– ಸತ್ಯರಾಜ ದಾಸ
ಜರ್ಮನಿಯ 17ನೆಯ ಶತಮಾನದ ಖ್ಯಾತ ಸಂಗೀತ ರಚನೆಗಾರ ಬಾಕ್ ಅವರ ಹಾಡುಗಳ ಕಾರ್ಯಕ್ರಮಕ್ಕೆ ಹೋದಾಗ ಸಂಗೀತ ಮತ್ತು ವೈಷ್ಣವ ಪರಂಪರೆಯನ್ನು ಅವಲೋಕಿಸುವಂತಾಯಿತು.

ಜರ್ಮನಿಯ ಜನಪ್ರಿಯ ಸಂಗೀತಗಾರ ಬಾಕ್ ಅವರ ಬಹಳಷ್ಟು ಹಾಡುಗಳು ಬೈಬಲ್ ಆಧಾರಿತವಾಗಿದ್ದವು. ಅವರದು ಭಕ್ತಿ ಮತ್ತು ಆಧ್ಯಾತ್ಮಿಕ ಸಂಗೀತ. ಅವರ ರಚನೆಯ “ಹಿನ್ನೋಟ” ಕಾರ್ಯಕ್ರಮಕ್ಕೆ ಸೋದರನೊಂದಿಗೆ ಹೋದಾಗ ಅಲ್ಲಿ ಎಲ್ಲರೂ ಮಧುರ ಸಂಗೀತವನ್ನು ಅನುಭವಿಸುತ್ತಿದ್ದರು. ಹಾಡುಗಳನ್ನು ಕೇಳುತ್ತಿದ್ದಾಗ ನನ್ನ ಮನ ಸಂಗೀತ ಮತ್ತು ವೈಷ್ಣವ ಪರಂಪರೆಯತ್ತ ಸಾಗಿತು.
ವೈದಿಕ ಋಷಿಗಳ ಬರೆಹ, ಸಂಸ್ಕೃತ ಪಠ್ಯ, ಗೌಡೀಯ ವೈಷ್ಣವ ಪರಂಪರೆಯ ಬಂಗಾಳಿ ಹಾಡುಗಳು ವೈವಿಧ್ಯಮಯವಾದ ಲಯ, ತಾಳವನ್ನು ಅಳವಡಿಸಿ ಮಧುರ ಸಂಗೀತವನ್ನು ನೀಡುತ್ತಿರುವುದರತ್ತ ನನ್ನ ಯೋಚನಾಲಹರಿ ಹರಿಯಿತು. ದಿವ್ಯ ವಾಣಿಗಳೆಲ್ಲಾ ಹಾಡುಗಳೇ ಎಂದು ನಮ್ಮ ವೈಷ್ಣವ ಪರಂಪರೆ ಹೇಳುತ್ತದೆ. ವೈದಿಕ ಸಾಹಿತ್ಯದಲ್ಲಿ ಹೇಳಿರುವ ಶ್ರೇಷ್ಠರೆಲ್ಲರೂ ಸಾಮಾನ್ಯವಾಗಿ ಸಂಗೀತಗಾರರೇ. ದೇವತೆ ಸರಸ್ವತಿ ಮತ್ತು ನಾರದ ಮುನಿ ವೀಣೆಯನ್ನು ನುಡಿಸುವವರು. ಶಿವನ ನೃತ್ಯ ಸದಾ ಆಕರ್ಷಕ. ಇನ್ನು ಕೃಷ್ಣ ಕೊಳಲಿನ ನಿನಾದವನ್ನು ಕುರಿತು ಹೇಳುವುದೇನು? ಅವನ ವೇಣು ವಾದನಕ್ಕೆ ಮರುಳಾಗದವರೇ ಇಲ್ಲ. ವೃಂದಾವನ ನಿವಾಸಿಗಳಿಗಂತೂ ಸಂಗೀತದ ರಸದೌತಣ. ಇನ್ನು ರಾಸನೃತ್ಯವಂತೂ ಅವರ್ಣನೀಯ.

ಬ್ರಹ್ಮನು ಸಂಗೀತದ ಸಪ್ತಸ್ವರಗಳನ್ನು ಸೃಷ್ಟಿಸಿದನು ಮತ್ತು ಅದನ್ನು ವಿಶ್ವ ಸೃಷ್ಟಿಗೆ ಉಪಯೋಗಿಸಿದನೆಂದು ನಾವು ಭಾಗವತದಿಂದ (3.12.47) ಅರಿಯುತ್ತೇವೆ. ಶ್ರೀಲ ಪ್ರಭುಪಾದರು ಭಾವಾರ್ಥದಲ್ಲಿ ಬರೆಯುತ್ತಾರೆ, “ಸಂಗೀತದ ಸ್ವರಗಳೆಂದರೆ ಸ,ರಿ,ಗ,ಮ,ಪ,ದ,ನಿ. ಈ ಎಲ್ಲ ಧ್ವನಿಕಂಪನಗಳನ್ನು ಶಬ್ದಬ್ರಹ್ಮ ಅಥವಾ ದಿವ್ಯಧ್ವನಿ ಎಂದು ಕರೆಯಲಾಗಿದೆ… ಅಂತಿಮವಾಗಿ ಹೇಳುವುದೇನೆಂದರೆ ಭೌತಿಕವಾದುದು ಯಾವುದೂ ಇಲ್ಲ. ಏಕೆಂದರೆ ಪ್ರತಿಯೊಂದರ ಮೂಲವೂ ಅಧ್ಯಾತ್ಮ ಜಗತ್ತಿನಲ್ಲಿದೆ. ಆದ್ದರಿಂದ ಭೌತಿಕ ಅಭಿವ್ಯಕ್ತಿಯನ್ನು ನಿಜವಾದ ಅರ್ಥದಲ್ಲಿ ಮಾಯೆ ಎಂದು ಕರೆಯಲಾಗಿದೆ. ಆತ್ಮಸಾಕ್ಷಾತ್ಕಾರ ಪಡೆದವರಿಗೆ ಚೇತನದ ಹೊರತು ಇನ್ನೇನೂ ಇರುವುದಿಲ್ಲ.”
ಬಾಕ್ ಸಂಗೀತವನ್ನು, ಶಬ್ದವನ್ನು ಭಗವಂತನತ್ತ ಸಾಗಲು ಸೃಷ್ಟಿಸಿದನು. ಅವನಿಗೆ ತನ್ನ ಸೃಷ್ಟಿಕರ್ತನನ್ನು ಅರಿಯಬೇಕೆನ್ನಿಸಿತ್ತು, ಅವನನ್ನು ನೋಡಬೇಕೆನ್ನಿಸಿತ್ತು ಮತ್ತು ಅವನನ್ನು ಕುರಿತು ಅನುಭವಿಸಬೇಕೆನ್ನಿಸಿತ್ತು. ಆದುದರಿಂದ ಈ ಶಬ್ದಗಳು ಕಿರುಚುವ ರಾಕ್ ಅಥವಾ ರಾಪ್ಗಿಂತ ಹೆಚ್ಚು ಉದ್ಧರಿಸುವ, ಉನ್ನತಿಗೇರಿಸುವಂತಿದ್ದವು. ಬಾಕ್ ನ ಸಂಗೀತವು ಆಧ್ಯಾತ್ಮಿಕವಾಗಿದ್ದರೂ ಅಥವಾ ಸಾತ್ವಿಕತೆಯನ್ನು ತೋರುತ್ತಿದ್ದರೂ ಅದು ವ್ಯಕ್ತಿಯನ್ನು ಅಂತಿಮ ಗಮ್ಯಸ್ಥಾನಕ್ಕೆ ತರಬಲ್ಲದೆ? ಅದು ಎಷ್ಟು ಪರಿಶುದ್ಧ?
ವೈಷ್ಣವ ಸಂಗೀತ
ವೈಷ್ಣವ ಸಂಗೀತದತ್ತ ಮನ ಮರಳಿತು. ವೈಷ್ಣವ ಸಿದ್ಧಾಂತದ ತತ್ತ್ವವೆಂದರೆ ಭಗವಂತನನ್ನು ಪ್ರಸನ್ನಗೊಳಿಸಲು ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಗೆ ಸಂಗೀತವನ್ನು ಉಪಯೋಗಿಸಬೇಕು. ಅದು ಕಲೆಗಾಗಿ ಕಲೆ ಅಥವಾ ಸಂಗೀತಕ್ಕಾಗಿ ಸಂಗೀತವಲ್ಲ. ಅದು ಭಗವಂತನಿಗಾಗಿ ಇರುವ ಸಂಗೀತ. ಆದುದರಿಂದ ನಿಜವಾದ ಆಧ್ಯಾತ್ಮಿಕ ಸಂಗೀತವು ಭಕ್ತಿತತ್ತ್ವಗಳಲ್ಲಿ ರಚನೆಯಾಗಿರಬೇಕು. ಅದು ಪರಿಶುದ್ಧದಿಂದ ಹುಟ್ಟಬೇಕು, ತನ್ನ ಕೇಳುಗರನ್ನು ಪರಿಶುದ್ಧತೆಗೆ ಒಯ್ಯಬೇಕು ಮತ್ತು ವ್ಯಕ್ತಿಯ ಪರಿಶುದ್ಧತೆಯನ್ನು ಹೆಚ್ಚಿಸಬೇಕು.
ಆದರ್ಶನೀಯವೆಂದರೆ, ಭಗವಂತನ ಸೇವೆಯಲ್ಲಿ ಜನರ ಮನಸ್ಥಿತಿಯನ್ನು ಹೆಚ್ಚಿಸಲು ಮತ್ತು ದೇವೋತ್ತಮ ಪರಮ ಪುರುಷನಲ್ಲಿ ಜನರ ಪ್ರೀತಿಯನ್ನು ಸೃಷ್ಟಿಸಲು ಅದು ಗಮನವನ್ನು ಕೇಂದ್ರೀಕರಿಸಬೇಕು.

ಈ ಯೋಚನೆಯು ರಾಸ ಲೀಲೆಯನ್ನು ಸ್ಮರಿಸುವಂತೆ ಮಾಡಿತು. ಭಕ್ತಿ ರತ್ನಾಕರದ ಪ್ರಕಾರ ವೈಷ್ಣವ ಸಂಗೀತದ ಮೂಲವು ಭಗವಂತನ ರಾಸಲೀಲೆ. ಕೃಷ್ಣ ಮತ್ತು ಗೋಪಿಯರು ಪ್ರೇಮ ಗೀತೆಗಳನ್ನು ಹಾಡಲು ಮತ್ತು ನರ್ತಿಸಲು ಅಸಂಖ್ಯ ವಾದ್ಯಗಳನ್ನು ಬಳಸುತ್ತಿದ್ದರಂತೆ.
ಭಕ್ತಿ ರತ್ನಾಕರದ 5ನೆಯ ಅಧ್ಯಾಯವು ವೈಷ್ಣವ ಸಂಗೀತವನ್ನು ಕುರಿತು ಪ್ರಮುಖವಾಗಿ ಹೇಳಿದೆ. ಮಧುರ ಸಂಗೀತ ಮತ್ತು ವಾದ್ಯಗಳಿಂದ ಭಗವಂತನನ್ನು ಕೊಂಡಾಡಬಹುದು ಎನ್ನುವುದನ್ನು ಅದು ವಿವರಿಸುತ್ತದೆ. ಅಂತಿಮವಾಗಿ ಸಂಕೀರ್ತನೆಯು ಸಂಗೀತ ರಸಾನುಭವದ ಶಿಖರವೆಂದು ಹೇಳುತ್ತದೆ. ಸಂಕೀರ್ತನೆಯಲ್ಲಿ ತಾಳ, ರಾಗ, ವಾದ್ಯಗಳ ಬಳಕೆಯು ವಿಶೇಷ ಮಾಧುರ್ಯವನ್ನು ನೀಡುತ್ತದೆ. ಸಂಗೀತದೊಂದಿಗೆ ನೃತ್ಯದ ಪಾತ್ರ ಕೂಡ ಸಂಕೀರ್ತನೆಯಲ್ಲಿ ಮಹತ್ವವಾಗಿದೆ. ರಾಸ ಲೀಲೆಯನ್ನು ಅವಲೋಕಿಸಿದಾಗ ಇವೆಲ್ಲವೂ ವ್ಯಕ್ತವಾಗುತ್ತವೆ.

ಭಗವಂತನನ್ನು ಕೊಂಡಾಡುವುದರಲ್ಲಿ ಕೇಂದ್ರೀಕೃತವಾಗಿರುವುದರಿಂದ ಭಕ್ತರಿಗೆ ಸಂಗೀತವು ಕೀರ್ತನೆಯಲ್ಲಿ ಸಾಕಾರಗೊಂಡಿದೆ. ನರೋತ್ತಮ ದಾಸರ ಗರನ್ ಹಟಿ, ಶ್ರೀನಿವಾಸರ ಮನೋಹರ ಶಹಿ ಮತ್ತು ಶ್ಯಾಮಾನಂದರ ರೆನೇತಿಯಂತಹ ಗೌಡೀಯ ವೈಷ್ಣವ ಸಂಗೀತ ಶೈಲಿಯು ವಿಶಿಷ್ಟವಾದ ಕಲಾತ್ಮಕತೆಯನ್ನು ತೋರಿವೆ. ಉದಾಹರಣೆಗೆ, ಗರನ್ ಹಟಿಯು ಸರಳವಾದ ತಾಳ ಲಯದೊಂದಿಗೆ ಮಂದವಾಗಿ ಮತ್ತು ಮಧುರವಾಗಿ ಆರಂಭವಾಗುತ್ತದೆ ಮತ್ತು ಕ್ರಮೇಣ ಉತ್ಸಾಹಭರಿತದಿಂದ ಏರುದನಿಯಲ್ಲಿ ಗಾಯನ ಮತ್ತು ನೃತ್ಯದೊಂದಿಗೆ ಸಾಗುತ್ತದೆ.
ಇತರ ಕೀರ್ತನೆಗಳಿಗೆ ಪ್ರತಿಯಾಗಿ ವೈಷ್ಣವ ಸಂಗೀತದ ಈ ಅನನ್ಯ ರೂಪದಲ್ಲಿ ಶ್ರೀ ಕೃಷ್ಣನನ್ನು ಕೊಂಡಾಡುವ ಮೊದಲು ಶ್ರೀ ಚೈತನ್ಯರನ್ನು ಕೊಂಡಾಡಲಾಗುತ್ತದೆ. ಈ ಸಂಗೀತ ಕಲಾತ್ಮತೆಯನ್ನು ಗುರು ಪರಂಪರೆಯಲ್ಲಿ ಹಸ್ತಾಂತರಿಸಲಾಗಿದೆ. ಸ್ಫೂರ್ತಿದಾಯಕವಾದ ಈ ಕೀರ್ತನೆ ಪ್ರದರ್ಶನಗಳನ್ನು ಹರೇ ಕೃಷ್ಣ ಮಂದಿರಗಳಲ್ಲಿ ಕಾಣಬಹುದು.

ಸಂಗೀತದ ಎಲ್ಲ ರೂಪವೂ ಭಗವಂತನ ಮಹಿಮೆಯನ್ನು ಕೊಂಡಾಡಬೇಕು. ಕೀರ್ತನೆಯ ಸಂಗೀತವು ಸಂಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಇದೆ. ನಮ್ಮ ಹೃದಯದಾಸೆಯಿಂದ ಅಥವಾ ಸಹಜ ಭಾವನೆಯಿಂದ ನಾವು ಅದರಲ್ಲಿ ಪಾಲ್ಗೊಳ್ಳಬಹುದು. ಧರ್ಮ ಗ್ರಂಥಗಳು ಮತ್ತು ಹಿಂದಿನ ಬೋಧಕರು ಸಂಗೀತವನ್ನು ವಿವರವಾದ ವಿಜ್ಞಾನವೆಂದು ವರ್ಣಿಸಿದ್ದಾರೆ. ಅದು ಭಗವದ್ಧಾಮಕ್ಕೆ ಹೋಗಲು ನೆರವಾಗುತ್ತದೆ. ಭಗವಂತನ ನಾಮಗಳನ್ನು ಜಪಿಸುವುದು ಸಂಗೀತದ ಮೂಲತತ್ತ್ವ ಮತ್ತು ವೈಷ್ಣವರು ಅಲೌಕಿಕ ಶಬ್ದದ ಈ ಅಂಶದ ಮೇಲೆ ಹೆಚ್ಚು ಗಮನವಿಡುವರು.
ಸಂಗೀತ ದಿವ್ಯ ಅಭಿವ್ಯಕ್ತಿ
ಸಂಗೀತ ಕಾರ್ಯಕ್ರಮವು ಮುಗಿದ ಮೇಲೆ ಸೋದರನು, “ನೀನು ಸಂಗೀತವನ್ನು ಆನಂದಿಸಿದೆಯಾ?” ಎಂದು ಕೇಳಿದನು. ವೈಷ್ಣವ ಸಂಗೀತದ ಧ್ಯಾನದಲ್ಲಿದ್ದ ನಾನು, ಕೂಡಲೇ “ಆನಂದಿಸಿದೆ” ಎಂದು ಉತ್ತರಿಸಿದೆ. ಸಂಗೀತವನ್ನು ಭಕ್ತಿಭಾವಕ್ಕೆ ಬಳಸುವುದೇ ಬಾಕ್ನ ಉದ್ದೇಶವೆಂದು ನಾನು ಯೋಚಿಸಿದೆ. ಸಂಗೀತ ಕುರಿತು ವೈಷ್ಣವ ಪರಂಪರೆಯು ಅದನ್ನೇ ಹೇಳುತ್ತದೆ.
ಬಹುಶಃ ಆಧ್ಯಾತ್ಮಿಕ ಲೋಕವನ್ನು ಕುರಿತ ಕೃಷ್ಣಪ್ರಜ್ಞೆಯ ದೃಷ್ಟಿಯನ್ನು ಬಾಕ್ ಇಷ್ಟಪಡುತ್ತಿದ್ದರೆಂದು ಭಾವಿಸುವೆ. ”ಬ್ರಹ್ಮ ಸಂಹಿತೆಯು (5.56) ಹೇಳುತ್ತದೆ, “ಆಧ್ಯಾತ್ಮಿಕ ಲೋಕದಲ್ಲಿ ಪ್ರತಿ ಹೆಜ್ಜೆಯೂ ನೃತ್ಯ ಮತ್ತು ಪ್ರತಿ ಪದವೂ ಸಂಗೀತ.”

ಸಂಗೀತವು ಆಧ್ಯಾತ್ಮಿಕ ಲೋಕದಲ್ಲಿ ವ್ಯಾಪಿಸಿದೆ. ಭಗವಂತನ ಭಕ್ತರು ಇಲ್ಲಿ ಭಕ್ತಿಗೀತೆ ಮತ್ತು ನೃತ್ಯದಿಂದ ತಮ್ಮ ಬದುಕನ್ನು ತುಂಬಿಕೊಳ್ಳುತ್ತಾರೆ. ಕೃಷ್ಣನ ಲೀಲೆಗಳ ಲೋಕವನ್ನು ಪ್ರವೇಶಿಸಲು ಈ ರೀತಿ ಸಿದ್ಧತೆ ನಡೆಸುತ್ತಾರೆ. ಸರ್ವಂ ಸಂಗೀತಂ. ಸರ್ವಂ ಕೃಷ್ಣಮಯಂ.






Leave a Reply