಿಕಲ್ಪನೆ ಎಂದರೆ, ಇಂದ್ರಿಯಗಳ ಬಯಕೆಯ ಪೂರೈಕೆ.

ಆದರೆ ಕ್ರಮೇಣ ನಮ್ಮ ಸತತ ಪ್ರಯತ್ನದಿಂದ ಕೃಷ್ಣಪ್ರಜ್ಞೆ ರೂಢಿಗತವಾಗುತ್ತದೆ. ಕೃಷ್ಣನ ತೃಪ್ತ್ಯರ್ಥವಾಗಿ, ಅಂತಹ ನಮ್ಮ ಬಯಕೆ ಇಮ್ಮಡಿಸುತ್ತದೆ. ಈಗ ನಾವು ನಮ್ಮ ಇಂದ್ರಿಯಗಳ ಬಯಕೆಯನ್ನು ಪೂರೈಸುತ್ತಿದ್ದೇವೆ. ಅದು ನಮ್ಮ ಐಹಿಕ ಜೀವನದಲ್ಲಿ ನಾವು ರೂಢಿಸಿಕೊಂಡಿರುವ ಶರೀರ ಸಂಬಂಧವಾದ ಕಲ್ಪನೆ. ಕೃಷ್ಣನನ್ನು ತೃಪ್ತಿಪಡಿಸುವ ದಿಸೆಯಲ್ಲಿ, ನಮ್ಮನ್ನು ತೊಡಗಿಸಿಕೊಂಡರೆ, `ಓ!’ ಅದು ಜೀವನದ ಸಂಪನ್ನತೆ. ಅದು ಕೃಷ್ಣಪ್ರಜ್ಞೆ.

ಧನ್ಯವಾದಗಳು,  ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ