ನಾವು ವಿಶಿಷ್ಟರೇ?


ಮಾನವನ ಬುದ್ಧಿಶಕ್ತಿಯು ಅವನನ್ನು ಪ್ರಾಣಿಗಳಿಗಿಂತ ಮೇಲ್ಮಟ್ಟದಲ್ಲಿ ಇರಿಸಿದೆ. ಆದರೆ ಅದರ ದುರುಪಯೋಗ, ಬೆದರಿಕೆಯನ್ನು ಒಡ್ಡಿದೆ.

ಅಭೇದ್ಯವಾದ ಆಮೆಯ ಚಿಪ್ಪು, ವಿಸ್ಮಯ ಉಂಟು ಮಾಡುವ ಚಿರತೆಯ ವೇಗ, ಮೈ ಬಣ್ಣ ಬದಲಾಯಿಸಿಕೊಳ್ಳುವ ಗೋಸುಂಬೆ – ಪ್ರಕೃತಿಯ ವೈವಿಧ್ಯ ಅದ್ಭುತ. ಪ್ರತಿಯೊಂದು ಜೀವಿಗೂ ಪ್ರಕೃತಿಯಿಂದ ವಿಶೇಷ ಕೊಡುಗೆ ಇದೆ. ಅಸ್ತಿತ್ವದ ಹೋರಾಟದಲ್ಲಿ ಬದುಕುಳಿಯಲು ಮತ್ತು ಯಶಸ್ವಿಯಾಗಲು ಈ ನೈಸರ್ಗಿಕ ಶಕ್ತಿ ಅಗತ್ಯ.

ಮಾನವ ಜೀವಿಗಳಿಗೆ ಅಂತಹ ಅಸಾಮಾನ್ಯ ದೈಹಿಕ ಸಾಮರ್ಥ್ಯವೇನೂ ಇಲ್ಲ. ಅವರ ಶರೀರವು ಮೃದು ಮತ್ತು ದುರ್ಬಲ. ಅವರು ವಿಶೇಷವಾಗಿ ವೇಗಿಗಳಲ್ಲ ಮತ್ತು ಅಪಾಯದಲ್ಲಿದ್ದಾಗ ತಮ್ಮನ್ನು ಸೂಕ್ತವಾಗಿ ರಕ್ಷಿಸಿಕೊಳ್ಳುವುದು ಅವರಿಗೆ ಕಷ್ಟ. ಆದರೂ ಮಾನವರೂ ಇತರ ಎಲ್ಲ ಜೀವ ಜಾತಿಗಳಿಗಿಂತ ತುಂಬಾ ಮೇಲ್ಮಟ್ಟದಲ್ಲಿದ್ದಾರೆ. ಯಃಕಶ್ಚಿತ್‌‍ ಮಾನವನು ಭಾರಿಯಾದ ಆನೆಯನ್ನು ಪಳಗಿಸಬಲ್ಲ ಮತ್ತು ಉಗ್ರವಾದ ಸಿಂಹವನ್ನು ಪಂಜರದಲ್ಲಿ ಇಡಬಲ್ಲನು. ಪ್ರಕೃತಿಯು ಮಾನವನಿಗೆ ನೀಡಿರುವ ಅಂತಹ ವಿಶೇಷ ಕೊಡುಗೆಯಾದರೂ ಏನು? ಇತರ ಎಲ್ಲ ಜೀವಿಗಳಿಗಿಂತ ಉನ್ನತ ಸ್ಥಾನದಲ್ಲಿರಿಸಿರುವ ಆ ಅನನ್ಯ ಸಾಮರ್ಥ್ಯವಾದರೂ ಏನು? ಅದು ಉನ್ನತ ಮಟ್ಟದ ಮಾನವನ ಬುದ್ಧಿಶಕ್ತಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮ್ಮ ಬುದ್ದಿಯಿಂದ ಸಬಲಗೊಂಡಿರುವ ಮಾನವರು ಎಲ್ಲ ಕೆಳ ಜೀವಜಾತಿಗಳನ್ನು ನಿಗ್ರಹಿಸಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾನವರು ನಾಗರಿಕತೆಗಳನ್ನು ನಿರ್ಮಿಸಿದ್ದಾರೆ, ಸಂಸ್ಕೃತಿಗಳನ್ನು ಬೆಳೆಸಿದ್ದಾರೆ, ಭಾಷೆಗಳನ್ನು ರೂಪಿಸಿದ್ದಾರೆ, ಸಾಹಿತ್ಯಗಳನ್ನು ರಚಿಸಿದ್ದಾರೆ, ಲಲಿತ ಕಲೆಗಳಲ್ಲಿ ಪ್ರತಿಭೆ ತೋರಿದ್ದಾರೆ, ತಾತ್ವಿಕ ಸಂಶೋಧನೆ ಮಾಡಿದ್ದಾರೆ ಮತ್ತು ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರಿದಿದ್ದಾರೆ.

ವಿಚಿತ್ರ ಆದರೂ ನಿಜ. ಅದೇ ಬುದ್ಧಿಶಕ್ತಿಯಿಂದ ಮಾನವನು ಈ ಲೋಕದಿಂದ ಎಲ್ಲ ಜೀವಿಗಳ ನಿರ್ಮೂಲನೆಯ ಬೆದರಿಕೆಯನ್ನು ಒಡ್ಡುವ ಸಾಮೂಹಿಕ ನಾಶದ ಅಸ್ತ್ರಗಳನ್ನು ಸೃಷ್ಟಿಸಿದ್ದಾನೆ. ಇನ್ನೂ ಹೇಳಬೇಕೆಂದರೆ, ಅದೇ ಬುದ್ಧಿಯಿಂದ ಮಾನವನು ವಿಕೃತ, ಧರ್ಮಭ್ರಷ್ಟ ಸಿದ್ಧಾಂತಗಳನ್ನು ರೂಪಿಸಿದ್ದಾನೆ. ಅದರಿಂದ ಅವನು ತನ್ನದೇ ಜೀವಜಾತಿಯ ಇತರರೊಂದಿಗೆ ವೈರತ್ವ ಮತ್ತು ದ್ವೇಷವನ್ನು ಪೋಷಿಸುತ್ತಿದ್ದಾನೆ. ಮಾನವ ವರ್ಗದ ರಕ್ಷಣೆಯ ಮೂಲವಾದ ಉನ್ನತ ಬುದ್ಧಿಯೇ ಅದನ್ನು ನಾಶಪಡಿಸುವ ಬೆದರಿಕೆ ಒಡ್ಡುತ್ತಿರುವುದು ವಿಪರ್ಯಾಸ, ಮಾನವೀಯತೆಯ ಪ್ರಸ್ತುತ ಸ್ಥಿತಿಯ ವಿಡಂಬನೆಯಾಗಿದೆ.

ಮೃಗ ಜೀವನ, ಭೋಗಾಸಕ್ತಿ

ಮತ್ತೊಂದು ದೃಷ್ಟಿಕೋನದಿಂದ ಅವಲೋಕಿಸೋಣ. ಎಲ್ಲ ಜೀವಿಗಳೂ ಸುಖಾನಂದಕ್ಕಾಗಿ ಹಾತೊರೆಯುತ್ತವೆ. ಕೆಳ ವರ್ಗದ ಎಲ್ಲ ಜೀವಿಗಳೂ ತಿನ್ನುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಣೆಯಂತಹ ದೈಹಿಕ ಚಟುವಟಿಕೆಗಳ ಮೂಲಕ ಆನಂದವನ್ನು ಅರಸುತ್ತವೆ. ಮಾನವರೂ ಅದನ್ನೇ ಮಾಡುತ್ತಾರೆ. ಆದರೆ ಪರಿಷ್ಕರಿಸಿದ ರೀತಿಗಳಲ್ಲಿ. ಉದಾಹರಣೆಗೆ, ಒಂದು ಪಕ್ಷಿಯು ವರ್ಷಾಂತರಗಳಿಂದ, ಪೀಳಿಗೆಯಿಂದ ಪೀಳಿಗೆಗೆ ಒಂದೇ ರೀತಿಯ ಗೂಡಿನಲ್ಲಿ ವಾಸಿಸುತ್ತದೆ. ಆದರೆ ಮಾನವರು ತಮ್ಮ ನಿವಾಸಗಳನ್ನು ಆಧುನಿಕಗೊಳಿಸುತ್ತಾ ಹೋಗುತ್ತಾರೆ. ಗುಡಿಸಿಲಿನಿಂದ ಅಪಾರ್ಟ್‌ಮೆಂಟ್‌ವರೆಗೆ, ಬಂಗಲೆಯಿಂದ ವಿಲ್ಲಾವರೆಗೆ ಬದಲಿಸಿಕೊಳ್ಳುತ್ತಾರೆ. ಗೋವು ತನ್ನ ಜೀವಮಾನವಿಡೀ ಹುಲ್ಲು ತಿನ್ನುತ್ತದೆ. ಆದರೆ ಮಾನವರು ವೈವಿಧ್ಯಮಯವಾದ ಆಹಾರದಿಂದ ಆಯ್ಕೆ ಮಾಡಿಕೊಳ್ಳುತ್ತಾರೆ.

ಆಧುನಿಕ ವೈಜ್ಞಾನಿಕ ಪ್ರಗತಿಯು ಮಾನವರ ಚಟುವಟಿಕೆಗಳಿಗೆ ಅತ್ಯಾಧುನಿಕ ನೋಟವನ್ನು ನೀಡಿದೆ. ಅವರು ಈಗ ಕಾರಿನಲ್ಲಿ ಚಲಿಸುತ್ತಾರೆ, ವಿಮಾನಗಳಲ್ಲಿ ಹಾರಾಡುತ್ತಾರೆ, ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅಂತರ್‌‍ ಜಾಲದ ಮೂಲಕ ವಿಶ್ವಾದ್ಯಂತ ಸಂಪರ್ಕಿಸುತ್ತಾರೆ. ವೈಜ್ಞಾನಿಕ ಪ್ರಗತಿ ಇದ್ದರೂ ಮಾನವರು ಈಗಲೂ ಆಹಾರ, ಲೈಂಗಿಕ ಕ್ರಿಯೆ, ನಿದ್ರೆ ಮೂಲಕ ಆನಂದವನ್ನು ಕಂಡುಕೊಳ್ಳುತ್ತಾರೆ ಮತ್ತು ಪ್ರಾಣಿಗಳಂತೆ ತಮ್ಮ ಶಕ್ತಿಯನ್ನು ತೋರುತ್ತಾರೆ.

ಪ್ರಾಣಿಗಳು ಕಸದಲ್ಲಿ ಆಹಾರವನ್ನು ಹುಡುಕಿಕೊಳ್ಳುತ್ತವೆ, ಮಾನವನು ಸಂಸ್ಕರಿಸಿದ, ಪೊಟ್ಟಣದಲ್ಲಿ ಲಭಿಸುವ ಆಹಾರದಿಂದ ರುಚಿಕಂಡುಕೊಳ್ಳುತ್ತಾನೆ. ಪ್ರಾಣಿಗಳು ರಸ್ತೆಯಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಮಾನವನು ಪತ್ರಿಕೆಗಳು, ಟೆಲಿವಿಷನ್‌‍, ಚಲನಚಿತ್ರಗಳು ಮತ್ತು ಅಂತರ್‌‍ ಜಾಲಗಳ ಮೂಲಕ ಕಾಮ ಪ್ರಚೋದಕ ಕಲ್ಪನೆಯನ್ನು ಬೆಳೆಸಿಕೊಳ್ಳಬಹುದು. ಪ್ರಾಣಿಗಳು ಕಲ್ಲುಮಣ್ಣಿನ ರಸ್ತೆಗಳ ಮೇಲೆಯೇ ಮಲಗುತ್ತವೆ. ಮಾನವನು ಹವಾನಿಯಂತ್ರಿತ ಕೋಣೆಗಳಲ್ಲಿ, ಪಲ್ಲಂಗದ ಮೇಲೆ ಮಲಗುತ್ತಾನೆ. ಪ್ರಾಣಿಗಳು ಗುರುಗುಟ್ಟುತ್ತವೆ ಮತ್ತು ತಮ್ಮ ಹಲ್ಲುಗಳನ್ನು ತೋರುತ್ತವೆ. ಮಾನವನು ಸಮೂಹ ನಾಶಕ ಅಸ್ತ್ರಗಳನ್ನು ಝಳಪಿಸುತ್ತಾನೆ.

ಆದುದರಿಂದ ವೈಜ್ಞಾನಿಕ ಪ್ರಗತಿಯು ಮಾನವನ ಚಟುವಟಿಕೆಯ ಸ್ವರೂಪವನ್ನು ಬದಲಿಸಿರಬಹುದು, ಆದರೆ ಉದ್ದೇಶವನ್ನಲ್ಲ.

ಪ್ರಾಣಿಗಳು ತಮ್ಮದೇ ವರ್ಗದ ಜೀವಿಗಳು ಸೃಷ್ಟಿಸುವ ಕೃತಕ ಅಭಾವದಿಂದಾಗಿ ಹಸಿವಿನಿಂದ ಸಾಯುವುದಿಲ್ಲ. ಪ್ರಾಣಿಗಳು ನಿದ್ರಾಹೀನತೆಯಿಂದ ಬಳಲುವುದಿಲ್ಲ, ಪ್ರೇಮ ವಂಚನೆಯ ಕಾರಣ ಭಗ್ನಹೃದಯದಿಂದ ನರಳುವುದಿಲ್ಲ, ಅತಿಯಾದ ಕೆಲಸ ಅಥವಾ ಒಂಟಿತನದಿಂದ ಪ್ರಾಣಿಗಳು ಒತ್ತಡದ ಭಾವನೆ ತಾಳುವುದಿಲ್ಲ. ಪ್ರಾಣಿಗಳು ಚಟಗಳಿಗೆ ಬಲಿಯಾಗುವುದಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

ಮಾನವ ಜೀವದ ಅವಕಾಶ

ಈ ವಿಚಿತ್ರವಾದ ವಿಡಂಬನೆಗೆ ವೈದಿಕ ಗ್ರಂಥಗಳು ಕೆಲವು ಒಳನೋಟಗಳನ್ನು ನೀಡಿವೆ. ಇತರ ಎಲ್ಲ ಜೀವಿಗಳಿಗಿಂತ ಅನನ್ಯವಾಗಿರುವಂತೆ ಮಾನವನಿಗೆ ವಿಶೇಷ ಬುದ್ಧಿಶಕ್ತಿಯನ್ನು ನೀಡಲಾಗಿದೆ. ದೈಹಿಕ ಆನಂದವನ್ನು ಪಡೆಯಲು ಉತ್ತಮ ಮಾರ್ಗಗಳನ್ನು ಶೋಧಿಸುವುದಕ್ಕಿಂತ ಉನ್ನತ ಉದ್ದೇಶಕ್ಕಾಗಿ ಆ ಬುದ್ಧಿ ಇರುವುದು, ಆ ವಿಶೇಷ ಬುದ್ಧಿಯು ಬದುಕಿನ ಗಾಢವಾದ ವಿಸ್ಮಯಗಳನ್ನು ಶೋಧಿಸಲೆಂದೇ ಇರುವುದು. ಆದುದರಿಂದ ಬದುಕಿನ ಆಧ್ಯಾತ್ಮಿಕ ಸಾಧನೆಗಳನ್ನು ಅನ್ವೇಷಿಸಬೇಕೆಂದು ವೈದಿಕ ಗ್ರಂಥಗಳು ಒತ್ತಾಯಿಸಿವೆ.

ವೈದಿಕ ಗ್ರಂಥಗಳು ಬದುಕಿನ ಮೂಲಭೂತ ಪ್ರಶ್ನೆಗಳನ್ನು ಉತ್ತರಿಸಬಲ್ಲ ಪರಿಪೂರ್ಣ ಜ್ಞಾನವನ್ನು ಹೊಂದಿವೆ. ಒಟ್ಟಾರೆ, ಅವು ಏನನ್ನು ವಿವರಿಸುತ್ತವೆ? ಲೌಕಿಕವಲ್ಲದ ಆತ್ಮವು ಶರೀರಕ್ಕೆ ಚೈತನ್ಯವನ್ನು ತುಂಬುತ್ತದೆ ಮತ್ತು ಅದೇ ರೀತಿಯ ಲೌಕಿಕವಲ್ಲದ ಪರಮಾತ್ಮನು ಬ್ರಹ್ಮಾಂಡಕ್ಕೆ ಉಸಿರೆರೆಯುತ್ತಾನೆ.

ಆತ್ಮವು ಪ್ರಾಣಿಗಳ ದೇಹದಲ್ಲಿದ್ದಾಗ ಪರಿಪೂರ್ಣತೆಯನ್ನು ಪಡೆಯುವುದು ಸಾಧ್ಯವಿಲ್ಲ. ಏಕೆಂದರೆ ವಿಕಾಸ ಹೊಂದಿಲ್ಲದ ಪ್ರಾಣಿಶರೀರದ ಪ್ರಜ್ಞೆಯು ಆಧ್ಯಾತ್ಮಿಕ ಆಯಾಮಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಮಾನವ ಶರೀರದಲ್ಲಿನ ಆತ್ಮಕ್ಕೆ ಮಾತ್ರ ಭೌತವಸ್ತುವಿನ ಬಾಹ್ಯ ಜಗತ್ತನ್ನು ಪ್ರವೇಶಿಸುವ ಮತ್ತು ಬ್ರಹ್ಮಾಂಡದೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಪ್ರವೇಶಿಸುವ ಬುದ್ಧಿ ಇರುತ್ತದೆ.

ದೊಡ್ಡ ತಪ್ಪು/ಪ್ರಮಾದ

ಆಧುನಿಕ ಕಾಲದಲ್ಲಿ ಭೌತ ವಸ್ತುವಿನ ಜಗತ್ತನ್ನು ಅರ್ಥಮಾಡಿಕೊಳ್ಳಲು ಮಾನವರು ತಮ್ಮ ಬುದ್ಧಿಯನ್ನೆಲ್ಲಾ ಉಪಯೋಗಿಸುವರು. ಇದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಆದರೆ ಆಧುನಿಕ ವಿಜ್ಞಾನಕ್ಕೆ ಬದುಕಿನ ಆಧ್ಯಾತ್ಮಿಕ ಆಯಾಮವನ್ನು ಕುರಿತು ಶೋಧಿಸಲು ಸೈದ್ಧಾಂತಿಕವಾಗಿ ಮನಸ್ಸಿಲ್ಲ.

ಲೌಕಿಕಕ್ಕಿಂತ ಉನ್ನತವಾದುದು ಇದೆ ಎನ್ನುವುದನ್ನು ಚಿಂತನಶೀಲ ವ್ಯಕ್ತಿಯು ಗ್ರಹಿಸುತ್ತಾನೆ. ಎಲೆಕ್ಟ್ರಾನ್‌‍ ಯೋಚಿಸುತ್ತದೆಯೆ? ಪರಮಾಣುಗಳಿಗೆ ಭಾವನೆಗಳಿವೆಯೇ? ಅಣುವಿಗೆ ಅಪೇಕ್ಷೆ ಇದೆಯೇ? ರಾಸಾಯನಿಕಗಳು ಪ್ರೇಮಿಸಬಲ್ಲವೇ? ಖಂಡಿತ ಇಲ್ಲ. ಲೌಕಿಕ ವಿಜ್ಞಾನದ ಚೌಕಟ್ಟಿನಲ್ಲಿ ಪ್ರಜ್ಞೆಯನ್ನು ಕುರಿತಂತೆ ವಿವರಗಳಿಲ್ಲ. ಪ್ರಜ್ಞೆಯನ್ನು ಕುರಿತು ಅರ್ಥಮಾಡಿಕೊಳ್ಳಲು ಆಧುನಿಕ ವಿಜ್ಞಾನವು ಏನೂ ಮಾಡಿಲ್ಲ ಎನ್ನಬಹುದು. ಬಹಳ ವಿಜ್ಞಾನಿಗಳು ತಮ್ಮ ಅಧ್ಯಯನವನ್ನು ಭೌತವಸ್ತುವಿಗೆ ಸೀಮಿತಗೊಳಿಸಿಕೊಂಡುಬಿಟ್ಟಿದ್ದಾರೆ.

ಭೌತವಸ್ತುವಿನ ಲೋಕದಲ್ಲಿಯೇ ಬುದ್ಧಿಜೀವಿಗಳನ್ನು ಬಂಧಿಸಿಡುವುದು ಮಾನವ ಶಕ್ತಿಯ ಕಡಮೆ ಬಳಕೆ ಎಂದು ವೈದಿಕ ಸಾಹಿತ್ಯವು ಪ್ರತಿಪಾದಿಸಿದೆ. ಎಲ್ಲಕ್ಕಿಂತ ಕೆಟ್ಟದೆಂದರೆ, ಆಧ್ಯಾತ್ಮಿಕ ಲೋಕಕ್ಕೆ ಹೋಗುವುದರಿಂದ ವಂಚಿತರಾದರೆ, ಮಾನವ ಜೀವಿಗಳು ಪರಿಪೂರ್ಣತೆಯನ್ನು ಆನಂದಿಸಲಾರರು. ಆಗ ಅವರು ಭೌತವಸ್ತುವನ್ನು ದರುಪಯೋಗಪಡಿಸಿಕೊಂಡು ಪರಿಪೂರ್ಣತೆಯನ್ನು ಪಡೆಯಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಸಫಲರಾಗುವುದಿಲ್ಲ.

ಇದರಿಂದ ಹತಾಶೆಯು ಅವರನ್ನು ಕುಗ್ಗಿಸುತ್ತದೆ, ಉಸಿರುಗಟ್ಟಿಸುವಂತೆ ಮಾಡುತ್ತದೆ. ವಸ್ತುವಿನ ಮೇಲೆ ಅತಿಯಾದ ಅವಲಂಬನೆ, ಮತ್ತು ಅಧ್ಯಾತ್ಮವನ್ನು ಕುರಿತು ನಿರ್ಲಕ್ಷ್ಯವು ತಿರುಗುಬಾಣವಾಗುತ್ತದೆ ಮತ್ತು ಪರಿಣಾಮವೆಂದರೆ ಅಸಾಮರಸ್ಯ, ದುಃಖ ಮತ್ತು ದುರಂತ.

ಕಳೆದ ಐದು ನೂರು ವರ್ಷಗಳಲ್ಲಿ ವೈಜ್ಞಾನಿಕ ದೃಷ್ಟಿಕೋನದ ಸ್ವೀಕಾರ ಮತ್ತು ಆಧ್ಯಾತ್ಮಿಕತೆಯ ನಿರ್ಲಕ್ಷ್ಯ ಅಥವಾ ತಿರಸ್ಕಾರವು ಲೌಕಿಕ ಮತ್ತು ಆಧ್ಯಾತ್ಮಿಕ ಅಸಮತೋಲನವನ್ನು ಉಂಟುಮಾಡಿದೆ. ಆಧುನಿಕ ವಿಶ್ವವು ವೈಯಕ್ತಿಕವಾಗಿ ಅತೃಪ್ತಿ, ಒತ್ತಡ, ಖಿನ್ನತೆ ಮತ್ತು ಆತ್ಮಹತ್ಯೆಯನ್ನು ನೋಡುತ್ತಿದ್ದರೆ, ಜಾಗತಿಕವಾಗಿ ಅಶಾಂತಿ, ಅಪರಾಧ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಅದು ಕಾಣುತ್ತಿದೆ.

ಇಂದ್ರಿಯಗಳನ್ನು ಮೀರಿದ ಸುಖ

ನಿಜವಾದ ಸುಖವು ಇಂದ್ರಿಯ ಸಂವೇದನೆಗಳಿಂದ ಅಲ್ಲ, ನಿಸ್ವಾರ್ಥ ಪ್ರೇಮದಿಂದ ಬರುತ್ತದೆ ಎಂದು ವೈದಿಕ ಗ್ರಂಥಗಳು ವಿವರಿಸುತ್ತವೆ. ಪರಿಪೂರ್ಣ ಪ್ರೇಮವು ಯಾವಾಗ ಬರುತ್ತದೆ? ಅದನ್ನು ಸೀಮಿತಗೊಳಿಸದಿದ್ದರೆ ಅಥವಾ ಅದಕ್ಕೆ ತಡೆ ಉಂಟುಮಾಡದಿದ್ದರೆ. ಪ್ರತಿಯೊಂದು ಆತ್ಮಕ್ಕೂ ಪರಮ ಪ್ರಭುವಿನೊಂದಿಗೆ ಶಾಶ್ವತವಾದ ಪ್ರೀತಿಯ ಬಾಂಧವ್ಯವಿರುತ್ತದೆ. ಪ್ರಜ್ಞೆಯ ಬೆಳವಣಿಗೆ ಇರುವುದರಿಂದ ಮಾನವ ಜೀವನವು ಆ ಬಾಂಧವ್ಯವನ್ನು ಪುನರುಜ್ಜೀವಗೊಳಿಸುವ ಅವಕಾಶವನ್ನು ಕಲ್ಪಿಸುತ್ತದೆ.

ಆದುದರಿಂದ ಬುದ್ಧಿವಂತರಾದ ಮಾನವರು ತಮ್ಮ ಶಕ್ತಿಯನ್ನು ಅಶಾಶ್ವತ ದೇಹದ ಬೇಡಿಕೆಗಳಿಗೆ ವಿನಿಯೋಗಿಸದೆ ಶಾಶ್ವತವಾದ ಆತ್ಮದ ಪ್ರೀತಿಯನ್ನು ಜಾಗೃತಗೊಳಿಸಲು ಉಪಯೋಗಿಸಬೇಕೆಂದು ವೈದಿಕ ಗ್ರಂಥಗಳು ಸೂಚಿಸುತ್ತವೆ.

ಪ್ರೀತಿಯ ಈ ದಿವ್ಯ ಸಾಮರಸ್ಯವನ್ನು ಪಡೆಯಲು ವೈದಿಕ ಗ್ರಂಥಗಳು ವ್ಯವಸ್ಥಿತವಾದ ಕಾರ್ಯಕ್ರಮವನ್ನು ನೀಡಿವೆ. ಅದುವೇ ದಿವ್ಯ ಶಬ್ದವನ್ನು ಕುರಿತು ಧ್ಯಾನ ಮಾಡುವುದು. ಮುಖ್ಯವಾಗಿ ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸುವ ಮೂಲಕ. ಸಾಮರಸ್ಯದ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಮಾನವ ಜೀವಿಯು ಇದೇ ಜನ್ಮದಲ್ಲಿ ಪೂರ್ಣ ಜ್ಞಾನದ, ರೋಮಾಂಚನಕಾರಿ ಅನುಭವದ ಮತ್ತು ಸುಖದ ಜಗತ್ತಿಗೆ ಹೋಗುವ ದಾರಿಯನ್ನು ಕಾಣುತ್ತಾನೆ. ಈ ದಿವ್ಯಪ್ರೇಮದ ಸಾಮರಸ್ಯವು ಆಧ್ಯಾತ್ಮಿಕ ಪರಿಸರಕ್ಕೆ ಆತ್ಮವು ಮರಳುವಲ್ಲಿ ಕೊನೆಗೊಳ್ಳುತ್ತದೆ. ಆಗ ಪರಮಾತ್ಮನೊಂದಿಗೆ ಅಪರಿಮಿತ ಪ್ರೇಮವನ್ನು ಶಾಶ್ವತವಾಗಿ ಆನಂದಿಸಬಹುದು.

ಜೀವಿಯ ಉದ್ದೇಶವು ಆಸೆ, ಅಪೇಕ್ಷೆ. ನಮ್ಮ ಅಪೇಕ್ಷೆಯು ನಮ್ಮ ಇಡೀ ಜೀವನವನ್ನು ನಿರ್ದೇಶಿಸುತ್ತದೆ, ನಿರ್ಧರಿಸುತ್ತದೆ. ಜನರಲ್ಲಿ ವಿಶೇಷವಾದ ಬಾಹ್ಯ ಲಕ್ಷಣಗಳಿರಬಹುದು : ಕೂದಲಿನ ಶೈಲಿ, ಆಕರ್ಷಕ ಉಡುಗೆ, ಉನ್ನತ ತಂತ್ರಜ್ಞಾನದ ಮೊಬೈಲ್‌‍ ಫೋನ್‌‍, ವೈಭವದ ಕಾರು ಇತ್ಯಾದಿ. ಆದರೆ ಅಪೇಕ್ಷೆಗಳಲ್ಲಿ ಸಾಮಾನ್ಯ ಪ್ರಾಣಿಗಳಲ್ಲಿ ಇರುವಂತೆ ಸ್ತ್ರೀಯರು ಪುರುಷರನ್ನು, ಪುರುಷರು ಸ್ತ್ರೀಯರನ್ನು ಆಕರ್ಷಿಸುವಂತಹ ಅಂಶಗಳೇ ಇದ್ದರೆ ಅಂತಹ ಜೀವಿಗಳು ಪ್ರಾಣಿಗಳಿಗಿಂತ ಉತ್ತಮರಲ್ಲ. ಶ್ರೀಲ ಪ್ರಭುಪಾದರು ಹೇಳುತ್ತಿದ್ದರು : ನಾಯಿಯು ನಾಲ್ಕು ಕಾಲುಗಳಲ್ಲಿ ಚಲಿಸುತ್ತದೆ, ಮತ್ತು ಮಾನವನು ನಾಲ್ಕು ಚಕ್ರಗಳ ಕಾರಿನಲ್ಲ. ಇಬ್ಬರ ಚಲನೆಯು ದೈಹಿಕ ಸುಖವನ್ನು ಪಡೆಯುವ ಉದ್ದೇಶವನ್ನೇ ಹೊಂದಿದ್ದರೆ ಮಾನವನು ನಾಯಿಗಿಂತ ಹೇಗೆ ಉತ್ತಮನಾದಾನು?

ಮಾನವ ಜೀವಿಗಳು ಯಾವಾಗ ವಿಶೇಷವಾಗುತ್ತಾರೆ? ಅವರ ಅಪೇಕ್ಷೆಯು ಪ್ರಾಣಿಗಳಿಗಿಂತ ಉನ್ನತ ಮಟ್ಟದ್ದಾಗಿದ್ದರೆ ಅವರು ನಿಜವಾಗಿಯೂ ವಿಶೇಷ ಜೀವಿಗಳಾಗುತ್ತಾರೆ. ಆಗ ಅವರು ಅತ್ಯುನ್ನತ ಸುಖವನ್ನು ಪಡೆಯುವ ಪ್ರಯತ್ನ ಮಾಡಬಹುದು. ಅದನ್ನು ನಿಜವಾದ ಆಧ್ಯಾತ್ಮಿಕತೆ ಮಾತ್ರ ನೀಡುವುದು ಸಾಧ್ಯ. ಅಂತಹ ಆನಂದವನ್ನು ಅನುಭವಿಸುವ ಅವರು ಪ್ರಾಣಿಗಳು ಅರಸುವ ಸುಖವನ್ನು ತಿರಸ್ಕರಿಸುತ್ತಾರೆ, ಅದು ತಮ್ಮ ಬುದ್ಧಿವಂತಿಕೆಗೆ ಲಾಯಕ್ಕಲ್ಲ ಎಂದು ಭಾವಿಸುತ್ತಾರೆ. ಇತರ ಸಾಮಾನ್ಯ ಜೀವಿಗಳು ಅನುಸರಿಸುವ ಹಾದಿಯನ್ನು ಅವರು ವಿವೇಕದಿಂದ ನಿರಾಕರಿಸುತ್ತಾರೆ. ಆ ಹಾದಿಯು ವೃದ್ಧಾಪ್ಯ, ರೋಗ, ಮತ್ತು ಸಾವಿನತ್ತ ಕೊಂಡೊಯ್ಯುತ್ತದೆ ಎಂದು ಅವರಿಗೆ ಗೊತ್ತು. ಇಂತಹ ಪ್ರಜ್ಞೆ ಉಳ್ಳ ಮಾನವ ಜೀವಿಯು ವಿಶೇಷ ಮತ್ತು ಅಪರೂಪ ಎಂದು ಭಗವದ್ಗೀತೆಯು (7.3) ಸಾರಿದೆ.

ಆದುದರಿಂದ ನಮ್ಮೆಲ್ಲರ ಅಪೇಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಲಕ್ಷಾಂತರ, ಕೋಟ್ಯಂತರ ಜೀವಿಗಳಂತೆ ತಿನ್ನುವುದು, ನಿದ್ರಿಸುವುದು, ಲೈಂಗಿಕ ಕ್ರಿಯಯಲ್ಲಿ ತೊಡಗುವುದು ಮತ್ತು ರಕ್ಷಿಸಿಕೊಳ್ಳುವುದಂತಹ ಅಪೇಕ್ಷೆಗಳೊಂದಿಗೆ ಸಾಮಾನ್ಯ ಜೀವಿಗಳಾಗಿ ನಾವು ಮುಂದುವರಿಯಬೇಕೆ? ಅಥವಾ ಬದುಕಿನಲ್ಲಿ ವಿಶೇಷ ಗುರಿಗಳನ್ನು ಹೊಂದಿ ಅದನ್ನು ಸಾಕಾರಗೊಳಿಸುವತ್ತ ಮುಂದುವರಿಯುವ ವಿಶೇಷ ವ್ಯಕ್ತಿಗಳಾಗಬೇಕೆ?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi