ಪರಮ ಪ್ರಭುವಿನ ವರಾಹ ಅವತಾರ ಕಲ್ಪನಾತೀತವಾದ ದಿವ್ಯ, ಬೃಹತ್ ರೂಪ. ಭೂದೇವಿಯನ್ನು ಕಾಪಾಡಲೆಂದೇ ಈ ರೂಪ ಧರಿಸಿದ್ದು.
ವಿಷ್ಣುವು ವರಾಹ ಅವತಾರವನ್ನು ಧಾರಣಮಾಡಿ ಭೂಲೋಕದ ಹಿತಚಿಂತನೆಯಿಂದ ಬ್ರಹ್ಮಾಂಡದ ರಸಾತಲದಿಂದ ಭೂಮಿಯನ್ನು ಉದ್ಧರಿಸಿದನು. ಎಂತಹ ಹೊಲಸು ಸ್ಥಳದಿಂದಲಾದರೂ ಒಂದು ವಸ್ತುವನ್ನು ಮೇಲಕ್ಕೆತ್ತುವುದು ವರಾಹನ ಸ್ವಭಾವ. ಪೃಥ್ವಿಯನ್ನು ಹೊಲಸಿನಲ್ಲಿ ಇರಿಸಿದ್ದ ಅಸುರನಿಗೆ ಭಗವಂತನು ಅದ್ಭುತವನ್ನು ತೋರಿಸುತ್ತಾನೆ. ಭೂಮಿಯ ರಕ್ಷಣೆ ಅಸಾಧ್ಯವೆಂದು ಭಾವಿಸಿದ್ದ ಅಸುರರಿಗೆ ಭಗವಂತನು ತಕ್ಕ ಪಾಠವನ್ನು ಕಲಿಸುತ್ತಾನೆ. ಅವಳನ್ನು ಕಾಪಾಡಿದಲ್ಲದೆ ವೀರಾವೇಶದಿಂದ ಕಾದಾಡಿ ಅಸುರನನ್ನು ಸಂಹರಿಸುತ್ತಾನೆ.

ಹಿರಣ್ಯಾಕ್ಷನೆಂಬ ದಾನವನು ತನ್ನ ಅಸುರ ಕರ್ಮದಿಂದ ಭೂಮಿಯನ್ನು ಎಳೆದುಕೊಂಡು ಹೋಗಿ ಸಮುದ್ರಕ್ಕೆ ಎಸೆಯುತ್ತಾನೆ. ವಿಶ್ವದ ಅರ್ಧಭಾಗವು ಈ ಸಮುದ್ರದಿಂದ ಆವೃತವಾಗಿದ್ದು, ಅದರಲ್ಲಿಯೇ ಗರ್ಭೋದಕಶಾಯಿ ವಿಷ್ಣುವು ನೆಲೆಸಿದ್ದಾನೆ. ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರಕ್ಕೆ ಹಾಕಿದಾಗ, ವಿಷ್ಣುವು ವರಾಹ ರೂಪದಲ್ಲಿ ಬಂದು ಅವಳನ್ನು ರಕ್ಷಿಸುತ್ತಾನೆ. ಬ್ರಹ್ಮನ ಮೂಗಿನಿಂದ ಸಣ್ಣ ರುಪದಲ್ಲಿ ಹೊರಬರುವ ಮೂಲಕ ವರಾಹನ ಅವತಾರವಾಗುತ್ತದೆ. ಅವನು ಬೃಹದಾಕಾರ ತಾಳುತ್ತಾನೆ ಮತ್ತು ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ತನ್ನ ಕೋರೆಯಿಂದ ಹಿಡಿದಿಟ್ಟುಕೊಂಡು ರಕ್ಷಿಸುತ್ತಾನೆ. ಅನಂತರ ಅಸುರನನ್ನು ಸಂಹರಿಸುತ್ತಾನೆ.

ಶ್ರೀಲ ಜೀವ ಗೋಸ್ವಾಮಿಗಳ ಪ್ರಕಾರ, ವೇದ ಸಾಹಿತ್ಯವು ಭಗವಂತನ ವರಾಹಾವತಾರವನ್ನು ಎರಡು ಬಗೆಯ ಪ್ರಳಯಗಳಲ್ಲಿ, ಅಂದರೆ ಚಾಕ್ಷುಷ ಪ್ರಳಯ ಮತ್ತು ಸ್ವಾಯಂಭುವ ಪ್ರಳಯಗಳಲ್ಲಿ ವರ್ಣಿಸುತ್ತದೆ. ಊರ್ಧ್ವಲೋಕಗಳ ಹೊರತಾಗಿ, ಉಳಿದೆಲ್ಲ ಗ್ರಹಗಳೂ ಜಲಪ್ರಳಯದಲ್ಲಿ ವಿಲಯಗೊಂಡಾಗ ವಾಸ್ತವವಾಗಿ ಈ ವಿಶಿಷ್ಟ ವರಾಹಾವತಾರವನ್ನು ಊರ್ಧ್ವ ಲೋಕದ ನಿವಾಸಿಗಳು ಕಂಡರು. ಮೈತ್ರೇಯಿ ಮುನಿಗಳು ಉಭಯ ವರಾಹಾವತಾರಗಳನ್ನು ಸಂಯೋಜಿಸಿ ಸಂಕ್ಷೇಪವಾಗಿ ವಿದುರನಿಗೆ ತಿಳಿಸಿದರೆಂದು ಶ್ರೀ ವಿಶ್ವನಾಥ ಚಕ್ರವರ್ತಿಯವರು ಸೂಚಿಸುತ್ತಾರೆಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ.






Leave a Reply