ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಸುಗ್ಗನಹಳ್ಳಿ

ನೆಲಮಂಗಲದಿಂದ ಹಾಸನ ರಸ್ತೆಯಲ್ಲಿ 15 ಕಿ.ಮೀ. ಕ್ರಮಿಸಿದರೆ ಸೋಲೂರು ಎಂಬ ಗ್ರಾಮ ಬರುತ್ತದೆ. ಅಲ್ಲಿಂದ ಬಲಕ್ಕೆ 10 ಕಿ.ಮೀ ದೂರ ಕುದೂರು ಎಂಬ ಗ್ರಾಮವು ಬರುತ್ತದೆ. ಅಲ್ಲಿಂದ 6 ಕಿ.ಮೀ. ಕ್ರಮಿಸಿದಾಗ ಹುಲಿಕಲ್‌ ಎಂಬ ಗ್ರಾಮವಿದ್ದು, ಇಲ್ಲಿಂದ 4 ಕಿ.ಮೀ. ದೂರದಲ್ಲಿರುವುದೇ ಸುಗ್ಗನಹಳ್ಳಿ.  

ಹಿಂದೆ ಸುಗ್ಗನಹಳ್ಳಿಯು `ಶುಕಪುರಿ’ಯೆಂದು ಹೆಸರಾಗಿತ್ತು. ಶ್ರೀನಿವಾಸನ ಕಲ್ಯಾಣವನ್ನು ಸಂಪನ್ನಗೊಳಿಸಿದ ಅನಂತರ ಶುಕಮಹರ್ಷಿಗಳು ಲೋಕಸಂಚಾರ ಮಾಡುತ್ತ ಶುಕಪುರಿಗೆ ಬಂದರು. ಅವರು ಇಲ್ಲಿರುವ ಬದರೀವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿ ಪಶ್ಚಿಮಾಭಿಮುಖವಾಗಿ ಸ್ತಂಭವೊಂದರಲ್ಲಿ ನರಸಿಂಹನು ಕಾಣಿಸಿಕೊಂಡನು. ಅವರಿಗೆ ನರಸಿಂಹದೇವನು ಯಾವ ಭಂಗಿಯಲ್ಲಿ ದರುಶನ ನೀಡಿದನೋ ಅದೇ ಭಂಗಿಯಲ್ಲಿ ಅವನನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಲಕ್ಷ್ಮೀ ಸಮೇತನಾಗಿರುವ ನರಸಿಂಹಸ್ವಾಮಿಯನ್ನು ಅಥವಾ ಯೋಗಾ ನರಸಿಂಹಸ್ವಾಮಿಯನ್ನು ನಾವು ಕಾಣುತ್ತೇವೆ. ಇಲ್ಲಿನ ವಿಶೇಷವೆಂದರೆ, ಇಲ್ಲಿ ನರಸಿಂಹಸ್ವಾಮಿಯು ನಿಂತಿದ್ದು, ಅವನ ವಕ್ಷಃಸ್ಥಲದಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.

ಈ ಸ್ಥಳವು ವಿಷ್ಣುವಿನ ವಾಹನವಾದ ಗರುಡದೇವನ ಜನ್ಮಸ್ಥಳವಾಗಿದೆ. ಆದ್ದರಿಂದಲೇ ಇಲ್ಲಿ ವೈನತೇಯನಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಎಲ್ಲ ವಿಷ್ಣು ದೇವಸ್ಥಾನಗಳಲ್ಲಿ ಉತ್ಸವದ ಸಮಯದಲ್ಲಿ ಮಾತ್ರ ಗರುಡ ವಾಹನವು ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲಿ ಮೂಲ ದೇವರಿಗೆ ಮಾಡುವಂತೆಯೇ ಗರುಡ ದೇವರಿಗೂ ನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಅದೇ ಈ ಸ್ಥಳದ ವೈಶಿಷ್ಟ್ಯ. ಎಂತಹ ಸರ್ಪದೋಷವಿದ್ದರೂ ಇಲ್ಲಿ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಇಲ್ಲಿಯ ವೈಶಿಷ್ಟ್ಯವಾಗಿರುವ ಗರುಡೋತ್ಸವವು ಪ್ರತಿ ಶನಿವಾರ ಮತ್ತು ರವಿವಾರ ನಡೆಯುತ್ತದೆ ಹಾಗೂ ಮಾರ್ಚ್‌ (ಫಾಲ್ಗುಣ ಮಾಸ) ನಲ್ಲಿ ಏಳು ದಿನಗಳವರೆಗೆ ಬ್ರಹ್ಮೋತ್ಸವ ನಡೆಯುತ್ತದೆ.

ಈ ಪ್ರಶಾಂತ ಮತ್ತು ಪವಿತ್ರ ಸ್ಥಳವು ನಿಜಕ್ಕೂ ಪ್ರೇಕ್ಷಣೀಯ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi