ಪರಮಾನಂದದ ಪರಿಪೂರ್ಣ ಜ್ಞಾನದಿಂದ ತುಂಬಿರುವ ಆಧ್ಯಾತ್ಮಿಕ,
ಶಾಶ್ವತ ದೇಹವನ್ನು ಹೊಂದುವುದು ಸಾಧ್ಯ. ಹೇಗೆ? ಓದಿ ನೋಡಿ …
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1975ರ ಫೆಬ್ರವರಿ 14ರಂದು ಮೆಕ್ಸಿಕೋ ಸಿಟಿಯಲ್ಲಿ ನೀಡಿದ ಉಪನ್ಯಾಸ.
ಮಾತ್ರಾ ಸ್ಪರ್ಶಾಸ್ತು ಕೌನ್ತೇಯ ಶೀತೋಷ್ಣ ಸುಖ ದುಃಖದಾಃ ।
ಆಗಮಾಪಾಯಿನೋ ಅನಿತ್ಯಾಸ್ ತಾಂಸ್ ತಿತಿಕ್ಷಸ್ವ ಭಾರತ ।।
“ಹೇ ಕೌಂತೇಯ, ಸುಖದುಃಖಗಳು ಸ್ವಲ್ಪಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಮಾಯವಾಗುವುವು, ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ. ಭರತವಂಶಜನೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಭೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು.”
– ಭಗವದ್ಗೀತೆ 2.14
ನಿನ್ನೆ ಮಾಡಿದ ಚರ್ಚೆಯಿಂದ ನಾವು ಸಾಯುವುದಿಲ್ಲ ಎಂಬ ನಿರ್ಣಯಕ್ಕೆ ಬರಬೇಕು. ತಾನಲ್ಲದೆ ಅರ್ಜುನ ಮತ್ತು ಯುದ್ಧ ಭೂಮಿಯಲ್ಲಿ ಇರುವ ಇತರರ ಅಸ್ತಿತ್ವ ಮುಂದುವರಿಯುತ್ತದೆಂದು ಕೃಷ್ಣನು ಹೇಳಿದ್ದಾನೆ. ನಾವು ಹೇಗೆ ಇರುತ್ತೇವೆ? ನಾವು ಈಗ ಇರುವಂತೆಯೇ : ನಾವು ಒಂದು ನಿರ್ದಿಷ್ಟ ಲೌಕಿಕ ದೇಹವನ್ನು ಸ್ವೀಕರಿಸಿದ್ದೇವೆ ಮತ್ತು ಅಸ್ತಿತ್ವದಲ್ಲಿ ಇದ್ದೇವೆ. ಅದೇ ರೀತಿ, ಈ ದೇಹವು ಅಂತ್ಯಗೊಂಡಾಗ ನಾವು ಮತ್ತೊಂದು ದೇಹವನ್ನು ಸ್ವೀಕರಿಸುತ್ತೇವೆ ಮತ್ತು ಬದುಕು ಮುಂದುವರಿಸುತ್ತೇವೆ.

ಈಗಿನ ಪ್ರಶ್ನೆ ಏನೆಂದರೆ, “ಈ ದೇಹ ಅಂತ್ಯಗೊಂಡ ಮೇಲೆ ನಾನು ಯಾವ ರೀತಿಯ ದೇಹದಲ್ಲಿ ಇರುವೆ?” ಇದನ್ನೂ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ನಾವು ಇಷ್ಟಪಟ್ಟರೆ, ಸುದೀರ್ಘ ಜೀವಿತಾವಧಿ ಇರುವ ಮತ್ತು ಈ ಲೋಕಕ್ಕಿಂತ ಹೆಚ್ಚು ಪರಿಪೂರ್ಣ ಇಂದ್ರಿಯ ತೃಪ್ತಿ ಇರುವ ಉನ್ನತ ಗ್ರಹ ವ್ಯವಸ್ಥೆಗಳಲ್ಲಿ ಇರಬಹುದು. ಅದೇ ರೀತಿ ನಾವು ಬೆಕ್ಕು, ನಾಯಿ, ಕೀಟ, ಮರ, ಮೀನುಗಳಂತಹ ಕೆಳ ದರ್ಜೆಯ ಬದುಕಿನಲ್ಲಿಯೂ ಇರಬಹುದು. ನಾವು ಈಗಿರುವಂತೆಯೂ ಇರಬಹುದು. ಪರಮಾನಂದ ಮತ್ತು ಜ್ಞಾನದ ಶಾಶ್ವತ ಬದುಕಿನಲ್ಲಿ ಭಗವಂತ ಅಸ್ತಿತ್ವದಲ್ಲಿರುವಂತೆ ನಾವು ಕೂಡ ಇರಬಹುದು.
ಆಧ್ಯಾತ್ಮಿಕ ದೇಹ ಇರುವುದೆಂದರೆ, ಆನಂದ ಮತ್ತು ಜ್ಞಾನದ ಶಾಶ್ವತ ಬದುಕು ಪಡೆಯುವುದೆಂದು ಅರ್ಥ. ನಾವು ಈಗ ಹೊಂದಿರುವ ಲೌಕಿಕ ದೇಹವು ಶಾಶ್ವತವೂ ಅಲ್ಲ, ಆನಂದಮಯವೂ ಅಲ್ಲ. ಜ್ಞಾನ ಪೂರ್ಣವೂ ಅಲ್ಲ. ಲೌಕಿಕ ದೇಹವು ಅಂತ್ಯಗೊಳ್ಳುತ್ತದೆ ಮತ್ತು ಅದು ಅಜ್ಞಾನದಿಂದ ಕೂಡಿದೆ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಈ ಗೋಡೆಯಾಚೆ ಏನಿದೆ ಎಂದು ನಮಗೆ ಹೇಳುವುದು ಸಾಧ್ಯವಿಲ್ಲ. ನಮಗೆ ಇಂದ್ರಿಯಗಳಿವೆ. ಆದರೆ ಅವು ಸೀಮಿತ, ಅಪರಿಪೂರ್ಣ. ಕೆಲವು ಬಾರಿ ನಾವು ನೋಡುವುದರ ಬಗೆಗೆ ಹೆಮ್ಮೆ ಪಡುತ್ತೇವೆ ಮತ್ತು ನಾವು ಸವಾಲು ಮಾಡುತ್ತೇವೆ, “ನೀನು ದೇವರನ್ನು ತೋರಿಸಬಲ್ಲೆಯಾ?” ಆದರೆ, ದೀಪ ಆರಿದ ತತ್‌ಕ್ಷಣ ನಮ್ಮ ನೋಡುವ ಶಕ್ತಿ ಹೊರಟುಹೋಗುತ್ತದೆ ಎಂಬುವುದನ್ನು ನಾವು ಮರೆಯುತ್ತೇವೆ.
ಇಡೀ ಲೌಕಿಕ ದೇಹವು ಅಪರಿಪೂರ್ಣ ಮತ್ತು ಅಜ್ಞಾನದಿಂದ ಕೂಡಿದೆ. ಆದರೆ, ಅದಕ್ಕೆ ವಿರುದ್ಧವಾಗಿ ಆಧ್ಯಾತ್ಮಿಕ ದೇಹವು ಜ್ಞಾನದಿಂದ ತುಂಬಿದೆ. ನಮ್ಮ ಮುಂದಿನ ಬದುಕಿನಲ್ಲಿ ನಾವು ಅಂತಹ ದೇಹ ಪಡೆಯಬಹುದು. ಅದಕ್ಕಾಗಿ ನಾವು ಶ್ರಮಿಸಬೇಕಷ್ಟೆ. ನಾವು ನಮ್ಮ ಮುಂದಿನ ದೇಹವನ್ನು ಉನ್ನತ ಗ್ರಹ ವ್ಯವಸ್ಥೆಗಳಲ್ಲಿ ಪಡೆಯಲು ಶ್ರಮಿಸಬಹುದು. ಬೆಕ್ಕು ಅಥವಾ ನಾಯಿಯ ದೇಹ ಪಡೆಯಲು ಶ್ರಮಿಸಬಹುದು ಅಥವಾ ಶಾಶ್ವತ, ಆನಂದದಾಯಕ ಜ್ಞಾನದ ದೇಹಕ್ಕಾಗಿಯೂ ಶ್ರಮಿಸಬಹದು.

ಶಾಶ್ವತವಾದ ದೇಹವನ್ನು ಪಡೆಯಲು ಪ್ರಯತ್ನಿಸುವರು. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ : “ನನ್ನ ಆ ಪರಮಧಾಮವನ್ನು ತಲಪಿದವರು ಈ ಐಹಿಕ ಲೋಕಕ್ಕೆ ಮತ್ತೆ ಬರುವುದೇ ಇಲ್ಲ.” ಲೌಕಿಕ ಜಗತ್ತಿನಲ್ಲಿ ನೀವು ಅತ್ಯುನ್ನತ ಗ್ರಹ ವ್ಯವಸ್ಥೆ ಬ್ರಹ್ಮಲೋಕಕ್ಕೆ ಭಡ್ತಿ ಹೊಂದಿದರೂ ಕೂಡ ನೀವು ಹಿಂದಿರುಗಲೇಬೇಕಾಗುತ್ತದೆ. ಆದರೆ ನೀವು ಆಧ್ಯಾತ್ಮಿಕ ಲೋಕ, ಭಗವದ್ಧಾಮಕ್ಕೆ ಹೋಗಲು ಹೆಚ್ಚು ಶ್ರಮಿಸಿದರೆ ನೀವು ಲೌಕಿಕ ದೇಹ ಸ್ವೀಕರಿಸಲು ಹಿಂದಿರುಗುವುದಿಲ್ಲ.
ಆಗ ಈ ಪ್ರಶ್ನೆ ಉಂಟಾಗುತ್ತದೆ : “ನಾನು ಶಾಶ್ವತವಾಗಿದ್ದರೆ, ಬದುಕಿನಲ್ಲಿ ಅಷ್ಟೊಂದು ಸಂಕಷ್ಟಗಳೇಕೆ? ಸಾಯಲು ಬಲವಂತವೇಕೆ?” ಇವೆಲ್ಲ ಬುದ್ಧಿವಂತ ಪ್ರಶ್ನೆಗಳು. “ನಾನು ಶಾಶ್ವತವಾಗಿದ್ದರೆ, ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗಕ್ಕೆ ಗುರಿಯಾಗುವ ಲೌಕಿಕ ದೇಹದಲ್ಲಿ ಏಕೆ ಇರಬೇಕು?”
ಬದುಕಿನ ಸಂಕಷ್ಟ ಸ್ಥಿತಿಗೆ ಐಹಿಕ ದೇಹವೇ ಕಾರಣ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಇಂದ್ರಿಯ ತೃಪ್ತಿಯನ್ನು ಪಡೆಯಲು ತೊಡಗಿರುವವರನ್ನು ಕರ್ಮಿಗಳೆನ್ನುತ್ತಾರೆ. ಈ ಕರ್ಮಿಗಳು ಭವಿಷ್ಯದ ಬಗೆಗೆ ಲಕ್ಷ್ಯವಿಡುವುದಿಲ್ಲ. ಅವರಿಗೆ ತಮ್ಮ ಸುಖಕ್ಕಾಗಿ ತತ್‌ಕ್ಷಣದ ಅಗತ್ಯಗಳು ಬೇಕು. ಪೋಷಕರ ರಕ್ಷಣೆ ಇಲ್ಲದ ಮಗುವಿನಂತೆ. ಅಂತಹ ಮಗುವು ಇಡೀ ದಿನ ಆಟವಾಡುತ್ತಿರುತ್ತದೆ. ಅದಕ್ಕೆ ಭವಿಷ್ಯದ ಬಗೆಗೆ, ಶಿಕ್ಷಣದ ಬಗೆಗೆ ಗಮನವಿರುವುದಿಲ್ಲ. ನಾವು ನಿಜವಾಗಿಯೂ ಬುದ್ಧಿವಂತರಾಗಿದ್ದರೆ ಮಾನವ ಜೀವನದಲ್ಲಿ ಇನ್ನು ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗಗಳಿಲ್ಲದಂತಹ ಬದುಕು ಅಥವಾ ದೇಹವನ್ನು ಪಡೆಯಲು ಪ್ರಯತ್ನಿಸಬೇಕು. ಜನರಲ್ಲಿ ಅದರ ಅರಿವು ಮೂಡಿಸುವುದೇ ಕೃಷ್ಣ ಪ್ರಜ್ಞಾ ಆಂದೋಲನದ ಉದ್ದೇಶ.
ಪೂರೈಕೆದಾರ ಕೃಷ್ಣ
ಈಗ ಯಾರಾದರೂ ಕೇಳಬಹುದು, “ನಾನು ಕೃಷ್ಣ ಪ್ರಜ್ಞೆಗೆ ಅರ್ಪಿಸಿಕೊಂಡರೆ ನನ್ನ ಲೌಕಿಕ ಅಗತ್ಯಗಳ ಪೂರೈಕೆ ಹೇಗೆ?”
ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ : ಕೃಷ್ಣ ಪ್ರಜ್ಞೆಯಲ್ಲಿ ತೊಡಗಿರುವವರ ಅಗತ್ಯಗಳನ್ನು ಕೃಷ್ಣನು ನೋಡಿಕೊಳ್ಳುತ್ತಾನೆ. ಕೃಷ್ಣನು ಈಗಾಗಲೇ ಎಲ್ಲರ ನಿರ್ವಹಣೆ ಮಾಡುತ್ತಿದ್ದಾನೆ. ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ : “ಆ ಒಬ್ಬ ದೇವೋತ್ತಮನು ಎಲ್ಲ ಜೀವಿಗಳ ಅಗತ್ಯಗಳನ್ನು ನಿರ್ವಹಿಸುತ್ತಿದ್ದಾನೆ.” ಆದುದರಿಂದ, ಭಗವದ್ಧಾಮಕ್ಕೆ ಹೋಗಲು ಪ್ರಯತ್ನಿಸುತ್ತಿರುವ ಭಕ್ತನಿಗೆ ಯಾವುದೇ ಕೊರತೆ ಇರುವುದಿಲ್ಲ.

ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ತೇಷಾಂ ನಿತ್ಯಾಭಿಯುಕ್ತಾನಾಂ… ಯೋಗಕ್ಷೇಮಂ ವಹಾಮಿ ಅಹಂ : “ಭಕ್ತನು ಸದಾ ನನ್ನ ಸೇವೆಯಲ್ಲಿ ತೊಡಗಿದ್ದಾಗ ಅವನ ಎಲ್ಲ ಅಗತ್ಯಗಳೂ ಪೂರೈಸುವಂತೆ ಮಾಡುತ್ತೇನೆ.” ಒಂದು ಪ್ರಾಯೋಗಿಕ ಉದಾಹರಣೆ, ಈ ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ ಒಂದು ನೂರು ಕೇಂದ್ರಗಳಿವೆ. ಅವುಗಳಲ್ಲಿ 25 ರಿಂದ 250 ಭಕ್ತರು ಇದ್ದಾರೆ. ನಮಗೆ ನಿಗದಿತ ವರಮಾನವಿಲ್ಲ. ಆದರೆ ಕೃಷ್ಣನ ಕೃಪೆಯಿಂದ ನಮಗೆ ಯಾವುದಕ್ಕೂ ಕೊರತೆ ಇಲ್ಲ. ಎಲ್ಲವನ್ನೂ ಪೂರೈಸಲಾಗಿದೆ. ಜನರಿಗೆ ಅಚ್ಚರಿ. “ಈ ಜನರು ಉದ್ಯೋಗ ಮಾಡುವುದಿಲ್ಲ. ಯಾವುದೇ ವೃತ್ತಿಯನ್ನು ಕೈಗೊಂಡಿಲ್ಲ. ಅವರು ಸುಮ್ಮನೆ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಾರೆ. ಅವರು ಹೇಗೆ ಜೀವಿಸುತ್ತಾರೆ?”
ಭಗವಂತನ ದಯೆಯಿಂದ ಬೆಕ್ಕು ಮತ್ತು ನಾಯಿಗಳು ಜೀವಿಸಬಹುದಾದರೆ, ಭಕ್ತರು ಭಗವಂತನ ಕೃಪೆಯಿಂದ ಸುಖಸೌಕರ್ಯದಿಂದ ಇರಬಹುದು. ಈ ವಿಷಯದಲ್ಲಿ ಶಂಕೆಯೇ ಇಲ್ಲ. ಆದರೂ ಕೆಲವರು ಯೋಚಿಸಬಹುದು, “ನಾನು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಎಷ್ಟೊಂದು (ವಸ್ತು) ಬೇಕೆಂದು ಸಂಕಷ್ಟ ಅನುಭವಿಸುತ್ತಿದ್ದೇನೆ.” ಅಂತಹ ವ್ಯಕ್ತಿಗಳಿಗೆ ಅಥವಾ ನಮ್ಮೆಲ್ಲರಿಗೂ ಬೋಧನೆ ಏನೆಂದರೆ, ಮಾತ್ರಾ ಸ್ಪರ್ಶಾಸ್ ತು ಕೌಂತೇಯ ಶೀತೋಷ್ಣ ಸುಖ ದುಃಖದಾಃ – “ಈ ನೋವುಗಳು ಮತ್ತು ಆನಂದವು ಚಳಿಗಾಲ ಮತ್ತು ಬೇಸಗೆಯಂತೆ.” ಚಳಿಗಾಲದಲ್ಲಿ ನೀರು ಕಷ್ಟದಾಯಕ, ಬೇಸಗೆಯಲ್ಲಿ ಆನಂದಕರ. ಹಾಗಾದರೆ ನೀರಿನ ಸ್ಥಾನವೇನು? ಅದು ಆನಂದವೇ ನೋವೇ? ಅದು ಆನಂದವೂ ಅಲ್ಲ, ನೋವೂ ಅಲ್ಲ. ಆದರೆ ಕೆಲವು ಋತುಗಳಲ್ಲಿ ಚರ್ಮ ಸ್ಪರ್ಶದಿಂದ ಅದು ನೋವು ಅಥವಾ ಆನಂದದ ಅನುಭವ ನೀಡುತ್ತದೆ. ಅಂತಹ ಸಂಕಟ ಮತ್ತು ಆನಂದವನ್ನು ಇಲ್ಲಿ ವಿವರಿಸಲಾಗಿದೆ : “ಅವು ಬರುತ್ತವೆ, ಹೋಗುತ್ತವೆ. ಅವು ಶಾಶ್ವತವಲ್ಲ.”
ತಾಳ್ಮೆಯಿಂದ ಇರಿ
ಆಗಮ ಅಪಾಯಿನಃ ಅನಿತ್ಯಾ ಎಂದರೆ “ಅವು ಬರುತ್ತವೆ, ಹೋಗುತ್ತವೆ. ಅವು ಶಾಶ್ವತವಲ್ಲ.” ಆದುದರಿಂದ ಕೃಷ್ಣನು ಬೋಧಿಸುತ್ತಾನೆ, ತಾಮ್ಸ್‌ತಿತಿಕ್ಷಸ್ವ ಭಾರತ : “ಸುಮ್ಮನೆ ತಾಳ್ಮೆಯಿಂದ ಇರಿ.” ಆದರೆ ನಿಮ್ಮ ನಿಜವಾದ ಕಾರ್ಯವನ್ನು, ಕೃಷ್ಣ ಪ್ರಜ್ಞೆಯನ್ನು ಮರೆಯಬೇಡಿ. ಈ ಲೌಕಿಕ ನೋವು ನಲಿವುಗಳಿಗೆ ಲಕ್ಷ್ಯ ಕೊಡಬೇಡಿ. ನೋವನ್ನು ಪ್ರತಿರೋಧಿಸಲು ನೀವು ಪ್ರಯತ್ನಿಸಬಹುದು. ನಿಮಗೆ ಸಾಧ್ಯವಾಗದಿದ್ದರೆ ಈ ನೋವು ನಲಿವಿನಿಂದ ತಪ್ಪು ದಾರಿಗೆ ಸೆಳೆಯಲ್ಪಡಬೇಡಿ.
ನಮ್ಮ ದೈವಿ ಗುಣ ತಿತಿಕ್ಷಾ, “ತಾಳ್ಮೆ.” ಬದುಕಿನ ಪ್ರತಿಯೊಂದು ಸ್ಥಿತಿಯಲ್ಲಿಯೂ ಹೇಗೆ ತಾಳ್ಮೆಯಿಂದಿರಬೇಕು ಎಂಬುದನ್ನು ಕಲಿಯಬೇಕು. ಉದಾಹರಣೆಗೆ, ಚಳಿಗಾಲದಲ್ಲಿ ಬೆಳಗಿನ ಜಾವದಲ್ಲೇ ಸ್ನಾನಮಾಡಲು ಆಚಾರನಿಷ್ಠನಾದವನು (ಬ್ರಾಹ್ಮಣರು) ಹಿಂಜರಿಯುವುದಿಲ್ಲ. ಅದಕ್ಕೆ ಅಭ್ಯಾಸ ಬೇಕಷ್ಟೆ. ಒಂದೆರಡು ದಿನ ಕಷ್ಟವಾಗಬಹುದು, ಅನಂತರ ಕಷ್ಟವಾಗದು, ಆದುದರಿಂದ ಚಳಿ ಎಂದು ಬೆಳಗಿನ ಜಾವದ ಸ್ನಾನವನ್ನು ಬಿಡಬಾರದು. ಅದೇ ರೀತಿ ನಡುಬೇಸಿಗೆ ಕಾಲದಲ್ಲಿ “ಅಡುಗೆ ಮಾಡುವುದನ್ನು ಬಿಟ್ಟು ಬಿಡೋಣ” ಎಂದು ನಿರ್ಧರಿಸಬಾರದು. ಅಡುಗೆ ಮನೆಯಲ್ಲಿ ತುಂಬ ಬಿಸಿ ಇರಬಹುದು. ಆದರೆ ನಾವು ಅಡುಗೆ ಮಾಡುವುದನ್ನು ಬಿಡಲಾಗದು. ಹಾಗೆಯೇ ಆಧ್ಯಾತ್ಮಿಕ ಪ್ರಗತಿಗಾಗಿನ ನಿಯಮ ನಿಯಂತ್ರಣಗಳು ನೋವಿನದಾಗಿರಬಹುದು. ಆದರೆ ನಾವು ಅದನ್ನು ಬಿಡುವುದು ಸಾಧ್ಯವಿಲ್ಲ. ನಾವು ತಾಳ್ಮೆಯನ್ನು ಕಲಿಯಬೇಕು. ಆದುದರಿಂದ ಕೃಷ್ಣನು ಬೋಧಿಸುತ್ತಾನೆ, ತಾಮ್ಸ್ ತಿತಿಕ್ಷಸ್ವ ಭಾರತ : “ನನ್ನ ಪ್ರೀತಿಯ ಅರ್ಜುನನೇ, ಭರತ ಮಹಾರಾಜನ ವಂಶಜನೇ, ಇದನ್ನು ಸಹಿಸಿಕೊಳ್ಳಲು ಪ್ರಯತ್ನಿಸು.”

ಕೃಷ್ಣ ಪ್ರಜ್ಞೆಯಲ್ಲಿ ನಾವೆಷ್ಟು ತಾಳ್ಮೆಯಿಂದಿರಬೇಕೆಂಬ ಬಗೆಗೆ ಶ್ರೀ ಚೈತನ್ಯ ಮಹಾಪ್ರಭುಗಳು ಬೋಧಿಸಿದ್ದಾರೆ. ಅವರು ಹೇಳಿದ್ದಾರೆ, ತೃಣಾದ್ ಅಪಿ ಸುನೀಚೇನ : “ಹುಲ್ಲಿಗಿಂತ ಹೆಚ್ಚು ವಿನಯಶೀಲನಾಗು.” ಅಸಂಖ್ಯ ಜನರು ತುಳಿದರೂ ಹುಲ್ಲು ಪ್ರತಿಭಟಿಸುವುದಿಲ್ಲ. ತರೋರ್ ಅಪಿ ಸಹಿಷ್ಣುನಾ : “ಮರಕ್ಕಿಂತ ಹೆಚ್ಚು ತಾಳ್ಮೆಯಿಂದ ಇರು.” ಕೆಲವರು ಮರದ ಕೊಂಬೆಗಳನ್ನು ಒಯ್ಯುವರು, ಇನ್ಯಾರೋ ಅದರ ಹಣ್ಣುಗಳನ್ನು ಕಿತ್ತುಕೊಳ್ಳುವರು, ಮತ್ಯಾರೋ ಅದನ್ನು ಕಡಿದು ಹಾಕುತ್ತಾರೆ. ಆದರೂ ಮರವು ಆಶ್ರಯ, ಹಣ್ಣು, ಹೂವು ಮತ್ತು ಎಲೆಗಳನ್ನು ನೀಡುತ್ತದೆ. ತಾಳ್ಮೆಗೆ ಮರವು ಅತ್ಯುತ್ತಮ ಉದಾಹರಣೆ.
ಭಗವದ್ಧಾಮಕ್ಕೆ ಮರಳಲು ಇಚ್ಛಿಸುವವರು ತಾಳ್ಮೆ ಮತ್ತು ಸಹನೆಯಿಂದ ಇರುವುದನ್ನು ಕಲಿಯಬೇಕು. ಅದೂ ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ. ಅವರು ಮತ್ತೂ ಹೇಳುತ್ತಾರೆ, ಅಮಾನಿನಾ ಮಾನದೇನ : “ಯಾರೂ ಕೂಡ ತಮಗೆ ಗೌರವವನ್ನು ಅಪೇಕ್ಷಿಸಬಾರದು. ಆದರೆ ಇತರರಿಗೆ ಎಲ್ಲ ಗೌರವವನ್ನೂ ನೀಡಬೇಕು.” ಈ ರೀತಿ ನಾವು ಅಭ್ಯಸಿಸಿದರೆ, ನಾವು ಭಗವದ್ಧಾಮಕ್ಕೆ ಹಿಂದಿರುಗಲು ಅರ್ಹರಾಗುತ್ತೇವೆ. ಅದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ : (ಭಗವದ್ಗೀತೆ, 2.15)
ಯಂ ಹಿ ನ ವ್ಯಥಯಂತಿ ಏತೇ ಪುರುಷಂ ಪುರುಷರ್ಷಭ ।
ಸಮ ದುಃಖ ಸುಖಂ ಧೀರಂ ಸೋ ಅಮೃತತ್ವಾಯ ಕಲ್ಪತೇ ।।
“ಪುರುಷಶ್ರೇಷ್ಠನೇ, (ಅರ್ಜುನನೇ) ಸುಖದುಃಖಗಳಿಂದ ವಿಚಲಿತನಾಗದೆ ಉಭಯ ಸ್ಥಿತಿಗಳಲ್ಲಿಯೂ ದೃಢನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.”
“ವ್ಯಕ್ತಿಯು ಅಭ್ಯಸಿಸಿದರೆ ಅವನು ಭಗವದ್ಧಾಮಕ್ಕೆ ಹಿಂದಿರುಗಲು ಅರ್ಹನಾಗುತ್ತಾನೆ.” ಆದುದರಿಂದ ಅಭ್ಯಾಸ ಮಾಡಿ, ಆಚರಿಸಿ. ಆಗ ಯಾವುದನ್ನಾದರೂ ಸಹಿಸಿಕೊಳ್ಳಬಹುದು. ಬೆಳಗ್ಗೆ ನಾವು ವಾಯು ಸಂಚಾರಕ್ಕೆ ಹೋದಾಗ, ಜನರು ಓಟದ ಅಭ್ಯಾಸ ಮಾಡುತ್ತಿರುತ್ತಾರೆ. ನನಗೆ ಓಡುವುದು ಸಾಧ್ಯವಿಲ್ಲ. ಆದರೆ ಸ್ವಲ್ಪ ದಿನ ಅಭ್ಯಾಸ ಮಾಡಿದರೆ, ನಾನೂ ಓಡಬಲ್ಲೆ.
ಯಾವುದನ್ನು ನೀವು ಅಭ್ಯಾಸ ಮಾಡುವಿರೋ ಅದರಲ್ಲಿ ನೀವು ಯಶಸ್ವಿಯಾಗುವಿರಿ. ಆದುದರಿಂದ ಕೃಷ್ಣ ಪ್ರಜ್ಞೆಯನ್ನು ಅಭ್ಯಾಸ ಮಾಡುವುದರಿಂದ ನೀವು ಭಗವದ್ಧಾಮಕ್ಕೆ ಹಿಂದಿರುಗಬಹುದಾದರೆ, ನೀವು ಏಕೆ ಅಲಕ್ಷಿಸಬೇಕು? ಇದು ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗವು ನಿಜವಾದ ಸಮಸ್ಯೆಗಳು. ಸುಮ್ಮನೆ ಕೆಲವು ನಿಯಂತ್ರಣ ತತ್ತ್ವಗಳನ್ನು ಅನುಸರಿಸಿ ಈ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಾದರೆ ನೀವು ಅದನ್ನು ಏಕೆ ಮಾಡಬಾರದು?

ಅದು ನಮ್ಮ ಮನವಿ. ಕೃಷ್ಣ ಪ್ರಜ್ಞೆಯನ್ನು ಅಭ್ಯಾಸ ಮಾಡಿ ಭಗವದ್ಧಾಮಕ್ಕೆ ಹಿಂದಿರುಗಲು ಅಗತ್ಯ ತರಬೇತಿ ನೀಡಲೆಂದು ನಾವು ನೂರಾರು ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ. ನೀವು ತುಂಬ ಅಗ್ಗವಾಗಿ ಭಗವದ್ಧಾಮಕ್ಕೆ ಹಿಂದಿರುಗುವುದು ಸಾಧ್ಯವಿಲ್ಲ. ನೀವು ಕೆಲವು ನಿಯಂತ್ರಣ ತತ್ತ್ವಗಳನ್ನು ಅನುಸರಿಸಬೇಕು. ಆಗಲೇ ನೀವು ಅರ್ಹರಾಗುವುದು. ಅದು ಅಷ್ಟೇನೂ ಕಷ್ಟವಲ್ಲ. ನೀವು ಅಭ್ಯಾಸ ಮಾಡಿದರೆ, ಅದು ತುಂಬ ಸುಲಭ. ಹರೇ ಕೃಷ್ಣ ಮಂತ್ರವನ್ನು ಜಪಿಸುವುದೇ ಆರಂಭ. ಇದರಿಂದ ನೀವು ಆಚರಣೆಗೆ ಅರ್ಹರಾಗುತ್ತೀರಿ.
ಆದುದರಿಂದ ಕೃಷ್ಣ ಪ್ರಜ್ಞಾ ಆಂದೋಲನದ ಪೂರ್ಣ ಲಾಭವನ್ನು ಪಡೆಯಿರಿ ಮತ್ತು ನಿಮ್ಮ ಬದುಕಿನಲ್ಲಿ ಯಶಸ್ವಿಯಾಗಿ. ತಪ್ಪು ದಾರಿಗೆ ಹೋಗಬೇಡಿ. ಈ ದೇಹ ಅಂತ್ಯಗೊಂಡ ಮೇಲೆ ನಾವೆಲ್ಲರೂ ಕೂಡ ಬೇರೆ ದೇಹವನ್ನು ಸ್ವೀಕರಿಸಬೇಕು. ನಾವು ನಿಯಮ ಮತ್ತು ನಿಯಂತ್ರಣಗಳನ್ನು ಅಲಕ್ಷಿಸಿದರೆ ಮತ್ತು ನಾಯಿಯ ದೇಹವನ್ನು ಸ್ವೀಕರಿಸಬೇಕಾದರೆ ಅದೆಷ್ಟು ಅಸಹ್ಯ ಎಂಬುವುದನ್ನು ಊಹಿಸಿಕೊಳ್ಳಿ! ಆದರೆ ಕೃಷ್ಣನು ಹೇಳುತ್ತಾನೆ, ಮದ್ ಯಾಜಿನೋ ಅಪಿ ಯಾಂತಿ ಮಾಂ : “ಕೃಷ್ಣ ಪ್ರಜ್ಞೆಯಲ್ಲಿ ನಿರತನಾದವನು ನನ್ನ ಬಳಿಗೆ ಬರುವನು.” ಆದುದರಿಂದ ಕೃಷ್ಣ ಪ್ರಜ್ಞೆಯನ್ನು ಅಭ್ಯಾಸ ಮಾಡಿ ಮತ್ತು ಮನೆಗೆ, ಭಗವದ್ಧಾಮಕ್ಕೆ ಹಿಂದಿರುಗಿ. ವಂದನೆಗಳು.






Leave a Reply