ಕೃಷ್ಣನ ಪರಿಪೂರ್ಣ ರೂಪದ ಚೆಲುವಿನ ಮುಂದೆ ಈ ಭೌತಿಕ ಜಗತ್ತಿನಲ್ಲಿ ಕಾಣುವ ಸೌಂದರ್ಯವು ತುಂಬ ಮಂಕಾಗುತ್ತದೆ.

ಜನರು ಈ ಲೋಕದ ಸೌಂದರ್ಯದಿಂದ ಸೆಳೆಯಲ್ಪಟ್ಟಿದ್ದಾರೆ. ಆದರೆ ವೈದಿಕ ಸಾಹಿತ್ಯವು ಲೌಕಿಕ ಸೌಂದರ್ಯದ ವಾಸ್ತವ ಗುಣದ, ಸ್ವಭಾವದ ಬಗೆಗೆ ನಮಗೆ ವ್ಯಾಪಕವಾದ ಒಳ ದೃಷ್ಟಿಯನ್ನು ನೀಡಿದೆ. ಈ ಪವಿತ್ರ ಮೂಲಗಳಿಂದ ಕೇಳಲು ಜನರು ಸ್ವಲ್ಪ ಸಮಯವನ್ನು ವಿನಿಯೋಗಿಸಿದರೆ ಅವರು ಈ ಲೋಕದಲ್ಲಿ ಕಾಣುವ `ಸೌಂದರ್ಯ’ ಎಂಬುವುದು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅಸೀಮಿತ ಆಧ್ಯಾತ್ಮಿಕ ಸೌಂದರ್ಯದ ಅತ್ಯಂತ ಮಂಕಾದ, ಭ್ರಾಮಕ ಪ್ರತಿಬಿಂಬ ಎಂದು ಅವರಿಗೆ ಅರಿವಾಗಿ ಅವರು ಅಚ್ಚರಿಗೊಳ್ಳುತ್ತಾರೆ.
ಹುಸಿ ಸೌಂದರ್ಯ
ನಿಜ, ಐಹಿಕ ಸೌಂದರ್ಯವು ಹುಸಿ ಎಂಬುವುದನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ. ಮೋಹಪರವಶನಾದ ಯುವಕನು ತನ್ನ ಪ್ರಿಯತಮೆಯನ್ನು ಚೆಲುವಿನ ಸಾಕಾರ ರೂಪವಾಗಿ ನೋಡುತ್ತಾನೆ, ವಿದ್ವಾಂಸನು ಕಾವ್ಯದ ಮೇರು ಕೃತಿಯಲ್ಲಿನ ಅಪಾರ ಕಲ್ಪನೆಗೆ ಮಾರುಹೋಗುತ್ತಾನೆ ಮತ್ತು ಕಲಾವಿದನು ನಿಸರ್ಗದ ದೃಶ್ಯಾವಳಿಗಳು ದೇವತೆಯ ಕರಕೌಶಲ ಎಂದು ಭಾವಿಸುತ್ತಾನೆ. ಇಲ್ಲಿನ ಪ್ರತಿಯೊಂದು ಸಂದರ್ಭದಲ್ಲಿಯೂ ವೀಕ್ಷಕನು ತಾನು ಗ್ರಹಿಸಿದ್ದು ನಿಜವಾದ ಸೌಂದರ್ಯ ಎಂದು ಮೆಚ್ಚುತ್ತಾನೆ. ಹಾಗಾದರೆ ಅದು ಹುಸಿ ಎಂದು ಏಕೆ ಹೇಳುತ್ತಾರೆ?
ಈ ಪ್ರಶ್ನೆಗೆ ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಉತ್ತರವನ್ನು ನೀಡಲಾಗಿದೆ. ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, “ಸತ್ಯವನ್ನು ಕಾಣುವ ಎಲ್ಲರೂ ಅಸ್ತಿತ್ವದಲ್ಲಿ ಇಲ್ಲದಿರುವುದು (ಐಹಿಕ ದೇಹ) ಉಳಿಯುವುದಿಲ್ಲ ಮತ್ತು ನಿರಂತರವಾದದ್ದು (ಆತ್ಮ) ಬದಲಾವಣೆ ಹೊಂದುವುದಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಎರಡರ ಲಕ್ಷಣವನ್ನು ಅಧ್ಯಯನ ಮಾಡಿ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ.”
ಇಲ್ಲಿ ಲೌಕಿಕ ಸೌಂದರ್ಯವನ್ನು ಹುಸಿ ಎಂದು ಭಾವಿಸಲಾಗಿದೆ. ಹೇಗೆಂದರೆ, ಅದರ ಸ್ವರೂಪವು ಅಲ್ಪಕಾಲದ್ದು. ಅದು ಕ್ಷಣಿಕವಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಮರೀಚಿಕೆಯಂತೆ ಮಾಯವಾಗುತ್ತದೆ. ಆಕರ್ಷಕ ಯುವ ದೇಹವು ಮುದಿಯಾಗುತ್ತದೆ ಮತ್ತು ಸುಕ್ಕುಗಟ್ಟುತ್ತದೆ. ಅದು ಸಾಯುತ್ತದೆ, ಕೊಳೆಯುತ್ತದೆ ಮತ್ತು ಹುಳುಗಳು ತಿನ್ನುತ್ತವೆ. ಕಾವ್ಯವನ್ನು ಪುಸ್ತಕ ರೂಪದಲ್ಲಿ ಸಂರಕ್ಷಿಸಿ ಇಟ್ಟಿದ್ದರೂ ಅದರ ಸೌಂದರ್ಯವೂ ಅಳಿದು ಹೋಗುತ್ತದೆ. ಅದೇ ರೀತಿ ಗ್ರಾಮದ ಸುಂದರ ಪ್ರಕೃತಿಯು ಕಾಲ ಕ್ರಮೇಣ ಶಾಶ್ವತವಾಗಿ ಹಾಳಾಗುತ್ತದೆ.
ನಾವು ನಿಕಟವಾಗಿ ಗಮನಿಸಿದರೆ ಅಥವಾ ನಮ್ಮ ದೃಷ್ಟಿಕೋನವನ್ನು ಬದಲಿಸಿದಾಗ ಲೌಕಿಕ ಸೌಂದರ್ಯವು ಹುಸಿ ಎಂಬುವುದು ಸಾಬೀತಾಗುತ್ತದೆ. ಉದಾಹರಣೆಗೆ ಯುವಕನು ತನ್ನ ಆಕರ್ಷಣೆಯ ಕೇಂದ್ರವಾದ, ಮನಸೆಳೆವ ಯುವದೇಹದ ಮೇಲು-ಪದರವನ್ನು ತೆಗೆಯಲು ಮುಂದಾದರೆ, ಅವನು ತತ್ಕ್ಷಣ ಹಿಮ್ಮೆಟ್ಟುತ್ತಾನೆ, ಲೌಕಿಕ ಸೌಂದರ್ಯವು ಕೇವಲ ಬಾಹ್ಯದ್ದು ಎಂಬ ನಿರ್ಣಯಕ್ಕೆ ಬರುತ್ತಾನೆ. ಒಮ್ಮೆ ಸುಂದರವೆಂದು ಮೆಚ್ಚಿಕೊಂಡಿದ್ದ ಕಾವ್ಯ ಅಥವಾ ನಿಸರ್ಗದ ದೃಶ್ಯವು ಮರುಕ್ಷಣ ಅದೇ ವ್ಯಕ್ತಿಗೆ ಸ್ವಾರಸ್ಯವಿಲ್ಲದಂತೆ ಕಾಣಬಹುದು. ಅವನು ಒಂದಷ್ಟು ಭಾವನಾತ್ಮಕ ಆಘಾತವನ್ನು ಸಹಿಸಿಕೊಂಡ ಮೇಲೆ ಈಗ ಎಲ್ಲವನ್ನೂ ಭಿನ್ನವಾಗಿ ನೋಡುತ್ತಾನೆ.
ಅಂತಿಮವಾಗಿ, ಲೌಕಿಕವಾದುದು ಆತ್ಮವನ್ನು ಎಂದಿಗೂ ಪೂರ್ಣವಾಗಿ ತೃಪ್ತಿಪಡಿಸುವುದು ಸಾಧ್ಯವಾಗದ ಕಾರಣ ಲೌಕಿಕ ಸೌಂದರ್ಯವು ಹುಸಿ. ಯುವಕನು ಮತ್ತೊಬ್ಬ ಪ್ರಿಯತಮೆಯನ್ನು ಕಾಲಕ್ರಮೇಣ ಅಪೇಕ್ಷಿಸುತ್ತಾನೆ, ವಿದ್ವಾಂಸನು ಕವನಗಳ ಹೊಸ ಪುಸ್ತಕವನ್ನು ಮತ್ತು ಕಲಾವಿದನು ಮತ್ತೊಂದು ದೃಶ್ಯವನ್ನು ಕಂಡುಕೊಳ್ಳುತ್ತಾನೆ. ಪ್ರತಿಯೊಬ್ಬರೂ ಸಂಪೂರ್ಣ ಈಡೇರಿಕೆಗಾಗಿ ಶೋಧಿಸುತ್ತಾರೆ ಮತ್ತು ನಿರಂತರವಾಗಿ, ಸಾವಿನವರೆಗೂ, ಅದು ಅವರಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತದೆ.
ಈ ಅಂಶಗಳನ್ನು ಹೇಳಿರುವುದು ನಿರಾಶೆ ಮತ್ತು ಹತಾಶೆಯ ಮನಸ್ಥಿತಿಯನ್ನು ಉಂಟುಮಾಡಲೆಂದಲ್ಲ, ಆದರೆ ನಮ್ಮ ಸೌಂದರ್ಯ ಪ್ರಜ್ಞೆಯು ಸ್ವಾಭಾವಿಕ ಭಾವನೆಯಾಗಿದ್ದರೂ ನಾವು ಅದನ್ನು ತಪ್ಪು ಸ್ಥಳಗಳಲ್ಲಿ ಹುಡುಕುತ್ತಿದ್ದೇವೆ ಎಂಬುವುದನ್ನು ತೋರಿಸಲೆಂದು. ಗಣಿಗಾರನು ಗಣಿಗಾರಿಕೆಗೆ ಮುನ್ನ ನಕ್ಷೆಯನ್ನು ಬಹಳ ಎಚ್ಚರದಿಂದ ಅಧ್ಯಯನ ಮಾಡುವ ರೀತಿಯಲ್ಲಿ, ನಾವೂ ಕೂಡ ಈ ಅಮೂಲ್ಯ ಸಂಪತ್ತನ್ನು ಹೊರತೆಗೆಯಬಯಸಿದರೆ, ನಿಜವಾದ ಸೌಂದರ್ಯ ಎಲ್ಲಿದೆ ಎಂಬುವುದನ್ನು ನಿರ್ಧರಿಸಬೇಕು.
ಚೆಲುವಿನ ಭಂಡಾರ
ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನು ಸೌಂದರ್ಯದ ಭಂಡಾರ. ಅವನು ಪರಾತ್ಪರ ಅಥವಾ ಎಲ್ಲದರ ಮೂಲ. ಈ ಲೋಕದಲ್ಲಿ ಕಾಣುವ ಸೌಂದರ್ಯದ ಮೂಲವು ಅವನಲ್ಲಿಯೇ ಇದೆ, ಮತ್ತು ಪರಿಪೂರ್ಣ ಸೌಂದರ್ಯದ ಬಗೆಗೆ ಅರಿಯುವ ಇಚ್ಛೆಯನ್ನು ಈಡೇರಿಸಕೊಳ್ಳಲು ನಾವು ಅಂತಿಮವಾಗಿ ಕೃಷ್ಣನತ್ತಲೇ ಮುಖಮಾಡಬೇಕು. ಬ್ರಹ್ಮ ಸಂಹಿತದಲ್ಲಿ ಬ್ರಹ್ಮನು ಶ್ರೀ ಕೃಷ್ಣನ ಚೆಲುವನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ :

“ಯಾರು ಕೊಳಲು ನುಡಿಸುವುದರಲ್ಲಿ ನಿಪುಣನೋ, ಯಾರ ಅರಳುತ್ತಿರುವ ನೇತ್ರಗಳು ಕಮಲ ದಳದಂತೆ ಇದೆಯೋ, ಯಾರ ಶಿರಕ್ಕೆ ನವಿಲು ಗರಿಯ ಅಲಂಕಾರವಿದೆಯೋ, ಯಾರ ಸುಂದರ ದೇಹವು ನೀಲಿ ಮೋಡಗಳ ಬಣ್ಣ ಲೇಪಿತವೋ ಮತ್ತು ಯಾರ ಅನನ್ಯ ಚೆಲುವು ಲಕ್ಷಾಂತರ ಮನ್ಮಥರನ್ನು ಮೋಹಪರವಶರನ್ನಾಗಿ ಮಾಡುತ್ತಿದೆಯೋ ಆ ಆದಿದೇವ, ಗೋವಿಂದನನ್ನು (ಕೃಷ್ಣ) ನಾನು ಪೂಜಿಸುವೆ.”
ಶ್ರೀ ಕೃಷ್ಣನ ಆಧ್ಯಾತ್ಮಿಕ ಚೆಲುವಿನ ಈ ವಾಸ್ತವವಾದ ವರ್ಣನೆಯು ಬ್ರಹ್ಮನ ಊಹೆಯ ಸೃಷ್ಟಿಯಲ್ಲ. ಬದಲಿಗೆ ಬ್ರಹ್ಮನು ಆತ್ಮ ಸಾಕ್ಷಾತ್ಕಾರದ ಆನಂದಪರವಶತೆಯಲ್ಲಿ, ತನ್ನ ಮುಂದೆ ಮುಖಾಮುಖಿಯಾಗಿ ನಿಂತ ಭಗವಂತನನ್ನು ಕಂಡಾಗ ಹೇಳಿದ್ದು. ಮುಂದಿನ ಶ್ಲೋಕದಲ್ಲಿ ಬ್ರಹ್ಮನು ಕೃಷ್ಣನ ರೂಪದ ಅನಂತತೆಗೆ ಸಂಬಂಧಿಸಿದಂತೆ ತನ್ನ ದೃಷ್ಟಿಯ ವಿವರಣೆಯನ್ನು ಮುಂದುವರಿಸುತ್ತಾನೆ :
“ಯಾರ ಕೊರಳಿನಲ್ಲಿ ಆಭರಣಗಳ ಹಾರ ತೂಗಾಡುತ್ತಿದೆಯೋ, ಯಾರು ಯಾವಾಗಲೂ ಪ್ರೇಮದ ಲೀಲೆಯಲ್ಲಿ ಸಂಭ್ರಮಿಸುತ್ತಿರುವನೋ, ಯಾವ ಶ್ಯಾಮಸುಂದರನ ತ್ರಿಭಂಗ ರೂಪವು ಶಾಶ್ವತವಾಗಿ ವ್ಯಕ್ತವಾಗುತ್ತಿದೆಯೋ ಆ ಆದಿದೇವ ಗೋವಿಂದನನ್ನು ನಾನು ಪೂಜಿಸುವೆ.”
ಕೃಷ್ಣನ ರೂಪವು ಶಾಶ್ವತವಾಗಿ ಪ್ರಕಟವಾದ ಹಾಗೆ ಆ ರೂಪದ ಸೌಂದರ್ಯ ಕೂಡ ಶಾಶ್ವತ. ಈ ರೀತಿ `ಯಾವುದಕ್ಕೆ ಬದಲಾವಣೆ ಇಲ್ಲವೋ’ ಎಂಬ ಭಗವದ್ಗೀತೆಯ ಸತ್ಯ ಅಥವಾ ನಿಜವಾದ ನಿರೂಪಣೆಯನ್ನು ಅದು ಫಲಪ್ರದಗೊಳಿಸುತ್ತದೆ. ಕೃಷ್ಣನ ಸೌಂದರ್ಯ ಶಾಶ್ವತ ಮಾತ್ರವಲ್ಲ, ವಸಂತ ಕಾಲದಲ್ಲಿ ಸದಾ ಅರಳುವಂತೆ ಅದು ಸದಾ ಹೊಸತನದ್ದು, ನವನವೀನವಾದದ್ದು. ಭಕ್ತನಿಗೆ ಆ ದೈವೀ ರೂಪವನ್ನು ಎಷ್ಟು ನೋಡಿದರೂ ಸಾಲದು. ಆ ರೂಪವು ಎಷ್ಟು ಭವ್ಯವೆಂದರೆ, ಕೃಷ್ಣನಿಗೇ ಅದನ್ನು ಅಂದಾಜು ಮಾಡಲಾಗುವುದಿಲ್ಲ.
ಪರಾತ್ಪರನ ವರ್ಣನೆ
ಕೃಷ್ಣನೇ ಪರಮ ಸತ್ಯನಾಗಿರುವುದರಿಂದ ಅವನ ಸೌಂದರ್ಯವೂ ಪರಾತ್ಪರ. ಅದು ನಿಕಟ ಪರೀಕ್ಷೆ ಅಥವಾ ದೃಷ್ಟಿಕೋನ ಬದಲಾವಣೆಯಿಂದ ಎಂದಿಗೂ ಕುಂದುವುದಿಲ್ಲ ಅಥವಾ ಕ್ಷೀಣಿಸುವುದಿಲ್ಲ. ಅವನ ರೂಪವು ಶಾಶ್ವತ, ಜ್ಞಾನ ಮತ್ತು ಆನಂದದ ಪರಿಶುದ್ಧ ಶಕ್ತಿಯ ಆಗರ. ಆದುದರಿಂದ ಅದು ಆಮೂಲಾಗ್ರವಾಗಿ ಸುಂದರ. ದಿಟವಾಗಿ ಅದನ್ನು ಪ್ರಜ್ವಲಿಸುವ ವೈಡೂರ್ಯ ರತ್ನಕ್ಕೆ ಹೋಲಿಸಲಾಗಿದೆ. ಹೀಗೆ ಕೃಷ್ಣನ ಸೌಂದರ್ಯವನ್ನು ಆಧ್ಯಾತ್ಮಿಕ ಆಕಾಶದಲ್ಲಿ ವಾಸಿಸುವ ಅಸಂಖ್ಯ ಭಕ್ತರು ಕೊಂಡಾಡುತ್ತಾರೆ ಮತ್ತು ಅವರಲ್ಲಿ ಕೆಲವರು ನಮ್ಮ ಗಮನವನ್ನು ಪುನಃ ಕೃಷ್ಣನತ್ತ ತಿರುಗಿಸಲು ಆಗಾಗ್ಗೆ ಇಲ್ಲಿಗೆ ಬರುತ್ತಾರೆ. ಕೃಷ್ಣನ ಪರಮ ಸ್ವಭಾವವು ಹೇಗೆಂದರೆ, ಅವನ ಹೆಸರು, ರೂಪ, ಮಾತು, ಲೀಲೆ ಅಥವಾ ಪರಿಕರ ಯಾವುದೇ ಆಗಿರಲಿ, ಪ್ರತಿಯೊಂದೂ ಕೂಡ ಅವನ ಪರಮ ಶ್ರೇಷ್ಠ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಶ್ರೀಲ ಪ್ರಭುಪಾದರ ಪುಸ್ತಕ `ಕೃಷ್ಣ’ದಲ್ಲಿ ಭಕ್ತರೊಬ್ಬರು ನೀಡಿರುವ ಈ ಕೆಳಕಂಡ ಹೇಳಿಕೆಯು ಕೃಷ್ಣನ ಸ್ವರೂಪದ ವಿಶಿಷ್ಟ ಗುಣವನ್ನು ಸ್ಪಷ್ಟಪಡಿಸುತ್ತದೆ. ಇಲ್ಲಿ ಭಗವಂತನ ಕೊಳಲು ನುಡಿಸುವಿಕೆಯ ಚೆಲುವನ್ನು ಭಾವನಾತ್ಮಕವಾಗಿ ವರ್ಣಿಸಲಾಗಿದೆ :
“ನನ್ನ ಪ್ರೀತಿಯ ಮಿತ್ರರೇ, ಕೃಷ್ಣನು ಎಷ್ಟು ಸುಂದರನೆಂದರೆ ಅದೃಷ್ಟ ಲಕ್ಷ್ಮಿಯು ಸದಾ ಅವನ ವಕ್ಷ ಸ್ಥಳದಲ್ಲಿ ಇರುತ್ತಾಳೆ ಮತ್ತು ಅವನು ಸದಾ ಚಿನ್ನ ಕಂಠಾಹಾರದಿಂದ ಅಲಂಕೃತನಾಗಿದ್ದಾನೆ. ಚೆಲುವ ಕೃಷ್ಣನು ತನ್ನ ಭಕ್ತರ ಹೃದಯ ತಣಿಸಲು ತನ್ನ ಕೊಳಲು ನುಡಿಸುತ್ತಾನೆ. ಸಂಕಷ್ಟದಲ್ಲಿರುವ ಜೀವಿಗಳಿಗೆ ಅವನೊಬ್ಬನೇ ಸ್ನೇಹಿತ. ಅವನು ಕೊಳಲು ನುಡಿಸಿದಾಗ ವೃಂದಾವನದ ಗೋವುಗಳು ಮತ್ತು ಇತರ ಪ್ರಾಣಿಗಳು ಆಹಾರ ಸೇವನೆಯಲ್ಲಿ ನಿರತವಾಗಿದ್ದರೂ ಅಗಿಯುವುದನ್ನೇ ನಿಲ್ಲಿಸುತ್ತವೆ. ಅವುಗಳ ಕಿವಿಗಳು ನಿಮಿರುತ್ತವೆ ಮತ್ತು ಅವು ಬೆರಗಾಗಿ ನಿಂತುಬಿಡುತ್ತವೆ. ಅವು ಜೀವಂತವಾಗಿ ಕಾಣುವುದಿಲ್ಲ, ಬಣ್ಣದ ಪಶುಗಳಾಗಿ ಕಾಣುತ್ತವೆ. ಕೃಷ್ಣನ ಕೊಳಲು ನುಡಿಸುವಿಕೆ ಎಷ್ಟು ಆಕರ್ಷಕವೆಂದರೆ, ಪ್ರಾಣಿಗಳೂ ಮಂತ್ರಮುಗ್ಧವಾಗುತ್ತವೆ. ಇನ್ನು ನಮ್ಮ ಪಾಡೇನು?”
ಕೃಷ್ಣನ ಸೌಂದರ್ಯವು ಪೂರ್ಣ ಸಂತೃಪ್ತಿ ನೀಡುವಂತೆ ಈ ಎಲ್ಲ ಲಕ್ಷಣಗಳೂ ಒಟ್ಟುಗೂಡುತ್ತವೆ. ಲೌಕಿಕ ಸೌಂದರ್ಯವು ಕ್ಷಣಿಕ ಆನಂದವನ್ನು ನೀಡಿದರೆ, ಕೃಷ್ಣನ ಆಧ್ಯಾತ್ಮಿಕ ಸೌಂದರ್ಯವು ಜೀವಿಯ ಆತ್ಮವನ್ನೇ ಸ್ಪರ್ಶಿಸುತ್ತದೆ. ಅದು ಅವನನ್ನು ರೋಮಾಂಚನಗೊಳಿಸುತ್ತದೆ. ಅದೆಷ್ಟು ಅದ್ಭುತವೆಂದರೆ ಒಮ್ಮೆ ಅದರ ಅನುಭವದ ಸವಿಯನ್ನು ಕಂಡಮೇಲೆ ಅದನ್ನು ಎಂದಿಗೂ ಬಿಡಲಾಗದು. ಆದುದರಿಂದ ಶ್ರೀಲ ರೂಪ ಗೋಸ್ವಾಮಿ ಅವರು ಕಿವಿಮಾತು ಹೇಳುತ್ತಾರೆ :

“ನನ್ನ ಪ್ರೀತಿಯ ಸಖ, ಈ ಲೌಕಿಕ ಲೋಕದಲ್ಲಿ ನಿನ್ನ ಸ್ನೇಹಿತರೊಂದಿಗೆ ಆನಂದಿಸಬೇಕೆಂಬ ಇಚ್ಛೆ ನಿನಗೆ ಈಗಲೂ ಇದ್ದರೆ, ಕೇಶಿಘಟ್ಟದ ದಡದಲ್ಲಿ ನಿಂತಿರುವ ಹುಡುಗನ ರೂಪದತ್ತ ತಿರುಗಿಯೂ ನೋಡಬೇಡ. ಅವನು ಗೋವಿಂದನೆಂದು ಪ್ರಸಿದ್ಧನಾಗಿದ್ದಾನೆ. ಅವನ ಕಣ್ಣುಗಳು ಅತ್ಯಂತ ಆಕರ್ಷಕ. ಅವನು ಕೊಳಲು ನುಡಿಸುತ್ತಿದ್ದಾನೆ ಮತ್ತು ಅವನ ಶಿರದ ಮೇಲೆ ನವಿಲು ಗರಿ ಇದೆ. ಅವನ ಇಡೀ ದೇಹವು ಆಕಾಶದಲ್ಲಿನ ಚಂದ್ರನ ಬೆಳಕಿನಿಂದ ಪ್ರಕಾಶಮಯವಾಗಿದೆ.”
ಭಕ್ತನು ಕೃಷ್ಣನ ಸೌದರ್ಯವನ್ನು ಹೆಚ್ಚು ಹೆಚ್ಚು ಮೆಚ್ಚಿದಷ್ಟೂ ಈ ಲೌಕಿಕ ಲೋಕದ ಮಿಣುಕುವ ಆಕರ್ಷಣೆಗಳಿಗೆ ಕಡಮೆ ಮಾರುಹೋಗುತ್ತಾನೆ. ಒಮ್ಮೆ ಶ್ರೇಷ್ಠ ಭಕ್ತ ಹರಿದಾಸ ಠಾಕುರ ಅವರು ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತ ಭಗವಂತನ ನಾಮದ ಸೌಂದರ್ಯದಲ್ಲಿ ತಲ್ಲೀನರಾಗಿದ್ದರು. ಆಗ ಮೋಹಕ ರೂಪದ ವೇಶ್ಯೆಯೊಬ್ಬಳು ಪ್ರತ್ಯಕ್ಷಳಾಗಿ ಅವರು ದಿನಕ್ಕೆ 300,000 ಬಾರಿ ಕೃಷ್ಣ ನಾಮವನ್ನು ಜಪಿಸುವುದನ್ನು ತಡೆಯಲು ಪ್ರಯತ್ನಿಸಿದಳು. ಕೃಷ್ಣನ ಚೆಲುವಿಗೆ ಹರಿದಾಸರ ಆಕರ್ಷಣೆ ಎಷ್ಟು ಗಾಢವಾಗಿತ್ತೆಂದರೆ, ಅವರು ವೇಶ್ಯೆಯಿಂದ ಕಿಂಚಿತ್ತೂ ಆಕರ್ಷಿತರಾಗಲಿಲ್ಲ. ಬದಲಿಗೆ, ಅವಳನ್ನು ಭಕ್ತಳನ್ನಾಗಿ ಪರಿವರ್ತಿಸಿಬಿಟ್ಟರು.
ಕೃಷ್ಣನ ಚೆಲುವಿನ ವರ್ಣನೆಯು ಅತ್ಯಾಕರ್ಷಕವಾಗಿದ್ದರೂ ನಾವು ಈ ಲೋಕದ ಸೆಳೆತವನ್ನು ಎದುರಿಸಿ ಗೆಲ್ಲುವುದು ಮತ್ತು ಕೃಷ್ಣನ ಆಧ್ಯಾತ್ಮಿಕ ನೋಟವನ್ನು ಪಡೆಯುವುದು ಹೇಗೆ ಎಂಬ ಯೋಚನೆ ಸರಿಯಾಗಿಯೇ ಇದೆ. ಈ ಲೋಕದ ಮಿಣುಕವ ಸೌಂದರ್ಯದ ಮೂಲ ಕೂಡ ಕೃಷ್ಣ ಎಂಬುವುದನ್ನು ನೆನಪಿಸಿಕೊಳ್ಳುತ್ತ ನಾವು ಆರಂಭಿಸಬಹುದು. ಸೂರ್ಯಪ್ರಭೆ, ಹೂವಿನ ಪರಿಮಳ, ನೀರಿನ ರುಚಿ ಅಥವಾ ಯಾವುದೇ ಮೌಲ್ಯವುಳ್ಳದ್ದು ನಮಗೆ ಕೃಷ್ಣನನ್ನು ನೆನಪಿಸಬಹುದು ಮತ್ತು ಈ ರೀತಿ ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಕರ್ತೃವಾಗಬಹುದು.

ಇದರೊಂದಿಗೆ, ಭಕ್ತರ ಜೊತೆಯಲ್ಲಿ ಕೃಷ್ಣ ನಾಮವನ್ನು ಜಪಿಸುತ್ತ ಕೇಳುತ್ತ ಮತ್ತು ದೇವಸ್ಥಾನದಲ್ಲಿ ಅವನ ವಿಗ್ರಹ ರೂಪವನ್ನು ಆರಾಧಿಸುತ್ತ ನಾವು ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಕ್ಷಿಪ್ರಗೊಳಿಸಬಹುದು. ಆನಂದಮಯ ಭಕ್ತಿ ಪ್ರಧಾನ ಚಟುವಟಿಕೆಗಳ ಸಂಯೋಜನೆಯು ಕೃಷ್ಣನನ್ನು ಕುರಿತ ಶುದ್ಧ ಪ್ರೇಮದ ವೇದಿಕೆಗೆ ಖಚಿತವಾಗಿ ಮತ್ತು ಪರಿಣಾಮಕಾರಿಯಾಗಿ ನಮ್ಮನ್ನು ಕೊಂಡೊಯ್ಯುತ್ತದೆ. ಈ ಮೂಲಕ ನಾವು ಅವನನ್ನು ಮುಖಾಮುಖಿಯಾಗಿ ನೋಡಬಹುದು ಮತ್ತು ಅವನ ಚಂದ್ರನಂತಹ ಚೆಲುವನ್ನು ಆನಂದಿಸುವುದು ಸಾಧ್ಯವಾಗುತ್ತದೆ.






Leave a Reply