ದೇವೋತ್ತಮ ಪರಮ ಪುರುಷನಾದ ಶ್ರೀರಾಮಚಂದ್ರ, ರಾವಣನನ್ನು ಸಂಹರಿಸಿ, ಸೀತಾ ಮಾತೆಯನ್ನು ಪರಿಗ್ರಹಿಸಿ, ವಾನರರ ಸಹಿತ ಎಲ್ಲರೊಂದಿಗೆ ಪುಷ್ಪಕ ವಿಮಾನದಲ್ಲಿ ಕುಳಿತು ಅಯೋಧ್ಯೆಗೆ ಹಿಂತಿರುಗಿದ. ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ ಸಮೇತ ಪಟ್ಟಾಭಿಷಿಕ್ತನಾಗಿ, ಪ್ರಜೆಗಳನ್ನು ಸುಖೀರಾಜ್ಯದ ಪಾಲುಗಾರರನ್ನಾಗಿ ಮಾಡಿದ. ಇದನ್ನು ಕೇಳಿದ ನೈಮಿಷಾರಣ್ಯದ ಇಡೀ ಮುನಿ ಸಮೂಹ, ಪ್ರಾಣಿ-ಪಕ್ಷಿ-ಉರಗಗಳೆಲ್ಲವೂ ಮುಂದಿನ ಕಥೆ ಕೇಳಲು ಉತ್ಸುಕವಾಗಿದ್ದವು.

ಸೂತ ಮುನಿಗಳು ಶ್ರೀರಾಮ ಕಥೆಯನ್ನು ಮುಂದುವರಿಸಿದರು – `ಪ್ರಿಯ ಮುನಿವರ್ಯರೆ, ಶ್ರೀರಾಮಚಂದ್ರನ ವನವಾಸ ಕೊನೆಗೂ ಮುಗಿದು ಅವನು ಅಯೋಧ್ಯಾಪತಿಯಾದ. ಪ್ರಿಯ ಪತ್ನಿ ಸೀತೆಯೊಂದಿಗೆ ಸದ್ಗೃಹಸ್ಥನಾಗಿ ಸಂತೃಪ್ತ ಬಾಳನ್ನು ನಡೆಸಿದ. ಪ್ರಾಣಕ್ಕೆ ಪ್ರಾಣರಾದ ಸೋದರರು ಜೊತೆಗಿದ್ದು, ಒಲುಮೆಯನ್ನೇ ತೋರುತ್ತಿದ್ದ ಪ್ರಜೆಗಳು ಅವನ ಸುಖಸಂವೇದನೆಗಳಿಗೆ ಕೊನೆಮೊದಲಿಲ್ಲವೆಂಬಂತಾಯಿತು. ಈ ಸುಖ-ಸಂತೋಷ, ಸಂತೃಪ್ತಿಗಳ ಕಾಲದಲ್ಲಿ ಶ್ರೀರಾಮಚಂದ್ರನು ತನ್ನನ್ನೇ ಆರಾಧಿಸುವ ಸಲುವಾಗಿ ಅನೇಕ ಯಜ್ಞಗಳನ್ನಾಚರಿಸಿದನು. ಹೀಗೆ ಸಕಲ ದೇವತೆಗಳಿಗೂ ಪರಮ ಪ್ರಭುವಾದ ಅವನು ತನ್ನನ್ನು ತಾನೇ ಪೂಜಿಸಿಕೊಂಡನು….’
ಅವರ ಮಾತುಗಳ ಮಧ್ಯದಲ್ಲೆ ಶ್ರೋತೃಗಳ ನಡುವಿನಿಂದ ಶೌನಕ ಮುನಿಗಳು ಥಟ್ಟನೆ ಎದ್ದು ನಿಂತರು. ಸೂತಮುನಿಗಳು ಪ್ರಶ್ನಾರ್ಥಕವಾಗಿ ಅವರತ್ತ ನೋಡಿದರು. ಶೌನಕ ಮುನಿಗಳು ಕೇಳಿದರು :
`ಗುರುಗಳೇ, ಯಾರಾದರೂ ಸರಿ, ತನ್ನನ್ನೇ ತಾನು ಪೂಜೆ ಮಾಡಿಕೊಳ್ಳುವುದು, ಆರಾಧಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎಲ್ಲವನ್ನೂ ಬಲ್ಲ ಶ್ರೀರಾಮನೇ ಹೀಗೆ ಮಾಡುವುದು ಉಳಿದ ಮನುಷ್ಯರಿಗೆಲ್ಲ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಂತೆ ಆಗುವುದಲ್ಲವೆ?’
ಸೂತ ಮುನಿಗಳು ನಕ್ಕು ಹೇಳಿದರು.
`ಶೌನಕರೆ, ಹೀಗೊಂದು ಪ್ರಶ್ನೆಯನ್ನು ನೀವು ಕೇಳಿದಿರಿ ಎನ್ನುವುದೇ ನನಗೆ ಅಚ್ಚರಿಯ ಸಂಗತಿ. ಶ್ರೀರಾಮಚಂದ್ರ ಎಲ್ಲವನ್ನೂ ಬಲ್ಲವನು ಎಂದು ನೀವೇ ಹೇಳಿದಿರಿ. ಅವನಿಗೆ ತಾನು ಯಾರು, ತನ್ನ ಅವತಾರದ ಮೂಲ ಯಾವುದು ಎಂದೆಲ್ಲ ಗೊತ್ತಿತ್ತು. ದೇವೋತ್ತಮ ಪರಮ ಪುರುಷನೇ ಆದ ಅವನು ತನ್ನನ್ನು ತಾನೇ ಪೂಜಿಸಿಕೊಂಡನು. ಅಚ್ಯುತನಾದ ಅವನು ಪೂಜಿತನಾದಾಗ ಪ್ರತಿಯೊಬ್ಬನೂ ಪೂಜಿತನಾಗುತ್ತಾನೆ. ಮರದ ಬುಡಕ್ಕೆ ನೀರೆರೆದಾಗ ಹೇಗೆ ಕಾಂಡ, ಶಾಖೆಗಳು, ಚಿಗುರು ಮತ್ತು ಎಲೆಗಳು ಪೋಷಣೆಗೊಳ್ಳುವುವೋ, ಉದರಕ್ಕೆ ಆಹಾರ ಒದಗಿಸುವುದರಿಂದ ಇಂದ್ರಿಯಗಳು ಹಾಗೂ ಅಂಗಾಂಗಗಳು ಚೈತನ್ಯ ಪಡೆಯುತ್ತವೆಯೋ, ಹಾಗೆ ದೇವೋತ್ತಮ ಪರಮ ಪುರುಷನ ಪೂಜೆ ಅವನ ಅಂಶಗಳಾದ ದೇವತೆಗಳನ್ನು ತೃಪ್ತಿಪಡಿಸುತ್ತದೆ. ಯಜ್ಞಾಚರಣೆ ಭಗವಂತನ ಪೂಜೆಯನ್ನು ಒಳಗೊಂಡಿದೆ. ಆದ್ದರಿಂದ ಭಗವಂತನು ಭಗವಂತನನ್ನು ಪೂಜಿಸಿದನು ಎಂದು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವೆಲ್ಲ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಜೀವಿಯು ಯಾವಾಗಲೂ ಭಗವಂತನಿಗಿಂತಲೂ ಭಿನ್ನನಾದವನು. ಭಗವಂತ ಭಗವಂತನನ್ನು ಪೂಜಿಸಿಕೊಂಡನೆಂದು, ಜೀವಿ ತನ್ನನ್ನು ಪೂಜಿಸಿಕೊಂಡರೆ ತಪ್ಪಾಗುತ್ತದೆ!’
ಮುನಿಗಳೆಲ್ಲರೂ ಸರ್ವಸಮ್ಮತವೆಂಬಂತೆ ತಲೆಯಾಡಿಸಿದರು. ಸೂತ ಮುನಿಗಳು ಕಥಾ ವ್ಯಾಖ್ಯಾನವನ್ನು ಮುಂದುವರಿಸಿದರು. ಶ್ರೀರಾಮಚಂದ್ರ ಮಹಾಯಜ್ಞಗಳನ್ನು ಆಚರಿಸಿದನು. ಅಪಾರ ದಾನಗಳನ್ನು ಮಾಡಿ ಎಲ್ಲರನ್ನೂ ತೃಪ್ತಿಪಡಿಸಿದನು. ಪೂರ್ವ ದಿಕ್ಕಿನ ಇಡೀ ಪ್ರಾಂತ್ಯವನ್ನು ಹೋತಾ ಋತ್ವಿಜನಿಗೆ ನೀಡಿದನು. ದಕ್ಷಿಣ ದಿಕ್ಕಿನ ಪ್ರಾಂತ್ಯವನ್ನು ಬ್ರಹ್ಮ ಋತ್ವಿಜನಿಗೂ, ಪಶ್ಚಿಮ ದಿಕ್ಕಿನದನ್ನು ಅಧ್ವರ್ಯ ಋತ್ವಿಜನಿಗೂ, ಉತ್ತರ ದಿಕ್ಕಿನದನ್ನು ಸಾಮವೇದ ಪಠಿಸುವ ಉದ್ಗಾತಾ ಋತ್ವಿಜನಿಗೂ ನೀಡಿದನು. ಅನಂತರ ಬ್ರಾಹ್ಮಣರಿಗೆ ಐಹಿಕ ಅಪೇಕ್ಷೆಗಳು ಇಲ್ಲವಾದುದರಿಂದ ಇಡೀ ಭೂಮಂಡಲವು ಅವರಿಗಿರಲೆಂದು ವಿಚಾರ ಮಾಡಿ, ಚತುರ್ದಿಕ್ಕುಗಳ ನಡುವಿನ ಭೂಭಾಗವನ್ನು ಅವರಿಗೆಲ್ಲ ದಾನ ಮಾಡಿಬಿಟ್ಟ.
ಹೀಗೆ ಶ್ರೀರಾಮಚಂದ್ರ ತನ್ನ ಸಮಸ್ತವನ್ನೂ ಸರ್ವರಿಗೂ ದಾನ ಮಾಡಿಬಿಟ್ಟ. ತನಗಾಗಿ ಸ್ವಂತ ಬಳಕೆಯ ವಸ್ತ್ರಗಳನ್ನೂ, ಆಭರಣಗಳನ್ನೂ ಉಳಿಸಿಕೊಂಡನು. ರಾಣಿ ಸೀತಾದೇವಿಗೆ ದೊರಿಕಿದ್ದು ಬರೀ ಮೂಗುನತ್ತು ಮಾತ್ರ.
ದೇಶದ ಬ್ರಾಹ್ಮಣರಿಗೆಲ್ಲ ಸಂತೋಷವಾಯಿತು. ಅವರೆಲ್ಲ ಸುಪ್ರೀತರಾದರು. ಆದರೆ, ಆಸ್ತಿಪಾಸ್ತಿಗಳನ್ನು ಹೊಂದಿ ಲಾಭಗಳಿಸುವುದು ಬ್ರಾಹ್ಮಣರಿಗೆ ಸಲ್ಲದು ಎಂದವರು ಭಾವಿಸಿಕೊಂಡಿದ್ದರು. ಭೂಮಿಯನ್ನು ಹೊಂದುವುದು, ಪ್ರಜೆಗಳನ್ನು ಆಳುವುದು ಬ್ರಾಹ್ಮಣರ ಪ್ರವೃತ್ತಿಯಲ್ಲ. ಇದು ಕ್ಷತ್ರಿಯರ ಕೆಲಸ. ಕೂಡಲೇ ಬ್ರಾಹ್ಮಣರೆಲ್ಲರೂ ಶ್ರೀರಾಮಚಂದ್ರನ ಬಳಿಗೆ ಬಂದರು.
`ಶ್ರೀರಾಮಚಂದ್ರ, ನೀನು ನಮ್ಮೆಲ್ಲರ ಮೇಲಿಟ್ಟಿರುವ ಪೂಜ್ಯ ಭಾವನೆಯಿಂದ ಸುಪ್ರೀತರಾಗಿದ್ದೇವೆ. ನಮ್ಮ ಹೃದಯಗಳು ಕರಗಿಹೋಗಿವೆ. ನಮ್ಮೆಲ್ಲರ ಅಭಿಮಾನದ ಪ್ರಭು ಶ್ರೀರಾಮಚಂದ್ರ, ನಮಗೆ ಭೂಮಿ ಕಾಣಿಕೆಗಳ ಅಗತ್ಯವಿಲ್ಲ. ಶಾಂತಿ, ಸಂಯಮ, ತಪಸ್ಸು, ಶುದ್ಧಿ, ಸಹನೆ, ಪ್ರಾಮಾಣಿಕತೆ, ಜ್ಞಾನ, ವಿಜ್ಞಾನ ಮತ್ತು ಧಾರ್ಮಿಕ ಬುದ್ಧಿ ಇವು ಮಾತ್ರ ನಮ್ಮದು. ಭೂಮಿ ಸಲ್ಲಬೇಕಾದ್ದು ಕ್ಷತ್ರಿಯನಾದ ನಿನಗೆ. ನೀನು ದಯವಿಟ್ಟು ನಮಗೆ ದಾನ ನೀಡಿದ ಭೂಮಿಯನ್ನು ಹಿಂದಕ್ಕೆ ಪಡೆದುಕೊ. ಇದರಿಂದ ನಮಗೇನೂ ಉಪಯೋಗವಿಲ್ಲ! ನಮಗೆ ಬೇಕಾದ್ದಕ್ಕಿಂತಲೂ ವಿಪುಲ ಭೂಮಿಯ ಅಗತ್ಯ ನಮಗಿಲ್ಲ. ದೇಹಾತ್ಮಗಳನ್ನು ನಡೆಸಿಕೊಂಡು ಹೋಗಲು ಅಗತ್ಯವಾದಷ್ಟು ಮಾತ್ರ ನಮಗೆ ಸಾಕು!’ ಬ್ರಾಹ್ಮಣರು ಮಾತು ಮುಂದುವರಿಸಿದರು: `ಹೇ, ಪ್ರಭುವೇ, ನೀನು ಸಮಸ್ತ ಜಗತ್ತಿನೊಡೆಯನು. ನೀನು ನಮಗೆ ನೀಡದೇ ಇರುವುದು ಏನಿದೆ? ನೀನು ನಮ್ಮ ಹೃದಯಾಂತರಾಳವನ್ನು ಹೊಕ್ಕು, ನಮ್ಮಲ್ಲಿನ ಅಜ್ಞಾನವೆಂಬ ತಮಸ್ಸನ್ನು ನಿನ್ನ ದಿವ್ಯ ಪ್ರಭೆಯಿಂದ ಚದುರಿಸಿರುವೆ. ಇದೇ ನಿಜವಾದ ಪರಮ ಶ್ರೇಷ್ಠವಾದ ದಾನ. ನಮಗೆ ಪ್ರಾಪಂಚಿಕವಾದ ಯಾವ ದಾನದ ಅಪೇಕ್ಷೆಯೂ ಇಲ್ಲ!’
ಶ್ರೀರಾಮಚಂದ್ರನಿಗೆ ಪರಮ ಸಂತೋಷವಾಯಿತು. ತನ್ನ ರಾಜ್ಯದ ಸುಭಿಕ್ಷ-ಸಂತೃಪ್ತ ನೆಲೆಯ ಒಂದು ಸಾಂಕೇತಿಕ ಭಾವನೆ ಇದು ಎನಿಸಿ ಧನ್ಯನಾದನು. ಅವನು ಅವರಿಗೂ, ಅವರು ಇವನಿಗೂ ಪರಸ್ಪರ ನಮಸ್ಕಾರದ ಗೌರವಗಳನ್ನು ಸಮರ್ಪಿಸಿಕೊಂಡರು.
ಎಲ್ಲ ಕಾಲದ, ಎಲ್ಲ ರಾಜ ಮಹಾರಾಜರ ಹಾಗೆಯೇ ಶ್ರೀರಾಮಚಂದ್ರನೂ ಮಾರುವೇಷದಿಂದ ಆಗಾಗ ತನ್ನ ರಾಜ್ಯದಲ್ಲಿ ಸುತ್ತಾಡುತ್ತ ಪ್ರಜೆಗಳ ಅನಿಸಿಕೆಗಳನ್ನು ತಿಳಿದುಕೊಳ್ಳುತ್ತಿದ್ದನು. ಯಾರೂ ದೂರುಗಳನ್ನು ಹೊತ್ತು ಅವನವರೆಗೆ ಬರಬೇಕಾದ್ದಿರಲಿಲ್ಲ. ಅವನೇ ದೂರುಗಳನ್ನು ಹುಡುಕಿಕೊಂಡು ಹೋಗುತ್ತಿದ್ದನು. ಅಪರೂಪವಾಗಿ ಯಾವುದಾದರೂ ವೈಯಕ್ತಿಕ ವ್ಯಾಜ್ಯಗಳು ಅವನ ಗಮನಕ್ಕೆ ಬಂದಾಗ, ಕೂಡಲೇ ಅವನ್ನು ಅಲ್ಲಲ್ಲೇ ಪರಿಹರಿಸುತ್ತಿದ್ದನು. ಆದರೆ, ಅವನ ಈ ಅಭ್ಯಾಸ ಮತ್ತು ನಡವಳಿಕೆಯೇ ಅವನ ಬದುಕಿನಲ್ಲೊಂದು ದೊಡ್ಡ ತಿರುವನ್ನು ತಂದು ಬಿಟ್ಟಿತು.
ಅವನು ತನ್ನ ಪ್ರೀತಿಯ ಪತ್ನಿ ಸೀತಾದೇವಿಯನ್ನೇ ತ್ಯಾಗ ಮಾಡಬೇಕಾಯಿತು!
ಒಮ್ಮೆ ಶ್ರೀರಾಮಚಂದ್ರ ಮಾರುವೇಷದಲ್ಲಿ ಸಂಚರಿಸುತ್ತಿರುವಾಗ ಪುಟ್ಟ ಮನೆಯೊಂದರಿಂದ ಎತ್ತರಿಸಿದ ದನಿಯ ಸಂಭಾಷಣೆಯೊಂದು ಕೇಳಿಸಿತು : ಈ ಸಂಭಾಷಣೆಯಲ್ಲಿ ತನ್ನ ಕುರಿತು ಏನೊ ದೂಷಣೆ ಇದೆ. ಸೀತಾದೇವಿಯ ನಡತೆಯಲ್ಲಿ ಕಳಂಕದ ಛಾಯೆಯಿದೆ ಎಂಬಂತೆ ಕೇಳಿಸಿತು. ಶ್ರೀರಾಮ ಆ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತ ನಿಂತುಕೊಂಡ.
ಆ ಮನೆಯ ಯಜಮಾನ ಕೂಗುತ್ತಿದ್ದ –
`ನೀನು ಪರಪುರುಷನ ಮನೆಯಲ್ಲಿ ಬಹಳ ಕಾಲದಿಂದ ವಾಸಿಸುತ್ತಿದ್ದೀಯ. ನನ್ನ ಪಾಲಿಗೆ ನೀನು ಅಸತಿಯಾಗಿ ಹೋಗಿರುವವಳು, ಅಪವಿತ್ರವಾಗಿ ಹೋಗಿರುವವಳು ನಿನ್ನನ್ನು ನಾನು ಸ್ವೀಕರಿಸಲು ಸಾಧ್ಯವಿಲ್ಲ. ನಿನ್ನಂತಹವಳೊಂದಿಗೆ ಮತ್ತೆ ಬಾಳ್ವೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಗಂಡನಿಂದ ಬಹುದೂರ ಎಲ್ಲೊ ಇರುವವಳನ್ನು ಮತ್ತೆ ಹೆಂಡತಿಯಾಗಿ ಸ್ವೀಕರಿಸಲು ನಾನೇನು ಶ್ರೀರಾಮನಲ್ಲ. ಹೆಂಡತಿ ಪರ ಪುರುಷನ ಸುಪರ್ದಿನಲ್ಲಿ ಇದ್ದು ಬಂದಾಗ, ಪತ್ನಿದಾಸನ ಹಾಗೆ ಅವಳನ್ನು ಒಪ್ಪಿಕೊಳ್ಳಲು ನಾನೇನು ಶ್ರೀರಾಮನಲ್ಲ. ನಡಿ ನಡಿ, ನೀನು ಎಲ್ಲಿಂದ ಬಂದೆಯೊ ಅಲ್ಲಿಗೇ ಹೋಗು. ನಾನು ನಿನ್ನನ್ನು ಸ್ವೀಕರಿಸುವುದಿಲ್ಲ!’
ನೈಮಿಷಾರಣ್ಯದಲ್ಲಿ ಒಂದು ನಿಮಿಷ ಮೌನ ನೆಲೆಸಿತು. ಶ್ರೀರಾಮನ ಆದರ್ಶ, ನಿಷ್ಠೆ, ಸೀತಾಮಾತೆಯ ಪಾತಿವ್ರತ್ಯ ಇವೆರಡೂ ಪ್ರಶ್ನಾತೀತವಾಗಿದ್ದರೂ ಹೀಗೊಂದು ಸಂದರ್ಭ ಉದ್ಭವವಾದದ್ದು ಎಂತಹ ದುರಂತ.
ಸೂತಮುನಿಗಳು ಹೇಳಿದರು –
`ಮುನಿಗಳೇ, ನಮ್ಮ ಸುತ್ತ ಮುತ್ತಲೂ ಬುದ್ಧಿ ಸಾಲದವರೂ, ಪಾತಕಿಗಳೂ ಆದ ಸಾಮಾನ್ಯ ಜನರು ಇದ್ದೇ ಇರುತ್ತಾರೆ. ನೀಚ ಮಾತುಗಳನ್ನು ಬೇಕೆಂದೇ ಆಡುವವರಿದ್ದಾರೆ. ಇಂತಹ ಮಾತುಗಳು ಬೇಡವೆಂದರೂ ನಮ್ಮ ಕಿವಿಗಳಿಗೆ ಬಿದ್ದೇ ಬೀಳುತ್ತದೆ. ಹಂಸಕ್ಷೀರ ನ್ಯಾಯದ ಹಾಗೆ ನಾವು ನ್ಯಾಯವಾದ್ದನ್ನು ಮಾತ್ರ ಸ್ವೀಕರಿಸಬೇಕು.
ಸೂತ ಮುನಿಗಳು ಹೇಳಿದರು –
`ಮುಂದಿನ ಕಥೆಯಲ್ಲಿ ಏನು ಉಳಿದಿದೆ? ಶ್ರೀರಾಮಚಂದ್ರನೊಂದು ಕಡೆ, ಸೀತಾಮಾತೆಯೊಂದು ಕಡೆ ಮಾನಸಿಕವಾಗಿ ಸಂಕಟ ಅನುಭವಿಸುವುದೇ ಆಯಿತು. ಸೀತಾ ತಾಯಿ ನೋವನ್ನು ಅನುಭವಿಸಲಾರದೆ, ಮುಕ್ತವಾಗಿ ದುಃಖವನ್ನು ಪ್ರಕಟಿಸದಿರಲಾರದೆ, ಸೀತಾರಾಮರ ದಾಂಪತ್ಯ ದುರಂತ ಕಂಡಿತು – ಉತ್ತರ ರಾಮಾಯಣದ ಕಥೆ ಎಲ್ಲರ ಜೀವನದಲ್ಲೂ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿತು!’
ಶ್ರೀರಾಮಚಂದ್ರನ ಪ್ರಜೆ, ತನ್ನ ಒಲವಿನ ಅರಸ ತನ್ನ ಒರಟು ಮಾತುಗಳನ್ನು, ಕೇಳಿಸಿಕೊಳ್ಳುತ್ತಿದ್ದಾನೆ ಎಂಬ ತಿಳುವಳಿಕೆಯೂ ಇಲ್ಲದೆ, ಒಬ್ಬ ಗಂಡನಾಗಿ ಹೆಂಡತಿಯನ್ನು ನಿಂದಿಸಿದ್ದ. ಆದರೆ, ಅವನ ಮಾತುಗಳು ಶ್ರೀರಾಮನಿಗೂ ಕಟ್ಟಪ್ಪಣೆ ಎಂಬಂತಾಯಿತು – `ನೀನು ದೊರೆಯಾಗಿದ್ದರೆ ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ನೀತಿ ನಿಯಮಗಳನ್ನು ಹೊಂದಿಸಿಕೊಳ್ಳಬಹುದು ಎಂದೇನಿಲ್ಲ!’ ಎಂದು ತಟ್ಟಿ ಹೇಳಿದಂತಾಯಿತು.
ಶ್ರೀರಾಮನು ರಾಜನೊಬ್ಬನು ಹೇಗೆ ಇರಬೇಕು ಎನ್ನುವ ಆದರ್ಶವನ್ನು ತೋರಲೆಂದೇ ಅವತರಿಸಿದ್ದನು. ಆದ್ದರಿಂದ ಒಂದು ನಿರ್ಧಾರಕ್ಕೆ ಬಂದನು.
ಅಯೋಧ್ಯೆಗೆ ಹಿಂತಿರುಗಿದ ಕೂಡಲೇ ಶ್ರೀರಾಮಚಂದ್ರ ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಹೇಳಿದ : `ಪ್ರಿಯ ಲಕ್ಷ್ಮಣ, ಈ ಕೂಡಲೇ ರಥವನ್ನು ಸಿದ್ಧಮಾಡಿಕೊಂಡು ಸೀತೆಯನ್ನು ಅರಣ್ಯದಲ್ಲಿ ಬಿಟ್ಟು ಬಾ! ಏಕೆಂದು ಕೇಳಬೇಡ, ಅವಳೊಂದಿಗೂ ಏನೂ ಮಾತನಾಡಬೇಡ. ಇದು ಅಯೋಧ್ಯೆ ಅರಸನ ಆಜ್ಞೆ!’
ಲಕ್ಷ್ಮಣ ವನವಾಸಕ್ಕೆ ಹೋಗುವಾಗಲೂ ಇಷ್ಟು ನೋವು-ಸಂಕಟ ಅನುಭವಿಸಿರಲಿಲ್ಲ. ವನವಾಸ ಮುಗಿಯಿತು, ಎಲ್ಲವೂ ಇನ್ನು ಮೇಲೆ ಸೀತಾ-ರಾಮರ ಸಂತೋಷದ ಕಾಲ, ಸೀತಾ ಮಾತೆಯ ಸುಖದ ದಿನಗಳು ಇನ್ನು ಪ್ರಾರಂಭವಾದವು ಎಂದುಕೊಂಡಿದ್ದ.
ಆದರೆ, ಅಣ್ಣ, ಅಯೋಧ್ಯೆ ಅರಸು ಶ್ರೀರಾಮಚಂದ್ರ ಈಗ ಸೀತಾಮಾತೆಯನ್ನು ಕಾಡಿಗೆ ಅಟ್ಟುವ ಮಾತನಾಡುತ್ತಿದ್ದಾನೆ!
ಶ್ರೀರಾಮಚಂದ್ರ ಸೀತೆಗೂ ಹೇಳಿದ. `ಸೀತೆ, ನೀನೊಂದು ಸಲ ವನ ಪ್ರವಾಸ ಮಾಡು. ಋಷಿ ಪತ್ನಿಯರನ್ನೆಲ್ಲ ಮಾತನಾಡಿಸು. ಲಕ್ಷ್ಮಣ ನಿನ್ನನ್ನು ಅರಣ್ಯಕ್ಕೆ ಕರೆದೊಯ್ಯುತ್ತಾನೆ. ಋಷಿಗಳನ್ನು ನೋಡಲು ಹೋಗುವುದರಿಂದ ನೀನು ಸರಳವಾಗಿ ಹೋದರೆ ಸಾಕು!’
ಸೀತೆಗೆ ಯಾವುದೊ ಅಪಸ್ವರದ ಸೂಚನೆ ಮನಸ್ಸಿನಲ್ಲಿ ಎದ್ದಿತು. ಅವಳ ಮನಸ್ಸು ಆಘಾತಕ್ಕೊಳಗಾದ ಬಂಡೆಯಂತೆ ಆಗಿ ಹೋಗಿತ್ತು. ಬಂಡೆಯನ್ನು ಕರಗಿಸುವ ದಿನಗಳು ಪ್ರಾರಂಭವಾದವು ಎಂದುಕೊಳ್ಳುತ್ತಿದ್ದಂತೆಯೆ ಹೊಸದೊಂದು ವನಪ್ರವಾಸ. ಕಾರಣವೇನು ಎಂದು ರಾಮನೂ ಹೇಳಲಿಲ್ಲ, ಸೀತೆಯೂ ಕೇಳಲಿಲ್ಲ.
ಲಕ್ಷ್ಮಣ ಅತ್ತಿಗೆಯನ್ನು ಅರಣ್ಯದಲ್ಲಿ ಅನಾಥೆಯಂತೆ ಬಿಟ್ಟು ಅಯೋಧ್ಯೆಗೆ ಹಿಂತಿರುಗಿಬಿಟ್ಟ. ಅವನನ್ನು ಪಾಪಪ್ರಜ್ಞೆ ಕಾಡುತ್ತಿತ್ತು. ಅಣ್ಣನ ಮುಖವನ್ನು ನೋಡಲೂ ಧೈರ್ಯವಿಲ್ಲ. ತಮ್ಮಂದಿರನ್ನು, ತಾಯಿಯಂದಿರನ್ನು ನೋಡಲು ಸ್ಥೈರ್ಯವಿಲ್ಲ. ಕೊನೆಗೆ ರಾಮನೇ ಹೇಳಿ ಕಳುಹಿಸಬೇಕಾಯಿತು: `ಅಣ್ಣ, ಅಲ್ಲ ಅಲ್ಲ, ಅಯೋಧ್ಯೆಯ ಅರಸೇ, ನಿಮ್ಮ ಆಜ್ಞೆಯಂತೆ ಸೀತಾ ದೇವಿಯವರನ್ನು ಅರಣ್ಯದಲ್ಲಿ ಬಿಟ್ಟು ಬಂದಿದ್ದೇನೆ!’ ಎಂದು ದುಗುಡದಿಂದಲೇ ಹೇಳಿದ.
ಶ್ರೀರಾಮಚಂದ್ರನಿಗೆ ದುಃಖ ಉಕ್ಕಿ ಬಂತು. ತಮ್ಮನ ಮುಂದೆ ತೋರಿಸಿಕೊಳ್ಳಲಿಲ್ಲ. ಜಾನಕಿಗೆ ತಾನು ಎಂತಹ ಅನ್ಯಾಯ ಮಾಡಿಬಿಟ್ಟೆ. ಯಾವನೊ ಅನಾಮಧೇಯನ ಸಂಸಾರದ ನೀಚ ನುಡಿಗಳನ್ನು ಕೇಳಿ ಪ್ರಿಯ ಪತ್ನಿಯನ್ನು ಕಾಡಿಗಟ್ಟಿಬಿಟ್ಟೆನಲ್ಲ. ಎಷ್ಟು ಸೂಕ್ಷ್ಮಜೀವಿ ಅವಳು. ಎಷ್ಟು ಮೃದು ಮನಸ್ಸಿನವಳು, ಏನೂ ಅರಿಯದ ಅಮಾಯಕಿ. ನನ್ನನ್ನು ಬಿಟ್ಟರೆ ಅವಳಿಗೆ ಬೇರೊಂದು ಪ್ರಪಂಚವಿಲ್ಲ. ಹೀಗಿರುವಾಗ ಏನೂ ಹೇಳದೆ, ಮುಂದೇನು ಎಂದೂ ತಿಳಿಸದೆ, ಗರ್ಭಿಣಿ ಹೆಂಡತಿಯನ್ನು ಕಾಡು ಪಾಲು ಮಾಡಿಬಿಟ್ಟೆನಲ್ಲ….!
ಶ್ರೀರಾಮನಿಗೆ ಅಂದಿನಿಂದ ನಿದ್ರೆಯೆಂಬುದೇ ಹೊರಟು ಹೋಯಿತು! ಸುಖ, ಸಂತೋಷ, ಸಂಭ್ರಮಗಳು ಇಲ್ಲವಾಯಿತು. ಮನಸ್ಸು ಏನನ್ನೂ ಬಯಸದ ಹಿಮದ ಗಡ್ಡೆಯಾಯಿತು.
ಅರಣ್ಯದಲ್ಲಿ ತನ್ನನ್ನು ಬಿಟ್ಟು , `ಮಾತಾ, ನಿನ್ನನ್ನು ಅರಣ್ಯದಲ್ಲಿ ಬಿಟ್ಟು ನಾನೊಬ್ಬನೇ ಅಯೋಧ್ಯೆಗೆ ಹಿಂತಿರುಗಬೇಕು ಎಂದು ಶ್ರೀರಾಮನ ಆಜ್ಞೆಯಾಗಿದೆ. ನಾನು ಆಜ್ಞೆಯನ್ನು ಪಾಲಿಸುತ್ತಿದ್ದೇನೆಯೆ ಹೊರತು ನನ್ನ ಮನಸ್ಸಿನ ಭಾವನೆಗಳನ್ನಲ್ಲ. ಅಂಧಕಾರ-ಮೃಗಗಳ ಈ ಗೊಂಡಾರಣ್ಯದಲ್ಲಿ ನೀನು ಒಂಟಿಯಾಗಿ ಹೇಗಿರುತ್ತಿ ಎಂದು ಯೋಚಿಸಿಕೊಂಡರೇ ಮೈನಡುಗುತ್ತದೆ. ತಾಯಿ! ಗರ್ಭಿಣಿಯಾದ ನಿನ್ನನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸು ತಾಯಿ!’ ಎಂದು ಲಕ್ಷ್ಮಣ ಗೋಳಾಡುತ್ತ ಅವಳ ಕಾಲಿಗೆರಗಿದ್ದ.
ಸೀತೆಗೆ ಒಂದು ಕ್ಷಣ ದಿಕ್ಕು ತೋಚದಂತಾಗಿತ್ತು. ಆದರೆ ಆಘಾತವಾಗಲಿಲ್ಲ. ತನ್ನ ಜೀವನದಲ್ಲಿ ಏನು ಬೇಕಾದರೂ ಆಗಬಹುದು, ಇದು ಲಂಕಾವಾಸದ ಒಂದು ವಿಸ್ತರಣೆ ಅಂದುಕೊಂಡಳು. `ಲಕ್ಷ್ಮಣಾ, ಸಂಕಟ ಪಡಬೇಡ. ಶ್ರೀರಾಮಚಂದ್ರ ಪ್ರಭುವಿನ ಆಜ್ಞೆಯನ್ನು ಪಾಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನೀನು ಹೋಗಿ ಬಾ! ಶ್ರೀಹರಿ ನನ್ನನ್ನು ಕಾಪಾಡುತ್ತಾನೆ! ಎಂದು ಹೇಳಿದ್ದಳು.
ಲಕ್ಷ್ಮಣ ಬಂದ ರಥದಲ್ಲೆ ಹಿಂತಿರುಗಿ ಹೋದಾಗ ದಿಗ್ಗೆಂದು ಅರಣ್ಯದ ಕಾರ್ಗತ್ತಲು ಕಣ್ಣುಗಳನ್ನಾವರಿಸಿಕೊಂಡಿತು. ಏನೂ ಕಾಣದಾಯಿತು. ಅವಳು ಅಲ್ಲೇ ಕುಸಿದು ಕುಳಿತಳು. ಅನಿಶ್ಚಿತ ಸ್ಥಿತಿ ಅವಳ ನಿದ್ರೆಯನ್ನು ಕಸಿದುಕೊಂಡಿತ್ತು.
ಕತ್ತಲು ಹರಿದು ಮುಂಜಾವಿನ ಬೆಳಕು ಹರಡಿಕೊಂಡಾಗ ಸೀತೆ ಎದ್ದು ನಿಧಾನವಾಗಿ ಮುಂದೆ ಹೆಜ್ಜೆ ಹಾಕಿದಳು. ಸ್ವಲ್ಪ ದೂರದಲ್ಲೆ ಆಶ್ರಮ, ಆಶ್ರಮ ವಾಸಿಗಳು ಕಾಣಿಸಿದರು. ಯಾರೊ ಇಬ್ಬರು ವಟುಗಳು ತನ್ನನ್ನು ಕಂಡು ವಾಲ್ಮೀಕಿ ಮಹರ್ಷಿಗಳನ್ನು ಕರೆತಂದರು. ಅವರಿಗೆ ಎಲ್ಲವೂ ಗೊತ್ತಿತ್ತೇನೊ ಎಂಬಂತೆ ಅವರು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಆಶ್ರಮವಾಸಿಯಾಗಿಸಿಕೊಂಡರು.
ಶ್ರೀರಾಮನ ಸವಿನೆನಪು, ಲಕ್ಷ್ಮಣನ ಸವಿನಯ, ಅಯೋಧ್ಯೆಯ ಸಂಭ್ರಮಗಳ ನೆನಪು ಮತ್ತೆ ಮತ್ತೆ ಕಾಡುತ್ತಿದ್ದರೂ ಋಷ್ಯಾಶ್ರಮದ ಶಾಂತ-ದ್ರವಿಕ ಪರಿಸರ, ವೇದಘೋಷಗಳ ದನಿ ಅವಳಿಗೆ ಸಾಂತ್ವನ ನೀಡುತ್ತಿದ್ದವು.
ಕಾಲಕ್ರಮದಲ್ಲಿ ಸೀತೆ ಅವಳಿ ಪುತ್ರರಿಗೆ ಜನ್ಮ ನೀಡಿದಳು. ವಾಲ್ಮೀಕಿ ಋಷಿಗಳ ವೇದೋಕ್ತವಾಗಿ ನಾಮಕರಣ ಮಾಡಿ ಈ ಅವಳಿಗಳಿಗೆ ಲವ-ಕುಶ ಎಂದು ಹೆಸರಿಟ್ಟರು. ಕಾಲಕಾಲಕ್ಕೆ ಈ ಬಾಲಕರ ಎಲ್ಲ ಶಾಸ್ತ್ರೋಕ್ತ ಕರ್ಮಗಳನ್ನು ನೆರವೇರಿಸಿದರು.

ಅಯೋಧ್ಯೆಯಲ್ಲಿ ಪುತ್ರ ಸಂತಾನ ಸಂಭ್ರಮ. ತನ್ನ ಸೀತೆಗೂ ಈಗ ಸಂತಾನವಾಗಿರಬಹುದು ಎಂದು ಶ್ರೀರಾಮ ಯೋಚಿಸುತ್ತಿದ್ದ ಕಾಲದಲ್ಲಿ, ಲಕ್ಷ್ಮಣನಿಗೆ ಅಂಗದ ಮತ್ತು ಚಿತ್ರಕೇತು ಎನ್ನುವ ಪುತ್ರರು ಹುಟ್ಟಿದರು. ಭರತನಿಗೆ ತಕ್ಷ ಮತ್ತು ಪುಷ್ಕಲ ಎನ್ನುವ ಪುತ್ರರೂ, ಶತ್ರುಘ್ನನಿಗೆ ಸುಬಾಹು ಮತ್ತು ಶ್ರುತಸೇನ ಎನ್ನುವ ಪುತ್ರರೂ ಹುಟ್ಟಿದರು. ಅಯೋಧ್ಯೆಯ ಅರಮನೆ ಮಕ್ಕಳ ಆಟದ ಸದ್ದಿನಿಂದ ಎಲ್ಲರ ಸಂತಸವನ್ನೂ ವೃದ್ಧಿಸುತ್ತಿತ್ತು ಜೊತೆಗೆ ಸೀತೆ ಇಲ್ಲದಿರುವುದು, ಶ್ರೀರಾಮನ ಸಂತಾನದ ಆಟ ಓಟಗಳ ಗೈರುಹಾಜರಿ ಎಲ್ಲರಿಗೂ ಎದ್ದು ಕಾಣುತ್ತಿತ್ತು.
ಅಯೋಧ್ಯಾನಗರಿಯ ಸಂಭ್ರಮ, ಸುಖೋಲ್ಲಾಸಗಳು, ಪೂಜೋತ್ಸವಗಳು, ಪುಟ್ಟ ಪುಟ್ಟ ಮಕ್ಕಳ ಆಟೋಟಗಳು, ಯುದ್ಧದಲ್ಲಿ ವಿಜಯೋತ್ಸವ, ರಾಜ್ಯದ ಬೆಳವಣಿಗೆ ವಿಸ್ತಾರ ಎಂದೆಲ್ಲಾ ಅನೇಕಾನೇಕ ಸುದ್ದಿಗಳು ವಾಲ್ಮೀಕಿ ಆಶ್ರಮಕ್ಕೆ ಬಂದು ತಲುಪಿ ಸೀತೆಯ ಕಿವಿಗೂ ಬೀಳುತ್ತಿತ್ತು. ತಾನು ಆ ಆಗುಹೋಗುಗಳ ಪಾಲುದಾರಳಲ್ಲ. ಲವ-ಕುಶರು ಶ್ರೀರಾಮನ ಮಕ್ಕಳಾಗಿದ್ದರೂ, ಋಷ್ಯಾಶ್ರಮದ ವಟುಗಳ ಹಾಗೆ ಬೆಳೆಯುತ್ತಿದ್ದಾರೆ. ಪರಿಪೂರ್ಣ ಯುದ್ಧವಿದ್ಯೆಯನ್ನು ಲವ-ಕುಶರಿಗೆ ವಾಲ್ಮೀಕಿ ಮಹರ್ಷಿಗಳು ಕಲಿಸಿದ್ದರೂ, ಕ್ಷತ್ರಿಯ ಬಾಲಕರು, ಬ್ರಾಹ್ಮಣ ಬಾಲಕರ ಹಾಗೆ ಬದುಕುತ್ತಿದ್ದರು.
ಸೀತೆಯ ಹೃದಯ ನಿರಾಸೆಯಿಂದ ನುಚ್ಚುನೂರಾಗಿತ್ತು. ಪತಿಯಿಂದ ಪರಿತ್ಯಕ್ತೆಯಾಗಿ ಬದುಕುವುದು ಅಸಹನೀಯವಾಯಿತು. ಒಂಟಿಜೀವನ ಬೇಡವಾಯಿತು. ಲವ-ಕುಶರನ್ನು ವಾಲ್ಮೀಕಿ ಮಹರ್ಷಿಗಳ ರಕ್ಷಣೆಗೆ ಒಪ್ಪಿಸಿದಳು. ಮಹರ್ಷಿಗಳ ಅಪ್ಪಣೆ ಪಡೆದು, ಶ್ರೀರಾಮಚಂದ್ರನ ಪಾದಕಮಲಗಳನ್ನು ಧ್ಯಾನಿಸುತ್ತ, ತಾನು ಬಂದ ದಾರಿಯೇ ಆದ ಭೂಮಿಯೊಳಗೆ ಪ್ರವೇಶ ಮಾಡಿಬಿಟ್ಟಳು.
ಸೀತಾದೇವಿ ಭೂಮಿಯೊಳಗೆ ಪ್ರವೇಶಮಾಡಿದ್ದು ಬಹುಬೇಗ ದೊಡ್ಡ ಸುದ್ಧಯಾಗಿ ಬೆಳೆದು ಅಯೋಧ್ಯೆಯ ಪ್ರಜೆಗಳನ್ನೆಲ್ಲ ತಲುಪಿ, ಶ್ರೀರಾಮಚಂದ್ರನನ್ನೂ ತಲುಪಿ ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿತು. ಅವನಿಗೆ ದುಃಖ ತಡೆಯಲಾಗಲಿಲ್ಲ. ಶ್ರೀರಾಮ ತಾನೇ ದೇವೋತ್ತಮ ಪರಮ ಪುರುಷನಾದರೂ ಸೀತಾದೇವಿಯ ಲೋಕೋತ್ತರ ಗುಣಗಳನ್ನು ನೆನೆಯುತ್ತ ಅಲೌಕಿಕ ಪ್ರೇಮದಿಂದಾಗಿ ದುಃಖ ಸಾಗರದಲ್ಲಿ ಮುಳುಗಿದ.
ಸೀತಾಮಾತೆಯು ಭೂಮಿಯೊಳಗೆ ಪ್ರವೇಶಿಸಿದ ತರುವಾಯ ಶ್ರೀರಾಮಚಂದ್ರನು ಹದಿಮೂರು ಸಾವಿರ ವರ್ಷಗಳ ಕಾಲ ಅವ್ಯಾಹತವಾಗಿ ಅಗ್ನಿಹೋತ್ರ ಯಜ್ಞವನ್ನಾಚರಿಸಿದನು.
ಈ ಸಂದರ್ಭದಲ್ಲಿ ಮಾತು ನಿಲ್ಲಿಸಿದ ಸೂತ ಮುನಿಗಳು ಕ್ಷಣ ಕಾಲ ತಡೆದು ಪ್ರವಚನವನ್ನು ಮುಂದುವರಿಸಿದರು ಶ್ರೀರಾಮನ ಅಂತ್ಯವನ್ನು ಅವರು ಹೇಳಬೇಕಾಗಿತ್ತು, ಶ್ರೀರಾಮಚಂದ್ರನ ಲೀಲೆಗಳನ್ನು, ವಿಶ್ವಾಡಳಿತವನ್ನೂ ವಿವರಿಸಬೇಕಾಗಿತ್ತು. ಅವರು ಹೇಳಿದರು.
`ಪರೀಕ್ಷಿತ ರಾಜನಿಗೆ ಶ್ರೀರಾಮಚಂದ್ರನ ಈ ಕಥಾಭಾಗವನ್ನು ಹೇಳುತ್ತಿದ್ದ ಶುಕಮುನಿಗಳೂ ಶ್ರೀರಾಮಚಂದ್ರನ ಪತ್ನಿವಿಯೋಗದ ಅಪಾರ ದುಃಖವನ್ನು ನೋವಿನಿಂದಲೇ ಹೇಳಿ, ಬೇಗ ಕಥೆ ಮುಗಿಸಿಬಿಡುತ್ತಾರೆ. ದುಃಖತಪ್ತನಾಗಿದ್ದುಕೊಂಡೇ ಹದಿಮೂರು ಸಹಸ್ರ ವರ್ಷಗಳ ಕಾಲ ಅಗ್ನಿಹೋತ್ರ ಯಜ್ಞವನ್ನಾಚರಿಸುತ್ತ, ದಂಡಕಾರಣ್ಯದಲ್ಲೇ ಸಂಚರಿಸುತ್ತಿದ್ದ ಶ್ರೀರಾಮ ಬ್ರಹ್ಮಜ್ಯೋತಿಯ ಆಚೆಗಿದ್ದ ಅವನ ಧಾಮವಾದ ವೈಕುಂಠಲೋಕವನ್ನು ಸೇರಿದನು ಎಂದು ಬಿಡುತ್ತಾರೆ. ಆದರೆ, ಕೂಡಲೇ ಶ್ರೀರಾಮಚಂದ್ರನ ವೈಭವದ ದಿನಗಳನ್ನು ವರ್ಣಿಸತೊಡಗುತ್ತಾರೆ. ಮರಣವನ್ನು ನಿರೀಕ್ಷಿಸುತ್ತಿದ್ದ ಪರೀಕ್ಷಿತರಾಜನಿಗೆ ಇನ್ನೊಂದು ಸಂಕಟದ ಮರಣದ ಕಥೆಯನ್ನು ಹೇಳಿ, ಪರೀಕ್ಷಿತರಾಜ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮೊದಲೇ, ಕಥೆ ಮುಂದುವರಿಸಿ, ಶ್ರೀರಾಮಚಂದ್ರನ ರಾಮರಾಜ್ಯದ ವೈಭವವನ್ನು ಹೇಳತೊಡಗಿಬಿಡುತ್ತಾರೆ. ಶುಕಮುನಿಗಳ ಬಾಯಿಯಿಂದ ಬಂದ ಮಾತುಗಳನ್ನೆ ಈಗ ನಾನು ನಿಮ್ಮ ಮುಂದೆ ಇರಿಸುತ್ತಿದ್ದೇನೆ.’
`ಶ್ರೀರಾಮಚಂದ್ರ ರಾವಣನನ್ನು ವಧಿಸಿದ್ದು ದೇವತೆಗಳ ಕೋರಿಕೆಯ ಮೇರೆಗೆ. ರಾವಣವಧೆ, ಸೇತು ನಿರ್ಮಾಣ ಮೊದಲಾದ ಯಾವ ಕಾರ್ಯಗಳಲ್ಲಾಗಲಿ ದೇವೋತ್ತಮ ಪರಮ ಪುರುಷನಾದ ಶ್ರೀರಾಮಚಂದ್ರನ ವಾಸ್ತವವಾದ ಮಹಿಮೆ ಎದ್ದು ಕಾಣುವುದಿಲ್ಲ. ಪ್ರಭುವಿನ ಆಧ್ಯಾತ್ಮಿಕ ಶರೀರವು ಯಾವಾಗಲೂ ವಿವಿಧ ಲೀಲೆಗಳಲ್ಲಿ ನಿರತವಾಗಿರುತ್ತದೆ. ಶ್ರೀರಾಮಚಂದ್ರನಿಗೆ ಸಮರಾದವರಾಗಲಿ, ಶ್ರೇಷ್ಠರಾದವರಾಗಲಿ ಇಲ್ಲ. ರಾವಣನನ್ನು ಕೊಲ್ಲಲು ಅವನು ಕಪಿಗಳ ಸಹಾಯ ತೆಗೆದುಕೊಳ್ಳಬೇಕಾಗಿರಲಿಲ್ಲ. ಹೀಗೆ ಯಾವ ದೈವತ್ವದ ಪ್ರದರ್ಶನ ಮಾಡದೆ ಮಾನವೀಯತೆಯನ್ನೇ ಮೆರೆಸಿದ ಶ್ರೀರಾಮಚಂದ್ರನು ಮುಂದೆ ಎಲ್ಲರಿಂದಲೂ ಪೂಜಾರ್ಹನಾಗಿದ್ದಾನೆ. ಸಕಲ ಪಾಪಫಲಗಳನ್ನೂ ತೊಡೆಯುವ ಶ್ರೀರಾಮಚಂದ್ರನ ಅಕಳಂಕ ನಾಮವನ್ನು ಹಾಗೂ ಪ್ರಖ್ಯಾತಿಯನ್ನೂ ಎಲ್ಲ ದಿಕ್ಕುಗಳಲ್ಲೂ ಕೊಂಡಾಡಲಾಗುತ್ತದೆ. ರಾಜಮಹಾರಾಜರ ಸಭೆಗಳಲ್ಲಿ ಋಷಿಪುಂಗವರು ಶ್ರೀರಾಮಚಂದ್ರನ ಗುಣವೈಭವಗಳನ್ನು ಹಾಡಿ ಹೊಗಳಿದ್ದಾರೆ. ಸಕಲ ದೇವತೆಗಳೂ ತಮ್ಮ ಕಿರೀಟಗಳ ಸಮೇತ ಶಿರಬಾಗಿ ನಮಿಸಿ ಪೂಜಿಸಿದ್ದಾರೆ. ಇಂತಹ ಮಹಾಮಹಿಮನ, ದೇವೋತ್ತಮ ಪರಮ ಪರುಷನ ಪಾದಪದ್ಮಗಳಿಗೆ ನನ್ನ ನಮಸ್ಕಾರಗಳನ್ನು ಸಮರ್ಪಿಸುತ್ತೇನೆ!’
ಹಿರಿಯ ಗುರುಗಳು ಎರಡೂ ಕೈಗಳನ್ನು ಮುಗಿದು ಗಗನದತ್ತ ನೋಡುತ್ತ ಕೈಮುಗಿದದ್ದನ್ನು ನೋಡಿದ ನೈಮಿಷಾರಣ್ಯದ ಋಷಿಪುಂಗವರೆಲ್ಲರೂ ಕೈಮುಗಿದು ಶ್ರೀರಾಮಚಂದ್ರನಿಗೆ ವಂದಿಸಿದರು.
ಸೂತಮುನಿಗಳು ಉಳಿದ ಕಥಾಭಾಗವನ್ನು ಹೇಳಿದರು.
ಭಕ್ತಿಯೋಗಿಗಳು ಉನ್ನತಿ ಪಡೆಯುವ ತನ್ನ ಧಾಮಕ್ಕೆ ಶ್ರೀರಾಮಚಂದ್ರನು ಹಿಂತಿರುಗಿದನು. ತಮ್ಮ ರಾಜನನ್ನು ಶ್ರೀಮನ್ನಾರಾಯಣನೆಂದೇ ಭಾವಿಸುವ ಅಯೋಧ್ಯಾಪುರ ಜನರೂ ಅವನನ್ನು ಹಿಂಬಾಲಿಸಿ ಅದೇ ಧಾಮವನ್ನು ಸೇರಿದರು.
ಸೂತ ಮುನಿಗಳು ಹೇಳಿದರು ; `ಪ್ರಿಯ ಮುನಿಗಳೆ, ಪೂಜ್ಯ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಒಂದು ಧರ್ಮವಾಕ್ಯ ಹೇಳುತ್ತಾರೆ. ಶ್ರೀರಾಮಚಂದ್ರನ ಲೀಲೆಗಳ ಗುಣ ವಿಶೇಷಗಳನ್ನು ಯಾವಾತನು ಶ್ರವಣ ಮಾಡುವನೋ ಅವನು ಅಂತಿಮವಾಗಿ ಈರ್ಷ್ಯೆಯೆಂಬ ವ್ಯಾಧಿಯಿಂದಲೂ, ಕಾಮ್ಯ ಕರ್ಮಗಳ ಬಂಧನದಿಂದಲೂ ಮುಕ್ತನಾಗುವನು. ಈ ಮಾತನ್ನು ಕೇಳಿದ ಪರೀಕ್ಷಿತ ಮಹಾರಾಜನು, ಶ್ರೀರಾಮ ಸೋದರರೊಂದಿಗೆ, ಪುರಜನರೊಂದಿಗೆ ಹೇಗೆ ನಡೆದುಕೊಂಡನೆಂದು ತಿಳಿಸಿ, ಎಂದು ಕೇಳಿಕೊಳ್ಳುತ್ತಾನೆ.
`ಪರೀಕ್ಷಿತನ ಕುತೂಹಲಗಳನ್ನು ತಣಿಸುವಂತೆ ಶುಕಮುನಿಗಳು ಹೀಗೆ ಹೇಳುತ್ತಾರೆ ; ಸಿಂಹಾಸನಾಧೀಶನಾದ ಶ್ರೀರಾಮಚಂದ್ರ ತನ್ನ ಸೋದರರನ್ನು ಇಡೀ ವಿಶ್ವವನ್ನೇ ಗೆದ್ದು ಬರುವಂತೆ ಹೇಳಿ ಬೆಂಬಲಿಸಿದ. ಪುರಜನರ ಮಾತುಗಳನ್ನು ನೇರವಾಗಿ ಆಲಿಸುತ್ತ, ಆಡಳಿತಾತ್ಮಕ ವಿಷಯಗಳನ್ನೆಲ್ಲ ಗಮನಿಸುತ್ತಿದ್ದ. ತನ್ನ ರಾಜಧಾನಿ, ರಾಜ್ಯ ವೈಭವಯುತವಾಗಿರುವಂತೆ ನೋಡಿಕೊಳ್ಳುತ್ತಿದ್ದ. ಪ್ರಜೆಗಳು ತಮ್ಮ ರಾಜನ ಆಡಳಿತ ನಿಷ್ಠೆಯನ್ನು ಮೆಚ್ಚಿಕೊಂಡರು. ಶ್ರೀರಾಮಚಂದ್ರ ಭೇಟಿಕೊಟ್ಟ ಕಡೆಯಲ್ಲೆಲ್ಲ ಪ್ರಜೆಗಳು ಶ್ರೀಮಂತವಾಗಿ ಶೃಂಗರಿಸಿ ಅವನನ್ನು ಸ್ವಾಗತಿಸುತ್ತಿದ್ದರು. ವಿಶೇಷ ದ್ವಾರಗಳನ್ನು ನಿರ್ಮಿಸುತ್ತಿದ್ದರು. ಪೂಜಾಸಾಮಗ್ರಿಗಳೊಂದಿಗೆ ಬಂದು ಅವನನ್ನು ಪೂಜಿಸಿ ಆಶೀರ್ವಚನಗಳನ್ನು ಕೋರುತ್ತಿದ್ದರು. ಹೂಮಳೆಗರೆಯುತ್ತಿದ್ದರು.’

`ಪ್ರಿಯಮುನಿಗಳೆ, ಶ್ರೀರಾಮಚಂದ್ರನು ಸೀತಾದೇವಿಯೊಂದಿಗಿದ್ದಾಗ ವೈಭವದಿಂದ, ಸ್ವರ್ಗೀಯ ಪ್ರಭೆಯಿಂದ ರಾಜ್ಯವನ್ನಾಳುತ್ತ ಕಂಗೊಳಿಸುತ್ತಿದ್ದನು. ಇಡೀ ಅರಮನೆ ದೀಪಗಳಿಂದ ಅಲಂಕೃತ ಸ್ತ್ರೀಪುರುಷರಿಂದ ಮೆರೆಯುತ್ತಿತ್ತು. ಪತ್ನಿ ಸೀತೆಯೊಂದಿಗೆ ವಾಸಿಸುತ್ತ ಅವನು ಪರಿಪೂರ್ಣ ಶಾಂತಿಯನ್ನನುಭವಿಸಿದನು. ಪ್ರಿಯರೆ, ಯಾರ ಚರಣ ಕಮಲಗಳು ಧ್ಯಾನಾಸಕ್ತರಾದ ಭಕ್ತರಿಂದ ಪೂಜಿತವೋ ಆ ಶ್ರೀರಾಮಚಂದ್ರನು ಧರ್ಮತತ್ವಗಳನ್ನು ಉಲ್ಲಂಘಿಸದೆ ತನಗೆ ಬೇಕೆನಿಸಿದಷ್ಟು ಕಾಲ ದಿವ್ಯಾನಂದದ ಸಕಲ ಪರಿಕರಗಳನ್ನೂ ಭೋಗಿಸಿದನು.’
`ಪ್ರಿಯ ಮುನಿಗಳೆ, ಹೀಗೆ ವೈಭವದಿಂದ ಆಳಿದ ಶ್ರೀರಾಮಚಂದ್ರನ ಸೂರ್ಯವಂಶ ಅವನ ಪುತ್ರ ಕುಶನಿಂದ ಮುಂದುವರಿಯಿತು. ಕುಶ ರಾಜ್ಯ ಆಳಿದ ಮೇಲೆ ಅತಿಥಿ, ನಿಷಾದ, ನಭ, ಪುಂಡರೀಕ, ಕ್ಷೇಮಧನ್ವಾ, ದೇವಾನೀಕ, ಅನೀಹ, ಪಾರಿಯಾತ್ರ, ಬಲಸ್ಥಳ, ವಜ್ರನಾಭ, ಸಗಣ, ವಿಧೃತಿ ಮೊದಲಾದವರು ವಿಶ್ವವನ್ನಾಳಿದರು. ವಿಧೃತಿಯಿಂದ ವಂಶ ಮುಂದುವರೆಯಿತು. ಹಿರಣ್ಯನಾಭ, ಯಾಜ್ಞವಲ್ಕ್ಯ, ಪುಷ್ಪ, ಧ್ರುವಸಂ, ಸುದರ್ಶನ, ಅಗ್ನಿವರ್ಣ, ಶೀರ್ಘ, ಮರು, ಪ್ರಸುಶ್ರುತ, ಸಂಧಿ, ಅಮರ್ಷಣ, ಮಹಸ್ಪಾನ್, ವಿಶ್ವಬಾಹು, ಪ್ರಸೇನಜಿತ್, ತಕ್ಷಕ, ಬೃಹದ್‌ಬಲ ಮೊದಲಾದವರು ವಂಶವನ್ನು ಮುಂದುವರಿಸಿದರು ಎಂದು ಶುಕಮುನಿಗಳು ಹೇಳುತ್ತಾರೆ. ಬೃಹದ್‌ರಣ, ಉರುಕ್ರಿಯ, ವತ್ಸವೃದ್ಧ, ಸುತಪಾ, ಅಮಿತ್ರಜಿತ್, ಬೃಹದ್ರಾಜ, ಬರ್ಹಿ, ಕೃತಂಜಯ, ರಣಂಜಯ, ಸುಪ್ರತೀಕ, ಮರುದೇವ, ಸುನಕ್ಷತ್ರ, ಪುಷ್ಕರ, ಸಂಜಯ, ಶಾಕ್ಯ, ಸುದ್ಧೋದ, ಲಾಂಗಲ, ಪ್ರಸೇನಜಿತ್, ಕ್ಷುದ್ರಕ, ರಣಕ, ಸುರಥ, ಸುಮಿತ್ರ ಮೊದಲಾದವರೆಲ್ಲರೂ ಈ ವಂಶದಲ್ಲಿ ಮುಂದೆ ಜನಿಸಲಿರುವ ರಾಜಮಹಾರಾಜರು’ ಎಂದು ಶುಕಮುನಿ ಭವಿಷ್ಯ ನುಡಿಯುತ್ತಾರೆ. ಸುಮಿತ್ರನೊಂದಿಗೆ ಈ ವಂಶಾವಳಿಯ ಮುಕ್ತಾಯವಾಗುತ್ತದೆ ಎಂದವರು ಹೇಳುತ್ತಾರೆ. ಮುಂದೆ ಈ ಸೂರ್ಯವಂಶಕ್ಕೆ ಸಂತಾನವಾಗುವುದಿಲ್ಲ. ಹೀಗಾಗಿ ವಂಶ ಇಲ್ಲಿಗೆ ಅಂತ್ಯಗೊಳ್ಳುತ್ತದೆ.
`ಪ್ರಿಯ ಮುನಿಗಳೆ, ಪುಣ್ಯ ಪುರುಷ ಶ್ರೀರಾಮಚಂದ್ರನ ಸಂಕ್ಷಿಪ್ತ ಕಥಾಭಾಗ ಹೀಗೆ ಶ್ರೀಮದ್ಭಾಗವತದಲ್ಲಿ ಬರುತ್ತದೆ. ಅಷ್ಟೇ ಸಂಕ್ಷಿಪ್ತವಾಗಿ ನಿಮಗಿದನ್ನು ಹೇಳಿದ್ದೇನೆ. ಶ್ರೀರಾಮ ಕಥಾಮೃತ ಶ್ರವಣ ಮಾಡಿದ ನಾವೆಲ್ಲರೂ ಪುಣ್ಯವಂತರು, ಧನ್ಯರು!’ ಎಂದು ಹೇಳಿದ ಸೂತ ಮುನಿಗಳು ಶ್ರೀಮದ್ಭಾಗವತದ ಒಂಭತ್ತನೆಯ ಸ್ಕಂಧದ ಹನ್ನೊಂದು ಮತ್ತು ಹನ್ನೆರಡನೆಯ ಅಧ್ಯಾಯಗಳ ಕಥಾಭಾಗವನ್ನು ಹೇಳಿ ಮುಗಿಸಿದರು.
ನೈಮಿಷಾರಣ್ಯದ ಮುನಿಗಳೆಲ್ಲರೂ ಧನ್ಯತಾಭಾವವನ್ನು ಅನುಭವಿಸಿದರು.






Leave a Reply