ಅವನಿಲ್ಲದೆ ಯಾವುದೂ ಅಸ್ತಿತ್ವದಲ್ಲಿರಲಾರದು

ಪ್ರಾಚೀನ ವಿವಾದವೊಂದನ್ನು ಕುರಿತು ಅತ್ಯಂತ ಪ್ರಮಾಣಭೂತವಾದ ಅಭಿಪ್ರಾಯ.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ವೃಂದಾವನದಲ್ಲಿ  ಆಗಸ್ಟ್‌ 13, 1974ರಂದು ನೀಡಿದ ಉಪನ್ಯಾಸ

ಮತ್ತಃ ಪರತರಂ ನಾನ್ಯತ್‌ ಕಿಂಚಿದ್‌ ಅಸ್ತಿ ಧನಂಜಯ

ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ

“ಓ ಧನಂಜಯ, ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಮಣಿಗಳನ್ನು ದಾರದಲ್ಲಿ ಪೋಣಿಸಿದ ಹಾಗೆ ಎಲ್ಲವೂ ನನ್ನನ್ನೇ ಅವಲಂಬಿಸಿದೆ.”

(ಭಗವದ್ಗೀತೆ  7.7)

ಅನೇಕ ತತ್ತ್ವಶಾಸ್ತ್ರಜ್ಞರು ಇದ್ದಾರೆ. ಅವರಲ್ಲಿ ಕೆಲವರು ಪರಮ ಸತ್ಯವು ನಿರಾಕಾರ ಎಂದು ಭಾವಿಸುತ್ತಾರೆ, ಮತ್ತು ಇತರರು ಸಾಕಾರ ಎಂದು ಹೇಳುತ್ತಾರೆ. ಭಾರತದಲ್ಲಿ ನಿರಾಕಾರವಾದಿಗಳನ್ನು ಮಾಯಾವಾದಿಗಳೆಂದೂ, ಸಾಕಾರವಾದಿಗಳನ್ನು ವೈಷ್ಣವರೆಂದೂ ಕರೆಯುತ್ತಾರೆ. ಆದ್ದರಿಂದ ಈ ಶ್ಲೋಕದಲ್ಲಿ ಪ್ರಭು ಕೃಷ್ಣನು ಪರಮ ಸತ್ಯವು ನಿರಾಕಾರವೇ ಅಥವಾ ಸಾಕಾರವೇ ಎಂಬ ವಿವಾದವನ್ನು ಪರಿಹರಿಸಿದ್ದಾನೆ.

ಪರಮ ಸತ್ಯವು ದೇವೋತ್ತಮ ಪರಮ ಪುರುಷ, ಅಂದರೆ ಭಗವಾನ್‌ ಆಗಿದೆ. ಶ್ರೀಮದ್‌ ಭಾಗವತದ ನಿರ್ಣಯವು ಪ್ರಭು ಕೃಷ್ಣನೇ ಆ ಭಗವಾನ್‌ ಎಂಬುದಾಗಿದೆ: ಕೃಷ್ಣಸ್ತು ಭಗವಾನ್‌ ಸ್ವಯಮ್‌. ಋಗ್ವೇದವು ಇದನ್ನು ಖಚಿತಪಡಿಸುತ್ತದೆ: ತದ್‌ ವಿಷ್ಣೋಃ ಪರಮಮ್‌ ಪದಮ್‌ “ವಿಷ್ಣುವೇ ಸರ್ವ ಶ್ರೇಷ್ಠ” ಮತ್ತು ಸದಾ ಪಶ್ಯಂತಿ ಸೂರಯಃ “ದೇವತೆಗಳು ಅಥವಾ ಆಧ್ಯಾತ್ಮಿಕ ಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಿದವರು ಸದಾ ವಿಷ್ಣುವಿನ ಪಾದ ಕಮಲಗಳತ್ತ ನೋಡುತ್ತಾರೆ.”

ಆದರೆ ವಿಷ್ಣುವು ದೇವೋತ್ತಮ ಪರಮ ಪುರುಷ, ಪರಮ ಸತ್ಯ ಎನ್ನುವುದು ರಾಕ್ಷಸರಿಗೆ ತಿಳಿದಿಲ್ಲ. ಏಕೆಂದರೆ ಅವರಲ್ಲಿ ನಾಸ್ತಿಕ ಪ್ರವೃತ್ತಿಯಿದೆ. ಪರಮ ಸತ್ಯವು ಪರಮ ಪುರುಷನೇ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಲಾರರು. ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ… ಉರು ದಾಮ್ನಿ ಬದ್ಧಾಃ ನಾಸ್ತಿಕರು ಪ್ರಕೃತಿ ನಿಯಮಗಳಿಂದ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ ಎಂದರೆ ಪ್ರಭು ವಿಷ್ಣುವೇ ಜೀವನದ ನಿಜವಾದ ಗುರಿ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಲಾರರು. ಒಂದು ಪಕ್ಷ ನಿಮ್ಮ ಕೈಕಾಲುಗಳನ್ನು ಕಟ್ಟಿಹಾಕಿದೆ ಎಂದುಕೊಳ್ಳಿ. ಆಗ ನೀವು ಸ್ವತಂತ್ರವಾಗಿ ಏನನ್ನೂ ಮಾಡಲಾರಿರಿ. ಅದೇ ರೀತಿಯಲ್ಲಿ, ನಾವು ಪ್ರಕೃತಿಯ ಕಟ್ಟುನಿಟ್ಟಾದ ನಿಯಮಗಳಿಂದ ಬಿಗಿಯಾಗಿ ಬಂಧಿತರಾಗಿದ್ದೇವೆ. ನಾವು ಸ್ವಲ್ಪವೂ ಸ್ವತಂತ್ರರಾಗಿಲ್ಲ. ನಾವು ಅಜ್ಞಾನದಿಂದ ಆವೃತರಾಗಿದ್ದೇವೆ. ಆದರೆ ನಾವು ಈ ಐಹಿಕ ಪ್ರಪಂಚದಲ್ಲಿ ವಸ್ತುಗಳನ್ನು ಸರಿಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಾ ಸಂತೋಷವಾಗಿರಬಹುದು ಎಂದುಕೊಳ್ಳುತ್ತೇವೆ. ಇದು ಅಸಾಧ್ಯವಾದ ಸಂಗತಿ. ಆದ್ದರಿಂದ ನಾವು ಜೀವನದ ನಿಜವಾದ ಗುರಿಯನ್ನು ಅರಿತಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಪ್ರತಿಯೊಬ್ಬನೂ ಸ್ವಾರ್ಥಪರ. ಆದರೆ ಸ್ವ-ಹಿತ ಎಂದರೆ ಏನು ಎಂದು ನಿಜವಾಗಿಯೂ ನಮಗೆ ಗೊತ್ತಿಲ್ಲ. ನಮ್ಮ ನಿಜವಾದ ಸ್ವ-ಹಿತವೆಂದರೆ ಪ್ರಭು ವಿಷ್ಣುವನ್ನು ಅರ್ಥಮಾಡಿಕೊಳ್ಳುವುದು: ತದ್‌ ವಿಷ್ಣೋಃ ಪರಮಮ್‌ ಪದಮ್‌ ಅದೇ ನಮ್ಮ ಜೀವನದ ಗುರಿ.

ವಿಷ್ಣು ಮತ್ತು ಕೃಷ್ಣ ಒಂದೇ. ಆದರೆ ವಿಷ್ಣುವು ಎರಡನೆಯವನೋ ಅಥವಾ ಕೃಷ್ಣನು ಎರಡನೆಯವನೋ ಎಂಬ ವಿಚಾರದಲ್ಲಿ ಒಂದು ವಿವಾದವಿದೆ. ಶಾಸ್ತ್ರದ ಪ್ರಕಾರ ಇಬ್ಬರೂ ಎರಡನೆಯವರಲ್ಲ. ವಿಷ್ಣುವು ಕೇವಲ ಕೃಷ್ಣನ ಒಂದು ವಿಸ್ತರಣೆ. ಅವರು ಬೇರೆ ಬೇರೆ ವ್ಯಕ್ತಿಗಳಲ್ಲ. ಬ್ರಹ್ಮಸಂಹಿತೆಯಲ್ಲಿ ಹೇಳಿದಂತೆ ಅದ್ವೈತಮ್‌ ಅಚ್ಯುತಮ್‌ ಅನಾದಿಮ್‌ ಅನಂತರೂಪಮ್‌ ಗೋವಿಂದ ಅಥವಾ ಕೃಷ್ಣನಿಗೆ ಅನಂತ (ಪರಿಮಿತಿಯಿಲ್ಲದಷ್ಟು) ರೂಪಗಳಿವೆ.

ಒಂದು ದೀಪದಿಂದ ನೀವು ಇನ್ನೊಂದು ದೀಪವನ್ನು ಹಚ್ಚಬಹುದು. ಅದರಿಂದ ಇನ್ನೊಂದು, ಅನಂತರ ಮತ್ತೊಂದು ದೀಪವನ್ನು ಹಚ್ಚಬಹುದು. ಯಾವ ದೀಪ ಕೂಡ ಉಳಿದ ದೀಪಗಳಿಗಿಂತ ದುರ್ಬಲವಲ್ಲ. ಇಷ್ಟಾಗಿಯೂ ಮೂಲ ದೀಪವೊಂದು ಇನ್ನೂ ಇದ್ದೇ ಇದೆ. ಅದೇ ರೀತಿಯಲ್ಲಿ ವಿಷ್ಣು, ರಾಮ, ನೃಸಿಂಹ, ಬಲರಾಮ – ಎಲ್ಲರೂ ಪರಮ ಪುರುಷನಾದ ಕೃಷ್ಣನ ವಿಸ್ತರಣೆಗಳೇ, ಮತ್ತು ಅವರೆಲ್ಲರೂ ಕೃಷ್ಣನಷ್ಟೇ ಪರಾಕ್ರಮಶಾಲಿಗಳು. ಆದರೂ ದೇವೋತ್ತಮ ಪರಮ ಪುರುಷನಾದ ಕೃಷ್ಣನೇ ಮೂಲ. ಆದ್ದರಿಂದ ಕೃಷ್ಣನು ಇಲ್ಲಿ ಹೇಳುತ್ತಾನೆ, ಮತ್ತಃ ಪರತರಂ ನಾನ್ಯತ್‌ “ನನಗಿಂತ ಶ್ರೇಷ್ಠವಾದ ವಿಧಾಯಕ ಶಕ್ತಿ ಬೇರೆ ಇಲ್ಲ.” ಇದು ಶಾಸ್ತ್ರದ ನಿರ್ಣಯ.

ಭಗವದ್‌ ಗೀತೆಯಲ್ಲಿ ಬೇರೆಡೆ (10.2) ಕೃಷ್ಣನು ಹೇಳುತ್ತಾನೆ, ಅಹಮ್‌ ಆದಿರ್ಹಿ ದೇವಾನಾಂ “ನಾನು ಎಲ್ಲ ದೇವತೆಗಳಿಗೆ ಮೂಲ.” ಮುಖ್ಯ ದೇವತೆಗಳೆಂದರೆ ಬ್ರಹ್ಮ ಮತ್ತು ಶಿವ; ಅವರು ಗುಣ ಅವತಾರಗಳು, ಅವರು ಈ ಐಹಿಕ ಜಗತ್ತನ್ನು ಸೃಷ್ಟಿಸುತ್ತಾರೆ ಮತ್ತು ನಾಶಮಾಡುತ್ತಾರೆ.

ಈ ಐಹಿಕ ಜಗತ್ತು ಮೂರು ಗುಣಗಳಿಂದ ಕೂಡಿದೆ: ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ. ಸತ್ತ್ವಗುಣದ ಅಧಿಪತಿ ವಿಷ್ಣು, ರಜೋಗುಣದ ಅಧಿಪತಿ ಬ್ರಹ್ಮ ಮತ್ತು ತಮೋಗುಣದ ಅಧಿಪತಿ ಶಿವ. ಆದರೆ ಇವರೆಲ್ಲರ ಮೂಲ ಕೃಷ್ಣ. ಆದ್ದರಿಂದ ದೇವರ ಎಲ್ಲ ಪ್ರಮುಖ ಅವತಾರಗಳನ್ನು ವರ್ಣಿಸಿದ ಅನಂತರ ಶ್ರೀಮದ್‌ ಭಾಗವತವು ಹೀಗೆ ತೀರ್ಮಾನಿಸುತ್ತದೆ (1.3.28): ಏತೇ ಚಾಂಶ ಕಲಾಃ ಪುಂಸಃ ಕೃಷ್ಣಸ್ತು ಭಗವಾನ್‌ ಸ್ವಯಮ್‌ “ಈ ಅಧ್ಯಾಯದಲ್ಲಿ ಪ್ರಸ್ತಾವಿಸಲಾಗಿರುವ ಎಲ್ಲ ಅವತಾರಗಳು ಕೃಷ್ಣನ ವಿಸ್ತರಣೆಗಳು ಅಥವಾ ವಿಸ್ತರಣೆಗಳ  ವಿಸ್ತರಣೆಗಳು.” ಕೃಷ್ಣನ ಮೊದಲನೆಯ ವಿಸ್ತರಣೆಯು ಬಲರಾಮ. ಬಲರಾಮನಿಂದ ಚತುರ್‌ವ್ಯೂಹವು ವಿಸ್ತರಣೆಗೊಂಡಿತು: ಸಂಕರ್ಷಣ, ಪ್ರದ್ಯುಮ್ನ, ವಾಸುದೇವ ಮತ್ತು ಅನಿರುದ್ಧ. ಈ ಎಲ್ಲ ವಿಸ್ತರಣೆಗಳೂ ಸಮಾನ ಪರಾಕ್ರಮಶಾಲಿಗಳು. ಅವು ಒಂದರಿಂದ ಇನ್ನೊಂದು ಬೇರೆ ಬೇರೆಯಲ್ಲ.

ಆದ್ದರಿಂದ ದೇವರ ಎಲ್ಲ ಅವತಾರಗಳಿಗೆ ಕೃಷ್ಣನೇ ಮೂಲ. ಈಶ್ವರಃ ಪರಮಃ ಕೃಷ್ಣಃ. ಈಶ್ವರ ಎಂದರೆ ನಿಯಂತ್ರಕ. ದೇವತೆಗಳು ಈಶ್ವರರೇ: ನೀವೂ ಕೂಡ ಒಬ್ಬ ಈಶ್ವರ; ನಾನು ಕೂಡ ಒಬ್ಬ ಈಶ್ವರ. ಯಾವುದೋ ಒಂದರಮೇಲೆ ಸ್ವಲ್ಪ ನಿಯಂತ್ರಣ ಹೊಂದಿರುವ ಯಾರನ್ನೇ ಆಗಲಿ ಒಬ್ಬ ಈಶ್ವರ ಎಂದು ಕರೆಯಬಹುದು. ಅದು ನಿಘಂಟಿನ ಅರ್ಥ. ಆದರೆ ಈ ವಿಶ್ವದಲ್ಲಿರುವ ಅತ್ಯುನ್ನತ ಈಶ್ವರರಾದ ಬ್ರಹ್ಮ, ವಿಷ್ಣು ಮತ್ತು ಶಿವ ಕೂಡ ಪರಮ ಈಶ್ವರರಲ್ಲ. ಪರಮ ಈಶ್ವರನು ಕೃಷ್ಣ. ಅದು ಶಾಸ್ತ್ರದ ನಿರ್ಣಯ ಮತ್ತು ಸ್ವತಃ ಕೃಷ್ಣನೇ ಅದನ್ನು ಇಲ್ಲಿ ಖಚಿತಪಡಿಸುತ್ತಾನೆ ಮತ್ತಃ ಪರತರಂ ನಾನ್ಯತ್‌ “ನನಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ.” ಅರ್ಜುನನು ಈ ನಿರ್ಣಯವನ್ನು ಅರ್ಥಮಾಡಿಕೊಂಡ, ಆದ್ದರಿಂದ ಭಗವದ್ಗೀತೆಯಲ್ಲಿ (10.13-14) ಅವನು ಕೃಷ್ಣನಿಗೆ ಹೀಗೆ ಹೇಳುತ್ತಾನೆ.

ಆಹುಃ ತ್ವಾಮ್‌ ಋಷಯಃ ಸರ್ವೇ ದೇವರ್ಷಿಃ ನಾರದಸ್ತಥಾ

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ

ಸರ್ವಮ್‌ ಏತದ್‌ ಋತಂ ಮನ್ಯೇ ಯನ್‌ ಮಾಂ ವದಸಿ ಕೇಶವ

“ನೀನೇ ಶ್ರೇಷ್ಠನೆಂದು ಸ್ವತಃ ನೀನೇ ಹೇಳುತ್ತಿರುವುದಷ್ಟೇ ಅಲ್ಲ, ಆದರೆ ವ್ಯಾಸ, ಅಸಿತ, ನಾರದ ಮತ್ತು ದೇವಲ ಅಂತಹ ಮಹರ್ಷಿಗಳು ಕೂಡ ನೀನು ದೇವೋತ್ತಮ ಪರಮ ಪುರುಷ ಎಂದು ಘೋಷಿಸಿದ್ದಾರೆ. ಆದ್ದರಿಂದ ನನಗೆ ಯಾವುದೂ ಅನುಮಾನವಿಲ್ಲ.” ಒಟ್ಟಿನಲ್ಲಿನ ನಿರ್ಣಯವೆಂದರೆ ಕೃಷ್ಣನೇ ದೇವೋತ್ತಮ ಪರಮ ಪುರುಷ.

ದೇವೋತ್ತಮ ಪರಮ ಪುರುಷನು ಯಾರು ಎಂದು ಅರ್ಥಮಾಡಿಕೊಳ್ಳಲು ಕೃಷ್ಣಪ್ರಜ್ಞಾ ಆಂದೋಲನವು ನಿಮಗೆ ಒಂದು ಅವಕಾಶವನ್ನು ನೀಡುತ್ತದೆ. ಜಗತ್ತಿನಾದ್ಯಂತ ಅನೇಕ ಸಮಾಜಗಳಿವೆ ಮತ್ತು ಅನೇಕ ಧಾರ್ಮಿಕ ಪದ್ಧತಿಗಳಿವೆ. ಆದರೆ ಅವು ದೇವೋತ್ತಮ ಪರಮ ಪುರುಷನನ್ನು ಕುರಿತು ಒಂದು ನಿಷ್ಕೃಷ್ಟವಾದ ಕಲ್ಪನೆಯನ್ನು ನೀಡಲಾರವು. ಕೆಲವು ಒಂದು ಕಲ್ಪನೆಯನ್ನು ಹೊಂದಿವೆ ಮತ್ತು ಇತರೆಯವು ಇನ್ನೊಂದು ಕಲ್ಪನೆಯನ್ನು ಹೊಂದಿವೆ. ಆದರೆ ನಮಗೆ ಸಂಬಂಧಪಟ್ಟಂತೆ ಹೇಳುವುದಾದರೆ ಕೃಷ್ಣನೇ ದೇವೋತ್ತಮ ಪರಮ ಪುರುಷ ಎಂದು ನಮಗೆ ಗೊತ್ತು.

ಅದೇ ಸರಿಯಾದ ನಿರ್ಣಯ. ತಾನೇ ಪರಮ ಸತ್ಯ ಎಂಬ ಕೃಷ್ಣನ ಹೇಳಿಕೆಗೆ ಸಮರ್ಥನೆಯು ವೇದಗಳು, ಮತ್ತು ಬ್ರಹ್ಮನೇ ಮೊದಲಾದ ದೇವತೆಗಳು, ಮತ್ತು ವ್ಯಾಸದೇವ, ಅಸಿತ, ದೇವಲ, ನಾರದ ಮತ್ತು ಅರ್ಜುನರಂತಹ ಪ್ರಮಾಣಪುರುಷರಿಂದಷ್ಟೇ ಅಲ್ಲದೆ ಪ್ರಮುಖ ಮಾಯಾವಾದಿಗಳಾದ ಶಂಕರಾಚಾರ್ಯರಿಂದಲೂ ದೊರೆತಿವೆ. ಅವರು, ಸ ಭಗವಾನ್‌ ಸ್ವಯಂ ಕೃಷ್ಣಃ  ಎಂದು ಒಪ್ಪಿಕೊಳ್ಳುತ್ತಾರೆ. “ಕೃಷ್ಣನೇ ದೇವೋತ್ತಮ ಪರಮ ಪುರುಷ.” ಮತ್ತು  ನಾರಾಯಣಃ ಪರೋಽವ್ಯಕ್ತಾತ್‌ “ನಾರಾಯಣನು (ಕೃಷ್ಣ) ಈ ಸೃಷ್ಟಿತ ಐಹಿಕ ಜಗತ್ತಿನ ವ್ಯಕ್ತಿಯಲ್ಲ.”

ಎಲ್ಲ ಪ್ರಮಾಣಗಳೂ ಕೃಷ್ಣನೇ ದೇವೋತ್ತಮ ಪರಮ ಪುರುಷ ಎಂದು ಘೋಷಿಸುತ್ತಿರುವುದರಿಂದ ಅದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತು ಕೃಷ್ಣನು ಇಲ್ಲಿ ಸ್ವತಃ ಖಚಿತಪಡಿಸುತ್ತಿದ್ದಾನೆ, ಮತ್ತಃ ಪರತರಂ ನಾನ್ಯತ್‌ “ನನಗಿಂತ ಶ್ರೇಷ್ಠವಾದ ಬೇರೆ ಯಾವ ಜೀವಿಯೂ ಇಲ್ಲ.” ದೇವರು ಎಂದರೆ ಏನು ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಕಷ್ಟವೆಲ್ಲಿದೆ? ಇದರಲ್ಲಿ ಏನೂ ಕಷ್ಟವಿಲ್ಲ. ಆದರೆ ನಾವು ಹಠಮಾರಿಯಾಗಿದ್ದರೆ, ದೇವರು ಎಂದರೆ ಏನು ಎಂದು ಅರ್ಥಮಾಡಿಕೊಳ್ಳಲು ನಮಗೆ ಇಷ್ಟವಿಲ್ಲದಿದ್ದರೆ ಅದು ಬೇರೆಯ ಸಂಗತಿ.

ಕೃಷ್ಣನು ಇಲ್ಲಿ ಮತ್ತೂ ಹೇಳವುದೇನೆಂದರೆ, ಮಯಿ ಸರ್ವಮ್‌ ಇದಮ್‌ “ಪ್ರತಿಯೊಂದೂ ನನ್ನಲ್ಲಿದೆ.” ಕೃಷ್ಣನಿಗೆ ಎರಡು ಶಕ್ತಿಗಳಿವೆ ಎಂದು ಈ ಅಧ್ಯಾಯದಲ್ಲಿ ಈಗಾಗಲೇ ವಿವರಿಸಲಾಗಿದೆ – ಅವು ಐಹಿಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ. ಅವು ಬೆಂಕಿಯ ಶಕ್ತಿಗಳಾದ ಶಾಖ ಮತ್ತು ಬೆಳಕಿನ ಹಾಗೆ. ಆದ್ದರಿಂದ ಕೃಷ್ಣನು ತನ್ನ ಆಧ್ಯಾತ್ಮಿಕ ಶಕ್ತಿಯೊಡನೆ ಆಧ್ಯಾತ್ಮಿಕ ಮತ್ತು ಆನಂದಮಯ ಜೀವನವನ್ನು ಅನುಭೋಗಿಸುತ್ತಿದ್ದಾನೆ. ಅವನು ಸಂಪೂರ್ಣ ಆಧ್ಯಾತ್ಮಿಕನಾಗಿದ್ದು ಶಾಶ್ವತವಾದ ಜ್ಞಾನ ಮತ್ತು ಆನಂದದ ಕಾಯವನ್ನು ಪಡೆದಿದ್ದಾನೆ. (ಸತ್‌ ಚಿತ್‌ ಆನಂದ ವಿಗ್ರಹ). ಅವನು ಆನಂದಮಯೋ ಅಭ್ಯಾಸಾತ್‌, ಸಂಪೂರ್ಣ ಆನಂದದಿಂದ ಕೂಡಿದ್ದಾನೆ. ಅವನು ಗೋಲೋಕ ವೃಂದಾವನವೆಂಬ ಆಧ್ಯಾತ್ಮಿಕ ಲೋಕದಲ್ಲಿ ಇರುತ್ತ ತನ್ನ ಶಾಶ್ವತ ಸಂಗಾತಿಗಳಾದ ಗೋಪಿಯರು, ಗೋಪಾಲ ಬಾಲಕರು, ಅವನ ತಾಯಿ ಯಶೋದ, ತಂದೆ ನಂದ ಮಹಾರಾಜ ಇತ್ಯಾದಿ ಅನೇಕರೊಡನೆ ಆನಂದವನ್ನು ಅನುಭವಿಸುತ್ತಿದ್ದಾನೆ. ಇದನ್ನು ಬ್ರಹ್ಮಸಂಹಿತೆಯಲ್ಲಿ ಖಚಿತಪಡಿಸಲಾಗಿದೆ, ಗೋಲೋಕ ಏವ ನಿವಸತಿ ಅಖಿಲಾತ್ಮಭೂತಃ “ಕೃಷ್ಣನು ಗೋಲೋಕದಲ್ಲಿ ಇದ್ದಾನೆ. ಆದರೆ ಅವನು ಎಲ್ಲ ಕಡೆಗಳಲ್ಲೂ ಉಪಸ್ಥಿತನಾಗಿದ್ದಾನೆ. ಭಗವದ್‌ಗೀತೆಯಲ್ಲಿ ಕೃಷ್ಣನು ಹೇಳುವಂತೆ, ಏಕಾಂಶೇನ ಸ್ಥಿತೋ ಜಗತ್‌ “ನನ್ನ ಒಂದು ಕಣದಿಂದ ಈ ವಿಶ್ವಕ್ಕೇ ನಾನು ಆಧಾರವಾಗಿದ್ದೇನೆ.” ಮತ್ತು ಬ್ರಹ್ಮಸಂಹಿತದಲ್ಲಿ, ಅಂಡಾಂತರಸ್ಥ ಪರಮಾಣು ಚಯಾಂತರಸ್ಥಮ್‌ “ಅವನು ವಿಶ್ವದ ಪ್ರತಿಯೊಂದು ಪರಮಾಣುವಿನಲ್ಲೂ ಇದ್ದಾನೆ.” ಅವನು ನಿಮ್ಮ ಹೃದಯದಲ್ಲೂ ಇದ್ದಾನೆ: ಈಶ್ವರಃ ಸರ್ವ ಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ. ಒಂದು ಮಾತಿನಲ್ಲಿ ಹೇಳುವುದಾದರೆ ಅವನಿಲ್ಲದೆ ಯಾವುದೂ ಅಸ್ತಿತ್ವದಲ್ಲಿರಲಾರದು.

ಆದ್ದರಿಂದ ಇಲ್ಲಿ ಕೃಷ್ಣನು ಹೇಳುತ್ತಾನೆ, ಮಯಿ ಸರ್ವಮ್‌ ಇದಮ್‌ “ಪ್ರತಿಯೊಂದೂ ನನ್ನಲ್ಲಿ ಅಸ್ತಿತ್ವದಲ್ಲಿದೆ.” ಐಹಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳು ಈ ಐಹಿಕ ಜಗತ್ತಿನಲ್ಲಿವೆ. ಈ ಎರಡೂ ಶಕ್ತಿಗಳು ಕೃಷ್ಣನಿಂದ ಹೊರಹೊಮ್ಮುತ್ತಿರುವುದರಿಂದ ಪ್ರತಿಯೊಂದೂ ಅವನಲ್ಲಿ ವಿರಮಿಸಿದೆ. ಬೇರೊಂದು ಕಡೆ ಕೃಷ್ಣನು ಹೀಗೆ ಹೇಳುತ್ತಾನೆ, ಮಯಾ ತತಮ್‌ ಇದಂ ಸರ್ವಮ್‌ “ನಾನು ಎಲ್ಲೆಲ್ಲೂ ವಿಸ್ತರಿಸಿದ್ದೇನೆ.” ಒಂದು ದೀಪವು ತನ್ನ ಬೆಳಕಿನಿಂದ ಹೇಗೆ ವಿಸ್ತರಿಸುತ್ತದೆಯೋ ಹಾಗೆ ಅವನು ತನ್ನ ಶಕ್ತಿಯಿಂದ ವಿಸ್ತಾರಗೊಂಡಿದ್ದಾನೆ. ದೀಪದ ಬೆಳಕು ನಿಲುಗಡೆಗೆ ಬಂದಾಗ ವಿಸ್ತರಣೆಯೂ ನಿಲ್ಲುತ್ತದೆ.

ಆದ್ದರಿಂದ, ನಾವು ಏನೆಲ್ಲವನ್ನು ನೋಡುತ್ತೇವೆಯೋ ಅವು ಎಲ್ಲ ಕೃಷ್ಣನ ಶಕ್ತಿಯ ಮೇಲೆ ವಿರಮಿಸಿವೆ. ಕೃಷ್ಣನ ಶಕ್ತಿಯ ಕಾರಣದಿಂದ ಅದು ಕೆಲಸ ಮಾಡುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟವೇನಿಲ್ಲ. ನಮ್ಮ ಸ್ಥಾನವನ್ನು ಕುರಿತೇ ಆಲೋಚಿಸಿ. ನಾನು ಈ ದೇಹವೆ? ಅಲ್ಲ, ನಾನು ಈ ದೇಹವಲ್ಲ. ಈ ದೇಹವು ನನ್ನ “ಮನೆ”. ನಾನು ಈ ಮನೆಯಲ್ಲಿ ವಾಸವಾಗಿದ್ದೇನೆ. ನಾನು ಈ ಮನಸ್ಸೆ? ಅಲ್ಲ, ನಾನು ಈ ಮನಸ್ಸಲ್ಲ. ಈ ವಿಚಾರಣೆಯು “ನಾನು ಈ ದೇಹವಲ್ಲ, ನಾನು ಈ ಮನಸ್ಸಲ್ಲ,” ಇತ್ಯಾದಿಯನ್ನು ಅರ್ಥಮಾಡಿಕೊಳ್ಳುವುದನ್ನು ಗುರಿಯಾಗಿ ಉಳ್ಳ ಒಂದು ಧ್ಯಾನ. ನೇತಿ, ನೇತಿ – “ಇದಲ್ಲ, ಇದಲ್ಲ.” ಈ ಧ್ಯಾನದ ತೀರ್ಮಾನವೇನೆಂದರೆ ಅಹಂ ಬ್ರಹ್ಮಾಸ್ಮಿ “ನಾನೇ ಚೇತನ.”

ಬ್ರಹ್ಮನ್‌ನ ಒಂದು ಕಣವು ಈ ದೇಹದೊಳಗೆ ಇದೆ. ಅದು ಅತ್ಯಂತ ಚಿಕ್ಕದಾಗಿದೆ. ಇದೇ ಜೀವಾತ್ಮ. ಆದರೆ ಈ ದೇಹದಲ್ಲಿ ಜೀವಾತ್ಮನಷ್ಟೇ ಅಲ್ಲದೆ ಪರಮಾತ್ಮನೂ ಇದ್ದಾನೆ ಎಂದು ಹೇಳಲಾಗಿದೆ. ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಎಲ್ಲಿ? ಕೃಷ್ಣ ಹೇಳುತ್ತಾನೆ (ಭಗವದ್‌ಗೀತೆ: 18.61) ಈಶ್ವರಃ ಸರ್ವ ಭೂತಾನಾಂ ಹೃದ್‌ ದೇಶೇಽರ್ಜುನ ತಿಷ್ಠತಿ “ಪರಮಾತ್ಮನು ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತಾನೆ.” ಆದ್ದರಿಂದ ಪರಮಾತ್ಮನು ನನ್ನ ಹೃದಯದಲ್ಲಿದ್ದರೆ ಮತ್ತು ನಾನು ಪರಮಾತ್ಮನೊಡನೆ ಇದ್ದರೆ, ಆಗ ನಾನೂ ಹೃದಯದೊಳಗೆ ಇದ್ದ ಹಾಗಾಯಿತು.

ಆಧುನಿಕ ವೈದ್ಯ ವಿಜ್ಞಾನವು ಕೂಡ ಹೃದಯದ ಮಹತ್ವವನ್ನು ಅರಿತಿದೆ. ಅವರು ಹೃದಯದ ವಿಷಯದಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ಏಕೆಂದರೆ ಹೃದಯವು ನಿಂತರೆ ಪ್ರತಿಯೊಂದೂ ಸ್ತಬ್ಧವಾಗುತ್ತದೆ ಎಂದು ಅವರಿಗೆ ಗೊತ್ತು. ಆದರೆ ಜೀವಾತ್ಮನು ಹೃದಯದಿಂದ ಹೊರಗೆ ಹೋಗುವುದರಿಂದ ಮೃತ್ಯುವು ಸಂಭವಿಸುತ್ತದೆ ಎನ್ನುವುದು ವೈದ್ಯ ವಿಜ್ಞಾನಕ್ಕೆ ತಿಳಿದಿಲ್ಲ.

ಸಣ್ಣ ಪ್ರಮಾಣದಲ್ಲಿ ದೇಹದ ಸಮಸ್ತ ರಚನೆಯು ಜೀವಾತ್ಮನ ಮೇಲೆ ಅವಲಂಬಿಸಿದೆ. ಜೀವಾತ್ಮನು ಎಷ್ಟು ಚಿಕ್ಕದಾಗಿದ್ದಾನೆಂದರೆ ಒಂದು ಕೂದಲಿನ ತುದಿಯನ್ನು ಹತ್ತು ಸಾವಿರ ಭಾಗಗಳನ್ನಾಗಿ ಮಾಡಿದರೆ ಅದರಲ್ಲಿ ಒಂದು ಭಾಗದಷ್ಟು. ಆ ಚಿಕ್ಕ ಕಣವು ಈ ದೇಹದೊಳಗೆ ಇರುವುದರಿಂದ, ದೇಹವು ಇಷ್ಟು ಸುಂದರವಾಗಿದೆ, ಇದು ಇಷ್ಟು ಸೊಗಸಾಗಿ ಕೆಲಸ ಮಾಡುತ್ತದೆ, ಅದರ ಮಿದುಳು ಕೆಲಸ ಮಾಡುತ್ತದೆ. ಪ್ರತಿಯೊಂದೂ ತನ್ನ ಪಾಡಿಗೆ ತಾನು ನಡೆಯುತ್ತದೆ.

ಈ ಜೀವಶಕ್ತಿಯು ಏನು ಎಂದು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಕೆಲವು ಸಲ ಅವರು ರಕ್ತವನ್ನು ಪರೀಕ್ಷಿಸುತ್ತಾರೆ, ಕೆಲವು ಸಲ ಅವರು ಜೀವಕೋಶಗಳನ್ನು ಪರೀಕ್ಷಿಸುತ್ತಾರೆ, ಕೆಲವು ಸಲ ಇದು, ಕೆಲವು ಸಲ ಅದು. ಆದರೆ ಅದು ಎಲ್ಲ ವಿಫಲವಾಗಿದೆ. ಏಕೆಂದರೆ ಅವರು ಜೀವಾತ್ಮನನ್ನು ಪರೀಕ್ಷಿಸಲಾರರು. ಜೀವಾತ್ಮವು ಎಷ್ಟು ಚಿಕ್ಕದಾಗಿದೆಯೆಂದರೆ ಅದನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಅದು ಎಲ್ಲಿದೆ ಎಂದು ನೀವು ನೋಡುವುದೂ ಸಾಧ್ಯವಿಲ್ಲ. ಆದರೆ ಈ ದೇಹವು ಕೆಲಸ ಮಾಡುವಂತೆ ಪ್ರಚೋದಿಸುವ ಏನೋ ಒಂದು ಈ ದೇಹದಲ್ಲಿದೆ ಎಂದು ಗ್ರಹಿಸಲಾಗಿದೆ. ಸಾಮಾನ್ಯವಾಗಿ ಇದನ್ನೇ ಜೀವಶಕ್ತಿ ಎಂದು ಕರೆಯಲಾಗುತ್ತದೆ.

ಈಗ, ಈ ಜೀವಶಕ್ತಿಯು ದೇಹದಾದ್ಯಂತ ಪಸರಿಸಿದೆ. ಭಗವದ್‌ ಗೀತೆಯಲ್ಲಿ (2.17) ಕೃಷ್ಣನು ಹೇಳಿದಂತೆ, ಅವಿನಾಶಿ ತು ತದ್‌ ವಿದ್ಧಿ ಯೇನ ಸರ್ವಮ್‌ ಇದಂ ತತಮ್‌ “ಈ ದೇಹದಾದ್ಯಂತ ಪಸರಿಸಿರುವ ಆ ವಸ್ತುಗಳನ್ನು ನೀನು ನಾಶಗೊಳಿಸಲಾರೆ.” ಯಾವುದು ಆ ವಸ್ತು? ಪ್ರಜ್ಞೆ.  ನನ್ನ ಪ್ರಜ್ಞೆಯು ನನ್ನ ಶರೀರದಾದ್ಯಂತ ಪಸರಿಸಿದೆ. ಆದ್ದರಿಂದ ನಾನು ಈ ದೇಹದಲ್ಲಿರುವವರೆಗೂ, ನೋವು ನಲಿವುಗಳನ್ನು ಪರಿಭಾವಿಸುತ್ತೇನೆ.

ನಾನು ಅತ್ಯಂತ ಚಿಕ್ಕದಾದ ಒಂದು ಕಣವಾಗಿರುತ್ತ ಕೃಷ್ಣನು ಪರಮಪೂರ್ಣನಾಗಿದ್ದಾನೆ. ಆದ್ದರಿಂದ ನಾನು ಈ ದೇಹವನ್ನು ನಿಯಂತ್ರಿಸುತ್ತಿರುವ ಹಾಗೆ, ಕೃಷ್ಣನು ಸಮಸ್ತ ವಿಶ್ವವನ್ನೂ ನಿಯಂತ್ರಿಸುತ್ತಿದ್ದಾನೆ. ಇದನ್ನು ಅರ್ಥಮಾಡಿಕೊಳ್ಳಲು ಏನು ಕಷ್ಟ? ಯಾವ ವಿಧವಾದ ಕಷ್ಟವೂ ಇಲ್ಲ.

ಆದರೆ ನಾವು ಅರ್ಥಮಾಡಿಕೊಳ್ಳುವುದಿಲ್ಲ. ಅದೇ ನಿಜವಾದ ಕಷ್ಟ. ಇಲ್ಲಿ ಕೃಷ್ಣನು ಸ್ಪಷ್ಟವಾಗಿ ಹೇಳುತ್ತಿದ್ದಾನೆ, ಮಯಿ ಸರ್ವಮ್‌ ಇದಂ ಪ್ರೋತಂ ಸೂತ್ರೇ ಮಣಿಗಣಾ ಇವ “ಮುತ್ತುಗಳನ್ನು ಒಂದು ದಾರದಲ್ಲಿ ಪೋಣಿಸಿರುವಂತೆ ಪ್ರತಿಯೊಂದೂ ನನ್ನನ್ನೇ ಆಶ್ರಯಿಸಿದೆ.” ಇನ್ನೊಂದು ಸ್ಥಳದಲ್ಲಿ (ಭಗವದ್‌ಗೀತೆ: 9.4) ಅವನು ಹೇಳುತ್ತಾನೆ, ಮಯಿ ತತಮ್‌ ಇದಂ ಸರ್ವಮ್‌ “ನಾನು ಈ ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ.” ಹೇಗೆ? ಅದನ್ನು ಆಗಲೇ ವಿವರಿಸಲಾಗಿದೆ. ಅವನ ಎರಡು ಶಕ್ತಿಗಳಾದ ಆಧ್ಯಾತ್ಮಿಕ ಶಕ್ತಿ ಮತ್ತು ಐಹಿಕ ಶಕ್ತಿಯ ಮೂಲಕ. ಇವುಗಳು ಸೃಷ್ಟಿಯಾದ್ಯಂತ ವಿಸ್ತರಿಸಿವೆ. ಆದ್ದರಿಂದ ನಾವು ನೋಡುವುದೆಲ್ಲ ಕೃಷ್ಣನ ಶಕ್ತಿ ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಏನು ಕಷ್ಟವಿದೆ?

ಭಕ್ತರಾದವರು, ವೈಷ್ಣವರಾದವರು ಪ್ರತಿಯೊಂದೂ ಕೃಷ್ಣನ ಶಕ್ತಿ ಎಂದು ಅರ್ಥಮಾಡಿಕೊಳ್ಳಬಲ್ಲರು. ನಾವೆಲ್ಲ ಜೀವಿಗಳು ಕೃಷ್ಣನ ವಿಭಿನ್ನಾಂಶ. ಹೀಗೆ ಜೀವಿಗಳು ಮತ್ತು ಜಡದ್ರವ್ಯಗಳ ಸಂಯೋಗದಿಂದ ಇಡೀ ಸೃಷ್ಟಿಯಾಗಿದೆ. ಕೃಷ್ಣನು ಇಲ್ಲಿ ಹೇಳುವಂತೆ, ಸೂತ್ರೇ ಮಣಿಗಣಾ ಇವ “ಮುತ್ತುಗಳನ್ನು ಒಂದು ದಾರದಲ್ಲಿ ಪೋಣಿಸಿದಂತೆ ಪ್ರತಿಯೊಂದೂ ನನ್ನನ್ನೇ ಆಶ್ರಯಿಸಿದೆ.” ಮುತ್ತುಗಳು ಥಳಥಳಿಸುತ್ತಿವೆ. ಆದರೆ ಅವುಗಳೆಲ್ಲ ದಾರದಲ್ಲಿ ಆಶ್ರಯವನ್ನು ಪಡೆದಿವೆ. ಅದೇ ರೀತಿಯಲ್ಲಿ ಪ್ರತಿಯೊಂದೂ ಕೃಷ್ಣನಲ್ಲಿ ಆಶ್ರಯಿಸಿದೆ. ಕೃಷ್ಣನೇ ಆ ದಾರ.

ಆದ್ದರಿಂದ ವಿಜ್ಞಾನಿಗಳು ಪ್ರಕೃತಿಯ ಅನೇಕ ನಿಯಮಗಳನ್ನು ಕಂಡುಹಿಡಿಯಬಹುದು. ಆದರೆ ಪ್ರತಿಯೊಂದರ ಮೂಲ ಆಧಾರವು ಕೃಷ್ಣ ಎನ್ನುವುದು ಅವರಿಗೆ ತಿಳಿದಿಲ್ಲ. ಅದು ವೇದದ ತೀರ್ಮಾನ.

ವಂದನೆಗಳು ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi