ವಡಭಾಂಡೇಶ್ವರದ ಶ್ರೀ ಬಲರಾಮ ದೇವಾಲಯ

ಉಡುಪಿ  ಶ್ರೀಕೃಷ್ಣನ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ? ಅನೇಕ ಭಕ್ತರು ಈ ದಿವ್ಯ ಕ್ಷೇತ್ರಕ್ಕೆ ನಿತ್ಯವೂ ಬರುತ್ತಿರುತ್ತಾರೆ. ಒಂದು ಕೈಯಲ್ಲಿ ಕಡೆಗೋಲನ್ನೂ ಒಂದು ಕೈಯಲ್ಲಿ  ಹಗ್ಗಗಳನ್ನೂ ಹಿಡಿದು ನಿಂತಿರುವ ಮುದ್ದಾದ ಬಾಲಕೃಷ್ಣನ ದಿವ್ಯಮೂರ್ತಿಯನ್ನು ಸಂದರ್ಶಿಸಿ ಭಕ್ತಿಭಾವದಿಂದ ತೃಪ್ತರಾಗಿ ಹಿಂದಿರುಗುತ್ತಾರೆ. ಶ್ರೀಕೃಷ್ಣನಿಗೆ ನಮ್ಮ ದೇಶಾದ್ಯಂತ ಹಲವಾರು ದೇವಾಲಯಗಳಿವೆ. ಆದರೆ ಶ್ರೀಕೃಷ್ಣನೊಂದಿಗೇ ಸದಾ ಇರುತ್ತಿದ್ದು ಅವನ ದಿವ್ಯಲೀಲೆಗಳಲ್ಲಿ ಸಮವಾಗಿ ಪಾಲ್ಗೊಂಡ ಅವನ ಅಣ್ಣ ಬಲರಾಮನಿಗೆ ದೇವಾಲಯಗಳಿರುವುದು ಅಪರೂಪ. ಬಲರಾಮನ ಲೀಲೆಗಳನ್ನೊಮ್ಮೆ ನೆನಪಿಸಿಕೊಳ್ಳೋಣ. ಕೃಷ್ಣನೊಂದಿಗೆ ಆಟಪಾಟಗಳಲ್ಲಿ ಪಾಲ್ಗೊಂಡಿದ್ದು, ಬೆಣ್ಣೆ, ಮೊಸರುಗಳನ್ನು ಕದಿಯುವ ತುಂಟಾಟಗಳಲ್ಲಿ ಪಾಲ್ಗೊಂಡಿದ್ದು, ಪ್ರಲಂಬ, ಧೇನುಕ ಮೊದಲಾದ ಅಸುರರನ್ನು ಸಂಹರಿಸಿದ್ದು, ಚಾಣೂರ, ಮುಷ್ಟಿಕಾದಿ ಮಲ್ಲರೊಂದಿಗೆ ಕೃಷ್ಣನೊಂದಿಗೆ ತಾನೂ ಮಲ್ಲಯುದ್ಧದಲ್ಲಿ ಪಾಲ್ಗೊಂಡು ಅವರನ್ನು ಸಂಹರಿಸಿದ್ದು, ಕಂಸನ ಸಂಹಾರದ ಬಳಿಕ ದಾಳಿ ಮಾಡಿದ ಜರಾಸಂಧನ ಸೈನ್ಯವನ್ನು ಕೃಷ್ಣನೊಂದಿಗೆ ಸೇರಿ ಬಗ್ಗುಬಡಿದದ್ದು, ದ್ವಿವಿದನೆಂಬ ವಾನರನನ್ನು ಸಂಹರಿಸಿದ್ದು, ದುರ್ಯೋಧನನ ಪುತ್ರಿ ಲಕ್ಷ್ಮಣೆಯನ್ನು ಅಪಹರಿಸಿದ್ದಕ್ಕಾಗಿ ಸೆರೆಹಿಡಿಯಲಾಗಿದ್ದ ಕೃಷ್ಣಪುತ್ರ ಸಾಂಬನನ್ನು ಬಿಡಿಸಿಕೊಂಡು ಬರಲು ಹೋಗಿ ತನ್ನ ನೇಗಿಲಿನಿಂದ ಹಸ್ತಿನಾಪುರವನ್ನೇ ನಡುಗಿಸಿದ್ದು, ಭೀಮ ಮತ್ತು ದುರ್ಯೋಧನರಿಗೆ ಗದಾಯುದ್ಧ ಕಲಿಸಿದ್ದು, ರೇವತಿಯನ್ನು ವಿವಾಹವಾದದ್ದು, ತನಗೆ ಗೌರವ ನೀಡದ ರೋಮಹರ್ಷಣ ಸೂತನನ್ನು ಸಂಹರಿಸಿ ಆ ತಪ್ಪಿಗಾಗಿ ಸುದೀರ್ಘ ತೀರ್ಥಯಾತ್ರೆ ಮಾಡಿದ್ದು, ಕೃಷ್ಣನಂತೆ ತಾನೂ ಗೋಪಿಕೆಯರೊಂದಿಗೆ ರಾಸಲೀಲೆಯಾಡಿದ್ದು ಹಾಗೂ ಅದಕ್ಕೆ ಸಹಕರಿಸದ ಯಮುನೆಯನ್ನು ನೇಗಿಲಿನಿಂದ ಸೆಳೆದದ್ದು, ಹೀಗೆ ಹಲವಾರು ಲೀಲೆಗಳನ್ನು ಮೆರೆದ ದೇವೋತ್ತಮ ಪರಮಪುರುಷ ಶ್ರೀ ಬಲರಾಮ. ಆದಿಶೇಷನ ಮೂಲವೆಂದೂ ಸಂಕರ್ಷಣದೇವನೆಂದೂ ಪ್ರಸಿದ್ಧನಾಗಿರುವ ಬಲರಾಮ, ಚೈತನ್ಯ ಪರಂಪರೆಯಲ್ಲಿ ಬಹುಮುಖ್ಯ ಸ್ಥಾನವನ್ನು ಹೊಂದಿದ್ದಾನೆ. ಭಕ್ತರು ಕೃಷ್ಣನ ಬಳಿಗೆ ತಲಪಲು ಸಹಾಯ ಮಾಡುವವನು ಬಲರಾಮನೇ. ಹರೇ ಕೃಷ್ಣ, ಹರೇ ರಾಮ, ಮಹಾಮಂತ್ರದಲ್ಲಿ ಬರುವ ರಾಮ, ಈ ಬಲರಾಮನೇ ಆಗಿರುತ್ತಾನೆ. ಹೀಗಾಗಿ ಇಸ್ಕಾನ್‌ ಇಲ್ಲವೇ ಗೌಡೀಯ ವೈಷ್ಣವ ದೇವಾಲಯಗಳಲ್ಲಿ ಬಲರಾಮನನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲಿ ಬಲರಾಮನು ಕೃಷ್ಣನೊಂದಿಗಿರುತ್ತಾನೆ. ಬಲರಾಮನು ಒಂಟಿಯಾಗಿರುವ ದೇವಾಲಯಗಳಿರುವುದು ಬಹಳ ಅಪರೂಪ. ಅಂಥ ಒಂದು ಅಪರೂಪದ ದೇವಾಲಯವನ್ನು ಈಗ ಪರಿಚಯ ಮಾಡಿಕೊಳ್ಳೋಣ.

ಈ ದೇವಾಲಯವೇ ವಡಭಾಂಡೇಶ್ವರದ ಬಲರಾಮ ದೇವಾಲಯ. ಉಡುಪಿಯಿಂದ ನಾಲ್ಕು ಮೈಲು ದೂರದಲ್ಲಿ ಪಶ್ಚಿಮದ ಮಲ್ಪೆ ಸಮುದ್ರತೀರದಲ್ಲಿ ವಡಭಾಂಡೇಶ್ವರವೆಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಈ ಬಲರಾಮ ದೇವಾಲಯವಿದೆ. ಕೇರಳೀಯ ಶೈಲಿಯಲ್ಲಿರುವ ಸರಳವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಬಲರಾಮನ ಸುಂದರವಾದ ಮೂರ್ತಿಯಿದೆ. ಕೈಯಲ್ಲಿ ಬೆಣ್ಣೆಯ ಮುದ್ದೆಯನ್ನು ಹಿಡಿದು ನಿಂತಿರುವ ಈ ಮೂರ್ತಿ ಬಾಲ್ಯಾವಸ್ಥೆಯನ್ನು ಸೂಚಿಸುತ್ತದೆ. ಕೃಷ್ಣನೊಂದಿಗೂ ಇತರ ಗೋಪಬಾಲಕರೊಂದಿಗೂ ವೃಂದಾವನದಲ್ಲಿ ಬೆಣ್ಣೆ ಕದಿಯುತ್ತಿದ್ದ ಅವನ ದಿವ್ಯಲೀಲೆಗಳನ್ನು ಸ್ಮರಣೆಗೆ ತರುತ್ತದೆ. ಈ ಬಲರಾಮನ ದರ್ಶನ ಮನಸ್ಸಿಗೆ ಆನಂದವನ್ನು ತರುತ್ತದೆ.

ಬಲರಾಮಮೂರ್ತಿ ಪ್ರತಿಷ್ಠಾಪನೆಯ ಕಥೆ

ವಡಭಾಂಡೇಶ್ವರ ಗ್ರಾಮದಲ್ಲಿ ಈ ಬಲರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರು ದ್ವೈತ ತತ್ತ್ವಪ್ರತಿಪಾದಕರೂ ಆದ ಶ್ರೀಮನ್ಮಧ್ವಾಚಾರ್ಯರು. ಉಡುಪಿಯಲ್ಲಿ ಅವರು ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಕಥೆಗೆ ಇದೂ ಹೊಂದಿಕೊಂಡಿದೆ. ಜನಜನಿತವಾದ ಕಥೆಯ ಪ್ರಕಾರ, ಒಂದು ಹಡಗು ಮಲ್ಪೆ ಸಮುದ್ರದ ತೀರದಲ್ಲಿ ಬರುತ್ತಿದ್ದಾಗ ಬಿರುಗಾಳಿಯೆದ್ದು ಹಡಗು ಮುಳುಗುವ ಸ್ಥಿತಿಯಲ್ಲಿದ್ದಾಗ, ತೀರದಲ್ಲಿ ಧ್ಯಾನಸ್ಥರಾಗಿದ್ದ ಮಧ್ವಾಚಾರ್ಯರಿಗೆ ನಾವಿಕರ ಆರ್ತನಾದ ಕೇಳಿಸಿ, ಅವರು ಎದ್ದು ಬಂದು ಹಡಗಿನತ್ತ ತಮ್ಮ ಶಾಟಿಯನ್ನು ಬೀಸಿದರು. ಆಗ ಗಾಳಿಯು ಶಾಂತವಾಗಲು, ನಾವಿಕರ ಮುಖ್ಯಸ್ಥನು ತಮ್ಮನ್ನುಳಿಸಿದ ಮಧ್ವರ ಕಾಲಿಗೆ ಬಿದ್ದು ಏನಾದರೂ ಕೊಡಲು ಮುಂದಾದ. ವ್ಯಾಪಾರದ ವಸ್ತುಗಳಿದ್ದ ಆ ಹಡಗಿನಲ್ಲಿ ಗೋಪೀಚಂದನದ ಗಡ್ಡೆಯೊಂದಿರಲು ಆಚಾರ್ಯರು ಅದೊಂದನ್ನು ಮಾತ್ರ ಕೇಳಿ ಪಡೆದು, ಉಡುಪಿಗೆ ತಂದು ಅದರಲ್ಲಿದ್ದ ಕೃಷ್ಣ ವಿಗ್ರಹವನ್ನು ಅಲ್ಲಿ ಸ್ಥಾಪಿಸಿದರು. ಈ ಕೃಷ್ಣ ವಿಗ್ರಹ, ಮೂಲತಃ ರುಕ್ಮಿಣಿಯು ದ್ವಾರಕೆಯಲ್ಲಿ ಮಾಡಿಸಿ ಅದನ್ನು ಪೂಜಿಸುತ್ತಿದ್ದು, ಶ್ರೀಕೃಷ್ಣನ ಅವತಾರ ಮುಗಿದಾಗ ಅರ್ಜುನನು ಅದನ್ನು ರುಕ್ಮಿಣೀವನದಲ್ಲಿರಿಸಿದ್ದ. ಅದು, ಹೇಗೋ ಗೋಪೀಚಂದನದ ಗಡ್ಡೆಯಲ್ಲಿ ಸೇರಿಕೊಂಡಿದ್ದು ಆ ಗಡ್ಡೆಯನ್ನೇ ನಾವಿಕರು ಹಡಗಿನಲ್ಲಿ ತಂದಿದ್ದರು.

ಹದಿನೇಳನೆಯ ಶತಮಾನದಲ್ಲಿ ಪಲಿಮಾರು ಮಠದ ಯತಿಗಳಾಗಿದ್ದ ಶ್ರೀರಘುವರ್ಯತೀರ್ಥರು ಇದೇ ಕಥೆಯನ್ನು ಸ್ವಲ್ಪ ಬೇರೆಯ ರೀತಿ ಬರೆದಿದ್ದು ಅದು ಪೂರ್ವಾಚಾರ್ಯರು ಹೇಳಿಕೊಂಡು ಬಂದುದೆಂದು ಹೇಳುತ್ತಾರೆ. ವ್ಯತ್ಯಾಸವಿಷ್ಟೇ. ಮಲ್ಪೆಯ ತೀರಕ್ಕೆ ಬಂದಾಗ ಹಡಗು ಅಪಘಾತಕ್ಕೀಡಾಗಿ ಒಡೆಯಿತು ಎಂದು ಹೇಳುತ್ತಾರೆ. ಆಗ ಆ ಹಡಗಿನೊಂದಿಗೆ ಗೋಪೀಚಂದನದ ಗಡ್ಡೆಯಲ್ಲಿದ್ದ ಕೃಷ್ಣನ ವಿಗ್ರಹವೂ ಸಮುದ್ರದಲ್ಲಿ  ಮುಳುಗಿತು! ಸರ್ವಜ್ಞರಾದ ಆಚಾರ್ಯರಿಗೆ ಈ ವಿಷಯವು ತಿಳಿದು ಆ ವಿಗ್ರಹವನ್ನು ಸಮುದ್ರತಳದಿಂದ ಉಡುಪಿಗೆ ತಂದು ಮಧ್ವ ಸರೋವರದಲ್ಲಿ ತೊಳೆಸಿ ಅಲ್ಲಿಯೇ ಸ್ಥಾಪಿಸಿದರು. ಉಡುಪಿಯ ಸಮೀಪದ ಗ್ರಾಮವೊಂದರ ಬಳಿ ಹಡಗು ಒಡೆದಿದ್ದರಿಂದ, ಆ ಗ್ರಾಮವನ್ನು ಅದೇ ಹೆಸರಿನಿಂದ ಕರೆಯುತ್ತಾರೆ.

ಬಲರಾಮನ ವಿಗ್ರಹದ ವಿಷಯದಲ್ಲಿ ಹೇಳಲಾಗುವ ವಿಷಯವೇನೆಂದರೆ, ಹಡಗಿನಲ್ಲಿ ಎರಡು ಗೋಪೀಚಂದನದ ಗಡ್ಡೆಗಳಿದ್ದು, ಒಂದರಲ್ಲಿ ಬಲರಾಮನ ವಿಗ್ರಹವೂ, ಇನ್ನೊಂದರಲ್ಲಿ ಶ್ರೀಕೃಷ್ಣನ ವಿಗ್ರಹವೂ ಇದ್ದವು. ಮಧ್ವಾಚಾರ್ಯರು ಬಲರಾಮನ ವಿಗ್ರಹವನ್ನು ಹಡಗು ಒಡೆದ ಈ ವಡಭಾಂಡೇಶ್ವರ ಗ್ರಾಮದಲ್ಲಿ ಸ್ಥಾಪಿಸಿ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಸ್ಥಾಪಿಸಿದರು.

ಆಗಲೇ ಹೇಳಿದಂತೆ ಹಡಗು ಒಡೆದ ಸ್ಥಳದಲ್ಲಿನ ಗ್ರಾಮವನ್ನು ಆ ಒಡೆದ ಘಟನೆಯಿಂದಲೇ ಹೆಸರಿಸಲಾಯಿತು. ಹಾಗಾಗಿ ಇದರ ಹೆಸರು ಒಡಭಾಂಡೇಶ್ವರ ಅಥವಾ ವಡಭಾಂಡೇಶ್ವರ ಎಂದಾಯಿತು. ಮೂಲತಃ ಇದು ಒಡಪಾಂಡೀಶ್ವರ ಎಂದಿರಬೇಕು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಪಾಂಡಿ ಎಂದರೆ ತುಳುವಿನಲ್ಲಿ ಸರಕು ಸಾಗಿಸುವ ಹಾಯಿದೋಣಿ ಎಂದು ಅರ್ಥ. ಈ ಪಾಂಡಿ ಒಡೆದ ಹಳ್ಳಿಯೇ ಒಡಪಾಂಡಿ ಎಂಬ ಹೆಸರು ಪಡೆದಿರಬೇಕು. ಅಲ್ಲಿ ಸ್ಥಾಪಿಸಲಾದ ಬಲರಾಮದೇವರು ಒಡಪಾಂಡೀಶ್ವರನೆನಿಸಿದ. ಆ ಕಾರಣದಿಂದ ಆ ಗ್ರಾಮವೂ ಒಡಪಾಂಡೀಶ್ವರವೆಂದೆನಿಸಿ, ಕ್ರಮೇಣ, ಜನರ ಮಾತಲ್ಲಿ ಒಡಪಾಂಡೇಶ್ವರ ಮತ್ತು ವಡಭಾಂಡೇಶ್ವರ ಎಂದು ಬದಲಾಗಿರಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಹೀಗೆ, ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನವಾದ ಬಳಿಕ, ಹತ್ತಿರದಲ್ಲೇ ಇರುವ ವಡಭಾಂಡೇಶ್ವರದಲ್ಲಿ ಅವನ ಅಣ್ಣ ಬಲರಾಮನ ದರ್ಶನವನ್ನೂ ಮಾಡಬೇಕಾದುದಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi