ಮಕ್ಕಳನ್ನು ಬೆಳೆಸುವುದು ಮತ್ತು ಕೃಷ್ಣ ಸಾಕ್ಷಾತ್ಕಾರ – ಅವು ಜೊತೆಯಾಗಿ ಸಾಗಬಲ್ಲದೆ?
“ತನ್ನನ್ನು ಆಶ್ರಯಿಸಿದವರನ್ನು ಮತ್ತೆ ಮತ್ತೆ ಜನನ ಮರಣಗಳ ಮಾರ್ಗದಿಂದ ವಿಮೋಚನೆ ಮಾಡಲಾಗದವನು ಗುರು, ತಂದೆ, ಪತಿ, ತಾಯಿ ಅಥವಾ ಆರಾಧ್ಯ ದೇವತೆಯಾಗಕೂಡದು.” (ಭಾಗವತ 5.5.18)
ಭಾಗವತದಲ್ಲಿ ತಿಳಿಸಿರುವಂತೆ ಪೋಷಕರಾಗಿ ಮಕ್ಕಳ ಕರ್ತವ್ಯಕ್ಕೆ ನಾವು ಯೋಗ್ಯರೇ? ಯೋಚಿಸಬೇಕು. ಭಕ್ತಿಸೇವೆಯಲ್ಲಿ ತೊಡಗುವುದರಿಂದ ಮಾತ್ರ ಹುಟ್ಟು ಸಾವಿನ ಚಕ್ರದಿಂದ ವಿಮೋಚನೆ ಪಡೆಯುವುದು ಸಾಧ್ಯ.

ಭಕ್ತಿಸೇವೆಯನ್ನು ಕುರಿತಂತೆ ಪ್ರಹ್ಲಾದ ಮಹಾರಾಜನು ಬೋಧಿಸಿದ ಏಳು ವಿಧಾನಗಳು ನೆನಪಿಗೆ ಬರುತ್ತಿದೆ – “ಭಗವಾನ್ ವಿಷ್ಣುವಿನ ಲೋಕೋತ್ತರ ಪವಿತ್ರ ನಾಮ, ರೂಪ, ಗುಣಗಳು, ಪರಿಕರಗಳು, ಲೀಲೆಗಳ ಶ್ರವಣ, ಕೀರ್ತನೆ, ಅವುಗಳ ಸ್ಮರಣೆ, ಭಗವಂತನ ಚರಣ ಕಮಲಗಳಿಗೆ ಸೇವೆ, ಭಗವಂತನಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು, ಅವನ ಸೇವಕನಾಗುವುದು, ಭಗವಂತನನ್ನು ಶ್ರೇಷ್ಠ ಸಖನೆಂದು ಪರಿಗಣಿಸುವುದು ಮತ್ತು ಸರ್ವಸ್ವವನ್ನೂ ಅರ್ಪಿಸುವುದು.” ಇವುಗಳನ್ನು ಪರಿಶುದ್ಧ ಭಕ್ತಿಸೇವೆಗಳೆಂದು ಅಂಗೀಕರಿಸಲಾಗಿದೆ. (ಭಾಗವತ 7.5.23)
ಇದನ್ನು ಅನುಸರಿಸುತ್ತಿರುವ ಭಕ್ತರಿಗೆ ಮಕ್ಕಳಾಗಿ, ಪೋಷಕರಾದಾಗ ಸವಾಲುಗಳು ಎದುರಾಗುತ್ತವೆ. ಕೆಲವು ಬಾರಿ ಭಕ್ತಿಸೇವೆಯ ಕಾರ್ಯದಲ್ಲಿ ತೊಡಗುವುದು ಕಷ್ಟವಾಗಬಹುದು. ಮಂದಿರದಲ್ಲಿ ಆರತಿಸೇವೆ ನಡೆಯುವಾಗ ಮನಸ್ಸು ಅಲ್ಲಿರದೆ, ಮಕ್ಕಳು ಏನು ಮಾಡುತ್ತಿರಬಹುದು ಎಂದು ಯೋಚಿಸುವಂತಾಗುತ್ತದೆ. ಕೀರ್ತನೆಯಲ್ಲಿ ತಲ್ಲೀನವಾಗುವುದು ಸಾಧ್ಯವಾಗದು.
ಭಾಗವತ ತರಗತಿಗಳಿಗೆ ಹೋಗುವುದು ಅಸಾಧ್ಯವೆನ್ನಿಸುತ್ತದೆ. ಜಪದ ಸಮಯ ಪ್ರತಿ ಮಂತ್ರದ ಅನಂತರವೂ ಮಕ್ಕಳೊಂದಿಗೆ ಮಾತನಾಡುವುದು ಅಥವಾ ಅವರಿಗೆ ಏನಾದರೂ ಮಾಡಿಕೊಡುವುದೇ ಆಗುತ್ತದೆ. ಅದೃಷ್ಟವಶಾತ್ ಅವರು ಮಲಗಿದರೆ, ನನಗೆ ನನ್ನ ನಿದ್ರೆಯನ್ನು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಆದರೂ ಎಷ್ಟೋ ಪೋಷಕರು ತಮ್ಮ ಆಧ್ಯಾತ್ಮಿಕ ಜೀವನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಂಗಾತಿ ಇಲ್ಲದೆ ಒಬ್ಬರೇ ಮಕ್ಕಳನ್ನು ಬೆಳೆಸುವವರ ಪಾಡು ಇನ್ನೂ ಕಷ್ಟ. ಆದರೂ ಅವರು ತಮಗೆ ಮಕ್ಕಳನ್ನು ಪೋಷಿಸುವುದು ಸಾಧ್ಯ ಮತ್ತು ಭಕ್ತಿಸೇವೆಯಲ್ಲಿ ತೊಡಗಿರುವುದೂ ಸಾಧ್ಯವೆಂದು ತೋರಿಸಿದ್ದಾರೆ. ಅಷ್ಟೇ ಅಲ್ಲ, ಆ ಮಕ್ಕಳನ್ನು ಒಳ್ಳೆಯ ಭಕ್ತರನ್ನಾಗಿಯೂ ಮಾಡಿದ್ದಾರೆ. ಅನೇಕ ಬಾರಿ ಅಂತಹ ಪೋಷಕರು ಮಕ್ಕಳಿಲ್ಲದ ಪೋಷಕರಿಗಿಂತ ಭಕ್ತಿಸೇವೆಯಲ್ಲಿ ಹೆಚ್ಚು ಸ್ಥಿರವಾಗಿ ನೆಲೆಗೊಂಡಿರುತ್ತಾರೆ. ಅವರಿಗೆ ಊಟ ನಿದ್ರೆ ಬೇಡವೇನೋ ಎಂದುಕೊಳ್ಳುವಂತಾಗುತ್ತದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರು ಅತಿಮಾನವರೇನೂ ಅಲ್ಲ. ಅವರು ನಮ್ಮಂತೆಯೇ. ಆದರೆ ಅವರ ಯಶಸ್ಸಿನ ರಹಸ್ಯವೇನು?

ಸ್ಪಷ್ಟ ಉತ್ತರಗಳನ್ನು ನೀಡುವುದು ಕಷ್ಟ. ಆದರೆ ಕೃಷ್ಟಪ್ರಜ್ಞೆಯ ಮಕ್ಕಳ ಪೋಷಣೆಯನ್ನು ಕುರಿತಂತೆ ಕೆಲವು ಚಿಂತನೆ ಮತ್ತು ಸಾಕ್ಷಾತ್ಕಾರಗಳನ್ನು ಹಂಚಿಕೊಳ್ಳಬಹುದು.
ಪೋಷಕರಾಗಿರುವುದು ಕೂಡ ಬಾಣಸಿಗ, ಪುಸ್ತಕ ವಿತರಕ, ನಿರ್ವಾಹಕ ಅಥವಾ ಇನ್ನಾವುದೇ ತರಹದ ಭಕ್ತಿಸೇವೆಯ ಹಾಗೆ, ಭಕ್ತಿಸೇವೆಯಲ್ಲಿ ತೊಡಗಿರುವುದೇ ಆಗಿದೆ. ಆದರೆ ಅದು ಕೃಷ್ಣನ ಆನಂದಕ್ಕೆ ಮಾಡುವ ಸೇವೆಯಾಗಿರಬೇಕು. ಅಂದರೆ ನಮ್ಮ ಮಕ್ಕಳನ್ನು ಲೌಕಿಕ ಜೀವನಕ್ಕೆ ಸಿದ್ಧಪಡಿಸುವುದಷ್ಟೇ ಅಲ್ಲ, ಅವರು ಕೃಷ್ಣಭಕ್ತರಾಗಲು ಅವರಿಗೆ ಸಹಾಯ ಮಾಡುವುದು ಉದ್ದೇಶವಾಗಬೇಕು. ಇದರಿಂದ ಅವರು ಪುನಃ ಈ ಲೋಕದಲ್ಲಿ ಜನಿಸುವುದನ್ನು ತಡೆಯಬಹುದು. ಯಾವುದೇ ಸೇವೆಯಂತೆ ಮಕ್ಕಳ ಪೋಷಣೆಯಲ್ಲಿ ಕಷ್ಟವೂ ಇದೆ, ಅನುಕೂಲಗಳೂ ಇವೆ. ಅದರ ಕಠಿಣ ಶ್ರಮ ನಮಗೆ ಗೊತ್ತು. ಅನುಕೂಲಗಳೇನು?
ಮಕ್ಕಳಾದಾಗ ಅದು ನನಗೆ ಕೃಷ್ಣನಿಗೆ ಶರಣಾಗಬೇಕೆನ್ನುವ ನನ್ನ ಅಪೇಕ್ಷೆಗೆ ಎರಡು ರೀತಿಯಲ್ಲಿ ಸಹಾಯ ಮಾಡಿತು. ಹುಟ್ಟು ಅಥವಾ ಜನನ ಎಷ್ಟು ನೋವಿನದು ಮತ್ತು ಕಷ್ಟಕರವಾದದ್ದು ಎನ್ನುವುದರ ನೇರ ಅನುಭವವಾಯಿತು. ಒಳ್ಳೆಯ ಕರ್ಮದಿಂದ ಮಗುವು ಕಾಳಜಿಯುಳ್ಳ ಕುಟುಂಬದಲ್ಲಿ ಆರೋಗ್ಯಕರವಾಗಿ ಜನಿಸಿದರೂ ಉದರ ಶೂಲೆ, ಹಲ್ಲು ಬರುವುದು ಮತ್ತು ಇತರ ಸಂಕಟಗಳನ್ನು ಅನುಭವಿಸಲೇಬೇಕು. ಇದೆಲ್ಲಾ ಇದ್ದದ್ದೇ ಎಂದು ಹೇಳಬಹುದು. ಆದರೆ ಆ ಸಂಕಟವನ್ನು ನೋಡಿದಾಗಲೇ ಅದರ ಕಷ್ಟ ಗೊತ್ತಾಗುವುದು.
ಮಗುವಾಗಿದ್ದಾಗ ನಾನು ಈ ಅಪಾಯಗಳ ಬಗೆಗೆ ಮುಗ್ಧಳಾಗಿದ್ದು ನನ್ನ ಪುಣ್ಯ. ಆದರೆ ಈಗ ಮಗುವಿನ ಪೋಷಕಳಾಗಿ ನನಗೆ ಮಗುವಾಗುವುದೇನೆನ್ನುವುದು ಅರ್ಥವಾಗಿದೆ. ಈ ಅಂಶದ ದೃಷ್ಟಿಯಿಂದ ನನಗೆ “ನಾನು ಪುನಃ ಹುಟ್ಟಬಾರದು” ಎನ್ನಿಸಿದೆ.

ಪುನಃ ಹುಟ್ಟುವ ವಿಷಯವೇ ನನಗೆ ಭಯ ಉಂಟುಮಾಡುತ್ತದೆ. ಈ ಭಯವು ನನಗೆ ನನ್ನ ಆಧ್ಯಾತ್ಮಿಕ ಜೀವನಕ್ಕೆ ನೆರವಾಗುತ್ತದೆ. ಹೇಗೆ? ಕೃಷ್ಣನ ಚರಣ ಕಮಲಗಳಿಗೆ ಶರಣಾಗಲು ನನಗೆ ಸಹಾಯ ಮಾಡಬೇಕೆಂದು ಅವನಿಗೆ ಇನ್ನೂ ಹೆಚ್ಚು ಭಾವನಾತ್ಮಕವಾಗಿ ಪ್ರಾರ್ಥನೆ ಸಲ್ಲಿಸಬಹುದು. ನಾನು ದುರ್ಬಲಳಾದರೂ ಕೃಷ್ಣನು ಪ್ರಬಲ ಎನ್ನುವುದು ನನಗೆ ಗೊತ್ತು. ಆದುದರಿಂದ ಭೌತಿಕ ಲೋಕದಿಂದ ಹೊರಬರಬೇಕೆಂದು ನಾನು ನಿಜವಾಗಿಯೂ ಅಪೇಕ್ಷಿಸಿದರೆ ಕೃಷ್ಣನು ಖಂಡಿತ ನನಗೆ ಸಹಾಯ ಮಾಡುತ್ತಾನೆ.
ಮಕ್ಕಳ ಮೇಲಿನ ಪ್ರೀತಿ ಕೂಡ ನನಗೆ ಕೃಷ್ಣನ ಸಹಾಯ ಯಾಚಿಸಿ ಪ್ರಾರ್ಥಿಸಲು ನೆರವಾಗಿದೆ. ನನ್ನ ಮುಗ್ಧ ಮಕ್ಕಳನ್ನು ನೋಡಿದಾಗ ಸಹಜವಾಗಿ, “ಬದುಕಿನಲ್ಲಿ ಅವರಿಗಾಗಿ ಕಾದಿರುವ ತೊಂದರೆಗಳಿಂದ ಅವರನ್ನು ಹೇಗೆ ಕಾಪಾಡಲಿ? ಬಹುಶಃ ಒಳ್ಳೆಯ ಶಾಲಾ ಶಿಕ್ಷಣ ಅಥವಾ ಒಳ್ಳೆಯ ಹಣದಿಂದ” ಎಂದು ಯೋಚಿಸುವೆ. ಆದರೆ, ಇವೆಲ್ಲಾ ನನ್ನ ಮಕ್ಕಳನ್ನು ಯುದ್ಧ, ಖಿನ್ನತೆ ಅಥವಾ ರೋಗದಿಂದ ಹೇಗೆ ರಕ್ಷಿಸುತ್ತವೆ? ಯಾವುದೇ ಸಂದರ್ಭದಲ್ಲಿಯೂ ನನ್ನ ಮಕ್ಕಳನ್ನು ರಕ್ಷಿಸುವುದು ಯಾವುದೆಂದು ನನಗೆ ಚೆನ್ನಾಗಿ ಗೊತ್ತು. ಅದರಲ್ಲಿ ನನಗೆ ಪೂರ್ಣ ಶ್ರದ್ಧೆ ಇದೆ. ಅದೇ, ಕೃಷ್ಣನಲ್ಲಿ ಆಶ್ರಯ ಪಡೆಯುವುದು. ಕೃಷ್ಣನನ್ನು ಸ್ಮರಿಸಿದರೆ ನಾವು ಸಾವಿನ ನೋವನ್ನೇ ಸಹಿಸಿಕೊಳ್ಳಬಹುದು, ಇನ್ನು ಇತರ ಸಂಕಷ್ಟಗಳೇನು ಮಹಾ.
ನನ್ನ ಮಕ್ಕಳಿಗೆ ನಿಜವಾಗಿಯೂ ಸಹಾಯ ಮಾಡುವ ಇಚ್ಛೆ ನನಗಿದ್ದರೆ, ಅವರು ಕೃಷ್ಣಪ್ರಜ್ಞಾವಂತರಾಗಲು ಅವರಿಗೆ ಸಹಾಯ ಮಾಡಬೇಕು. ಅವರಿಗೆ ನೀವು “ಹರೇ ಕೃಷ್ಣ ಮಂತ್ರ ಪಠಿಸಿ, ನಿಮ್ಮ ಆಹಾರವನ್ನು ಕೃಷ್ಣನಿಗೆ ಅರ್ಪಿಸಿ, ಮಾದಕ ದ್ರವ್ಯ ಸೇವಿಸಬೇಡಿ ಅಥವಾ ಅನೈತಿಕ ಲೈಂಗಿಕ ಕ್ರಿಯೆ ಬೇಡ…” ಎಂದೆಲ್ಲಾ ಹೇಳಬಹುದು. ಆದರೆ ಮಕ್ಕಳು ಮಹಾ ಸೂಕ್ಷ್ಮ, ನಿಮ್ಮನ್ನು ಗಮನಿಸುತ್ತಿರುತ್ತಾರೆ. ನೀವು ಬೋಧಿಸುವುದನ್ನು ನೀವು ಆಚರಿಸಬೇಕು. ಆಗಲೇ ಮಕ್ಕಳು ನಿಮ್ಮನ್ನು ನಂಬುವುದು.

ನಮ್ಮ ಮಕ್ಕಳು ಭಕ್ತರಾಗಬೇಕೆಂದು ನಾವು ಬಯಸಿದರೆ, ನಾವು ನಮ್ಮದೇ ಉದಾಹರಣೆಯಿಂದ ಅವರಿಗೆ ಬೋಧಿಸಬೇಕು. ಒಳ್ಳೆಯ ಮೇಲ್ಪಂಕ್ತಿ ಹಾಕಲು ಮತ್ತು ನನಗೆ ಸಹಾಯ ಮಾಡಲು ಕೃಷ್ಣನಿಗೆ ನಿರಂತರ ಪ್ರಾರ್ಥನೆ ಸಲ್ಲಿಸಲು ಅದು ಅತ್ಯುತ್ತಮ ಕಾರಣವೆಂದು ಅನ್ನಿಸಿದೆ. ಮಕ್ಕಳು ಅಜ್ಞಾನದಲ್ಲಿ ಸಂಕಷ್ಟಪಡಬಾರದು ಮತ್ತು ಅವರು ಪುನಃ ಹುಟ್ಟುವಂತಾಗಬಾರದು. ನಾನು ಅವರನ್ನು ತುಂಬಾ ಪ್ರೀತಿಸುವುದರಿಂದ, ಅವರು ಈ ಭೌತಿಕ ಲೋಕದಿಂದ ಹೊರಬರಲು ಅವರಿಗೆ ನಾನು ಸಹಾಯ ಮಾಡಬೇಕು.
ಮಕ್ಕಳು ಇನ್ನೂ ಹುಟ್ಟಿರಲಿಲ್ಲ, ಆಗ ನಾನು ಕೃಷ್ಣಪ್ರಜ್ಞಾವಂತಳಾಗಲು ಇಷ್ಟು ಆತುರ ತೋರಿರಲಿಲ್ಲ. ನಾನು ಸಾಧ್ಯವಾದಷ್ಟೂ ಮಾಡುವೆ, ಈ ಜನ್ಮದಲ್ಲಿ ಆಗದಿದ್ದರೆ ಇನ್ನೊಂದು ಜನ್ಮವಿದೆಯಲ್ಲ… ಎಂದು ಯೋಚಿಸಿದ್ದೆ. ಆದರೆ ಈಗ ನನ್ನ ಲೌಕಿಕ ಕಾರ್ಯಭಾರದಿಂದ ಆಧ್ಯಾತ್ಮಿಕ ಜೀವನವನ್ನು ನಡೆಸುವುದು ಕಷ್ಟವೆಂದು ಅನ್ನಿಸಿದರೂ ತುರ್ತಾಗಿ ಮಾಡಬೇಕೆಂದು ಭಾವಿಸಿರುವೆ. ನನಗೆ ಸಹಾಯ ಮಾಡು ಎಂದು ಕೃಷ್ಣನಲ್ಲಿ ಪ್ರಾರ್ಥಿಸುವೆ ಮತ್ತು ಅವನು ಹೇಗೆ ಸಹಾಯ ಮಾಡುತ್ತಿದ್ದಾನೆ ಎನ್ನುವುದನ್ನು ಗುರುತಿಸುವ ಬುದ್ಧಿಯನ್ನೂ ಕೊಡು ಎಂದು ಕೋರುವೆ. ನಾನು ಇನ್ನಷ್ಟು ಶ್ರದ್ಧೆ ತೋರಿದರೆ ಅವನು ಖಂಡಿತ ಸಹಾಯ ಮಾಡುತ್ತಾನೆ. ಅದು ಅವನ ವಚನವಾಗಿದೆ.
ಭಗವದ್ಗೀತೆಯಲ್ಲಿ ಅವನೇ ಹೇಳಿದ್ದಾನೆ, “ಅನ್ಯ ಚಿಂತೆ ಇಲ್ಲದೆ ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನ ದಿವ್ಯರೂಪವನ್ನು ಧ್ಯಾನಿಸುವವರು ಯಾರೋ ಅವರಿಗೆ ನಾನು ಇಲ್ಲದ್ದನ್ನು ಕೊಡುತ್ತೇನೆ ಮತ್ತು ಇರುವುದನ್ನು ಕಾಪಾಡುತ್ತೇನೆ.” (9.22)

ಅವನ ಮೇಲೆ ಹೆಚ್ಚು ಅವಲಂಬಿತಳಾಗಿದ್ದೇನೆ ಎನ್ನುವ ಭಾವನೆಯು ಅವನನ್ನು ಹೆಚ್ಚು ಸ್ಮರಿಸುವಂತೆ ಮಾಡುತ್ತದೆ. ಭಕ್ತಿಸೇವೆಯ ಸತ್ವ ಅದೇ ಅಲ್ಲವೇ? ಪದ್ಮ ಪುರಾಣದಲ್ಲಿ ಹೇಳಿದೆ, “ಶ್ರೀ ಕೃಷ್ಣನನ್ನು ಸದಾ ಸ್ಮರಿಸಬೇಕು ಮತ್ತು ಎಂದಿಗೂ ಮರೆಯಬಾರದು. ಧರ್ಮಗ್ರಂಥಗಳಲ್ಲಿನ ಎಲ್ಲ ನಿಯಮ ಮತ್ತು ನಿಷೇಧಗಳು ಈ ಎರಡು ತತ್ತ್ವಗಳ ಸೇವಕರು.”






Leave a Reply