ಮೃತ್ಯುವನ್ನು ಮೀರಿದ ಮರುತ್ತರು

ದಕ್ಷನ ವಂಶಾವಳಿ (ಭಾಗ-3)

ತನ್ನ ಮಕ್ಕಳಾದ ದೈತ್ಯರು ಶ್ರೀವಿಷ್ಣುವಿನಿಂದ ಹತರಾಗುತ್ತಿರಲು, ದಿತೀದೇವಿ ತೀವ್ರ ಶೋಕಕ್ಕೊಳಗಾದಳು. ಇವೆಲ್ಲಕ್ಕೂ ಇಂದ್ರನೇ ಕಾರಣ ಎಂದು ತಿಳಿದು, ಆತನನ್ನು ವರ್ಧಿಸಲು ಸಮರ್ಥರಾದ ಮಕ್ಕಳನ್ನು ಕರುಣಿಸಬೇಕೆಂದು ಪತಿಯಲ್ಲಿ ಪ್ರಾರ್ಥಿಸಿದಳು. ಕಶ್ಯಪನ ಉಪದೇಶದಂತೆ ಪುಂಸವನ ವ್ರತ ಆಚರಿಸುತ್ತಿರಲು, ಇಂದ್ರನು ಆಕೆಯ ದುರುದ್ದೇಶವನ್ನರಿತು, ಅದರಿಂದ ಪಾರಾಗುವ ಸಲುವಾಗಿ ಉಪಾಯ ಹೂಡಿ, ತಾನೇ  ಅವಳ ಸೇವೆಗೆ ನಿಂತನು. ಅವಳು ಅಶುಚಿಯಾಗಿ ಅನುಷ್ಠಾನ ಮಾಡಿದ್ದರಿಂದ ಅವಳ ವ್ರತ ನಿಷ್ಫಲವಾಯಿತು. ಇಂದ್ರ ಆಕೆಯ ಗರ್ಭ ಹೊಕ್ಕು ಭ್ರೂಣವನ್ನು ಛೇದಿಸಲು ಅವು ಸಾಯದೆ  ನಲ್ವತ್ತೊಂಭತ್ತು ಭಾಗಗಳಾಗಿ ಅಳಲಾರಂಭಿಸಿದವು ಆಗ ಇಂದ್ರ `ಮಾ ರೋದೀಃ!’ ಎಂದು ಎಚ್ಚರಿಸಿದ. ಅಂದಿನಿಂದ ಅವರು `ಮರುದ್ಗಣ’ವೆಂದು ಹೆಸರಾದರು. ಮೃತ್ಯುವನ್ನು ಮೀರಿದ ಮರುತ್ತರರಾದರು.

ಭಗವಂತನು ತನ್ನ ಆನಂದಕ್ಕಾಗಿ ಜೀವವನ್ನು ಸೃಷ್ಟಿಸಿದ. ಆದರೆ ಸೃಷ್ಟಿಯ ಆರಂಭದಿಂದಲೂ ಜೀವವು ಈ ಸೃಷ್ಟಿಗೆ ತಾನೇ ಒಡೆಯನಾಗಿ ಭಗವಂತನನ್ನು ಮೀರಿ ಬೆಳೆಯಲು ಪ್ರಯತ್ನ ಮಾಡುತ್ತಲೇ ಇದೆ! ಹೊಸ ಹೊಸ ಆವಿಷ್ಕಾರಗಳನ್ನು ರೂಪಿಸಿ ಸೃಷ್ಟಿಯ ಒಡೆತನವನ್ನು ಸಾಧಿಸಲು ಜೀವನು ಮತ್ತೆ ಮತ್ತೆ ಪ್ರಯತ್ನಗಳನ್ನು ಮಾಡುವುದು, ಭಗವಂತನು ಮತ್ತೆ ಮತ್ತೆ ಅವನ ಅಹಂಕಾರವನ್ನು ಅಳಿಸಿ ತನ್ನ ಸಂಕಲ್ಪವನ್ನು ಮೀರಲಾಗದೆಂದು ನಿರೂಪಿಸುವುದು, ಅನಾದಿ ಕಾಲದಿಂದಲೂ ನಡೆದೇ ಇದೆ! ಮರುತ್ತರ ಕಥೆಯೂ ಇದಕ್ಕೆ ನಿದರ್ಶನ! ಒಂದು ಕಡೆ, ರಾಕ್ಷಸರ ಕುಲಕ್ಕೆ ಬಾಧಕವೆನಿಸಿದ ದೇವರಾಜ ಇಂದ್ರನ ಅಂತ್ಯಕ್ಕಾಗಿ ಪುತ್ರಪ್ರಾಪ್ತಿಯ ಪ್ರಯತ್ನ; ಇನ್ನೊಂದು ಕಡೆ, ಆ ಪುತ್ರನನ್ನು ಹುಟ್ಟುವ ಮೊದಲೇ ಅಳಿಸಿಹಾಕುವ ಇಂದ್ರನದೇ ಪ್ರಯತ್ನ! ಇವೆರಡೂ ಅಮಂಗಳಗಳ ನಡುವೆ, ಪರಮದೈವವಾದ ಭಗವಂತನ ಸಂಕಲ್ಪದಿಂದ, ಎರಡೂ ಆಶಯಗಳನ್ನು ಮೀರಿ, ಮರುತ್ತರೆಂಬ ಸತ್ಸುತರ ಜನನ, ತನ್ಮೂಲಕ ಲೋಕಕಲ್ಯಾಣ! ಇದಕ್ಕೆ ಕಾರಣ, ಹರಿಭಕ್ತಿ! ಭಗವಂತನ ಸಂಕಲ್ಪವನ್ನು ಮೀರಲಾಗದು, ಆದರೆ ಅದು ಸದಾ ಕಲ್ಯಾಣಕರ!

ಕಶ್ಯಪ ಪ್ರಜಾಪತಿಗಳು ದಕ್ಷಪುತ್ರಿಯರನ್ನು ವರಿಸಿ ಅವರಲ್ಲಿ ಅನೇಕ ವಿಧದ ಸಂತಾನಗಳನ್ನು ಪಡೆದು ಸೃಷ್ಟಿಯನ್ನು ವಿಸ್ತರಿಸಿದರು. ಅವರಲ್ಲಿ ಅದಿತಿಯೆಂಬುವಳ ಮಕ್ಕಳು ಆದಿತ್ಯರು, ಅಥವಾ ದೇವತೆಗಳು ಎನಿಸಿದರು; ದಿತಿಯ ಮಕ್ಕಳು ದೈತ್ಯರು, ಅಥವಾ ರಾಕ್ಷಸರು ಎನಿಸಿದರು. ದೇವತೆಗಳು ದೈವಕ್ಕೆ ಸಹಾಯಕರು; ಅವರ ದೊರೆ, ದೇವೇಂದ್ರ; ದೈತ್ಯರು ದೈವ ವಿರೋಧಿಗಳು; ದೈವವನ್ನು ಮೀರುವ ಆಶಯವುಳ್ಳವರು! ಮೊದಲಿಗೆ ಅವರ ದೊರೆಗಳಾದುದು ಆದಿದೈತ್ಯರೆನಿಸಿದ ಹಿರಣ್ಯಾಕ್ಷ, ಹಿರಣ್ಯಕಶಿಪುಗಳು!

ಹಿರಣ್ಯಾಕ್ಷನು ಭೂಮಂಡಲವನ್ನೇ ಕದ್ದು ರಸಾತಳಕೊಯ್ದು ತಾನು ಮಹಾ ಚತುರನೆಂದುಕೊಂಡ! ಆದರೆ ಶ್ರೀಹರಿಯು ವರಾಹ ರೂಪದಲ್ಲಿ ಅಲ್ಲಿಗೂ ಹೋಗಿ ಅವನನ್ನು ಕೊಂದು ಭೂಮಿಯನ್ನುದ್ಧರಿಸಿದ! ಇದರಿಂದ ಪರಮಕ್ರುದ್ಧನಾದ ಅವನ ಅಣ್ಣ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ದುಷ್ಕರ ತಪಸ್ಸನ್ನಾಚರಿಸಿ, ತಾನು ಹಗಲಿನಲ್ಲಾಗಲೀ ರಾತ್ರಿಯಲ್ಲಾಗಲೀ, ಯಾವುದೇ ಆಯುಧಗಳಿಂದಾಗಲೀ, ಆಕಾಶದಲ್ಲಾಗಲೀ ನೆಲದ ಮೇಲಾಗಲೀ, ಮನೆಯ ಒಳಗಾಗಲೀ ಹೊರಗಾಗಲಿ, ಸುರನರೋರಗಯಕ್ಷ ರಾಕ್ಷಸಗಂಧರ್ವ ಕಿನ್ನರಕಿಂಪುರುಷರಾದಿಯಾಗಿ ಬ್ರಹ್ಮ ಸೃಷ್ಟಿಯ ಯಾವುದೇ ಜೀವಿಯಿಂದಾಗಲೀ ಮರಣಕ್ಕೆ ಒಳಗಾಗಬಾರದೆಂಬ ದುರ್ಲಭ ವರವನ್ನು ಪಡೆದನು! ಈ ವರದಿಂದ ಗರ್ವಿಷ್ಠನಾಗಿ, ಮೂರು ಲೋಕಗಳನ್ನೂ ಪೀಡಿಸುತ್ತಾ ತಾನೇ ಪರಮೇಶ್ವರನೆಂಬಂತೆ ಮದೋನ್ಮತ್ತನಾಗಿ ಮೆರೆದನು. ಆದರೆ ಅವನ ಸೃಷ್ಟಿಕರ್ತನನ್ನೂ ಸೃಷ್ಟಿಸಿದ ಭಗವಂತನ ಚಾತುರ್ಯದ ಮುಂದೆ ಇವನ ಚಾತುರ್ಯವೆಷ್ಟರದ್ದು?! ಬ್ರಹ್ಮಸೃಷ್ಟಿಯಲ್ಲೇ ಇರದ ನರಸಿಂಹರೂಪಿಯಾಗಿ ಅವತರಿಸಿ, ಆಕಾಶವಾಗಲೀ ನೆಲವಾಗಲೀ ಆಗಿರದ ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿಕೊಂಡು, ಮನೆಯ ಒಳಗಾಗಲೀ ಹೊರಗಾಗಲೀ ಇರದ ಹೊಸ್ತಿಲ ಮೇಲೆ ಕುಳಿತು, ಹಗಲಾಗಲೀ ರಾತ್ರಿಯಾಗಲೀ ಆಗಿರದ ಸಂಜೆಯ ಹೊತ್ತಿನಲ್ಲಿ ಯಾವುದೇ ಆಯುಧವಲ್ಲದ ತನ್ನ ಉಗುರುಗಳಿಂದಲೇ ಅವನ ಉದರವನ್ನು ಸೀಳಿ ಕೊಂದುಹಾಕಿದ! ಭಗವಂತನನ್ನು ಅವನ ನಿಯಮಗಳನ್ನು ಮೀರಲಾದೀತೆ?!

ಮಹಾಪರಾಕ್ರಮಿಗಳೂ ಲೋಕಕಂಟಕರೂ ಆಗಿದ್ದ ತನ್ನ ಪುತ್ರರಿಬ್ಬರೂ ಹತರಾಗಲು ದಿತಿಯು ಶೋಕಾವೇಗಗಳಿಂದ ತಪ್ತಳಾದಳು! ಪುತ್ರರು ಎಂಥವರಾದರೇನು? ಹೆತ್ತವರಿಗೆ ಹೆಗ್ಗಣವೂ ಮುದ್ದೆಂಬಂತೆ, ಪುತ್ರರು ದುಷ್ಟರಾಗಲೀ ದುರಾಚಾರಿಗಳಾಗಲೀ ತಾಯಿಗೆ ಅವರ ಮೇಲಿನ ಪ್ರೀತಿ ಕಡಮೆಯಾಗದು! ಆದರೆ ಆ ಪ್ರೀತಿ, ಅವರನ್ನೇ ಹಾಳುಮಾಡುವುದಲ್ಲದೇ, ಅವರ ತಪ್ಪಿಗೆ ಶಿಕ್ಷೆ ವಿಧಿಸಿದ ತೀರ್ಪುಗಾರರ ಮೇಲೆ ಕೋಪವಾಗಿಯೂ ತಿರುಗುತ್ತದೆ! ದುರ್ಯೋಧನನ ದುಷ್ಕೃತ್ಯಗಳಿಗೆ ಶಿಕ್ಷೆ ವಿಧಿಸಿದ ಶ್ರೀಕೃಷ್ಣನ ಮೇಲೆಯೇ ತಾಯಿ ಗಾಂಧಾರಿಯು ಕೋಪಗೊಂಡು ಅವನ ವಂಶವೂ ಕೌರವಂಶದಂತೆ ಅಂತರ್ಕಲಹದಿಂದ ನಶಿಸಲೆಂದು ಶಪಿಸಿಬಿಟ್ಟಳಲ್ಲವೇ?! ಈಗ ದಿತಿದೇವಿಯೂ ಅಂಥ ಒಂದು ಕಾರ್ಯವನ್ನು ಮಾಡಿದಳು!

“ಅಯ್ಯೋ! ನನ್ನ ಇಬ್ಬರೂ ಮುದ್ದು ಮಕ್ಕಳು ಆ ಹರಿಯಿಂದ ಹತರಾದರೇ ……!” ದಿತಿಯು ಹಲುಬಿದಳು, “ಇದಕ್ಕೆಲ್ಲಾ ಕಾರಣ ಆ ಪಾಪಿ ಇಂದ್ರ! ಸದಾ ತನ್ನ ಇಂದ್ರಿಯಗಳನ್ನೇ ತೃಪ್ತಿಪಡಿಸಿಕೊಳ್ಳುವುದರಲ್ಲಿ ನಿರತನಾಗಿರುವ ಆ ನಿರ್ದಯಿ, ಕಠಿಣಹೃದಯಿ ಇಂದ್ರ, ನನ್ನಿಬ್ಬರು ಪರಾಕ್ರಮಿ ಪುತ್ರರನ್ನು ಆ ವಿಷ್ಣುವಿನ ಮೂಲಕ ಮಾಯೆಯಿಂದ ಕೊಲ್ಲಿಸಿಬಿಟ್ಟ! ಅವನನ್ನು ಕೊಲ್ಲುವ ಹೊರತು ನನಗೆ ನಿಶ್ಚಿಂತೆ ಇಲ್ಲ! ಅವನನ್ನು ಕೊಲ್ಲುವ ಹೊರತು ನನಗೆ ಸುಖ ನಿದ್ರೆ ಬಾರದು! ಅವನನ್ನು ಕೊಲ್ಲುವ ಹೊರತು ಈ ಸೇಡಿನ ಬೆಂಕಿ ಆರದು!

“ಈ ದೇಹವೇನು ಶಾಶ್ವತವೇ? ಖಂಡಿತ ಇಲ್ಲ! ರಾಜಾಧಿರಾಜರ ದೇಹಗಳೂ ಕಡೆಗೆ ಹುಳುಗಳೋ ಬೂದಿಯೋ ಮಲವೋ ಆಗಿ ಮಣ್ಣಲ್ಲಿ ಮಣ್ಣಾಗಿ ಬೆರೆತು ಹೇಳಹೆಸರಿಲ್ಲದಂತಾಗಿಬಿಡುತ್ತವೆ! ಇಂಥ ದುರ್ಗತಿಯುಳ್ಳ ಈ ದೇಹಕ್ಕಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವವನು ಖಂಡಿತವಾಗಿಯೂ ನರಕದಲ್ಲಿ ಬೀಳುತ್ತಾನೆ! ಇದು ಆ ಮೂರ್ಖ ಇಂದ್ರನಿಗೆ ತಿಳಿದಂತಿಲ್ಲ! ತನ್ನ ಪದವಿಗಾಗಿ ಎಷ್ಟು ಜನರ ತಪೋಭಂಗ ಮಾಡುತ್ತಾನೆ!ಅಶ್ವಮೇಧ ಕುದುರೆಗಳನ್ನು ಅಪಹರಿಸುತ್ತಾನೆ! ದಾನವರೊಡನೆ ಸ್ನೇಹ ಬೆಳೆಸಿ ವಿಶ್ವಾಸಗಳಿಸಿ ವಂಚಿಸಿ ಕೊಲ್ಲುತ್ತಾನೆ! ಕೈಲಾಗದ ಆ ಹೇಡಿ, ಆಪತ್ತನ್ನು ಧೈರ್ಯದಿಂದೆದುರಿಸಲಾಗದೇ ಹರಿಹರರ ಮೊರೆ ಹೋಗುತ್ತಾನೆ! ಸ್ವಾರ್ಥಕ್ಕಾಗಿ ಗುರುಹಿರಿಯರನ್ನೂ ಕೊಲ್ಲುತ್ತಾನೆ, ವಂಚಿಸುತ್ತಾನೆ, ಮೂಳೆಗಳನ್ನು ಬೇಡಿ ಆಯುಧಗಳನ್ನು ನಿರ್ಮಿಸಿಕೊಳ್ಳುತ್ತಾನೆ! ಛಿ! ತನ್ನ ಸುಕುಮಾರ ಶರೀರವನ್ನೇ ಶಾಶ್ವತವಾದುದೆಂದು ಭಾವಿಸುತ್ತಾ, ಚಂದ್ರಮೊಗದ ಸುಂದರ ಅಪ್ಸರೆಯರ ಹಾವಭಾವ ವಿಲಾಸಗಳಿಗೆ ಮನಸೋಲುತ್ತಾ, ಸೋಮಸುಧೆಗಳನ್ನು ಸವಿದು ಅಮರನಾದೆನೆಂದು ಮೆರೆಯುತ್ತಾ ಮದಾಂಧನಾಗಿದ್ದಾನೆ! ಅವನ ಈ ಮದವನ್ನಿಳಿಸುವಂಥ ಒಬ್ಬ ಪುತ್ರರತ್ನನನ್ನು ನಾನು ಪಡೆಯಬೇಕು! ಆದರೆ ಅದು ಹೇಗೆ? ಅದಕ್ಕೆ ನಾನೇನು ಮಾಡಲಿ……?!” ಯೋಚನಾಲಹರಿಯಲ್ಲಿ ಮುಳುಗಿದಳು ದಿತಿ!

ದೀರ್ಘವಾಗಿ ಆಲೋಚಿಸಿದ ಬಳಿಕ, ದಿತಿಗೆ ಏನು ಮಾಡಬೇಕೆಂದು ಹೊಳೆಯಿತು! ಸ್ತ್ರೀಯರಿಗೆ ಪತಿಯೇ ಶ್ರೀಪತಿಯಲ್ಲವೇ? ಪತಿಸೇವೆಯೇ ಪರಮಾತ್ಮನ ಸೇವೆಯಂತೆ! ಒಲಿದ ಪತಿಯಿಂದ ಪತ್ನಿಯ ಯಾವ ಅಪೇಕ್ಷೆ ತಾನೇ ದುರ್ಲಭವಾದೀತು? ಅದರಲ್ಲೂ ಮಹಿಮಾನ್ವಿತನಾದ ತನ್ನ ಪತಿ ಕಶ್ಯಪ ಮಹರ್ಷಿಗಳಿಗೆ ಯಾವುದು ತಾನೇ ಅಸಾಧ್ಯ?! ಆದ್ದರಿಂದ ಅಂಥ ಪತಿಯನ್ನು ಒಲಿಸಿಕೊಳ್ಳಬೇಕೆಂದರೆ ನಿಷ್ಠೆಯಿಂದ ಅವನ ಸೇವೆ ಮಾಡಬೇಕು! ಅಂತೆಯೇ ದಿತಿಯೂ ಮಾಡತೊಡಗಿದಳು! ತನ್ನ ಸನ್ನಡತೆಯಿಂದಲೂ ಪತಿಗೆ ಪ್ರಿಯವಾದ ಕಾರ್ಯಗಳನ್ನು ಮಾಡುವುದರಿಂದಲೂ ಅವಳು ಕಶ್ಯಪರ ಮನವನ್ನು ಮೆಚ್ಚಿಸಿದಳು; ಅವರಲ್ಲಿ ಅಪಾರವಾದ ಭಕ್ತಿ, ಗೌರವಗಳನ್ನು ತೋರುತ್ತಾ ಪ್ರೀತ್ಯಾದರಗಳಿಂದ ಕೂಡಿದ ಪ್ರಿಯೋಕ್ತಿಗಳನ್ನಾಡತೊಡಗಿದಳು! ಆಗಾಗ ತನ್ನ ಪ್ರೇಮಪೂರಿತ ಕಡೆಗಣ್ಣ ಕುಡಿನೋಟಗಳನ್ನು ಬೀರುತ್ತಾ ಅವರ ಮನಸ್ಸನ್ನು ಸೂರೆಗೊಂಡಳು! ಹೀಗೆ ಮಾಡುತ್ತಾ ಕ್ರಮೇಣ ಅವಳು ಅವರ ಮನಸ್ಸನ್ನು ಸಂಪೂರ್ಣ ವಶಪಡಿಸಿಕೊಂಡಳು!

ಕಶ್ಯಪ ಮಹರ್ಷಿಗಳಾದರೋ ಮಹಾ ವಿದ್ವಾಂಸರು. ಆದರೆ ಅವರು ಸ್ತ್ರೀ ಕೋಮಲತೆಗೆ ಸೋತುಹೋದರು! ಸ್ತ್ರೀಗೆ ಸೋಲದವರಾರು? ಸೃಷ್ಟಿಯ ಆದಿಯಲ್ಲಿ ಎಲ್ಲರೂ ವಿರಾಗದಿಂದಿರಲು, ಪುರುಷರ ಮನವನ್ನು ಅಪಹರಿಸಿ ಸೃಷ್ಟಿಯನ್ನು ಅಧಿಕಗೊಳಿಸಲೆಂದು ಬ್ರಹ್ಮನೇ ತನ್ನ ದೇಹಾರ್ಧದಿಂದ ಹೆಣ್ಣನ್ನು ನಿರ್ಮಿಸಿದನು! ಸೃಷ್ಟಿಕಾರ್ಯ ಮುಂದುವರಿಯುತ್ತಿರುವುದೇ ಹೆಣ್ಣಿನಿಂದ ಅಲ್ಲವೇ?!

ಒಂದು ದಿನ, ಕಶ್ಯಪರು ದಿತಿಯೊಂದಿಗೆ ಏಕಾಂತದಲ್ಲಿದ್ದಾಗ ಅವಳಿಗೆ ಹೇಳಿದರು, “ಪ್ರಿಯತಮೆ! ಸುಂದರಾಂಗಿ! ಅನಿಂದ್ಯಳಾದ ನಿನ್ನ ಸೇವೆಯಿಂದ ನಾನು ಸುಪ್ರೀತನಾಗಿದ್ದೇನೆ! ನಿನ್ನಗಿಷ್ಟವಾದ ಯಾವುದಾದರೂ ವರವನ್ನು ಕೇಳಿಕೋ! ಸ್ತ್ರೀಯರಿಂದ ತೃಪ್ತರಾದ ಪತಿಗಳು ಏನನ್ನು ತಾನೇ ನೀಡರು? ಅವರಿಂದ ಸ್ತ್ರೀಯರ ಸಕಲ ಇಷ್ಟಾರ್ಥಗಳೂ ನೆರವೇರುವವು! ನಾರಿಯರಿಗೆ ಪತಿಯೇ ಪರದೈವದಂತೆ! ಶ್ರೀಪತಿಯಾದ ವಾಸುದೇವನು ಎಲ್ಲರ ಹೃದಯಗಳಲ್ಲೂ ನೆಲೆಸಿದ್ದಾನೆ! ವಿವಿಧ ದೇವತೆಗಳ ಪೂಜೆಯ ಮೂಲಕವೂ ಅವನೇ ಪೂಜೆಗೊಳ್ಳುತ್ತಾನೆ! ಆದ್ದರಿಂದ ಸ್ತ್ರೀಯರು ತಮ್ಮ ಪತಿಗಳನ್ನು ವಾಸುದೇವನ ಸ್ವರೂಪವೆಂದೇ ಭಾವಿಸಿ ಸೇವಿಸಬೇಕು! ಆದ್ದರಿಂದ ಶ್ರೇಯೋಭಿಲಾಷಿಯರಾದ ಪತಿವ್ರತೆಯರು ತಮ್ಮ ಪತಿಗಳನ್ನು ಪರಮಾತ್ಮ ಸ್ವರೂಪವೆಂದೇ ಅನನ್ಯ ಭಾವದಿಂದ ಪೂಜಿಸಿ ಸೇವಿಸುತ್ತಾರೆ! ಎಲೈ ಸುಮಧ್ಯಮೆ! ಈಗ ನಾನೂ ಹಾಗೆಯೇ ನಿನ್ನಿಂದ ಸೇವಿಸಲ್ಪಟ್ಟಿದ್ದೇನೆ! ಆದ್ದರಿಂದ ಕುಪತ್ನಿಯರಿಗೆ ದುರ್ಲಭವಾದ ಯಾವುದೇ ವರವನ್ನಾದರೂ ಬೇಡು! ಕೊಡುತ್ತೇನೆ!”

“ಪತಿದೇವ!” ದಿತಿಯು ಪರಮಹೃಷ್ಟಳಾಗಿ ಹೇಳಿದಳು, “ನೀನು ನನಗೆ ವರವನ್ನು ನೀಡುವುದಾದರೆ… ಯಾರ ಕಾರಣದಿಂದ ನನ್ನಿಬ್ಬರು ಪುತ್ರರು ಕೊಲ್ಲಲ್ಪಟ್ಟರೋ, ಆ ಇಂದ್ರನನ್ನು ಕೊಲ್ಲುವಂಥ ಮೃತ್ಯುರಹಿತನಾದ ಒಬ್ಬ ಪುತ್ರನನ್ನು ನೀಡು! ನಾನೀಗ ಪುತ್ರಹೀನೆಯಾಗಿದ್ದೇನೆ!”

ದಿತಿಯ ಈ ಮಾತುಗಳನ್ನು ಕೇಳಿ ಕಶ್ಯಪರಿಗೆ ಆಘಾತವಾಯಿತು!

“ಅಯ್ಯೋ!” ಅವರು ಮನದಲ್ಲೇ ನೊಂದುಕೊಂಡರು, “ದೊಡ್ಡ ಅಧರ್ಮವನ್ನು ಈಗ ಆಚರಿಸಬೇಕಾಗಿದೆಯೇ…! ಹೆಣ್ಣಿನ ರೂಪದ ವಿಷಯ ಸುಖಕ್ಕೆ ಮರುಳಾಗಿ ಮಾಯೆಗೆ ವಶವಾದೆನೇ! ಇದರಿಂದ ನನಗೆ ಖಂಡಿತವಾಗಿಯೂ ನರಕಪ್ರಾಪ್ತಿಯಾಗುವುದು!

“ಪುರುಷನನ್ನು ಹೀಗೆ ಆಕರ್ಷಿಸುವುದೇ ಸ್ತ್ರೀಯ ಸ್ವಭಾವ! ಆದ್ದರಿಂದ ಅವಳನ್ನು ದೂಷಿಸಲಾಗದು! ಜಿತೇಂದ್ರಿಯನಾಗಿರದೇ ಬುದ್ಧಿಹೀನನಾದ ನನಗೆ
ಧಿಕ್ಕಾರವಿರಲಿ! ಅಬ್ಬಾ… ಶರತ್ಕಾಲದ ಕಮಲಪುಷ್ಪದಂತೆ ಅರಳಿದ ಮೊಗವುಳ್ಳ ಈ ಸ್ತ್ರೀಯರ ಮಾತುಗಳು ಕಿವಿಗೆ ಆಮೃತಪ್ರಾಯವಾಗಿದ್ದರೂ, ಇವರ ಹೃದಯಗಳು ಕತ್ತಿಯ ಅಲುಗಿನಂತೆ ಹರಿತವಾಗಿರುತ್ತವೆ! ಇಂಥವರ ಮನದಲ್ಲೇನಿದೆಯೆಂದು ತಿಳಿಯುವುದಾದರೂ ಹೇಗೆ?! ಸ್ವಾರ್ಥ ಸಾಧನೆಗಾಗಿ ಇತರರನ್ನು ಬಹಳ ಪ್ರೀತಿಸುವಂತೆ ತೋರಿಸಿಕೊಳ್ಳುವ ಇವರಿಗೆ ನಿಜವಾಗಿ ಯಾರಲ್ಲೂ ಪ್ರೀತಿಯಿರುವುದಿಲ್ಲ! ಇಂಥ ದುಷ್ಟರು ತಮ್ಮ ಪತಿ, ಪುತ್ರ, ಸಹೋದರರನ್ನೂ ಕೊಲ್ಲುತ್ತಾರೆ, ಇಲ್ಲವೇ ಸಂಚು ಮಾಡಿ ಇತರರಿಂದ ಕೊಲ್ಲಿಸುತ್ತಾರೆ! ಅಯ್ಯೋ… ! ಈಗ ನಾನೇನು ಮಾಡಲಿ? ವಚನವಿತ್ತು ಈಗ ಅದನ್ನು ನೆರವೇರಿಸದಿದ್ದರೆ ನಾನು ವಚನಭ್ರಷ್ಟನಾಗುತ್ತೇನೆ! ಇಂದ್ರನು ವಧಾರ್ಹನಲ್ಲದಿದ್ದರೂ ಅವನ ವಧೆಗೆ ಈಗ ಒಂದು ಉಪಾಯವನ್ನು ಕಲ್ಪಿಸಬೇಕಾಗಿದೆ!”

ಹೀಗೆ ಕಶ್ಯಪರು ತಮ್ಮನ್ನೇ ಮನದಲ್ಲಿ ಖಂಡಿಸಿಕೊಂಡು, ಸ್ವಲ್ಪ ಕೋಪಗೊಂಡಂತಾಗಿ ದಿತಿಗೆ ಹೇಳಿದರು, “ಭದ್ರೆ! ನಾನು ನಿನಗೆ ವ್ರತವೊಂದನ್ನು ಉಪದೇಶಿಸುತ್ತೇನೆ; ಅದನ್ನು ನೀನು ನಿಷ್ಠೆಯಿಂದ ಆಚರಿಸಿದರೆ, ಇಂದ್ರಹಂತಕನಾದ ಪುತ್ರನನ್ನು ಪಡೆಯುವೆ. ಆದರೆ ವ್ರತವನ್ನಾಚರಿಸುವಾಗ ಏನಾದರೂ ಲೋಪವಾದರೆ ಇದು ಫಲಿಸುವುದಿಲ್ಲ! ಈ ವ್ರತವನ್ನು ಒಂದು ವರ್ಷ ಆಚರಿಸಬೇಕು!”

“ಪತಿದೇವ!” ದಿತಿಯು ಹೇಳಿದಳು, “ಖಂಡಿತವಾಗಿಯೂ ನಿನ್ನ ಉಪದೇಶಾನುಸಾರವೇ ಮಾಡುತ್ತೇನೆ; ನಿಷ್ಠೆಯಿಂದ ವ್ರತವನ್ನಾಚರಿಸುತ್ತೇನೆ; ದಯವಿಟ್ಟು ಆ ವ್ರತವನ್ನು ಉಪದೇಶಿಸು! ವ್ರತಭಂಗವಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು, ಯಾವ ಕಾರ್ಯಗಳು ನಿಷಿದ್ಧ, ಇದೆಲ್ಲವನ್ನೂ ನನಗೆ ಸ್ಪಷ್ಟವಾಗಿ ಹೇಳು!”

ಕಶ್ಯಪರು ಹೇಳಿದರು, “ಭದ್ರೆ! ಇದು ಪುಂಸವನವೆಂಬ ಪುಣ್ಯವ್ರತ! ಇದನ್ನು ಆಚರಿಸುವಾಗ ಯಾರಿಗೂ ಹಿಂಸೆ ಮಾಡಬಾರದು, ಯಾರನ್ನೂ ಶಪಿಸಬಾರದು, ಸುಳ್ಳು ಹೇಳಬಾರದು, ಉಗುರುಗಳನ್ನೂ ಕೂದಲುಗಳನ್ನೂ ಕತ್ತರಿಸಿಕೊಳ್ಳಬಾರದು, ಅಮಂಗಳಕರವಾದ ಯಾವುದೇ ವಸ್ತುಗಳನ್ನು ಸ್ಪರ್ಶಿಸಬಾರದು, ನೀರಿನಲ್ಲಿ ಮುಳುಗಿ ಸ್ನಾನ ಮಾಡಬಾರದು, ಕೋಪಿಸಿಕೊಳ್ಳಬಾರದು, ದುರ್ಜನರೊಂದಿಗೆ ಮಾತನಾಡಬಾರದು, ಒಗೆದಿರದ ವಸ್ತ್ರಗಳನ್ನು ಧರಿಸಬಾರದು, ಈಗಾಗಲೇ ಧರಿಸಿ ಬಾಡಿರುವಂಥ ಹೂಮಾಲೆಯನ್ನು ಪುನಃ ಧರಿಸಬಾರದು, ಎಂಜಲನ್ನವನ್ನು ತಿನ್ನಬಾರದು, ಕಾಳಿಕಾದೇವಿಗೆ ಅರ್ಪಿಸಿದಂಥ ಇಲ್ಲವೇ ಮಾಂಸ ಮಿಶ್ರಿತ ಅನ್ನವನ್ನು ತಿನ್ನಬಾರದು, ಶೂದ್ರರಿಂದ ಸ್ಪರ್ಶಿತವಾದ ಮತ್ತು ರಸಜ್ವಲೆಯರಿಂದ ನೋಡಲ್ಪಟ್ಟ ಅನ್ನವನ್ನು ತಿನ್ನಬಾರದು, ಬೊಗಸೆಗೈಗಳಿಂದ ನೀರನ್ನು ಕುಡಿಯಬಾರದು; ಊಟವಾದ ಬಳಿಕ, ಕೈಕಾಲು ಮುಖಗಳನ್ನು ತೊಳೆಯದೇ ಹೊರಗೆಲ್ಲೂ ಹೋಗಬಾರದು; ಸಂಜೆಯ ಹೊತ್ತಿನಲ್ಲಿ ಕೂದಲನ್ನು ಹರಡಿಕೊಂಡೋ ಇಲ್ಲವೇ ವಸ್ತ್ರಾಭರಣಗಳನ್ನು ಸೂಕ್ತವಾಗಿ ಧರಿಸದೇ ಹೊರಗೆಲ್ಲೂ ಹೋಗಬಾರದು; ಪಾದಪ್ರಕ್ಷಾಳನೆ ಮಾಡಿಕೊಳ್ಳದೇ ಮಲಗಿಕೊಳ್ಳಬಾರದು, ಮತ್ತು ಅಂತೆಯೇ ಒದ್ದೆ ಕಾಲ್ಗಳಲ್ಲಿ ಮಲಗಬಾರದು; ತಲೆಯನ್ನು ಉತ್ತರಕ್ಕೆ ಇಲ್ಲವೇ ಪಶ್ಚಿಮಕ್ಕೆ ಹಾಕಿಕೊಂಡು ಮಲಗಬಾರದು; ನಗ್ನಳಾಗಿ ಮಲಗಬಾರದು, ಮತ್ತು ಇತರ ಸ್ತ್ರೀಯರೊಂದಿಗೆ, ಇಲ್ಲವೇ ಸಂಧ್ಯಾಕಾಲಗಳಲ್ಲಿ ಮಲಗಬಾರದು.”

“ಶುಭ್ರವಾದ ವಸ್ತ್ರಗಳನ್ನು ಧರಿಸಿ, ಸದಾ ಶುದ್ಧ ಮನಸ್ಕಳಾಗಿ, ಅರಿಶಿನ, ಚಂದನ ಮೊದಲಾದ ಮಂಗಳದ್ರವ್ಯಗಳನ್ನು ಪೂಸಿಕೊಂಡು ಪ್ರಾತಃಕಾಲದಲ್ಲಿ, ಉಪಾಹಾರಕ್ಕೆ ಮೊದಲು, ಗೋಬ್ರಾಹ್ಮಣರನ್ನೂ ಲಕ್ಷ್ಮೀನಾರಾಯಣರನ್ನೂ ಪೂಜಿಸಬೇಕು. ಈ ವ್ರತವನ್ನು ಆಚರಿಸುತ್ತಿರುವ ಸ್ತ್ರೀಯು, ಗಂಧ ಪುಷ್ಪಾಭರಣಗಳಿಂದ ಇತರ ಪುತ್ರವತಿ ಮುತ್ತೈದೆಯರನ್ನು ಪೂಜಿಸಬೇಕು; ಅಂತೆಯೇ ಗರ್ಭಿಣಿಯಾದವಳು ತನ್ನ ಗರ್ಭದಲ್ಲಿ ತನ್ನ ಪತಿಯೇ ಇರುವನೆಂದು ಭಾವಿಸಿ ಅವನನ್ನು ಧ್ಯಾನಿಸಿ ಅರ್ಚಿಸಬೇಕು.”

ಹೀಗೆ ಕಶ್ಯಪರು ಪುಂಸವನ ವ್ರತದ ವಿಧಿನಿಷೇಧಗಳನ್ನು ತಿಳಿಸಿ, ಅನಂತರ ಅದನ್ನು ಮಾಡಬೇಕಾದ ಕ್ರಮ, ಜಪಿಸಬೇಕಾದ ಮಂತ್ರಗಳು, ಮೊದಲಾದವನ್ನು ದಿತಿಗೆ ಉಪದೇಶಿಸಿ ಹೇಳಿದರು, “ಈ ವ್ರತವನ್ನು ಶ್ರದ್ಧೆಯಿಂದ ಒಂದು ವರ್ಷ ಲೋಪರಹಿತವಾಗಿ ಆಚರಿಸಿದರೆ ಶಕ್ರಹಂತಕನಾದ ಪುತ್ರನು ನಿನಗೆ ಜನಿಸುವನು! ಆದರೆ ಏನಾದರೂ ಸ್ವಲ್ಪ ಲೋಪವಾದರೆ, ಶಕ್ರಮಿತ್ರನಾದ ಪುತ್ರನು ಜನಿಸುವನು!”

“ಆಗಲಿ ಪತಿದೇವ!” ದಿತಿದೇವಿ ಹರ್ಷಯುಕ್ತಳಾಗಿ ಹೇಳಿದಳು, “ನೀನು ಹೇಳಿದಂತೆಯೇ ನಡೆದುಕೊಳ್ಳುತ್ತೇನೆ!”

ಅನಂತರ, ದಿತಿಯು ಕಶ್ಯಪರಿಂದ ಗರ್ಭಧರಿಸಿ ಬಹಳ ಶ್ರದ್ಧೆಯಿಂದ ಪುಂಸವನ ವ್ರತವನ್ನಾಚರಿಸತೊಡಗಿದಳು.

ಮಹಾಚತುರನಾದ ಇಂದ್ರನು ಹೇಗೋ ತನ್ನ ಮಲತಾಯಿಯ ಈ ದುರುದ್ದೇಶವನ್ನು ಅರಿತುಕೊಂಡನು; “ಇಂಥ ದೊಡ್ಡ ವಿಪತ್ತಿನಿಂದ ಈಗ ಹೇಗೆ ಪಾರಾಗುವುದು?” ಅವನು ಯೋಚಿಸಿದನು, “ಶತ್ರುವಿನ ಬಳಿಯೇ ಇದ್ದು ಅವನ ದೌರ್ಬಲ್ಯವನ್ನರಿತು ಉಪಾಯವಾಗಿ ಅವನನ್ನು ಕೊಲ್ಲುವುದೇ ಅಜೇಯ ಶತ್ರುವಿನ ವಿಷಯದಲ್ಲಿ ಮಾಡಬೇಕಾದುದು! ಈ ಸಂದರ್ಭದಲ್ಲಾದರೂ ಹಾಗೆಯೇ ಮಾಡಿ ದಿತಿದೇವಿಯ ಪ್ರತಿಜ್ಞೆಯನ್ನು ಮುರಿಯಬೇಕು! ಇದಕ್ಕೆ ಶತ್ರುವಿಗೆ ಮಿತ್ರನಾಗಿ ಹೋಗಬೇಕು! ಅವನ ಸೇವೆ ಮಾಡಿದರೂ ಸರಿಯೇ….! ಮಾತೃಸ್ಥಾನದಲ್ಲಿರುವ ದಿತಿದೇವಿಗೆ ಸೇವೆ ಮಾಡಿದರೇನು ತಪ್ಪು? ಆತ್ಮರಕ್ಷಣೆಯೇ ಆದ್ಯಕರ್ತವ್ಯ; ಅದಕ್ಕಾಗಿ ಏನು ಮಾಡಿದರೂ ಸರಿಯೇ!”

ಹೀಗೆ ಯೋಚಿಸಿದ ಇಂದ್ರನು ದಿತಿದೇವಿಯ ಆಶ್ರಮಕ್ಕೆ ತೆರಳಿ ಅವಳ ಸೇವೆಯಲ್ಲಿ ನಿರತನಾದ. ತನ್ನ ದುರುದ್ದೇಶ ಬಯಲಾಗದಿರಲೆಂದು ದಿತಿಯೂ ಬೇಡವೆನ್ನಲಾಗಲಿಲ್ಲ.

ದೇವೆಂದ್ರನು ತನ್ನ ಮಲತಾಯಿಯನ್ನು ಶ್ರದ್ಧಾಭಕ್ತಿಗಳಿಂದ ಸೇವಿಸಿದನು. ಪ್ರತಿನಿತ್ಯವೂ ಅವನು ಫಲಪುಷ್ಪ ಪತ್ರಸಮಿತ್ಕುಶಗಳನ್ನೂ ಜಲಮೃತ್ತಿಕೆ ಕಂದಮೂಲಗಳನ್ನೂ ವನದಿಂದ ಆರಿಸಿ ಕಾಲಕಾಲಕ್ಕೆ ಸರಿಯಾಗಿ ತಂದುಕೊಡುವುದು, ಪೂಜೆಗೆ ಅಣಿಮಾಡುವುದು, ದಿತಿದೇವಿಯ ಇತರ ಅಗತ್ಯಗಳನ್ನು ಅಚ್ಚುಕಟ್ಟಾಗಿ ಪೂರೈಸುವುದು, ಮೊದಲಾಗಿ ಮಾಡುತ್ತಾ ಅವಳ ಸೇವೆ ಮಾಡಿದನು.

ಬೇಡನು ಜಿಂಕೆಗಳನ್ನು ವಂಚಿಸಲು ಕೆಲವೊಮ್ಮೆ ತಾನೂ ಜಿಂಕೆಯ ಚರ್ಮ ಹೊದ್ದು ಜಿಂಕೆಯಂತೆ ನಟಿಸುತ್ತಾನೆ! ಅಂತೆಯೇ ಇಂದ್ರನು ಹೊರಗೆ ಬಹಳ ಮುಗ್ಧನಂತೆ ವರ್ತಿಸುತ್ತಾ ದಿತಿಯು ಆಚರಿಸುತ್ತಿದ್ದ ವ್ರತದಲ್ಲಿ ಏನಾದರೂ ಲೋಪದೋಷಗಳಾಗುವವೋ ಎಂದು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದ! ಹಾಗೇನಾದರೂ ಕಂಡುಬಂದಲ್ಲಿ ಅವಳ ವ್ರತಭಂಗಮಾಡುವುದೇ ಅವನ ಉದ್ದೇಶವಾಗಿತ್ತು! ಆದರೆ ಬಹಳ ದಿನಗಳಾದರೂ ಅವಳ ಆಚರಣೆಯಲ್ಲಿ ಯಾವುದೇ ಲೋಪದೋಷಗಳು ಕಾಣಬರದಿರಲು, ತನಗಿನ್ನು ಹೇಗೆ ಶುಭವಾದೀತೆಂದು ಅವನು ತೀವ್ರ ಚಿಂತೆಗೊಳಗಾದನು!

ದಿತಿಯು ನಿಯಮನಿಷ್ಠೆಗಳಿಂದ ವ್ರತವನ್ನು ಆಚರಿಸುತ್ತಾ ದಿನೇ ದಿನೇ ಕೃಶಳಾಗತೊಡಗಿದಳು. ಒಂದು ದಿನ, ಬಹಳ ಆಯಾಸಗೊಂಡಿದ್ದ ಅವಳು, ವಿಧಿವಂಚಿತಳಾಗಿ, ಸಂಜೆ ಆಹಾರಸೇವನೆಯ ಬಳಿಕ, ಕೈಕಾಲುಮುಖಗಳನ್ನು ತೊಳೆಯದೇ ಮಲಗಿಬಿಟ್ಟಳು! ಇಂಥ ಒಂದು ಸಂದರ್ಭಕ್ಕಾಗಿಯೇ ಇಂದ್ರನು ಕಾಯುತ್ತಿದ್ದ! ಈಗ ದಿತಿದೇವಿಯ ವ್ರತದಲ್ಲಿ ಒಂದು ದೋಷವಾಗಿತ್ತು! ಯೋಗಸಿದ್ಧಿಗಳನ್ನು ಕರಗತ ಮಾಡಿಕೊಂಡಿದ್ದ ಇಂದ್ರನು ಅಣಿಮಾ ಯೋಗಬಲದಿಂದ ತನ್ನ ಆಕಾರವನ್ನು ಬಹಳ ಕಿರಿದಾಗಿಸಿಕೊಂಡು ದಿತಿಯ ಉದರವನ್ನೇ ಪ್ರವೇಶಿಸಿದ! ಅಲ್ಲಿ ಬೆಳೆಯುತ್ತಿದ್ದ ಗರ್ಭವನ್ನು ತನ್ನ ವಜ್ರಾಯುಧದಿಂದ ಏಳು ತುಂಡುಗಳನ್ನಾಗಿ ಕತ್ತರಿಸಿಬಿಟ್ಟ! ಚಿನ್ನದಂತೆ ಹೊಳೆಯುತ್ತಿದ್ದ ಆ ಏಳೂ ಗರ್ಭತುಂಡುಗಳು ಸಾಯದೇ ಅಳತೊಡಗಿದವು! ಆಗ ಇಂದ್ರನು ಆ ಗರ್ಭಗಳಿಗೆ, `ಮಾ ರೋದೀ:’ (ಅಳಬೇಡಿರಿ) ಎಂದು ಹೇಳಿ ಪುನಃ ಆ ಒಂದೊಂದು ತುಂಡನ್ನೂ ಏಳೇಳಾಗಿ ಕತ್ತರಿಸಿದ! ಆಗ ನಲವತ್ತೊಂಬತ್ತು ಗರ್ಭಗಳಾದರೂ ಅವು ಸಾಯಲಿಲ್ಲ!! ಎಲ್ಲರೂ ಬಹಳ ದುಃಖಿತರಾಗಿ ಇಂದ್ರನನ್ನು ಕೈ ಮುಗಿದು ಬೇಡಿಕೊಂಡರು, “ದೇವೆಂದ್ರ! ಏಕೆ ನಮ್ಮನ್ನು ಕೊಲ್ಲಲೆತ್ನಿಸುತ್ತಿರುವೆ?! ನಾವು ನಿನ್ನ ತಮ್ಮಂದಿರಾದ ಮರುತ್ತರು!”

ಇಂದ್ರನು `ಮಾ ರೋದೀಃ’ ಎಂದು ಅವರಿಗೆ ಹೇಳಿದ್ದರಿಂದ ಅವರಿಗೆ ಮರುತ್ತರೆಂದು ಹೆಸರಾಯಿತು! ಒಂದೇ ಗರ್ಭವು ನಲವತ್ತೊಂಬತ್ತು ಪುತ್ರರಾಯಿತು! ಇಂದ್ರನ ವಜ್ರಾಯುಧದ ಹೊಡೆತಕ್ಕೂ ಜಗ್ಗದೇ ಅವರು ಮೃತ್ಯುವನ್ನು ಮೀರಿ ದಿತಿಯ ಉದರದಿಂದ ಅವಳಿಗೇ ತಿಳಿಯದಂತೆ ಜನಿಸಿದರು!

ಮರುದ್ಗಣಗಳು ನಿಜವಾಗಿ ತನ್ನ ಪಾರ್ಷದರೇ ಆಗುವರೆಂದು ಅರಿತ ಇಂದ್ರನು ಪುನಃ ಅವರ ಮೇಲೆ ಕೈ ಮಾಡದೇ ಅವರಿಗೆ ಅಭಯವಿತ್ತು, “ನೀವು ನನ್ನ ತಮ್ಮಂದಿರೆಂದ ಮೇಲೆ ಇನ್ನೇನೂ ಹೆದರುವ ಅಗತ್ಯವಿಲ್ಲ!”

ಇದಲ್ಲವೇ ವಿಧಿವೈಚಿತ್ರ್ಯ?! ಇದಲ್ಲವೇ ಹರಿಕೃಪೆ?! ಹರಿಕೃಪೆಯಿಂದ ಮರುತ್ತರು ಮೃತ್ಯುವನ್ನೇ ಮೀರಿ ದೇವತೆಗಳ ಗುಂಪಿಗೆ ಸೇರಿಹೋದರು! ಇದೇ ರೀತಿ, ಇಂದ್ರನು ಒಮ್ಮೆ, ಗರ್ಭಿಣಿಯಾಗಿದ್ದ ಹಿರಣ್ಯಕಶಿಪುವಿನ ಪತ್ನಿ ಕಯಾಧುವನ್ನು ಅಪಹರಿಸಿ, ಅವಳ ಶಿಶುವು ಜನಿಸುವ ಮುನ್ನ ಅವಳನ್ನೇ ಕೊಲ್ಲಲು ಯತ್ನಿಸಿದ್ದ! ಆಗ ನಾರದರು ಅವನನ್ನು ತಡೆದು ಕಯಾಧುವಿಗೆ ಹರಿಮಹಿಮೆಯನ್ನು ಉಪದೇಶಿಸಲು, ಅವಳ ಗರ್ಭದಲ್ಲಿದ್ದ ಪ್ರಹ್ಲಾದನು ಅದನ್ನು ಕೇಳಿ, ದೈತ್ಯಕುಲದಲ್ಲಿ ಹುಟ್ಟಿದರೂ ದೇವೋತ್ತಮ ಪರಮಪುರುಷನ ಪರಮಭಕ್ತನೇ ಆದ ! ಅಷ್ಟೇ ಏಕೆ? ಭಾಗವತ ಶ್ರವಣಿಯಾದ ಪರೀಕ್ಷಿತನ ಜನನವಾದುದಾದರೂ ಹೇಗೆ? ಅಶ್ವತ್ಥಾಮನ ಬ್ರಹ್ಮಾಸ್ತ್ರ ಪ್ರಯೋಗದಿಂದ, ಗರ್ಭಸ್ಥನಾಗಿದ್ದ ಅವನು ನಾಶವಾಗುವುದರಲ್ಲಿರಲು, ಶ್ರೀಕೃಷ್ಣನೇ ಆ ಗರ್ಭವನ್ನು ಪ್ರವೇಶಿಸಿ ಬ್ರಹ್ಮಾಸ್ತ್ರವನ್ನು ನಿಷ್ಕ್ರಿಯೆಗೊಳಿಸಿದ! ವಿಷ್ಣುವಿನಿಂದ ರಕ್ಷಿತನಾದ ಪರೀಕ್ಷಿತನು ವಿಷ್ಣುರಾತನೆನಿಸಿದ!

ಈಗ ದಿತಿದೇವಿಯಾದರೋ, ದುರುದ್ದೇಶದಿಂದ ವ್ರತವನ್ನಾಚರಿಸಿದರೂ, ಶ್ರೀಹರಿಯನ್ನು ಭಕ್ತಿಯಿಂದ ಅರ್ಚಿಸಿದ್ದಳು; ಪರಮಪುರುಷನನ್ನು ಒಂದೇ ಬಾರಿ ಅರ್ಚಿಸಿದರೂ ಅವನ ಸಾರೂಪ್ಯ ದೊರೆಯುತ್ತದೆ! ಇನ್ನು ಒಂದು ವರ್ಷ ಆ ಶ್ರೀಹರಿಯನ್ನು ಭಕ್ತಿಯಿಂದ ಅರ್ಚಿಸಿ, ಇಂದ್ರನಿಗೆ ಸಮೀಪವರ್ತಿಗಳಾದ ಪುತ್ರರನ್ನು ಪಡೆದುದರಲ್ಲಿ ಆಶ್ಚರ್ಯವೇನಿದೆ?!

ದಿತಿಯು ಎಚ್ಚರಗೊಂಡು ನೋಡಲು, ಇಂದ್ರನೊಡನೆ ಅಗ್ನಿಯ ಕಾಂತಿಯಿಂದ ಹೊಳೆಯುತ್ತಾ ನಿಂತಿದ್ದ ತನ್ನ ನಲವತ್ತೊಂಬತ್ತು ಪುತ್ರರತ್ನರನ್ನು ನೋಡಿ ವಿಸ್ಮಯಾನಂದಗಳಿಗೊಳಗಾದಳು!

“ವತ್ಸ!” ಹರಿಭಕ್ತಿಯಿಂದ ಶುದ್ಧಮನಸ್ಕಳಾಗಿದ್ದ ದಿತಿಯು ಈಗ ವಾತ್ಸಲ್ಯಭಾವದಿಂದ ಕೇಳಿದಳು, “ಆದಿತ್ಯನಾದ ನಿನ್ನ ವಿನಾಶಕ್ಕಾಗಿಯೇ ಈ ದುಷ್ಕರ ವ್ರತವನ್ನಾಚರಿಸಿದೆನು! ಆದರೆ ನಾನು ಸಂಕಲ್ಪಿಸಿದ್ದು ಒಬ್ಬ ಪುತ್ರನಿಗಾಗಿ ಮಾತ್ರ! ಈಗ ನೋಡಿದರೆ ಇಲ್ಲಿ ನಲವತ್ತೊಂಬತ್ತು ಪುತ್ರರಿದ್ದಾರೆ! ಇದು ಹೇಗಾಯಿತು? ನಿನಗೇನಾದರೂ ತಿಳಿದಿದ್ದರೆ ಹೇಳು! ಆದರೆ ಸತ್ಯವನ್ನಲ್ಲದೇ ಸುಳ್ಳು ಹೇಳಬೇಡ!”

ಇಂದ್ರನು ಹೇಳಿದನು, “ಅಮ್ಮಾ! ಸ್ವಾರ್ಥಬುದ್ಧಿಯುಳ್ಳ ನಾನು, ಧರ್ಮವನ್ನು ಕಡೆಗಣಿಸಿ, ನೀನು ಆಚರಿಸುತ್ತಿದ್ದ ವ್ರತದಲ್ಲಿ ದೋಷ ಉಂಟಾಗುವುದನ್ನೇ ಕಾಯುತ್ತಿದ್ದು, ಅಂಥ ದೋಷವೊಂದು ಕಂಡುಬಂದಕೂಡಲೇ ನಿನ್ನ ಉದರವನ್ನು ಪ್ರವೇಶಿಸಿ ನಿನ್ನಲ್ಲಿ ಬೆಳೆಯುತ್ತಿದ್ದ ಗರ್ಭವನ್ನು ಏಳು ತುಂಡುಗಳಾಗಿ ಕತ್ತರಿಸಿದೆ! ಆದರೆ ಆ ಏಳು ತುಂಡುಗಳೂ ಏಳು ಕುಮಾರರಾದವು! ಪುನಃ ನಾನು ಆ ಏಳು ಕುಮಾರರನ್ನು ಏಳೇಳಾಗಿ ಕತ್ತರಿಸಿದೆ! ಆದರೆ ಅವರು ನಲವತ್ತೊಂಬತ್ತು ಕುಮಾರರಾದರೇ ವಿನಾ ಯಾರೂ ಸಾಯಲಿಲ್ಲ! ಇದರಿಂದ ನಾನು ಪರಮಾಶ್ಚರ್ಯಗೊಂಡೆ! ಅಮ್ಮಾ, ಇದು ಆ ಪರಮಪುರುಷನಿಗೆ ನೀನು ಸಲ್ಲಿಸಿದ ಭಕ್ತಿಯುತ ಪೂಜೆಯ ಫಲವೆಂದು ಆಗ ನಾನರಿತೆ! ಅಮ್ಮಾ, ಭಕ್ತರು ಯಾವುದೇ ಆಸೆಯಿಲ್ಲದೇ ಆ ಭಗವಂತನನ್ನು ಪೂಜಿಸಿದರೂ ಅವನು ಅವರ ಆಸೆಗಳೆಲ್ಲವನ್ನೂ ಪೂರೈಸುತ್ತಾನೆ! ಆ ದೇವೋತ್ತಮ ಪರಮ ಪುರುಷನನ್ನು ಭಕ್ತಿಯಿಂದ ಆರಾಧಿಸಲು, ಅವನು ತನ್ನನ್ನೇ ಭಕ್ತನಿಗೆ ಅರ್ಪಿಸಿಕೊಂಡು ಬಿಡುತ್ತಾನೆ; ಹೀಗಿರಲು, ನರಕದಲ್ಲೂ ದೊರೆಯುವ ವಿಷಯಸುಖಗಳನ್ನು ಯಾವ ಬುದ್ಧಿವಂತನು ತಾನೇ ಅವನಿಂದ ಕೇಳುತ್ತಾನೆ?! “ಅಮ್ಮಾ! ಬಾಲಿಶ ಸ್ವಭಾವದಿಂದ ನಾನೆಸಗಿರುವ ದೌರ್ಜನ್ಯವನ್ನು ಮನ್ನಿಸು! ನನ್ನ ಅಪರಾಧವನ್ನು ದಯವಿಟ್ಟು ಕ್ಷಮಿಸು! ನಾನು ನಿನ್ನ ಸಂತಾನವನ್ನು ಕೊಲ್ಲಲೆತ್ನಿಸಿದರೂ ಅದು ಸಾಯದೇ ನಲವತ್ತೊಂಬತ್ತು ಮರುತ್ತರಾಗಿ, ನನ್ನ ತಮ್ಮಂದಿರೆನಿಸಿ ದೇವತೆಗಳ ಗುಂಪಿಗೆ ಸೇರಿತು! ಇದಕ್ಕೆ ಕಾರಣ, ನಿನ್ನ ಹರಿಭಕ್ತಿ!”

“ಆಗಲಿ ವತ್ಸ!” ದಿತಿಯು ಆಶ್ಚರ್ಯ ಸಂತೋಷಗಳಿಗೊಳಗಾಗಿ ಹೇಳಿದಳು, “ನಿನ್ನನ್ನು ಕ್ಷಮಿಸಿದ್ದೇನೆ! ನಿನ್ನ ಮೇಲಿನ ದ್ವೇಷ ಅಳಿಯಿತು!”

ದೇವೇಂದ್ರನು ಮರುದ್ಗಣಗಳೊಂದಿಗೆ ದಿತಿದೇವಿಗೆ ಶುದ್ಧಭಾವದಿಂದ ನಮಸ್ಕರಿಸಿ ತುಷ್ಟನಾಗಿ, ಅವಳ ಅನುಜ್ಞೆಯನ್ನು ಪಡೆದು ಅವಳು ನೋಡ ನೋಡುತ್ತಿದ್ದಂತೆ ಮರುತ್ತರೊಡನೆ ಸ್ವರ್ಗ ಲೋಕಕ್ಕೆ ಹೊರಟುಹೋದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi