ವೇದವಾಕ್ಯ

ಒಬ್ಬ ಪರಿಶುದ್ಧ ಭಕ್ತನ ಸಮಸ್ತ ಕಾರ್ಯಚಟುವಟಿಕೆಗಳೂ ಸದಾ ಪ್ರಭುವಿನ ಸೇವೆಯಲ್ಲಿ ಮಗ್ನವಾಗಿರುತ್ತವೆ. ಹೀಗೆ ಆ ಪರಿಶುದ್ಧ ಭಕ್ತರು ಭಾವೋತ್ಕರ್ಷದ ಭಾವನೆಗಳನ್ನು ತಮ್ಮ ನಡುವೆ ಹಂಚಿಕೊಳ್ಳುತ್ತಾರೆ ಮತ್ತು ಲೋಕೋತ್ತರವಾದ ಆನಂದವನ್ನು ಆಸ್ವಾದಿಸುತ್ತಾರೆ. ಈ ಲೋಕೋತ್ತರವಾದ ಆನಂದವನ್ನು, ಸದ್ಗುರುಗಳ ಮಾರ್ಗದರ್ಶನದಲ್ಲಿ ಭಕ್ತಿಪೂರ್ವಕ ಆಚರಣೆಯನ್ನು ಯೋಗ್ಯವಾದ ರೀತಿಯಲ್ಲಿ ಕೈಗೊಳ್ಳುವ ಹಂತದಲ್ಲಿಯೂ (ಸಾಧನ ಅವಸ್ಥಾ) ಅನುಭವಿಸಲಾಗುತ್ತದೆ. ಇದು ಪಕ್ವವಾದ ಸ್ಥಿತಿಯನ್ನು ತಲಪಿದಾಗ, ಹೀಗೆ ಬೆಳವಣಿಗೆಯಾದ ಲೋಕೋತ್ತರ ಭಾವನೆಯು, ಯಾವುದರಿಂದ ಜೀವಿಯು ಮೂಲತಃ ರಚನೆಯಾಗಿದೆಯೋ ಅಂತಹ ಪ್ರಭುವಿನೊಡನೆ ಒಂದು ನಿರ್ದಿಷ್ಟವಾದ ಸಂಬಂಧದ ಸಾಕ್ಷಾತ್ಕಾರದಲ್ಲಿ ಮುಕ್ತಾಯವಾಗುತ್ತದೆ.

– ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಶ್ರೀಮದ್‌ ಭಾಗವತಮ್‌: 2.3.12, ಭಾವಾರ್ಥ

* * * *

ಗೋಕುಲದ ಪ್ರಭುವಾದ ಕೃಷ್ಣನು ಲೋಕೋತ್ತರವಾದ ಪರಮ ದೇವೋತ್ತಮ. ನಿತ್ಯ ಭಾವೋತ್ಕರ್ಷದ ಸ್ವಸ್ವರೂಪ. ಅವನು ಶ್ರೇಷ್ಠರಲ್ಲೆಲ್ಲ ಅತಿ ಶ್ರೇಷ್ಠನು. ಅವನು ದಿವ್ಯ ಲೋಕದ ಆಮೋದಗಳನ್ನು ಆಸ್ವಾದಿಸುವುದರಲ್ಲಿ ಸತತವಾಗಿ ಮಗ್ನನಾಗಿದ್ದಾನೆ ಮತ್ತು ತನ್ನ ಲೌಕಿಕ ಶಕ್ತಿಯೊಡನೆ ಯಾವ ಸಾಹಚರ್ಯವನ್ನೂ ಹೊಂದಿಲ್ಲ.

– ಬ್ರಹ್ಮದೇವ, ಬ್ರಹ್ಮಸಂಹಿತಾ: 5.6

* * * *

ಏಕಮೇವ ದೇವೋತ್ತಮ ಪರಮ ಪುರುಷನು ತನ್ನ ಪರಿಶುದ್ಧ ಭಕ್ತರೊಡನೆ ಅನೇಕಾನೇಕ ದಿವ್ಯ ರೂಪಗಳ ಸಂಬಂಧಗಳಲ್ಲಿ ಶಾಶ್ವತವಾಗಿ ಮಗ್ನನಾಗಿದ್ದಾನೆ.

– ಪುರುಷಬೋಧಿನೀ ಉಪನಿಷದ್‌

* * * *

ಪ್ರತಿದಿನವೂ ನೂರಾರು ಸಾವಿರಾರು ಜೀವಿಗಳು ಯಮನ ಸಾಮ್ರಾಜ್ಯಕ್ಕೆ ಹೋಗುತ್ತಾರೆ. ಆದರೂ ಇಲ್ಲಿ ಉಳಿದಿರುವವರು ಶಾಶ್ವತವಾಗಿ ಇಲ್ಲೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಇದಕ್ಕಿಂತ ಆಶ್ಚರ್ಯಕರವಾದದ್ದು ಬೇರೆ ಏನು ತಾನೇ ಇದ್ದೀತು?

– ಯುಧಿಷ್ಠಿರ ಮಹಾರಾಜ, ಮಹಾಭಾರತ, ವನಪರ್ವ: 313.116

* * * *

ಶಿವನು ಗಂಗೆಯ ಪವಿತ್ರ ಜಲವನ್ನು ತನ್ನ ಶಿರದಲ್ಲಿ ಧರಿಸಿದ ಕಾರಣದಿಂದ ಇನ್ನೂ ಹೆಚ್ಚು ಪವಿತ್ರನಾಗಿದ್ದಾನೆ. ಆ ಜಲವಾದರೋ ಪ್ರಭು ವಿಷ್ಣುವಿನ ಪಾದ ಕಮಲಗಳನ್ನು ತೊಳೆದ ನೀರಿನಲ್ಲಿ ತನ್ನ ಆಕರವನ್ನು ಹೊಂದಿದೆ. ಧ್ಯಾನಮಗ್ನ ಭಕ್ತನ ಮನದಲ್ಲಿ ಸಂಗ್ರಹವಾದ ಪಾಪದ ಪರ್ವತವನ್ನೇ ನುಚ್ಚುನೂರು ಮಾಡಲು ಎಸೆದ ಸಿಡಿಲುಗಳಂತೆ ಪ್ರಭುವಿನ ಪಾದಗಳು ಕೆಲಸ ಮಾಡುತ್ತವೆ. ಆದ್ದರಿಂದ ವ್ಯಕ್ತಿಯು ದೀರ್ಘಕಾಲದವರೆಗೆ ಪ್ರಭುವಿನ ಪಾದ ಕಮಲಗಳನ್ನು ಕುರಿತು ಧ್ಯಾನ ಮಾಡಬೇಕು.

– ಭಗವಾನ್‌ ಕಪಿಲ, ಶ್ರೀಮದ್‌ ಭಾಗವತಮ್‌: 3.28.22

* * * *

ಪರಮ ಸತ್ಯನೇ ಗೋವಿಂದ (ಕೃಷ್ಣ). ಅವನು ಆನಂದ ಮತ್ತು ಜ್ಞಾನದ ಶಾಶ್ವತರೂಪವನ್ನು ಹೊಂದಿದ್ದಾನೆ. ಅವನು ವೃಂದಾವನದಲ್ಲಿ ನೆರಳು ಚೆಲ್ಲುವ ಮರಗಳ ಅಡಿಯಲ್ಲಿ ಕುಳಿತಿದ್ದಾನೆ.

– ಗೋಪಾಲ ತಾಪನೀ ಉಪನಿಷದ್‌

* * * *

ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳುವಷ್ಟರಿಂದಲೇ ಜೀವಿಯು ಜನನ ಮತ್ತು ಮರಣದ ಪಥವನ್ನು ಜಯಿಸಬಹುದು.

– ಶ್ವೇತಾಶ್ವತರ ಉಪನಿಷದ್‌

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi