ಕೃಷ್ಣನೇ ನಮ್ಮ ಆನಂದ

ಲೌಕಿಕ ಜೀವನವೆಂದರೆ ಸಂತೋಷವನ್ನು ಕಂಡುಕೊಳ್ಳಲು ಹೋರಾಟ ನಡೆಸುವುದು. ಆದರೆ ಅದನ್ನು ಎಲ್ಲಿ ಹುಡುಕುವುದೆಂದು ಜನರಿಗೆ ಗೊತ್ತಿಲ್ಲ.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1972ರ ಸೆಪ್ಟೆಂಬರ್‌ 28 ರಂದು ಲಾಸ್‌ ಏಂಜಲೀಸ್‌ನಲ್ಲಿ ನೀಡಿದ ಉಪನ್ಯಾಸ.

ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ ।

ರಾಮಕೃಷ್ಣಾವಿತಿ ಭುವೋ ಭಗವಾನ್‌ ಅಹರದ್‌ ಭರಮ್‌ ॥

“ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಅವತಾರಗಳಲ್ಲಿ ಭಗವಂತನು ಬಲರಾಮ ಮತ್ತು ಕೃಷ್ಣನಾಗಿ, ಸ್ವಯಂ ತಾನೇ ವೃಷ್ಣಿ (ಯದು) ವಂಶದಲ್ಲಿ ಜನಿಸಿದನು ಮತ್ತು ಭೂಭಾರವನ್ನು ನಿವಾರಿಸಿದನು.” (ಶ್ರೀಮದ್‌ ಭಾಗವತ, 1.3.23)

ಕೃಷ್ಣನು ಎಲ್ಲಿಂದ ಬೇಕಾದರೂ ಆರ್ವಿಭವಿಸಬಹುದು. ಆದರೆ ಅವನು ತನ್ನ ಅವತಾರಕ್ಕೆ ವೃಷ್ಣಿ ವಂಶವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ವೃಷ್ಣಿ ಕುಟುಂಬದಲ್ಲಿ ಮೊದಲು ಬಲರಾಮನು ಆರ್ವಿಭವಿಸಿದನು. ಅನಂತರ ಕೃಷ್ಣನು ಅವತರಿಸಿದನು. ಮಲೇಷ್ಯಾದಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಶ್ರೀಗಂಧವನ್ನು `ಮಲಯದ ಚಂದನ’ ಎಂದು ಹೇಳುವಂತೆ ವೃಷ್ಣಿ ಕುಟುಂಬದಲ್ಲಿ ಅವತರಿಸಿದ್ದರಿಂದ ಕೃಷ್ಣನ ಅನೇಕ ಹೆಸರಿನಲ್ಲಿ ವಾರ್ಷ್ಣೇಯ ಕೂಡ ಒಂದು.

ಜನ್ಮ ಕರ್ಮ ಚ ಮೇ ದಿವ್ಯಂ. ಕೃಷ್ಣನ ಜನನ ಅಥವಾ ಆವಿರ್ಭಾವ ಮತ್ತು ಕರ್ಮಗಳು ಸಾಮಾನ್ಯವಲ್ಲ. ದಿವ್ಯಂ – ಅವು ಅಲೌಕಿಕ. ಯೋ ಜಾನಾತಿ ತತ್ತ್ವತಃ. ಕೃಷ್ಣನ ಅವತಾರದ ಸತ್ಯವನ್ನು ಅರ್ಥ ಮಾಡಿಕೊಂಡರೆ ಪರಿಣಾಮವು ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ : ಈ ದೇಹ ತ್ಯಜಿಸಿದ ಮೇಲೆ ಅವರು ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಕೃಷ್ಣನು ಹೇಳುತ್ತಾನೆ, ಮಾಂ ಏತಿ : “ಅವರು ನನ್ನ ನಿತ್ಯ ನಿವಾಸಕ್ಕೆ ಬರುತ್ತಾರೆ.” ಅದೇ ಬದುಕಿನ ಯಶಸ್ಸು. ನೀವು ಸುಮ್ಮನೆ ಭಗವಂತನ ಅಲೌಕಿಕ ಅವತಾರ, ಅಂತರ್ಧಾನ, ಲೀಲೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ.

ಜನರು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಂತೆ ಮಾಡುವುದೇ ಕೃಷ್ಣ ಪ್ರಜ್ಞೆ ಆಂದೋಲನದ ಉದ್ದೇಶ. ಕೃಷ್ಣನನ್ನು ಅರ್ಥಮಾಡಿಕೊಂಡವನು ಐಹಿಕ ಬಂಧನದಿಂದ ಮುಕ್ತನಾಗುತ್ತಾನೆ. ನಾವೆಲ್ಲರೂ ಒಂದಲ್ಲ ಒಂದು ರೀತಿಯ ಬಂಧನದಿಂದ ಮುಕ್ತರಾಗಲು ಹಾತೊರೆಯುತ್ತಿರುತ್ತೇವೆ. “ನಾನು ಕೆಲವು ಸಂದರ್ಭಗಳ ನಿರ್ಬಂಧಕ್ಕೆ ಒಳಪಟ್ಟಿದ್ದೇನೆ, ಇದರಿಂದ ನಾನು ಹೊರಬರಬೇಕು” ಎಂದು ನಾವು ಭಾವಿಸುತ್ತೇವೆ. ಈ ಬಂಧನವನ್ನು ಅಂತ್ಯಗೊಳಿಸುವುದನ್ನು ಆತ್ಯಂತಿಕ ದುಃಖ ನಿವೃತ್ತಿ ಎಂದು ಕರೆಯುತ್ತಾರೆ.

ದುಃಖ ನಿವೃತ್ತಿ ಎಂದರೆ ನೋವಿನ ಪರಿಸ್ಥಿತಿಯನ್ನು ತಡೆಯುವುದು. ಎಲ್ಲರೂ ನೋವಿನ ಪರಿಸ್ಥಿತಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಅದು ವಾಸ್ತವ. ನಾವು ಹೋರಾಡುತ್ತಿದ್ದೇವೆ. ನನ್ನ ಬಳಿ 200 ಡಾಲರ್‌ ಇದೆ ಎಂದುಕೊಳ್ಳಿ. ಆದರೆ ನನಗೆ ಅದು ಸಾಲದು. ಆದುದರಿಂದ ನಾನು ನೋವಿನ ಪರಿಸ್ಥಿತಿಯನ್ನು ತಡೆಯಲು 500 ಡಾಲರ್‌ಗಾಗಿ ಕಷ್ಟಪಡುವೆ. ನನ್ನ ಬಳಿ 500 ಡಾಲರ್‌ ಇದ್ದಾಗ ನನಗೆ ಇನ್ನೊಂದು ನೋವುಂಟಾಗುತ್ತದೆ. ನಾನು 1000 ಡಾಲರ್‌ಗಾಗಿ ಪ್ರಯತ್ನಿಸುವೆ. ಈ ರೀತಿ ನಾನು ಹೆಚ್ಚಿಸುತ್ತಾ ಹೋಗುವೆ ಮತ್ತು ನೋವಿನ ಸ್ಥಿತಿ ಶಮನಗೊಳ್ಳುವುದಿಲ್ಲ. ಅದು ಮುಂದುವರಿಯುತ್ತದೆ. ಇಲ್ಲವಾದರೆ ಕೋಟ್ಯಧಿಪತಿಗಳು ಏಕೆ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಅವರ ಬಳಿ ಹಣ ಇದೆ. ಆದರೆ ಎಷ್ಟೇ ಪ್ರಮಾಣದ ಲೌಕಿಕ ಸೌಕರ್ಯಗಳು ಅವರಿಗೆ ಸುಖ ನೀಡದೆಂಬುದು ಅವರಿಗೆ ಗೊತ್ತಿಲ್ಲ. ಅದು ಸಾಧ್ಯವಿಲ್ಲ.

ಭಾರತವನ್ನು ಅತ್ಯಂತ ಬಡ ರಾಷ್ಟ್ರವೆಂದು ಜಾಹೀರು ಮಾಡಲಾಗುತ್ತಿದೆ. ಆದರೂ ಭಾರತದ ಹೆಚ್ಚಿನ ಜನರು ಸಂತೋಷವಾಗಿ ಇದ್ದಾರೆ. ಬೇರೆ ಕಡೆಯ ಜನರಿಗೆ ಅದು ಗೊತ್ತಿಲ್ಲ. ಲೌಕಿಕವಾಗಿ ಭಾರತೀಯರಲ್ಲಿ, ಮುಖ್ಯವಾಗಿ ಹಳ್ಳಿಯ ಜನರ ಬಳಿ ಹೆಚ್ಚಿನದೇನೂ ಇರುವುದಿಲ್ಲ, ಬಹುಶಃ ಒಂದೆರಡು ಜೊತೆ ಬಟ್ಟೆಗಳು. ಆದರೂ ಅವರು ವೈದಿಕ ತತ್ತ್ವಗಳನ್ನು ಅನುಸರಿಸುತ್ತಾರೆ, ಮುಂಜಾನೆಯೇ ಸ್ನಾನ ಮಾಡುತ್ತಾರೆ, ತಮ್ಮ ವ್ಯವಹಾರಗಳಿಗೆ ಹೋಗುತ್ತಾರೆ ಮತ್ತು ಏನು ಸಿಗುವುದೋ ಅದನ್ನು ಸೇವಿಸುತ್ತಾರೆ. ಮತ್ತು ಅವರು ಸಂತೋಷದಿಂದ ಇರುತ್ತಾರೆ. ಜನರು ಅವರನ್ನು “ಅನಾಗರಿಕರು” ಎನ್ನುತ್ತಾರೆ. ಆದರೇನು, ನಿಮಗೆ ಬೇಕಾಗಿರುವುದು ಸಂತೋಷ, ನೆಮ್ಮದಿ.

ನಿಜವಾದ ಸುಖ

ನಿಜವಾದ ಸಂತೋಷ, ಸುಖ ಏನೆಂಬುದು ಜನರಿಗೆ ತಿಳಿಯದು. ಆದುದರಿಂದಲೇ ಹೋರಾಟ ನಡೆಯುತ್ತಲೇ ಇದೆ. ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ. ಆ ಮೂರ್ಖರಿಗೆ ಭಗವಂತ ವಿಷ್ಣುವೇ ನಿಜವಾದ ಸಂತೋಷ ಎಂಬುವುದು ಗೊತ್ತಿಲ್ಲ. ನಮ್ಮ ಆನಂದ ಕೃಷ್ಣನು. ಕೃಷ್ಣನಿಗಾಗಿ ನಾವು ಹಗಲೂ ರಾತ್ರಿ ಶ್ರಮಿಸುತ್ತೇವೆ. ಕರ್ಮಿಗಳು, ಭಕ್ತರಲ್ಲದವರೂ ಕೂಡ ಹಗಲೂ ರಾತ್ರಿ ಶ್ರಮಿಸುತ್ತಾರೆ, ಆದರೆ ಅವರು ಸಂತೋಷದಿಂದ ಇಲ್ಲ. ನಾವು ಆನಂದದಿಂದ ಇದ್ದೇವೆ. ಅದು ಅವರಿಗೆ ತಿಳಿಯದು. ಅವರು ಮಾಡುತ್ತಿರುವಂತೆಯೇ ನಾವು ಮಾಡುತ್ತಿದ್ದೇವೆ. ನಾವು ಸೋಮಾರಿಗಳಲ್ಲ. ನಾವು ನಿದ್ರಿಸುತ್ತಿಲ್ಲ. ನಾವು ಪ್ರತಿಯೊಬ್ಬರೂ ಕಾರ್ಯಮಗ್ನರು. ಕೆಲವರು ಬರೆಯುತ್ತಿದ್ದಾರೆ, ಕೆಲವರು ಟೈಪ್‌ ಮಾಡುತ್ತಿದ್ದಾರೆ, ಕೆಲವರು ಪುಸ್ತಕ ಮಾರಾಟ ಮಾಡುತ್ತಿದ್ದಾರೆ, ಇನ್ನೂ ಕೆಲವರು ಪ್ರಸಾದ ತಯಾರಿಸುತ್ತಿದ್ದಾರೆ, ಕೆಲವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ, ಕೆಲವರು ಸಂಕೀರ್ತನೆಗೆ ಹೋಗುತ್ತಿದ್ದಾರೆ. ಒಂದೇ ಒಂದು ಕ್ಷಣ ಕೂಡ ನಾವು ಸೋಮಾರಿಗಳಲ್ಲ. ಕೃಷ್ಣನಿಗಾಗಿ ಕೆಲಸ ಮಾಡುತ್ತಿರುವುದರಿಂದ ಸಂತೋಷವಿದೆ. ಇಲ್ಲಿ ಯಾರಿಗೂ ಒಂದು ಪೈಸೆಯನ್ನೂ ನೀಡುವುದಿಲ್ಲ. ಬದಲಿಗೆ, ನೀವೇ ಹಣ ತರುವಿರಿ. ಆದರೂ ನೀವು ಸಂತೋಷದಿಂದ ಇರುವಿರಿ. ಆದರೆ ಕರ್ಮಿಗಳಿಗೆ ಹಣ ಸಿಗುತ್ತಿದೆ. ಆದರೂ ಅವರು ಸಂತೋಷದಿಂದ ಇಲ್ಲ. ಏಕೆ? ಇದು ಪ್ರಾಯೋಗಿಕ.

ಕೆಲವು ವೇಳೆ ನಾವು ಯಾರಿಗಾದರೂ ಅವನು ನಮ್ಮೊಡನೆ ಇರಲಾಗದೆಂದು ಹೇಳಬೇಕಾಗಬಹುದು. ಸರಿ, ಅವನು ಹೊರಟು ಹೋಗುತ್ತಾನೆ. ಆದರೆ ಅವನಿಗೆ ದೂರ ಇರಲಾಗದು. ಆನಂದವಿಲ್ಲದಿದ್ದರೆ ಅವನು ಏಕೆ ಕೃಷ್ಣ ಪ್ರಜ್ಞೆಯಲ್ಲಿ ಅಂಟಿಕೊಂಡಿರುತ್ತಾನೆ? ಯಾರು ಬಿಟ್ಟು ಹೋಗಿ ವಾಪಸು ಬರುತ್ತಾರೋ ಅವರು ಕೃಷ್ಣ ಪ್ರಜ್ಞೆ ಆಚೆ ಯಾವುದೇ ಆನಂದವನ್ನು ಕಾಣುವುದಿಲ್ಲ. ಜನರು ಹೇಳಬಹುದು, “ಇವರು ಮೂರ್ಖ ಜನರು. ಯಾವುದೋ ತತ್ತ್ವದ ಮೇಲೆ ಕೆಲಸ ಮಾಡುತ್ತಿದ್ದಾರೆ.” ಆದರೆ ಕೃಷ್ಣ ಪ್ರಜ್ಞೆಯಲ್ಲಿ ಇರುವವರು ಸಂತೋಷವಾಗಿದ್ದಾರೆ. ಅವರು ಆನಂದವಾಗಿರಲೇ ಬೇಕು. ಆದರೆ ಬೇರೆಯವರಿಗೆ ಇದು ಗೊತ್ತಿಲ್ಲ. ನ ತೇ ವಿದುಃ ಸ್ವಾರ್ಥ ಗತಿಂ ಹಿ ವಿಷ್ಣುಂ. ಸಂತೋಷವನ್ನು ಹೇಗೆ ಪಡೆಯಬೇಕೆಂಬುವುದು ಭಕ್ತರಲ್ಲದವರಿಗೆ ಗೊತ್ತಿಲ್ಲ.

ನೀವು ದೇವರ ಬಳಿಗೆ ಬಂದಾಗ ನೀವು ಆನಂದವನ್ನು ಪಡೆಯಬಹುದು. ಏಕೆಂದರೆ ನೀವು ಭಗವಂತನ ವಿಭಿನ್ನಾಂಶ. ಈ ಉದಾಹರಣೆಯನ್ನು ನೋಡಿ – ಮಗು ಅಳುತ್ತಿದೆ, ಯಾರಿಗೂ ಸಮಾಧಾನಪಡಿಸಲು ಆಗುತ್ತಿಲ್ಲ. ಆದರೆ ತಾಯಿಯ ಎದೆಯ ಆಶ್ರಯ ಸಿಕ್ಕಿದ ಕೂಡಲೇ ಮಗು ಅಳು ನಿಲ್ಲಿಸುತ್ತದೆ. ಅದು ಸಂತೋಷಪಡುತ್ತದೆ, ಏಕೆಂದರೆ ಅದು ತಾಯಿಯ ವಿಭಿನ್ನಾಂಶ. “ನಾನೀಗ ಸುರಕ್ಷಿತ ಸ್ಥಳ, ತಾಯಿಯ ಬಳಿಗೆ ಬಂದಿದ್ದೇನೆ” ಎಂದು ಅದು ಗ್ರಹಿಸಿಕೊಳ್ಳುತ್ತದೆ.

ಅದೇ ರೀತಿ ನಾವೆಲ್ಲರೂ ಭಗವಂತ, ವಿಷ್ಣುವಿನ ವಿಭಿನ್ನಾಂಶ. ಆದುದರಿಂದ ಕೃಷ್ಣ ಅಥವಾ ವಿಷ್ಣುವಿನ ಬಳಿಗೆ ಬರದಿದ್ದರೆ ನಮಗೆ ಸಂತೋಷವಿಲ್ಲ. ಆದರೆ ಮೂರ್ಖರಿಗೆ ಇದು ಗೊತ್ತಿಲ್ಲ. ಅವರು ವೈಜ್ಞಾನಿಕ ಮುನ್ನಡೆ ಎಂದು ಹೇಳಿಕೊಳ್ಳುವ ಅಂಶದಲ್ಲಿಯೇ ಆನಂದಿತರಾಗಲು ಯತ್ನಿಸುತ್ತಿದ್ದಾರೆ.

ವೇದನೆ ಇಲ್ಲದ ವೇದಿಕೆ

ಸಂತೋಷದ ವೇದಿಕೆಗೆ ಬರುವುದೇ ಬದುಕಿನ ಧ್ಯೇಯ. ಅಲ್ಲಿ ವೇದನೆ ಇರುವುದೇ ಇಲ್ಲ, ಬರೀ ಸಂತೋಷವೇ ಇರುತ್ತದೆ. (ಆನಂದಮಯೋ ಅಭ್ಯಾಸಾತ್‌). ಅದು ನಮ್ಮ ಗುರಿ.

ಕೃಷ್ಣನು ಗೋಪಾಲಕರ ಜೊತೆ ಮಾತಾಡುತ್ತಿದ್ದಾನೆ, ಕೃಷ್ಣನು ಗೋಪಿಕೆಯರೊಂದಿಗೆ ನರ್ತಿಸುತ್ತಿದ್ದಾನೆ, ಕೃಷ್ಣನು ಬೆಣ್ಣೆ ಕದಿಯುತ್ತಿದ್ದಾನೆ, ಕೃಷ್ಣನು ಅಸಂಖ್ಯ ಲೀಲೆಗಳಲ್ಲಿ ತೊಡಗಿರುವಂತಹ ಅನೇಕ ಚಿತ್ರಗಳನ್ನು ನೀವು ನೋಡುವಿರಿ. ಅವುಗಳಲ್ಲಿ ಕೃಷ್ಣನು ಸಪ್ಪೆ ಮುಖ ಹಾಕಿಕೊಂಡಿರುವುದನ್ನು ಅಥವಾ ಅಳುತ್ತಿರುವುದನ್ನು ನೀವು ಕಾಣುವುದಿಲ್ಲ. ರಾಕ್ಷಸನನ್ನು ಸಂಹರಿಸುವಾಗಲೂ ಅವನು ಅದನ್ನು ತುಂಬ ಸುಲಭದ ಕೆಲಸವೆಂಬಂತೆ ನಗುತ್ತಲೇ ಮಾಡುತ್ತಾನೆ. ನೋಡಿದಿರಾ, ಸಂಹಾರ ಮಾಡುತ್ತಿರಲಿ ಅಥವಾ ನರ್ತಿಸುತ್ತಿರಲಿ ಅವನು ಸಂತೋಷದಿಂದ ಇರುತ್ತಾನೆ.

ಈ ಆನಂದದ, ಯಾವುದೇ ದುಃಖವಿಲ್ಲದ, ಸಂತೋಷದ ಮಾಹಿತಿಯನ್ನು – ಆನಂದಮಯೋ ಅಭ್ಯಾಸಾತ್‌ – ನೀಡುತ್ತಿದ್ದೇವೆ. ಸಂತೋಷಿಯಾಗಬೇಕೆಂಬುವುದೇ ವ್ಯಕ್ತಿ ಮತ್ತು ಪರಮಾತ್ಮನ ಸ್ವಭಾವ ಎಂದು ವೇದಾಂತ ಸೂತ್ರ ಹೇಳುತ್ತದೆ. ಆನಂದಮಯ – ಸಂತೋಷ. ಆಧ್ಯಾತ್ಮಿಕ ಜೀವನವೆಂದರೆ ಆನಂದ ಎಂದು ಅರ್ಥ. ಪರಾತ್ಪರನ ಸಹಕಾರದೊಂದಿಗೆ ಆ ಸಂತೋಷವನ್ನು ಪಡೆಯಬಹುದು.

ನಾವು ಬೆಂಕಿಯ ಕಿಡಿಯಂತೆ. ಕೆಲವು ಬಾರಿ ಕಿಡಿಗಳು ಸುಂದರವಾಗಿ ಕಾಣುತ್ತವೆ. ಆದರೆ ಕಿಡಿಯು ಬೆಂಕಿಯಿಂದ ಹೊರಬಿದ್ದರೆ, ಕಿಡಿಯ ಉರಿಯು ತತ್‌ಕ್ಷಣ ಶಮನಗೊಳ್ಳುತ್ತದೆ. ನಮ್ಮ ಐಹಿಕ ಸ್ಥಿತಿಯೂ ಹಾಗೆಯೇ. ನಾವು ಕೃಷ್ಣನ ಸಹವಾಸವನ್ನು ಬಿಟ್ಟೆವು ಮತ್ತು ಈ ಲೌಕಿಕ ಜಗತ್ತಿನಲ್ಲಿ ಸಂತೋಷವಾಗಿರಲು ನಾವು ಬಯಸುತ್ತೇವೆ. ಆದುದರಿಂದ ನಾವು ನೋವು ಅನುಭವಿಸುತ್ತಿದ್ದೇವೆ.

ನೀವು ಕಿಡಿಯನ್ನು ಪುನಃ ಬೆಂಕಿಯಲ್ಲಿಟ್ಟರೆ ಅದು ಮತ್ತೆ ಬೆಂಕಿಯಾಗುತ್ತದೆ, ಕೆಂಪು ಜ್ವಾಲೆಯಾಗುತ್ತದೆ. ಅಕಸ್ಮಾತ್‌ ಬೆಂಕಿಯಿಂದ ಹೊರಬೀಳುವ ಕಿಡಿಗಳನ್ನು ತೆಗೆದುಕೊಂಡು ಪುನಃ ಬೆಂಕಿಯಲ್ಲಿಯೇ ಇಡುವ ಪ್ರಯತ್ನವನ್ನು ನಾವು ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ಮಾಡುತ್ತೇವೆ. ಬೆಂಕಿಗೆ ವಾಪಸಾಗುವುದೇ ನಿಜವಾದ ಸಂತೋಷ.

ದೇವರಿಗೆ ಪರೀಕ್ಷೆ

ಈ ಶ್ಲೋಕದಲ್ಲಿ ರಾಮ ಕೃಷ್ಣ ಇತಿ ಎಂದು ಹೇಳಲಾಗಿದೆ : ಭಗವಂತನು ರಾಮ ಮತ್ತು ಕೃಷ್ಣನಾಗಿ ಅವತರಿಸಿದನು. ರಾಮ ಕೃಷ್ಣರ ಲಕ್ಷಣಗಳಿರಬೇಕು. ಏನು ಪರೀಕ್ಷೆ? ಭಗವಾನ್‌ ಅಹರದ್‌ ಭರಂ ಎನ್ನುವುದೇ ಪರೀಕ್ಷೆ. ಭಗವಂತನು ಜಗತ್ತಿನ ಹೊರೆಯನ್ನು ಇಳಿಸಬಲ್ಲನು. ಕೃಷ್ಣ ಮತ್ತು ರಾಮ ಆವಿರ್ಭವಿಸಿದಾಗ, ಬಲರಾಮನು ಲೋಕದ ನೆಮ್ಮದಿಗಾಗಿ ಅನೇಕ ರಾಕ್ಷಸರನ್ನು ಸಂಹರಿಸಿದನು. ಹುಟ್ಟಿನಿಂದಲೇ ಕೃಷ್ಣನು ಪೂತನಾ, ಅಘಾಸುರ, ಬಕಾಸುರ, ಕೇಶಿ ಮುಂತಾದ ರಾಕ್ಷಸರನ್ನು ಸಂಹರಿಸಿದನು. ಪ್ರತಿದಿನ ಕೃಷ್ಣ ಬಲರಾಮರು ಅರಣ್ಯಕ್ಕೆ ಹೋಗುತ್ತಿದ್ದರು. ಒಬ್ಬನಲ್ಲ ಒಬ್ಬ ರಾಕ್ಷಸ ಬಂದು ಅಡ್ಡಿ ಮಾಡಿ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ. ಕೊನೆಗೆ ಕೃಷ್ಣನಿಂದ ಹತನಾಗುತ್ತಿದ್ದ. ಅನಂತರ ಕೃಷ್ಣನ ಮಿತ್ರರು ಮನೆಗೆ ಬಂದು ತಮ್ಮ ತಮ್ಮ ತಾಯಂದಿರ ಬಳಿ ಅಂದಿನ ಕಥೆಯನ್ನು ವರ್ಣಿಸುತ್ತಿದ್ದರು, “ಅಮ್ಮಾ, ಕೃಷ್ಣನು ತುಂಬ ಅದ್ಭುತ. ದೊಡ್ಡ ರಾಕ್ಷಸ ಬಂದಾಗ ಅವನನ್ನು ಕೃಷ್ಣನು ಹೀಗೆ ಹಾಗೆ ಕೊಂದು ಹಾಕಿದ.” ಅದು ಕೃಷ್ಣ. ಯಾರೋ ಧ್ಯಾನ ಮಾಡುವುದರಿಂದ ಪರೀಕ್ಷೆ ಇಲ್ಲದೆ ಕೃಷ್ಣನಾಗಿಬಿಡುತ್ತಾರೆಂದಲ್ಲ. ಯಾರೋ ಒಬ್ಬರು ರಾಮ ಅಥವಾ ಕೃಷ್ಣ ಎಂಬುವುದಕ್ಕೆ ಏನು ಸಾಬೀತು ಇದೆ? ಮೂರ್ಖರು ಸಾಬೀತನ್ನು ತೆಗೆದುಕೊಳ್ಳುವುದಿಲ್ಲ. ಅವರು ಯಾವುದೋ ನಕಲಿ ವ್ಯಕ್ತಿಗಳನ್ನು ರಾಮ, ಕೃಷ್ಣ ಎಂದು ಬಿಂಬಿಸುತ್ತಾರೆ.

ಬಲರಾಮ ಮತ್ತು ಕೃಷ್ಣರು ಭಗವಂತ. ವಾಸ್ತವವಾಗಿ ಅವರು ದೇವೋತ್ತಮ ಪರಮ ಪುರುಷ ಮತ್ತು ಅವರು ಅದನ್ನು ಸಾಬೀತುಪಡಿಸಿದರು. ಅವರು ಕ್ಯಾನ್ಸರ್‌ನಿಂದ ಸಾಯುತ್ತಿರುವ `ರಾಮ’ ಅಥವಾ `ಕೃಷ್ಣ’ ಅಲ್ಲ. ನಾವು ಅಂತಹ ರಾಮ, ಕೃಷ್ಣರ ಹಿಂದೆ ಬಿದ್ದಿಲ್ಲ. ನಿಜವಾದ ರಾಮ ಮತ್ತು ಕೃಷ್ಣರಿರುವಾಗ ನಾನು ಯಾಕೆ ನಕಲಿ ರಾಮ, ಕೃಷ್ಣರಲ್ಲಿಗೆ ಹೋಗಲಿ?

ಮೋಸಕ್ಕೆ ಒಳಗಾಗದಂತೆ ನಾವು ಬುದ್ಧಿವಂತರಾಗಿರಬೇಕು. ಕೃಷ್ಣ ಯೇ ಭಜೇ ಸೇ ಬಡಾ ಚತುರ : ಬುದ್ಧಿವಂತರಾಗದೆ ಯಾರೂ ಕೃಷ್ಣನಿಗೆ ಶರಣಾಗುವುದಿಲ್ಲ.

ಬಹೂನಾಂ ಜನ್ಮಾನಾಂ ಅನ್ತೇ ಜ್ಞಾನವಾನ್‌ ಮಾಂ ಪ್ರಪದ್ಯತೇ ।।

(ಗೀತೆ 7.19)

ಕೃಷ್ಣನಿಗೆ ಶರಣಾದವರು ಅತ್ಯಂತ ಬುದ್ಧಿವಂತರು (ಜ್ಞಾನವಾನ್‌). ಅನೇಕ ಜನ್ಮಗಳ ಅನಂತರ ಪೂರ್ಣವಾಗಿ ಜ್ಞಾನ ಉಳ್ಳವರು ಅವನಿಗೆ ಶರಣಾಗುತ್ತಾರೆ ಎಂದು ಕೃಷ್ಣನು ಹೇಳುತ್ತಾನೆ.

ನಮಗೆ ಮೋಸಮಾಡಲಾಗದು.

ಪ್ರತಿಯೊಬ್ಬರೂ ಕೃಷ್ಣನಿಗೆ ಪ್ರತಿಸ್ಪರ್ಧಿಯನ್ನು ಮುಂದಿಡಲು ಪ್ರಯತ್ನಿಸುತ್ತಾರೆ. “ಓ, ಆ ಕೃಷ್ಣ ಏಕೆ? ಇಲ್ಲಿ ನೋಡಿ, ದೊಡ್ಡ ಗಡ್ಡವಿರುವ ಮತ್ತೊಬ್ಬ ಕೃಷ್ಣನನ್ನು.” ಅಂತಹ ಕೃಷ್ಣನು ಮೂರ್ಖನು ಮತ್ತು ಅವನನ್ನು ಕೃಷ್ಣ ಎಂದು ಬಿಂಬಿಸುವವರು ಕೂಡ ಮೂರ್ಖರು.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ,

ಚತುರ್‌ ವಿಧಾ ಭಜಂತೇ ಮಾಂ ಜನಾಃ ಸುಕೃತಿನೋ ಅರ್ಜುನ ।

“ಭರತ ವಂಶಜರಲ್ಲಿ ಶ್ರೇಷ್ಠನಾದ ಅರ್ಜುನ, ನಾಲ್ಕು ವಿಧಗಳ ಪುಣ್ಯವಂತರು ನನಗೆ ಭಕ್ತಿಸೇವೆಯನ್ನು ಮಾಡಲು ಬರುತ್ತಾರೆ. ದುಃಖಿಗಳು, ಜಿಜ್ಞಾಸುಗಳು, ಐಶ್ವರ್ಯವನ್ನು ಬಯಸುವವರು ಮತ್ತು ಜ್ಞಾನಿಗಳು – ಇವರೇ ಈ ನಾಲ್ಕು ಬಗೆಯ ಜನರು.”

ಸಾಮಾನ್ಯ ಮನುಷ್ಯನು ಪುಣ್ಯವಂತನಾಗಿದ್ದರೆ ಅವನು ಭಗವಂತನನ್ನು ಪ್ರಾರ್ಥಿಸುತ್ತಾನೆ, “ನನ್ನ ಪ್ರೀತಿಯ ದೇವರೇ, ಹಣದ ಅಗತ್ಯದಿಂದ ನಾನು ದುಃಖಿಯಾಗಿದ್ದೇನೆ. ಕೃಪೆಯಿಟ್ಟು ನನಗೆ ಸ್ವಲ್ಪ ಹಣ ಕೊಡು.” ಜ್ಞಾನಿಯು ಜ್ಞಾನಕ್ಕಾಗಿ ಭಗವಂತನ ಬಳಿಗೆ ಬರುತ್ತಾನೆ. ಅವನಿಗೆ ಭಗವಂತನ ಸ್ವರೂಪ ಸ್ಥಿತಿ ಅರಿಯುವ ಅಪೇಕ್ಷೆ. ಮತ್ತು ಕುತೂಹಲಿಯು “ದೇವರು ಏನು?” ಎಂದು ಕೇಳುತ್ತಾನೆ.

ಈ ನಾಲ್ಕು ಬಗೆಯ ಜನರು ಭಗವಂತನನ್ನು ಅರ್ಥ ಮಾಡಿಕೊಳ್ಳಲು ಅಥವಾ ಅವನ ಬಳಿಗೆ ಹೋಗಲು ಪ್ರಯತ್ನಿಸುತ್ತಾರೆ. ಈ ನಾಲ್ಕು ಜನರಲ್ಲಿ ದುಃಖಿಗಳು ಮತ್ತು ಹಣಕ್ಕಾಗಿ ಬರುವವರು ತಮ್ಮ ಅಗತ್ಯದ ಹಣ ದೊರೆತ ಮೇಲೆ ಅಥವಾ ದುಃಖ ಶಮನವಾದ ಮೇಲೆ ದೇವರನ್ನು ಮರೆತುಬಿಡುತ್ತಾರೆ. ಆದರೆ ಕುತೂಹಲಿಗಳು ಮತ್ತು ಜ್ಞಾನಿಗಳು ಭಗವಂತನನ್ನು ಶೋಧಿಸುವ ಕಾರ್ಯ ಮುಂದುವರಿಸುತ್ತಾರೆ. ಈ ಎರಡು ಬಗೆಯ ಜನ ಭಗವಂತ ಏನೆಂಬುದನ್ನು ಅರ್ಥ ಮಾಡಿಕೊಂಡರೆ ಸಾಕು, ಅವನು ಪರಿಪೂರ್ಣನು. ಅನೇಕ ಜನ್ಮಗಳ ಅನಂತರ ಅದು ಸಾಧ್ಯ : ಬಹೂನಾಂ ಜನ್ಮಾನಾಂ ಅಂತೇ ಜ್ಞಾನವಾನ್‌. ಒಬ್ಬರಿಗೆ ಸಿಗುವ ಜ್ಞಾನ ಎಂತಹುದು? ವಾಸುದೇವಃ ಸರ್ವಂ ಇತಿ : “ಕೃಷ್ಣನೇ ಎಲ್ಲವೂ, ವಾಸುದೇವ.” ಕೃಷ್ಣನ ಹೆಸರುಗಳಲ್ಲಿ ವಾಸುದೇವ ಕೂಡ ಒಂದು.

ಸ ಮಹಾತ್ಮಾ ಸುದುರ್ಲಭಃ – ಪ್ರತಿಯೊಂದನ್ನೂ ಶ್ರೀ ಕೃಷ್ಣನಿಗೆ ಸಂಬಂಧಿಸಿದ್ದು ಎಂದು ಒಪ್ಪಿಕೊಳ್ಳುವ ಅಂತಹ ಆತ್ಮಗಳು ಅಪರೂಪ. ಎಲ್ಲವೂ ಕೃಷ್ಣನದೇ ಎಂದು ಸ್ವೀಕರಿಸಿದವರು ಶ್ರೇಷ್ಠ ಆತ್ಮಗಳು, ಜಗತ್ತಿನಲ್ಲಿಯೇ ಮಹಾ ಆತ್ಮಗಳು. ನಕಲಿ ಕೃಷ್ಣನಿಂದ ಅವರ ಹಾದಿಯನ್ನು ತಪ್ಪಿಸಲಾಗದು. ಅವರು ನಿಜವಾದ ಕೃಷ್ಣನಲ್ಲಿ ಆಸಕ್ತಿ ಉಳ್ಳವರು : ವಾಸುದೇವ ಕೃಷ್ಣ, ವಸುದೇವನ ಪುತ್ರ.

ಕೃಷ್ಣನು ವೃಷ್ಣಿ ಕುಟುಂಬದಲ್ಲಿ ಅವತರಿಸಿದನು ಮತ್ತು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕೆಲಸ. ನಾವು ಕೃಷ್ಣನನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅವನು ಅಸೀಮಿತ. ಆದರೂ, ಮಹಾಜನರ, ಶ್ರೇಷ್ಠ ಭಕ್ತರ ಹೆಜ್ಜೆಗಳನ್ನು ಅನುಸರಿಸುವ ಮೂಲಕ ನಾವು ಸ್ವಲ್ಪ ಮಟ್ಟಿಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು.

ನಮ್ಮ ನಿಜವಾದ ಧ್ಯೇಯವೆಂದರೆ ಕೃಷ್ಣನನ್ನು ಪ್ರೀತಿಸುವುದು. ಕೃಷ್ಣನ ಗೆಳತಿಯರಾದ ಗೋಪಿಕೆಯರಿಗೆ ಕೃಷ್ಣನು ದೇವರೆಂದು ಗೊತ್ತಿರಲಿಲ್ಲ. ಗೋಪಾಲ ಬಾಲಕರಿಗೂ ತಿಳಿದಿರಲಿಲ್ಲ. ಅವನ ತಾಯಿ ಯಶೋದೆಗೆ ಕೂಡ ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ತಿಳಿದಿರಲಿಲ್ಲ. ಆದರೆ ಕೃಷ್ಣನಲ್ಲಿ ಅವರ ಪ್ರೇಮ ಸ್ವಯಂ ಸ್ಫೂರ್ತಿಯದು. ಅವರಿಗೆ ಕೃಷ್ಣನಿಂದಾಚೆಗೆ ಏನೂ ಗೊತ್ತಿರಲಿಲ್ಲ. ನೀವು ಆ ಹಂತಕ್ಕೆ ಬಂದರೆ, ಅದು ಪರಿಪೂರ್ಣತೆ.

ದೇವರನ್ನು ಅರ್ಥಮಾಡಿಕೊಳ್ಳಬೇಕೆಂದೇನಿಲ್ಲ. ನಾವು ಏನನ್ನು ಅರಿತಿದ್ದೇೕವೆ? ದೇವರನ್ನು ಅರ್ಥಮಾಡಿಕೊಳ್ಳಲು ನಮ್ಮಲ್ಲಿ ಇರುವ ತಿಳಿವಳಿಕೆಯಾದರೂ ಏನು? ಆದರೆ ನಾವು ಭಗವಂತನ ಲೀಲೆಗಳನ್ನು ನೋಡಬಹುದು. ಕೃಷ್ಣನು ಆವಿರ್ಭವಿಸಿದಾಗ, ಅವನ ಎಲ್ಲ ಲೀಲೆಗಳು ಅಸಾಮಾನ್ಯವಾಗಿದ್ದವು. ಅವನು ಮಾನವ ಜೀವಿಯಾಗಿರಲಿಲ್ಲ, ಆದರೆ ಅವನು ಮಾನವನ ಪಾತ್ರ ನಿರ್ವಹಿಸಿದನು. ಮಾನವರು ವಿವಾಹಿತರಾಗುತ್ತಾರೆ. ಆದುದರಿಂದ ಕೃಷ್ಣನೂ ವಿವಾಹಿತನಾದನು. ಆದರೆ ಅವನ ವಿವಾಹವು ಅದ್ಭುತ. ಅವನಿಗೆ 16,108 ಪತ್ನಿಯರಿದ್ದರು. ಇದು ಅಸಾಮಾನ್ಯ. ಯಾರೂ ಕೂಡ ಹಾಗೆ ವಿವಾಹ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನವಾಬರು ಅನೇಕ ಜನರನ್ನು ಮದುವೆಯಾಗುತ್ತಿದ್ದರು. ಒಬ್ಬ ನವಾಬನು 160 ಸ್ತ್ರೀಯರನ್ನು ವರಿಸಿದ್ದನು. ಆದರೆ ಅವನಿಗೆ ಎಲ್ಲ ಹೆಂಡತಿಯರ ಬಳಿಗೆ ಪ್ರತಿ ರಾತ್ರಿಯೂ ಹೋಗುವುದು ಸಾಧ್ಯವಿರಲಿಲ್ಲ. ಆದರೆ ಕೃಷ್ಣನು ಹಾಗಲ್ಲ. ಕೃಷ್ಣನು 16 ಸಾವಿರ ರೂಪಗಳಿಗೆ ವಿಸ್ತರಿಸಿಕೊಂಡು ಪ್ರತಿಯೊಬ್ಬ ಹೆಂಡತಿ ಜೊತೆಗೂ ಸಾಗುತ್ತಿದ್ದನು.

ಹೀಗೆ, ಶ್ರೀಮದ್‌ ಭಾಗವತದಲ್ಲಿ ಕೃಷ್ಣ-ಬಲರಾಮರ ಅವತಾರದ ಬಗೆಗೆ ವಿವರವಾಗಿ ವರ್ಣಿಸಲಾಗಿದೆ. ಅವರ ಲಕ್ಷಣಗಳು, ಅವರ ತಂದೆಯ ಹೆಸರು, ಅವರ ತಾಯಿಯ ಹೆಸರು, ಸ್ಥಳ, ಲೀಲೆಗಳು – ಎಲ್ಲವನ್ನೂ ವಿವರಿಸಲಾಗಿದೆ. ದೇವರ ನಕಲಿ ಅವತಾರದಿಂದ ನಮ್ಮನ್ನು ವಂಚಿಸಲಾಗದು. ಅದು ಸಾಧ್ಯವಿಲ್ಲ. ಯಾರಿಗೆ ಮೋಸ ಹೋಗಲು ಇಷ್ಟವೋ ಅವರು ಅದಕ್ಕೆ ಒಳಗಾಗಲಿ. ಆದರೆ ನಮಗೆ ಮೋಸ ಹೋಗಲು ಇಷ್ಟವಿಲ್ಲ. ನಮಗೆ ನಿಜವಾದ ದೇವರು ಬೇಕು. ಆದುದರಿಂದ ನಮ್ಮನ್ನು ಯಾರೂ ವಂಚಿಸಲಾಗದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi