ಶ್ರೀಮತಿ ರಾಧಾರಾಣಿ

ಕೃಷ್ಣನ ಆನಂದ ಶಕ್ತಿ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು ರಾಧಾರಾಣಿ ಆವಿರ್ಭವಿಸಿದ
ಸುಸ್ಮರಣೆಯಾಗಿ ಸೆಪ್ಟೆಂಬರ್‌ 18, 1969 ರಂದು ಲಂಡನ್ನಿನಲ್ಲಿ ನೀಡಿದ ಉಪನ್ಯಾಸ

ಇಂದು ರಾಧಾಷ್ಟಮಿ, ರಾಧಾರಾಣಿ ಆವಿರ್ಭವಿಸಿದ ದಿನ. ಕೃಷ್ಣ ಜನ್ಮ ತಳೆದ 15 ದಿನಗಳ ಅನಂತರ ರಾಧಾರಾಣಿ ಅವತರಿಸಿದಳು. ರಾಧಾರಾಣಿಯು ಕೃಷ್ಣನ ಆನಂದ ಶಕ್ತಿ. ರಾಧಾ ಕೃಷ್ಣ ಪ್ರಣಯ ವಿಕೃತಿರ್‌ ಹ್ಲಾದಿನಿ ಶಕ್ತಿಃ. ವೈದಿಕ ಸಾಹಿತ್ಯದಲ್ಲಿ ಸ್ಪಷ್ಟಪಡಿಸಿರುವಂತೆ – ಪರಾಸ್ಯ ಶಕ್ತಿರ್‌ ವಿವಿಧೈವ ಶ್ರೂಯತೇ – ದೇವೋತ್ತಮ ಪರಮ ಪುರುಷನಿಗೆ ವೈವಿಧ್ಯಮಯವಾದ ಶಕ್ತಿಗಳಿವೆ.

ಸ್ವತಃ ದೇವೋತ್ತಮನಿಗೆ ಮಾಡುವುದು ಏನೂ ಇಲ್ಲ. ನ ತಸ್ಯ ಕಾರ್ಯಂ. ಇಲ್ಲಿ, ಲೌಕಿಕದಲ್ಲಿ, ರಾಜಕಾರಣಿಗಳಿಗೆ ಅಥವಾ ದೊಡ್ಡ ಉದ್ಯಮಿಗಳಿಗೆ ತಾವೇ ಏನೂ ಮಾಡಲಿರುವುದಿಲ್ಲ, ಏಕೆಂದರೆ ಅವರಿಗೆ ಅನೇಕ ಸಹಾಯಕರಿರುತ್ತಾರೆ. ಅದೇ ರೀತಿ, ಆರು ವೈಭವ, ಸಿರಿ ಸಂಪತ್ತು ಹೊಂದಿರುವ ಕೃಷ್ಣನು ಸ್ವತಃ ಏನಾದರೂ ಮಾಡಬೇಕೇ? ಇಲ್ಲ. ಅವನಿಗೆ ಅನೇಕ ಸಹಾಯಕರಿದ್ದಾರೆ.

ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಸರ್ವತಃ ಪಾಣಿಪಾದಂ ತತ್‌ – “ಎಲ್ಲೆಡೆ ಭಗವಂತನ ಹಸ್ತ, ಪಾದಗಳಿವೆ.” ಕೃಷ್ಣನಿಗೆ ಮಾಡಲು ಏನೂ ಇಲ್ಲ ಎಂದು ನೀವು ಕಂಡುಕೊಳ್ಳುವಿರಿ. ಅವನು ಗೋಪಿಯರ ಮತ್ತು ರಾಧಾರಾಣಿ ಜೊತೆ ಆನಂದಿಸುತ್ತಿದ್ದಾನೆ. ಅವನು ರಾಕ್ಷಸರನ್ನು ಕೊಲ್ಲುತ್ತಿಲ್ಲ. ಅಸುರರನ್ನು ಕೊಲ್ಲುವ ಕೃಷ್ಣನು ವಾಸುದೇವ ಕೃಷ್ಣ. ಅವನು ಮೂಲ ಕೃಷ್ಣನಲ್ಲ. ಕೃಷ್ಣ ವಿಸ್ತರಿಸಿಕೊಳ್ಳುತ್ತಾನೆ. ಮೊದಲನೆಯ ವಿಸ್ತರಣೆ ಬಲದೇವ. ಬಲದೇವನಿಂದ ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಮತ್ತು ವಾಸುದೇವ. ತನ್ನ ವಾಸುದೇವ ರೂಪದಲ್ಲಿ ಕೃಷ್ಣನು ಮಥುರ ಮತ್ತು ದ್ವಾರಕಾಗಳಲ್ಲಿ ಲೀಲೆಗಳನ್ನು ತೋರುತ್ತಾನೆ. ಆದರೆ ತನ್ನ ಮೂಲ ರೂಪದಲ್ಲಿ, ವೃಂದಾವನದಲ್ಲಿ ಉಳಿಯುತ್ತಾನೆ.

ವೃಂದಾವನದ, ದ್ವಾರಕೆಯ ಮತ್ತು ಮಥುರಾದ ಕೃಷ್ಣ ಬೇರೆ ಬೇರೆ ವ್ಯಕ್ತಿಗಳೆಂದು ಬಂಗಾಳದ ಸುಪ್ರಸಿದ್ಧ ಸಾಹಿತಿ ಬಂಕಿಮಚಂದ್ರ ಚಟರ್ಜಿ ತಪ್ಪಾಗಿ ಭಾವಿಸಿದ್ದರು. ಕೃಷ್ಣ ಒಂದೇ, ಆದರೆ ಅವನು ಲಕ್ಷಾಂತರ ಕೋಟ್ಯಂತರ ರೂಪದಲ್ಲಿ ವಿಸ್ತರಿಸಬಹುದು. ಅದ್ವೈತಂ ಅಚ್ಯುತಂ ಅನಾದಿಂ ಅನಂತ ರೂಪಂ. ಅವನಿಗೆ ಅಸೀಮಿತ-ಅನಂತ ರೂಪಗಳಿದ್ದರೂ ಅವನು ಅದ್ವೈತ : ಕೃಷ್ಣ ಮತ್ತು ಅವನ ಇತರ ರೂಪಗಳಲ್ಲಿ ವ್ಯತ್ಯಾಸವಿಲ್ಲ.

ಕೃಷ್ಣನಿಗೆ ಆನಂದಿಸಬೇಕೆಂದಿದ್ದರೆ ಅದು ಯಾವ ರೀತಿಯದು? ಶ್ರೀಲ ಜೀವ ಗೋಸ್ವಾಮಿ ಅವರು ಇದನ್ನು ಚರ್ಚಿಸಿದ್ದಾರೆ. ಕೃಷ್ಣನು ಪರಮ ಬ್ರಹ್ಮನ್‌, ಪರಮ ಸತ್ಯ. ಪರಮ ಸತ್ಯದಲ್ಲಿ ಮೂರು ರೂಪಗಳಿವೆ : ಬ್ರಹ್ಮನ್‌, ಪರಮಾತ್ಮ ಮತ್ತು ಭಗವಾನ್‌. ತಮ್ಮ ಮಾನಸಿಕ ಊಹಾಪೋಹ, ತಮ್ಮ ಜ್ಞಾನದಿಂದ ಪರಮ ಸತ್ಯವನ್ನು ಅಥರ್ಮಾಡಿಕೊಳ್ಳಲು ಪ್ರಯತ್ನಿಸುವ ಜ್ಞಾನಿಗಳು ಪರಮ ಸತ್ಯವನ್ನು ನಿರಾಕಾರ ಬ್ರಹ್ಮನ್‌ ಎಂದು ಅರಿತುಕೊಳ್ಳುತ್ತಾರೆ. ಮತ್ತು ಧ್ಯಾನದಿಂದ ಪರಮ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಯೋಗಿಗಳು ಪರಮ ಸತ್ಯವನ್ನು ಪರಮಾತ್ಮನೆಂದು ಅರಿತುಕೊಳ್ಳುತ್ತಾರೆ.

ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿರುವ ಪರಾತ್ಪರನ ರೂಪ ಪರಮಾತ್ಮ. ಈಶ್ವರಃ ಸರ್ವ ಭೂತಾನಾಂ ಹೃದ್ದೇಶೇ ಅರ್ಜುನ ತಿಷ್ಠತಿ. ಮತ್ತು ಆ ಪರಮಾತ್ಮ ರೂಪವು ದೇವೋತ್ತಮ ಪರಮ ಪುರುಷ ಭಗವಾನ್‌ನ ವಿಸ್ತೃತ ರೂಪ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ,

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।

ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್‌ ॥

ಅರ್ಜುನನು ಕೃಷ್ಣನ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆಗ ಕೃಷ್ಣ 10ನೇ ಅಧ್ಯಾಯದಲ್ಲಿ ವಿವರಿಸಿದ, “ಋತುಗಳಲ್ಲಿ ನಾನು ವಸಂತ, ನದಿಗಳಲ್ಲಿ ನಾನು ಗಂಗಾ, ಮೃಗಗಳಲ್ಲಿ ನಾನು ಸಿಂಹ, ಮಾನವರಲ್ಲಿ ನಾನು ರಾಜ…” ಮತ್ತು ಕೃಷ್ಣ ಸಮಾಪ್ತಗೊಳಿಸಿದ, “ಎಲ್ಲಿಯವರೆಗೆ ನಾನು ಸಾಗಬೇಕು? ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು, ನನ್ನ ಒಂದೇ ಅಂಶದಿಂದ ನಾನು ಇಡೀ ವಿಶ್ವವನ್ನು ವ್ಯಾಪಿಸಿ ಧರಿಸಿದ್ದೇನೆ.”

ಕೃಷ್ಣನ ಒಂದೇ ಅಂಶದಿಂದ ಲೌಕಿಕ ಜಗತ್ತು ಅಸ್ತಿತ್ವದಲ್ಲಿದೆ. ಮತ್ತು ಕೃಷ್ಣನು ವಿಶ್ವದೊಳಗೆ ಪ್ರವೇಶಿಸುತ್ತಾನೆ : ಅಂಡಾಂತರಸ್ಥಂ ಪರಮಾಣು ಚಯಾಂತರಸ್ಥಂ. ಹೇಗೆ ದೇಹದೊಳಗೆ ಆತ್ಮದ ಪ್ರವೇಶವಿಲ್ಲದೆ ದೇಹಕ್ಕೆ ಅಸ್ತಿತ್ವವಿಲ್ಲವೋ ಹಾಗೆ ಕೃಷ್ಣನ ಪ್ರವೇಶವಿಲ್ಲದೆ ವಿಶ್ವದ ಅಸ್ತಿತ್ವ ಇಲ್ಲ . ಆತ್ಮವು ದೇಹದಿಂದ ನಿರ್ಗಮಿಸಿದ ಕೂಡಲೇ ದೇಹ ನಿರುಪಯುಕ್ತ. ದೇಹವು ಪ್ರಧಾನಿಯದೇ ಆಗಿರಬಹುದು, ಆತ್ಮವು ಅದರಿಂದ ಹೊರಬಂದ ಮೇಲೆ ಅದು ನಿಷ್ಪ್ರಯೋಜಕ. ಅದೇ ರೀತಿ, ಕೃಷ್ಣ ಪ್ರವೇಶಿಸುವುದರಿಂದ ವಿಶ್ವಕ್ಕೆ ಒಂದು ಮೌಲ್ಯ, ಇಲ್ಲವಾದರೆ ಅದು ವಸ್ತುಗಳ ರಾಶಿ.

ಆದುದರಿಂದ ಕೃಷ್ಣನಿಗೆ ಸುಖಿಸಬೇಕೆಂದಿದ್ದರೆ ಅದು ಯಾವ ರೀತಿಯದು? ಇದನ್ನು ಶ್ರೀಲ ಜೀವ ಗೋಸ್ವಾಮಿ ಅವರು ಚರ್ಚಿಸಿದ್ದಾರೆ. ಕೃಷ್ಣನು ಪರಮ ಶ್ರೇಷ್ಠ. ದೇವರು ಶ್ರೇಷ್ಠ, ಅದು ಎಲ್ಲರಿಗೂ ಗೊತ್ತು. ಆದುದರಿಂದ ಶ್ರೇಷ್ಠನು ಆನಂದಿಸಬೇಕೆಂದರೆ ಅವನ ಆನಂದದ ಗುಣ ಎಷ್ಟಿರುತ್ತದೆ? ಅದನ್ನು ಅರ್ಥಮಾಡಿಕೊಳ್ಳಬೇಕು.

ಆದುದರಿಂದ ಸ್ವರೂಪ ದಾಮೋದರ ಗೋಸ್ವಾಮಿ ಬರೆದಿದ್ದಾರೆ : ರಾಧಾ ಕೃಷ್ಣ ಪ್ರಣಯ ವಿಕೃತಿಃ. ರಾಧಾ ಕೃಷ್ಣರ ನಡುವಿನ ಪ್ರೇಮವು ಸಾಮಾನ್ಯವಾದುದಲ್ಲ. ಅದು ಲೌಕಿಕ ಪ್ರೇಮ ವ್ಯವಹಾರದಂತೆ ಕಂಡರೂ ಅದು ಹಾಗೆ ಅಲ್ಲ. ಅವಜಾನಂತಿ ಮಾಂ ಮೂಢಃ : ಮೂರ್ಖರು ಮತ್ತು ಅಜ್ಞಾನಿಗಳು ಕೃಷ್ಣ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ತಪ್ಪಾಗಿ ತಿಳಿಯುತ್ತಾರೆ. ಅವರಿಗೆ ಕೃಷ್ಣನ ಅಲೌಕಿಕ ಲಕ್ಷಣಗಳು ಗೊತ್ತಿಲ್ಲ. ಗೋಪಿಯರೊಂದಿಗೆ ಕೃಷ್ಣನ ನೃತ್ಯ, ರಾಸಲೀಲೆಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಅಂತಹ ಅನೇಕ ಮೂರ್ಖರಿದ್ದಾರೆ.    ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್‌ ಯತತಿ ಸಿದ್ಧಯೇ ।

ಯತತಾಮಪಿ ಸಿದ್ಧಾನಾಂ ಕಶ್ಚಿನ್‌ ಮಾಂ ವೇತ್ತಿ ತತ್ತ್ವತಃ ॥

ಪ್ರಾಣಿ, ಹಂದಿ ಬದುಕು

ಲಕ್ಷಾಂತರ ಜನರಲ್ಲಿ ಒಬ್ಬನು ತನ್ನ ಬದುಕಿನ ಪರಿಪೂರ್ಣತೆಗಾಗಿ ಪ್ರಯತ್ನಿಸಬಹುದು. ಹೆಚ್ಚು ಜನರು ಪ್ರಾಣಿಗಳಂತೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಪ್ರಾಣಿಗಳಲ್ಲಿ ಪರಿಪೂರ್ಣತೆಯ ಪ್ರಶ್ನೆಯೇ ಇಲ್ಲ. ಪ್ರಾಣಿಗಳ ಒಲವುಗಳೆಂದರೆ ಉಣ್ಣುವುದು, ಮಲಗುವುದು, ಸಂಭೋಗಿಸುವುದು ಮತ್ತು ರಕ್ಷಿಸಿಕೊಳ್ಳುವುದು. ಮತ್ತು ದುರದೃಷ್ಟವಶಾತ್‌ ಬಹುತೇಕ ಮಾನವ ಜೀವಿಗಳೂ ಪ್ರಾಣಿಗಳಂತೆ ಇದ್ದಾರೆ. ಅವರಿಗೆ ಬೇರೆ ವ್ಯವಹಾರಗಳಿಲ್ಲ. ಅವರು ಹಂದಿಗಳಂತೆ. ಹಂದಿಗಳು ಸದಾ `ಮಲ ಎಲ್ಲಿ? ಮಲ ಎಲ್ಲಿ?’ ಎಂದು ಹುಡುಕುತ್ತವೆ. ಅದು ಸಿಕ್ಕ ಕೂಡಲೇ ಅದನ್ನು ತಿಂದು ಕೊಬ್ಬುತ್ತವೆ. ಅನಂತರ, `ಸಂಭೋಗ, ಸಂಭೋಗ’ ಎನ್ನುತ್ತವೆ. ಅವುಗಳು ತಮ್ಮ ಸಂಗಾತಿ ತಾಯಿಯೇ, ತಂಗಿಯೇ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಹಂದಿಯ ಬದುಕು. ಮಾನವ ಜೀವನವು ಹಂದಿ ನಾಗರಿಕತೆಯಲ್ಲ. ಆದರೆ ಆಧುನಿಕ ನಾಗರಿಕತೆಯು ಹಂದಿ ನಾಗರಿಕತೆಯಾಗಿದೆ. ಆದರೆ ಇದು ಸ್ವಲ್ಪ ನಯ ಹಾಗೂ ಸಂಸ್ಕೃತಿ ಉಳ್ಳದ್ದಾಗಿ ತೋರುತ್ತದೆ. ಏಕೆಂದರೆ ಈ ಹಂದಿ ಶರ್ಟ್‌ ಮತ್ತು ಕೋಟ್‌ ತೊಡುತ್ತದೆ.

ಅದಕ್ಕೆ ಪ್ರತಿಯಾಗಿ, ಕೃಷ್ಣ ಪ್ರಜ್ಞೆ ಆಂದೋಲನವು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದಾಗಿದೆ. ಇದಕ್ಕೆ ಸ್ವಲ್ಪ ದುಡಿಮೆ, ನೇಮ ನಿಷ್ಠೆ ಮತ್ತು ತಪಸ್ಸು ಅಗತ್ಯ. ತಪಸಾ ಬ್ರಹ್ಮಚರ್ಯೇಣ ಶಮೇನ ಚ ದಮೇನ ಚ. ವ್ಯಕ್ತಿಯು ತಪಸ್ಸು ಮತ್ತು ಬ್ರಹ್ಮಚರ್ಯದಲ್ಲಿ ತೊಡಗಿಕೊಳ್ಳಬೇಕು. ಬ್ರಹ್ಮಚರ್ಯ ಎಂದರೆ ಲೈಂಗಿಕ ಬದುಕಿಗೆ ತಡೆ ಅಥವಾ ನಿಯಂತ್ರಣ. ಬ್ರಹ್ಮಚಾರಿಯಾಗದೆ, ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸದಿದ್ದರೆ ಯಾರಿಗೂ ಆಧ್ಯಾತ್ಮಿಕ ಬದುಕು ಅರ್ಥವಾಗದು. ಮೊದಲು, ವೈದಿಕ ನಾಗರಿಕತೆಯಲ್ಲಿ, ಬಾಲಕರಿಗೆ ಬ್ರಹ್ಮಚಾರಿಗಳಾಗಲು ಆರಂಭದಿಂದಲೆ ತರಬೇತಿ ನೀಡಲಾಗುತ್ತಿತ್ತು. 10, 12 ವರ್ಷದ ಬಾಲಕ ಬಾಲಕಿಯರು ಜತೆಗೂಡಿ ಆನಂದಿಸುವ ಆಧುನಿಕ ದಿನದಂತೆ ಆಗಿರಲಿಲ್ಲ. ಅಂತಹ ಆಮೋದವು ಮಿದುಳನ್ನು ಹಾಳು ಮಾಡುತ್ತದೆ. ಮಿದುಳಿನ ಅಂಗಾಂಶ ಹಾಳಾದರೆ ಉನ್ನತ ವಿಷಯಗಳನ್ನು ಅರ್ಥ ಮಾಡಿಕೊಳ್ಳಲಾಗದು.

ಇವು ಸಾಕ್ಷಾತ್ಕಾರದ ವಿಧಾನಗಳು : ಶಮೇನ (ಮನಸ್ಸಿನ ನಿಯಂತ್ರಣ), ದಮೇನ (ಇಂದ್ರಿಯಗಳ ನಿಯಂತ್ರಣ), ತ್ಯಾಗೇನ (ದಾನ ನೀಡುವುದು), ಶೌಚೇನ (ಸ್ವಚ್ಛತೆ). ಆದರೆ ಈಗಿನ ಕಾಲದಲ್ಲಿ ಈ ವಿಧಾನಗಳನ್ನು ಅನುಸರಿಸುವುದು ತುಂಬ ಕಷ್ಟ. ಪ್ರಾಯೋಗಿಕವಾಗಿ ಅಸಾಧ್ಯ. ಆದುದರಿಂದ, ಕೃಷ್ಣನೇ ಆದ ಶ್ರೀ ಚೈತನ್ಯರು ಒಂದು ವಿಧಾನದಿಂದ ಸುಲಭವಾಗಿ ತಮ್ಮ ಲಭ್ಯತೆ ಸಾಧ್ಯವಾಗಿಸಿದರು :

ಹರೇರ್‌ ನಾಮ ಹರೇರ್‌ ನಾಮ ಹರೇರ್‌ ನಾಮೈವ ಕೇವಲಂ ।

ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್‌ ಅನ್ಯಥಾ ॥

ಈ ಕಲಿಯುಗವನ್ನು ಅತ್ಯಂತ ಪತಿತ ಯುಗವೆಂದು ಪರಿಗಣಿಸಲಾಗಿದೆ. ನಾವು ತುಂಬ ಮುನ್ನಡೆ ಸಾಧಿಸಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ಇದು ಪತಿತ ಯುಗ, ಏಕೆಂದರೆ ಜನರು ಪ್ರಾಣಿಗಳಂತಾಗುತ್ತಿದ್ದಾರೆ. ಉಣ್ಣುವುದು, ಮಲಗುವುದು, ಸಂಭೋಗಿಸುವುದು ಮತ್ತು ರಕ್ಷಿಸಿಕೊಳ್ಳುವುದು ಈ ನಾಲ್ಕು ದೈಹಿಕ ಅಗತ್ಯಗಳನ್ನು ಬಿಟ್ಟರೆ ಪ್ರಾಣಿಗಳಿಗೆ ಬೇರೆ ಆಸಕ್ತಿ ಇಲ್ಲ. ಅದೇ ರೀತಿ ಈ ಯುಗದಲ್ಲಿ ಜನರು ಈ ನಾಲ್ಕು ದೈಹಿಕ ತತ್ತ್ವಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಆದರೆ ಮಾನವ ರೂಪದ ಬದುಕು ವಿಶೇಷವಾಗಿ ಇರುವುದು ಸಾಕ್ಷಾತ್ಕಾರಕ್ಕಾಗಿ – `ನಾನು ಏನು?’ ಅದೇ ಮಾನವ ಬದುಕಿನ ಧ್ಯೇಯ. ಅಥಾತೋ ಬ್ರಹ್ಮ ಜಿಜ್ಞಾಸಾ – ಬ್ರಹ್ಮನ್‌, ಪರಮಾತ್ಮ ಮತ್ತು ಭಗವಾನ್‌ ಕುರಿತು ಕೇಳಲೆಂದು ಈ ಬದುಕು ಇರುವುದು.

ಜಿಜ್ಞಾಸು ಎಂದರೆ ವಿಚಾರಿಸುವುದು, ಕೇಳುವುದು. `ಇಂದಿನ ಸುದ್ದಿ ಏನು’ ಎಂದು ಪ್ರತಿ ದಿನ ಬೆಳಗ್ಗೆ ಕೇಳುತ್ತೇವೆ. ನಾವು ತತ್‌ಕ್ಷಣ ವಾರ್ತಾ ಪತ್ರಿಕೆ ಕೈಗೆತ್ತಿಕೊಳ್ಳುತ್ತೇವೆ. ಕುತೂಹಲ ಇರುತ್ತದೆ. ಆದರೆ ನಾವು ಸ್ಥೂಲ ವಿಷಯಗಳ ಬಗೆಗೆ ಮಾತ್ರ ವಿಚಾರಿಸುತ್ತೇವೆ. ಉನ್ನತ ಆಧ್ಯಾತ್ಮಿಕ ಜ್ಞಾನ, ಬ್ರಹ್ಮ ಜ್ಞಾನದ ಬಗೆಗೆ ಕೇಳುವ ಅಪೇಕ್ಷೆಯೇ ನಮಗಿಲ್ಲ.

ಆಧುನಿಕ ನಾಗರಿಕತೆಯ ಲೋಪ ಇದು. ಈಗಿನ ದಿನಗಳಲ್ಲಿ ಜನರು ಮುಖ್ಯವಾಗಿ ಹಣ ಮಾಡುವುದು ಹೇಗೆ ಎಂದು ಕೇಳುತ್ತಾರೆ. ಈ ಪ್ರವೃತ್ತಿ ಎಲ್ಲ ಯುಗಗಳಲ್ಲಿ ಇದ್ದರೂ ಪ್ರಸ್ತುತದಲ್ಲಿ ಅದು ಪ್ರಧಾನ ಅಂಶವಾಗಿದೆ. ಎಲ್ಲರೂ ದೈಹಿಕ ಅಗತ್ಯಗಳಲ್ಲಿಯೇ ನಿರತರಾಗಿದ್ದಾರೆ. ನಿದ್ರಯಾ ಹ್ರಿಯತೇ ನಕ್ತಂ ರಾತ್ರಿಯಲ್ಲಿ ಜನರು ನಿದ್ರಿಸುತ್ತಾರೆ, ಗೊರಕೆ ಬೇರೆ. ವ್ಯವಾಯೇನ ಚ ವಾ ವಯಃ ಅಥವಾ ಅವರು ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ. ಈ ರೀತಿ ಅವರು ಕಾಲಹರಣ ಮಾಡುತ್ತಾರೆ. ಹಗಲಿನಲ್ಲಿ – ದಿವಾ ಚಾರ್ತೇಹಯಾ ರಾಜನ್‌ `ಹಣ ಎಲ್ಲಿ? ಹಣ ಎಲ್ಲಿ?’ ಮತ್ತು ಕುಟುಂಬ ಭರಣೇನ ವಾ – ಹಣ ಸಿಕ್ಕ ಕೂಡಲೇ ಕುಟುಂಬಕ್ಕೆ ವಸ್ತುಗಳನ್ನು ಖರೀದಿಸುವುದು ಹೇಗೆ ಎಂದು ಯೋಚಿಸುತ್ತಾರೆ. ಖರೀದಿ ಮತ್ತು ಗೊರಕೆ ಇದು ಲೌಕಿಕ ಬದುಕಿನ ವ್ಯವಹಾರ.

ಸಂಕಟ ಮುಕ್ತಿ

ನಿದ್ರೆ, ಸಂಭೋಗ, ಹಣ ಗಳಿಕೆ ಮತ್ತು ಕುಟುಂಬಕ್ಕೆ ಮನೆ, ಆಹಾರ ಒದಗಿಸುವ ಕಾರ್ಯದಲ್ಲಿ ತೊಡಗಿರುವ ಅಂತಹ ಅನೇಕ ಮೂರ್ಖರ ಮಧ್ಯೆ ಮಾನವ ರೂಪವನ್ನು ಪರಿಪೂರ್ಣಗೊಳಿಸುವುದು ಹೇಗೆ ಎಂಬ ಕುತೂಹಲ ವ್ಯಕ್ತಪಡಿಸುವವರೂ ಒಬ್ಬರು. ಬದುಕು ಪರಿಪೂರ್ಣತೆಗಾಗಿ ಇರುವುದು. ಪರಿಪೂರ್ಣತೆ ಎಂದರೇನು? ಸಂಕಟ, ಸಂಕಷ್ಟದಿಂದ ಹೊರಬರುವುದೇ ಪರಿಪೂರ್ಣತೆ. ಸಂಕಟದಿಂದ ಹೊರಬರಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ. ಆದರೆ ಅದರಿಂದ ಹೊರಬರುವುದು ಹೇಗೆಂಬ ಅಂತಿಮ ಗುರಿ ಯಾರಿಗೂ ಗೊತ್ತಿಲ್ಲ. ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ. ವಿಷ್ಣುವಿನ ಬಳಿ ಸಾಗಿದಾಗ ನೀವು ಸಂಕಷ್ಟದಿಂದ ಮುಕ್ತರಾಗಬಹುದು.

ಇಲ್ಲಿ, ಲೌಕಿಕ ಜಗತ್ತಿನಲ್ಲಿ ಚಂದ್ರನಲ್ಲಿಗೆ ಹೋಗಲೂ ಜನರು ಪ್ರಯತ್ನಿಸುತ್ತಿದ್ದಾರೆ. ಅಲ್ಲಿಗೆ ಹೋದರೆ ಸಿಗುವ ಲಾಭವಾದರೂ ಏನು ಎಂಬುದು ಈ ಮೂರ್ಖರಿಗೆ ಗೊತ್ತಿಲ್ಲ. ಚಂದ್ರ ಒಂದು ಲೌಕಿಕ ಗ್ರಹ. ಕೃಷ್ಣನು ಈಗಾಗಲೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ, ಆಬ್ರಹ್ಮ ಭುವನಾಲ್‌ ಲೋಕಾಃ… ಎಲ್ಲ ಐಹಿಕ ಗ್ರಹಗಳು ಸಂಕಷ್ಟದ ನೆಲೆಗಳಾಗಿವೆ. ಚಂದ್ರ ತುಂಬ ಹತ್ತಿರದಲ್ಲಿದ್ದಾನೆ. ಆದರೆ ಬ್ರಹ್ಮಲೋಕ ಎಂದು ಕರೆಯುವ ಅತ್ಯುನ್ನತ ಗ್ರಹಕ್ಕೆ ನೀವು ಹೋದರೂ ಅಲ್ಲಿಯೂ ನೀವು ಸಂಕಷ್ಟವನ್ನು ಕಾಣುವಿರಿ.

ಪ್ರತಿ ರಾತ್ರಿ ಆಕಾಶವನ್ನು ಗಮನಿಸಿದಾಗ ಅನೇಕ ಗ್ರಹಗಳನ್ನು ನೀವು ನೋಡುವಿರಿ. ಆದರೆ ನೀವು ಅಲ್ಲಿಗೆ ಹೋಗಲಾಗದು. ನೀವು ಸುಮ್ಮನೆ ಸಮೀಪದ ಗ್ರಹಕ್ಕೆ ಹೋಗಲು ಪ್ರಯತ್ನಿಸುತ್ತಿರುವಿರಿ. ಆದರೆ ಅದೂ ವಿಫಲವಾಗುತ್ತಿದೆ. ಹಾಗಾದರೆ ನಿಮ್ಮ ವೈಜ್ಞಾನಿಕ ಸುಧಾರಣೆ ಏನು?

ಆದರೆ ನೀವು ಹೋಗಬಹುದು. ಲೌಕಿಕ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಬೆಳಕಿನ ವೇಗದಲ್ಲಿ 40 ಸಾವಿರ ವರ್ಷಗಳ ಕಾಲ ಪಯಣಿಸಿದರೆ ಆಗ ನೀವು ಐಹಿಕ ಲೋಕದ ಉನ್ನತ ಗ್ರಹವನ್ನು ತಲಪಬಹುದು. ಅಂದರೆ, ಆಧುನಿಕ ವೈಜ್ಞಾನಿಕ ಲೆಕ್ಕಾಚಾರದಂತೆ ಅಲ್ಲಿಗೆ ಹೋಗುವುದು ಅಸಾಧ್ಯ. ಆದರೆ ನೀವು ಹೋಗಬಹುದು. ಅದಕ್ಕೆ ವಿಧಾನವಿದೆ. ಅದನ್ನು ನಾವು ನಮ್ಮ ಸಣ್ಣ ಪುಸ್ತಕ `ಇತರ ಗ್ರಹಗಳಿಗೆ ಸುಗಮ ಪ್ರಯಾಣ’ ದಲ್ಲಿ ವಿವರಿಸಲು ಪ್ರಯತ್ನಿಸಿದ್ದೇವೆ. ಯೋಗದ ವಿಧಾನಗಳಿಂದ ನಿಮಗಿಷ್ಟವಾದ ಗ್ರಹಕ್ಕೆ ನೀವು ಹೋಗಬಹುದು. ಇದು ಯೋಗದ ಪರಿಪೂರ್ಣತೆ.

ಜೀವಿಗೆ ಸರ್ವ ಗಃ ಎಂದು ಕರೆಯುತ್ತಾರೆ , `ಅವನಿಗಿಷ್ಟವಾದ ಕಡೆ ಹೋಗಬಲ್ಲವನು.’ ಉದಾಹರಣೆಗೆ, ನಾರದ ಮುನಿಗಳು ಅಲೌಕಿಕ ಅಥವಾ ಲೌಕಿಕ ವಿಶ್ವದಲ್ಲಿ ಸಂಚರಿಸಬಲ್ಲರು. ನೀವೂ ಅದನ್ನು ಮಾಡಬಹುದು. ದೂರ್ವಾಸ ಮುನಿಗಳು ಒಂದು ವರ್ಷದಲ್ಲಿ ವಿಶ್ವದಾದ್ಯಂತ ಪಯಣಿಸಿ ಆಧ್ಯಾತ್ಮಿಕ ಜಗತ್ತು ವಿಷ್ಣು ಲೋಕಕ್ಕೆ ಹೋಗಿ ಬಂದರು. ಇದು ಚರಿತ್ರೆಯಲ್ಲಿ ದಾಖಲಾಗಿದೆ.

ಆದುದರಿಂದ, ಇದು ಒಂದು ಪರಿಪೂರ್ಣತೆ. ಮತ್ತು ಅದನ್ನು ಹೊಂದುವುದು ಹೇಗೆ? ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಮೂಲಕ. ಯಸ್ಮಿನ್‌ ವಿಜ್ಞಾತೇ ಸರ್ವಂ ಏವಂ ವಿಜ್ಞಾತಂ ಭವಂತಿ. ನೀವು ಸುಮ್ಮನೆ ಕೃಷ್ಣನನ್ನು ಅರ್ಥಮಾಡಿಕೊಂಡರೆ, ಉಳಿದೆಲ್ಲವನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಕೃಷ್ಣ ಪ್ರಜ್ಞೆ ಅದೆಷ್ಟು ಒಳ್ಳೆಯದು, ಸರಳ.

ಆನಂದ ಶಕ್ತಿ – ರಾಧಾರಾಣಿ

ಈ ಸಂಜೆ ನಾವು ರಾಧಾಷ್ಟಮಿ ಬಗೆಗೆ ಮಾತನಾಡುತ್ತಿದ್ದೇವೆ. ಕೃಷ್ಣನ ಪ್ರಮುಖ, ಆನಂದದ ಶಕ್ತಿಯಾದ ರಾಧಾರಾಣಿಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಕೃಷ್ಣನಿಗೆ ಅನೇಕ ರೀತಿಯ ಶಕ್ತಿಗಳಿವೆ ಎಂಬುದನ್ನು ನಾವು ವೈದಿಕ ಸಾಹಿತ್ಯದಿಂದ ಅರಿತಿದ್ದೇವೆ. ಪರಾಸ್ಯ ಶಕ್ತಿರ್‌ ವಿವಿಧೈವ ಶ್ರೂಯತೇ. ಅನೇಕ ಸಹಾಯಕರು ಮತ್ತು ಕಾರ್ಯದರ್ಶಿಗಳು ಇರುವ ದೊಡ್ಡ ಮನುಷ್ಯರಿಗೆ ಸ್ವತಃ ಮಾಡಲು ಏನೂ ಇರುವುದಿಲ್ಲ – ಅವರ ಮನಸ್ಸಿನಂತೆ ಎಲ್ಲವೂ ನಡೆಯುತ್ತದೆ – ಅದೇ ರೀತಿ ದೇವೋತ್ತಮ ಪರಮ ಪುರುಷನಿಗೆ ಅನೇಕ ರೀತಿಯ ಶಕ್ತಿ ಇರುತ್ತದೆ ಮತ್ತು ಎಲ್ಲವೂ ಚೆನ್ನಾಗಿ ನಿರ್ವಹಿಸಲ್ಪಡುತ್ತವೆ.

ನಾವಿರುವ ಲೌಕಿಕ ಜಗತ್ತನ್ನು ಬಹಿರ್‌ ಅಂಗ ಶಕ್ತಿ, ಕೃಷ್ಣನ ಬಾಹ್ಯ ಶಕ್ತಿ, ಎಂದು ಕರೆಯುತ್ತಾರೆ. ಲೌಕಿಕ ಶಕ್ತಿಯಿಂದ ಹೇಗೆ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿರ್ವಹಿಸಲಾಗುತ್ತಿದೆ, ನೋಡಿ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರಾಚರಂ “ನನ್ನ ಮೇಲ್ವಿಚಾರಣೆಯಲ್ಲಿ ಲೌಕಿಕ ಶಕ್ತಿ ನಿರ್ವಹಿಸುತ್ತಿದೆ.” ಐಹಿಕ ಶಕ್ತಿ ಕುರುಡಲ್ಲ. ಕೃಷ್ಣನು ಹಿನ್ನೆಲೆಯಲ್ಲಿದ್ದಾನೆ. ಮತ್ತು ಲೌಕಿಕ, ಬಾಹ್ಯ ಶಕ್ತಿಯಲ್ಲದೆ ಮತ್ತೊಂದು ಶಕ್ತಿ ಇದೆ. ಅದೇ ಆಂತರಿಕ ಶಕ್ತಿ. ಈ ಆಂತರಿಕ ಶಕ್ತಿಯಿಂದ ಆಧ್ಯಾತ್ಮಿಕ ಲೋಕವು ಪ್ರಕಟಗೊಳ್ಳುತ್ತದೆ. ಪರಸ್‌ ತಸ್ಮಾತ್‌ ತು ಭಾವೋ ಅನ್ಯಃ. ಬಾಹ್ಯ ಶಕ್ತಿಯಿಂದ ಲೌಕಿಕ ಜಗತ್ತಿನ ನಿರ್ವಹಣೆಯಾಗುತ್ತಿದ್ದರೆ ಆಧ್ಯಾತ್ಮಿಕ ಲೋಕವು ಆಂತರಿಕ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಆ ಆಂತರಿಕ ಶಕ್ತಿಯು ರಾಧಾರಾಣಿ.

ನಾವು ರಾಧಾರಾಣಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ರಾಧಾರಾಣಿಯು ಕೃಷ್ಣನ ಆನಂದದ ಶಕ್ತಿ, ಹ್ಲಾದಿನಿ ಶಕ್ತಿ. ವೇದಾಂತ ಸೂತ್ರದಲ್ಲಿ ಪರಮ ಸತ್ಯವನ್ನು ಆನಂದಮಯ ಎಂದು ವರ್ಣಿಸಲಾಗಿದೆ. ಅಂದರೆ, ಸದಾ ಆನಂದ ಶಕ್ತಿಯಲ್ಲಿ ಇರುವುದು.

ನಿಮಗೆ ಆನಂದ, ಸಂತೋಷ, ಸುಖ ಬೇಕೆಂದರೆ, ನೀವು ಅದನ್ನು ಒಬ್ಬಂಟಿಯಾಗಿ ಅನುಭವಿಸಲಾರಿರಿ. ಸ್ನೇಹಿತರು, ಕುಟುಂಬದವರು ಅಥವಾ ಸಂಗಾತಿಗಳೊಂದಿಗೆ ಇದ್ದಾಗ ನೀವು ಸಂತೋಷ ಅನುಭವಿಸುವಿರಿ. ಇಲ್ಲಿ ಹೆಚ್ಚು ಜನ ಇದ್ದರೆ ನನ್ನ ಉಪನ್ಯಾಸ ಆನಂದಮಯವಾಗಿರುತ್ತದೆ. ಒಬ್ಬಂಟಿಯಾಗಿ ನಾನು ಉಪನ್ಯಾಸ ನೀಡಲಾರೆ: ಅದು ಆನಂದವಲ್ಲ. ನಡು ರಾತ್ರಿಯಲ್ಲಿ, ಯಾರೂ ಇಲ್ಲದಾಗ ನಾನು ಮಾತನಾಡಬಲ್ಲೆನಾದರೂ ಅದು ಆನಂದವಲ್ಲ. ಆನಂದ ಎಂದರೆ ಅಲ್ಲಿ ಬೇರೆಯವರೂ ಇರಬೇಕು.

ಪರಮ ಆನಂದಮಯನಾದ ಕಾರಣ ಕೃಷ್ಣನು ಅನೇಕ ಆಗಿದ್ದಾನೆ – ಏಕೋ ಬಹು ಸ್ಯಾಮ. ನಾವು ಕೃಷ್ಣನಿಗೆ ಆನಂದ ನೀಡಲಿರುವ ಅವನ ಅವಿಭಾಜ್ಯ ಅಂಗ. ಮತ್ತು ಪ್ರಧಾನವಾದ ಆನಂದ ಶಕ್ತಿ ರಾಧಾರಾಣಿ.

ರಾಧಾ ಕೃಷ್ಣ ಪ್ರಣಯ ವಿಕೃತಿರ್‌ ಹ್ಲಾದಿನಿ ಶಕ್ತಿರ್‌ ಅಸ್ಮಾದ್‌

ಏಕಾತ್ಮಾನಾವ್‌ ಅಪಿ ಭುವಿ ಪುರಾ ದೇಹ ಭೇದಂ ಗತೌ ತೌ ।

ಚೈತನ್ಯಾಖ್ಯಂ ಪ್ರಕಟಂ ಅಧೂನಾ ತದ್‌ ದ್ವಯಂ ಚೈಕ್ಯಂ ಆಪ್ತಂ

ರಾಧಾ ಭಾವ ದ್ಯುತಿ ಸುವಲಿತಂ ನೌಮಿ ಕೃಷ್ಣ ಸ್ವರೂಪಂ ॥

ಕೃಷ್ಣನು ಪರಂ ಬ್ರಹ್ಮನ್‌, ಪರಾತ್ಪರ ಎಂಬುವುದು ನಿಮಗೆ ಭಗವದ್ಗೀತೆಯಿಂದ ತಿಳಿಯುತ್ತದೆ. ಅರ್ಜುನನಿಗೆ ಭಗವದ್ಗೀತೆ ಅರ್ಥವಾದಾಗ ಅವನು ಕೃಷ್ಣನಿಗೆ ಸ್ಪಷ್ಟಪಡಿಸಿದ : ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಮ್‌ ಭವಾನ್‌ : “ನೀನು ದೇವೋತ್ತಮ ಪರಮ ಪುರುಷ, ಅಂತಿಮ ಧಾಮ, ಪರಿಶುದ್ಧ, ಪರಮ ಸತ್ಯ.”

ಆದುದರಿಂದ ಕೃಷ್ಣನು ಪರಂ ಬ್ರಹ್ಮನ್‌, ಪರಾತ್ಪರ. ಬ್ರಹ್ಮಾನಂದವನ್ನು ಅನುಭವಿಸಲೆಂದೇ ಐಹಿಕವಾದುದೆಲ್ಲವನ್ನೂ ತ್ಯಜಿಸುವ ಶ್ರೇಷ್ಠ ಸಂತ ಪುರುಷನನ್ನು ನಾವು ಲೌಕಿಕ ಜಗತ್ತಿನಲ್ಲಿ ನೋಡುತ್ತೇವೆ. ತಾನು ಬ್ರಹ್ಮನ್‌ ಎಂಬುದನ್ನು ಅರ್ಥ ಮಾಡಿಕೊಳ್ಳಲೆಂದೇ ಅವನು ಸಂನ್ಯಾಸಿಯಾಗುತ್ತಾನೆ. ಆದುದರಿಂದ, ಬ್ರಹ್ಮನ್‌ ಸಾಕ್ಷಾತ್ಕಾರಕ್ಕಾಗಿ ವ್ಯಕ್ತಿಯು ಲೌಕಿಕವಾದುದೆಲ್ಲವನ್ನೂ ಬಿಟ್ಟುಕೊಟ್ಟರೆ, ಆ ಪರಂ ಬ್ರಹ್ಮನ್‌ ಐಹಿಕವಾದುದೇನ್ನಾದರೂ ಆನಂದಿಸುವನೇ? ಇಲ್ಲ. ಕೃಷ್ಣನ ಆನಂದ ಯಾವುದೂ ಐಹಿಕವಲ್ಲ. ಈ ಅಂಶವನ್ನು ಅರ್ಥಮಾಡಿಕೊಳ್ಳಬೇಕು.

ಲೌಕಿಕ ಜಗತ್ತಿನಲ್ಲಿ ಬ್ರಹ್ಮನ್‌ ಮತ್ತು ಪರಮಾತ್ಮನನ್ನು ಕುರಿತು ನಮಗೆ ಅಲ್ಪ ಮಾಹಿತಿ ಇದೆ. ಆದರೆ, ಯಾರಿಗೂ ಪರಂ ಬ್ರಹ್ಮನ್‌ ಅಥವಾ ಭಗವಾನ್‌, ದೇವೋತ್ತಮ ಪರಮ ಪುರುಷನ ಬಗೆಗೆ ಗೊತ್ತಿಲ್ಲ. ಆದುದರಿಂದ, ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್‌ ಯತತಿ ಸಿದ್ಧಯೇ. ಸಿದ್ಧಯೇಯು ಬ್ರಹ್ಮನ್‌ ಅಥವಾ ಪರಮಾತ್ಮನನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಂಬಂಧಿಸಿದೆ. ಆದರೆ ಬ್ರಹ್ಮನ್‌ ಮತ್ತು ಪರಮಾತ್ಮನನ್ನು ಅರ್ಥ ಮಾಡಿಕೊಂಡ ಅನೇಕ ವ್ಯಕ್ತಿಗಳಲ್ಲಿ ಕೃಷ್ಣನನ್ನು ಅರಿತುಕೊಂಡವರು ವಿರಳ.

ಕೃಷ್ಣನನ್ನು ಅರಿಯದೆ ನಾವು ಅವನ ಆನಂದ ಶಕ್ತಿ ಕುರಿತಂತೆ ಏನು ಅರ್ಥ ಮಾಡಿಕೊಳ್ಳಬಲ್ಲೆವು? ದೊಡ್ಡ ಮನುಷ್ಯನನ್ನು ಅರ್ಥ ಮಾಡಿಕೊಳ್ಳದೆಯೆ ಅವನ ಆಂತರಿಕ ವ್ಯವಹಾರಗಳನ್ನು ನಾನು ಹೇಗೆ ಅರಿತುಕೊಳ್ಳಬಲ್ಲೆ? ಅದೇ ರೀತಿ, ಕೃಷ್ಣನನ್ನು ಅರ್ಥ ಮಾಡಿಕೊಳ್ಳದೆಯೇ ನಾವು ಅವನು ಹೇಗೆ ಆನಂದಿಸುತ್ತಿದ್ದಾನೆಂದು ಅರ್ಥಮಾಡಿಕೊಳ್ಳುತ್ತೇವೆ? ಅದು ಸಾಧ್ಯವಿಲ್ಲ.

ಗೋಸ್ವಾಮಿಗಳು ನಮಗೆ ಕೃಷ್ಣನ ಆನಂದ ಶಕ್ತಿ, ಶ್ರೀಮತಿ ರಾಧಾರಾಣಿ ಬಗೆಗೆ ಮಾಹಿತಿ ನೀಡುತ್ತಿದ್ದಾರೆ. ಶ್ರೀ ಚೈತನ್ಯರನ್ನು ಕುರಿತ ನಮ್ಮ ಬೋಧನೆಗಳಲ್ಲಿ ನಾವು ರಾಧಾ ಕೃಷ್ಣರ ಪ್ರೀತಿಯ ಪ್ರಸಂಗಗಳನ್ನು ವರ್ಣಿಸಿದ್ದೇವೆ.

ಇಂದು ನಾವು ರಾಧಾರಾಣಿಯನ್ನು ಪ್ರಾರ್ಥಿಸುತ್ತೇವೆ, ಏಕೆಂದರೆ ಅವಳು ಕೃಷ್ಣನ ಆನಂದ ಶಕ್ತಿ. ಕೃಷ್ಣ ಎಂದರೆ, `ಸರ್ವ ಆಕರ್ಷಕ.’ ಆದರೆ ಕೃಷ್ಣನನ್ನೇ ಆಕರ್ಷಿಸುವ ರಾಧಾರಾಣಿ ಅತಿ ಶ್ರೇಷ್ಠ. ಹಾಗಾದರೆ, ರಾಧಾರಾಣಿಯ ಸ್ಥಾನವೇನು? ಇಂದು ನಾವು ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಮತ್ತು ನಮ್ಮ ಗೌರವ ಸಲ್ಲಿಸಬೇಕು.

ತಪ್ತ ಕಾಂಚನ ಗೌರಾಂಗಿ ರಾಧೇ ವೃಂದಾವನೇಶ್ವರಿ ।

ವೃಷಭಾನು ಸುತೇ ದೇವಿ ಪ್ರಣಮಾಮಿ ಹರಿ ಪ್ರಿಯೇ ॥

“ರಾಧಾರಾಣಿ, ನೀನು ಕೃಷ್ಣನಿಗೆ ತುಂಬ ಪ್ರಿಯಳಾದವಳು. ಆದುದರಿಂದ ನಾವು ನಿನಗೆ ಗೌರವಯುತ ಪ್ರಣಾಮ ಸಲ್ಲಿಸುತ್ತೇವೆ.” ರಾಧಾರಾಣಿಯು ಹರಿಪ್ರಿಯೆ, `ಕೃಷ್ಣನಿಗೆ ತುಂಬ ಪ್ರಿಯಳಾದವಳು.’ ರಾಧಾರಾಣಿಯ ಕರುಣೆಯಿಂದ ನಾವು ಸುಲಭವಾಗಿ ಕೃಷ್ಣನನ್ನು ತಲಪಬಹುದು. `ಈ ಭಕ್ತ ಒಳ್ಳೆಯವನು’ ಎಂದು ರಾಧಾರಾಣಿ ಶಿಫಾರಸು ಮಾಡಿದರೆ , ನಾನೆಂತಹ ಮೂರ್ಖನಾದರೂ ಕೃಷ್ಣ ನನ್ನನ್ನು ಸ್ವೀಕರಿಸುತ್ತಾನೆ. ಆದುದರಿಂದ ವೃಂದಾವನದಲ್ಲಿ ಭಕ್ತರು ಕೃಷ್ಣನ ನಾಮಕ್ಕಿಂತ ಹೆಚ್ಚಾಗಿ ರಾಧಾರಾಣಿಯ ನಾಮ ಪಠಿಸುವುದನ್ನು ನೀವು ಕಾಣಬಹುದು. ನೀವು ಹೋದಲ್ಲೆಲ್ಲ ಭಕ್ತರು `ಜಯ ರಾಧೇ!’ ಎಂದು ಪರಸ್ಪರ ಶುಭ ಕೋರುವುದನ್ನು ಇಂದಿಗೂ ನೋಡಬಹುದು. ಭಕ್ತರು ರಾಧಾರಾಣಿಯನ್ನು ವೈಭವೀಕರಿಸುತ್ತಿದ್ದಾರೆ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನೀವು ಊಹಾತ್ಮಕ ವಿಧಾನದಲ್ಲಿ ಸಾಗಿದರೆ ಅದಕ್ಕೆ ಅನೇಕ ಜನ್ಮವೇ ಬೇಕಾಗುತ್ತದೆ. ಆದರೆ ನೀವು ಭಕ್ತಿ ಸೇವೆ ಕೈಗೊಂಡರೆ ಮತ್ತು ರಾಧಾರಾಣಿಯನ್ನು ಸಂತೃಪ್ತಿಪಡಿಸಲು ಪ್ರಯತ್ನಿಸಿದರೆ, ಕೃಷ್ಣ ಸುಲಭವಾಗಿ ಲಭ್ಯ.

ರಾಧಾರಾಣಿಯು ಕೃಷ್ಣನನ್ನು ಪ್ರಕಟಿಸಬಲ್ಲಳು. ಅವಳು ಶ್ರೇಷ್ಠ ಭಕ್ತೆ. ಅವಳು ಮಹಾಭಾಗವತದ ಚಿಹ್ನೆ. ರಾಧಾರಾಣಿಯ ಭಕ್ತಿಯ ಗುಣಮಟ್ಟವನ್ನು ಕೃಷ್ಣನೇ ಅರ್ಥಮಾಡಿಕೊಳ್ಳಲಾರ. ವೇದಾಹಂ ಸಮತೀತಾನಿ – `ನನಗೆ ಎಲ್ಲ ಗೊತ್ತು’ ಎಂದು ಕೃಷ್ಣ ಹೇಳಿದರೂ ರಾಧಾರಾಣಿಯನ್ನು ಅರಿತುಕೊಳ್ಳುವಲ್ಲಿ ಅವನು ವಿಫಲನಾಗುತ್ತಾನೆ. ಅವಳು ಅಷ್ಟು ಶ್ರೇಷ್ಠ.

ಕೃಷ್ಣನಿಗೆ ಎಲ್ಲವೂ ಗೊತ್ತು, ಆದರೆ ರಾಧಾರಾಣಿಯನ್ನು ಅರ್ಥಮಾಡಿಕೊಳ್ಳಲು ಕೃಷ್ಣನು ರಾಧಾರಾಣಿಯ ಸ್ಥಾನವನ್ನು ಸ್ವೀಕರಿಸಿದ. “ನಾನು ಪೂರ್ಣ. ಎಲ್ಲ ರೀತಿಯಿಂದಲೂ ನಾನು ಸಂಪೂರ್ಣ. ಆದರೂ ನನಗೆ ಇನ್ನೂ ರಾಧಾರಾಣಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಏಕೆ?” ಎಂದು ಕೃಷ್ಣ ಯೋಚಿಸಿದ. ತನ್ನನ್ನೇ ಅರಿತುಕೊಳ್ಳಲು ಕೃಷ್ಣನು ರಾಧಾರಾಣಿಯ ಪ್ರವೃತ್ತಿ ಸ್ವೀಕರಿಸಿದನು.

ರಾಧಾಳ ಅಂಶ ಸ್ವೀಕಾರ

ಅಂತಹ ವಿಷಯಗಳು ಶ್ರೇಷ್ಠ ಅಲೌಕಿಕ ವಿಜ್ಞಾನದ ಭಾಗ. ಕೃಷ್ಣ ಪ್ರಜ್ಞೆಯಲ್ಲಿ ಮುನ್ನಡೆ ಸಾಧಿಸಿದವರು ಮತ್ತು ಶಾಸ್ತ್ರ, ಧರ್ಮ ಗ್ರಂಥಗಳನ್ನು ಅರಿತುಕೊಂಡಿರುವವರು ಅದನ್ನು ಅರ್ಥಮಾಡಿಕೊಳ್ಳಬಲ್ಲರು. ತನ್ನನ್ನು ತಾನೆ ಅರ್ಥಮಾಡಿಕೊಳ್ಳಬೇಕೆಂದಾಗ ಕೃಷ್ಣನು ಶ್ರೀಮತಿ ರಾಧಾರಾಣಿಯ ಪ್ರವೃತ್ತಿಗಳನ್ನು ಸ್ವೀಕರಿಸಿದ. ಅದು ಶ್ರೀ ಚೈತನ್ಯ ಮಹಾಪ್ರಭುವಾಗಿ ಅವನ ಆವಿರ್ಭಾವ. ರಾಧಾ ಭಾವ ದ್ಯುತಿ ಸುವಲಿತಂ.

ಚೈತನ್ಯ ಮಹಾಪ್ರಭು ಕೃಷ್ಣ. ಆದರೆ ಅವರು ರಾಧಾರಾಣಿಯ ಪ್ರವೃತ್ತಿಗಳನ್ನು ಅಂಗೀಕರಿಸಿದ್ದಾರೆ. ಹೇಗೆ ರಾಧಾರಾಣಿಯು ಸದಾ ಕೃಷ್ಣನ ವಿರಹದ ಭಾವನೆಯಲ್ಲಿ ಇರುವಳೋ ಹಾಗೆ ರಾಧಾರಾಣಿಯ ಸ್ಥಾನದಲ್ಲಿ ಶ್ರೀ ಚೈತನ್ಯರು ಕೃಷ್ಣನೊಂದಿಗಿನ ಅಗಲಿಕೆ ಭಾವನೆ ಹೊಂದಿದ್ದಾರೆ. ಅದೇ ಶ್ರೀ ಚೈತನ್ಯರ ಬೋಧನೆ – ವಿರಹದ ಅನುಭವ ಹೊಂದಿ, ಭೇಟಿಯನ್ನಲ್ಲ. ಶ್ರೀ ಚೈತನ್ಯ ಮಹಾಪ್ರಭು ಮತ್ತು ಅವರ ಶಿಷ್ಯ ಪರಂಪರೆ ಬೋಧಿಸಿದ ಭಕ್ತಿ ಸೇವೆಯ ವಿಧಾನವು ಕೃಷ್ಣನಿಂದ ಅಗಲಿಕೆಯನ್ನು ಹೇಗೆ ಅನುಭವಿಸಬೇಕೆಂಬುದೇ ಆಗಿದೆ. ಅದೇ ರಾಧಾರಾಣಿಯ ಸ್ಥಿತಿ-ಸದಾ ವಿರಹದ ಅನುಭವ, ಭಾವನೆ.

ಗೋಸ್ವಾಮಿಗಳು ವೃಂದಾವನದಲ್ಲಿದ್ದಾಗ `ನಾನು ಕೃಷ್ಣನನ್ನು ನೋಡಿದ್ದೇನೆ’ ಎಂದೂ ಹೇಳಲಿಲ್ಲ. ಅವರು ಪರಿಪೂರ್ಣ ಭಕ್ತರಾದರೂ `ನಾನು ಕೃಷ್ಣನನ್ನು ನೋಡಿದ್ದೇನೆ’ ಎಂದು ಹೇಳಲಿಲ್ಲ. ಅವರ ಪ್ರಾರ್ಥನೆ ಹೀಗಿರುತ್ತಿತ್ತು : ಹೇ ರಾಧೇ ವ್ರಜ ದೇವಿಕೇ… ಹೇ ನಂದ ಸೂನೋ ಕುತಃ!

ರಾಧಾರಾಣಿ ಒಬ್ಬಂಟಿಗಳಾಗಿ ಇರುವುದಿಲ್ಲ. ಅವಳು ಸದಾ ಸ್ನೇಹಿತೆಯರಾದ ಲಲಿತ, ವಿಶಾಖ, ಮತ್ತಿತರರ ಜೊತೆಯಲ್ಲಿ ಇರುತ್ತಾಳೆ. ಆದುದರಿಂದ ಗೋಸ್ವಾಮಿಗಳು ತಮ್ಮ ಪಕ್ವ ಸ್ಥಿತಿಯಲ್ಲಿ, ವೃಂದಾವನದಲ್ಲಿ ನೆಲೆಸಿದಾಗ, ಈ ರೀತಿ ಪ್ರಾರ್ಥಿಸುತ್ತಿದ್ದರು, ಹೇ ರಾಧೇ ವ್ರಜ ದೇವಿಕೇ ಚ ಲಲಿತೇ ಹೇ ನಂದ ಸೂನೋ ಕುತಃ : “ರಾಧಾರಾಣಿ, ನೀನು ಎಲ್ಲಿರುವೆ? ನಿನ್ನ ಸಂಗಾತಿಗಳೆಲ್ಲಿ? ನಂದ ಮಹಾರಾಜನ ಮಗನಾದ ಕೃಷ್ಣ ಎಲ್ಲಿರುವೆ? ನೀವೆಲ್ಲ ಎಲ್ಲಿದ್ದೀರಾ?” ಅವರು ಹುಡುಕುತ್ತಿದ್ದರು. “ಕೃಷ್ಣ ಗೋಪಿಯರೊಂದಿಗೆ ನರ್ತಿಸುತ್ತಿದ್ದುದನ್ನು ನೋಡಿದ್ದೇನೆ. ನಿನ್ನೆ ರಾತ್ರಿ ನಾನು ನೋಡಿದೆ”, ಎಂದೂ ಹೇಳಲಿಲ್ಲ.

ಆ ರೀತಿ ಮಾತನಾಡುವವರನ್ನು ಸಹಜೀಯರೆಂದು ಕರೆಯುತ್ತಾರೆ. ಪರಿಪಕ್ವ ಭಕ್ತರು ಹಾಗೆ ಮಾತನಾಡುವುದಿಲ್ಲ. ಸಹಜೀಯರು ಎಲ್ಲವನ್ನೂ ಲಘುವಾಗಿ ಅಥವಾ ಅಗ್ಗವಾಗಿ ಪರಿಗಣಿಸುತ್ತಾರೆ ಕೃಷ್ಣ ತುಂಬ ಅಗ್ಗ, ರಾಧಾರಾಣಿ ತುಂಬ ಅಗ್ಗ ಎಂದು ತಾವು ಪ್ರತಿ ದಿನ ರಾಧಾ ಮತ್ತು ಕೃಷ್ಣರನ್ನು ನೋಡುತ್ತಿರುವಂತೆ ಹೇಳುತ್ತಾರೆ. ಇಲ್ಲ. ಗೋಸ್ವಾಮಿಗಳು ನಮಗೆ ಆ ರೀತಿ ಬೋಧಿಸುವುದಿಲ್ಲ. ಅವರು ರಾಧಾ ಕೃಷ್ಣರನ್ನು ಹುಡುಕುತ್ತಿದ್ದರು. ಹೇ ರಾಧೇ ವ್ರಜ ದೇವಿಕೇ ಚ ಲಲಿತೇ ಹೇ ನಂದ ಸೂನೋ ಕುತಃ / ಶ್ರೀ ಗೋವರ್ಧನ ಕಲ್ಪ ಪಾದಪ ತಲೇ ಕಾಲಿಂದಿ ವನೇ ಕುತಃ – “ನೀನು ಗೋವರ್ಧನ ಗಿರಿಯಲ್ಲಿ ಇದ್ದೀಯಾ ಅಥವಾ ಯಮುನೆಯ ದಡದಲ್ಲಿ?” ಗೋಶಂತಾವ್‌ ಇತಿ ಸರ್ವತೋ ವ್ರಜ ಪುರೇ ಖೇದೈರ್‌ ಮಹಾ ವಿಹ್ವಲೌ. ಈ ರೀತಿ ಕೂಗುವುದು ಅವರ ಕೆಲಸವಾಗಿತ್ತು : “ಎಲ್ಲಿರುವೆ? ರಾಧಾರಾಣಿ ಎಲ್ಲಿರುವೆ? ಲಲಿತಾ, ವಿಶಾಖಾ, ರಾಧಾರಾಣಿಯ ಸಂಗಾತಿಗಳೇ, ಎಲ್ಲಿರುವಿರಿ? ಕೃಷ್ಣ, ನೀನೆಲ್ಲಿರುವೆ? ನೀನು ಗೋವರ್ಧನ ಗಿರಿಯ ಬಳಿ ಇರುವೆಯಾ? ಅಥವಾ ಯಮುನೆಯ ದಡದಲ್ಲಿ ಇರುವೆಯಾ?”

ಗೋಶಂತಾವ್‌ ಇತಿ ಸರ್ವತೋ ವ್ರಜ ಪುರೇ. ವೃಂದಾವನದಾದ್ಯಂತ ಅವರು ಅಳುತ್ತ ರಾಧಾ ಕೃಷ್ಣರನ್ನು ಹುಡುಕುತ್ತಿದ್ದರು, ಹುಚ್ಚರಂತೆ. ಖೇದೈರ್‌ ಮಹಾ ವಿಹ್ವಲೌ.

ವಂದೇ ರೂಪ ಸನಾತನೌ ರಘು ಯುಗೌ ಶ್ರೀ ಜೀವ ಗೋಪಾಲಕೌ. ನಾವು ಗೋಸ್ವಾಮಿಯವರು ತುಳಿದ ಹಾದಿಯನ್ನು ಅನುಸರಿಸಬೇಕು ಮತ್ತು ವೃಂದಾವನ ಅಥವಾ ನಮ್ಮ ಹೃದಯದೊಳಗೆ ಹೇಗೆ ಕೃಷ್ಣ ಮತ್ತು ರಾಧಾರಾಣಿಯನ್ನು ಹುಡುಕಬೇಕೆಂಬುದನ್ನು ಅರಿಯಬೇಕು. ಅದು ಶ್ರೀ ಚೈತನ್ಯ ಮಹಾಪ್ರಭುಗಳ ಭಜನೆ ಅಥವಾ ಪೂಜೆ – ಅಗಲಿಕೆಯ ಭಾವನೆ (ವಿಪ್ರಲಂಭ ಸೇವ).

ಕೃಷ್ಣನಿಂದ ಅಗಲಿಕೆಯನ್ನು ಅನುಭವಿಸುತ್ತ, ಮಹಾಪ್ರಭು ಸಮುದ್ರದಲ್ಲಿ ಬೀಳುತ್ತಿದ್ದರು. ಅವರು ನಡು ರಾತ್ರಿಯಲ್ಲಿ ತಮ್ಮ ಕೊಠಡಿಯಿಂದ ಹೊರ ನಡೆಯುತ್ತಿದ್ದರು. ಅವರು ಎಲ್ಲಿಗೆ ಹೋಗಿದ್ದಾರೆಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಅವರು ಕೃಷ್ಣನನ್ನು ಹುಡುಕುತ್ತಿದ್ದರು.

ಭಕ್ತಿ ಸೇವೆ ಬೋಧನೆ

ಚೈತನ್ಯ ಮಹಾಪ್ರಭು ಭಕ್ತಿ ಸೇವೆಯ ಅಂತಹ ವಿಧಾನವನ್ನು ಬೋಧಿಸಿದ್ದಾರೆ. `ರಾಸ ಲೀಲೆಯಲ್ಲಿ ನಾನು ರಾಧಾ ಕೃಷ್ಣರನ್ನು ನೋಡಿದ್ದೇನೆ’ ಎಂದು ನಾವು ಸುಲಭವಾಗಿ ಹೇಳಲಾಗದು. ಅದು ಹಾಗಲ್ಲ. ಅಗಲಿಕೆಯನ್ನು ಅನುಭವಿಸಿ. ಕೃಷ್ಣನಿಂದ ಅಗಲಿಕೆಯನ್ನು ಅನುಭವಿಸಿದಷ್ಟೂ ನೀವು ಮುಂದುವರಿದಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ಕೃಷ್ಣನನ್ನು ಕೃತಕವಾಗಿ ನೋಡಲು ಪ್ರಯತ್ನಿಸಬೇಡಿ. ಅಗಲಿಕೆ ಭಾವನೆಯಲ್ಲಿ ಮುಂದುವರಿಯಿರಿ, ಆಗ ನಿಮ್ಮ ಭಕ್ತಿ ಪರಿಪೂರ್ಣ. ಅದು ಶ್ರೀ ಚೈತನ್ಯರ ಬೋಧನೆ.

ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಂ ಇಂದ್ರಿಯೈಃ. ನಮ್ಮ ಲೌಕಿಕ ಇಂದ್ರಿಯಗಳಿಂದ ನಾವು ಕೃಷ್ಣನನ್ನು ನೋಡಲಾರೆವು ಅಥವಾ ಅವನ ಹೆಸರು ಕೇಳಲಾರೆವು. ನಾವು ಭಗವಂತನ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಈ ಸೇವೆ ಎಲ್ಲಿಂದ ಆರಂಭವಾಗಬೇಕು? ಜಿಹ್ವದೌ ನಾಲಗೆಯಿಂದ. ಕಾಲು, ಕಣ್ಣು ಅಥವಾ ಕಿವಿಗಳಿಂದಲ್ಲ. ಅದು ನಾಲಗೆಯಿಂದ ಆರಂಭವಾಗುತ್ತದೆ. ಹೇಗೆ? ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಮಂತ್ರವನ್ನು ಜಪಿಸಿ. ಮತ್ತು ಕೃಷ್ಣ ಪ್ರಸಾದವನ್ನು ಸ್ವೀಕರಿಸಿ. ನಾಲಗೆಗೆ ಎರಡು ಕರ್ತವ್ಯ : ಹರೇ ಕೃಷ್ಣ ಮಂತ್ರ ಉಚ್ಚಾರ ಮತ್ತು ಪ್ರಸಾದ ಸ್ವೀಕರಿಸುವುದು. ಈ ವಿಧಾನಗಳಿಂದ ನೀವು ಕೃಷ್ಣನನ್ನು ಅರಿತುಕೊಳ್ಳುವಿರಿ.

ಕೃಷ್ಣನನ್ನು ನೋಡುವ ಪ್ರಯತ್ನ ಮಾಡಬೇಡಿ. ನಿಮ್ಮ ಲೌಕಿಕ ಕಣ್ಣುಗಳಿಂದ ನೀವು ಕೃಷ್ಣನನ್ನು ನೋಡಲಾರಿರಿ. ನಿಮ್ಮ ಲೌಕಿಕ ಕಿವಿಗಳಿಂದ ಅವನ ಬಗೆಗೆ ಕೇಳಲಾರಿರಿ ಮತ್ತು ಅವನನ್ನು ನೀವು ಸ್ಪರ್ಶಿಸಲಾರಿರಿ. ಆದರೆ ನೀವು ನಿಮ್ಮ ನಾಲಗೆಯನ್ನು ಭಗವಂತನ ಸೇವೆಯಲ್ಲಿ ತೊಡಗಿಸಿದರೆ, ಅವನು ತನ್ನನ್ನು ತಾನು ಪ್ರಕಟಗೊಳಿಸುತ್ತಾನೆ : `ನಾನು ಇಲ್ಲಿ.’ ಅದೇ ಬೇಕಾಗಿರುವುದು.

ಶ್ರೀ ಚೈತನ್ಯರು ನಮಗೆ ಬೋಧಿಸಿರುವಂತೆ, ರಾಧಾರಾಣಿಯಂತೆ ಕೃಷ್ಣನ ಅಗಲಿಕೆಯನ್ನು ಅನುಭವಿಸಿ ಮತ್ತು ಭಗವಂತನ ಸೇವೆಯಲ್ಲಿ ನಿಮ್ಮ ನಾಲಗೆಯನ್ನು ತೊಡಗಿಸಿ. ಆಗ ಒಂದು ದಿನ, ನೀವು ಪರಿಪಕ್ವರಾದಾಗ, ಕೃಷ್ಣನನ್ನು ಮುಖಾಮುಖಿಯಾಗಿ ನೋಡುವಿರಿ.

ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi