ಯಚ್ಚಕರ್ಥಾಂಗ ಮತ್ಸ್ತೋತ್ರಂ ಮತ್ಕದಾಭ್ಯುದಯಾಂಕಿತಮ್ ।
ಯದ್ವಾ ತಪಸಿ ತೇ ನಿಷ್ಠಾ ಸ ಏಷ ಮದನುಗ್ರಹಃ ॥
ಎಲೈ ಬ್ರಹ್ಮನೇ, ನನ್ನ ದಿವ್ಯ ಕಾರ್ಯಗಳ ಮಹಿಮೆಗಳನ್ನು ಹೊಗಳುತ್ತಾ ನೀನು ಹಾಡಿದ ನಿನ್ನ ಸ್ತೋತ್ರಗಳು, ನನ್ನನ್ನು ತಿಳಿಯುವುದಕ್ಕಾಗಿ ನೀನು ಕೈಗೊಂಡ ತಪಸ್ಸುಗಳು ಮತ್ತು ನನ್ನಲ್ಲಿ ನೀನಿಟ್ಟ ಅಚಲ ವಿಶ್ವಾಸ ಇವೆಲ್ಲವೂ ನನ್ನ ಅವ್ಯಾಜ ಕರುಣೆಯೆಂದು ಭಾವಿಸತಕ್ಕದ್ದು.
(ಶ್ರೀಮದ್ ಭಾಗವತ, 3.9.38)

ಈ ಶ್ಲೋಕದಲ್ಲಿ ಭಗವಂತನು ಬ್ರಹ್ಮನೊಂದಿಗೆ ಮಾತನಾಡುತ್ತಿದ್ದಾನೆ. ಅವನು ಬ್ರಹ್ಮನನ್ನು ಉದ್ದೇಶಿಸಿ ಹೇಳುತ್ತಿದ್ದಾನೆ, “ಎಲೈ ಬ್ರಹ್ಮನೇ, ನನ್ನ ದಿವ್ಯ ಕಾರ್ಯಗಳ ಮಹಿಮೆಗಳನ್ನು ಹೊಗಳುತ್ತಾ ನೀನು ಹಾಡಿದ ನಿನ್ನ ಸ್ತೋತ್ರಗಳು, ನನ್ನನ್ನು ತಿಳಿಯುವುದಕ್ಕಾಗಿ ನೀನು ಕೈಗೊಂಡ ತಪಸ್ಸುಗಳು ಮತ್ತು ನನ್ನಲ್ಲಿ ನೀನಿಟ್ಟ ಅಚಲ ವಿಶ್ವಾಸ ಇವೆಲ್ಲವೂ ನನ್ನ ಅವ್ಯಾಜ ಕರುಣೆಯೆಂದು ಭಾವಿಸತಕ್ಕದ್ದು.” ಆದುದರಿಂದ ನಾವು ಪ್ರಾರ್ಥಿಸಿದಾಗ ಅಥವಾ ತಪಸ್ಸು ಮಾಡಿದಾಗ ನಾವು ಸಾಮಾನ್ಯವಾಗಿ ಇದನ್ನೆಲ್ಲ ಭಗವಂತನನ್ನು ಸಂತೃಪ್ತಪಡಿಸಲು ಮಾಡುತ್ತಿದ್ದೇವೆ ಎಂದು ಭಾವಿಸುತ್ತೇವೆ ಮತ್ತು ಶ್ಲೋಕವನ್ನು ಭಗವಂತನ ವೈಭವವನ್ನು ಕೊಂಡಾಡಲು ಹಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ, ಬ್ರಹ್ಮನು ತಪಸ್ಸು ಮಾಡಿದರೂ ಪ್ರಭುವಿನ ಮಹಿಮೆಯನ್ನು ವರ್ಣಿಸಲು ಶ್ಲೋಕವನ್ನು ಪಠಿಸಿದರೂ ಇದೆಲ್ಲ “ನನ್ನ ಅವ್ಯಾಜ ಕರುಣೆಯೆಂದು ಭಾವಿಸತಕ್ಕದ್ದು” ಎಂದು ಭಗವಂತನು ಈ ಶ್ಲೋಕದಲ್ಲಿ ಹೇಳುತ್ತಿದ್ದಾನೆ. ಅಂದರೆ, ತಪಸ್ಸು ಮಾಡಲೂ, ದೇವರಿಗಾಗಿ ಭಕ್ತಿ ಸೇವೆ ಕೈಗೊಳ್ಳಲೂ ಪ್ರಾರ್ಥನೆ ಸಲ್ಲಿಸಲೂ ಕೂಡ ನಮಗೆ ಭಗವಂತನ ಕೃಪೆ ಅಗತ್ಯ. ನಾವು ನಮ್ಮದೇ ಶಕ್ತಿ ಅಥವಾ ಬುದ್ಧಿಯಿಂದ ಪ್ರಾರ್ಥನೆ ಸಲ್ಲಿಸಲಾಗದು. ಆದುದರಿಂದ ನಮಗೆ ಏನೇ ಸಾಮರ್ಥ್ಯವಿದ್ದರೂ ನಮಗೆ ಏನೇ ಪ್ರತಿಭೆ ಇದ್ದರೂ ಅದೆಲ್ಲ ಭಗವಂತನ ಕೃಪೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಮತ್ತು ಅವು ಪ್ರಭುವಿನ ಸೇವೆಯಲ್ಲಿ ತೊಡಗಿಕೊಳ್ಳಲು ಇರುವುದೆಂದು ಅರ್ಥಮಾಡಿಕೊಳ್ಳಬೇಕು. ಭಗವಂತನ ಕೃಪೆ ಇದ್ದರೆ ಒಬ್ಬ ಸಾಮಾನ್ಯನೂ ಅತ್ಯುನ್ನತ ಆಧ್ಯಾತ್ಮಿಕ ಸಿದ್ಧಿಯ ಶ್ಲೋಕಗಳನ್ನು ರಚಿಸಬಹುದು ಎಂದು ಪ್ರಭುಪಾದರು ಇಲ್ಲಿ ಹೇಳಿದ್ದಾರೆ.
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೆ ೕ ಗಿರಿಂ ।
ಯತ್ ಕೃಪಾ ತಂ ಅಹಂ ವಂದೇ ಪರಮಾನಂದ ಮಾಧವಂ ॥
ಹೀಗೆ ನಮ್ಮಲ್ಲಿ ಬಹಳ ಮಂದಿ ಯಾವುದಾದರೂ ಸೇವೆಯಲ್ಲಿ ತೊಡಗಿಕೊಂಡಿರುತ್ತೇವೆ. ನಾವು ವಾಸ್ತವವಾಗಿ ಮಾಡಬಹುದಾದ ಅಥವಾ ನಮ್ಮ ಸಾಮರ್ಥ್ಯಕ್ಕೆ ಪೂರಕವಾದ ಪ್ರಮಾಣದಲ್ಲಿ ಫಲ ಸಿಗದಿರಬಹುದು. ನಮಗೆ ಏನೇ ಸಾಮರ್ಥ್ಯವಿದ್ದರೂ ಅದು ಭಗವಂತನಿಂದ ಲಭ್ಯವಾದುದು. ಒಬ್ಬ ಭಕ್ತನು ಈ ಬಗೆಗೆ ಪ್ರಜ್ಞಾವಂತನಾಗಿದ್ದರೆ, ಅದು ಅವನನ್ನು ಅಹಂಕಾರದಿಂದ ರಕ್ಷಿಸುತ್ತದೆ. ಇಲ್ಲವಾದರೆ, ಪ್ರಭುವಿನ ಸೇವೆಗಾಗಿ, ಭಗವಂತನು ಯಾವುದಾದರೂ ಯಶಸ್ಸಿಗಾಗಿ ನಮಗೆ ಶಕ್ತಿ ನೀಡಬಹುದು ಮತ್ತು ನಾವು ಈ ಯಶಸ್ಸು ನನ್ನಿಂದಲೇ ಆಗಿದ್ದು ಎಂದು ಯೋಚಿಸತೊಡಗಿದರೆ ಅದು ಅಹಂಕಾರವೆನಿಸಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಅದು ತಪ್ಪಾಗಿಲ್ಲದಿರಬಹುದು, ಆದರೆ ಅದು ಅಹಂ ಎನಿಸಿಕೊಳ್ಳುತ್ತದೆ ಮತ್ತು ಅದು ನಮ್ಮ ಪ್ರಜ್ಞೆಯನ್ನು ಕೀಳಾಗಿಸುತ್ತದೆ. ಬದ್ಧ ಹಂತದಲ್ಲಿ ಇಂತಹ ಆಲೋಚನೆಗಳಿಗೆ ನಾವು ಒಗ್ಗಿಹೋಗಿದ್ದೇವೆ. ಆದುದರಿಂದ ಐಹಿಕ ಲೋಕದಲ್ಲಿ ನೋಡಿ… ಅಲ್ಲೊಂದು ಬಹುಮಾನ ವಿತರಣೆ ಸಮಾರಂಭ ನಡೆಯುತ್ತಿದೆ ಎಂದುಕೊಳ್ಳಿ. ಪ್ರಥಮ, ದ್ವಿತೀಯ ಬಹುಮಾನ ಹೀಗೆ ಪ್ರಕಟವಾಗುತ್ತಿರುತ್ತದೆ. ವ್ಯಕ್ತಿಯು ವೇದಿಕೆ ಏರಿ ಬಹುಮಾನಗಳನ್ನು ತರುತ್ತಿರುತ್ತಾನೆ. ಎಲ್ಲರೂ ಚಪ್ಪಾಳೆ ತಟ್ಟುತ್ತಿರುತ್ತಾರೆ. ತಾನು ಶ್ರೇಷ್ಠ, ತಾನು ಮಾಡಿಬಿಟ್ಟೆ ಎಂದು ಭಾವಿಸುತ್ತಾನೆ. ಲೌಕಿಕ ಜಗತ್ತಿನಲ್ಲಿನ ಕಲ್ಪನೆಯೇ ಹಾಗೆ ಮತ್ತು ಅದರ ಕಾರ್ಯ ರೂಪ ಹಾಗೆಯೇ. ಅಲ್ಲಿ ಪ್ರತಿಯೊಬ್ಬರೂ ಗೌರವಗಳಿಗೆ ಕಾಯುತ್ತಿರುತ್ತಾರೆ, ಎಲ್ಲರೂ ಪ್ರಸಿದ್ಧರಾಗಲು ತವಕಿಸುತ್ತಾರೆ. ಆದರೆ ಭಕ್ತನೊಬ್ಬ ಪ್ರಸಿದ್ಧಿಗೆ, ಹೊಗಳಿಕೆಗೆ, ತನ್ನದೇ ಶ್ರಮ ಎನ್ನುತ್ತ ಮಾಡಿದ ಕೆಲಸಕ್ಕೆ ಮನ್ನಣೆ ಪಡೆಯಲು, ತನ್ನ ಸಾಮರ್ಥ್ಯದಿಂದ ಇದಾಯಿತು ಎಂದೆಲ್ಲ ಆಸೆ ಪಡುವುದು, ಭಾವಿಸುವುದು ಸರಿಯಾದ ಪ್ರಜ್ಞೆಯಲ್ಲ. ಆದುದರಿಂದ, ಅವ್ಯಾಜ ಕರುಣೆ ಎಂದಾದರೂ ಭಗವಂತನು ಹೇಗೆ ತನ್ನ ಕೃಪೆಯನ್ನು ತೋರುವನು ಎಂಬುದರ ಆಧಾರದ ಮೇಲೆ ಇಲ್ಲಿ ಹೇಳಲಾಗಿದೆ. ತನ್ನ ಭಕ್ತನು ಪ್ರಾಮಾಣಿಕವಾಗಿ ತನ್ನ ಸೇವೆ ಗೈಯಲು ಅಪೇಕ್ಷಿಸುವುದನ್ನು ಭಗವಂತನು ನೋಡಿದರೆ, ಅಂತಹ ಆಧ್ಯಾತ್ಮಿಕ ಸಿದ್ಧಿಯು ಲೌಕಿಕ ಅರ್ಹತೆಯಿಂದ ಸೀಮಿತವಾಗುವುದಿಲ್ಲ. ಇಲ್ಲಿಯೂ ಕೂಡ ಅನೇಕ ಬಾರಿ ಭಕ್ತರು ಉನ್ನತ ಅರ್ಹತೆ ಹೊಂದಿದ್ದರೂ ಕೂಡ ಸೂಕ್ತ ಪ್ರಮಾಣದಲ್ಲಿ ಅವರಿಗೆ ಫಲವು ಸಿಗದಿರಬಹುದು. ಆದುದರಿಂದ ಲೌಕಿಕ ಸಾಮರ್ಥ್ಯ ಮತ್ತು ಭಗವಂತನಿಗೆ ಭಕ್ತರು ಸಲ್ಲಿಸುವುದರ ನಡುವೆ ಪರಸ್ಪರ ಸಂಬಂಧದ ಅಗತ್ಯವನ್ನು ನಾವು ಕಾಣುವುದಿಲ್ಲ. ಅಂತಹ ಆಧ್ಯಾತ್ಮಿಕ ಪರಿಪೂರ್ಣತೆಯು ಲೌಕಿಕ ಅರ್ಹತೆಯಿಂದ ಸೀಮಿತವಾಗಿರುವುದಿಲ್ಲ, ಅದು ಆಧ್ಯಾತ್ಮಿಕ ಸೇವೆ ಸಲ್ಲಿಸಲು ವ್ಯಕ್ತಿಗಿರುವ ಪ್ರಾಮಾಣಿಕ ಪ್ರಯತ್ನದ ಬಲದಿಂದ ಅಭಿವೃದ್ಧಿ ಹೊಂದಿರುತ್ತದೆ.

ಅಂದರೆ, ದೇವರು ನೋಡುವುದೇನು? ಭಗವಂತನು ಏನು ಗಮನಿಸುತ್ತಿದ್ದಾನೆ? ಪ್ರಭುವಿಗೆ ನಿಜವಾಗಿಯೂ ಯಾವುದರಲ್ಲಿ ಆಸಕ್ತಿ? ಆಧ್ಯಾತ್ಮಿಕ ಸೇವೆ ಸಲ್ಲಿಸುವ ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ, ಭಾವ ಗ್ರಾಹಿ ಜನಾರ್ದನ, ಎಲ್ಲ ಶಕ್ತಿಯೂ ಅವನಿಂದ ಬರುತ್ತಿದೆ. ಅವನಿಗೆ ನಮ್ಮ ಪ್ರತಿಭೆ ಮತ್ತು ಕೌಶಲ, ನೈಪುಣ್ಯದ ಪ್ರದರ್ಶನದಲ್ಲಿ ಆಸಕ್ತಿ ಇಲ್ಲ. ಅವನ ಸೇವೆ ಮಾಡುವ ನಮ್ಮ ಆಸೆಯ ಬಗೆಗಷ್ಟೇ ಅವನಿಗೆ ಆಸಕ್ತಿ ಇರುವುದು. ಎಲ್ಲ ಅವನಿಂದಲೇ ಎಂಬ ಪ್ರಜ್ಞೆ ಹೊಂದುವ ನಮ್ಮ ಅಪೇಕ್ಷೆಯಲ್ಲಿ ಅವನಿಗೆ ಆಸಕ್ತಿ. ಆಧ್ಯಾತ್ಮಿಕ ಪರಿಪೂರ್ಣತೆಗೆ ಸ್ವಯಂ ಪ್ರಯತ್ನವೊಂದೇ ಅರ್ಹತೆ. ಹೀಗಾಗಿ ಭಕ್ತರ ಜೊತೆಯಲ್ಲಿ ನಾವು ಒಟ್ಟಾಗಿ ಜೀವಿಸಿದಾಗ ನಾವೆಲ್ಲರೂ ನಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ಮುಂದುವರಿಸುತ್ತೇವೆ. ಈ ಪಥದಲ್ಲಿ ನಡೆಯುವ ಭಕ್ತನು ಮುಂದೆ ಲೌಕಿಕ ಮನಸ್ಥಿತಿಯಿಂದ ಬೇರೆ ದಿಕ್ಕಿಗೆ ತಿರುಗಿದರೆ ಅಂತಹ ಭಕ್ತನಿಗೆ ಏನಾಗುತ್ತದೆಂದು ಅರ್ಜುನನು ಕೃಷ್ಣನಲ್ಲಿ ಕೇಳುತ್ತಾನೆ. ಅದರಲ್ಲಿ ನಷ್ಟ ಅಥವಾ ಕುಂದಾಗುವುದೇನೂ ಇಲ್ಲ, ಅವನು ತನ್ನ ಹಿಂದಿನ ಜನ್ಮದಲ್ಲಿ ಎಲ್ಲಿ ಬಿಟ್ಟಿದ್ದನೋ ಅಲ್ಲಿಂದ ಮುಂದುವರಿಸುತ್ತಾನೆ ಎಂದು ಕೃಷ್ಣ ಉತ್ತರಿಸಿದ್ದಾನೆ. ಆದುದರಿಂದ ಭಕ್ತರಲ್ಲಿ ಭಿನ್ನವಾದ ಪ್ರಾಮಾಣಿಕತೆ ಅಥವಾ ಶ್ರದ್ಧೆಯನ್ನು ನಾವು ಕಾಣುತ್ತೇವೆ. ನಮ್ಮ ಸಾಮರ್ಥ್ಯ, ನಮ್ಮ ಕೌಶಲ, ನಮ್ಮ ಪ್ರಾಮಾಣಿಕತೆ, ಆಧ್ಯಾತ್ಮಿಕ ಪರಿಪೂರ್ಣತೆ ಸಾಧಿಸಬೇಕೆಂಬ ಆಸೆ ಈ ವಿಷಯಗಳಲ್ಲಿ ನಾವೆಲ್ಲರೂ ಭಿನ್ನ. ಕೆಲವರು ತುಂಬ ಗಂಭೀರ, ಇನ್ನೂ ಕೆಲವರು ಅಷ್ಟೇನೂ ಗಂಭೀರವಾಗಿಲ್ಲದಿರಬಹುದು. ಭಗವಂತ ಕೂಡ ಅದರಂತೆ ಪ್ರತಿಕ್ರಿಯಿಸುತ್ತಾನೆ. ಇಲ್ಲಿ ಹೇಳಿರುವಂತೆ, ಅಂತಹ ಆಧ್ಯಾತ್ಮಿಕ ಪರಿಪೂರ್ಣತೆಯು ಲೌಕಿಕ ಅರ್ಹತೆ, ವಯಸ್ಸು, ವರ್ಷಗಳು, ಕೌಶಲಗಳಿಗೆ ಸೀಮಿತವಾಗಿಲ್ಲ. ಆದರೆ ಅದು ಅಲೌಕಿಕ ಸೇವೆಯನ್ನು ನೀಡುವ ಪ್ರಾಮಾಣಿಕ ಪ್ರಯತ್ನಕ್ಕೆ ಸೀಮಿತವಾಗಿದೆ. ನಾವು ಜೊತೆಯಾಗಿದ್ದರೆ ಭಗವಂತನು ಎಷ್ಟು ಕರುಣಾಮಯಿ ಎಂಬುವುದನ್ನು ನಾವು ನೋಡಬಹುದು.

ಇಲ್ಲಿ ಕೃಷ್ಣ ಹೇಳುವಂತೆ, “ನನ್ನ ಅವ್ಯಾಜ ಕರುಣೆಯಿಂದಾಗಿ ನೀನು ತಪಸ್ಸು ಮಾಡುವುದು ಸಾಧ್ಯವಾಯಿತು.” ಅಂದರೆ ಅವನ ಕರುಣೆ, ಕೃಪೆ ಇದ್ದರೆ ಏನೂ ಮಾಡುವುದು ಸಾಧ್ಯ. ಪ್ರಭುವು ಕೆಲವು ಭಕ್ತರಿಗೆ ಹೆಚ್ಚಿನ `ಒಲವು’ ಅಥವಾ ವಿಶೇಷ ಕೃಪೆ ತೋರಿರುವುದನ್ನು ನಾವು ಕೆಲವು ಬಾರಿ ನೋಡುತ್ತೇವೆ. ಅವನು ನುಗ್ಗುತ್ತಾ ಅಥವಾ ಕುಣಿದು ಕುಪ್ಪಳಿಸುತ್ತಾ ಮುಂದುವರಿಯುತ್ತಾನೆ, ಅವನಿಗೆ ಹೆಚ್ಚಿನ ಜವಾಬ್ದಾರಿ ಸಿಗುತ್ತಿದೆ, ಅವನಿಗೆ ಹೆಚ್ಚಿನ ಸೇವೆ ಲಭ್ಯವಾಗುತ್ತಿದೆ, ಅವನಿಗೆ `ಉತ್ತಮ ಸೇವೆ’ ಸಿಗುತ್ತಿದೆ ಇತ್ಯಾದಿ. ಉತ್ತಮ ಸೇವೆ, ಉನ್ನತ ಸೇವೆ, ಕೆಳ ಮಟ್ಟದ ಸೇವೆ ಇಂತಹವುಗಳ ಬಗೆಗೆ ನಮಗೆ ನಮ್ಮದೇ ಗ್ರಹಿಕೆ ಇರುತ್ತದೆ. ಆದುದರಿಂದ ಕೆಲವು ಭಕ್ತರಿಗೆ `ಉತ್ತಮ ಸೇವೆ’ ಲಭ್ಯವಾಗುತ್ತಿದೆ ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತೇವೆ. ಅಂತಹ ಮನಸ್ಥಿತಿಯನ್ನು ಸರಿ ದಾರಿಯಲ್ಲಿ ಕಾಪಾಡಲು ಪ್ರಭುಪಾದರು ಹೇಳುತ್ತಾರೆ, ದೈವ ಸೋದರರ ಬಗೆಗೆ ಅನಗತ್ಯವಾಗಿ ಅಸೂಯೆಪಡಬಾರದು. ಕೆಲವರು ತ್ವರಿತವಾಗಿ ಮುನ್ನಡೆಯುವುದನ್ನು ನಾವು ನೋಡುತ್ತೇವೆ, ಕೆಲವರಿಗೆ ಹೆಚ್ಚು ಸಾಮರ್ಥ್ಯ ಸಿಗುವುದನ್ನು ನೋಡುತ್ತೇವೆ, ಕೆಲವರಿಗೆ ಹೆಚ್ಚು ಸೌಲಭ್ಯ ಸಿಗುವುದನ್ನು ನೋಡುತ್ತೇವೆ. ಆದರೆ ನಾವು ದೈವ ಸಹೋದರರ ಬಗೆಗೆ ಅನಗತ್ಯವಾಗಿ ಅಸೂಯೆ ಪಡಬಾರದು. ಬದಲಾಗಿ ದೈವ ಸಹೋದರರು ಕೃಷ್ಣ ಪ್ರಜ್ಞೆಯಲ್ಲಿ ಹೆಚ್ಚು ಅರಿವು ಹೊಂದಿ ಮುಂದುವರಿದರೆ ನಾವು ಸಂತೋಷಪಡಬೇಕು. ಯಾರಾದರೂ ಮುನ್ನಡೆ ಸಾಧಿಸಿದರೆ, ಲೌಕಿಕ ಪ್ರಜ್ಞೆಯಲ್ಲಿದ್ದಾಗ ಅಸೂಯೆಪಡುತ್ತೇವೆ. ಆದರೆ ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಅದೆಲ್ಲ ಭಗವಂತನನ್ನು ತೃಪ್ತಿಪಡಿಸುವುದಾಗಿದೆ. ಯಾರಾದರೂ ಮುನ್ನಡೆ ಸಾಧಿಸುತ್ತಿದ್ದರೆ ನಾವು ಅದನ್ನು ಮೆಚ್ಚಬೇಕು. ದೈವ ಸೋದರರು ಮುನ್ನಡೆದರೆ ಸಂತೋಷಪಡಬೇಕು. ಪರ ದುಃಖ ದುಃಖಿ. ಲೌಕಿಕ ಪ್ರಜ್ಞೆಯಲ್ಲಿ ಪರ ದುಃಖ ಸುಖಿ. ವೈಕುಂಠ ಪ್ರಜ್ಞೆಯಲ್ಲಿ ಹೇಗೆ? ನಿಮ್ಮ ಸೋದರ ಪ್ರಗತಿ ಹೊಂದುತ್ತಿದ್ದರೆ, “ಓ, ಅವನೆಷ್ಟು ಒಳ್ಳೆಯವನು. ಅವನು ಚೆನ್ನಾಗಿ ಭಗವಂತನ ಸೇವೆ ಮಾಡಿದ್ದಾನೆ. ಪ್ರಭುವು ಇದರಿಂದ ತೃಪ್ತನಾಗಿರುವುದರಿಂದ ಅವನು ಚೆನ್ನಾಗಿ ಪ್ರಗತಿ ಹೊಂದುತ್ತಿದ್ದಾನೆ” ಎಂದು ನೀವು ಯೋಚಿಸಬೇಕು. ಲೌಕಿಕ ಚಿಂತನೆಯಲ್ಲಿ? “ಓ, ಅವನು ಮುನ್ನಡೆದಿದ್ದಾನೆ. ನಾನು ಅವನನ್ನು ತಡೆಯುವೆ” ಎಂದು ಯೋಚಿಸಲಾಗುತ್ತದೆ. ಆದುದರಿಂದ ಅನೇಕ ಸಂದರ್ಭದಲ್ಲಿ ಈ ಅಸೂಯೆಯು ಬದುಕಿನ ಸ್ಥಿತಿಯ ಭಾಗ, ಇದು ಲೌಕಿಕ ಸ್ಥಿತಿ, ಕೆಲವು ಬಾರಿ ಇದು ರೂಢಿ ಅಥವಾ ಚಟ. ಯಾರಾದರೂ ಮುನ್ನಡೆ ಸಾಧಿಸುತ್ತಿರುವುದನ್ನು ನೋಡಿದ ಕೂಡಲೇ ನಾವು ಅಸೂಯೆ ಪಡುತ್ತೇವೆ, ಕೆಲವು ಬಾರಿ ಹೋಲಿಸಲು ಆರಂಭಿಸುತ್ತೇವೆ, ಕೆಲವು ಬಾರಿ ಪರಿಸ್ಥಿತಿಯನ್ನು ದೂಷಿಸುತ್ತೇವೆ. ಇಂತಹ ಸ್ಥಿತಿಯಲ್ಲಿ ಭಕ್ತನು ಎಂದಿಗೂ ನೆಮ್ಮದಿಯಿಂದ ಇರುವುದು ಸಾಧ್ಯವಿಲ್ಲ.

ಒಂದು ಕಾಗೆ ಇತ್ತು. ಅದು ಸಂತೋಷದಿಂದ, ಆನಂದದಿಂದ ಬದುಕಿತ್ತು. ಅದು ಒಂದು ದಿನ ಹಂಸವೊಂದನ್ನು ನೋಡಿತು. ಹಂಸವು ಬಿಳಿ ಬಣ್ಣದ್ದೆಂದು ಎಲ್ಲರಿಗೂ ಗೊತ್ತು. ಕಪ್ಪು ಕಾಗೆಗೆ ಹಂಸವನ್ನು ನೋಡಿ “ಇದೆಷ್ಟು ಅದೃಷ್ಟಶಾಲಿ, ಎಂತಹ ಬಿಳಿ ದೇಹ ಹೊಂದಿದೆ! ನನ್ನ ದೇಹ ಅದೆಷ್ಟು ಕಪ್ಪು!” ಎಂದು ಪೇಚಾಡಿಕೊಂಡಿತು. ತನಗೂ ಹಂಸದಂತೆ ಬಿಳಿ ದೇಹವಿದ್ದಿದ್ದರೆ ಸಂತೋಷಪಡುತ್ತಿದ್ದೆ ಎಂದುಕೊಂಡ ಕಾಗೆಯು ಹಂಸದ ಬಳಿಗೆ ಹೋಯಿತು. “ನಿನಗೆ ಎಂತಹ ಸುಂದರ ದೇಹವಿದೆ! ನೀನು ಅದೃಷ್ಟಶಾಲಿ. ನೀನು ಅತ್ಯಂತ ಸಂತೋಷದವನೆಂದು ನಾನು ಭಾವಿಸುವೆ” ಎಂದು ಕಾಗೆ ಹೇಳಿತು. ಅದಕ್ಕೆ ಹಂಸ ಉತ್ತರಿಸಿತು, “ಹೌದು, ನಾನೂ ಹಾಗೆಯೇ ಭಾವಿಸಿದ್ದೆ. ಒಂದು ದಿನ ಗಿಳಿಯೊಂದನ್ನು ನೋಡುವವರೆಗೂ ನಾನೂ ಹಾಗೇ ಯೋಚಿಸಿದೆ. ನಾನೇ ಹೆಚ್ಚು ಸುಖಿ ಎಂದುಕೊಂಡಿದ್ದೆ. ಗಿಳಿಯು ಎಷ್ಟು ಸುಂದರ! ನನಗೆ ಒಂದೇ ಬಣ್ಣ. ಅದಕ್ಕೆ ಎರಡು ಬಣ್ಣಗಳು. ಅದರ ಗರಿ ಹಸುರಾಗಿದ್ದರೆ ಕೊಕ್ಕು ಕೆಂಪು ಬಣ್ಣ. ಅದನ್ನು ನೋಡಿದ ಕೂಡಲೇ ಅದೇ ಸುಖಿ ಎಂದು ಅಂದುಕೊಂಡೆ. ಅದರಂತೆ ನನಗೂ ಬಣ್ಣಗಳಿದ್ದಿದ್ದರೆ?” “ಹಾಗಾದರೆ ಗಿಣಿಯು ಹೆಚ್ಚು ಅದೃಷ್ಟಶಾಲಿ ಮತ್ತು ಸುಖಿ ಇರಬೇಕು. ಹಂಸ ಸರಿಯಾಗಿಯೇ ಯೋಚಿಸಿರಬಹುದು” ಎಂದು ಅಂದುಕೊಂಡ ಕಾಗೆಯು ಗಿಳಿಯ ಬಳಿಗೆ ಹೋಯಿತು. “ನೀನು ನಿಜಕ್ಕೂ ಅದೃಷ್ಟಶಾಲಿ. ಬಣ್ಣ ಬಣ್ಣದ ದೇಹ ನಿನ್ನದು. ನೀನು ತುಂಬ ಸಂತೋಷದಿಂದಿರಬಹುದು” ಎಂದು ಕಾಗೆಯು ಗಿಳಿಗೆ ಹೇಳಿತು. “ಹೌದು, ನಾನೂ ಹಾಗೇ ಅಂದುಕೊಂಡಿದ್ದೆ. ಆದರೆ ಒಂದು ದಿನ ನವಿಲನ್ನು ನೋಡಿದಾಗ ಅದೇ ಹೆಚ್ಚು ಸುಖಿ ಎನ್ನಿಸಿತು. ಏಕೆಂದರೆ ನವಿಲು ತನ್ನ ಗರಿಗಳನ್ನು ಹರಡಿಕೊಂಡು ಸಂಚರಿಸುತ್ತಿತ್ತು. ನವಿಲಿನ ಸೌಂದರ್ಯದಿಂದ ಆಕರ್ಷಿತರಾದ ಜನರು ಅದರೊಂದಿಗೆ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ಅದನ್ನು ನೋಡಿದಾಗ ನನಗೆ ನವಿಲೇ ಹೆಚ್ಚು ಸುಖಿ ಎನ್ನಿಸಿತು.” ನವಿಲು ಈಗ ಆಪತ್ತಿನಲ್ಲಿದೆ. ಜನರು ಅದರ ಸೌಂದರ್ಯಕ್ಕೆ ಮರುಳಾಗಿ, ನವಿಲು ಗರಿಗಾಗಿ ಅದನ್ನು ಕೊಲ್ಲುತ್ತಿದ್ದಾರೆ. ಕಾಗೆಯು ನವಿಲಿನ ಬಳಿಗೆ ಹೋಯಿತು “ನೀನು ಎಷ್ಟು ಸುಂದರ! ಎಲ್ಲರೂ ನಿನ್ನ ಜೊತೆ ಚಿತ್ರ ತೆಗೆಸಿಕೊಳ್ಳುತ್ತಾರೆ. ನಿನಗೆ ತುಂಬ ಸಂತೋಷವಿರಬಹುದು” ಎಂದಿತು. ಅದಕ್ಕೆ ನವಿಲು ಉತ್ತರಿಸಿತು, “ಹೌದು, ನಾನು ಸುಂದರವಾಗಿದ್ದೇನೆ ಎಂದು ಜನರು ನನ್ನ ಬಳಿಗೆ ಬರುತ್ತಾರೆ. ಆದರೆ ಅಧಿಕಾರಿಗಳು ನನ್ನನ್ನು ಮೃಗಾಲಯದಲ್ಲಿ ಬಂಧಿಸಿಟ್ಟಿದ್ದಾರೆ. ನಾನು ಅಲ್ಲಿ ಇಲ್ಲಿ ಸ್ವಲ್ಪ ಸಂಚರಿಸುವೆ. ಇಲ್ಲಿಯೂ ಅನೇಕ ಗಿಳಿಗಳಿವೆ. ಆದರೆ ಕಾಗೆ ಮಾತ್ರ ಮೃಗಾಲಯದಲ್ಲಿ ಇಲ್ಲ. ಅದು ಅದೃಷ್ಟಶಾಲಿ. ಏಕೆಂದರೆ ಅದು ಸ್ವತಂತ್ರವಾಗಿ, ಹಾಯಾಗಿ ಆಗಸದಲ್ಲಿ ಹಾರಾಡುತ್ತಿರುತ್ತದೆ. ನಾನು ಅದನ್ನು ನೋಡಿ `ನಾನೂ ಕಾಗೆ ಆಗಬಾರದಿತ್ತೇ’ ಎಂದು ಅಂದುಕೊಳ್ಳುತ್ತೇನೆ.” ಆಗ ಕಾಗೆ ಯೋಚಿಸಿತು, “ನಾನೇ ಸುಖಿ. ಸ್ವತಂತ್ರವಾಗಿ ಹಾರಾಡಿಕೊಂಡಿದ್ದೇನೆ.”
ಇದು ಲೌಕಿಕ ಅಸ್ತಿತ್ವ. ಯಾರೂ ಸುಖಿಗಳಲ್ಲ. ಅನೇಕ ಬಾರಿ ನಾವು ಶ್ರೀಮಂತರೊಂದಿಗೆ ಮಾತನಾಡುತ್ತೇವೆ. ಅವರು ದೊಡ್ಡ ಮನೆಗಳಲ್ಲಿ ಇರುತ್ತಾರೆ. ಎಲ್ಲ ಸೌಕರ್ಯಗಳೂ ಇರುತ್ತವೆ. ಬಾಹ್ಯಕ್ಕೆ ಅದು ಸ್ವರ್ಗವೆನಿಸುತ್ತದೆ. ಆದರೆ ನೀವು ಅವರಿಗೆ ನಿಕಟವಾದಾಗ ಅವರು ಸಮಸ್ಯೆಗಳ ಕಂತೆಯನ್ನು ಬಿಚ್ಚುತ್ತಾರೆ. ಇದು ಲೌಕಿಕ ಅಸ್ತಿತ್ವ. ಯಾರೂ ಸುಖಿಗಳಲ್ಲ. ಆದರೆ ಪ್ರತಿಯೊಬ್ಬರೂ ಹೋಲಿಸಿಕೊಳ್ಳುತ್ತಾರೆ ಮತ್ತು ತಾವೂ ಅವರಂತೆ ಇದ್ದಿದ್ದರೆ ಎಂದುಕೊಳ್ಳುತ್ತಾರೆ. ಇದು ಅನಂತಕಾಲದಿಂದಲೂ ನಡೆದುಕೊಂಡು ಬರುತ್ತಿರುವ ರೀತಿ.

ಆದುದರಿಂದ ಕೃಷ್ಣ ಪ್ರಜ್ಞೆಯಲ್ಲಿ ಮುನ್ನಡೆವ ಭಕ್ತನು ಈ ಅವಿವೇಕತನ ಮತ್ತು ಪಾಶವನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಅವನು ಅನಗತ್ಯವಾಗಿ ಅಸೂಯೆಪಡುವುದಿಲ್ಲ ಮತ್ತು ಬೇರೊಬ್ಬರಂತೆ ಇರಲು ಪ್ರಯತ್ನಿಸುವುದೂ ಇಲ್ಲ. ಭಗವಂತನು ಕೊಟ್ಟಿರುವುದರಲ್ಲಿ ಅವನು ತೃಪ್ತನಾಗಿರುತ್ತಾನೆ ಮತ್ತು ಅವನಿಗೆ ಪರಿಶುದ್ಧತೆಯಲ್ಲಿಯೇ ಹೆಚ್ಚು ಆಸಕ್ತಿ ಇರುತ್ತದೆ. ಬಾಹ್ಯ ಬೆಳವಣಿಗೆಗಿಂತ ಅವನು ತನ್ನ ಆಂತರಿಕ ಪ್ರಗತಿ, ಪ್ರಜ್ಞೆಯಲ್ಲಿನ ಮುನ್ನಡೆಯಲ್ಲಿ ಹೆಚ್ಚು ಆಸಕ್ತನಾಗಿರುತ್ತಾನೆ. ವ್ಯಕ್ತಿಯು ತನ್ನ ಸುಧಾರಣೆಗಾಗಿ ಎಷ್ಟು ಕಾರ್ಯಮಗ್ನನಾಗಿರಬೇಕೆಂದರೆ ಬೇರೆಯವರನ್ನು ಟೀಕಿಸಲು ಅಥವಾ ಇತರರಲ್ಲಿ ತಪ್ಪು ಕಂಡುಹಿಡಿಯಲು ಅವನಿಗೆ ಸಮಯವೇ ಇರಬಾರದು ಎಂದು ಯಾರೋ ಹೇಳಿದ್ದಾರೆ. ನಾವು ಕೃಷ್ಣನನ್ನು ಕುರಿತು ಯೋಚಿಸುತ್ತ, ಕೃಷ್ಣ ಪ್ರಜ್ಞೆಯ ಸುಧಾರಣೆಯತ್ತ ಗಮನ ಕೊಡುವುದರಲ್ಲಿ ಅವಿಶ್ರಾಂತವಾಗಿ ಕಾರ್ಯ ಮಗ್ನರಾದರೆ ನಾವು ಈ ಅಸೂಯೆಯ ಪಾಶದಲ್ಲಿ ಸಿಲುಕುವುದಿಲ್ಲ. ಅದೇ ರೀತಿ ನಮ್ಮ ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ “ಓ, ನಮ್ಮ ದೈವ ಸೋದರ ಜನಪ್ರಿಯನಾಗಿದ್ದಾನೆ!” ಎಂದು ಅಸೂಯೆಪಟ್ಟರೆ? ಕೆಲವರು ಚೆನ್ನಾಗಿ ಹಾಡಬಹುದು, ಕೆಲವರು ಚೆನ್ನಾಗಿ ಉಪನ್ಯಾಸ ನೀಡಬಹುದು ಮತ್ತು ಅದರಿಂದ ಅವರು ಜನಪ್ರಿಯರಾಗಬಹುದು. ಅವರ ಪ್ರಗತಿ ಪಥದಲ್ಲಿ ಅಡೆತಡೆ ಮಾಡೋಣ ಎಂದುಕೊಂಡರೆ ಅದು ಲೌಕಿಕ. ಇದು ಲೌಕಿಕ ಜಗತ್ತಿನಲ್ಲಿ ಸಂಭವಿಸುತ್ತದೆ. ಒಬ್ಬರು ಮತ್ತೊಬ್ಬರ ಕಾಲೆಳೆಯಬಹುದು, ಬೆನ್ನಿಗೆ ಚೂರಿ ಹಾಕಬಹುದು, ಆದರೆ ನಾವೂ ಕೂಡ ಅದೇ ರೀತಿ ಮಾಡಿದರೆ ಅದು ಐಹಿಕ ಪ್ರಜ್ಞೆ. ಕೆಲವು ಸಮಯದಲ್ಲಿ ನಾವು ಸ್ವಭಾವ ಅಥವಾ ಅಭ್ಯಾಸ ಬಲದಿಂದ ಅಸಹಾಯಕರಾಗಿ ವರ್ತಿಸಬಹುದು. ಆದರೆ ನಾವು ಪತನಗೊಂಡಿರುವುದು ಮತ್ತು ನಾವೆಂತಹ ಪ್ರಜ್ಞೆಹೊಂದಿದ್ದೇವೆ ಎಂಬ ಬಗೆಗೆ ನಮಗೆ ಆಂತರಿಕವಾಗಿ ಅರಿವು ಇರಬೇಕು.
ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, (4.11) ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮಿ ಅಹಂ, “ಯಾರು ನನಗೆ ಹೇಗೆ ಶರಣಾಗತರಾಗುತ್ತಾರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ.” ನಾವೆಲ್ಲರೂ ವೈಯಕ್ತಿಕ ಆತ್ಮಗಳು, ನಮಗೆಲ್ಲರಿಗೂ ವೈಯಕ್ತಿಕ ಲೆಕ್ಕವಿದೆ, ಶರಣಾಗತಿಯಲ್ಲಿ ನಮಗೆಲ್ಲರಿಗೂ ಭಿನ್ನ ಪ್ರಮಾಣವಿದೆ, ಆಧ್ಯಾತ್ಮಿಕ ಪ್ರಗತಿಯಲ್ಲಿ ನಾವೆಲ್ಲರೂ ಭಿನ್ನ ಮಟ್ಟದಲ್ಲಿದ್ದೇವೆ, ನಮಗೆಲ್ಲರಿಗೂ ಭಿನ್ನವಾದ ಪ್ರಜ್ಞೆ ಇದೆ, ಆದುದರಿಂದ ಭಗವಂತನು ಅದಕ್ಕೆ ಅನುಗುಣವಾಗಿ ಅನುಗ್ರಹಿಸುತ್ತಾನೆ. ಆದುದರಿಂದ ಭಕ್ತರು ಅಸೂಯೆಯಿಂದ ಸಂಪೂರ್ಣವಾಗಿ ಮುಕ್ತರಾಗಿರಬೇಕು. ಬೇರೆ ಭಕ್ತರ ಬಗೆಗೆ ಅಸೂಯೆಪಡುವುದು ವೈಷ್ಣವ ಅಪರಾಧ. ಲೌಕಿಕ ಜಗತ್ತಿನಲ್ಲಿ ಇದು ಉಳಿಯುವ ಸಾಮರ್ಥ್ಯ, ನಿಜ. ಅದು ಸಾಗುತ್ತಿರುತ್ತದೆ. ಆದರೆ ಭಕ್ತರ ಸಮುದಾಯದಲ್ಲಿ ಅವನಿಗೆ ಉತ್ತಮ ಮತ್ತು ಹೆಚ್ಚು ಜವಾಬ್ದಾರಿಯುತ ಸೇವೆಯ ಅವಕಾಶ ದೊರೆತಿದೆ, ನನಗೆ ಅದು ಇಲ್ಲ ಎಂದು ಅಸೂಯೆಪಡಬಹುದು. ಒಂದು ರೀತಿಯಲ್ಲಿ ವ್ಯಕ್ತಿಗೆ ಸರಳ ಸೇವೆಯ ಅವಕಾಶ ದೊರೆತರೆ ಒಳ್ಳೆಯದೇ, ಏಕೆಂದರೆ ಅವನು ಅಹಂಕಾರ ಎಂಬ ಅನರ್ಥದೊಂದಿಗೆ ಹೋರಾಡಬೇಕಾಗಿಲ್ಲ. ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಬೇಕಾದರೆ, ಒಂದು ರೀತಿಯಲ್ಲಿ ನಾವು ಹುಲ್ಲಿಗಿಂತ ಮೃದು, ಮರಕ್ಕಿಂತ ತಾಳ್ಮೆಯಿಂದಿರಬೇಕು ಹಾಗೂ ತಳ ಮಟ್ಟದ ಸ್ಥಾನವು ಉತ್ತಮ ಮತ್ತು ಹೆಚ್ಚು ನೆರವಾಗುವಂತಹುದು. ಆದರೆ ಭಗವಂತನ ಸೇವೆಯಲ್ಲಿ ಸ್ವಲ್ಪ ಅಧಿಕಾರ, ಸ್ವಲ್ಪ ಸ್ಥಾನವಿರುವಂತಹ ಸೇವೆಗಳನ್ನು ಸ್ವೀಕರಿಸಬೇಕಾಗುತ್ತದೆ. ಕೃಷ್ಣ ಪ್ರಜ್ಞೆಯಲ್ಲಿ ಮುನ್ನಡೆದಿರುವವರು ಪರಸ್ಪರ ಅಸೂಯೆಪಡಬಾರದು ಅಥವಾ ಜಗಳವಾಡಬಾರದು. ಅಂತಹ ಭಾವನೆಗಳನ್ನು ಬದಿಗೊತ್ತಿ ಪರಸ್ಪರರ ಶುದ್ಧೀಕರಣಕ್ಕಾಗಿ ಅವರು ಜತೆಗೂಡಿ ಭಗವಂತನ ವೈಭವಗಳ ಜಪಮಾಡಬೇಕು.

ನಾವು ಒಳ್ಳೆಯ ಪ್ರಜ್ಞೆ, ಕೃಷ್ಣ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕೆಂದರೆ ನಾವು ಇತರರೊಂದಿಗೆ ಹೋಲಿಸಿಕೊಳ್ಳಬಾರದು. ಕಾಗೆಯಂತೆ ಯೋಚಿಸಬಾರದು. ನಾವು ಹಂಸ, ಕಾಗೆ ಅಥವಾ ಏನೂ ಆಗಿರಬಹುದು, ನಮಗೆ ಭಗವಂತ ನೀಡಿದ ಅನುಗ್ರಹದ ಸ್ಥಾನದಲ್ಲಿ ನಾವು ನಮ್ಮ ಪ್ರಜ್ಞೆಯ ಸುಧಾರಣೆಗೆ ಶ್ರಮಿಸಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಸವಾಲುಗಳು, ಕಷ್ಟಗಳು ಇರುತ್ತವೆ, ಆದರೆ ನಾವು ಒಂದು ವಿಷಯಕ್ಕೆ ಶ್ರಮಿಸೋಣ – ನಮ್ಮ ಸ್ಥಾನಕ್ಕೆ ಅಲ್ಲ, ಹೆಚ್ಚು ಕೃಷ್ಣ ಪ್ರಜ್ಞಾವಂತರಾಗಲು ಶ್ರಮಿಸೋಣ. ಕೃಷ್ಣನ ಮೇಲೆ ಹೆಚ್ಚು ಅವಲಂಬಿತರಾಗಲು ಶ್ರಮಿಸೋಣ. ನಾವು ಯಾವುದನ್ನೋ ಅಪೇಕ್ಷಿಸಬಹುದು, ಯಾವುದಕ್ಕೋ ದುಡಿಯುತ್ತಿರಬಹುದು. ಹೇಗೆ ಕೃಷ್ಣನನ್ನು ಹೆಚ್ಚು ಸಂತೋಷ ಪಡಿಸುವುದು ಮತ್ತು ಹೇಗೆ ಹೆಚ್ಚು ಕೃಷ್ಣ ಪ್ರಜ್ಞಾವಂತರಾಗುವುದು ಎಂಬುದೇ ಒಬ್ಬ ಭಕ್ತನ ಗುರಿಯಾಗಿರಬೇಕು.
ಆದುದರಿಂದ ಇಲ್ಲಿ, ಪ್ರಭುಪಾದರು ಭಾವಾರ್ಥದಲ್ಲಿ ತಿಳಿಸಿರುವುದೇನೆಂದರೆ, ಜೀವಿಯು ಭಗವಂತನ ಸೇವೆ ಕೈಗೊಳ್ಳಲು ಅಪೇಕ್ಷಿಸಿದಾಗ ಪ್ರಭುವು ಅವರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾನೆ. ಅದು ಚೈತ್ಯ ಗುರು ಅಥವಾ ಆಧ್ಯಾತ್ಮಿಕ ಗುರುವಿನ ಮೂಲಕ ಅಥವಾ ಇಲ್ಲದೆ ಸೇವೆ ಸಲ್ಲಿಸುವುದಕ್ಕೆ ಭಗವಂತನು ತನ್ನ ಭಕ್ತರಿಗೆ ನೆರವಾಗುತ್ತಾನೆ.
ಈ ವರ್ಷದ (2015) ಮಾರ್ಚ್ 30 ರಂದು ಭಕ್ತರಾದ ರಸಜ್ಞ ದಾಸ ಅವರು ಈ ಲೋಕವನ್ನು ತ್ಯಜಿಸಿದರು. ಅವರು ಶ್ರೀಲ ಪ್ರಭುಪಾದರಿಂದ ದೀಕ್ಷೆ ಪಡೆದಿದ್ದರು. ಅವರು 8 ದಿನಗಳ ಹಿಂದೆಯಷ್ಟೇ ವೃಂದಾವನದಲ್ಲಿ ತಮ್ಮ ದೇಹ ತ್ಯಾಗ ಮಾಡಿದರು. ಈ ಬಗ್ಗೆ ಸಣ್ಣ ಮಾಹಿತಿ ಪ್ರಸರಣವಾಗುತ್ತಿದೆ. ಅವರು ಬ್ರೆಜಿಲ್ನಲ್ಲಿ ಬೋಸುತ್ತಿದ್ದರು. ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ಸಂಕೀರ್ತನೆ ನಡೆಸುತ್ತಿದ್ದರು. ಅವರು ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದರು. ಅವರು ಒಳ್ಳೆಯ ಬೋಧಕ ಮತ್ತು ಪುಸ್ತಕ ವಿತರಕರಾಗಿದ್ದರು. ಅವರ ಹಿನ್ನೆಲೆಯನ್ನು ತಿಳಿದುಕೊಂಡರೆ ನಿಮಗೆ ಇದು ಅರ್ಥವಾಗುತ್ತದೆ.
ಒಮ್ಮೆ ಅವರು ಪ್ಯಾರಿಸ್ನ ಮಂದಿರದ ಬಾಗಿಲು ತಟ್ಟಿದರು. ಭಕ್ತರು ಬಾಗಿಲು ತೆರೆದಾಗ ಅಲ್ಲಿ ಕೊಳಕಾದ, ಕಪ್ಪು ಮುಖದ ವ್ಯಕ್ತಿಯನ್ನು ಕಂಡರು. ಅಂತಹವರನ್ನು ನೀವು ರೈಲುಗಳಲ್ಲಿ, ಅನೇಕ ದಿನಗಳಿಂದ ಸ್ನಾನ ಮಾಡದ, ತಲೆ ಬಾಚದ ಭಿಕ್ಷುಕರಂತೆ ನೋಡಿರಬಹುದು, ಅವರು ಅಲ್ಲಿ ಕೊಳಕಾದ ಮತ್ತು ಬಾಚದ ಕೂದಲಿನ, ಹಂದಿಯಂತೆ ಸ್ನಾನವನ್ನೇ ಮಾಡದ 18 ವರ್ಷದ ಯುವಕನನ್ನು ಕಂಡರು. ಬಾಗಿಲು ತೆರೆದ ಭಕ್ತರು ಅವರನ್ನು ನೋಡಿದ ಕೂಡಲೇ ಅಲ್ಲಿಂದ ಓಡಿಸಿದರು. ಅವನಿಗೆ ಇರಲು ಜಾಗವಿರಲಿಲ್ಲ. ಅವನು ಪೊದೆಯಂತಹ ಸ್ಥಳದಲ್ಲಿ ಇರುತ್ತಿದ್ದ. ಪ್ಯಾರಿಸ್ನಲ್ಲಿ ಒಂದು ಪ್ರಸಿದ್ಧ ಉದ್ಯಾನವಿದೆ. ಅಲ್ಲಿನ ಪೊದೆಯಲ್ಲಿ ಅವನು ಇರುತ್ತಿದ್ದ. ಕೆಲವರು ಬೀದಿಗಳಲ್ಲಿ ವಾಸಿಸುವುದಿಲ್ಲವೆ, ಹಾಗೆ. ಒಂದು ದಿನ ಶ್ರೀಲ ಪ್ರಭುಪಾದರು ಪ್ಯಾರಿಸ್ಗೆ ಬಂದರು ಹಾಗೂ ಬೆಳಗಿನ ಹವಾ ಸೇವನೆಗಾಗಿ ಈ ಉದ್ಯಾನಕ್ಕೆ ಬಂದರು. ಆಗ ಈ ಬಾಲಕನು (ಪಿಗ್ಪೆನ್ – ಹಂದಿಯಂತೆ) ಓಡೋಡಿ ಬಂದು ಪ್ರಭುಪಾದರ ಕಾಲ ಬಳಿ ಕುಸಿದನು. ಅವರ ಕಾಲು ಹಿಡಿದುಕೊಂಡ. ಪ್ರಭುಪಾದರು ಪ್ರತಿಕ್ರಿಯಿಸುವ ಮುನ್ನವೇ ಭಕ್ತರು ಅವನನ್ನು ಅಲ್ಲಿಂದ ಓಡಿಸಿದರು. ಅನಂತರ ಅವರು ತಮ್ಮ ನಡಿಗೆಯನ್ನು ಮುಂದುವರಿಸಿದರು. ಅವರೆಲ್ಲ ಮಂದಿರಕ್ಕೆ ವಾಪಸು ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಮಂದಿರದ ಬಾಗಿಲು ತೆರೆದಿತ್ತು. ಅವರು ಒಳಗೆ ಹೋದಾಗ ಆ ಪಿಗ್ ಪೆನ್ ಅಲ್ಲಿದ್ದ! ಭಕ್ತರಿಗೆ ಕೋಪ ತಡೆಯಲಾಗಲಿಲ್ಲ. “ನಿನಗೆಷ್ಟು ಧೈರ್ಯ, ಇಲ್ಲಿಗೆ ಬಂದಿರುವೆಯಲ್ಲ, ನಡಿ ಇಲ್ಲಿಂದ” ಎಂದು ಕೂಗಿದರು. ಆದರೆ ಆ ಯುವಕ ಪ್ರಭುಪಾದರನ್ನು ನೋಡಿದ ಕೂಡಲೇ ಅವರ ಕಾಲಿಗೆರಗಿದ. ಅವರು ಉಳಿದ ಭಕ್ತರಂತೆ ವರ್ತಿಸದೆ ಅವರಿಗೆ ತಾಳಿ ಎಂದು ಹೇಳಿ ಆ ಯುವಕನನ್ನು ಹತ್ತಿರಕ್ಕೆ ಕರೆದರು. ಅವನ ಬೆನ್ನು ತಟ್ಟುತ್ತ, ಬಾಚದ ಕೂದಲಿನಲ್ಲಿ ಕೈಯಾಡಿಸುತ್ತ ಅವನು ಇಲ್ಲಿರಲಿ ಎಂದು ಹೇಳಿದರು. ಈ ಕೊಳಕ ಇಲ್ಲಿರುವುದೇ ಎಂದು ಭಕ್ತರು ಯೋಚಿಸುತ್ತಿದ್ದಾಗಲೇ ಪ್ರಭುಪಾದರು ಅವನನ್ನು ಮಹಡಿಗೆ ಕರೆದುಕೊಂಡು ಹೋಗಿ ಸ್ನಾನಕ್ಕೆ ವ್ಯವಸ್ಥೆ ಮಾಡಿ ಮತ್ತು ಬಟ್ಟೆಗಳನ್ನು ಕೊಡಿ ಎಂದರು. ಅದರಂತೆ ಭಕ್ತರು ಅವನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ಸ್ನಾನಕ್ಕೆ ವ್ಯವಸ್ಥೆ ಮಾಡಿದರು. ಅನಂತರ ಅವನಿಗೆ ದೋತಿ, ಕುರ್ತಾ ನೀಡಿದರು. ಅವನು ವಾಪಸು ಕೆಳಗೆ ಬಂದಾಗ ಯಾರಿಗೂ ಅವನನ್ನು ಗುರುತಿಸಲಾಗಲಿಲ್ಲ. ಬಿಳಿ ದೋತಿ, ಕುರ್ತಾ ಮತ್ತು ಕ್ಷೌರ ಮಾಡಿದ, ಕೂದಲು ಇಲ್ಲದ ಶಿರ… ಪೂರಾ ಬದಲಾವಣೆ. ಅಂದರೆ ಅವನು ಮಂದಿರದ ಭಕ್ತನಾದ. ಇದು ಭಗವಂತನ ಅವ್ಯಾಜ ಕೃಪೆ. ಆಧ್ಯಾತ್ಮಿಕ ಗುರುವಿನೊಂದಿಗೆ ಅಥವಾ ಇಲ್ಲದೆ ಪ್ರಭುವಿನ ಅವ್ಯಾಜ ಕೃಪೆ.

ಈ ಭಕ್ತನ ಮೂಲಕ ಲೌಕಿಕ ಸಂಪತ್ತು ಸಂಗ್ರಹ ಅಥವಾ ವಿದ್ಯೆಯನ್ನು ಪರಿಗಣಿಸಲಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಪ್ರಭುಪಾದರು ಅದನ್ನು ಪರಿಗಣಿಸಲಿಲ್ಲ ಮತ್ತು ಈ ಭಕ್ತನು ಮುಂದೆ ಐಹಿಕದ ಅಂದಾಜನ್ನು ಮೀರಿದ ಅಚ್ಚರಿಯ ಕೆಲಸ ಮಾಡಬಹುದು ಎಂದು ನುಡಿದರು. ಈ ಭಕ್ತನಿಗೆ ಇತರ ಸೇವೆಗಳೊಂದಿಗೆ ಪುಸ್ತಕ ವಿತರಣೆಯಲ್ಲಿಯೂ ಆಸಕ್ತಿ. ಅವನಿಗೆ ಅರ್ಹತೆ ಇರಲಿಲ್ಲ ಮತ್ತು ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲ. ಒಂದು ದಿನ ಭಕ್ತರು ಪುಸ್ತಕ ವಿತರಣೆಗೆಂದು ಸಂಕೀರ್ತನೆ ವಾಹನದಲ್ಲಿ ಎಲ್ಲ ಸಿದ್ಧತೆ ಮಾಡಿದ್ದರು. ಈ ಭಕ್ತ ಅದರಲ್ಲಿ ಕುಳಿತಿದ್ದ. ಉಳಿದ ಭಕ್ತರಿಗೆ ಅರ್ಥವಾಗಲಿಲ್ಲ. ಇಲ್ಲೇನು ಮಾಡುತ್ತಿದ್ದಾನೆಂದು ಅವನನ್ನು ಕೆಳಗಿಳಿಯುವಂತೆ ಹೇಳಿದರು. ಅವನು ತಾನೂ ಬರುವುದಾಗಿ ಕೋರಿದ. ಏನು ಮಾಡುತ್ತಾನೆಂದು ಕೇಳಿದಾಗ ಅವನದು ಒಂದೇ ಉತ್ತರ, “ಪ್ರಭುಪಾದರು ನನ್ನನ್ನು ಕಾಪಾಡಿದರು” ಪ್ರಭುಪಾದರ ಕೃಪೆ. ಅವನನ್ನು ಭಕ್ತರು ತಮ್ಮೊಂದಿಗೆ ಕರೆದೊಯ್ದರು. ಅವನ ಕೈಗೆ ಪುಸ್ತಕಗಳ ಚೀಲ ನೀಡಿ ಮಾರಾಟ ಮಾಡಿ ಬಾ ಎಂದರು. ಅವನು ಒಂದು ತಾಸಿನಲ್ಲಿ ವಾಪಸಾದ. ಪುಸ್ತಕಗಳೆಲ್ಲ ಖಾಲಿ. ಭಕ್ತರಿಗೆ ಅಚ್ಚರಿ. ಎಲ್ಲೋ ಬಿಸಾಕಿರಬೇಕು ಎಂದು ಒಬ್ಬರು ಟೀಕಿಸಿದರು. ತಾನು ಎಲ್ಲ ಪುಸ್ತಕಗಳನ್ನೂ ಮಾರಿದೆ ಎಂದು ಅವನು ಹೇಳಿದ. ಅವನೊಂದಿಗೆ ಹೋಗಿದ್ದ ಮತ್ತೊಬ್ಬ ಭಕ್ತನು ಅದನ್ನು ಸ್ಪಷ್ಟಪಡಿಸಿದ. ಎಲ್ಲರಿಗೂ ಅಚ್ಚರಿ. ಅವನು ಅದು ಹೇಗೆ ಮಾರಾಟ ಮಾಡಿದ? ತಾನು “ಪ್ರಭುಪಾದರು ಕಾಪಾಡಿದರು” ಎಂದಷ್ಟೇ ಹೇಳಿದೆನೆಂದು ಅವನು ನುಡಿದ. ಅದು ಹಾಗೆ ಮುಂದುವರಿಯಿತು. ಅವನು ಒಳ್ಳೆಯ ಪುಸ್ತಕ ವಿತರಕನಾದ. ಅನಂತರ ಒಳ್ಳೆಯ ಬೋಧಕನೂ ಆದ. ಅವನಿಗೆ ಶ್ರೀಲ ಪ್ರಭುಪಾದರು ದೀಕ್ಷೆ ನೀಡಿದರು. ಅವನ ಹೆಸರು ರಸಜ್ಞ ದಾಸ.
ಲೌಕಿಕ ಅರ್ಹತೆ ಇಲ್ಲದ ಇಂತಹ ಅನೇಕ ಭಕ್ತರ ಉದಾಹರಣೆಯನ್ನು ನಾವು ನೀಡಬಹುದು. ಶ್ರೀಲ ಪ್ರಭುಪಾದರಿಗೆ ಸೇವೆ ಸಲ್ಲಿಸಬೇಕೆಂಬ ಅವರ ಇಚ್ಛೆಗೆ ಭಗವಂತನ ಅನುಗ್ರಹವಿರುತ್ತದೆ. ಅವರು ಅತ್ಯುತ್ತಮ ಸೇವೆಯನ್ನೂ ಸಲ್ಲಿಸಬಹುದು. ಆದುದರಿಂದ ನಾವೂ ಕೂಡ ಅದೇ ದೋಣಿಯಲ್ಲಿದ್ದೇವೆ. ನಮಗೂ ಕೂಡ ಅನೇಕ ಜವಾಬ್ದಾರಿಗಳನ್ನು ನೀಡಲಾಗಿದೆ. ನಾವು ಅನೇಕ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ನಾವು ನಮ್ಮ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕು. ಅದೆಲ್ಲವೂ ಶ್ರೀಲ ಪ್ರಭುಪಾದರ, ಶ್ರೀ ಹರಿಯ ಅನುಗ್ರಹದಿಂದ ಸಾಧ್ಯವಾಗಿದೆ. ನನಗೆ ಏನು ಸಾಧಿಸಲು ಸಾಧ್ಯವಾಗಿದೆಯೋ, ನನಗೆ ಏನು ಮಾಡಲು ಸಾಧ್ಯವಾಗಿದೆಯೋ ಅದು ನನ್ನ ಸಾಮರ್ಥ್ಯದಿಂದ ಅಲ್ಲ.






Leave a Reply