ಶ್ರೀ ಕೃಷ್ಣನ ರಾಯಭಾರಿ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಡಿಸೆಂಬರ್‌ 9, 1969
ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಮಹಾರಾಜ ತಿರೋಭಾವ ದಿನ ಲಾಸ್‌ಏಂಜಲೀಸ್‌ನಲ್ಲಿ ನೀಡಿದ ಉಪನ್ಯಾಸ.

ಭಿನ್ನ ವ್ಯಕ್ತಿಗಳಿಗೆ ವಿಭಿನ್ನ ರೀತಿಯಲ್ಲಿ ಆಶೀರ್ವದಿಸಿದ ಋಷಿಯೊಬ್ಬರ ಕತೆಯೊಂದಿದೆ. ರಾಜಕುಮಾರನಿಗೆ ಋಷಿಯು, ರಾಜಪುತ್ರ ಚಿರಂಜೀವಿಯಾಗಿರು ಎಂದು ಆಶೀರ್ವದಿಸುತ್ತಾನೆ: ರಾಜಪುತ್ರ ಚಿರಂಜೀವ -`ನೀನು ರಾಜನ ಪುತ್ರ ರಾಜಕುಮಾರ. ನೀನು ಸದಾ ಬದುಕು.’ ಸಂತ ಪುರುಷನ ಮಗನಿಗೆ, ಮುನಿಪುತ್ರ ಮಾ ಜೀವ – `ಮುನಿ ಪುತ್ರ ಬದುಕಬೇಡ’ ಎಂದು ಆಶೀರ್ವದಿಸುತ್ತಾನೆ. ಭಕ್ತನಾದ ಸಾಧುವಿಗೆ, ಜೀವ ವಾ ಮರೋ ವಾ – `ನೀನು ಬದುಕು ಅಥವಾ ಮರಣಹೊಂದು – ನಿನ್ನ ಇಷ್ಟ’ ಎಂದು ಹೇಳುತ್ತಾನೆ. ಮತ್ತೆ ಕಟುಕನಿಗೆ ಮಾ ಜೀವ ಮಾ ಮರ – `ಸಾಯಬೇಡ. ಬದುಕಲೂ ಬೇಡ’ ಎಂದು ಆಶೀರ್ವದಿಸುತ್ತಾನೆ.

ಈ ಮಾತುಗಳು ಅರ್ಥಗರ್ಭಿತ. ರಾಜಕುಮಾರನು ಇಂದ್ರಿಯ ಸುಖದಲ್ಲಿ ಇರುತ್ತಾನೆಯಷ್ಟೆ. ಇಂದ್ರಿಯ ಸುಖ ಜೀವನಕ್ಕೆ ಅವನಿಗೆ ಸೌಲಭ್ಯಗಳಿರುತ್ತವೆ. ಹೀಗಾಗಿ ಅವನ ಮುಂದಿನ ಬದುಕು ನರಕಸದೃಶ. ಏಕೆಂದರೆ ನೀವು ಅನಿಯಂತ್ರಿತ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿದರೆ ಪಾರಿವಾಳ, ಕೋತಿ, ಗುಬ್ಬಚ್ಚಿಗಳಂತೆ ಗಂಟೆಗೆ ಮೂರು ಬಾರಿ ಲೈಂಗಿಕ ಪ್ರಕ್ರಿಯೆಯಲ್ಲಿರಲು ಕೃಷ್ಣ ನಿಮಗೆ ಅವಕಾಶ ಕಲ್ಪಿಸಿಕೊಡುತ್ತಾನೆ.

ಇಂದ್ರಿಯ ಭೋಗದತ್ತಲೇ ರಾಜಕುಮಾರರ ಲಕ್ಷ್ಯ. ಹೀಗಾಗಿ ಋಷಿಯು ರಾಜಕುಮಾರನಿಗೆ ಆಶೀರ್ವದಿಸುತ್ತಾನೆ : `ನೀನು ಸದಾ ಬದುಕಿರು. ಏಕೆಂದರೆ ಸಾವಿನ ಅನಂತರ ನಿನಗೇನಾಗುತ್ತದೆಂದು ನಿನಗೆ ತಿಳಿಯದು. ನಿನಗೆ ನರಕಸದೃಶ ಬದುಕು ಸಿಗುತ್ತದೆ. ಹೀಗಾಗಿ, ಸ್ವಲ್ಪ ಸಮಯ ಬದುಕಿಬಿಡು. ನಿನ್ನ ಖುಷಿ, ಸುಖ-ಜೀವನ ಮುಂದುವರಿಸು.’

ಮುನಿ ಪುತ್ರ ಮಾ ಜೀವ. ಆಧ್ಯಾತ್ಮಿಕ ಗುರುವಿನ ಕಟ್ಟುನಿಟ್ಟಿನ ಶಿಸ್ತಿನ ಮಾರ್ಗದರ್ಶನದಲ್ಲಿರುವ ಶಿಷ್ಯನಿಗೆ `ನೀನು ಸಾಯುವುದು ಒಳಿತು. ದೇವರ ಸಾಮ್ರಾಜ್ಯ ಪ್ರವೇಶಿಸುವಷ್ಟು ತರಬೇತಿ ಪಡೆದಿರುವೆ. ಯಾಕೆ ಸುಮ್ಮನೆ ತೊಂದರೆ ತೆಗೆದುಕೊಳ್ಳುವೆ? ಸಾವು ಸ್ವೀಕರಿಸಿ ದೇವ ಸರ್ವೋತ್ತಮನಲ್ಲಿಗೆ ವಾಪಸಾಗುವುದು ಒಳಿತು,’ ಎಂದು ಆಶೀರ್ವದಿಸುತ್ತಾನೆ.

ಭಕ್ತನಿಗೆ ಋಷಿಯ ಆಶೀರ್ವಾದ ಜೀವ ವಾ ಮರೊ ವಾ. `ನನ್ನ ಪ್ರೀತಿಯ ಭಕ್ತನೇ, ನೀನು ಬದುಕು ಅಥವಾ ಮರಣಹೊಂದು.’ ಏಕೆಂದರೆ ಭಕ್ತನೊಬ್ಬನಿಗೆ ಅವೆರಡೂ ಒಂದೇ.

ಕಟುಕನಿಗೆ ಋಷಿಯ ಆಶೀರ್ವಾದ ಮಾ ಜೀವ ಮಾ ಮರ. `ಬದುಕಲೂ ಬೇಡ, ಸಾಯಲೂ ಬೇಡ.’ ಕಟುಕನೇನು ಮಾಡಬೇಕು? ಅವನ ಬದುಕು ಎಷ್ಟು ಜುಗುಪ್ಸೆ ತರುವಂತಹುದು. ಬೆಳಗಿನಿಂದಲೂ ಅವನು ಎಷ್ಟೊಂದು ಪ್ರಾಣಿ ವಧೆ ಮಾಡಬೇಕು, ರಕ್ತ ನೋಡಬೇಕು, ಭಯಾನಕ ದೃಶ್ಯಗಳು… ಅದು ಅವನ ಜೀವನಾಧಾರ… ಎಂತಹ ಭಯಂಕರ ಬದುಕಿದು! ಹೀಗಾಗಿ `ಬದುಕ ಬೇಡ… ಸಾಯಲೂ ಬೇಡ.’ ಏಕೆಂದರೆ ಸಾವಿನ ಅನಂತರ ಅವನೆಂತಹ ನರಕಸದೃಶ ಬದುಕಿಗೆ ಹೋಗುತ್ತಾನೆಂದರೆ ಯಾರಿಗೂ ಅದನ್ನು ವರ್ಣಿಸಲಾಗದು. ಹೀಗಾಗಿ ಸಾವು, ಬದುಕು ಎರಡರ ಸ್ಥಿತಿಯೂ ಘೋರ. ಇತರರನ್ನು ಬದಿಗಿಟ್ಟು, ಭಕ್ತರಿಗೆ ಹುಟ್ಟು, ಸಾವು, ಆವಿರ್ಭಾವ, ತಿರೋಭಾವ ಎಲ್ಲವೂ ಒಂದೇ.

ನನ್ನ ಆಧ್ಯಾತ್ಮಿಕ ಗುರು ಜಗನ್ನಾಥ ಪುರಿಯಲ್ಲಿ ಆರ್ವಿಭವಿಸಿದರು. ಅವರ ತಂದೆ ಭಕ್ತಿವಿನೋದ ಠಾಕುರರು ಸರ್ಕಾರದ ಹಿರಿಯ ಅಧಿಕಾರಿ. ಸರ್ಕಾರದಲ್ಲಿ ರಾಜ್ಯಪಾಲರ ಸ್ಥಾನವನ್ನು ಬಿಟ್ಟರೆ ಮ್ಯಾಜಿಸ್ಟ್ರೇಟ್‌ ಆಗಿದ್ದ ಭಕ್ತಿವಿನೋದ ಠಾಕುರರದು ಎರಡನೇ ಸ್ಥಾನ. ಭಕ್ತವಿನೋದ ಠಾಕುರರ ಹೆಗಲಿಗೆ ಜಗನ್ನಾಥ ದೇವಸ್ಥಾನದ ನಿರ್ವಹಣೆಯ ಹೊಣೆಯೂ ಇತ್ತು. ಜಗನ್ನಾಥ ಪುರಿಯಲ್ಲಿ ಇದ್ದ ಪದ್ಧತಿಯೇ ಅದು. ದೇವಸ್ಥಾನ ವ್ಯವಸ್ಥಾಪಕರೇ ಜಿಲ್ಲಾ ಮ್ಯಾಜಿಸ್ಟ್ರೇಟ್‌.

ಜಗನ್ನಾಥನ ಆಶೀರ್ವಾದ

ಒಮ್ಮೆ, ರಥಯಾತ್ರೆ ಸಂದರ್ಭದಲ್ಲಿ ಶ್ರೀ ಜಗನ್ನಾಥ ರಥವು ಭಕ್ತಿವಿನೋದ ಠಾಕುರರ ಮನೆ ಮುಂದೆಯೇ ನಿಂತಿತು. ನನ್ನ ಗುರು ಮಹಾರಾಜ, ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಆಗ ತಾಯಿಯ ಮಡಿಲಲ್ಲಿದ್ದ ಮಗು. ಹೀಗಾಗಿ ತಾಯಿಯು ಮಗುವನ್ನು ರಥದ ಬಳಿಗೆ ಕರೆದೊಯ್ದರು. ಅವರು ಮ್ಯಾಜಿಸ್ಟ್ರೇಟರ ಪತ್ನಿಯಾದ ಕಾರಣ ಜನರು ಜಾಗ ಮಾಡಿಕೊಟ್ಟರು. ಮಗುವನ್ನು ಜಗನ್ನಾಥನ ಪಾದಕಮಲದ ಬಳಿ ಮಲಗಿಸಿದರು. ದೇವರ ಕೊರಳಲ್ಲಿ ಅನೇಕ ಹಾರಗಳಿದ್ದವು. ಅವುಗಳಲ್ಲಿ ಒಂದು ಭಕ್ತಿಸಿದ್ಧಾಂತ ಸರಸ್ವತೀ ಅವರ ಮೇಲೆ ಬಿದ್ದಿತು. ಜಗನ್ನಾಥನ ಆಶೀರ್ವಾದ.

ಮಾವು ವರ್ಜ್ಯ

ಬಹುಶಃ ಅವರಿಗೆ ಆಗ ಎರಡೋ ಮೂರೋ ವರ್ಷವಿರಬೇಕು. ದೇವರಿಗೆ ಅರ್ಪಿಸಲು ಇಟ್ಟಿದ್ದ ಮಾವಿನಹಣ್ಣನ್ನು ತಿಂದುಬಿಟ್ಟರು, ಅವರ ತಂದೆಯು ಮೃದುವಾಗಿಯೇ ಗದರಿಕೊಂಡರು : `ನೀನು ತಪ್ಪು ಮಾಡಿಬಿಟ್ಟೆ, ಅದನ್ನು ದೇವರಿಗೆಂದು ಇಡಲಾಗಿತ್ತು. ನೀನು ತೆಗೆದುಕೊಂಡಿರುವೆ. ನೀನು ಹಾಗೆ ಮಾಡಬಾರದಿತ್ತು.’

ಪುಟ್ಟ ಮಗುವಾದರೂ ತಂದೆಯ ಮಾತನ್ನು ಗಂಭೀರವಾಗಿ ಪರಿಗಣಿಸಿದ ಅವರು ಅದರ ಅನಂತರ ಎಂದೂ ಮಾವಿನಹಣ್ಣು ತಿನ್ನಲಿಲ್ಲ. ನಾವು ನೀಡಿದಾಗಲೆಲ್ಲ `ನಾನೊಬ್ಬ ಅಪರಾಧಿ. ನಾನು ಮಾವಿನ ಹಣ್ಣು ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಹೇಳುತ್ತಿದ್ದರು. ಅವರ ಚಿಂತನೆ ಹಾಗಿತ್ತು. ಅವರ ಇಡೀ ಬದುಕಿನಲ್ಲಿ ಅವರು ಮಾವಿನ ಹಣ್ಣು ಮುಟ್ಟಲಿಲ್ಲ. `ದೇವರ ಹಣ್ಣು ತೆಗೆದುಕೊಂಡು ನಾನು ತಪ್ಪು ಎಸಗಿದ್ದೇನೆ’ ಎಂದೇ ಅವರು ಹೇಳುತ್ತಿದ್ದರು.

ಇದು ಆಚಾರ್ಯರ ಲಕ್ಷಣ. ನಾವೆಷ್ಟು ದೃಢ ಸಂಕಲ್ಪದಿಂದ ಇರಬೇಕೆಂಬುದನ್ನು ಅವರು ನಡೆದು ತೋರಿಸುತ್ತಾರೆ. ಮಗುವೊಂದು ಮಾವಿನಹಣ್ಣು ತೆಗೆದುಕೊಂಡರೆ ಅದು ದೊಡ್ಡ ಅಪರಾಧವೇನಲ್ಲ. ಆದರೆ ಅವರು ಮಾವು ವರ್ಜಿಸುವುದಾಗಿ ಪ್ರಮಾಣ ಮಾಡಿದರು.

ಆದರ್ಶ ನಡವಳಿಕೆ

ನನ್ನ ಸಮಕ್ಷಮದಲ್ಲಿ ನಡೆದ ಪ್ರಸಂಗ. ನಾನಾಗ ಇನ್ನೂ ಯುವಕ. ನನ್ನ ದೇವ ಸೋದರರಲ್ಲಿ ಒಬ್ಬರಾದ ಡಾ. ಅವಧ್‌ ಬಿಹಾರಿ ಲಾಲ್‌ ಕಪೂರ್‌ ಕೂಡ ಯುವಕ. ಅವರ ಯುವ ಪತ್ನಿ, ನಾವು ಎಲ್ಲರೂ ಗುರು ಮಹಾರಾಜ್‌ ಜೊತೆ ಮಾತನಾಡುತ್ತ ಕುಳಿತಿದ್ದೆವು. ಆಗ ಆ ಯುವತಿ `ಗುರುಗಳೇ ನಿಮ್ಮೊಂದಿಗೆ ಮಾತಾಡಬೇಕು’ ಎಂದಳು.

`ಅವಶ್ಯ. ನಿಮಗೆ ಬೇಕಾದುದನ್ನು ಹೇಳಬಹುದು’ ಎಂದು ಗುರು ಮಹಾರಾಜ್‌ ಹೇಳಿದರು.

`ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತಾಡಬೇಕು. ಎಲ್ಲರ ಮುಂದೆ ಅಲ್ಲ’ ಎಂದು ಅವರು ನುಡಿದರು.

`ಇಲ್ಲ. ನಾನು ನಿಮ್ಮೊಂದಿಗೆ ಖಾಸಗಿಯಾಗಿ ಮಾತನಾಡಲಾರೆ. ನನ್ನ ಶಿಷ್ಯರ ಸಮಕ್ಷಮ ಮಾತನಾಡಬಹುದು.’ ಎಂದು ಗುರುಗಳು ಹೇಳಿದರು.

ವಯಸ್ಸಿನಲ್ಲಿ ಮೊಮ್ಮಗಳಂತಿದ್ದರೂ ಅವರು ಯುವತಿಯೊಂದಿಗೆ ಖಾಸಗಿಯಾಗಿ ಮಾತನಾಡಲು ಒಪ್ಪಲಿಲ್ಲ.

ಭಕ್ತಿವಿನೋದ ಠಾಕುರರಿಗೆ ಇನ್ನೂ ಅನೇಕ ಮಕ್ಕಳಿದ್ದರು. ಭಕ್ತಿಸಿದ್ಧಾಂತ ಸರಸ್ವತೀ ಅವರ ಐದನೇ ಮಗ. ಇವರು ಮದುವೆಯಾಗಲಿಲ್ಲ. ಕಟ್ಟಾ ಬ್ರಹ್ಮಚಾರಿಯಾಗಿದ್ದರು. ಈ ವಿಶ್ವ ವ್ಯಾಪಿ ಆಂದೋಲನ ಶುರು ಮಾಡಲು ಅವರು ತೀವ್ರತರವಾದ ತಪಸ್ಯೆಯನ್ನು ಕೈಗೊಂಡಿದ್ದರು.

ಅಭಯ ಚರಣರಿಗೆ ಆದೇಶ

ಭಕ್ತಿವಿನೋದ ಠಾಕುರರಿಗೆ ಇದನ್ನು ಮಾಡಬೇಕೆಂದಿತ್ತು. `ಶ್ರೀ ಚೈತನ್ಯ ಮಹಾಪ್ರಭು, ಅವರ ಬದುಕು ಮತ್ತು ಸಂದೇಶ’ ಗ್ರಂಥವನ್ನು ಪಶ್ಚಿಮಕ್ಕೆ ಕಳುಹಿಸಿ ಕೃಷ್ಣಪ್ರಜ್ಞೆ ಆಂದೋಲನವನ್ನು ಅಲ್ಲಿ ಆರಂಭಿಸಬೇಕೆಂದಿತ್ತು. ಅದು 1896. ಅದೃಷ್ಟವಶಾತ್‌ ನಾನು ಹುಟ್ಟಿದ ವರ್ಷ.

ಶ್ರೀ ಕೃಷ್ಣನ ಯೋಜನೆಯಂತೆ ನನಗೆ ನನ್ನ ಗುರು ಮಹಾರಾಜ್‌ ಅವರ ಜೊತೆ ಸಂಪರ್ಕವಾಯಿತು. ನಾವು ಬೇರೆ ಬೇರೆ ಕುಟುಂಬಗಳಲ್ಲಿ ಜನಿಸಿದವರು. ಅವರ ರಕ್ಷಣೆಗೆ ನಾನು ಬರುವೆನೆಂದು ಯಾರಿಗೆ ಗೊತ್ತಿತ್ತು? ನಾನು ಅಮೆರಿಕಕ್ಕೆ ಬರುವೆನೆಂದು ಯಾರಿಗೆ ತಿಳಿದಿತ್ತು? ನೀವು, ಅಮೆರಿಕದ ಹುಡುಗರು ನನ್ನ ಬಳಿಗೆ ಬರುವಿರೆಂದು ಯಾರಿಗೆ ಅರಿವಿತ್ತು? ಇವೆಲ್ಲಾ ಕೃಷ್ಣನ ಯೋಜನೆ. ಎಲ್ಲವೂ ಹೇಗೆ ನಡೆಯುತ್ತದೆಂದು ನಮಗೆ ಅರ್ಥವಾಗದು.

1936ರಲ್ಲಿ, 32 ವರ್ಷಗಳ ಹಿಂದೆ, ನಾನು ಮುಂಬೈನಲ್ಲಿ ಬಿಜಿನೆಸ್‌ ಮಾಡುತ್ತಿದ್ದೆ. ಆ ಸಮಯದಲ್ಲಿ ಗುರು ಮಹಾರಾಜ್‌ ಅವರು ತುಸು ಅಸ್ವಸ್ಥರಾಗಿದ್ದರು. ಅವರು ಆಗ ಜಗನ್ನಾಥ ಪುರಿಯಲ್ಲಿದ್ದರು. ಅವರಿಗೊಂದು ಪತ್ರ ಬರೆದೆ – “ನನ್ನ ಪ್ರೀತಿಯ ಗುರುಗಳೇ, ನಿಮ್ಮ ಇತರ ಶಿಷ್ಯರಾದ ಬ್ರಹ್ಮಚಾರಿಗಳೂ ಸಂನ್ಯಾಸಿಗಳೂ ನಿಮಗೆ ನೇರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಗೃಹಸ್ಥ. ನಿಮ್ಮೊಂದಿಗೆ ಇರಲಾರೆ. ನಿಮಗೆ ಸರಿಯಾಗಿ ಸೇವೆ ಸಲ್ಲಿಸಲಾರೆ. ನಿಮಗೆ ನಾನು ಹೇಗೆ ಸೇವೆ ಸಲ್ಲಿಸಬೇಕೆಂದೇ ಗೊತ್ತಿಲ್ಲ .” ಸುಮ್ಮನೆ ಒಂದು ಯೋಚನೆ, ಅವರನ್ನು ಸೇವಿಸುವುದರ ಬಗ್ಗೆ ಆಲೋಚಿಸುತ್ತಿದ್ದೆ. “ಅವರನ್ನು ಗಂಭೀರವಾಗಿ ಸೇವಿಸುವುದು ಹೇಗೆ?”

ಅವರಿಂದ ಮಾರುತ್ತರ ಬಂದಿತು. ಅದು ಡಿಸೆಂಬರ್‌ 13, 1936ರ ದಿನಾಂಕದ ಪತ್ರ. ಅವರು ಬರೆದರು – `ನನ್ನ ಪ್ರೀತಿಯ.., ನಿನ್ನ ಪತ್ರ ಸ್ವೀಕರಿಸಲು ಸಂತೋಷವಾಗಿದೆ. ನಮ್ಮ ಆಂದೋಲನವನ್ನು ಇಂಗ್ಲಿಷ್‌ನಲ್ಲಿ ಬೋಧಿಸಲು ನೀನು ಪ್ರಯತ್ನಿಸಬೇಕೆಂದು ನನಗೆ ಅನಿಸುತ್ತಿದೆ. ಆಗ ನಿನಗೂ, ನಿನಗೆ ನೆರವಾಗುವವರಿಗೂ ಇದರಿಂದ ಒಳ್ಳೆಯದಾಗುತ್ತದೆ.’ ಅದು ಅವರ ಸೂಚನೆಯಾಗಿತ್ತು. ಅನಂತರ ಡಿಸೆಂಬರ್‌ 31ರಂದು, ಅಂದರೆ ನನಗೆ ಪತ್ರ ಬರೆದ ಸುಮಾರು 15 ದಿನಗಳ ಅನಂತರ ಅವರು ಪರಂಧಾಮವನ್ನೈದಿದರು.

ನನ್ನ ಆಧ್ಯಾತ್ಮಿಕ ಗುರುಗಳ ಆದೇಶವನ್ನು ನಾನು ಗಂಭೀರವಾಗಿಯೇ ಸ್ವೀಕರಿಸಿದೆ. ಹೀಗೆ ಮಾಡಬೇಕೆಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ನಾನೊಬ್ಬ ಗೃಹಸ್ಥ. ಆದರೆ ಇದು ಕೃಷ್ಣನ ಯೋಜನೆ. ಆಧ್ಯಾತ್ಮಿಕ ಗುರುಗಳ ಆದೇಶ ಪಾಲಿಸಲು ಗಂಭೀರ ಪ್ರಯತ್ನ ಮಾಡಿದರೆ ಶ್ರೀಕೃಷ್ಣನು ನಮಗೆಲ್ಲ ಸೌಕರ್ಯ ಒದಗಿಸಿಕೊಡುತ್ತಾನೆ. ಅದೇ ಗುಟ್ಟು.

ಭಗವದ್ಗೀತೆ ಕುರಿತಂತೆ ವಿಶ್ವನಾಥ ಚಕ್ರವರ್ತಿ ಠಾಕುರರ ವ್ಯಾಖ್ಯಾನವನ್ನು ಅಧ್ಯಯನ ಮಾಡುವ ಮೂಲಕ ನನ್ನ ಆಧ್ಯಾತ್ಮಿಕ ಗುರುಗಳ ಆದೇಶವನ್ನು ಗಂಭೀರವಾಗಿಯೇ ಸ್ವೀಕರಿಸಿದೆ. ವ್ಯವಸಾಯಾತ್ಮಿಕ ಬುದ್ಧಿರೇಕೇಹ ಕುರುನಂದನ ಶ್ಲೋಕಕ್ಕೆ
ಸಂಬಂಧಿಸಿದಂತೆ ವಿಶ್ವನಾಥ ಚಕ್ರವರ್ತಿ ಠಾಕುರರು ಈ ರೀತಿ ವ್ಯಾಖ್ಯಾನಿಸಿದ್ದಾರೆ – ಆಧ್ಯಾತ್ಮಿಕ ಗುರುಗಳ ಮಾತುಗಳನ್ನು ನಾವು ನಮ್ಮ ಬದುಕು ಮತ್ತು ಆತ್ಮದಂತೆ ಸ್ವೀಕರಿಸಬೇಕು. ನಮ್ಮ ವೈಯಕ್ತಿಕ ಲಾಭ ನಷ್ಟಗಳನ್ನು ಲಕ್ಷಿಸದೆ ನಾವು ನಮ್ಮ ಆಧ್ಯಾತ್ಮಿಕ ಗುರುಗಳ ನಿರ್ದಿಷ್ಟ ನಿರ್ದೇಶನಗಳನ್ನು ಆಚರಣೆಗೆ ತರಲು ಪ್ರಯತ್ನಿಸಬೇಕು.

ಆ ನಿಟ್ಟಿನಲ್ಲಿ ನಾನು ಸ್ವಲ್ಪ ಪ್ರಯತ್ನಿಸಿದೆ. ಅವರಿಗೆ ಸೇವೆ ಸಲ್ಲಿಸಲು ಕೃಷ್ಣನು ನನಗೆ ಎಲ್ಲ ಸೌಲಭ್ಯಗಳನ್ನು ನೀಡಿದ್ದಾನೆ. ನಾನು ನನ್ನ ವೃದ್ಧಾಪ್ಯದಲ್ಲಿ ನಿಮ್ಮ ದೇಶಕ್ಕೆ ಬಂದೆ. ಆಂದೋಲನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ನೀವೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದೀರ. ಈಗ ನಮ್ಮಲ್ಲಿ ಕೆಲ ಗ್ರಂಥಗಳಿವೆ. ಹೀಗಾಗಿ ಆಂದೋಲನಕ್ಕೆ ನೆಲೆ ಸಿಕ್ಕಂತಾಗಿದೆ.

ಆದುದರಿಂದ ನನ್ನ ಆಧ್ಯಾತ್ಮಿಕ ಗುರುಗಳ ತಿರೋಭಾವದ ಸಂದರ್ಭದಲ್ಲಿ ನಾನು ಅವರ ಮನೋಭೀಷ್ಟೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿರುವಂತೆ ನೀವೂ ಕೂಡ ನನ್ನ ಮನೋಭೀಷ್ಟೆಯನ್ನು ಅನುಷ್ಠಾನಗೊಳಿಸಬೇಕೆಂದು ಕೋರುವೆ. ನಾನು ವೃದ್ಧ. ಯಾವ ಕ್ಷಣದಲ್ಲಾದರೂ ನಿರ್ಗಮಿಸಬಹುದು. ಇದು ಪ್ರಕೃತಿ ನಿಯಮ. ಯಾರೂ ತಡೆ ಉಂಟುಮಾಡಲಾಗದು. ನಾನು ಸಾಯಬಹುದೆಂಬುದು ಅಚ್ಚರಿ ವಿಷಯವಲ್ಲ. ಆದರೆ ನನ್ನ ಗುರು ಮಹಾರಾಜ್‌ ಅವರ ತಿರೋಭಾವದ ಪುಣ್ಯ ದಿನದ ಸಂದರ್ಭದಲ್ಲಿ ಇದು ನನ್ನ ಕೋರಿಕೆ: ಕೃಷ್ಣ ಪ್ರಜ್ಞೆ ಆಂದೋಲನದ ಪರಮತತ್ತ್ವವನ್ನು ಸ್ವಲ್ಪವಾದರೂ ನೀವು ಅರ್ಥ ಮಾಡಿಕೊಂಡಿದ್ದೀರಿ. ಅದನ್ನು ಮುಂದುವರಿಸಲು ನೀವು ಪ್ರಯತ್ನಿಸಬೇಕು.

ವೈಷ್ಣವರ ಪರೋಪಕಾರ

ಈ ಪ್ರಜ್ಞೆಯ ಅಭಾವದಿಂದಾಗಿ ಜನರು ನರಳುತ್ತಿದ್ದಾರೆ. ನಾವು ಭಕ್ತರ ಬಗೆಗೆ ಪ್ರತಿ ದಿನ ಪ್ರಾರ್ಥಿಸುತ್ತೇವೆ –

ವಾಂಛಾಕಲ್ಪತರುಭ್ಯಶ್ಚ ಕೃಪಾಸಿಂಧುಭ್ಯ ಏವ ಚ ।

ಪತಿತಾನಾಂ ಪಾವನೇಭ್ಯೋ ವೈಷ್ಣವೇಭ್ಯೋ ನಮೋ ನಮಃ ॥

ಯಾರಾದರೊಬ್ಬರು ವೈಷ್ಣವ ಅಥವಾ ಶ್ರೀಕೃಷ್ಣನ ಭಕ್ತರೆಂದರೆ ಅವರ ಬದುಕು ಜನರ ಒಳಿತಿಗಾಗಿ ಅರ್ಪಿತವಾಗಿರುತ್ತದೆ. ನಿಮ್ಮಲ್ಲಿ ಬಹುತೇಕ ಮಂದಿ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರು – ನಿಮಗೆ ಗೊತ್ತು ಹೇಗೆ ಏಸು ಕ್ರಿಸ್ತನು ನಿಮ್ಮ ಪಾಪ ಕೃತ್ಯಗಳಿಗೆ ತನ್ನನ್ನು ತ್ಯಾಗ ಮಾಡಿಕೊಂಡನೆಂದು ಹೇಳಿದನು ಎಂದು. ಅದು ದೇವರ ಭಕ್ತರ ದೃಢ ಮನಸ್ಕತೆ. ಅವರು ವೈಯಕ್ತಿಕ ಸುಖದ ಬಗೆಗೆ ಚಿಂತಿಸುವುದೇ ಇಲ್ಲ. ಅವರು ಕೃಷ್ಣ ಅಥವಾ ದೇವರನ್ನು ಪ್ರೀತಿಸುತ್ತಾರೆ. ಆದ್ದರಿಂದ ಎಲ್ಲ ಜೀವಿಗಳನ್ನೂ ಪ್ರೀತಿಸುತ್ತಾರೆ. ಏಕೆಂದರೆ ಎಲ್ಲ ಜೀವಿಗಳು ಕೃಷ್ಣನಿಗೆ ಸಂಬಂಧಿತ. ಕೃಷ್ಣ ಪ್ರಜ್ಞಾ ಆಂದೋಲನದ ಅರ್ಥವೆಂದರೆ ವೈಷ್ಣವರಾಗುವುದು ಮತ್ತು ಸಂಕಟದಲ್ಲಿರುವ ಮಾನವರಿಗೆ ಸಹಾನುಭೂತಿ ತೋರುವುದು.

ಮಾನವ ಸಮುದಾಯದ ಸಂಕಟಕ್ಕೆ ಸ್ಪಂದಿಸಲು ಅನೇಕ ದೃಷ್ಟಿಕೋನಗಳಿವೆ. ಕೆಲವರು ಮಾನವ ಕುಲದ ನೋವನ್ನು ದೈಹಿಕ ಬದುಕಿನ ಅಂಶದಿಂದ ನೋಡುತ್ತಾರೆ. ಜನರು ರೋಗಮುಕ್ತರಾಗಲು ಅವರು ಆಸ್ಪತ್ರೆಗಳನ್ನು ತೆರೆಯುತ್ತಾರೆ. ಅಥವಾ ದಾರಿದ್ರ್ಯ ತುಂಬಿದ ದೇಶಗಳಲ್ಲಿ ಆಹಾರ ಪದಾರ್ಥ ವಿತರಿಸುತ್ತಾರೆ. ಇವು ನಿಜಕ್ಕೂ ಒಳ್ಳೆಯ ಕಾರ್ಯಗಳೇ. ಆದರೆ ವಾಸ್ತವವಾಗಿ ಮಾನವ ಕುಲದ ಸಂಕಟಗಳಿಗೆ ಕೃಷ್ಣ ಪ್ರಜ್ಞೆಯ ಕೊರತೆಯೇ ಕಾರಣ.

ದೈಹಿಕ ನೋವು ತಾತ್ಕಾಲಿಕ, ಅದನ್ನು ತಡೆಯಲಾಗದು. ದಾರಿದ್ರ್ಯ ಪೀಡಿತ ದೇಶದಲ್ಲಿ ನೀವು ಆಹಾರ ವಿತರಿಸಿದಿರೆಂದುಕೊಳ್ಳಿ. ಅದು ಎಲ್ಲ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನಿಜವಾದ ಫಲದಾಯಕ ಕೆಲಸವೆಂದರೆ ಪ್ರತಿಯೊಬ್ಬರಲ್ಲಿರುವ ಕೃಷ್ಣ ಪ್ರಜ್ಞೆಯನ್ನು ಎಚ್ಚರಿಸುವುದು, ಎಬ್ಬಿಸುವುದು.

ಶ್ರೀಮಂತನ ಪುತ್ರನೊಬ್ಬ ತನ್ನ ತಂದೆಯ ಆಸ್ತಿ ಬಗೆಗೆ ಮರೆತು ರಸ್ತೆಯಲ್ಲಿ ಅಲೆಯುತ್ತಿರುತ್ತಾನೆಂದು ಭಾವಿಸಿ. ಯಾರೋ ಕರುಣೆಯಿಂದ ಅವನಿಗೆ ಸ್ವಲ್ಪ ಊಟ ನೀಡಬಹುದು. ಆದರೆ ಮತ್ತೊಬ್ಬ ಆ ಹುಡುಗನ ಬಳಿಗೆ ಬಂದು, `ಮಗೂ, ನನಗೆ ನೀನು ಗೊತ್ತು. ನೀನು ಆ ಶ್ರೀಮಂತನ ಮಗ. ಹೀಗೆ ರಸ್ತೆಯಲ್ಲೇಕೆ ಅಲೆಯುತ್ತಿರುವೆ? ಬಾ, ನಿನ್ನ ತಂದೆ ಬಳಿಗೆ ಕರೆದೊಯ್ಯುವೆ’ ಎಂದು ಹೇಳುತ್ತಾನೆ. ಅವನು ಆ ಹುಡುಗನನ್ನು ಅವನ ತಂದೆ ಬಳಿಗೆ ಒಯ್ದರೆ ಆ ಶ್ರೀಮಂತನಿಗೆ ಸಂತೋಷವಾಗುತ್ತದೆ. ಮಗನಿಗೆ ತಂದೆಯ ಆಸ್ತಿ ಸಿಗುತ್ತದೆ. ಅವನ ಎಲ್ಲ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ.

ಅದೇ ರೀತಿ ಪ್ರತಿಯೊಂದು ಜೀವಿಯೂ ಈ ವಿಶ್ವದೊಳಗೆ ಬೇರೆ ಬೇರೆ ದೇಹ, ಗ್ರಹಗಳಲ್ಲಿ ಅನಾದಿಕಾಲದಿಂದಲೂ ಅಲೆಯುತ್ತಿದ್ದಾನೆ. ಅವನು ತಾನು ದೇವರ ಸಾಮ್ರಾಜ್ಯಕ್ಕೆ ಸೇರಿದವನು, ಶ್ರೀಕೃಷ್ಣನ ಮಗ, ಎಲ್ಲದಕ್ಕೂ ಕೃಷ್ಣನೇ ಮಾಲೀಕ ಎಂದು ಅರಿತರೆ, ಅವನು ತನ್ನ ತಂದೆಯ ಆಸ್ತಿ ಅನುಭವಿಸಬಹುದು ಹಾಗೂ ತಂತಾನೆ ಲೌಕಿಕ ಬದ್ಧ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ.

ನೀವು ಶ್ರೀಮಂತರಾದರೆ, ಲಕ್ಷಾಂತರ ರೂಪಾಯಿ ನಿಮ್ಮದಾದರೆ ಬಡತನದ ಸಮಸ್ಯೆ ನಿವಾರಣೆಯಾಗುತ್ತದೆ. ಅದೇ ರೀತಿ ಕೃಷ್ಣ ಪ್ರಜ್ಞೆ ಹೊಂದಿದರೆ ಮತ್ತು ಹಾಗೇ ನಡೆದುಕೊಂಡರೆ ಲೌಕಿಕ ಬದ್ಧ ಜೀವನದ ಇತರ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ.

ಜನರ ನೋವು ಸಂಕಟಗಳು ಅವರ ಪಾಪದ ಚಟುವಟಿಕೆಗಳಿಂದಲೇ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮತ್ತು ಪಾಪ ಕೃತ್ಯಗಳು ನಡೆಯುವುದು ಮೌಢ್ಯದಿಂದ. ನನ್ನಂತಹ ವಿದೇಶಿಯನೊಬ್ಬ ಅಮೆರಿಕಕ್ಕೆ ಬರುತ್ತಾನೆ. ಇಲ್ಲಿ ಕಾರುಗಳನ್ನು ರಸ್ತೆಯ ಬಲ ಭಾಗದಲ್ಲಿ ಓಡಿಸಬೇಕೆಂದು ನನಗೆ ತಿಳಿಯದು. ಭಾರತದಲ್ಲಿ ರಸ್ತೆಯ ಎಡ ಬದಿಗೆ ಓಡಿಸಲಾಗುವುದು. ಅವನು ಇಲ್ಲಿನ ನಿಯಮ ತಿಳಿಯದೆ ಕಾರನ್ನು ಎಡಕ್ಕೆ ಓಡಿಸಿ ಅಪಘಾತ ಉಂಟು ಮಾಡಿದರೆ? ಬಂಧಿಸಿದಾಗ `ಬಲ ಭಾಗದಲ್ಲಿ ಓಡಿಸಬೇಕೆಂದು ತಿಳಿದಿರಲಿಲ್ಲ’ ಎಂದು ಹೇಳಿದರೆ ಕ್ಷಮೆ ನೀಡಲಾಗುವುದೇ? ಕಾನೂನು ಶಿಕ್ಷೆ ವಿಧಿಸುತ್ತದೆಯಷ್ಟೆ.

ಅಂದರೆ ಅಜ್ಞಾನ ಅಥವಾ ಮೌಢ್ಯವೇ ಪಾಪ ಕೃತ್ಯ ಹಾಗೂ ಕಾನೂನು ಉಲ್ಲಂಘನೆಗೆ ಕಾರಣ. ನೀವೇನಾದರೂ ಪಾಪ ಕೃತ್ಯ ಎಸಗಿದರೆ ನೀವು ಫಲ ಅನುಭವಿಸಲೇಬೇಕು. ಇಡೀ ವಿಶ್ವವೇ ಅಜ್ಞಾನದಲ್ಲಿದೆ. ಈ ಮೌಢ್ಯದ ಕಾರಣ ಪ್ರತಿಯೊಬ್ಬರೂ ಒಳ್ಳೆಯದೋ ಕೆಟ್ಟದೋ ಕ್ರಿಯೆ ಪ್ರತಿಕ್ರಿಯೆಗಳಿಂದಾಗಿ ಸಿಕ್ಕಿ ಬೀಳುತ್ತಾರೆ.

ಅಂತಿಮವಾಗಿ ಈ ಲೌಕಿಕ ಜಗತ್ತಿನಲ್ಲಿ ಯಾವುದೂ ಒಳ್ಳೆಯದಿಲ್ಲ. ಎಲ್ಲವೂ ಕೆಟ್ಟದ್ದೇ. ನಾವು ಕೆಲವು ಒಳ್ಳೆಯ, ಕೆಲವು ಕೆಟ್ಟದನ್ನು ಸೃಷ್ಟಿಸಿದ್ದೇವೆ. ಆದರೆ ಈ ಜಗವು ದುಃಖಾಲಯಂ ಅಶಾಶ್ವತಂ, ಸಂಕಟ, ನೋವಿನ ಸ್ಥಳವೆಂದು ನಾವು ಭಗವದ್ಗೀತೆಯಲ್ಲಿ ಅರಿತಿದ್ದೇವೆ. ಹೀಗಾಗಿ, ಈ ಸಂಕಷ್ಟದ ಪರಿಸ್ಥತಿಯಲ್ಲಿ `ಇದು ಒಳ್ಳೆಯದು, ಇದು ಕೆಟ್ಟದ್ದು’ ಎಂದು ಹೇಗೆ ಹೇಳುವಿರಿ? ಎಲ್ಲವೂ ಕೆಟ್ಟದ್ದೇ.

ಲೌಕಿಕ ಜಗತ್ತಿನ ಬಗೆಗೆ ತುಂಬ ನಿರಾಶಾವಾದಿಗಳಾಗಿರಬೇಕು. ಆಗ ಆಧ್ಯಾತ್ಮಿಕ ಬದುಕಿನಲ್ಲಿ ಪ್ರಗತಿ ಸಾಧ್ಯ. ದುಃಖಾಲಯಂ ಅಶಾಶ್ವತಂ. ಈ ಜಗವು ನೋವು ಸಂಕಟಗಳಿಂದ ಕೂಡಿದೆ. ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಿದರೆ ನಿಮಗೆ ನೋವು, ದುಃಖದ ಪರಿಸ್ಥಿತಿ ಕಾಣುತ್ತದೆ.

ಆದುದರಿಂದ ನಾವು ನಮ್ಮ ಲೌಕಿಕ ಬದ್ಧ ಜೀವನವನ್ನು ಬಿಟ್ಟುಬಿಡಬೇಕು, ಮತ್ತು ಕೃಷ್ಣ ಪ್ರಜ್ಞೆಯಲ್ಲಿ ನಾವು ಆಧ್ಯಾತ್ಮಿಕ ವೇದಿಕೆ ಏರಲು ಪ್ರಯತ್ನಿಸಬೇಕು. ಈ ಮೂಲಕ ದೇವೋತ್ತಮ ಪರಮ ಪುರುಷನ ಸಾಮ್ರಾಜ್ಯಕ್ಕೆ ಹೋಗಲು ಬಡ್ತಿ ಹೊಂದಬಹುದು. ಅಲ್ಲಿಗೆ ಹೋದ ಮೇಲೆ ಈ ಸಂಕಷ್ಟದ ಜಗತ್ತಿಗೆ ಯಾರೂ ವಾಪಸು ಬರುವುದಿಲ್ಲ. ಅದು ದೇವೋತ್ತಮನ ಪರಮ ಪದ.

ಈ ಕೃಷ್ಣ ಪ್ರಜ್ಞೆ ಆಂದೋಲನವು ಪ್ರಮಾಣಿತ ಹಾಗೂ ತುಂಬ ಮುಖ್ಯವಾದುದು. ಈ ಆಂದೋಲನವನ್ನು ಸ್ವೀಕರಿಸಿರುವ ನೀವು, ಅಮೆರಿಕದ ಯುವಕ, ಯುವತಿಯರು, ದಯೆಯಿಟ್ಟು ಇದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿ. ಅದು ಶ್ರೀ ಚೈತನ್ಯ ಮತ್ತು ನನ್ನ ಗುರು ಮಹಾರಾಜ್‌ ಅವರ ಜೀವನ ಧ್ಯೇಯ. ಮತ್ತು ನಾನೂ ಕೂಡ ಶಿಷ್ಯ ಪರಂಪರೆ /ಉತ್ತರಾಧಿಕಾರಿಯಂತೆ ಅವರ ಅಭೀಷ್ಟೆ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿರುವೆ. ನನಗೆ ಸಹಾಯ ಮಾಡಲು ನೀವು ಮುಂದೆ ಬಂದಿರುವಿರಿ. ನಾನು ನಿರ್ಗಮಿಸಬಹುದು, ಆದರೆ ನೀವು ಇರುತ್ತೀರಿ. ನಿಮ್ಮೆಲ್ಲರಲ್ಲಿ ನನ್ನ ಮನವಿ: ಆಂದೋಲನ ಮುಂದುವರಿಸುವುದನ್ನು ಬಿಡಬೇಡಿ. ಮುಂದುವರಿಸಿ. ಶ್ರೀ ಚೈತನ್ಯ ಮತ್ತು ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತೀ ಗೋಸ್ವಾಮಿ ಪ್ರಭುಪಾದರ ಕೃಪೆ ನಿಮಗಿರುತ್ತದೆ.

ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi