ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕ ಮತ್ತು ಆಚಾರ್ಯರು ಆದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹೈದರಾಬಾದ್ನಲ್ಲಿ
1972ರ ನವಂಬರ್ 29ರಂದು ಮಾಡಿದ ಉಪನ್ಯಾಸ.
ಅವ್ಯಕ್ತೋಽಯಮಚಿನ್ತ್ಯೋಽಯಮವಿಕಾರ್ಯೋಽಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥
ಆತ್ಮನು ಕಣ್ಣಿಗೆ ಕಾಣುವುದಿಲ್ಲ; ಅದನ್ನು ಗ್ರಹಿಸಲು ಸಾಧ್ಯವಿಲ್ಲ; ಅದು ವಿಕಾರ ಹೊಂದುವುದಿಲ್ಲ ಎಂದು ಹೇಳಲಾಗಿದೆ. ಇದನ್ನು ತಿಳಿದೂ ನೀನು ದೇಹಕ್ಕಾಗಿ ದುಃಖಿಸಬಾರದು.
(ಭಗವದ್ಗೀತೆ, 2.25)

ಶ್ರೀ ಕೃಷ್ಣನು ಅನೇಕ ರೀತಿಯಲ್ಲಿ ಆತ್ಮವು ಅಮರ ಎಂಬುದನ್ನು ಅರ್ಜುನನಿಗೆ ಮನವರಿಕೆ ಮಾಡಿಕೊಡುತ್ತಾನೆ. ಅವ್ಯಕ್ತೋಽಯಮ್: ಅದು ಲೌಕಿಕ ಕಣ್ಣಿಗೆ ಗೋಚರಿಸುವುದಿಲ್ಲ. ಅದನ್ನು ನಾವು ನೋಡಲಾರೆವು ಏಕೆಂದರೆ ಆತ್ಮದ ಗಾತ್ರ ಎಷ್ಟು ಸೂಕ್ಷ್ಮವೆಂದರೆ ಅದು ಕೂದಲೆಳೆಯ ಹತ್ತು ಸಾವಿರದ ಒಂದು ಭಾಗ. ಅದು ಅಣುವಿಗಿಂತ ಸೂಕ್ಷ್ಮ. ಈ ಆತ್ಮವು ಎಲ್ಲೆಡೆ ಇರುವವನು. ಲೌಕಿಕ ಜಗತ್ತಿನಲ್ಲಿ ಆತ್ಮವು ಇರುವೆಡೆಯಲ್ಲಿ ಶ್ರೀಕೃಷ್ಣನೂ ಇರುತ್ತಾನೆ. ಈಶ್ವರಃ ಸರ್ವ ಭೂತಾನಾಂ ಹೃದ್ ದೇಶೇ ಅರ್ಜುನ ತಿಷ್ಠತಿ. ಅವರಿಬ್ಬರೂ – ಕೃಷ್ಣ ಮತ್ತು ಆತ್ಮ – ಅಲ್ಲಿರುತ್ತಾರೆ. ಆದುದರಿಂದ ಅಣೋರ್ ಅಣೀಯಾನ್ ಮಹತೋ ಮಹೀಯಾನ್ ಕೃಷ್ಣನು ಶ್ರೇಷ್ಠರಲ್ಲಿ ಶ್ರೇಷ್ಠ ಮತ್ತು ಅಲ್ಪರಲ್ಲಿ ಅಲ್ಪನಾಗಬಹುದು. ಇದೇ ದೇವರು.
ಅಖಿಲ ರಸಾಮೃತ ಸಿಂಧು
ಬಾಲಕೃಷ್ಣ ಆಟವಾಡುತ್ತಿದ್ದಾಗ ಮಣ್ಣು ತಿಂದ. ಅವನ ಗೆಳೆಯರು ಯಶೋದೆಗೆ ದೂರು ನೀಡಿದರು, `ಅಮ್ಮಾ, ನಿನ್ನ ಮಗ ಕೃಷ್ಣ ಮಣ್ಣು ತಿನ್ನುತ್ತಿದ್ದಾನೆ.’
ತಾಯಿ ಯಶೋದಾ ಕೇಳಿದಳು, `ಕೃಷ್ಣ, ನೀನು ಯಾಕೆ ಮಣ್ಣು ಸೇವಿಸುತ್ತಿರುವೆ? ನಾನು ನಿನಗೆ ಸಂದೇಶ್ ನೀಡಿರಲಿಲ್ಲವೇ?’
ಕೃಷ್ಣನೆಂದ, `ಅಮ್ಮಾ, ನಾನು ಮಣ್ಣು ತಿಂದಿಲ್ಲ.’
`ನಿನ್ನ ಮಿತ್ರರು ದೂರುತ್ತಿದ್ದಾರೆ.’
`ಇಲ್ಲ, ಅವರು ಈ ದಿನ ನನ್ನ ವೈರಿಗಳಾದರು. ನಾವು ಜಗಳವಾಡಿದೆವು. ನೀನು ನನ್ನನ್ನು ಬಯ್ಯಲೆಂದು ಅವರು ದೂರು ನೀಡಿದ್ದಾರೆ.’
ಇದನ್ನು ಬಗೆಹರಿಸಲು ಯಶೋದ ನಿರ್ಧರಿಸಿದಳು. `ಸರಿ. ನಿನ್ನ ಬಾಯನ್ನು ತೋರಿಸು. ನಾನು ನೋಡಬೇಕು.’
ಕೃಷ್ಣ ಬಾಯಿ ತೆರೆದಾಗ ಅವನ ತಾಯಿಯು ಅದರೊಳಗೆ ಅಸಂಖ್ಯ ವಿಶ್ವಗಳನ್ನು ಕಂಡಳು. ಇದು ಕೃಷ್ಣ. ಅಣೋರಣೀಯಾನ್ ಮಹತೋ ಮಹೀಯಾನ್ ಕೃಷ್ಣನು ಜಗತ್ತನ್ನು ಪ್ರವೇಶಿಸುತ್ತಾನೆ, ಆದರೆ ಅದೇ ವೇಳೆ ಅವನ ಬಾಯಲ್ಲಿ ಅಸಂಖ್ಯ ವಿಶ್ವಗಳಿರುತ್ತವೆ. ಇದೇ `ಶ್ರೇಷ್ಠರಲ್ಲಿ ಶ್ರೇಷ್ಠ ಮತ್ತು ಅಲ್ಪರಲ್ಲಿ ಅಲ್ಪ’ ಎಂಬುವುದಕ್ಕೆ ವಿವರ.

ಕೃಷ್ಣನ ಬಾಯೊಳಗೆ ವಿಶ್ವ ದರ್ಶನವಾದರೂ ಯಶೋದೆಗೆ ನಂಬಲಾಗಲಿಲ್ಲ. ಏಕೆಂದರೆ ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಅವಳು ಎಂದಿಗೂ ಭಾವಿಸಲಿಲ್ಲ. `ಅವನು ನನ್ನ ಪುಟ್ಟ ಮಗು. ಅವನನ್ನು ಪೋಷಿಸಬೇಕು.’ ಇದು ಅವಳ ಭಾವನೆ. ಇವುಗಳನ್ನು ಮಾತಾ-ಪಿತೃಗಳ ಭಾವನೆ-ವಾತ್ಸಲ್ಯ ರಸ ಎಂದು ಕರೆಯುತ್ತಾರೆ.
ಭಕ್ತರು ಅನೇಕ ರಸಗಳ ಮೂಲಕ ಕೃಷ್ಣನಿಗೆ ಸೇವೆ ಸಲ್ಲಿಸುತ್ತಾರೆ. ಕೆಲವರು ಸೇವಕನಾಗಿ, ಮಿತ್ರನಾಗಿ, ತಂದೆ, ತಾಯಿಯಾಗಿ, ಪ್ರಿಯತಮನಾಗಿ ಹೀಗೆ ಅವನ ಸೇವೆಯಲ್ಲಿ ನಿರತರಾಗಿರಬಹುದು. ಈ ಐದು ರಸಗಳ ಮೂಲಕ ಭಕ್ತನು ಕೃಷ್ಣನೊಂದಿಗೆ ಸಂಪರ್ಕ ಹೊಂದಿರುತ್ತಾನೆ. ಇನ್ನೂ ಏಳು ರಸಗಳಿವೆ. ಆದರೆ ಅವು ಆನುಷಂಗಿಕವಾದುವು. ಉದಾಹರಣೆಗೆ, ಅಸುರರು, ರಾಕ್ಷಸರು ಶತ್ರುಗಳಂತೆ ಕೃಷ್ಣನ ಸೇವೆ ಮಾಡುತ್ತಿರಬಹುದು. ಅವರೂ ಸೇವೆ ಸಲ್ಲಿಸುತ್ತಾರೆ, ಆದರೆ ವೈರಿಗಳಂತೆ. ಕೆಲವರು ಕೃಷ್ಣನಿಗೆ ಸಂತೋಷ ನೀಡಿ ಸೇವೆ ಸಲ್ಲಿಸಬಹುದು. ಇನ್ನೂ ಕೆಲವರು ಅವನೊಂದಿಗೆ ಹೋರಾಡುತ್ತ.
ಹೀಗೆ 12 ರಸಗಳಿವೆ. ಅಖಿಲ ರಸಾಮೃತ ಸಿಂಧು – ನಾವು ಈ ಜಗತ್ತಿನಲ್ಲಿ ಅನುಭವಿಸುವ ಎಲ್ಲ ರಸಗಳೂ ಕೃಷ್ಣನಿಂದಲೇ ಬರುತ್ತವೆ. ನಮ್ಮ ಅನುಭವದೊಳಗಿನ ಎಲ್ಲವೂ ಕೃಷ್ಣನಲ್ಲೇ ಇರುತ್ತವೆ ಎಂದು ವೇದಾಂತ ಸೂತ್ರ ಹೇಳಿದೆ. ಅದು ಕೃಷ್ಣ. ಅವನು ಕದಿಯುತ್ತಾನೆ. ಕಳ್ಳತನ ಒಳ್ಳೆಯದೆಂದು ನಾವು ಭಾವಿಸುವುದಿಲ್ಲ. ಆದರೆ ಕೃಷ್ಣನಲ್ಲಿ ಕಳ್ಳತನವೂ ಇದೆ. ಅವನು ಬೆಣ್ಣೆ ಕಳ್ಳನೆಂದು ಪ್ರಸಿದ್ಧನಾಗಿದ್ದಾನೆ.
ಲೌಕಿಕದ ನಮ್ಮೆಲ್ಲ ವ್ಯವಹಾರಗಳು ಆಧ್ಯಾತ್ಮಿಕ ಜಗತ್ತಿನಲ್ಲಿ ಕೃಷ್ಣನೊಂದಿಗಿನ ನಮ್ಮ ವ್ಯವಹಾರಗಳ ವಿಕೃತ ಪ್ರತಿಬಿಂಬವಾಗಿವೆ. ಆದರೆ ಆಧ್ಯಾತ್ಮಿಕ ಜಗತ್ತಿನ ಅರಿವಿಲ್ಲದ ನಿರಾಕಾರವಾದಿಗಳಿಗೆ ಕೃಷ್ಣನು ಸದಾ ಕಾರ್ಯ ಮಗ್ನ ಎಂಬುದು ತಿಳಿಯದು.
ಸನಾತನ, ಶಾಶ್ವತ ಧಾಮ
ಕೃಷ್ಣನು ಸನಾತನ, ಶಾಶ್ವತ, ಮತ್ತು ಭಕ್ತರೊಂದಿಗಿನ ಅವನ ವ್ಯವಹಾರವೂ ಸನಾತನ. ಮತ್ತು ಈ ವ್ಯವಹಾರಗಳು ಇಲ್ಲಿ ಸಾಧ್ಯವಿಲ್ಲ, ಆದರೆ ಸನಾತನ-ಧಾಮ, ಶಾಶ್ವತ ಜಗತ್ತಿನಲ್ಲಿ ಸಾಧ್ಯ. ಲೌಕಿಕ ಜಗತ್ತಿನಲ್ಲಿ ನಾವು ಕೃಷ್ಣನೊಂದಿಗೆ ಸನಾತನ ವ್ಯವಹಾರ ಮಾಡಲಾಗದು. ಆದುದರಿಂದ ಕೃಷ್ಣನು ಬದ್ಧಾತ್ಮಗಳಿಗೆ ತಿಳಿಸಲು ಬರುತ್ತಾನೆ, `ಶಾಶ್ವತ ಸಂತೋಷ, ಶಾಶ್ವತ ವ್ಯವಹಾರಗಳಿಗೆ ನನ್ನ ಶಾಶ್ವತ ಧಾಮಕ್ಕೆ ಬನ್ನಿ.’ ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ.

ಸ್ವಭಾವತಃ ಲೌಕಿಕ ಜಗತ್ತು ಶಾಶ್ವತವಲ್ಲ. ಐಹಿಕದಲ್ಲಿ ಪ್ರತಿಯೊಂದಕ್ಕೂ ಜನ್ಮದಿನವಿದೆ. ಹುಟ್ಟಿದ ದಿನ ಇರುವುದಕ್ಕೆ ಅಂತ್ಯದ ದಿನವೂ ಇರುತ್ತದೆ. ಅದು ಲೌಕಿಕ ಜಗತ್ತಿನ ಲಕ್ಷಣ.
ಇಲ್ಲಿಯೂ ನಾವು ಶಾಶ್ವತ ಉದ್ಯೋಗ, ಸನಾತನ ಧರ್ಮವನ್ನು ಅನುಸರಿಸಬಹುದು, ಅದರೆ ವಾಸ್ತವವಾಗಿ ಅದನ್ನು ಆಚರಿಸುವುದು ಆಧ್ಯಾತ್ಮಿಕ ಜಗತ್ತಿನಲ್ಲಿ. ಉದ್ಯೋಗದಲ್ಲಿ ಮೊದಲು ವ್ಯಕ್ತಿಗೆ ತರಬೇತಿ ನೀಡಿ ನಂತರ ಹುದ್ದೆ ಕೊಡಲಾಗುತ್ತದೆ. ಅದೇ ರೀತಿ, ಭಕ್ತಿ ಸೇವೆಯಲ್ಲಿ ಪೂರ್ಣ ತರಬೇತಿ ಹೊಂದಿದ ಭಕ್ತರು ಮೊದಲು ಕೃಷ್ಣನಿರುವ ಜಗತ್ತಿನಲ್ಲಿ ಜನ್ಮ ಪಡೆಯುವರು ಎಂದು ಸನಾತನ ಗೋಸ್ವಾಮಿ ಅವರು ವಿವರಿಸಿದ್ದಾರೆ.
ಆಕಾಶದಲ್ಲಿ ಸೂರ್ಯನು ಸದಾ ಉಪಸ್ಥಿತನಿರುವಂತೆ ಕೃಷ್ಣನು ಯಾವಾಗಲೂ ಎಲ್ಲೆಡೆ ಇರುತ್ತಾನೆ, ನಿಜ. ಸೂರ್ಯಾಸ್ತವಾಯಿತೆಂದರೆ, ಅವನು ನಮ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಆಗಸದಲ್ಲಿ ಇರುತ್ತಾನೆ. ಹಾಗೆಯೇ, ಕೃಷ್ಣ ಸದಾ ಉಪಸ್ಥಿತನಿರುತ್ತಾನೆ. ಅವನನ್ನು ನೋಡಲು ನಾವು ನಮ್ಮ ಕಣ್ಣುಗಳನ್ನು ಸಿದ್ಧಪಡಿಸಬೇಕು. ಹೇಗೆ? ಬ್ರಹ್ಮ ವಿವರಿಸುತ್ತಾನೆ;
ಪ್ರೇಮಾಂಜನ ಚ್ಛುರಿತ ಭಕ್ತಿ ವಿಲೋಚನೇನ
ಸಂತಃ ಸದೈವ ಹೃದಯೇಷು ವಿಲೋಕಯಂತಿ ।
ಯಂ ಶ್ಯಾಮಸುಂದರಂ ಅಚಿಂತ್ಯ ಗುಣ ಸ್ವರೂಪಂ
ಗೋವಿಂದಂ ಆದಿ ಪುರುಷಂ ತಂ ಅಹಂ ಭಜಾಮಿ ॥
ಕೃಷ್ಣನ ಬಗೆಗೆ ಪ್ರೀತಿ ವಾತ್ಸಲ್ಯ ಉಳ್ಳವರು ಮಾತ್ರ ಅವನನ್ನು ನೋಡುವುದು ಸಾಧ್ಯ. ಈಗಾಗಲೇ ಕೃಷ್ಣನನ್ನು ಪ್ರೀತಿಸುವ ಪ್ರವೃತ್ತಿ ಇದ್ದೇ ಇದೆ. ಆದರೆ ನಾವು ಆ ಪ್ರೀತಿಯ ಮನಸ್ಸನ್ನು ಮಾಯೆಗೆ ವರ್ಗಾಯಿಸಿ ಬಿಟ್ಟಿದ್ದೇವೆ. ಈ ಪ್ರೀತಿಯ ಮನಸ್ಸನ್ನು ಮಾಯೆಯಿಂದ ಪುನಃ ಕೃಷ್ಣನಲ್ಲಿಗೆ ತರುವುದೇ ಕೃಷ್ಣಪ್ರಜ್ಞೆಯ ಕಾರ್ಯ ಗತಿ. ಇದು ಕೃಷ್ಣಪ್ರಜ್ಞೆಯ ಸರಳ ವಿವರ. ನಮ್ಮಲ್ಲಿ ಕೃಷ್ಣನಿಗೆ ಪ್ರೀತಿ ಇದೆ, ಆದರೆ ಮಾಯೆಯ ಕಾರಣ ನಾವು ಕೃಷ್ಣನಲ್ಲದನ್ನು – ಮಾಯೆ, ಕೃಷ್ಣನ ಮಾಯೆ ಅಥವಾ ಭ್ರಮೆ – ಪ್ರೀತಿಸಲು ಪ್ರಯತ್ನಿಸುತ್ತಿದ್ದೇವೆ.
ಕೃಷ್ಣನ ಮಾಯೆ
ಕೃಷ್ಣ ಹೇಳುತ್ತಾನೆ, ಮಮ ಮಾಯಾ, `ಮಾಯಾ ಕೂಡ ನನ್ನದೆ.’ ಉದಾಹರಣೆಗೆ, ಮೋಡವು ಸೂರ್ಯನ ಸೃಷ್ಟಿ. ಅವನು ಸಮುದ್ರದ ನೀರನ್ನು ಆವಿಯಾಗಿಸುತ್ತಾನೆ. ಅನಂತರ ಆ ನೀರು ಮೋಡವಾಗುತ್ತದೆ. ಸೂರ್ಯನ ದರ್ಶನವಾಗಿಸದೆ ನಮ್ಮ ಕಣ್ಣುಗಳನ್ನು ಮುಚ್ಚುವುದು ಮೋಡದ ಕೆಲಸ. ಆದರೆ ಮೋಡಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ, ಸೂರ್ಯ ಹೆಚ್ಚು ಪ್ರಕಾಶಮಾನವಾದ ಕೂಡಲೇ ಮೋಡ ಮಾಯವಾಗುತ್ತದೆ. ಭೂತ್ತ್ವಾ ಭೂತ್ತ್ವಾ ಪ್ರಲೀಯತೇ : ಮೋಡವು ಬರುತ್ತದೆ, ಪುನಃ ಕಣ್ಮರೆಯಾಗುತ್ತದೆ. ಅದೇ ರೀತಿ ಮಾಯೆ, ಭ್ರಮೆ ಕೆಲವು ಬಾರಿ ಉತ್ಪತ್ತಿಯಾಗುತ್ತದೆ, ಅದು ಬರುತ್ತದೆ, ಹೋಗುತ್ತದೆ. ಮಾಯೆಯು ನಮ್ಮ ನೋಟವನ್ನು ಮುಚ್ಚುತ್ತದೆಯಷ್ಟೆ.

ಮೋಡವು ನಮ್ಮ ಕಣ್ಣುಗಳನ್ನು ಮುಚ್ಚುವುದಾದರೂ ಅದಕ್ಕೆ ಸೂರ್ಯನನ್ನು ಮುಚ್ಚಲಾಗದು. ಹಾಗೆಯೇ ಮಾಯೆಗೆ ಕೃಷ್ಣನನ್ನು ಸ್ಪರ್ಶಿಸಲಾಗದು. ಕೃಷ್ಣ ಇಲ್ಲಿಗೆ ಬಂದಾಗ ಅವನು ಮಾಯೆಯಿಂದ ಮುಚ್ಚಲ್ಪಟ್ಟಿರುತ್ತಾನೆ ಎಂದು ಮಾಯಾವಾದ ತತ್ತ್ವಶಾಸ್ತ್ರ ಹೇಳುತ್ತದೆ. ಅದು ಸರಿಯಲ್ಲ. ಮಾಯೆಗೆ ಕೃಷ್ಣನನ್ನು ಸ್ಪರ್ಶಿಸುವುದು ಸಾಧ್ಯವಿಲ್ಲ. ಶ್ರೀಮದ್ ಭಾಗವತವನ್ನು ಬರೆಯುವ ಮುನ್ನ ವ್ಯಾಸದೇವ ಶ್ರೀಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಾಗ ಅವರು ಕೃಷ್ಣ ಮತ್ತು ಮಾಯೆ ಇಬ್ಬರನ್ನೂ ಕಂಡರು. ಆದರೆ ಮಾಯೆ ಹಿಂಬದಿಯಲ್ಲಿ ಇದ್ದದ್ದು, ಮಾಯೆ ಕೃಷ್ಣನ ಮುಂದೆ ಬರಲಾಗದು. ಆದುದರಿಂದ ಕೃಷ್ಣನು ಎಂದಿಗೂ ಮಾಯೆಯಿಂದ ಮುಚ್ಚಲ್ಪಡುವುದಿಲ್ಲ. ನಮ್ಮ ಕಣ್ಣುಗಳಷ್ಟೇ ಮಾಯೆಯಿಂದ ಮುಚ್ಚಲ್ಪಟ್ಟಿರುತ್ತವೆ.
ಮಾಯೆಯ ಆಚೆಗೆ
ಹೀಗೆ, ಕೃಷ್ಣನ ಒಂದು ತುಣುಕಾದ ನಮ್ಮನ್ನು ಮಾಯೆ ಮುಚ್ಚಿರುತ್ತದೆ, ಆದರೆ ಕೃಷ್ಣನನ್ನು ಅಲ್ಲ. ಕೃಷ್ಣನು ಮಾಯೆಯ ನಿಯಂತ್ರಕ. ಮತ್ತು ನಾವು ಮಾಯೆಯಿಂದ ನಿಯಂತ್ರಿಸಲ್ಪಟ್ಟಿದ್ದೇವೆ. ಅದೇ ವ್ಯತ್ಯಾಸ. ಕೃಷ್ಣನು ಮಾಯಾಧೀಶ, ನಾವು ಮಾಯಾಧೀನ. ಆದರೂ ನಾವು ಮುಕ್ತರಾಗಬಹುದು. ವಿಮಾನವು ಮೋಡಗಳಾಚೆ ಹೋದಾಗ ಅಪಾರವಾಗಿ ಸೂರ್ಯನ ಬೆಳಕು ಲಭ್ಯ. ಏಕೆಂದರೆ ಮೋಡಗಳು ಕೆಳಗಿರುತ್ತವೆ. ಅದೇ ರೀತಿ ನೀವು ಮಾಯೆಯ ಆಚೆಗೆ ಹೋಗಬಹುದು. ನೀವು ಮಾಯೆಯನ್ನು ಮೀರಿ ಸದಾ ಕೃಷ್ಣನನ್ನು ನೋಡಬಹುದು. ಹೇಗೆ? ಮಾಂ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ : ನೀವು ಸುಮ್ಮನೆ ಕೃಷ್ಣನಿಗೆ ಶರಣಾಗಿ. ನೀವು ಮಾಯೆಯ ಅಧೀನದಲ್ಲಿ ಇಲ್ಲದಂತೆ ಅವನು ವ್ಯವಸ್ಥೆ ಮಾಡುತ್ತಾನೆ. ಅತ್ಯಂತ ಸರಳವಾದ ವಿಧಾನ. ಕೃಷ್ಣ ಹೇಳಿದಂತೆ ಮಾಡಿ – ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ : `ಎಲ್ಲ ಧರ್ಮಗಳನ್ನು ತ್ಯಜಿಸಿ ನನಗೆ ಶರಣಾಗು.’ ಇದೇ ಸನಾತನ ಧರ್ಮ.

ನಾವು ಪ್ರಭುವಿನ ಸೇವಕರಷ್ಟೆ. ಆದರೆ ಕೃತಕವಾಗಿ ನಾವು ಲೌಕಿಕ ಜಗತ್ತಿನ ಮಾಲೀಕರಾಗಲು ಪ್ರಯತ್ನಿಸುತ್ತಿದ್ದೇವೆ. ಆದುದರಿಂದಲೇ ನಮ್ಮನ್ನು ಇಲ್ಲಿಗೆ ಕಳುಹಿಸಿರುವುದು. ಕಾನೂನಿಗೆ ಕಿಂಚಿತ್ತೂ ಲಕ್ಷ್ಯ ಕೊಡದ ಕ್ರಾಂತಿಕಾರಿಗಳು ಕೆಲ ಸಮಯ ಗುಂಡೇಟಿಗೆ ಬಲಿಯಾದರೆ, ಕೆಲವು ಬಾರಿ ಬಂಧಿತರಾಗುತ್ತಾರೆ. ಅದೇ ರೀತಿ ಕೃಷ್ಣನಿಗೆ ಸ್ವಯಂ ಶರಣಾಗದವರನ್ನು ಐಹಿಕ ಲೋಕದ ಸೆರೆಮನೆಯಲ್ಲಿಡಲಾಗುವುದು. ಶರಣಾಗಲು ಅವರ ಮೇಲೆ ಒತ್ತಡ ತರಲಾಗುತ್ತದೆ.
ಮುಕ್ತರಾಗಿದ್ದೇವೆ ಎಂದು ನೀವು ತಪ್ಪಾಗಿ ಭಾವಿಸಿ, `ನಾನು ಈಗ ಮುಕ್ತ. ನಾನು ದೇವರಾಗಿರುವೆ’ ಎಂದುಕೊಂಡಾಗ ನೀವು ಮಾಯೆಯ ಅಂತಿಮ ಹಂತದಲ್ಲಿ ಸಿಲುಕುತ್ತೀರಿ. ನೀವು ದೇವರಾಗುವುದು ಹೇಗೆ ಸಾಧ್ಯ? ನಿಮಗೇನು ಸಾಮರ್ಥ್ಯವಿದೆ? ಭಗವಂತನು ಅಸಂಖ್ಯವಾದುದನ್ನು ಸೃಷ್ಟಿಸಿದ್ದಾನೆ. ನೀವು ಏನನ್ನು ಸೃಷ್ಟಿಸಿರುವಿರಿ? ದೇವರು ಅನೇಕ ವಸ್ತುಗಳನ್ನು ತೋರಿಸಿದ್ದಾನೆ. ನೀವೇನು ಮಾಡಿರುವಿರಿ?
ಆದರೂ, `ನಾನು ದೇವರು’ ಎಂದು ಜನರು ಭಾವಿಸುತ್ತಾರೆ. ಲೌಕಿಕ ಸ್ವಭಾವದಂತೆ ಎಲ್ಲರೂ ದೇವರಾಗಲು ಪ್ರಯತ್ನಿಸುತ್ತಾರೆ. ನಾವು ಯೋಚಿಸುತ್ತೇವೆ, `ನಾನು ಸಂಪುಟ ಸಚಿವನಾಗಬೇಕು, ನಾನು ರಾಷ್ಟ್ರಪತಿಯಾಗಬೇಕು, ನಾನು ಉದ್ಯಮಪತಿಯಾಗಬೇಕು.’ ಎಲ್ಲವೂ ವಿಫಲವಾದಾಗ ನಾವು ದೇವರಾಗಬೇಕೆಂದುಕೊಳ್ಳುತ್ತೇವೆ. ಅದೂ ಕೂಡ ಮಾಯೆ. ದೇವರಾಗುವುದು ಅಸಾಧ್ಯ.

ಕೃಷ್ಣನೊಂದಿಗೆ ನಮ್ಮ ಬಾಂಧವ್ಯವೆಂದರೆ ನಾವು ಅವನಿಗೆ ಸೇವೆ ಸಲ್ಲಿಸಬೇಕೆಂಬುದು. ಆದರೆ ನಾವು ನಮ್ಮ ನಿಜ ಸ್ಥಿತಿಯನ್ನು, ಸನಾತನ ಧರ್ಮವನ್ನು ಮರೆತಿದ್ದೇವೆ. ಸನಾತನ ಧರ್ಮ ಎಂದರೆ ಎಲ್ಲ ಜೀವಿಗಳೂ ಭಗವಂತನ ಒಂದು ಭಾಗ ಮತ್ತು ಅವನ ಸೇವೆಗೆಂದೇ ಇರುವುದು. ಬೆರಳು ನನ್ನ ದೇಹದ ಒಂದು ಭಾಗವಾಗಿರುವುದರಿಂದ ನನ್ನ ಆದೇಶವನ್ನು ಪಾಲಿಸುವುದು, ಇಡೀ ದೇಹದ ಸೇವೆಗೈಯುವುದು ಅದರ ಕೆಲಸ. ನನಗೆ ನನ್ನ ಬೆರಳು ತಲೆ ಮೇಲೆ ಬರಬೇಕೆಂದರೆ ಅದು ಅಲ್ಲಿಗೆ ಬರುತ್ತದೆ. ಅದೇ ರೀತಿ ನಮ್ಮ ಕೆಲಸವು ಕೃಷ್ಣ ಸೇವೆ. ಆದರೆ ಕೃಷ್ಣನಿಂದ ಸ್ವತಂತ್ರವಾಗಿ ನಾವೇ ದೇವರಾಗಬೇಕೆಂದಾಗ, ನಾವು ಮಾಯೆಯ ಹಿಡಿತದಲ್ಲಿ ಸಿಲುಕುತ್ತೇವೆ. `ಪ್ರೇಮ ವಿವರ್ತ’ ಹೇಳುತ್ತದೆ, `ಲೌಕಿಕವಾದುದನ್ನು ಸುಖಿಸಬೇಕೆಂದಾಗ ಜೀವಿಯು ತತ್ಕ್ಷಣ ಐಹಿಕ ಪ್ರಕೃತಿಗೆ ಬಲಿಯಾಗುತ್ತಾನೆ.’ ಕೃಷ್ಣನನ್ನು ಕೃತಕವಾಗಿ ಅನುಕರಣೆ ಮಾಡುವ ಆಸೆ ನಮಗೆ ಬಂದರೆ ಅದು ಮಾಯೆ. ನಾವೇ ಮಾಯೆಯ ಪರಿಸ್ಥಿತಿಯನ್ನು ಸೃಷ್ಟಿಸುತ್ತೇವೆ. `ನಾನು ದೇವರಾಗಬೇಕು, ನಾನು ಕೃಷ್ಣನಾಗಬೇಕು, ನಾನು ಭಗವಂತನಾಗಬೇಕು.’ ಇದೇ ಮಾಯೆ.
ಕೃಷ್ಣನು ಸನಾತನ, ಶಾಶ್ವತ. ನಾವೂ ಕೂಡ ಸನಾತನ. ಆದರೆ, ಕೃಷ್ಣನ ಸೇವೆಯನ್ನು ಮರೆತಾಗ ನಾವು ತಾತ್ಕಾಲಿಕ ವಸ್ತುಗಳ ಸೇವೆಗಯ್ಯುತ್ತೇವೆ. ಪುನಃ ನಾವು ನಮ್ಮನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸಿಕೊಂಡಾಗ ಸನಾತನ ಧರ್ಮಕ್ಕೆ ವಾಪಸಾಗುತ್ತೇವೆ.
ನಾವು ಸೇವಕರು
ಧರ್ಮ ಎಂದರೆ `ಗುಣ ಲಕ್ಷಣ ಅಥವಾ ಸ್ವಭಾವ ಸೂಚಕ.’ ಧರ್ಮವನ್ನು ಬದಲಿಸಲಾಗದು. ಸಕ್ಕರೆಯ ಲಕ್ಷಣವು ಸಿಹಿ ಮತ್ತು ಮೆಣಸಿನಕಾಯಿಯದು ಖಾರ. ಪ್ರತಿಯೊಂದಕ್ಕೂ ಅದರದೇ ಆದ ಗುಣ ಲಕ್ಷಣವಿದೆ. ಇದನ್ನೇ ಧರ್ಮ ಎನ್ನುವುದು. ಮೆಣಸಿನಕಾಯಿ ಖಾರವಾಗಿಲ್ಲದಿದ್ದರೆ ನೀವು ಅದನ್ನು ಬಿಸಾಡುತ್ತೀರಿ. ಏಕೆಂದರೆ ಮೆಣಸಿನಕಾಯಿಯ ಧರ್ಮ ಅಲ್ಲಿ ಲೋಪವಾಗಿದೆ.

ಆದುದರಿಂದ ಪ್ರತಿಯೊಂದಕ್ಕೂ ಅದರದೇ ಆದ ಗುಣ ಲಕ್ಷಣಗಳಿವೆ. ಜೀವಿಗಳಾದ ನಮಗೂ ಕೂಡ ನಮ್ಮದೇ ಗುಣ ಲಕ್ಷಣಗಳಿವೆ. ನಮ್ಮ ಲಕ್ಷಣವು ಭಗವಂತನ ಸೇವೆ. ದೇವರ ಸೇವೆ ಮಾಡದಿದ್ದರೆ ಆ ಗುಣ ಲಕ್ಷಣ ಹಾಗೇ ಉಳಿಯುತ್ತದೆ ಮತ್ತು ಮಾಲೀಕನಾದೆ ಎಂಬ ಭ್ರಮೆಯಲ್ಲಿ ಮಾಯೆಯ ಸೇವೆಯನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ವ್ಯಕ್ತಿಯ ಬಳಿ ಕಾರು ಇರುತ್ತದೆ. ಕಾರು ಕೊಳ್ಳಲು ಮತ್ತು ಅದರ ನಿರ್ವಹಣೆಗೆ ಅಪಾರವಾಗಿ ಹಣ ಬೇಕು. ಇದಕ್ಕಾಗಿ ಶ್ರಮಪಡಬೇಕು. ಆದರೆ ಆಗ ಅವನು ಯೋಚಿಸುತ್ತಾನೆ, `ಈಗ ನನ್ನ ಬಳಿ ಕಾರಿದೆ. ತುಂಬಾ ಒಳಿತಾಯ್ತು.’ ಆದರೂ ಅವನು ಕಾರಿನ ಸೇವೆ ಮಾಡುತ್ತಿರುತ್ತಾನೆ ಅಷ್ಟೇ.
ವ್ಯಕ್ತಿಯು ಸೇವಕ, ಮಾಲೀಕನಲ್ಲ. ಆದರೆ ತಾನು ಮಾಲೀಕನೆಂದು ಅವನು ಭಾವಿಸುತ್ತಾನೆ. ಇದು ಮಾಯೆ. ನಾವು ಮಾಲೀಕರೆಂಬ ಒಣ ಪ್ರತಿಷ್ಠೆಯನ್ನು ಬಿಟ್ಟರೆ ನಾವು ಮುಕ್ತರಾದಂತೆ. ಮಾಯೆಯ ಪ್ರಭಾವದಿಂದ ದೇಹಗಳನ್ನು ಬದಲಾಯಿಸಿಕೊಳ್ಳುತ್ತ ಲೌಕಿಕ ಜಗತ್ತಿನಲ್ಲಿ ನಾವು ಕಷ್ಟಪಡುತ್ತಿದ್ದೇವೆ. ಕೆಲ ಸಮಯ ಸ್ವರ್ಗ, ಕೆಲ ಸಮಯ ನರಕ ಗ್ರಹಗಳಿಗೆ ಹೋಗುತ್ತೇವೆ. ಕೆಲವು ಬಾರಿ ಶ್ರೀಮಂತ, ಕೆಲ ಸಮಯ ಬಡವ, ಬ್ರಾಹ್ಮಣ, ಶೂದ್ರ, ಹುಲಿ, ಮರ. ಹೀಗೆ ವಿಶ್ವದ ಎಲ್ಲೆಡೆ ಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದಾರೆ.
ಕೃಷ್ಣ ಹೇಳಿದ್ದಾನೆ,
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
ಮನಃಷಷ್ಠಾನೀನಿಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥
(ಭಗವದ್ಗೀತೆ, 15.7)
`ಎಲ್ಲ ಜೀವಿಗಳೂ ನನ್ನ ವಿಭಿನ್ನಾಂಶಗಳು. ಆದರೆ ಮೂರ್ಖತನದಿಂದ, ಬದ್ಧಜೀವನದಿಂದಾಗಿ ಮಾಲೀಕರಾಗಲು ಕಷ್ಟಪಡುತ್ತಿದ್ದಾರೆ.’
ಇದು ರೋಗ. ಲೌಕಿಕ ಸ್ವಭಾವದ ಪ್ರಕೃತಿಯು ಈ ಮೂರ್ಖರ ಕಿವಿಯನ್ನು ಎಳೆಯುತ್ತಿದೆ. ಐಹಿಕ ಪ್ರಕೃತಿಯು ಆದೇಶಿಸುತ್ತದೆ, `ಇದನ್ನು ಮಾಡು.’ ಆಗ ನಾನು ಮಾಡಬೇಕಾಗುತ್ತದೆ. ಅನಂತರ ಪ್ರಕೃತಿ ಹೇಳುತ್ತದೆ, `ಬಾ, ಈ ಹೊಲಸನ್ನು ತಿನ್ನು’ ಅವನು ತಿನ್ನುತ್ತಾನೆ. `ಓ ಎಷ್ಟು ಚೆನ್ನ’ ಇದು ಮಾಯೆ. ಹೊಲಸು ಚೆನ್ನಾಗಿರುವುದೇ? ಆದರೆ ಪ್ರಕೃತಿಯು ಹಂದಿಯ ಸ್ವಭಾವದ ದೇಹ ನೀಡಿರುತ್ತದೆ. ಹೀಗಾಗಿ ಅವನು ಆಸ್ವಾದಿಸುತ್ತಾನೆ. ಮಾನವ ರೂಪದ ಜೀವಗಳೂ ಕೂಡ ಹೊಟೇಲುಗಳಲ್ಲಿ ಅಸಂಬದ್ಧ ತಿನಿಸುಗಳನ್ನು ಆಸ್ವಾದಿಸುತ್ತಾರೆ. ಇದು ಮಾಯೆ.
ನಾವು ದೇಹವಲ್ಲ
ಸೇವೆಯೇ ನಮ್ಮ ಕರ್ತವ್ಯ. ಆದರೆ `ಕೃಷ್ಣನಿಗೆ ಸೇವೆ ಸಲ್ಲಿಸಲು ನನಗೆ ಇಷ್ಟವಿಲ್ಲ’ ಅಥವಾ `ನಾನೇ ಕೃಷ್ಣ’ ಎಂಬ ಧೋರಣೆ ತೋರುವವರು ತತ್ಕ್ಷಣ ಮಾಯೆಯ ಹಿಡಿತದಲ್ಲಿ ಸಿಲುಕುತ್ತಾರೆ. ಮತ್ತು ಮಾಯೆಯ ಭ್ರಮೆಯಲ್ಲಿ ನಾವು ಲೌಕಿಕ ಸ್ವರೂಪದ ಭಿನ್ನ ಗುಣಗಳೊಂದಿಗೆ ಸಹವಾಸ ಮಾಡುತ್ತೇವೆ. ಆದುದರಿಂದ ನಾವು ಜನ್ಮ ತಾಳಬೇಕು. ಸದ್ ಅಸದ್ ಯೋನಿ ಜನ್ಮಸು. ವ್ಯಕ್ತಿ ಹಂದಿ, ನಾಯಿ, ಮಾನವ ಜೀವಿ, ದೇವತೆ, ಮರ, ಗಿಡ 84 ಲಕ್ಷ ಜೀವಜಾತಿಗಳಲ್ಲಿ ಏನು ಬೇಕಾದರೂ ಆಗಬಹುದು. ಕೃಷ್ಣ ಹೇಳುತ್ತಾನೆ, `ಸರ್ವ ಯೋನಿಷು ಕೌಂತೇಯ… ಅಹಂ ಬೀಜ ಪ್ರದಃ ಪಿತಾ’ `ಈ ಎಲ್ಲ ರೂಪಗಳಲ್ಲಿ – ಅವು ಏನೇ ಆಗಿರಲಿ, ನಾನು ಪಿತಾ.’

ಹಾಗಾದರೆ, ಕೃಷ್ಣನು ಎಲ್ಲ ಜೀವಿಗಳ ಮೂಲ ಪಿತೃವಾದರೆ ವ್ಯಕ್ತಿಗಳೇಕೆ ಬ್ರಾಹ್ಮಣ, ಶೂದ್ರ, ಮರ, ಹುಲಿ, ಹಂದಿ, ಇಂದ್ರ, ಬ್ರಹ್ಮ ಆಗುತ್ತಾರೆ? ಪ್ರಕೃತಿಯ ವಿವಿಧ ಅಂಶಗಳ ಸಹವಾಸ ಮಾಡುವುದರಿಂದ ನಮಗೆ ವಿವಿಧ ದೇಹಗಳಲ್ಲಿ ಜನ್ಮ ಉಂಟಾಗುತ್ತದೆ. ನನ್ನ ಮನಸ್ಸು ನನ್ನನ್ನು ಮುಂದಿನ ದೇಹಕ್ಕೆ ಒಯ್ಯುತ್ತದೆ. `ಈ ಮನುಷ್ಯ ಈಗ ಸತ್ತಿದ್ದಾನೆ. ಎಲ್ಲವೂ ಮುಗಿದಂತೆ’, ಎನ್ನುವುದು ಮೂರ್ಖತನ. ಅವನು ಮುಗಿದಿಲ್ಲ, ಅವನ ಬದುಕು ಸಾಗುತ್ತಲೇ ಇರುತ್ತದೆ. ದೊಡ್ಡ ಪ್ರಾಧ್ಯಾಪಕರು ಹೇಳುತ್ತಾರೆ, `ಸ್ವಾಮೀಜಿ, ಸಾವಿನ ನಂತರ ಎಲ್ಲವೂ ಮುಗಿದಂತೆ.’ ನೋಡಿ, ಹೇಗಿದೆ – ಮೂರ್ಖರು ನಾಯಕ, ಪ್ರಾಧ್ಯಾಪಕ, ರಾಜಕಾರಣಿಯಾಗುತ್ತಿದ್ದಾರೆ. ಸದಾ ಮೂರ್ಖತನದತ್ತ ಒಯ್ದಾಗ ಮತ್ತು ಕೃಷ್ಣನ ಶಕ್ತಿಯ ಬಾಹ್ಯ ಲಕ್ಷಣಗಳಿಂದ ಆಕರ್ಷಿತರಾದಾಗ ಜನರು ಸಂತೋಷದಿಂದಿರುವುದು ಹೇಗೆ ಸಾಧ್ಯ?
ಲೌಕಿಕ ಜಗತ್ತು ಕೂಡ ಕೃಷ್ಣನ ಶಕ್ತಿ. ಆದರೆ ನಾವು ಆಧ್ಯಾತ್ಮಿಕದತ್ತ ಆಕರ್ಷಿತರಾಗಬೇಕಾದಾಗ ಐಹಿಕ ಶಕ್ತಿಯತ್ತ ಆಕರ್ಷಿತರಾಗುತ್ತಿದ್ದೇವೆ. ಭಗವದ್ಗೀತೆಯಲ್ಲಿ ವಿವರಿಸಿರುವಂತೆ ಅಪರಾ (ಕೆಳ ಮಟ್ಟ) ಮತ್ತು ಪರಾ (ಮೇಲ್ಮಟ್ಟ) ಶಕ್ತಿಗಳೆರಡೂ ಕೃಷ್ಣನದೇ. ಆದರೆ ನಾವು ಈಗ ಅಪರಾ ಶಕ್ತಿಯ ಲೌಕಿಕ ಅಂಶಗಳಿಂದ ಆಕರ್ಷಿತರಾಗಿದ್ದೇವೆ: ಭೂಮಿರ್ ಆಪೋ ಅನಲೋ ವಾಯುಃ – ಭೂಮಿ, ಜಲ, ಬೆಂಕಿ, ಗಾಳಿ. ಲೌಕಿಕ ಶಕ್ತಿಯಿಂದ ಆಕರ್ಷಿತರಾಗುವುದರಿಂದ, ಕಲ್ಲಿನ ಮನೆ ನಿರ್ಮಿಸಿದಾಗ ನಾವು ಯೋಚಿಸುತ್ತೇವೆ, `ಈಗ ನನ್ನ ಜೀವನ ಸಾರ್ಥಕವಾಯಿತು. ನನ್ನ ಬಳಿ ಸುಂದರವಾದ ಕಲ್ಲಿನ ಮನೆ ಇದೆ.’ ನಾನು ಕಲ್ಲೇ? ಇಲ್ಲ. ಆದರೂ ನನಗೆ ಕಲ್ಲಿನ ಆಕರ್ಷಣೆ. ಆದುದರಿಂದ ಕೃಷ್ಣನು ನನಗೆ ಸೌಲಭ್ಯ ನೀಡುತ್ತಾನೆ, `ಸರಿ, ಕಲ್ಲು ತೆಗೆದುಕೋ, ಸಂತೋಷದಿಂದಿರು. ಆದರೆ ನೀನು ಎಂದಿಗೂ ಸುಖದಿಂದ ಇರಲಾರೆ. ನನಗೆ ಶರಣಾದಾಗ ಮಾತ್ರ ನೀನು ಸಂತೋಷದಿಂದ ಇರುವೆ.’
ಉದಾಹರಣೆಗೆ: ತಂದೆಯು ಮಗುವಿಗೆ ಆಟವಾಡಲು ಎಲ್ಲ ಸೌಕರ್ಯಗಳನ್ನು ಕೊಡುತ್ತಾನೆ. ಆದರೆ ಅದೇ ಸಮಯ ಅವನು ಹೇಳುತ್ತಾನೆ, `ಮಗು ಹೀಗೆ ಆಡಬೇಡ, ಇದು ಒಳ್ಳೆಯದಲ್ಲ’ ಆದರೆ ಮಗುವು ಹಟ ಮಾಡುವುದರಿಂದ ತಂದೆ ಕೆಲವೊಮ್ಮೆ `ಸರಿ, ಆಟವಾಡು’ ಎಂದು ಹೇಳುತ್ತಾನೆ.
ಅದೇ ರೀತಿ ನಾವು ಈ ಲೌಕಿಕ ಜಗತ್ತಿಗೆ ಬಂದು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದಿಂದ ಆಕರ್ಷಿತರಾಗಬೇಕೆಂದು ಕೃಷ್ಣ ಬಯಸುವುದಿಲ್ಲ. ನಾವು ದೊಡ್ಡ ವಿಜ್ಞಾನಿಗಳಾಗಿ ಈ ಐದು ಅಂಶಗಳ ಸಂಯೋಜನೆ ಮಾಡಬೇಕೆಂದೂ ಅವನು ಇಚ್ಛಿಸುವುದಿಲ್ಲ. ಏನು ಈ ಜಗತ್ತು? ತೇಜೋ ವಾರಿ ಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಅಮೃಷಾ ಈ ಪ್ರಪಂಚವು ಬೆಂಕಿ, ಭೂಮಿ, ಗಾಳಿ, ನೀರು ಮತ್ತು ಆಕಾಶದ ಸಂಯೋಜನೆ. ಇದು ಮಿಥ್ಯವಾದದ್ದು.
ಈ ವಿಶ್ವವು ಈ ಐದು ಅಂಶಗಳ ಸಂಯೋಜನೆಯಾಗಿರುವಂತೆ ನಮ್ಮ ದೇಹ ಕೂಡ ಈ ಐದು ವಸ್ತುಗಳ ಸಂಯೋಜನೆಯಾಗಿದ್ದು ನಾವು ಅದಕ್ಕೆ ಆಕರ್ಷಿತರಾಗಿದ್ದೇವೆ. `ಓ, ನನ್ನದು ಎಂತಹ ಸುಂದರ, ಶಕ್ತಿಶಾಲಿ ದೇಹ – ಅಮೆರಿಕ, ಭಾರತೀಯ, ಬ್ರಾಹ್ಮಣ, ಈ ದೇಹ ಆ ದೇಹ.’ ಎಲ್ಲ ಮಾಯೆ. ಇಂತಹ ದೈಹಿಕ ಸಿದ್ಧಾಂತದ ಬದುಕಿನಿಂದ ನೀವು ಎಂದಿಗೂ ಸುಖ ಸಂತೋಷದಿಂದ ಇರಲಾಗದು.
ಈ ಅಂಶವನ್ನು ಕೃಷ್ಣ ಪರೋಕ್ಷವಾಗಿ ವಿವರಿಸುತ್ತಾನೆ, `ಅಚ್ಛೇದ್ಯೋ ಅಯಂ ಅದಾಹ್ಯೋ ಅಯಮಕ್ಲೇದೋ ಅಶೋಷ್ಯ ಏವ ಚ’ ಅಂದರೆ, `ಜೀವಾತ್ಮನನ್ನು ಮುರಿಯಲಾಗದು, ನೀರಿನಲ್ಲಿ ಕರಗಿಸಲಾಗದು, ಸುಡಲೂ ಆಗದು ಮತ್ತು ಒಣಗಿಸಲೂ ಸಾಧ್ಯವಿಲ್ಲ.’ ದೇಹವು ಸುಟ್ಟು ಬೂದಿಯಾಗುವುದರಿಂದ ನಾವು ದೇಹವಾಗುವುದು ಹೇಗೆ?

ಮೂರು ವಸ್ತುಗಳಿಂದ ದೇಹವಾಗಿದೆ: ಪಿತ್ಥ, ಲೋಳೆ ಮತ್ತು ವಾಯು. ಅದು ಮೂಳೆ, ಮಾಂಸ ಮತ್ತು ರಕ್ತದ ಚೀಲ. `ನಾನೇ ದೇಹ’ ಎಂದು ಯಾರಾದರೂ ಯೋಚಿಸಿದರೆ, ಅವನು ಗೋ ಖರಃ ಹಸು ಅಥವಾ ಕತ್ತೆ. ದೈಹಿಕ ಸಿದ್ಧಾಂತದ ಬದುಕಿನಲ್ಲಿರುವವರು ಪ್ರಾಣಿ. ಮತ್ತು ಪ್ರಾಣಿಯಾದವರಿಂದ ನೀವು ಜ್ಞಾನವನ್ನು ಹೇಗೆ ಪಡೆಯುವಿರಿ? ಹಸು ಅಥವಾ ಕತ್ತೆಗಳಿಂದ ಜ್ಞಾನ ಪಡೆಯುವುದು ಸಾಧ್ಯವೇ?
ಮುಕ್ತವಾಗಿ ಹೇಳಬೇಕೆಂದರೆ, ವಾಸ್ತವವಾಗಿ ಎಲ್ಲರೂ ದೇಹಾತ್ಮ ಬುದ್ಧಿಯಲ್ಲಿರುವವರೇ. ಆದುದರಿಂದ ಆಧುನಿಕ ನಾಗರಿಕತೆಯು ಪ್ರಾಣಿ ನಾಗರಿಕತೆ, ಮಾನವ ನಾಗರಿಕತೆಯಲ್ಲ. `ನಾನು ಈ ದೇಹವಲ್ಲ. ನಾನು ಆತ್ಮ (ಅಹಂ ಬ್ರಹ್ಮಾಸ್ಮಿ)‘ ಎಂಬುದನ್ನು ಅರ್ಥಮಾಡಿಕೊಂಡಾಗ ಮಾನವ ನಾಗರಿಕತೆ ಶುರುವಾಗುತ್ತದೆ. ಜನರು ಎಲ್ಲಿಯವರೆಗೆ ದೇಹಾತ್ಮ ಬುದ್ಧಿಯಲ್ಲಿರುತ್ತಾರೋ ಅಲ್ಲಿಯವರೆಗೆ ಬೆಕ್ಕು, ನಾಯಿಗಳ ನಾಗರಿಕತೆ ಇರುತ್ತದೆ. ಅಷ್ಟೆ.






Leave a Reply