ವೈವಿಧ್ಯಮಯ ತಿನಿಸುಗಳು

ಸರಳವಾಗಿ, ಸುಲಭವಾಗಿ ತಯಾರಿಸುವ ಕೆಲವು ತಿನಿಸುಗಳ ಬಗ್ಗೆ ವಿವರಿಸಿದ್ದೇವೆ. ಇವು ಪೌಷ್ಟಿಕಾಂಶ ಉಳ್ಳದ್ದು; ಅತ್ಯಂತ ಸ್ವಾದಿಷ್ಟವಾದ ಲಘು ಉಪಹಾರ. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ತಿನ್ನಲು ಕೊಡಿ.

ಆಲೂ ಬಟಾಣಿ ಸಮೋಸ

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು – 4 ಬಟ್ಟಲು

ತುಪ್ಪ – 1/2 ಬಟ್ಟಲು

ನೀರು – 2/3 ಬಟ್ಟಲು

ಆಲೂಗಡ್ಡೆ – 3

ಹೂ ಕೋಸು – 1/2

ತಾಜಾ ಬಟಾಣಿ – 1 1/2 ಬಟ್ಟಲು

ತುಪ್ಪ ಅಥವಾ ಎಣ್ಣೆ – 4 ಟೇಬಲ್‌ ಚಮಚ

ಜೀರಿಗೆ –  1 ಟೀ ಚಮಚ

ಮೆಂತ್ಯ – 1/2 ಟೀ ಚಮಚ

ತುರಿದ ಶುಂಠಿ – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ಕೊತ್ತಂಬರಿ ಬೀಜ ಪುಡಿ- 1/2 ಟೀ ಚಮಚ

ಇಂಗು – 1/4 ಟೀ ಚಮಚ

ಲವಂಗ ಪುಡಿ – 1/4 ಟೀ ಚಮಚ

ಚಕ್ಕೆ ಪುಡಿ – 1/2 ಟೀ ಚಮಚ

ಉಪ್ಪು – 2 ಟೀ ಚಮಚ

ಮೆಣಸು – 1/4 ಟೀ ಚಮಚ

ಕರಿಯಲು ತುಪ್ಪ ಅಥವಾ ಎಣ್ಣೆ

ಮಾಡುವ ವಿಧಾನ : ಹಿಟ್ಟು ಮತ್ತು ಅರ್ಧ ಟೀ ಚಮಚ ಉಪ್ಪನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ. ತುಪ್ಪವನ್ನು ಅದಕ್ಕೆ ಹಾಕಿ ಚೆನ್ನಾಗಿ ನಾದಬೇಕು. ನಿಧಾನವಾಗಿ ನೀರು ಹಾಕುತ್ತ ಹಿಟ್ಟನ್ನು ಕಲಸಿಕೊಳ್ಳಿ. ಚೆಂಡಿನಾಕಾರ ಮಾಡಿ ಅದರ ಮೇಲೆ ಸ್ವಲ್ಪ ನೀರು ಚಿಮುಕಿಸಿ ಇಡಿ. ಪಾತ್ರೆಯನ್ನು ಮುಚ್ಚಿ.

ಆಲೂಗಡ್ಡೆಯ ಸಿಪ್ಪೆ ತೆಗೆದು ದೊಡ್ಡದಾಗಿ ಕತ್ತರಿಸಿ. ಹೂಕೋಸನ್ನು ಚೆನ್ನಾಗಿ ತೊಳೆದು ಹೂವುಗಳನ್ನು ತುರಿಯಿರಿ ಅಥವಾ ಸಣ್ಣದಾಗಿ ಪ್ರತ್ಯೇಕ ಮಾಡಿ. ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ.

ಮಧ್ಯಮ ಉರಿಯ ಮೇಲೆ ದೊಡ್ಡ ಪ್ಯಾನ್‌ ಅನ್ನು ಇಡಿ. ತುಪ್ಪ ಅಥವಾ ಎಣ್ಣೆ ಹಾಕಿ ಕಾದ ಮೇಲೆ ಜೀರಿಗೆ ಮತ್ತು ಮೆಣಸು ಹಾಕಿ. ಅವು ಕಂದು ಬಣ್ಣವಾದ ಮೇಲೆ ಶುಂಠಿ ಮತ್ತು ಪುಡಿಮಾಡಿದ ಮಸಾಲೆ ಪದಾರ್ಥಗಳನ್ನು ಹಾಕಿ. ಒಂದು ನಿಮಿಷ ಹುರಿದ ಮೇಲೆ ಆಲೂ ಚೂರುಗಳನ್ನು ಹಾಕಿ ಕಲಸಿ. ಅನಂತರ ಹೂಕೋಸು ಹಾಕಿ ಚೆನ್ನಾಗಿ ಕಲಸಿ. 4-5 ನಿಮಿಷ ಬೆಂದ ಮೇಲೆ ನೀರು ಹಾಕಿ ಮುಚ್ಚಿಡಿ. ಸುಮಾರು 15 ನಿಮಿಷ ಬೇಯಬೇಕು. ತರಕಾರಿಗಳು ಸೀದು ಹೋಗದಂತೆ ನೋಡಿಕೊಳ್ಳಿ. ಬೆಂದ ಮೇಲೆ ಬಟಾಣಿಯನ್ನು ಹಾಕಿ ಕಲಸಿ. ಉಪ್ಪು ಮತ್ತು ಮೆಣಸು ಹಾಕಿ ಕಲಸಿ.

ಕಲಸಿಟ್ಟಿದ್ದ ಹಿಟ್ಟಿನ ಉಂಡೆಗಳನ್ನು ಮಾಡಿಕೊಳ್ಳಿ. ವೃತ್ತಾಕಾರದಲ್ಲಿ ಲಟ್ಟಿಸಿ. ಅದನ್ನು ಅರ್ಧಕ್ಕೆ ಕತ್ತರಿಸಿ. ಒಂದು ಅರ್ಧ ವೃತ್ತಾಕಾರದ ಭಾಗವನ್ನು ತೆಗೆದುಕೊಂಡು ಅದರ ನೇರವಾದ ಭಾಗಕ್ಕೆ ನೀರು ಸವರಿ. ಎರಡೂ ನೇರ ಭಾಗಗಳನ್ನು ಸೇರಿಸಿ ಕೋನ್‌ ಆಕಾರ ಮಾಡಿ. ಅದರೊಳಗೆ ಪಲ್ಯವನ್ನು ಹಾಕಿ ಮುಚ್ಚಿ. ತುದಿಯನ್ನು ಒತ್ತಿ ಮುಚ್ಚಿದರೆ ಪಲ್ಯ ಕೆಳಗೆ ಬೀಳುವುದಿಲ್ಲ. ಪ್ಯಾನ್‌ನಲ್ಲಿ ಎಣ್ಣೆಯನ್ನು ಕಾಯಿಸಿ ಸಮೋಸವನ್ನು ಕರಿಯಿರಿ. ತಟ್ಟೆಯಲ್ಲಿ ಎಣ್ಣೆ ಹೀರುವ ಕಾಗದದ ಹಾಳೆ ಹಾಕಿ ಅದರಲ್ಲಿ ಕರಿದ ಸಮೋಸವನ್ನು ಇಡಿ. ಕರಿದ ಮೇಲೆ ಬೇರೆ ಬಟ್ಟಲಿಗೆ ಹಾಕಿಡಿ.

ಕಚೋರಿ

ಬೇಕಾಗುವ ಪದಾರ್ಥಗಳು

ಉದ್ದಿನ ಬೇಳೆ – 1 ಬಟ್ಟಲು

ಮೈದಾ ಹಿಟ್ಟು – 3 ಬಟ್ಟಲು

ಚೂರು ಮಾಡಿದ ಹಸಿರು ಮೆಣಸಿನಕಾಯಿ – 2

ತುರಿದ ಶುಂಠಿ – 1 ಇಂಚಿನ ತುಂಡು

ತಾಜಾ ಕೊತ್ತಂಬರಿಸೊಪ್ಪು – 1-2 ಎಸಳು

ಪುಡಿ ಮಾಡಿದ ಜೀರಿಗೆ – 1 ಟೀ ಚಮಚ

ಎಣ್ಣೆ – 4 ಟೇಬಲ್‌ ಚಮಚ ಮತ್ತು ಕರಿಯಲು

ಇಂಗು – 1 ಚಿಟಿಕೆ

ಚಾಟ್‌ ಮಸಾಲ – 1 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ಮೂರು ಬಟ್ಟಲು ನೀರಿನಲ್ಲಿ ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ನೀರು ಬಸಿದು ರುಬ್ಬಿಕೊಳ್ಳಿ. ತುಂಬ ನುಣ್ಣಗೆ ರುಬ್ಬಬಾರದು. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ. ಅನಂತರ ಇಂಗು, ಮೆಣಸಿನಕಾಯಿ, ಶುಂಠಿ, ಕೊತ್ತಂಬರಿಸೊಪ್ಪು, ಚಾಟ್‌ ಮಸಾಲ ಮತ್ತು ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ಮತ್ತು ಉಪ್ಪು ಹಾಕಿ. ಅನಂತರ ರುಬ್ಬಿದ ಬೇಳೆಯನ್ನು ಹಾಕಿ ಸುಮಾರು ಮೂರು ನಿಮಿಷ ಚೆನ್ನಾಗಿ ಕಲಸಿ. ಈ ಮಿಶ್ರಣವು ನೀರು ಇಲ್ಲದಂತಾದಾಗ ಒಲೆಯಿಂದ ಕೆಳಗಿಳಿಸಿ. ಇದನ್ನು 12 ಅಥವಾ 16 ಸಮಾನ ಭಾಗ ಮಾಡಿ.

ಮೈದಾ ಹಿಟ್ಟಿಗೆ ಉಪ್ಪು ಮತ್ತು ಎರಡು ಟೇಬಲ್‌ ಚಮಚದಷ್ಟು ಎಣ್ಣೆ ಹಾಕಿ ಕಲಸಿ. ಅನಂತರ ಅಗತ್ಯವಿರುವಷ್ಟು ನೀರು ಹಾಕಿ ಕಲಸಿಡಿ. ಹಿಟ್ಟನ್ನು 12 ಅಥವಾ 18 ಭಾಗದ ಉಂಡೆ ಮಾಡಿ. ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿ ಅದರಲ್ಲಿ ಬೇಳೆ ಮಿಶ್ರಣವನ್ನು ತುಂಬಿ. ಅನಂತರ ಅದನ್ನು ಪುನಃ ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿ. ಪೂರಿಯು ತುದಿಯಲ್ಲಿ ತೆಳ್ಳಗೆ ಮತ್ತು ಮಧ್ಯದಲ್ಲಿ ದಪ್ಪಗೆ ಇರಲಿ. ಪ್ಯಾನ್‌ನಲ್ಲಿ ಸಾಕಷ್ಟು ಎಣ್ಣೆಯನ್ನು ಹಾಕಿ ಕಾಯಿಸಿ. ಸಾವಕಾಶವಾಗಿ ಕಚೋರಿಯನ್ನು ಗರಿಗರಿಯಾಗಿ ಕರಿಯಿರಿ. ಹಾಳೆಯ ಮೇಲೆ ಇಟ್ಟು ಎಣ್ಣೆ ಹೀರುವಂತೆ ಮಾಡಿ. ಯಾವುದೇ ಉಪ್ಪಿನಕಾಯಿ, ಚಟ್ನಿ ಅಥವಾ ಸಾಸ್‌ ಜೊತೆಯಲ್ಲಿ ತಿನ್ನಲು ಕೊಡಿ.

ಪರುಪ್ಪು ವಡೆ

ಬೇಕಾಗುವ ಪದಾರ್ಥಗಳು

ತೊಗರಿ ಬೇಳೆ – 1/2 ಬಟ್ಟಲು

ಕಡಲೆ ಬೇಳೆ –  1/2 ಬಟ್ಟಲು

ಉದ್ದಿನ ಬೇಳೆ – 1/2 ಬಟ್ಟಲು

ತುರಿದ ಶುಂಠಿ –  1/2 ಇಂಚಿನ ತುಂಡು

ಕತ್ತರಿಸಿದ ಹಸಿರು ಮೆಣಸಿನಕಾಯಿ – 4

ಕರಿಬೇವಿನ ಸೊಪ್ಪು – 10-12

ತಾಜಾ ಕೊತ್ತಂಬರಿ ಸೊಪ್ಪು – ಸಣ್ಣ ಕಟ್ಟಿನ 1/4 ಭಾಗ

ಕೆಂಪು ಮೆಣಸಿನಕಾಯಿ – 4

ಉಪ್ಪು – ರುಚಿಗೆ ತಕ್ಕಷ್ಟು

ಇಂಗು – 1/4 ಟೀ ಚಮಚ

ಕರಿಯಲು ಎಣ್ಣೆ

ಮಾಡುವ ವಿಧಾನ : ಎಲ್ಲ ಬೇಳೆಗಳನ್ನೂ ಚೆನ್ನಾಗಿ ತೊಳೆದು ಮೂರು ಬಟ್ಟಲು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ಅನಂತರ ನೀರನ್ನು ಬಸಿದು ಪಾತ್ರೆಯಲ್ಲಿ ಹಾಕಿಡಿ. ಬೇಳೆಗಳಿಗೆ ಕೆಂಪು ಮೆಣಸಿನಕಾಯಿ, ಕರಿಬೇವು, ಶುಂಠಿ ಮತ್ತು ಉಪ್ಪು ಹಾಕಿ ರುಬ್ಬಿ. ಅತಿ ಕಡಮೆ ನೀರು ಉಪಯೋಗಿಸಿ. ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ. ಹಸಿರು ಮೆನಸಿನಕಾಯಿ, ಇಂಗು, ಕೊತ್ತಂಬರಿ ಸೊಪ್ಪುಗಳನ್ನು ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ. ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ವಡೆ ತಟ್ಟಿ ಮಧ್ಯ ಉರಿಯಲ್ಲಿ ಕರಿಯಿರಿ. ಗರಿ ಗರಿ ವಡೆಯನ್ನು ಕಾಗದದ ಮೇಲೆ ಹಾಕಿ ಎಣ್ಣೆ ಹೀರುವಂತೆ ಮಾಡಿ. ಯಾವುದೇ ಚಟ್ನಿಯ ಜೊತೆ ತಿನ್ನಲು ಕೊಡಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi