ಚಿತ್ರಲೇಖನ: ಡಾ॥ ಬಿ.ಆರ್. ಸುಹಾಸ್
ಮಹಾವಿಷ್ಣುವಿನ ಯೋಗಮಾಯೆ, ಪಾರ್ವತಿಯ ರೂಪದಲ್ಲಿ ಶಿವನ ಮಡದಿಯಾಗಿ, ಜಗತ್ತಿನ ತಾಯಿಯಾಗಿ, ದುಷ್ಟಸಂಹಾರ ಹಾಗೂ ಪ್ರಳಯ ಕಾಲಗಳಲ್ಲಿ ದುರ್ಗೆ ಅಥವಾ ಕಾಳಿಯ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾ, ಪುರಾಣಗಳಲ್ಲಿ ಅವನ ತಂಗಿಯೆಂದೇ ಖ್ಯಾತಳಾಗಿದ್ದಾಳೆ. ಭಾಗವತದಲ್ಲಿ ನಾವು ನೋಡುವಂತೆ, ಶ್ರೀಕೃಷ್ಣನು ವಸುದೇವ, ದೇವಕಿಯರಿಗೆ ಪುತ್ರನಾಗಿ ಜನಿಸುವಾಗ, ಅವನ ಆಜ್ಞೆಯಂತೆ ಯೋಗಮಾಯೆಯು ನಂದ, ಯಶೋದೆಯರಿಗೆ ಪುತ್ರಿಯಾಗಿ ಜನಿಸುತ್ತಾಳೆ. ವಸುದೇವನು ಆ ಮಗುವನ್ನು ತನ್ನ ಮಗುವಿನೊಂದಿಗೆ ಬದಲಿಸಿದಾಗ, ಹಾಗೂ ಕಂಸನು ಈ ಹೆಣ್ಣು ಮಗುವನ್ನು ಕೊಲ್ಲಲೆತ್ತಿದಾಗ, ಅದು ಅವನ ಕೈಯಿಂದ ಜಾರಿ, ದುರ್ಗೆಯ ರೂಪ ತಾಳಿ, ಅವನ ಭಾವೀ ಸಂಹಾರಕ ಬೇರೆಲ್ಲೋ ಬೆಳೆಯುತ್ತಿರುವುದಾಗಿ ಹೇಳಿ ಅದೃಶ್ಯಳಾಗುತ್ತಾಳೆ.

ಇದಲ್ಲದೇ ಬಲರಾಮನನ್ನು ದೇವಕಿಯ ಗರ್ಭದಿಂದ ವಸುದೇವನ ಇನ್ನೊಬ್ಬ ಪತ್ನಿಯಾದ ರೋಹಿಣಿಯ ಗರ್ಭಕ್ಕೆ ಸೆಳೆದು ಸ್ಥಳಾಂತರಿಸುವವಳೂ ಇವಳೇ. ಹೀಗೆ ಭಗವಂತನ ಲೀಲೆಗಳಿಗೆ ಸಹಾಯಕಳಾಗುತ್ತಾಳೆ ಈ ಯೋಗಮಾಯೆ. ಈ ಯೋಗಮಾಯೆ ಅಥವಾ ಮಹಾಕಾಳಿ ಮತ್ತು ಶ್ರೀ ಜನಾರ್ದನ ಅಥವಾ ಮಹಾವಿಷ್ಣು ಒಟ್ಟಿಗಿರುವ ಒಂದು ಅಪರೂಪದ ದೇವಾಲಯ ನಮ್ಮ ಕರ್ನಾಟಕದಲ್ಲಿದೆ. ಅದೇ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಾಲಯ. ಇದು ಉಡುಪಿಯಲ್ಲಿದೆ.
ದೇವಾಲಯವು ಚೋಳರ ಕಾಲದ ಶಿಲ್ಪಕಲೆ ಹಾಗೂ ರಚನಾರೀತಿಯನ್ನು ತೋರುತ್ತದೆ. ಕಂಬಗಳ ಮೇಲೆಯೇ ಕಟ್ಟಡದ ಭಾರವಿದ್ದು ಮಧ್ಯೆ ಗೋಡೆಯಿಲ್ಲದೇ ನಿಂತಿದೆ. ಒಳಗೆ ಶ್ರೀ ಜನಾರ್ದನ ಮತ್ತು ಮಹಾಕಾಳಿಯರಿಗೆ ಎರಡು ಆಲಯಗಳಿವೆ. ಶ್ರೀ ಜನಾರ್ದನನ ವಿಗ್ರಹವು ಶಂಖ ಚಕ್ರ ಗದಾ ಪದ್ಮಗಳನ್ನು ಧರಿಸಿದ್ದು ಬಹು ಸುಂದರವಾಗಿದೆ. ಮಹಾಕಾಳಿಯ ವಿಗ್ರಹವು ನಾಲಗೆಯನ್ನು ಹೊರಚಾಚಿ, ಕೋರೆಹಲ್ಲುಗಳನ್ನು ತೋರುತ್ತಾ, ಶಂಖ, ಚಕ್ರ, ಖಡ್ಗ, ಮತ್ತು ಪಾನಪಾತ್ರೆಗಳನ್ನು ಹಿಡಿದಿದ್ದು ರುಂಡಮಾಲೆಯನ್ನು ಧರಿಸಿ, ದುಷ್ಟ ಸಂಹಾರದ ಕಾಲದಲ್ಲಿ ಕಾಣುವಂತೆ ಭಯಂಕರ ಸ್ವರೂಪಿಣಿಯಾಗಿದೆ. ದೇವಾಲಯದ ಹೊರಗೆ, ಪ್ರಕೃತಿ ಸೌಂದರ್ಯದ ಮಧ್ಯೆ, ಸುಂದರವಾದ ನಿರ್ಮಲ ಕಲ್ಯಾಣಿಯಿದೆ.

ದೇವಾಲಯ ಸಮುಚ್ಚಯದೊಳಗೆ ಮುಖ್ಯ ಗರ್ಭಗುಡಿಯ ಬಳಿಕ, ನೂತನವಾಗಿ ನಿರ್ಮಿಸಲಾಗಿರುವ ಒಂದು ಮಹಾಕಾಳಿ ಮಂದಿರವನ್ನು ಕಾಣುತ್ತೇವೆ. ಪಾದೆಕಲ್ಲಿನಿಂದ ನಿರ್ಮಿಸಲಾದ ಈ ಮಂದಿರ, ಇಪ್ಪತ್ತೆರಡು ದೊಡ್ಡ ಕಂಬಗಳ ಮೇಲೆ ನಿಂತಿರುವ ಕಟ್ಟಡವಾಗಿದ್ದು, ಇದು ಇಪ್ಪತ್ತೇಳು ಅಡಿ ಎತ್ತರವಾಗಿದೆ. ಇದರ ಕಂಬಗಳಲ್ಲಿ ದಶಾವತಾರ, ಕಾಳಿಂಗ ಮರ್ದನಾದಿ ಶ್ರೀಕೃಷ್ಣನ ವಿವಿಧ ಲೀಲೆಗಳು, ಜಟಾಯು ವಧೆ, ಮಹಾಭಾರತ ಬರೆಯುತ್ತಿರುವ ಗಣೇಶ, ವಾದಿರಾಜ ಸ್ವಾಮಿಗಳು, ಮಧ್ವಾಚಾರ್ಯರು, ಶಿಲಾಬಾಲಿಕೆಯರು, ಮೊದಲಾದ ಸುಂದರ ಕೆತ್ತನೆಗಳಿವೆ. ಗರ್ಭಗುಡಿಯ ಹೊರಸುತ್ತಿನ ಗೋಡೆಯಲ್ಲಿ ನವರಾತ್ರಿಯ ಸಮಯದಲ್ಲಿ ಪೂಜೆಗೊಳ್ಳುವ ನವದುರ್ಗೆಯರ ವಿಗ್ರಹಗಳಿವೆ. ಕರಿಶಿಲೆಯಲ್ಲಿ ಕೆತ್ತಲಾಗಿರುವ ಈ ವಿಗ್ರಹಗಳು ಅತ್ಯಂತ ಸುಂದರವಾಗಿವೆ. ಈ ಮಂದಿರದ ಬಳಿಕ ಕಾಣುವುದು, ನವಗ್ರಹಗಳಿಗೆ ಸಂಬಂಧಿಸಿದ ವೃಕ್ಷಗಳ ವನದೊಂದಿಗೆ ಇರುವ ನವಗ್ರಹಗಳು ಮತ್ತು ಕಲ್ಲುರ್ಟಿ ದೈವಗಳಿರುವ ಒಂದು ಸಂಕೀರ್ಣ ಗುಡಿ. ಹೀಗೆ ಇಡೀ ದೇವಾಲಯ ಸಮುಚ್ಚಯ ಹಲವಾರು ವೈವಿಧ್ಯಗಳಿಂದ ಕೂಡಿದೆ.

ಇಲ್ಲಿ ಶ್ರೀ ಜನಾರ್ದನಸ್ವಾಮಿ ಮತ್ತು ಮಹಾಕಾಳಿ ಒಟ್ಟಿಗಿರುವುದಕ್ಕೆ ಸ್ವಾರಸ್ಯಕರವಾದ ಒಂದು ಕಾರಣವಿದೆ. ದಕ್ಷಿಣ ಕನ್ನಡದಲ್ಲಿ ಮೊದಲಿನಿಂದಲೂ ಶಕ್ತಿಪೂಜೆ ನಡೆದುಕೊಂಡು ಬಂದಿತ್ತು. ಅದರಂತೆ ಈ ಪ್ರದೇಶದಲ್ಲೂ ಕಾಳಿಯ ಪೂಜೆ ನಡೆದುಕೊಂಡು ಬಂದಿತ್ತು. ಮರಗಿಡಗಳ ನಡುವೆ ಮಹಾಕಾಳಿಯನ್ನು ಊರ ಜನರು ಪೂಜಿಸಿಕೊಂಡು ಬಂದಿದ್ದರು. ಹಾಗಾಗಿ ಈ ಸ್ಥಳಕ್ಕೆ ಅಂಬಾವಾಟಿ ಎಂಬ ಹೆಸರು ಬಂದಿತು. ವಾಟಿ ಅಥವಾ ವಾಟಿಕಾ ಎಂದರೆ ತೋಟ ಅಥವಾ ಪ್ರದೇಶ ಎಂಬ ಅರ್ಥವಿದ್ದು ಅಂಬೆ ಅಥವಾ ತಾಯಿಯ ತೋಟ ಎಂಬರ್ಥದಲ್ಲಿ ಈ ಹೆಸರು ಬಂದಿತು. ಅದೇ ಮುಂದೆ ಅಂಬಲಪಾಡಿ ಎಂದಾಯಿತು.

ಹಿಂದೆ, ಈ ಗುಡಿಯ ಸನಿಹದ ನಿಡಂಬೂರುಬೀಡು ಎಂಬ ಅರಮನೆಯಲ್ಲಿ ಈ ಪ್ರದೇಶವನ್ನೂ ಸೇರಿದಂತೆ, ಎಂಟು ಗ್ರಾಮಗಳ ಒಕ್ಕೂಟವಾದ ನಿಡಂಬೂರು ಎಂಬ ಮಾಗಣೆ (ಗ್ರಾಮಗಳ ಒಕ್ಕೂಟ) ಯನ್ನು ಆಳುತ್ತಿದ್ದ ಬಂಗವಂಶದ ಜೈನ ಅರಸರು ವಾಸವಾಗಿದ್ದರು. ಈ ಜೈನ ಅರಸರೂ ಕಾಳೀದೇವಿಯ ಭಕ್ತರಾಗಿದ್ದರು. ಇವರಲ್ಲೊಬ್ಬ ರಾಜನ ಒಬ್ಬನೇ ಮಗ ರಾಜ್ಯವನ್ನು ಬಿಟ್ಟು ಸಂನ್ಯಾಸಿಯಾಗಲು ಹೊರಟು ಹೋದ. ವೃದ್ಧ ರಾಜ ಅವನನ್ನು ಎಷ್ಟು ಹುಡುಕಿಸಿದರೂ ಅವನು ಸಿಗಲಿಲ್ಲ. ತನ್ನ ಮಗನನ್ನು ಹುಡುಕಿಸಿಕೊಟ್ಟವರಿಗೆ ಬಹುಮಾನವನ್ನು ಘೋಷಿಸಿದ. ಆಗ ಇಲ್ಲಿಗೆ ಕುಂದಾಪುರದ ಕಂದಾವರದಿಂದ ವಲಸೆಬಂದಿದ್ದ ಬ್ರಾಹ್ಮಣರಾದ ಉಡುಪರೆಂಬುವರು ಗಯೆಗೆ ಯಾತ್ರೆ ಹೋಗಿದ್ದಾಗ ಅಲ್ಲಿ ಅವನ ಮಗನನ್ನು ಕಂಡು, ಅವನನ್ನು ಕರೆದುಕೊಂಡು ಬಂದು ರಾಜನಿಗೊಪ್ಪಿಸಿದರು. ಆದರೆ ಮುಂದೆ, ಈ ವೃದ್ಧ ರಾಜ ಕಾಲವಾಗಲು, ಅವನ ಮಗನು ಈ ಉಡುಪರಿಗೇ ತನ್ನ ರಾಜ್ಯವನ್ನು ಅರ್ಪಿಸಿ ಪುನಃ ಸಂನ್ಯಾಸಿಯಾಗಲು ಹೊರಟುಹೋದನು. ಆಗ ಈ ಉಡುಪರು ಆಡಳಿತ ವಹಿಸಿಕೊಂಡು ಬಲ್ಲಾಳರೆನಿಸಿದರು. (ಬಳಿಗಳೆಂಬ ಹಲವು ಗುಂಪುಗಳ ಜನರನ್ನು ಆಳುವವರು ಬಲ್ಲಾಳರೆನಿಸುತ್ತಾರೆ). ಈ ಉಡುಪಕುಲದ ಹಿರಿಯರಾದ ಶ್ರೀಧರ ನಿಡಂಬೂರಾಯರು ತಮ್ಮ ಹಿರಿಯರು ಆರಾಧಿಸಿದ್ದ ತಮ್ಮ ಕುಲದೇವರಾದ ಶ್ರೀ ಜನಾರ್ದನಸ್ವಾಮಿಯ ವಿಗ್ರಹವನ್ನು ತಂದು ಮಹಾಕಾಳಿಯ ಗುಡಿಯ ಬಳಿಯೇ ಪ್ರತಿಷ್ಠಾಪಿಸಿದರು. ಹೀಗೆ ವಿಷ್ಣುವೂ ವಿಷ್ಣುಮಾಯೆಯೂ ಜೊತೆಯಾಗಿ ಪೂಜೆಗೊಳ್ಳತೊಡಗಿದರು. ದೇವಿಯ ಹಾಡಿಗೆ ಬಂದ ಬಳಿಕ, ಜನಾರ್ದನಸ್ವಾಮಿಯೇ ಪ್ರಧಾನದೇವರಾಗಿ ಪರಿಗಣಿಸಲ್ಪಟ್ಟು, ವೈಷ್ಣವಾಗಮಕ್ರಮದ ಪ್ರಕಾರ ಪೂಜೆಯು ನಡೆದುಕೊಂಡು ಬರುತ್ತಿದೆ.

ಹೀಗೆ ಇದೊಂದು ಅಪರೂಪದ ಸುಂದರ ದೇವಾಲಯವಾಗಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ, ಪ್ರತಿ ಶುಕ್ರವಾರ, ದೇವಿಯ ಆವೇಶ ಬಂದ ಪಾತ್ರಿಯ ಮೂಲಕ ಭಕ್ತಾದಿಗಳಿಗೆ ಅವರ ಸಂದೇಹಗಳ ಪ್ರಶ್ನೋತ್ತರ ನಡೆಯುತ್ತದೆ.
ಬಲ್ಲಾಳ ವಂಶದವರು ಈ ದೇವಾಲಯವನ್ನು ಆರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಉಡುಪಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಈ ದೇವಾಲಯವು ಉಡುಪಿಗೆ ಹೋದಾಗ ತಪ್ಪದೇ ನೋಡಬೇಕಾದುದಾಗಿದೆ.






Leave a Reply