ಸಾಕ್ಷಾತ್ಕಾರ ಜ್ಞಾನ ಉಳ್ಳ ವ್ಯಕ್ತಿಯ ಕಾರ್ಯವು ತನ್ನದೇ ನಿಜವಾದ ಉದ್ದೇಶವನ್ನು ಹೊಂದುತ್ತದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1971ರ ಆಗಸ್ಟ್ 24ರಂದು ಲಂಡನ್ನಿನಲ್ಲಿ ಮಾಡಿದ ಉಪನ್ಯಾಸ.
ಯಃ ಸ್ವಾನುಭಾವಂ ಅಖಿಲ ಶ್ರುತಿ ಸಾರಂ ಏಕಂ
ಅಧ್ಯಾತ್ಮ ದೀಪಂ ಅತಿತಿತೀರ್‌ಷತಾಂ ತಮೋ ಅಂಧಮ್ ।
ಸಂಸಾರಿಣಾಂ ಕರುಣಯಾಹ ಪುರಾಣ ಗುಹ್ಯಂ
ತಂ ವ್ಯಾಸ ಸೂನುಂ ಉಪಯಾಮಿ ಗುರುಂ ಮುನೀನಾಮ್ ॥
“ಸಕಲ ಮುನಿಗಳಿಗೆ ಗುರುವಾದ ವ್ಯಾಸಪುತ್ರ ಶುಕಮುನಿಗಳಿಗೆ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸುವೆನು. ಅವರು, ಕತ್ತಲು ಕವಿದ ಪ್ರಪಂಚವನ್ನು ದಾಟಲು ಹೆಣಗುತ್ತಿರುವ ಲೌಕಿಕರ ಮೇಲೆ ಪರಮ ಕರುಣೆ ತೋರಿ, ಸಕಲ ವೇದಗಳ ಸಾರವೆನಿಸಿದ, ಅತ್ಯಂತ ರಹಸ್ಯವಾದ ಈ ಪುರಾಣವನ್ನು ಸ್ವಾನುಭವದಿಂದ ಬೋಧಿಸಿದರು.”
– ಶ್ರೀಮದ್ ಭಾಗವತ 1.2.3
ಇವು ಆಧ್ಯಾತ್ಮಿಕ ಗುರುವಿನ ಅರ್ಹತೆಗಳು : ಸ್ವಾನುಭಾವಂ, “ಖುದ್ದಾಗಿ ಅರ್ಥಮಾಡಿಕೊಂಡಿರಬೇಕು” ಮತ್ತು ಶ್ರುತಿ, “ಕೇಳಿರಬೇಕು.”
ವೇದಗಳನ್ನು ಶ್ರುತಿ ಎನ್ನುವರು. ಏಕೆಂದರೆ ಪರಮ ಜ್ಞಾನವನ್ನು ಶ್ರವಣದಿಂದ ಕಲಿಯಬೇಕು, ಊಹೆಯಿಂದ ಅಲ್ಲ. ಇಲ್ಲಿ ಸೂತ ಮುನಿಗಳು ಶುಕದೇವ ಗೋಸ್ವಾಮಿಯವರಿಗೆ ಗೌರವ ಅರ್ಪಿಸುತ್ತಿದ್ದಾರೆ. ಏಕೆಂದರೆ ಶುಕದೇವ ಗೋಸ್ವಾಮಿಯವರು ಇಡೀ ವೈದಿಕ ಜ್ಞಾನವನ್ನು ಅಥವಾ ಶ್ರುತಿ ಸಾರವನ್ನು ಅರ್ಥಮಾಡಿಕೊಂಡಿದ್ದಾರೆ. ಜ್ಞಾನದ ಅಂತಿಮ ಗುರಿ ಏನು? ಜ್ಞಾನದ ಸಾರ? ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ, ವೇದೈಶ್ಚ ಸರ್ವೈರ್ ಅಹಂ ಏವ ವೇದ್ಯಃ ವೈದಿಕ ಜ್ಞಾನದ ನಿಜವಾದ ಉದ್ದೇಶ ಕೃಷ್ಣನಿಗಾಗಿ ಶೋಧಿಸುವುದಾಗಿದೆ.
ಶುಕದೇವ ಗೋಸ್ವಾಮಿಯವರು ವೈದಿಕ ಜ್ಞಾನವನ್ನು ಅರ್ಥಮಾಡಿಕೊಂಡರು. ಮತ್ತು ಅವರು ಕೃಷ್ಣನನ್ನು ಹುಡುಕುತ್ತಿದ್ದರು. ಮುಕ್ತ ಆತ್ಮರಾದರೂ ಅವರು ಕೃಷ್ಣನಿಗಾಗಿ ಶೋಧಿಸುತ್ತಿದ್ದರು.

ಮುಕ್ತರಾಗಬೇಕೆಂಬುವುದೇ ಅಂತಿಮ ಹಂತವಲ್ಲ. ವ್ಯಕ್ತಿಯು ಲೌಕಿಕ ದೇಹವಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳುವುದೇ ಮುಕ್ತಿ. ಆದರೆ ಅಷ್ಟು ಜ್ಞಾನ ಸಾಲದು. ಆ ಅರಿವಿನಂತೆ ನಡೆಯಲೂಬೇಕು. ಯಾರಾದರೂ ಜ್ವರದಿಂದ ಗುಣಮುಖರಾದರೆ ಅದು ಒಳ್ಳೆಯದು. ಆದರೆ ಅದನ್ನು ಗುಣಮುಖರಾಗುತ್ತಿರುವ ಅಥವಾ ಚಿಕಿತ್ಸೆ ಪಡೆಯುತ್ತಿರುವ ಹಂತ ಎಂದು ಕರೆಯುತ್ತಾರೆ. ನಾವು ಸರಿಯಾದ ಎಚ್ಚರಿಕೆ ವಹಿಸದಿದ್ದರೆ ಜ್ವರ ಮರುಕಳಿಸಬಹುದು. ಚೇತರಿಸಿಕೊಳ್ಳುತ್ತಿರುವುದು ಅಂಚಿನ ಹಂತ. ಅಲ್ಲಿಂದ ನಾವು ಆರೋಗ್ಯ ಸ್ಥಿತಿಗೋ ಅಥವಾ ಜ್ವರದ ಸ್ಥಿತಿಗೋ ಬರಬೇಕು. ಆದುದರಿಂದ ನಾವು ಮುಕ್ತರಾದರೂ ಕೂಡ, ವಿಮೋಚನೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿದ್ದರೆ ಆಗ ನಮ್ಮನ್ನು ಅಂಚಿನ ಹಂತದಲ್ಲಿದ್ದೇವೆ ಎಂದು ಪರಿಗಣಿಸುತ್ತಾರೆ. ಅಂಚಿನ ಹಂತ ಎಂದರೆ ನಾವು ಲೌಕಿಕ ಸ್ಥಿತಿಗೆ ಮತ್ತೆ ಕುಸಿಯಬಹುದು. ಆರುಹ್ಯ ಕೃಚ್ಛ್ರೇಣ ಪರಂ ಪದಂ ತತಃ ಪತಂತಿ ಅಧೋ ಅನಾದೃತ ಯುಷ್ಮದ್ ಅಂಘ್ರಯಃ. ಕೃಚ್ಛ್ರೇಣ ಎಂದರೆ “ಅತ್ಯಂತ ಕಷ್ಟದಿಂದ.” ತತ್ತ್ವಜ್ಞಾನಿಗಳು ಪರಮ ಸತ್ಯವನ್ನು ಚಿಂತನೆಯ ಮೂಲಕ ಅರ್ಥಮಾಡಿಕೊಳ್ಳಲು ತುಂಬ ಕಷ್ಟದಿಂದ ಪ್ರಯತ್ನಿಸುತ್ತಾರೆ. ಆದರೆ ಊಹೆ ಅಥವಾ ಚಿಂತನದಿಂದಲೇ ನೀವು ಆ ಗ್ರಹಿಕೆಯಲ್ಲಿ ಇರಲಾಗದು. ಅಂದರೆ ಸೈದ್ಧಾಂತಿಕ ಜ್ಞಾನ ಹೊಂದಿ ನೀವು ಪಲಾಯನ ಮಾಡಲಾಗದು. ಜ್ಞಾನವನ್ನು ಆಚರಣೆಗೆ ತರಬೇಕು.
ನಮ್ಮ ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ ನಾವು ಅಭ್ಯರ್ಥಿಯನ್ನು ಆಚರಣೆಯಲ್ಲಿ ತೊಡಗಿಸುತ್ತೇವೆ. ಆಚರಣೆ ಇಲ್ಲದೆ ಬರೀ ಜ್ಞಾನ ಸಮರ್ಪಕವಲ್ಲ. ಸುಮ್ಮನೆ “ನಾನು ಈಗ ಮುಕ್ತಿ ಪಡೆದಿರುವೆ” ಎಂದು ಯೋಚಿಸುತ್ತ ಹೆಮ್ಮೆಯಿಂದ ಬೀಗುವುದು ಮುಕ್ತಿಯಲ್ಲ.
ಭಾಗವತದ ಬೇರೊಂದು ಕಡೆ ಆ ಅಂಶವನ್ನು ವಿವರಿಸಲಾಗಿದೆ. ಯೇ ಅನ್ಯೇ ಅರವಿಂದಾಕ್ಷ ವಿಮುಕ್ತ ಮಾನಿನಃ. ವಿಮುಕ್ತ ಮಾನಿನಃವು ತಾವು ಮುಕ್ತರಾಗಿದ್ದೇವೆ ಎಂದು ಯೋಚಿಸುವ ಮಾಯಾವಾದಿ, ನಿರಾಕಾರವಾದಿ ಸಂನ್ಯಾಸಿಗಳಂತಹವರನ್ನು ಉದ್ದೇಶಿಸಿ ಹೇಳಲಾಗಿದೆ. ಅವರು ಪರಸ್ಪರ `ನಾರಾಯಣ’ ಎಂದು ಕರೆದುಕೊಳ್ಳುತ್ತಾರೆ. ಅದು ಎಲ್ಲರೂ ಪ್ರಭು ನಾರಾಯಣನೇ ಆಗಿಬಿಟ್ಟಿದ್ದಾರೆಂದು ಸೂಚಿಸುತ್ತದೆ.
ಆಧುನಿಕ ಯುಗದಲ್ಲಿ ಪ್ರಭುವಿನ ಅವತಾರ ಹೆಚ್ಚಿದೆ ಎಂದರೆ ಮಾಯಾವಾದ ತತ್ತ್ವವು ಹರಡಿದೆ ಎಂದು ಅರ್ಥ. ಏಕೆಂದರೆ, ಮಾಯಾವಾದಿ ತತ್ತ್ವದಲ್ಲಿ ಪ್ರತಿಯೊಬ್ಬರೂ ತಾವೇ ಪ್ರಭು ನಾರಾಯಣನೆಂದು ಭಾವಿಸಿಕೊಳ್ಳುತ್ತಾರೆ. “ನಾನು ನಾರಾಯಣ ಆಗಿಬಿಟ್ಟೆ” ಎಂದು ಯೋಚಿಸುತ್ತಾರೆ. ಇಲ್ಲ. ನೀವು ನಾರಾಯಣನಾಗುವುದು ಸಾಧ್ಯವಿಲ್ಲ. ನೀವು ನಾರಾಯಣನ ದಾಸ, ನಾರಾಯಣನ ಸೇವಕನಾಗಬಹುದು. ಅದು ನಿಮ್ಮ ಆರೋಗ್ಯಕರ ಸ್ಥಿತಿ.
ವಿಮೋಚನೆ ಅನಂತರ ಚಟುವಟಿಕೆ
ಅಗತ್ಯವಾದ ಸಾಕಷ್ಟು ಜ್ಞಾನ ಎಂದು ಅರ್ಥ. ಮುಕ್ತಿ ಅನಂತರ ಚಟುವಟಿಕೆ ಇರುತ್ತದೆ. ಮಾಯಾವಾದಿಗಳಿಗೆ ಅದು ಗೊತ್ತಿಲ್ಲ. ಮುಕ್ತಿ ಅನಂತರ ಕ್ರಿಯೆ ಇಲ್ಲವೆಂದು ಅವರು ಭಾವಿಸುತ್ತಾರೆ. ನೀರಿನ ಕೊಡ ತುಂಬಿದಾಗ ಅದು ಶಬ್ದ ಮಾಡುವುದಿಲ್ಲ ಎಂಬ ಉದಾಹರಣೆಯನ್ನು ಅವರಲ್ಲಿ ಕೆಲವರು ನೀಡುತ್ತಾರೆ. ಆದರೆ ನಮ್ಮ ತತ್ತ್ವ ಏನೆಂದರೆ, ಮುಕ್ತಿಯಾದಾಗ, ವ್ಯಕ್ತಿಯ ವಾಸ್ತವ ಬದುಕು ಆರಂಭವಾಗುತ್ತದೆ.
ಯಾವುದು ಆ ವಾಸ್ತವ ಬದುಕು? ಭಗವಂತನ ಅಲೌಕಿಕ ಭಕ್ತಿಸೇವೆಯಲ್ಲಿ ನಿರತವಾಗುವುದು. ಆದುದರಿಂದ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ,
ಬ್ರಹ್ಮ ಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಂ ॥
“ಹೀಗೆ ಆಧ್ಯಾತ್ಮಿಕ ನೆಲೆಯಲ್ಲಿರುವವನು ಕೂಡಲೆ ಪರಮ ಬ್ರಹ್ಮನ್‌ನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಮತ್ತು ಸಂಪೂರ್ಣವಾಗಿ ಪ್ರಸನ್ನನಾಗುತ್ತಾನೆ. ಅವನು ಎಂದೂ ಶೋಕಿಸುವುದಿಲ್ಲ ಅಥವಾ ಏನನ್ನೂ ಬಯಸುವುದಿಲ್ಲ. ಅವನು ಎಲ್ಲ ಜೀವಿಗಳನ್ನೂ ಒಂದೇ ಸಮನಾಗಿ ಕಾಣುತ್ತಾನೆ. ಇಂತಹ ಸ್ಥಿತಿಯಲ್ಲಿ ಅವನು ನನ್ನ ಪರಿಶುದ್ಧ ಭಕ್ತಿಸೇವೆಯನ್ನು ಪಡೆಯುತ್ತಾನೆ.”
ವ್ಯಕ್ತಿಯು ತಾನು ಹೇಗೆ ಬ್ರಹ್ಮನ್ ಎಂಬುವುದನ್ನು ಅರಿಯಬೇಕು, ಅರ್ಥೈಸಿಕೊಳ್ಳಬೇಕು. ಬ್ರಹ್ಮನ್ ಎಂದರೆ ಪರಮ ಸತ್ಯ. ಪರಮ ಬ್ರಹ್ಮನ್, ಕೃಷ್ಣನ ಭಾಗವಾಗಿರುವ ನಾವು, ಜೀವಿಗಳು ಖಂಡಿತವಾಗಿಯೂ ಬ್ರಹ್ಮನ್, ಪರಮ. ಅದರಲ್ಲಿ ಸಂದೇಹವೇ ಇಲ್ಲ. ಆದರೆ ವ್ಯಕ್ತಿಯು ಬ್ರಹ್ಮನ್ ಸಾಕ್ಷಾತ್ಕಾರದಲ್ಲಿನ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿದರೆ, ಆಗ ಅವನು ಪತನಗೊಳ್ಳುತ್ತಾನೆ. ಬ್ರಹ್ಮನ್ ಚಟುವಟಿಕೆಯು ಭಕ್ತಿಸೇವೆಯದು. “ಈ ಕೃಷ್ಣ ಪ್ರಜ್ಞೆ ಅನುಯಾಯಿಗಳು ಕೂಡ ಉದ್ಯೋಗಿಗಳು. ಅವರೂ ಆಹಾರ ಸೇವಿಸುತ್ತಾರೆ, ಮಲಗುತ್ತಾರೆ, ಹಣ ಸಂಪಾದಿಸುತ್ತಾರೆ. ನಾವು ಈ ರೀತಿ ಹಣ ಸಂಪಾದಿಸುತ್ತೇವೆ, ಅವರು ಇನ್ನೊಂದು ರೀತಿಯಲ್ಲಿ ಸಂಪಾದಿಸುತ್ತಿದ್ದಾರೆ” ಎಂದು ಜನರು ಯೋಚಿಸಬಹುದು. ಅವರು ಕ್ರಿಯೆಯಲ್ಲಿ ಹೋಲಿಕೆ ಕಾಣಬಹುದು. ಮೂರ್ಖರಿಗೆ ಕರ್ಮ ಮತ್ತು ಭಕ್ತಿ ಒಂದೇ ರೀತಿ ಕಾಣುತ್ತದೆ. ಆದರೆ ಅವು ಒಂದೇ ಅಲ್ಲ. ಭಕ್ತಿಯಲ್ಲಿ ಎಲ್ಲವೂ ಕೃಷ್ಣನಿಗೆ ಸೇರಿದ್ದೆಂಬ ಅರಿವು ಇರುತ್ತದೆ. ಆದರೆ ಕರ್ಮ ವೇದಿಕೆಯಲ್ಲಿ ಅರಿವು, “ಎಲ್ಲವೂ ನನಗೆ ಸೇರಿದ್ದು. ಇದು ನನ್ನ ಮನೆ, ನನ್ನ ಹಣ, ನನ್ನ ಮಗು, ನನ್ನ ದೇಶ, ನನ್ನ ಸಮಾಜ, ನನ್ನ ಆಸ್ತಿ.” “ನಾನು” ಮತ್ತು “ನನ್ನದು”.
“ನಾನು ಅವಲೋಕಿಸುವುದಕ್ಕೆಲ್ಲ ನಾನೇ ಒಡೆಯ. ಮತ್ತು ಎಲ್ಲದಕ್ಕೂ ನಾನೇ ಮಾಲೀಕ.” ಭಕ್ತಿಯಲ್ಲಿ ಇಂತಹ ತಪ್ಪು ಗ್ರಹಿಕೆ ಇಲ್ಲ. ಭಕ್ತಿ ಪಂಥದಲ್ಲಿ ಎಲ್ಲವೂ ಕೃಷ್ಣನಿಗೆ ಸೇರಿದ್ದು. ನಾವು ನಮ್ಮದೆಂದು ಏನನ್ನೂ ತೆಗೆದುಕೊಳ್ಳುವುದಿಲ್ಲ. ಅದನ್ನು ವೈಷ್ಣವ ತತ್ತ್ವ ಎಂದು ಕರೆಯುತ್ತಾರೆ.
ದೇವರನ್ನು ನೋಡುವುದು
ಇಲ್ಲಿ ಯಃ ಸ್ವಾನುಭಾವಂ ಎಂದು ಹೇಳಲಾಗಿದೆ. ಸ್ವಾನುಭಾವಂ ಎಂದರೆ “ವೈಯಕ್ತಿಕವಾಗಿ ಮನವರಿಕೆಯಾಗಿದೆ” ಎಂದು ಅರ್ಥ. ಪ್ರಸ್ತುತ ಸ್ಥಿತಿಯಲ್ಲಿ ಭಗವಂತನನ್ನು ಅನುಭಾವ, ಮೆಚ್ಚುಗೆ, ಕೃತಜ್ಞತೆಯಿಂದ ಅರಿತುಕೊಳ್ಳಬಹುದು. ಈಗ ನಾವು ದೇವರನ್ನು ನೋಡಲಾಗುವುದಿಲ್ಲ. ಆದರೆ ದೇವರನ್ನು ನೋಡುವುದು ಮತ್ತು ಮೆಚ್ಚುವುದು ಅಥವಾ ಭಗವಂತನ ಗುಣವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಪ್ರಭುವು ಪರಮ. ಆದುದರಿಂದ ಪ್ರತಿಯೊಂದು ಕ್ರಿಯೆಯಲ್ಲಿಯೂ ಭಗವಂತನ ಸಾನ್ನಿಧ್ಯವನ್ನು, ಅಸ್ತಿತ್ವವನ್ನು ಭಾವಿಸುವುದೇ ನಮ್ಮ ಈಗಿನ ವ್ಯವಹಾರ.
ಭಗವಂತನ ಉಪಸ್ಥಿತಿ – ಅದೇ ಬೇಕಾಗಿರುವುದು. ಕೃಷ್ಣ ಪ್ರಜ್ಞೆಯಲ್ಲಿ ನೀವು ಮುಂದುವರಿದರೆ ಎಲ್ಲದರಲ್ಲಿಯೂ ಭಗವಂತನ ಉಪಸ್ಥಿತಿಯನ್ನು ನೋಡಿದರೆ, ಆಗ ಎಂದೋ ಒಂದು ದಿನ ನಿಮಗೆ ಕೃಷ್ಣನನ್ನು ಮುಖಾಮುಖಿ ನೋಡುವುದು ಸಾಧ್ಯ.

ಈಗ ನಾವು ಕೃಷ್ಣನ ವಿಗ್ರಹವನ್ನು ನೋಡುತ್ತಿದ್ದೇವೆ. ಅಂದರೆ ನಾವು ಕೃಷ್ಣನನ್ನು ನೋಡುತ್ತಿದ್ದೇವೆ. ಇಲ್ಲಿ ಕೃಷ್ಣನಿದ್ದಾನೆ. ಆದರೆ ನಾವು ಬದ್ಧಾತ್ಮಗಳಾದ್ದರಿಂದ, ಕೆಲವು ಸಂದರ್ಭದಲ್ಲಿ ನಾವು ಯೋಚಿಸಬಹುದು, “ಇದು ವಾಸ್ತವವಾಗಿ ಕೃಷ್ಣನಲ್ಲ. ಇದು ಕೃಷ್ಣನ ವಿಗ್ರಹ ಮಾತ್ರ.” ಆದರೆ ಅದು ನಿಜವಲ್ಲ. ಕೃಷ್ಣ ಒಂದೇ ಎನ್ನುವುದು ನಿಜ. ಕೃಷ್ಣನು ಪರಮ, ಅದ್ವಯ ಜ್ಞಾನ. ಅವನು ಎಲ್ಲದಕ್ಕೂ ಅಭಿನ್ನ. ಏಕೆಂದರೆ ಎಲ್ಲವೂ ಅವನ ಶಕ್ತಿಯ ರೂಪ.
ಶಕ್ತಿಯು ಶಕ್ತಿಯುತಕ್ಕಿಂತ ಭಿನ್ನವಲ್ಲ. ಶಕ್ತಿ ಶಕ್ತಿಮತಯೋರ್ ಅಭೇದಂ. ಸೂರ್ಯನ ಶಾಖ ಮತ್ತು ಬೆಳಕು ಸೂರ್ಯನಿಗಿಂತ ಭಿನ್ನವಾಗಿ ಕಾಣುತ್ತದೆ. ಆದರೆ, ವಾಸ್ತವವಾಗಿ ಅವು ಭಿನ್ನವಲ್ಲ. ಏಕೆಂದರೆ, ಅವು ಸೂರ್ಯನೊಂದಿಗೆ ಏಕಕಾಲದಲ್ಲಿ ಇರುತ್ತವೆ. ಎಲ್ಲೆಲ್ಲಿ ಸೂರ್ಯನಿರುವನೋ ಅಲ್ಲೆಲ್ಲ ಶಾಖ ಮತ್ತು ಬೆಳಕು ಇರುತ್ತವೆ. ಅಥವಾ ಎಲ್ಲೆಲ್ಲಿ ಶಾಖ ಮತ್ತು ಬೆಳಕು ಇರುತ್ತದೋ ಅಲ್ಲಿ ಸೂರ್ಯನಿರುತ್ತಾನೆ. ಬೆಳಗ್ಗೆ ಕತ್ತಲೆ ಇಲ್ಲದಿರುವುದನ್ನು ಕಂಡಾಗ ಸೂರ್ಯೋದಯವಾಗಿದೆ ಎಂದು ನಿಮಗೆ ತಿಳಿಯುತ್ತದೆ.
ಸ್ವಾನುಭಾವ ಎಂದರೆ ನಿಮ್ಮ ಹೃದಯದಲ್ಲಿ ಕತ್ತಲೆ ಇಲ್ಲವೆಂದು ಅರ್ಥ. ನೀವು ನಿಮ್ಮ ಹೃದಯದಲ್ಲಿ ಸಂಪೂರ್ಣವಾಗಿ ಕೃಷ್ಣನನ್ನು ಅರ್ಥಮಾಡಿಕೊಂಡಾಗ, ನೀವು ನಿಜವಾದ ಮುಕ್ತಿ ಪಡೆದಂತೆ.
ಜ್ಞಾನ ಪ್ರಸರಣ
ಇಡೀ ವೈದಿಕ ಸಾಹಿತ್ಯವನ್ನು ಅರಗಿಸಿಕೊಂಡ ಮೇಲೆ ಶುಕದೇವ ಗೋಸ್ವಾಮಿಯವರು ಅದನ್ನು ಹಂಚಿದರು. ಇದು ಜ್ಞಾನಿಗಳ ಮತ್ತೊಂದು ಲಕ್ಷಣ. ಅದನ್ನು ಬೋಧಿಸಲು ನೀವು ಸ್ವಯಂ ಪ್ರೇರಿತರಾಗುತ್ತೀರಿ. ಶ್ರವಣಂ ಕೀರ್ತನಂ. ಶ್ರವಣಂ ಎಂದರೆ ಕೇಳುವುದು, ಜ್ಞಾನವನ್ನು ಪಡೆಯುವುದು. ಮತ್ತು ಕೀರ್ತನಂ ಎಂದರೆ ಹಂಚುವುದು, ಜ್ಞಾನ ಪ್ರಸಾರ ಎಂದು ಅರ್ಥ.
ಯಃ ಸ್ವಾನುಭಾವಂ ಅಖಿಲ ಶ್ರುತಿ ಸಾರಂ ಏಕಂ ಅಧ್ಯಾತ್ಮ ದೀಪಂ. ಶ್ರೀ ಕೃಷ್ಣ ಅಥವಾ ಭಗವಂತನನ್ನು ನೋಡಲು ಶ್ರೀಮದ್ ಭಾಗವತವು ಕತ್ತಲೆಯಲ್ಲಿನ ಒಂದು ದೀಪದಂತೆ. ಅದು ಯಾರಿಗಾಗಿ? ಭಾಗವತವು ಅಸಂಬದ್ಧ ಸಾಹಿತ್ಯವನ್ನು ಓದುವವರಿಗಲ್ಲ. ಅವರಿಗೆ ಸಮಯ ಹಾಳು ಮಾಡುವುದು ಬೇಕಾಗಿದೆ. ಅವರು ಯಾವುದರಲ್ಲಿಯೂ ತೊಡಗಿರುವುದಿಲ್ಲ. ಅವರು ಕೆಲವು ಕಥೆ ಪುಸ್ತಕಗಳನ್ನು ಖರೀದಿಸುತ್ತಾರೆ ಮತ್ತು ಓದುತ್ತಾರೆ. ಆದರೆ ಈ ಪುಸ್ತಕ – ಶ್ರೀಮದ್ ಭಾಗವತವು ಆ ಪುಸ್ತಕಗಳಿಗಿಂತ ಭಿನ್ನ. ಈ ಅಜ್ಞಾನದ ಪ್ರಪಂಚದಿಂದ ಹೊರಬರಲು ಅಪೇಕ್ಷೆ ಉಳ್ಳವರಿಗೆ ಭಾಗವತ.
ಗೃಹಂ ಅಂಧ ಕೂಪಂ. ಅಂಧ ಎಂದರೆ `ಕುರುಡು’ ಅಥವಾ `ಕತ್ತಲೆ’. ನಮ್ಮ ಲೌಕಿಕ ಬದುಕನ್ನು ಗೃಹಂ ಅಂಧ ಕೂಪಂ ಎಂದು ವರ್ಣಿಸಲಾಗಿದೆ. ಕೌಟುಂಬಿಕ ಜೀವನವು ಕತ್ತಲೆ ಬಾವಿಯಂತೆ. ನಾವು ಈಗಾಗಲೇ ಅಂಧಕಾರದಲ್ಲಿದ್ದೇವೆ, ಮತ್ತು ಕತ್ತಲೆ ಬಾವಿಯೊಳಗೆ ಬೀಳುವುದು ಮತ್ತೊಂದು ಅಜ್ಞಾನ. ಕತ್ತಲೆ ಬಾವಿಯೊಳಗೆ ಬಿದ್ದರೆ, ಹೊರಬರುವುದು ತುಂಬ ಕಷ್ಟ. ಏಕೆಂದರೆ ಎಷ್ಟೇ ಕೂಗಿದರೂ ಜನರಿಗೆ ಕೇಳಿಸದಿರಬಹುದು.
ನಾವು ವಿಶ್ವದಲ್ಲಿ, ಅಂಧಕಾರದಲ್ಲಿ ಇದ್ದೇವೆ. ವಿಶ್ವವು ಅಂಧಕಾರದಲ್ಲಿದೆ, ಏಕೆಂದರೆ ಅದು ಮುಚ್ಚಲ್ಪಟ್ಟಿದೆ. ಈ ಮುಚ್ಚುವಿಕೆಯು ತೆಂಗಿನ ಚಿಪ್ಪಿನಂತೆ. ಈ ಚಿಪ್ಪಿನೊಳಗೆ ಕತ್ತಲು, ಹೊರಗೆ ಬೆಳಕು. ಅದೇ ರೀತಿ ವಿಶ್ವವೂ ತೆಂಗಿನ ಚಿಪ್ಪಿನಂತೆ ಮತ್ತು ನಾವು ಅದರೊಳಗೆ ಇದ್ದೇವೆ.
ಹೇಗೆ ತೆಂಗಿನ ಕಾಯಿಯಲ್ಲಿ ಅರ್ಧ ಭಾಗ ನೀರಿದೆಯೋ ಅದೇ ರೀತಿ ವಿಶ್ವದ ಅರ್ಧ ಭಾಗ ಜಲಮಯ. ಈ ನೀರಿನ ಮೇಲೆ ಶ್ರೀ ಗರ್ಭೋದಕಶಾಯಿ ವಿಷ್ಣು ಪವಡಿಸಿದ್ದಾನೆ. ಅವನ ನಾಭಿಯಿಂದ ಕಮಲದ ಕಾಂಡ ಚಿಗುರಿದೆ. ತೆಂಗಿನ ಕಾಯಿಯೊಳಗೆ ನೀರಿದೆ, ಯಾರೋ ಅದರ ಮೇಲೆ ಮಲಗಿದ್ದಾರೆ ಮತ್ತು ಅವನ ನಾಭಿಯಿಂದ ಕಾಂಡಹೊರಬರುತ್ತಿದೆ ಎಂಬುವುದನ್ನು ಊಹಿಸಿಕೊಳ್ಳಿ. ವಿಶ್ವ ಇರುವುದು ಹಾಗೆಯೇ.
ಜಗತ್ತಿನ ಹೊರಗೆ ಬೆಳಕಿದೆ. ಇಲ್ಲಿ, ವಿಶ್ವದೊಳಗೆ, ಅದು ಮುಚ್ಚಲ್ಪಟ್ಟಿರುವುದರಿಂದ, ಬೆಳಕಿನ ಅಗತ್ಯವಿದೆ. ಸೂರ್ಯನ ಬೆಳಕು ಅಗತ್ಯವಾಗಿದೆ. ಚಂದ್ರನ ಬೆಳಕು ಅಗತ್ಯ. ವಿದ್ಯುತ್ ಬೇಕು. ಆದರೆ ಆಧ್ಯಾತ್ಮಿಕ ಲೋಕದಲ್ಲಿ ಬೆಳಕಿನ ಅಗತ್ಯವಿಲ್ಲ, ಅಲ್ಲಿ ಎಲ್ಲವೂ ಸ್ವಯಂ ಪ್ರಭೆ ಉಳ್ಳದ್ದು.
ತಮಸೋಮಾ ಜ್ಯೋತಿರ್ಗಮಯ : “ಕತ್ತಲಿನಲ್ಲಿ ಇರಬೇಡ. ಬೆಳಕಿಗೆ ಬಾ.” ಯಾರು ಅಂಧಕಾರದಿಂದ ಆಚೆ ಬಂದು ಬೆಳಕಿನೆಡೆಗೆ ಹೋಗಲು ತೀವ್ರವಾಗಿ ಅಪೇಕ್ಷಿಸುವರೋ ಅವರಿಗೆ ಶ್ರೀಮದ್ ಭಾಗವತವು ದೀಪ.

ಸಂಸಾರಿಣಾಂ ಕರುಣಯಾ. ಸಂಸಾರಿಣಾಂ, ಲೌಕಿಕ ಜನರನ್ನು ಕಂಡರೆ ಸಂತ ಪುರುಷರಿಗೆ ಅಪಾರ ಕರುಣೆ. ಸಂಸಾರ್ ಎಂದರೆ ಜನರು ಈ ಅಂಧಕಾರದೊಳಗೆ ಬದುಕಿನ ವಿವಿಧ ರೂಪಗಳಲ್ಲಿ ಸದಾ ಅಲೆದಾಡುತ್ತಿರುವುದು ಎಂದು ಅರ್ಥ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ಬ್ರಹ್ಮಾಂಡ ಭ್ರಮೈತೇ : ನಾವು ವಿಶ್ವಾದ್ಯಂತ ಅಲೆದಾಡುತ್ತಿದ್ದೇವೆ. ಆಧುನಿಕ ಶೈಕ್ಷಣಿಕ ಪದ್ಧತಿಗೆ ಈ ವಿಷಯದಲ್ಲಿ ಜ್ಞಾನವೇ ಇಲ್ಲ. ಆಧುನಿಕ ಶಿಕ್ಷಣ ಎನಿಸಿಕೊಳ್ಳುವುದು ಬೋಧಿಸುತ್ತದೆ, “ನಮ್ಮ ಈ ಒಂದು ಬದುಕು. ಇಂದ್ರಿಯ ತೃಪ್ತಿಗಾಗಿ ಅದನ್ನು ವ್ಯರ್ಥ ಮಾಡಿಕೊಳ್ಳಿ. ಏಕೆಂದರೆ, ಸಾವಿನ ಅನಂತರ ಎಲ್ಲವೂ ಶೂನ್ಯ. ಈಗ ನಿಮಗೆ ನಿಮ್ಮ ದೇಹವಿದೆ, ಇಂದ್ರಿಯ ಸುಖ ಅನುಭವಿಸಿ.”
ಅದು ಲೌಕಿಕ ಜೀವನ ವಿಧಾನ. ಸಾವಿನ ಅನಂತರ ಬದುಕಿದೆ ಎಂಬುದರ ಅರಿವು ಜನರಿಗಿಲ್ಲ. ಆದರೆ ನಾವು ಸಿದ್ಧತೆ ನಡೆಸಬೇಕು. ಮುಂದಿನ ಜನ್ಮದಲ್ಲಿ ನಮಗೆ ಯಾವ ರೀತಿಯ ದೇಹ ಬೇಕೆಂಬುದರ ಬಗೆಗೆ ನಮಗೆ ಅರಿವಿರಬೇಕು. ಆದರೆ ಈ ವಿಷಯಗಳನ್ನು ಗ್ರಹಿಸಿಕೊಳ್ಳುವುದರ ಬದಲು, ಜನರು ಲೌಕಿಕ ಸ್ವಭಾವದ ಅಲೆಗಳಿಂದ ಸಾಗುತ್ತಿದ್ದಾರೆ.
ಆದುದರಿಂದ ಭಕ್ತಿವಿನೋದ ಠಾಕುರ ಅವರು ಹಾಡುತ್ತಾರೆ,
(ಮಿಚೇ) ಮಾಯಾರ್ ಬೊಶೇ, ಜಾಚ್ಚೋ ಭೇಶೇ, ಕಾಚ್ಚೋ ಹಾಬುಡುಬು, ಭಾಯ್ ।
(ಜೀವ) ಕೃಷ್ಣ ದಾಸ, ಎ ಬಿಶ್ವಾಸ್, ಕೋರ್ಲೇ ತೋ ಆರ್ ದುಃಖೋ ನಾಯ್ ॥
ಪ್ರತಿಯೊಬ್ಬರೂ ನೋವು ಅನುಭವಿಸುತ್ತಿದ್ದಾರೆ. ಭ್ರಮಾ ಶಕ್ತಿ ಮಾಯಾದ ಪ್ರಭಾವದಿಂದ ಲೌಕಿಕ ಸ್ವಭಾವದ ಮೂರು ಗುಣಗಳ ಅಲೆಗಳು ಎಲ್ಲರನ್ನೂ ಕೊಂಡೊಯ್ಯುತ್ತವೆ ಮತ್ತು ಪ್ರತಿಯೊಬ್ಬರೂ ನೋವು ಅನುಭವಿಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ನಾವು ಮುಳುಗುತ್ತೇವೆ, ಕೆಲವು ಸಂದರ್ಭದಲ್ಲಿ ಮೇಲೇಳುತ್ತೇವೆ. ಕೆಲವು ವೇಳೆ ನೆಮ್ಮದಿ, ಕೆಲವು ವೇಳೆ ಹತಾಶೆ. ಈ ಆತಂಕದಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಕೃಷ್ಣನಲ್ಲಿ ಆಶ್ರಯ ಪಡೆಯುವುದು. ಕೃಷ್ಣನು ಹೇಳುತ್ತಾನೆ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ, “ನೀನು ನೋವು ಅನುಭವಿಸುತ್ತಿರುವೆ. ಸುಮ್ಮನೆ (ಎಲ್ಲ ಧರ್ಮಗಳನ್ನು ಪರಿತ್ಯಜಿಸಿ) ನನಗೆ ಶರಣಾಗು.”
ಶ್ರೀಮದ್ ಭಾಗವತ ಕೂಡ ಅದನ್ನೇ ಹೇಳುತ್ತದೆ : ಕೃಷ್ಣನಿಗೆ ಶರಣಾಗು. ಶ್ರೀಮದ್ ಭಾವತವು ಆರಂಭಿಸುತ್ತದೆ, ಸತ್ಯಂ ಪರಂ ಧೀಮಹಿಃ, “ನಾನು ಪರಮ ಪ್ರಭುವಿಗೆ ನನ್ನ ಪ್ರಣಾಮ ಸಲ್ಲಿಸುವೆ.” ಓಂ ನಮೋ ಭಗವತೇ ವಾಸುದೇವಾಯ, “ಶ್ರೀ ವಾಸುದೇವನಿಗೆ ನನ್ನ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸುವೆ.” ವಾಸುದೇವ ಎಂದರೆ ಶ್ರೀ ಕೃಷ್ಣ.
ಗೌಪ್ಯ ಪುರಾಣ
ಸಂಸಾರಿಣಾಂ ಕರುಣಯಾಹ ಪುರಾಣ ಗುಹ್ಯಂ. ಶ್ರೀಮದ್ ಭಾಗವತವನ್ನು `ಭಾಗವತ ಪುರಾಣ’ ಎಂದೂ ಕರೆಯುತ್ತಾರೆ. ಪುರಾಣಗಳೆಲ್ಲ ಕಥೆಗಳು ಎಂದು ಮಾಯಾವಾದಿಗಳು ಹೇಳುತ್ತಾರೆ. ಇಲ್ಲ, ಅವು ಕಥೆಗಳಲ್ಲ. ಪುರಾಣ ಎಂದರೆ “ತುಂಬಲು, ಪೂರಕವಾಗಲು, ಸಂಪೂರ್ಣವಾಗಲು” ಎಂದು ಅರ್ಥ. ಪುರಾಣವು ವೈದಿಕ ಸಾಹಿತ್ಯದಿಂದ ಹೊರಗಿನದೇನೂ ಅಲ್ಲ. ರಾಮಾಯಣ, ಮಹಾಭಾರತ, ಪುರಾಣ ಇವೆಲ್ಲವೂ ವೈದಿಕ ಸಾಹಿತ್ಯಕ್ಕೆ ಸೇರುವವು. ಶ್ರೀಮದ್ ಭಾಗವತವನ್ನು ಮಹಾ ಪುರಾಣ ಎಂದು ಕರೆಯುತ್ತಾರೆ. ಏಕೆ? ಪುರಾಣ ಗುಹ್ಯಂ, ಏಕೆಂದರೆ ಅದು ತುಂಬ ಗೌಪ್ಯವಾದುದು.
ಮೂರು ವಿಧವಾದ ಪುರಾಣಗಳಿವೆ : ಸಾತ್ತ್ವಿಕ ಪುರಾಣ, ಸತ್ತ್ವ ಗುಣ ಉಳ್ಳವರಿಗಾಗಿ: ರಾಜಸಿಕ ಪುರಾಣ, ರಾಜಸ ಗುಣ ಉಳ್ಳವರಿಗೆ: ಮತ್ತು ತಾಮಸಿಕ ಪುರಾಣ, ತಾಮಸ ಗುಣ ಉಳ್ಳವರಿಗೆ. ಪ್ರತಿಯೊಂದರ ಗುರಿಯೂ ಓದುಗನನ್ನು ಅವನ ಗುಣಕ್ಕೆ ತಕ್ಕಂತೆ ಮುಕ್ತಿಯ ವೇದಿಕೆಗೆ ಕರೆತರುವುದಾಗಿದೆ.
ತಾಮಸಿಕ ಪುರಾಣದಲ್ಲಿ ಕಾಳಿ ದೇವಿಯನ್ನು ಪೂಜಿಸಲು ಶಿಫಾರಸು ಮಾಡಲಾಗಿದೆ. ರಾಜಸಿಕ ಪುರಾಣದಲ್ಲಿ ಸ್ವರ್ಗ ಲೋಕದಲ್ಲಿನ ಇಂದ್ರ, ಚಂದ್ರರಂತಹ ದೇವತೆಗಳನ್ನು ಪೂಜಿಸಲು ಶಿಫಾರಸು ಮಾಡಲಾಗಿದೆ. ಆದರೆ ಸಾತ್ತ್ವಿಕ ಪುರಾಣದಲ್ಲಿ ಶ್ರೀ ವಿಷ್ಣುವನ್ನು ಮಾತ್ರ ಆರಾಧಿಸಲು ಶಿಫಾರಸು ಮಾಡಲಾಗಿದೆ.
ಶ್ರೀಮದ್ ಭಾಗವತವನ್ನು ಪುರಾಣ ಗುಹ್ಯಂ ಎಂದು ಕರೆಯುತ್ತಾರೆ. ಏಕೆಂದರೆ ಈ ಪುರಾಣದಲ್ಲಿ ಯಾವುದೇ ದೇವತೆಯನ್ನು ಪೂಜಿಸುವ ಶಿಫಾರಸನ್ನು ನೀವು ಕಾಣುವುದಿಲ್ಲ. ಸುಮ್ಮನೆ ಸತ್ಯಂ ಪರಂ ಧೀಮಹಿಃ – ಅಂತಿಮ ಪರಮ ಸತ್ಯ, ಕೃಷ್ಣನು ಮಾತ್ರ. ಓಂ ನಮೋ ಭಗವತೇ ವಾಸುದೇವಾಯ.
ಸಾಂಸಾರಿಕ ವ್ಯಾಮೋಹದಿಂದ ಕಂಗೆಟ್ಟು ಲೌಕಿಕ ನೋವು ಅನುಭವಿಸುತ್ತಿದ್ದವರ ಮೇಲೆ ಅಪಾರ ಕರುಣೆಯನ್ನು ತೋರುವುದಕ್ಕಾಗಿ ಶ್ರೀ ಶುಕಮುನಿಗಳು ಮೊದಲ ಬಾರಿಗೆ ಈ ರಹಸ್ಯ ಜ್ಞಾನವನ್ನು ನಿರೂಪಿಸಿದರು. ತಂ ವ್ಯಾಸ ಸೂನುಂ ಉಪಯಾಮಿ ಗುರುಂ ಮುನಿನಾಂ. ಸೂತ ಗೋಸ್ವಾಮಿ ಅವರು ಹೇಳುತ್ತಾರೆ, ಗುರುಂ ಮುನೀನಾಂ, “ಶುಕದೇವ ಗೋಸ್ವಾಮಿಯವರು ನನಗೆ ಮಾತ್ರ ಗುರುವಲ್ಲ, ಶ್ರೇಷ್ಠ ಋಷಿಗಳು ಮತ್ತು ಸಂತ ಪುರುಷರ ಗುರುಗಳೂ ಕೂಡ.”
ವೇದಗಳನ್ನು ರಚಿಸಿದ ಶ್ರೀ ವ್ಯಾಸದೇವರೂ ಕೂಡ ತಮ್ಮ ಪುತ್ರ ಶುಕದೇವ ಮುನಿಗಳು ತಮಗಿಂತ ಶ್ರೇಷ್ಠರೆಂದು ಪರಿಗಣಿಸಿದ್ದರು. ಮಹಾರಾಜ ಪರೀಕ್ಷಿತನ ಕಾಲದಲ್ಲಿ, ಅನೇಕ ಸಂತ ಪುರುಷರು ಉಪಸ್ಥಿತರಿದ್ದ ಸಭೆಗೆ ಶುಕ ಮುನಿಗಳು ಬಂದಾಗ ಅವರನ್ನು ಸ್ವಾಗತಿಸಲು ಎಲ್ಲ ಮುನಿಗಳು, ಸಂತರು ಎದ್ದು ನಿಂತರು. ಆಗ ವ್ಯಾಸದೇವರೂ ಎದ್ದು ನಿಂತರು. ಆದುದರಿಂದ ಶುಕದೇವರು ಗುರುಂ ಮುನೀನಾಂ, ಎಲ್ಲ ಸಂತರ ಆಧ್ಯಾತ್ಮಿಕ ಗುರು.
(ಶಿಷ್ಯನಿಗೆ) : ಭಾವಾರ್ಥ ಓದಿ.
ಶಿಷ್ಯ (ಓದುವನು) : “ಶ್ರೀ ಸೂತಮುನಿಗಳು ಈ ಸ್ತೋತ್ರದಲ್ಲಿ ಶ್ರೀಮದ್ಭಾಗವತಕ್ಕೆ ಸಂಕ್ಷಿಪ್ತ ಅವತರಣಿಕೆಯನ್ನು ಒದಗಿಸಿದ್ದಾರೆ. ಶ್ರೀಮದ್ಭಾಗವತವು ವೇದಾಂತ ಸೂತ್ರಗಳಿಗೆ ಸರಳವೂ ನೇರವೂ ಆದ ಪೂರಕವ್ಯಾಖ್ಯಾನ. ವೇದಾಂತ ಸೂತ್ರ ಅಥವಾ ಬ್ರಹ್ಮಸೂತ್ರವನ್ನು ವ್ಯಾಸಮಹರ್ಷಿ ರಚಿಸಿದ್ದಾರೆ. ವೇದ ಜ್ಞಾನದ ಸಾರವನ್ನು ನಿರೂಪಿಸುವುದೇ ಅದರ ಉದ್ದೇಶ.”
ಪ್ರಭುಪಾದ : ಹೌದು. ಮೊದಲು ಇದ್ದದ್ದು ಒಂದೇ ವೇದ, ಅಥರ್ವ ವೇದ. ಅನಂತರ ವ್ಯಾಸ ದೇವರು ಅದನ್ನು ಸಾಮ, ಯಜುರ್, ಅಥರ್ವ ಮತ್ತು ಋಗ್ ವೇದಗಳೆಂದು ನಾಲ್ಕು ವೇದಗಳಾಗಿ ವಿಭಾಗಿಸಿದರು. ಅನಂತರ ಅವರು ಪುರಾಣಗಳ ಮೂಲಕ ವೇದಗಳನ್ನು ವಿವರಿಸಿದರು.
ವೈದಿಕ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಜನರಿಗೆ ನೆರವಾಗುವ ಉದ್ದೇಶದಿಂದ ವ್ಯಾಸದೇವರು ಮಹಾಭಾರತವನ್ನು ರಚಿಸಿದರು. ಶ್ರೀಮದ್ ಭಾಗವತವು ಹೇಳುತ್ತದೆ,
ಸ್ತ್ರೀ, ಶೂದ್ರ, ದ್ವಿಜಬಂಧೂನಾಂ ತ್ರಯೀ ನ ಶ್ರುತಿ ಗೋಚರಾ ।
ಇತಿ ಭಾರತಂ ಆಖ್ಯಾನಂ ಕೃಪಯಾ ಮುನಿನಾ ಕೃತಂ ॥
“ಶ್ರೇಷ್ಠ ಮುನಿವರ್ಯರು (ವ್ಯಾಸದೇವ) ಮಹಿಳೆಯರು, ಕಾರ್ಮಿಕರು ಮತ್ತು ದ್ವಿಜಬಂಧುಗಳ ಮೇಲಿನ ಅಪಾರ ಕುರುಣೆಯಿಂದ ಐತಿಹಾಸಿಕ ಕಥನ, ಮಹಾಭಾರತವನ್ನು ರಚಿಸಿದರು.”
ವೇದಾಂತ ಸೂತ್ರವನ್ನು ರಚಿಸುವ ಮೂಲಕ ವ್ಯಾಸದೇವರು ವೈದಿಕ ಸಾಹಿತ್ಯವನ್ನು ಸಂಕ್ಷಿಪ್ತಗೊಳಿಸಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ತಮ್ಮ ಆಧ್ಯಾತ್ಮಿಕ ಗುರು ನಾರದರ ನಿರ್ದೇಶನದಲ್ಲಿ ಅವರು ವೇದಾಂತ ಸೂತ್ರದ ಮೇಲೆ ವ್ಯಾಖ್ಯಾನ ರಚಿಸಿದರು : ಅದೇ ಶ್ರೀಮದ್ ಭಾಗವತ.
ಮುಂದುವರಿಸಿ.
ಶಿಷ್ಯ : “ಶ್ರೀಮದ್ಭಾಗವತವು ಈ ಸಾರದ ಮೇಲಿನ ಸರಳ ವ್ಯಾಖ್ಯೆ. ಶುಕಮುನಿಗಳು ವೇದಾಂತ ಸೂತ್ರಗಳ ಆಂತರ್ಯವನ್ನು ಪೂರ್ಣವಾಗಿ ತಿಳಿದವರು. ಇದರ ಪರಿಣಾಮವಾಗಿ ಅವರು ಸ್ವತಃ ಈ ಉಪಾಖ್ಯಾನ ರೂಪದ ಶ್ರೀಮದ್ಭಾಗವತವನ್ನೂ ಅರಿತವರು. ಸಾಂಸಾರಿಕ ವ್ಯಾಮೋಹದಿಂದ ಕಂಗೆಟ್ಟು ಅಜ್ಞಾನವನ್ನು ದಾಟಿಹೋಗಲು ಬಯಸಿದವರ ಮೇಲೆ ಅಪಾರ ಕರುಣೆಯನ್ನು ತೋರುವುದಕ್ಕಾಗಿ ಶುಕಮುನಿಗಳು ಮೊದಲ ಬಾರಿಗೆ ಈ ರಹಸ್ಯ ಜ್ಞಾನವನ್ನು ನಿರೂಪಿಸಿದರು.”

“ಐಹಿಕ ವಿಷಯವನ್ನು ನೆಚ್ಚಿದವನು ಸುಖಿಯಾಗಬಲ್ಲನೆಂದು ವಾದಿಸುವುದರಲ್ಲಿ ಏನೂ ಹುರುಳಿಲ್ಲ. ಐಹಿಕ ಜಗತ್ತಿನ ಯಾವ ಜೀವಿಯೂ, ಮಹಾಬ್ರಹ್ಮನಿಂದ ಕ್ಷುದ್ರ ಇರುವೆಯವರೆಗೆ ಯಾರೂ ಸುಖಿಯಾಗಲಾರ. ಪ್ರತಿಯೊಬ್ಬನೂ ಸುಖ ಪಡೆಯುವುದಕ್ಕಾಗಿ ಶಾಶ್ವತ ಯೋಜನೆಯೊಂದನ್ನು ಸಿದ್ಧಪಡಿಸಲು ಯತ್ನಿಸುತ್ತಾನೆ. ಆದರೆ ಐಹಿಕ ನಿಸರ್ಗ ನಿಯಮವು ಪ್ರತಿಯೊಂದನ್ನೂ ನಾಶಪಡಿಸುತ್ತದೆ. ಆದ್ದರಿಂದ ಈ ಐಹಿಕ ಪ್ರಪಂಚವನ್ನು ದೇವರ ಸೃಷ್ಟಿಯಲ್ಲಿ ಅತ್ಯಂತ ಕತ್ತಲು ಕವಿದ ಪ್ರಾಂತವೆಂದು ಕರೆಯಲಾಗಿದೆ. ಹೀಗಿದ್ದೂ, ದುಃಖಿಗಳಾದ ಲೌಕಿಕರು ಇದರಿಂದ ಹೊರಬರಲು ಇಚ್ಛಿಸಿದರೆ ಸಾಕು, ಹೊರಬರಬಹುದು. ದುರದೃಷ್ಟವಶಾತ್ ಅವರೆಷ್ಟು ಮೂಢರೆಂದರೆ, ಅವರು ಅದರಿಂದ ತಪ್ಪಿಸಿಕೊಳ್ಳಲು ಅಪೇಕ್ಷಿಸುವುದೂ ಇಲ್ಲ.”
ಪ್ರಭುಪಾದ : ಪಾರಾಗುವುದು ಸಾಧ್ಯ ಎಂಬುವುದು ಜನರಿಗೆ ಗೊತ್ತಿಲ್ಲ. ಬದುಕೇ ಎಲ್ಲ ಎಂದು ಅವರು ಯೊಚಿಸುತ್ತಾರೆ. ಅದು ಅವರು ಪಡೆದಿರುವ ಶಿಕ್ಷಣ. ಅವರಿಗೆ ಜ್ಞಾನವಿಲ್ಲ. ಪ್ರತಿಯೊಂದು ಹೆಜ್ಜೆಯಲ್ಲಿಯೂ ನೋವು ಅನುಭವಿಸುತ್ತಿದ್ದರೂ ಅವರು ಲೌಕಿಕ ಲೋಕದೊಳಗೇ ತಮ್ಮದೇ ಯೋಜನೆಗಳನ್ನು ರೂಪಿಸುತ್ತಾರೆ. ಯುನೆಸ್ಕೋದಂತಹ ದೊಡ್ಡ ಸಂಸ್ಥೆಗಳು ಸಂಕಟ ನಿವಾರಣೆಗೆ ಪ್ರಯತ್ನಿಸುತ್ತಿವೆ. ಅವರ ಪ್ರಯತ್ನಗಳನ್ನು ಭಾಗವತದಲ್ಲಿ ಚರ್ವಿತ ಚರ್ವಣಾನಾಂ ಎಂದು ವರ್ಣಿಸಲಾಗಿದೆ. “ಜಗಿದದ್ದನ್ನೇ ಜಗಿಯುವುದು.” ನಮ್ಮ ಹಿಂದಿನ ನಾಯಕರು ಜನರ ಸಂಕಷ್ಟ ನಿವಾರಣೆಗೆ ಪ್ರಯತ್ನಿಸಿ ಪರಾಜಿತರಾದದ್ದು ನಮ್ಮ ಈಗಿನ ನಾಯಕರಿಗೆ ತಿಳಿದಿದ್ದರೂ ಅವರು ಬೇರೆ ರೀತಿಯಲ್ಲಿ ಪ್ರಯತ್ನಿಸಲು ಬಯಸುತ್ತಾರೆ. ಬದ್ಧ ಜೀವನದಿಂದ ಮುಕ್ತರಾಗಲು ನಿಮಗೆ ನಿಜವಾಗಿಯೂ ಆಸಕ್ತಿ ಇದ್ದರೆ, ನೀವು ಆಧ್ಯಾತ್ಮಿಕ ಮೂಲಗಳಿಂದ ಜ್ಞಾನವನ್ನು ಪಡೆಯಬೇಕು.
ಮುಂದುವರಿಸಿ.
ಶಿಷ್ಯ : “ಆದ್ದರಿಂದ ಅವರನ್ನು ಮುಳ್ಳಿನ ಗಿಡದ ರೆಂಬೆಯನ್ನು ಮೇಯುವ ಒಂಟೆಗೆ ಹೋಲಿಸಲಾಗಿದೆ. ರಕ್ತಮಿಶ್ರಿತ ರೆಂಬೆಯ ರುಚಿಯನ್ನು ಒಂಟೆ ಇಷ್ಟಪಡುತ್ತದೆ. ಅದು ತನ್ನದೇ ರಕ್ತ, ಮುಳ್ಳಿನಿಂದ ತನ್ನ ನಾಲಗೆಯು ಕೊಯ್ದು ರಕ್ತ ಬರುತ್ತಿದೆ ಎಂದು ಒಂಟೆ ಅರಿತುಕೊಳ್ಳುವುದಿಲ್ಲ!
ಹಾಗೆಯೇ, ಲೌಕಿಕನಿಗೆ ತನ್ನ ರಕ್ತವೇ ಜೇನುತುಪ್ಪದಷ್ಟು ಸವಿಯೆನಿಸಿದೆ. ತನ್ನ ಐಹಿಕ ಸೃಷ್ಟಿಯಿಂದ ಸದಾ ಗಾಸಿಗೊಂಡಿದ್ದರೂ ಆತ ಅದರಿಂದ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಇಂತಹ ಐಹಿಕರನ್ನು ಕರ್ಮಿಗಳೆಂದು ಕರೆಯಲಾಗಿದೆ. ನೂರಾರು, ಸಾವಿರಾರು ಕರ್ಮಿಗಳಲ್ಲಿ ಎಲ್ಲೋ ಕೆಲವರು ಮಾತ್ರ ಐಹಿಕ ವ್ಯಾಪಾರದಿಂದ ತೊಳಲಿ ಬಳಲಿ ಈ ಚಕ್ರವ್ಯೂಹದಿಂದ ಹೊರಬರಲು ಬಯಸುತ್ತಾರೆ.”
ಪ್ರಭುಪಾದ : ಬಹೂನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ ಅನೇಕ ಅನೇಕ ಜನ್ಮಗಳ ಅನಂತರ ಬುದ್ಧಿವಂತರು “ಈ ಲೌಕಿಕ ಕಾರ್ಯದಲ್ಲಿ ನಿರತವಾಗುವುದು ಪರಿಹಾರವಲ್ಲ. ನಾನು ದೇವೋತ್ತಮ ಪರಮ ಪುರುಷನ ಆಶ್ರಯ ಪಡೆಯಬೇಕು” ಎಂದು ಅರಿತುಕೊಳ್ಳುತ್ತಾರೆ.
ವಂದನೆಗಳು. ಹರೇ ಕೃಷ್ಣ ಜಪಿಸಿ.






Leave a Reply