ನಾನೇಕೆ ಕೃಷ್ಣನತ್ತ ಆಕರ್ಷಿತ?

“ನಿನ್ನಂತಹ ಶ್ರದ್ಧಾವಂತ ಕ್ರೈಸ್ತ, ಹಿಂದೂ ದೇವತೆಯನ್ನು ಪೂಜಿಸುವುದೇಕೆ?” ಎಂದು ಬಹಳ ಜನ ನನ್ನನ್ನು ಕೇಳುತ್ತಾರೆ. ಆದರೆ, ಕೃಷ್ಣನ ಭಕ್ತನಾದ ನಾನು ಒಬ್ಬನೇ ದೇವರು ಇರುವನೆಂದು ನಂಬುತ್ತೇನೆ ಮತ್ತು ಆತನೇ, ವೇದಗಳಲ್ಲಿ ಕಂಡುಬರುವ, ಬೈಬಲ್‌ನಲ್ಲಿ ಉಲ್ಲೇಖಿಸಿರುವ, ಅಥವಾ ಯಾವುದೇ ಇನ್ನಿತರ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿರುವ ಪರಮಪುರುಷನಾಗಿದ್ದಾನೆ. ಆದ್ದರಿಂದ, ಕೃಷ್ಣನನ್ನು ಪೂಜಿಸುವ ಮೂಲಕ ನಾನು ಬೈಬಲ್‌ನಲ್ಲಿ ಹೇಳಿರುವ ದೇವರನ್ನು ತಿರಸ್ಕರಿಸಿದಂತಾಗುವುದಿಲ್ಲ. ನಾನು ಆತನನ್ನು ಬೇರೆಯದೇ ದೃಷ್ಟಿಕೋನದಿಂದ ತಿಳಿಯಲು ಹೊರಟಿದ್ದೇನಷ್ಟೆ.”

ವೇದಗಳಲ್ಲಿ ಭಗವಂತನು ವಿಶ್ವದ ವಿವಿಧ ಭಾಗಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ಆವಿರ್ಭವಿಸುವನೆಂದು ಹೇಳಿದೆ. ಪ್ರತೀ ಬಾರಿಯೂ ಆತ, ತನ್ನ ದಾರಿತಪ್ಪಿದ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಲೆಂದೇ ಅವತರಿಸುತ್ತಾನೆ.

ಐದು ಸಾವಿರ ವರ್ಷಗಳ ಹಿಂದೆ ಕೃಷ್ಣನ ಅವತರಣವಾದಾಗ ಆತ ಸ್ವತಃ ತಾನೇ ಭಗವಂತನ ಲಕ್ಷಣಗಳನ್ನು ತೋರ್ಪಡಿಸಿಕೊಂಡ. ಕೃಷ್ಣ ತನ್ನ ಕೃತಿಗಳ ಮೂಲಕ ಅಲೌಕಿಕ ಲೀಲೆಯನ್ನು ನಡೆಸಿದ ಮತ್ತು ತನ್ನ ವಿವಿಧ ಮುಖಗಳ ಪರಿಚಯ ಮಾಡಿಸಿಕೊಟ್ಟ . ಆದರೆ ಆತ ಹೆಚ್ಚಾಗಿ ನೆನೆಯಲ್ಪಡುವುದು ವೃಂದಾವನದ ಯಶೋದೆಯ ಕಂದ ಬಾಲಕೃಷ್ಣನಾಗಿ, ಕಾಡುಗಳಲ್ಲಿ ತನ್ನ ಸ್ನೇಹಿತನೊಡನೆ ಮೆರೆದ ಲೀಲೆಗಳ ಮೂಲಕ.

ಕೆಲವೊಂದು ಬಾರಿ ನಾನು ಕೇಳಲ್ಪಡುತ್ತೇನೆ, “ದೇವನೊಬ್ಬ ಅದು ಹೇಗೆ ಗೊಲ್ಲರ ಹುಡುಗನಾಗಿ ಕಾಡಿನಲ್ಲಿ  ಆಡಿಕೊಂಡಿರಲು ಸಾಧ್ಯ?” ಎಂದು, ಯಾಕಾಗದು? ಪಾಶ್ಚಾತ್ಯ ಧಾರ್ಮಿಕ ಚಿತ್ರಗಳಲ್ಲಿ ಬಿಂಬಿತನಾಗುವ ಹಾಗೆ ಆತ, ಮೋಡಗಳಲ್ಲಿನ ವೃದ್ಧನೇ ಯಾಕಾಗಿರಬೇಕು? ಅವನು ಮುಗ್ಧ ಹುಡುಗಾಟದ ಬಾಲಕನಾಗಿರಬಾರದೇಕೆ?

ವಾಸ್ತವವಾಗಿ, ಅನಾದಿ – ಅನಂತನಾದ ಭಗವಂತನಿಗೆ ಎಂದಿಗೂ ವಾರ್ಧಕ್ಯ ಉಂಟಾಗದು ಎನ್ನುವ ತರ್ಕ ಸಮಂಜಸವೇ ಅಲ್ಲವೇ?

ನಾವಂತೂ ಒಂದಲ್ಲ ಒಂದು ದಿನ ಮುದುಕರಾಗಲೇಬೇಕು. ಏಕೆಂದರೆ, ನಾವು ಜನನ-ಮರಣಗಳ ನಿಯಮದಿಂದ ಬಂಧಿಸಲ್ಪಟ್ಟಿದ್ದೇವೆ. ಆದರೆ ಕೃಷ್ಣನ ವಿಷಯದಲ್ಲಿ ಅದು ಹಾಗಲ್ಲ. ಆತ ಸ್ವತಃ ನಿಯಮಕರ್ತನಾಗಿದ್ದಾನೆ. ಅವನು ಈ ಯಾವ ಬಂಧನಗಳಿಗೂ ಒಳಪಡುವುದಿಲ್ಲ. ಕೃಷ್ಣನು ಭೂಮಿಯಲ್ಲಿ ಅವತರಿಸಿದಾಗ ಚಿರಯೌವನಿಗನಾಗಿಯೇ ಜೀವಿಸಿದ್ದ. ಆತ 125 ವರ್ಷಗಳ ಕಾಲ ಬದುಕಿದ್ದನೂ ಸಹ!

ಬಾಲಕನಾಗಿ ಕೃಷ್ಣ ಕಾಡು-ಮೇಡುಗಳಲ್ಲಿ ಆಟವಾಡಿದ. ಸದಾ ಅವನನ್ನು ಆರಾಧಿಸುವ ಗೆಳೆಯರು ಅವನನ್ನು ಸುತ್ತುವರಿದಿರುತ್ತಿದ್ದರು. ಆದರೆ ಅವನೇನೂ ಸಾಮಾನ್ಯ ಬಾಲಕನಾಗಿರಲಿಲ್ಲ, ಮತ್ತು ಆ ಸ್ನೇಹಿತರೂ ಕೂಡ ಸಾಮಾನ್ಯರಾಗಿರಲಿಲ್ಲ. ವೈದಿಕ ಗ್ರಂಥಗಳಲ್ಲಿ ಹೇಳಿರುವಂತೆ ಜನ್ಮಾಂತರಗಳ ಪುಣ್ಯದಿಂದಲೇ ಆ ಪವಿತ್ರಾತ್ಮಗಳಿಗೆ ಕೃಷ್ಣನೊಡನೆ ಬಾಲ್ಯದ ದಿನಗಳನ್ನು ಕಳೆಯಲು ಸಾಧ್ಯವಾಗಿದ್ದು.

ಒಮ್ಮೆ ಕೃಷ್ಣನ ಗೆಳೆಯರು ಅವನ ತಾಯಿಯ ಬಳಿ, ಕೃಷ್ಣ ಮಣ್ಣು ತಿಂದನೆಂದು ದೂರಿದರು. ಆದರೆ ಕೃಷ್ಣ ಅದನ್ನು ಅಲ್ಲಗಳೆದ. ಅವನ ತಾಯಿ ಅವನನ್ನು ಬಾಯಿ ತೆರೆಯಲು ಹೇಳಿದಳು. ಕೃಷ್ಣ ಅದರಂತೆ ಬಾಯ್ತೆರೆದಾಗ ಯಶೋದೆಯು ಅಲ್ಲಿ ಇಡಿಯ ಸೃಷ್ಟಿಯನ್ನು, ಪಂಚಭೂತಗಳನ್ನು, ಎಲ್ಲ ಬಗೆಯ ಜೀವಿಗಳನ್ನು ಕಂಡಳು. ಜೊತೆಗೆ ತನ್ನ ಮಡಿಲಲ್ಲಿ ತನ್ನ ಮಗುವನ್ನು ಕೂರಿಸಿಕೊಂಡಿರುವ ತನ್ನನ್ನೂ ಅಲ್ಲಿ ಕಂಡಳು!

ಅವೆಲ್ಲದರ ಕಾಣ್ಕೆಯಿಂದ ದಿಗ್ಭ್ರಾಂತಳಾದ ಅವಳು ತಾನು ಯಾರು, ಮತ್ತು ಕೃಷ್ಣ ನಿಜವಾಗಿಯೂ ತನ್ನ ಮಗುವೇ ಎಂದು ಗೊಂದಲಪಡಲಾರಂಭಿಸಿದಳು. ಆದರೆ ಕೃಷ್ಣ ಅವಳ ಮೇಲೆ ಕರುಣೆದೋರಿ ಬಾಯ್ಮುಚ್ಚಿದ. ಪುನಃ ಅವಳು ತನ್ನ ಮಗನ ಮೇಲಿನ ಅತೀವ ಪ್ರೇಮದಿಂದ ಮತ್ತಳಾಗಿ, ತಾನು ಕಂಡದನ್ನು ಸಂಪೂರ್ಣವಾಗಿ ಮರೆತುಹೋದಳು. ಯಶೋದೆ ಕೃಷ್ಣನನ್ನು ಮಡಿಲಲ್ಲಿ ಮಲಗಿಸಿಕೊಂಡು ಅವನೊಬ್ಬ ಸಾಮಾನ್ಯ ಮಗುವೋ ಎನ್ನುವಂತೆ, ಅವನಿಗೆ ತನ್ನ ರಕ್ಷಣೆಯ ಅಗತ್ಯವಿದೆ ಎನ್ನುವ ಭಾವದಲ್ಲಿ ಹಾಲೂಡಿಸಲಾರಂಭಿಸಿದಳು.

ಕೃಷ್ಣನ ವಿಸ್ಮಯಭರಿತ ಕಥೆಗಳಿಂದ ಆಕರ್ಷಿತರಾಗದೆ ಉಳಿಯುವರಾರು? ವಾಸ್ತವವಾಗಿ, `ಕೃಷ್ಣ’ ಎಂದರೇನೇ `ಸರ್ವಾಕರ್ಷಕ’ ಎಂದರ್ಥ! ಅವನು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಾನೆ, ಮತ್ತು ಸುಲಭವಾಗಿ ಪ್ರೀತಿಗೆ ಒಳಗಾಗುತ್ತಾನೆ. ವೇದಸಾರವಾದ ಭಗವದ್ಗೀತೆಯಲ್ಲಿ ಕೃಷ್ಣನು ಹೀಗೊಂದು ವಿಶೇಷ ಭರವಸೆ ನೀಡಿದ್ದಾನೆ;

“ಭಯ ಪಡಬೇಡ, ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತಗೊಳಿಸುವೆ, ಮತ್ತು ಅಲೌಕಿಕ ಜಗತ್ತಿನಲ್ಲಿ ನೀನು ನನ್ನೊಂದಿಗೆ ವಾಸಿಸುವೆ”. ಯಾರು ಕೃಷ್ಣನ ಭಕ್ತರಾಗುತ್ತಾರೋ, ಅವನ ಸೇವಕನಂತೆ ಸಂಪೂರ್ಣವಾಗಿ ಅವನಿಗೆ ಶರಣಾಗುತ್ತಾರೋ ಅವರೆಲ್ಲರೂ ಸ್ವತಃ ಶ್ರೀಕೃಷ್ಣನಿಂದ ರಕ್ಷಿಸಲ್ಪಡುವರು, ಅದರಲ್ಲಿ ಸಂಶಯವೇ ಇಲ್ಲ!

ಈ ಲೇಖನ ಶೇರ್ ಮಾಡಿ