ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ಆಸ್ಟ್ರೇಲಿಯಾದ ಪರ್ತ್ನಲ್ಲಿ, 1974ರ ಮಾರ್ಚ್ನಲ್ಲಿ ನಡೆದ ಸಂವಾದ.
ಭಕ್ತ: (ಭೌತ ವಿಜ್ಞಾನಿಯ ಪಾತ್ರ ನಿರ್ವಹಿಸುತ್ತ) ಕೃಷ್ಣಪ್ರಜ್ಞೆಯನ್ನು ನೀವು ವಿಜ್ಞಾನ ಎಂದು ಏಕೆ ಕರೆಯುವಿರಿ? ಅದೊಂದು ನಂಬಿಕೆಯಂತೆ ಕಾಣುತ್ತಿದೆ.
ಶ್ರೀಲ ಪ್ರಭುಪಾದ: ನೀವು ಕರೆಯುವ ನಿಮ್ಮ ವಿಜ್ಞಾನ ಕೂಡ ನಂಬಿಕೆಯೇ. ನೀವು ನಿಮ್ಮ ಪಥವನ್ನು ವಿಜ್ಞಾನವೆಂದು ಕರೆದರೆ ನಾವು ನಮ್ಮ ಪಥವನ್ನೂ ವಿಜ್ಞಾನ ಎನ್ನುತ್ತೇವೆ.
ಭಕ್ತ: ಆದರೆ ನಮ್ಮ ವಿಜ್ಞಾನದ ಮೂಲಕ ನಾವು ನಮ್ಮ ನಂಬಿಕೆಗಳನ್ನು ಸಾಬೀತುಗೊಳಿಸಬಹುದು.
ಶ್ರೀಲ ಪ್ರಭುಪಾದ: ಹಾಗಾದರೆ, ರಾಸಾಯನಿಕಗಳು ಜೀವವನ್ನು ಸೃಷ್ಟಿಸುತ್ತವೆ ಎಂದು ಸಾಬೀತುಪಡಿಸಿ. ಜೀವವು ರಾಸಾಯನಿಕಗಳಿಂದ ಉಂಟಾಗಿದೆ ಎಂಬುದು ನಿಮ್ಮ ನಂಬಿಕೆ. ಹಾಗಾದರೆ ಅದನ್ನು ಸಾಬೀತುಪಡಿಸಿ, ಆಗ ಅದು ವಿಜ್ಞಾನ. ಆದರೆ ನಿಮಗೆ ಸಾಬೀತುಪಡಿಸುವುದು ಸಾಧ್ಯವಾಗಿಲ್ಲದಿರುವುದರಿಂದ ಅದು ನಂಬಿಕೆಯಾಗಿಯೆ ಉಳಿದಿದೆ.

ಭಕ್ತ: ಇರಲಿ, ನೀವು ಆತ್ಮದಲ್ಲಿ ನಂಬಿಕೆ ಉಳ್ಳವರು. ಅದರ ಅಸ್ತಿತ್ವವನ್ನು ನೀವು ಸಾಬೀತುಗೊಳಿಸಲಾರಿರಿ. ಆತ್ಮವನ್ನು ನಾವು ನೋಡಲಾಗದ್ದರಿಂದ, ಜೀವವು ಭೌತ ವಸ್ತುವಿನಿಂದ ಬರುತ್ತದೆ ಎಂದು ನಾವು ತೀರ್ಮಾನಿಸಬೇಕಾಗುತ್ತದೆ.
ಶ್ರೀಲ ಪ್ರಭುಪಾದ: ನಿಮ್ಮ ಸ್ಥೂಲ ಇಂದ್ರಿಯಗಳಿಂದ ನೀವು ಆತ್ಮವನ್ನು ನೋಡಲಾರಿರಿ. ಆದರೆ ಅದನ್ನು ಗ್ರಹಿಸಬಹುದು. ಪ್ರಜ್ಞೆಯನ್ನು ಗ್ರಹಿಸಬಹುದು. ಮತ್ತು ಪ್ರಜ್ಞೆಯು ಆತ್ಮದ ಲಕ್ಷಣ. ಆದರೆ, ನೀವು ಹೇಳುವಂತೆ ಜೀವವು ವಸ್ತುಗಳಿಂದ ಬರುವುದಾದರೆ, ಮೃತ ದೇಹದಲ್ಲಿ ಮರೆಯಾಗಿರುವ ರಾಸಾಯನಿಕಗಳನ್ನು ಅದಕ್ಕೆ ಒದಗಿಸಿ ಅದಕ್ಕೆ ಮತ್ತೆ ಜೀವ ಬರುವಂತೆ ನೀವು ಪ್ರದರ್ಶಿಸಬೇಕು. ಇದು ನನ್ನ ಸವಾಲು.
ಭಕ್ತ: ಸೂಕ್ತವಾದ ರಾಸಾಯನಿಕವನ್ನು ಕಂಡುಹಿಡಿಯಲು ನಮಗೆ ಸ್ವಲ್ಪ ಸಮಯ ಬೇಕು.
ಶ್ರೀಲ ಪ್ರಭುಪಾದ: ಅದು ಮೂರ್ಖತನ. ಜೀವವು ರಾಸಾಯನಿಕಗಳಿಂದ ಬರುತ್ತದೆ ಎಂಬುದು ನಿಮ್ಮ ನಂಬಿಕೆ, ನಿಮಗೆ ಅದನ್ನು ಸಾಬೀತುಪಡಿಸಲಾಗದು. ನೀವು ಮೂರ್ಖರೆಂಬುದನ್ನು ಸಾಬೀತುಪಡಿಸಿದಿರಿ.
ಭಕ್ತ: ಆದರೆ, ನೀವು ಭಗವದ್ಗೀತೆಯನ್ನು ನಂಬಿಕೆ ಮೇಲೆ ಸ್ವೀಕರಿಸಿದ್ದೀರಿ. ಅದು ಹೇಗೆ ವೈಜ್ಞಾನಿಕ? ಅದು ನಿಮ್ಮ ನಂಬಿಕೆಯಷ್ಟೆ. ಸರಿ ತಾನೇ?
ಶ್ರೀಲ ಪ್ರಭುಪಾದ: ಭಗವದ್ಗೀತೆಯು ವಿಜ್ಞಾನ ಏಕಲ್ಲ? ಗೀತೆಯು ಹೇಳುತ್ತದೆ, ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದ್ ಅನ್ನ-ಸಂಭವಃ, `ಎಲ್ಲ ಜೀವಿಗಳು ಆಹಾರ ಧಾನ್ಯಗಳಿಂದ ಬದುಕುತ್ತವೆ. ಧಾನ್ಯಗಳನ್ನು ಮಳೆ ಉತ್ಪಾದಿಸುತ್ತದೆ.’ ಇದು ನಂಬಿಕೆಯೇ?
ಭಕ್ತ: ಅದು ನಿಜ ಇರಬಹುದು.

ಶ್ರೀಲ ಪ್ರಭುಪಾದ: ಅದೇ ರೀತಿ ಭಗವದ್ಗೀತೆಯಲ್ಲಿ ಇರುವುದೆಲ್ಲ ಸತ್ಯ. ಗೀತೆಯಲ್ಲಿ ಕೃಷ್ಣ ಹೇಳಿರುವುದರ ಬಗ್ಗೆ ನೀವು ಯೋಚಿಸಿದರೆ, ಅದೆಲ್ಲ ನಿಜ ಎಂಬುವುದು ನಿಮಗೆ ತಿಳಿಯುತ್ತದೆ. ಉದಾಹರಣೆಗೆ, ಆತ್ಮ ಮತ್ತು ದೇವರನ್ನು ಬಲ್ಲ ಬುದ್ಧಿವಂತ ವರ್ಗ, ಬ್ರಾಹ್ಮಣರು, ಸಮಾಜದಲ್ಲಿ ಇರಬೇಕು ಎಂದು ಕೃಷ್ಣ ಹೇಳಿದ್ದಾನೆ. ಅವರು ನಾಗರಿಕ ಜನರು. ಆದರೆ ಅಂತಹ ವರ್ಗದ ಪುರುಷರಿರುವ ಸಮಾಜ ಈಗೆಲ್ಲಿದೆ?
ಭಕ್ತ: ಜಗತ್ತಿನಾದ್ಯಂತ ಅನೇಕ ಧರ್ಮ ಗುರುಗಳು, ಪಾದ್ರಿಗಳು ಮುಂತಾದ ಧರ್ಮಶಾಸ್ತ್ರ ಪಂಡಿತರುಗಳಿದ್ದಾರೆ.
ಶ್ರೀಲ ಪ್ರಭುಪಾದ: ಆದರೆ ವಾಸ್ತವವಾಗಿ, ಅವರಿಗೆ ದೇವರ ಬಗೆಗೆ ಏನು ಗೊತ್ತು? ವಿಜ್ಞಾನಿಗಳು ಐಹಿಕ ಪ್ರಕೃತಿ ಬಗೆಗೆ ಊಹಿಸುವಂತೆ ಇವರು ಭಗವಂತನನ್ನು ಕುರಿತು ಊಹಾಪೋಹ ಮಾಡುತ್ತಾರೆ.
ಈ ಒಂದು ಅಂಶವನ್ನು ಸ್ಪಷ್ಟವಾಗಿ ನೋಡಲು ಪ್ರಯತ್ನಿಸಿ : ನೀವು ಸ್ವತಂತ್ರರಲ್ಲ. ಅಂದರೆ ನಿಮ್ಮ ಮೇಲೆ ಯಾವುದೋ ಅಧಿಕಾರ ಇರಬೇಕು. ಮತ್ತು ಅಂತಿಮವಾಗಿ ಪರಮ ಶಕ್ತಿ ಇದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು. ಪರಮ ಸತ್ಯದ ಬಗೆಗೆ ಜ್ಞಾನವಿದೆ ಎಂದು ಹೇಳಿಕೊಂಡು ಪರಮ ಅಧಿಕಾರ ಅಥವಾ ಶಕ್ತಿಯನ್ನು ಕುರಿತಂತೆ ನಿಮಗೆ ತಿಳಿದಿಲ್ಲದಿದ್ದರೆ ನಿಮ್ಮ ಜ್ಞಾನದ ಮೌಲ್ಯವಾದರೂ ಏನು?
ನೋಡಿ. ಒಬ್ಬನಿಗೆ ತನ್ನ ದೇಶದ ಸರಕಾರದ ಬಗೆಗೆ ಗೊತ್ತಿಲ್ಲದಿದ್ದರೆ ಅವನೆಂತಹ ಮನುಷ್ಯ? ಅವನು ಮೂರನೇ ದರ್ಜೆಯವ, ಮೂರ್ಖ. ಒಬ್ಬ ನಾಗರಿಕನಿಗೆ ತನ್ನ ದೇಶದ ಸರಕಾರದ ಬಗೆಗೆ ಗೊತ್ತಿರುತ್ತದೆ. ಅದೇ ರೀತಿ, ಇಡೀ ವಿಶ್ವದ ಸರಕಾರವೊಂದಿದೆ. ನಿಮಗೆ ಅದು ಗೊತ್ತಿಲ್ಲದಿದ್ದರೆ ನೀವು ಮೂರನೆ ದರ್ಜೆಯ ಅನಾಗರಿಕ ವ್ಯಕ್ತಿ. ಆದುದರಿಂದಲೇ, ದೇವರನ್ನು ಬಲ್ಲ ಮತ್ತು ಭಗವಂತನ ಆಣತಿಯಂತೆ ಇಡೀ ವಿಶ್ವದ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತವರ್ಗದ ಅಗತ್ಯವಿದೆ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಬೋಧಿಸಿದ್ದಾನೆ. ಕೃಷ್ಣನ ಭಕ್ತರಿಗೆ ಇದೆಲ್ಲ ಗೊತ್ತು. ಆದುದರಿಂದ ಅವರೇ ನಿಜವಾದ ಬ್ರಾಹ್ಮಣರು ಮತ್ತು ವಿಜ್ಞಾನಿಗಳು.

ಭಕ್ತ: ಆದರೆ, ಭಗವದ್ಗೀತೆಯು 5 ಸಾವಿರ ವರ್ಷಗಳಷ್ಟು ಪುರಾತನ. ಹೀಗಾಗಿ ಅದು ನಮ್ಮ ಆಧುನಿಕ ಜಗತ್ತಿಗೆ ಯುಕ್ತವಾಗಿಲ್ಲ.
ಶ್ರೀಲ ಪ್ರಭುಪಾದ: ಭಗವದ್ಗೀತೆಯು 5 ಸಾವಿರ ವರ್ಷಗಳಷ್ಟು ಹಳೆಯದಲ್ಲ. ಅದು ಸದಾ ಇದ್ದೇ ಇದೆ. ನೀವು ಭಗವದ್ಗೀತೆಯನ್ನು ಓದಿರುವಿರಾ?
ಭಕ್ತ: ಹೌದು, ಅನೇಕ ಬಾರಿ.
ಶ್ರೀಲ ಪ್ರಭುಪಾದ: ಹಾಗಾದರೆ ಅದು 5 ಸಾವಿರ ವರ್ಷ ಹಳೆಯದೆಂದು ಗೀತೆಯಲ್ಲಿ ಎಲ್ಲಿ ಹೇಳಿದೆ? ಕೃಷ್ಣ ಹೇಳುತ್ತಾನೆ, ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನ್ ಅಹಮ್ ಅವ್ಯಯಂ : `ನಾಶವಿಲ್ಲದ ಈ ಭಗವದ್ಗೀತೆ ವಿಜ್ಞಾನವನ್ನು ವಿವಸ್ವಾನ್, ಅಂದರೆ ಸೂರ್ಯನಿಗೆ 120 ದಶಲಕ್ಷ ವರ್ಷಗಳಿಗೂ ಹಿಂದೆ ಹೇಳಿದೆ.’ ನಿಮಗಿದು ಗೊತ್ತಿಲ್ಲವೇ? ನೀವೆಂತಹ ಭಗವದ್ಗೀತೆ ಓದುಗರು? ಭಗವದ್ಗೀತೆಯು ಅವ್ಯಯಂ, ಶಾಶ್ವತ. ಆದುದರಿಂದ ಅದು 5 ಸಾವಿರ ವರ್ಷದಷ್ಟು ಹಳೆಯದೆಂದು ಹೇಗೆ ಹೇಳುವಿರಿ?
(ಆಗಷ್ಟೇ ಉದಯಿಸುತ್ತಿದ್ದ ಸೂರ್ಯನತ್ತ ತಮ್ಮ ಬೆತ್ತವನ್ನು ತೋರಿಸುತ್ತ), ನಾವು ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಿದ್ದೇವೆ. ಆದರೆ ಅದು ಸದಾ ಇದೆ, ಬಾಹ್ಯಾಕಾಶದಲ್ಲಿ. ಅದರಂತೆಯೇ ಭಗವದ್ಗೀತೆ: ಅದು ಶಾಶ್ವತ ಸತ್ಯ.

ಸೂರ್ಯೋದಯವಾದಾಗ ನಾವು, `ಓ, ಸೂರ್ಯ ಈಗಷ್ಟೇ ಅಸ್ತಿತ್ವಕ್ಕೆ ಬರುತ್ತಿದ್ದಾನೆ’ ಎಂದು ಹೇಳುವುದಿಲ್ಲ. ಅದು ಸದಾ ಅಲ್ಲಿರುತ್ತದೆ. ಆದರೆ ಅದು ಉದಯಿಸುವವರೆಗೂ ನಾವು ಅದನ್ನು ನೋಡಲಾರೆವು. ಸೂರ್ಯನು ರಾತ್ರಿ ಅಸುನೀಗಿದ. ಬೆಳಗ್ಗೆ ಹೊಸ ಸೂರ್ಯ ಹುಟ್ಟಿದ ಎಂದು ಮೊದಲು ಯೋಚಿಸುತ್ತಿದ್ದರು. ಭೂಮಿ ಸಮತಟ್ಟಾಗಿದೆ ಎಂದೂ ಅವರು ನಂಬಿದ್ದರು. ಇದು ನಿಮ್ಮ ವೈಜ್ಞಾನಿಕ ಜ್ಞಾನ : ಪ್ರತಿದಿನ ಒಂದೊಂದು ಹೊಸ ಅಭಿಪ್ರಾಯ.
ಭಕ್ತ: ಅಂದರೆ ನಾವು ಸತ್ಯವನ್ನು ಅನ್ವೇಷಿಸುತ್ತಿದ್ದೇವೆ.
ಶ್ರೀಲ ಪ್ರಭುಪಾದ: ಅಲ್ಲ. ಇದರರ್ಥ ನಿಮಗೆ ಸತ್ಯ ಏನೆಂಬುದು ಗೊತ್ತಿಲ್ಲ. ನೀವು ಸುಮ್ಮನೇ ಊಹಿಸುತ್ತಿರುವಿರಿ. ಈಗ ನೀವು ಯಾವುದೋ ಸ್ವಲ್ಪವನ್ನು ನಿಜ ಎಂದು ಸ್ವೀಕರಿಸುತ್ತೀರಿ. ಕೆಲವು ದಿನಗಳ ಅನಂತರ ಅದು ನಿಜವಲ್ಲ ಎನ್ನುವಿರಿ. ಮತ್ತು ಇದನ್ನು ನೀವು ವಿಜ್ಞಾನ ಎನ್ನುವಿರಿ!
ಭಕ್ತ: ನೀವು ಹೇಳುವುದು ಸರಿ. ಕೆಲವು ವರ್ಷಗಳ ಹಿಂದೆಯಷ್ಟೇ ಬರೆದಿದ್ದ ವಿಜ್ಞಾನ ಪುಸ್ತಕಗಳು ಈಗ ಅಪ್ರಚಲಿತವಾಗಿಬಿಟ್ಟಿವೆ.
ಶ್ರೀಲ ಪ್ರಭುಪಾದ: ಮತ್ತು ಈಗ ಬಳಸುತ್ತಿರುವ ವಿಜ್ಞಾನ ಪುಸ್ತಕಗಳು ಕೆಲವು ವರ್ಷಗಳಲ್ಲಿ ನಿಷ್ಪ್ರಯೋಜಕವಾಗುತ್ತವೆ. ಇದು ನಿಮ್ಮ ವಿಜ್ಞಾನ.
ಭಕ್ತ: ಆದರೆ, ಈ ಹಿಂದಿಗಿಂತ ಈಗ ಹೆಚ್ಚು ಅರಿತುಕೊಂಡಿದ್ದೇವೆ. ಇದೇ ರೀತಿ ಪ್ರಯತ್ನಿಸುತ್ತಿದ್ದರೆ ನಾವು ಇನ್ನೂ ಅರಿಯುತ್ತೇವೆ.
ಶ್ರೀಲ ಪ್ರಭುಪಾದ: ಇದರರ್ಥ ನೀವು ಸದಾ ಮೌಢ್ಯದಲ್ಲೇ ಇರುವಿರಿ ಎಂದು. ಆದರೆ ಭಗವದ್ಗೀತೆಯು ಹಾಗಲ್ಲ. ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, `ನಾನು ಮೊದಲು ಈ ವಿಜ್ಞಾನವನ್ನು 120 ದಶಲಕ್ಷ ವರ್ಷಗಳ ಹಿಂದೆ ಬೋಧಿಸಿದೆ. ಮತ್ತು ಇಂದು ಅದನ್ನೇ ಬೋಧಿಸುತ್ತಿರುವೆ.’ ಅದೇ ವೈಜ್ಞಾನಿಕ ಜ್ಞಾನ: ಸತ್ಯ ಎಂದಿಗೂ ಒಂದೇ. ಆದರೆ, ನೀವು, ವಿಜ್ಞಾನಿಗಳು ಬದಲಾಯಿಸುತ್ತಿರುತ್ತೀರಿ – ಅದನ್ನು `ಸತ್ಯದ ಅನ್ವೇಷಣೆ’ ಎನ್ನುತ್ತೀರಿ. ಅಂದರೆ ನಿಮಗೆ ಸತ್ಯ ಏನೆಂಬುದು ಗೊತ್ತಿಲ್ಲ.
ಭಕ್ತ: ಸಮಸ್ಯೆ ಎಂದರೆ ಎಲ್ಲರೂ ಮೋಸಗಾರರು. ಪ್ರತಿಯೊಬ್ಬರೂ ಊಹಿಸುತ್ತ ತಮ್ಮದೇ ಜ್ಞಾನವನ್ನು ಸತ್ಯ ಎಂದು ಮಂಡಿಸುತ್ತಿದ್ದಾರೆ.

ಶ್ರೀಲ ಪ್ರಭುಪಾದ: ಆದುದರಿಂದ ನಾವು ಕೃಷ್ಣನನ್ನು ಸ್ವೀಕರಿಸಿದ್ದೇವೆ. ಅವನು ಮೋಸ ಮಾಡುವುದಿಲ್ಲ. ಮತ್ತು ನಾನು ಕೃಷ್ಣ ಹೇಳಿರುವದನ್ನಷ್ಟೇ ನಿಮ್ಮ ಮುಂದಿಡುತ್ತಿರುವುದರಿಂದ ನಾನೂ ವಂಚಕನಲ್ಲ. ವಿಜ್ಞಾನಿಗಳು ಮತ್ತು ನಮ್ಮ ನಡುವಿನ ವ್ಯತ್ಯಾಸ ಅದೇ.






Leave a Reply