ಕಂಸನಿಗೀಗ ದೇವಕಿಯ ಆ ಎಂಟನೆಯ ಮಗುವನ್ನು ಕೊಲ್ಲದೆ ನೆಮ್ಮದಿಯಿಲ್ಲ. ಅವನು ಪೂತನಿಯೆಂಬ ರಾಕ್ಷಸಿಯನ್ನು ಕರೆಸಿದ. ರಾಜ್ಯದ ಉದ್ದಗಲಕ್ಕೂ ಓಡಾಡಿ, ಕಳೆದ ಹತ್ತು ದಿನಗಳಲ್ಲಿ ಹುಟ್ಟಿದ ಎಲ್ಲ ಮಕ್ಕಳನ್ನೂ ಕೊಂದು ಹಾಕುವಂತೆ ಆದೇಶ ಕೊಟ್ಟ.

ಪೂತನಿಯು ಎತ್ತರಕ್ಕಿದ್ದ, ದಪ್ಪನೆಯ ವಿಕಾರವಾದ ರಾಕ್ಷಸಿ. ಅವಳು ಭಯ ಹುಟ್ಟಿಸುವಷ್ಟು ಘೋರವಾಗಿದ್ದಳು. ತನ್ನನ್ನು ನೋಡಿದವರು ಹೆದರಿ ಓಡಿ ಹೋಗ್ತಾರೆ ಅನ್ನೋದು ಅವಳಿಗೆ ಗೊತ್ತಿತ್ತು. ಅದಕ್ಕೇ ಚೆಂದದ ತರುಣಿ ಹೆಣ್ಣಿನ ರೂಪ ಧರಿಸಿ ಹೊರಟಳು ಪೂತನಿ. ಅವಳು ಆಕಾಶದಲ್ಲಿ ಹಾರಬಲ್ಲವಳಾಗಿದ್ದಳು. ಆದ್ದರಿಂದ್ಲೇ ಬಹಳ ಬೇಗ ರಾಜ್ಯದೊಳಗೆಲ್ಲ ಓಡಾಡಿ ಸಾಕಷ್ಟು ಮಕ್ಕಳನ್ನು ಕೊಂದು ಹಾಕಿದಳು. ಚೆಂದದ ಹೆಣ್ಣಿನ ರೂಪ ಧರಿಸಿದ್ದ ಅವಳು ಅಮ್ಮಂದಿರ ಬಳಿಗೆ ಹೋಗಿ, ಅವರ ಮಗುವನ್ನು ತಾನು ಆಡಿಸುವುದಾಗಿ ಕೇಳ್ತಿದ್ದಳು. ಮುಗ್ಧ ಅಮ್ಮಂದಿರು ತಮ್ಮ ಮಕ್ಕಳನ್ನು ಅವಳ ಉಡಿಯಲ್ಲಿ ಇಡ್ತಿದ್ದರು. ಅವರ ಕಣ್ತಪ್ಪಿಸಿ ಪೂತನಿ ಮಕ್ಕಳಿಗೆ ವಿಷ ಉಣಿಸಿಬಿಡ್ತಿದ್ದಳು. ಇದು ಎಷ್ಟೋ ಹೊತ್ತಿನ ಬಳಿಕ, ಮಗುವಿನ ಸದ್ದು ಗದ್ದಲ ಇಲ್ಲದ್ದನ್ನು ಗಮನಿಸಿದ ಮೇಲಷ್ಟೇ ಅಮ್ಮಂದಿರಿಗೆ ಗೊತ್ತಾಗುತ್ತಿದ್ದುದು. ಆ ಹೊತ್ತಿಗೆ ಮಗುವೂ ಸತ್ತು ಹೋಗಿರುತ್ತಿತ್ತು, ಪೂತನಿಯೂ ಅಲ್ಲಿಂದ ಮಾಯವಾಗಿಬಿಟ್ಟಿರುತ್ತಿದ್ದಳು. ಹೀಗೆ ಪೂತನಿ ಹಳ್ಳಿಯಿಂದ ಹಳ್ಳಿಗೆ ಅಲೆಯುತ್ತಾ ಹೊಸತಾಗಿ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತಾ, ಕೊನೆಗೂ ಗೋಕುಲಕ್ಕೆ ಬಂದಳು. ನಂದ ಮಹಾರಾಜ ಹೆಂಡತಿ ಯಶೋದೆಯು ಗಂಡು ಮಗುವನ್ನು ಹಡೆದಿದ್ದರಿಂದ, ಅಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ಪೂತನಿ ನಂದ-ಯಶೋದೆಯರ ಮನೆಗೆ ಬಂದಳು. ಅವಳ ಸೌಂದರ್ಯಕ್ಕೆ ಮನಸೋತ ಯಾರೂ ಅವಳನ್ನು ತಡೆಯುವ ಗೋಜಿಗೆ ಹೋಗಲಿಲ್ಲ. ಮುಗ್ಧ ಯಶೋದೆಯು ಪೂತನಿಯನ್ನು ನಂಬಿ, ಕೃಷ್ಣನನ್ನು ಅವಳ ಕೈಗಿತ್ತಳು. ಪೂತನಿ ಮಗುವನ್ನು ಎತ್ತಿಕೊಂಡು ಪರದೆಯ ಹಿಂದೆ ಹೋದಳು. “ಹಾಲು ಕುಡಿ ಪುಟ್ಟ ಮಗುವೇ! ಕುಡಿದು ಮಲಗಿ ಬಿಡು. ಮತ್ತೆಂದಿಗೂ ಏಳದ ಹಾಗೆ, ಶಾಶ್ವತವಾಗಿ ಮಲಗಿಬಿಡು” ಅನ್ನುತ್ತ ಹಾಲು ಕುಡಿಸಲು ತೊಡಗಿದಳು.

ಪುಟ್ಟ ಕೃಷ್ಣನು ಅವಳ ವಿಷ ಸವರಿದ ಎದೆಗೆ ಬಾಯಿ ಹಾಕಿ ಹೀರತೊಡಗಿದ. ಆದರೆ ಅವನಿಗೇನೂ ಆಗಲೇ ಇಲ್ಲ! ಅದರ ಬದಲು, ಕೆಲ ಹೊತ್ತಿನ ಬಳಿಕ, ಪೂತನಿಯೇ ನೋವಿನಿಂದ ಚೀರಲು ಶುರು ಮಾಡಿದಳು. ಕೃಷ್ಣ ಅವಳ ಜೀವವನ್ನೇ ಹೀರುತ್ತಿದ್ದ. ಪೂತನಿಗೆ ನೋವು ತಡೆಯಲಾಗದೆ “ನನ್ನನ್ನು ಹೋಗಲು ಬಿಡು! ಹೋಗಲು ಬಿಡು!” ಅಂತ ಕೂಗಾಡಿದಳು. ನೋವಿನ ನರಳಾಟದಲ್ಲಿ ಅವಳಿಗೆ ತನ್ನ ಮಾರುವೇಷವನ್ನ ಉಳಿಸಿಕೊಳ್ಳಲು ಆಗಲಿಲ್ಲ. ಪೂತನಿ, ಕೃಷ್ಣನಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಡುತ್ತಾ ಮನೆಯಿಂದ ಹೊರಗೋಡಿದಳು. ಮನೆಯಲ್ಲಿದ್ದ ಯಶೋದೆ ಮತ್ತಿತರರು ಈ ಗದ್ದಲವನ್ನು ಕೇಳಿ ಹೊರಗೋಡಿದರು. ಆದರೆ ಅಲ್ಲಿನ ಭೀಕರ ರೂಪ ಕಂಡು ದಂಗಾದರು. ಕೊನೆಗೂ ಪೂತನಿ ಸತ್ತು ಬಿದ್ದಳು. ಯಶೋದೆ ಭಯದಿಂದ ತತ್ತರಿಸಿ ಹೋಗಿದ್ದಳು. ಪೂತನಿಯ ಎದೆಯ ಮೇಲೆ ಶಾಂತವಾಗಿ ಆಡುತ್ತಿದ್ದ ಕೃಷ್ಣನನ್ನು ಎತ್ತಿಕೊಳ್ಳಲು ಧಾವಿಸಿದಳು. ತನ್ನ ಮುದ್ದು ಮಗುವನ್ನು ರಕ್ಷಿಸಿದ್ದಕ್ಕಾಗಿ ಭಗವಂತನನ್ನು ವಂದಿಸಿದಳು.






Leave a Reply