
ಒಂದು ದಿನ ಒಬ್ಬಳು ಹಣ್ಣು ಮಾರುವವಳು ನಂದ ಮಹಾರಾಜನ ಮನೆಗೆ ಬಂದಳು. ಅವಳ ಬುಟ್ಟಿಯಲ್ಲಿದ್ದ ಹಣ್ಣುಗಳನ್ನು ನೋಡಿದ ಕೃಷ್ಣ, ತನಗೆ ಕೆಲವು ಹಣ್ಣುಗಳನ್ನು ಕೊಡುವಂತೆ ಕೇಳಿದ. ತನ್ನಪ್ಪ ಏನನ್ನಾದರೂ ಪಡೆದರೆ, ಅದರ ಬದಲಿಗೆ ಧಾನ್ಯವನ್ನು ಕೊಡುವುದು ನೋಡಿದ್ದ ಕೃಷ್ಣ . ಅವನು ಕೂಡ ಉಗ್ರಾಣಕ್ಕೆ ಹೋಗಿ ತನ್ನ ಪುಟ್ಟ ಕೈತುಂಬ ಕಾಳುಗಳನ್ನು ಹಿಡಿದು ತಂದ. ಆದರೆ ಬರುವಾಗಲೇ ಸಾಕಷ್ಟು ಕಾಳುಗಳು ಸೋರಿ ಹೋಗಿದ್ದವು. ಅವನು ಹಣ್ಣಿನವಳ ಬಳಿ ಬಂದು ಮುಷ್ಟಿ ತೆರೆದಾಗ ಅಲ್ಲಿ ಕೆಲವೇ ಕಾಳುಗಳು ಉಳಿದಿದ್ದವು.
ಕೃಷ್ಣನಿಗೆ ಬೇಸರವಾಗಿ ಅಳುವೇ ಬಂದು ಹೋಯ್ತು. ಆದರೆ ಹಣ್ಣಿನವಳು ಬಹಳ ಒಳ್ಳೆಯವಳು. ಕೃಷ್ಣನಿಗಾಗಿ ಮರುಗಿ, ತನ್ನ ಬುಟ್ಟಿಯಲ್ಲಿದ್ದ ಹಣ್ಣುಗಳನ್ನು ಅವನ ಎರಡೂ ಕೈಗಳಿಗೆ ತುಂಬಿದಳು. ಕೃಷ್ಣ ತುಂಬಿ ಹೋಗಿದ್ದ ಹಣ್ಣುಗಳು ಬೀಳದಂತೆ ಅವುಚಿ ಹಿಡಿಯುತ್ತಾ, ತಾನು ಕೊಂಡ ಹಣ್ಣುಗಳನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸುತ್ತಾ ಮನೆ ತುಂಬ ಓಡಾಡಿದ.
ಹಣ್ಣಿನವಳು ತನ್ನ ಬುಟ್ಟಿಯನ್ನು ಹೊತ್ತುಕೊಳ್ಳಲು ಹೊರಟಾಗ ಅವಳಿಗೆ ಅಚ್ಚರಿ ಕಾದಿತ್ತು. ಅದರ ತುಂಬ ಅಮೂಲ್ಯ ಮುತ್ತು ರತ್ನಗಳು ತುಂಬಿಕೊಂಡಿದ್ದವು! ಅವಳ ಪ್ರೇಮ ಕಾರುಣ್ಯಕ್ಕೆ ಪ್ರತಿಯಾಗಿ ಕೃಷ್ಣ ಕೊಟ್ಟ ಉಡುಗೊರೆ ಅದು.

ಕೃಷ್ಣ ನಿಜಕ್ಕೂ ಗೋಕುಲದ ಜನರ ಬಹಳ ಪ್ರೀತಿ ಪಾತ್ರನಾಗಿ ಬೆಳೆದ. ಇದು ಕೇವಲ ಅವನ ಶೌರ್ಯ ಸಾಹಸಗಳಿಂದಾಗಿ ಮಾತ್ರ ಅಲ್ಲ. ಅವನು ತೋರುತ್ತಿದ್ದ ಪ್ರೇಮ ಭಾವದಿಂದಲೂ ಕೂಡ.






Leave a Reply